ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಜೊತೆಯಲ್ಲಿ ಜೀವನ ಶೈಲಿಯೂ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಹೆಚ್ಚು ಬೇಡಿಕೆಗಳಿರುವ ವೃತ್ತಿಗಳೇನು ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದ್ದರಿಂದ, ವಿಧ್ಯಾಭ್ಯಾಸದ ಪ್ರಮುಖ ತಿರುವಿನಲ್ಲಿರುವ ವಿಧ್ಯಾರ್ಥಿಗಳು ತಮ್ಮ ಭವಿಷ್ಯದ ವೃತ್ತಿ ಜೀವನವನ್ನು ನಿರೂಪಿಸುವಲ್ಲಿ ಎಂದಿಗಿಂತಲೂ ಇನ್ನೂ ಹೆಚ್ಚು ಕಾಳಜಿ ವಹಿಸುವುದು ಅಗತ್ಯ.
ಒಂದು ಅಂದಾಜಿನ ಪ್ರಕಾರ, ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಇರುವ ವೃತ್ತಿಗಳು:
- ಕೃತಕ ಬುದ್ಧಿಮತ್ತೆ [ಎಐ]: ಮಾನವನ ಬುದ್ಧಿಮತ್ತೆಯ ಸಾಮಥ್ರ್ಯಗಳನ್ನು ಯಂತ್ರಗಳಿಗೆ ಅಳವಡಿಸಿ, ಅವುಗಳ ದಕ್ಷತೆಯನ್ನು ಅತಿ ಹೆಚ್ಚಿನ ಹಂತಕ್ಕೆ ಕೊಂಡೊಯ್ಯುವುದೇ, ಈ ಕ್ಷೇತ್ರದ ಮೂಲ ಉದ್ದೇಶ. ಉದಾಹರಣೆಗಳು: ವಿಮಾನಗಳಲ್ಲಿನ ಆಟೋಪೈಲಟ್, ಸ್ವಯಂಚಾಲಿತ ಕಾರುಗಳು, ಸಂಚಾರ ನಿರ್ವಹಣೆ, ಟ್ಯಾಕ್ಸಿ ಸೇವೆಗಳು, ಇಮೇಲ್ಸ್, ಫೇಸ್ಬುಕ್, ಆನ್ಲೈನ್ ಶಾಪಿಂಗ್ ಇತ್ಯಾದಿ. ಈಗಾಗಲೇ ಬೇಡಿಕೆಯಿರುವ ಈ ಕ್ಷೇತ್ರದಲ್ಲಿನ ತಜ್ಞತೆಗಾಗಿ ಎಂಜಿನಿಯರಿಂಗ್ [ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಎಂಜಿನಿಯರಿಂಗ್, ಮೆಷಿನ್ ಲರ್ನಿಂಗ್ ಇತ್ಯಾದಿ] ಕೋರ್ಸ್ ಮಾಡಬಹುದು.
- ರೊಬೊಟಿಕ್ಸ್: ಸಾಮಾನ್ಯವಾಗಿ ಮಾನವರು ಮಾಡುವ ಅನೇಕ ಕೆಲಸಗಳನ್ನು ಬುದ್ಧಿವಂತ ಮೆಷಿನ್ಗಳಿಂದ ಮಾಡಿಸುವುದೇ ರೊಬೊಟಿಕ್ಸ್. ಈ ಮೆಷಿನ್ಗಳನ್ನು ಪ್ರತಿನಿತ್ಯದ ಸಾಮಾನ್ಯ ಕೆಲಸಗಳಿಗೂ ಮತ್ತು ಅತಿ ಹೆಚ್ಚಿನ ನಿಖರತೆಯ ಅಗತ್ಯವಿರುವ ಕೆಲಸಗಳಿಗೂ ಉಪಯೋಗಿಸಬಹುದು. ಒಂದು ಅಂದಾಜಿನ ಪ್ರಕಾರ ಇನ್ನೈದು ವರ್ಷಗಳಲ್ಲಿ ಸುಮಾರು 30% ಮಾನವನ ಉದ್ಯೋಗಗಳು ರೊಬೊಟಿಕ್ಸ್ ಪಾಲಾಗಲಿದೆ! ಉದಾಹರಣೆಗಳು: ವೆಲ್ಡಿಂಗ್, ಪೇಂಟಿಂಗ್, ಪ್ಯಾಕಿಂಗ್, ಸಾಮಾನು ಸಾಗಣೆ ಮತ್ತು ನಿರ್ವಹಣೆ, ಸುರಕ್ಷತೆ ಮತ್ತು ಭದ್ರತೆ, ಶಿಕ್ಷಣ, ಅಡುಗೆ ಕೆಲಸಗಳು, ರೆಸ್ಟೋರೆಂಟ್ ಸೇವೆಗಳು, ಇತ್ಯಾದಿ. ಎಂಜಿನಿಯರಿಂಗ್ [ರೊಬೊಟಿಕ್ಸ್, ಕಂಪ್ಯೂಟರ್ ಸೈನ್ಸ್, ಮೆಷಿನ್ ಲರ್ನಿಂಗ್ ಇತ್ಯಾದಿ] ಮಾಡಿ ಈ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ರೂಪಿಸಿ.
- ಹಿರಿಯ ನಾಗರಿಕರ ಶುಶ್ರೂಶೆ ಮತ್ತು ಸೇವೆಗಳು: ಮಾನವನ ಆಯುಸ್ಸು ದೀರ್ಘವಾಗುತ್ತಿದೆ. ಬೆಳೆದ ಮಕ್ಕಳು ಮತ್ತು ಸಂಸಾರದ ಹಿರಿಯರು ಪ್ರತ್ಯೇಕವಾಗಿ ವಾಸ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಹಾಗಾಗಿ, ಹಿರಿಯರ ಆರೈಕೆ, ಶುಶ್ರೂಶೆಗಾಗಿ ವೈಯಕ್ತಿಕ ಸಹಾಯಕರ ಅಗತ್ಯ ಮುಂದೆ ಇನ್ನೂ ಹೆಚ್ಚಾಗುವ ಲಕ್ಷಣಗಳಿವೆ. ಈ ಕ್ಷೇತ್ರದಲ್ಲಿನ ವೈವಿಧ್ಯಮಯ ಕೆಲಸಗಳೆಂದರೆ ಆರೋಗ್ಯದ ತಪಾಸಣೆಯ ಜೊತೆಗೆ ಔಷದೋಪಚಾರ, ಗುಣಾತ್ಮಕವಾದ ಕಾಲ ಕಳೆಯುವುದು ಅಂದರೆ ಹಿರಿಯರ ಸುರಕ್ಷತೆ, ವ್ಯಾಯಾಮ, ದೈಹಿಕ ಚಟುವಟಿಕೆಗಳಲ್ಲಿ ಸಹಾಯ, ಸಕ್ರಿಯ ಸಂವಹನೆ ಮತ್ತು ಅಗತ್ಯಕ್ಕೆ ತಕ್ಕಂತೆ ಇನ್ನಿತರ ವೈಯಕ್ತಿಕ ಸಹಾಯವನ್ನು ಒದಗಿಸುವುದು. ಅನುಭೂತಿ, ಮಾನವೀಯತೆ, ಅನುಕಂಪ, ತಾಳ್ಮೆಯಂತಹ ಧೋರಣೆಗಳ ಜೊತೆ ಮನ:ಶಾಸ್ತ್ರ, ನರ್ಸಿಂಗ್, ಜೆರಿಯಾಟ್ರಿಕ್ಸ್ [ವೃದ್ದಾಪ್ಯ ವಿಜ್ಞಾನ] ಕೋರ್ಸ್ಗಳನ್ನು ಮಾಡಿ ಈ ವೃತ್ತಿಯನ್ನು ಮಾಡಬಹುದು.
- ಎಥಿಕಲ್ ಹ್ಯಾಕಿಂಗ್/ಸೋರ್ಸಿಂಗ್: ಸಂಸ್ಥೆಗಳ ಡಿಜಿಟಲ್ ಸುರಕ್ಷತೆಯನ್ನು ಸಮಗ್ರವಾಗಿ ಪರಿಶೀಲಿಸಿ, ಹಾರ್ಡ್ವೇರ್, ಸಾಫ್ಟ್ವೇರ್, ನೆಟ್ವರ್ಕ್ಗಳಲ್ಲಿನ ಲೋಪಗಳನ್ನು ಸರಿಪಡಿಸಿ ಸಂಸ್ಥೆಗಳ ಕಂಪ್ಯೂಟರ್ ವ್ಯವಸ್ಥೆಗಳನ್ನು ಆಂತರಿಕ/ಬಾಹ್ಯಲೋಕದ ಆಕ್ರಮಣಗಳಿಂದ ರಕ್ಷಿಸುವುದು ಎಥಿಕಲ್ ಹ್ಯಾಕಿಂಗ್ನ ಮೂಲ ಉದ್ದೇಶ. ಕಂಪ್ಯೂಟರ್ ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ಭದ್ರತೆಗಳ ಕುರಿತು ಜ್ಞಾನ ಮತ್ತು ಕೌಶಲಗಳನ್ನು ಗಳಿಸಿ ಬೇಡಿಕೆಯಲ್ಲಿರುವ ಈ ವೃತ್ತಿಯಲ್ಲಿ ಯಶಸ್ಸನ್ನು ಕಾಣಬಹುದು. ಕಂಪ್ಯೂಟರ್ ಸಂಬಂಧಿತ ಎಂಜಿನಿಯರಿಂಗ್ ಕೋರ್ಸ್ ನಂತರ ಎಥಿಕಲ್ ಹ್ಯಾಕಿಂಗ್ ಕೋರ್ಸ್ ಮಾಡಬಹುದು.
ಇವುಗಳಲ್ಲದೆ ಬೇಡಿಕೆಯನ್ನು ನಿರೀಕ್ಷಿಸಬಹುದಾದ ನೂತನ ವೃತ್ತಿಗಳೆಂದರೆ ಡ್ರೋನ್ ಆಪರೇಟರ್ಸ್, ಪರಿಸರ ನಿರ್ವಹಣೆ, ಜೆನೆಟಿಕ್ಸ್/ಜೆನೋಮಿಕ್ಸ್, ಆರ್ಥಿಕ ಸ್ವಾಸ್ಥ್ಯ ಸಲಹೆಗಾರರು, ಡಿಜಿಟಲ್ ಟೈಲರಿಂಗ್ ಇತ್ಯಾದಿ. ಇದರರ್ಥ ಸಾಂಪ್ರದಾಯಿಕ ಕ್ಷೇತ್ರಗಳ ಅವಕಾಶಗಳು ಇರುವುದಿಲ್ಲ ಎಂದಲ್ಲ; ಆದರೆ, ನೂತನ ಅವಕಾಶಗಳತ್ತ ನಿಮ್ಮ ಗಮನವನ್ನು ಹರಿಸಿ, ನಿಮ್ಮ ಸಾಮಥ್ರ್ಯ, ಅಭಿರುಚಿಗೆ ತಕ್ಕಂತ ವೃತ್ತಿ ಮತ್ತು ಅದರಂತೆ ನಿಮ್ಮ ಶಿಕ್ಷಣದ ಆಯ್ಕೆಗಳಿರಲಿ ಎಂದು.