Q1. ಸರ್, ನಾನು ಡಿಪ್ಲೊಮಾ ಓದುತ್ತಿದ್ದೇನೆ. ನನ್ನ ಮೂರು ವರ್ಷದ ಡಿಪ್ಲೊಮಾ ಬಳಿಕ ನಾನು ಪದವಿ ಕೋರ್ಸ್ ಸೇರಲು ಸಾಧ್ಯವೇ?
ಮೂರು ವರ್ಷದ ಡಿಪ್ಲೊಮಾ ಬಳಿಕ ಪದವಿ ಕೋರ್ಸ್ಗೆ ಸೇರಬಹುದು.
Q2. ನಾನು 75 ವರ್ಷದ ವ್ಯಾಪಾರಸ್ಥ. ನಾನು ಎಂಎ, ಬಿಕಾಂ, ಪದವಿಗಳನ್ನು ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಡೆದಿರುತ್ತೇನೆ. ಸರ್ಟಿಫಿಕೇಟ್ ಲಭ್ಯವಿಲ್ಲ. ಓದಿನಲ್ಲಿ ಆಸಕ್ತಿಯಿದೆ.ಕೇವಲ ವಯಸ್ಸಿನ ಆಧಾರದ ಮೇಲೆ ಎಲ್ಎಲ್ಬಿ ಕಲಿಯಬಹುದೇ?
ನಿಮ್ಮ ಜ್ಞಾನಾರ್ಜನೆಯ ಆಸಕ್ತಿ ಶ್ಲಾಘನೀಯ. ನಮಗಿರುವ ಮಾಹಿತಿಯಂತೆ, ಪದವಿ ಕೋರ್ಸ್ ಆಧಾರದ ಮೇಲೆ ದೂರ ಶಿಕ್ಷಣದ ಮುಖಾಂತರ ಎಲ್ಎಲ್ಬಿ ಕೋರ್ಸ್ ಅನ್ನು ಮಾಡಬಹುದು. ಹಾಗಾಗಿ, ಪದವಿಯ ಸರ್ಟಿಫಿಕೇಟ್ ಅಗತ್ಯವಾಗಬಹುದು. ಈ ಕೋರ್ಸ್ಗೆ ಬಾರ್ ಕೌಂಸಿಲ್ ಮಾನ್ಯತೆ ಇರುವುದಿಲ್ಲ.
Q3. ನಾನು ಈಗ ಬಿಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವ ಕಾರಣ ಓದಿನ ಜೊತೆ ಕೆಲಸವನ್ನು ಮಾಡುವುದು ಅನಿವಾರ್ಯವಾಗಿದೆ.ಆದ್ದರಿಂದ, ಬೇಗನೆ ಉದ್ಯೋಗವನ್ನು ಮಾಡಲು ಯಾವ ಕೋರ್ಸನ್ನು ಕಲಿಯಬೇಕು ಎಂದು ತಿಳಿಸಿಕೊಡಿ.
ಈಗಿನ ಪರಿಸ್ಥಿತಿಯಿಂದ ಎದೆಗುಂದದೆ, ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ; ಏಕೆಂದರೆ, ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ.
ಬಿಕಾಂ ನಂತರ ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಕೆಲಸಗಳನ್ನೂ ಪಡೆದುಕೊಳ್ಳಬಹುದು. ಜೊತೆಗೆ, ನಿಮ್ಮ ಆಸಕ್ತಿಯ ಅನುಸಾರ ದೂರ ಶಿಕ್ಷಣದ ಮುಖಾಂತರ ಎಂಬಿಎ, ಎಂಕಾಂ ಮುಂತಾದ ಸ್ನಾತಕೋತ್ತರ ಕೋರ್ಸ್ಗಳನ್ನು ಮಾಡಬಹುದು. ಬಿಕಾಂ ಮುಗಿಯುವವರೆಗೆ ಅರೆಕಾಲಿಕ ಕೆಲಸಗಳನ್ನು ಮಾಡಬಹುದು.
ಹೆಚ್ಚಿನ ವಿವರಗಳಿಗೆ ಗಮನಿಸಿ: http://www.vpradeepkumar.com/earn-while-you-learn-3/
Q4. ಸರ್, ನಾನು ದ್ವಿತೀಯ ಪಿಯುಸಿ ಓದುತ್ತಿದ್ದು, ಮುಂದೆ ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ವಿಶ್ವವಿದ್ಯಾಲಯದಲ್ಲಿ ಐದು ವರ್ಷದ ಕೋರ್ಸ್ ಲಾ ಕೋರ್ಸ್ ಮಾಡಬೇಕೆಂಬ ಕನಸಿದೆ. ಈ ಬಗ್ಗೆ ಮಾಹಿತಿ ನೀಡಿ.
ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಗಮನಿಸಿ: https://www.nls.ac.in/
Q5. ನಾನು ಬಿಬಿಎ ಪದವಿಯಲ್ಲಿ ಶೇಕಡ 80 ಅಂಕ ಪಡೆದಿದ್ದೇನೆ. ಮುಂದೆ ಯಾವ ಕೋರ್ಸ್ ಮಾಡಿದರೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುತ್ತವೆ ಮತ್ತು ಆ ಕೋರ್ಸ್ ಮಾಡಲು ಇರುವ ಒಳ್ಳೆಯ ಕಾಲೇಜುಗಳನ್ನು ತಿಳಿಸಿ.
ಬಿಬಿಎ ನಂತರ ಎಂಬಿಎ ಕೋರ್ಸ್ ಮಾಡುವುದು ಉತ್ತಮ. ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್ಮೆಂಟ್ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಇದಲ್ಲದೆ, ಉದ್ಯಮಗಳಲ್ಲಿ ಪ್ರಾಯೋಗಿಕವಾದ ತರಬೇತಿಯನ್ನು ಪ್ರಾಜೆಕ್ಟ್ಗಳ ಮುಖಾಂತರ ನೀಡುವುದರಿಂದ ಕಲಿಕೆ ಪರಿಪೂರ್ಣವಾಗುತ್ತದೆ. ನಿಮ್ಮ ನೈಪುಣ್ಯತೆ ಮತ್ತು ಚತುರತೆ ವರ್ಧಿಸಿ, ಯಾವುದೇ ಕೆಲಸವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ. ಒಟ್ಟಾರೆ, ಎಂಬಿಎ ಕಲಿಕೆಯ ವೈವಿಧ್ಯತೆಗಳಿಂದ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಆದ್ದರಿಂದಲೇ, ಎಂಬಿಎ ಕೋರ್ಸ್ ಜನಪ್ರಿಯ. ನಮ್ಮ ದೇಶದಲ್ಲಿ ಸುಮಾರು 5000ಕ್ಕೂ ಹೆಚ್ಚಿನ ಎಂಬಿಎ ಕಾಲೇಜುಗಳಿದ್ದು, ಸಿಎಟಿ, ಪಿಜಿಸಿಯಿಟಿ ಗಳಂತಹ ಪರೀಕ್ಷೆಗಳ ಮೂಲಕ ಪ್ರವೇಶದ ಆಯ್ಕೆಯಾಗುತ್ತದೆ. ಕ್ಯಾಂಪಸ್ ನೇಮಕಾತಿ ಇರುವ, ಉತ್ತಮ ರ್ಯಾಂಕಿಂಗ್ ಇರುವ ಪ್ರತಿಷ್ಟಿತ ಕಾಲೇಜು/ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಬೇಕು. ಈ ಮಾಹಿತಿಯನ್ನು ಅನೇಕ ಮಾಧ್ಯಮಗಳು ಅಂತರ್ಜಾಲದಲ್ಲಿ ಪ್ರಕಟಿಸುತ್ತವೆ. ಎಲ್ಲಕ್ಕಿಂತ ಪ್ರಮುಖವಾಗಿ ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗಿ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಹೆಚ್ಚಿನ ವಿವರಗಳಿಗಾಗಿ ಈ ವೀಡಿಯೊ ವೀಕ್ಷಿಸಿ:
Q6. ದ್ವಿತೀಯ ಪಿಯುಸಿ ನಂತರ ಸಿಎ ಮಾಡಬಹುದಾ?
ಪಿಯುಸಿ ಮುಗಿಸಿ ಸಿಎ ಫೌಂಡೇಷನ್ ಕೋರ್ಸ್ ಮಾಡಬೇಕು. ನಂತರ ಇಂಟರ್ಮೀಡಿಯೆಟ್ ಮತ್ತು ಫೈನಲ್ ಕೋರ್ಸ್ಗಳನ್ನು ಮಾಡಬೇಕು. ಹೆಚ್ಚಿನ ವಿವರಗಳಿಗೆ ಗಮನಿಸಿ: https://www.icai.org/
Q7. ನಾನು ಬಿಕಾಂ ಮುಗಿಸಿ ಎಂಕಾಂ ಸೇರಿದ್ದೇನೆ. ಮತ್ತು ಎಮ್ಎಸ್ಡಬ್ಲ್ಯು ಮಾಡುತ್ತಿದ್ದೇನೆ. ಈ ಕೋರ್ಸ್ ನಂತರ ಯಾವ ವೃತ್ತಿಯನ್ನು ಮಾಡಬಹುದು? ನಿಮ್ಮ ಸಲಹೆ ನೀಡಿ.
ಫೈನಾನ್ಸ್ ವಿಸ್ತಾರವಾದ ಕ್ಷೇತ್ರ. ಅಕೌಂಟಿಂಗ್, ಬ್ಯಾಂಕಿಂಗ್, ಇನ್ಶ್ಯೂರೆನ್ಸ್, ಇನ್ವೆಸ್ಟ್ಮೆಂಟ್, ಕಾರ್ಪೊರೇಟ್ ಫೈನಾನ್ಸ್, ರಿಸರ್ಚ್, ರಿಸ್ಕ್ ಮ್ಯಾನೇಜ್ಮೆಂಟ್ ಸೇರಿದಂತೆ ಅನೇಕ ವಿಭಾಗಗಳಿವೆ. ಹಾಗಾಗಿ, ಈ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬಹುದು. ಎಮ್ಎಸ್ಡಬ್ಲ್ಯು ಮುಗಿಸಿದ ನಂತರ ಫೈನಾನ್ಸ್ ಕ್ಷೇತ್ರದ ಮಾನವ ಸಂಪನ್ಮೂಲ ಸಂಬAಧಿತ ಜವಾಬ್ದಾರಿಗಳನ್ನೂ ನಿಭಾಯಿಸುವ ಅರ್ಹತೆಯೂ ಇರುತ್ತದೆ. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಸರ್ಕಾರಿ ಕೆಲಸಗಳಿಗೂ ಪ್ರಯತ್ನಿಸಬಹುದು. ನಿಮ್ಮ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆಯ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿ, ಅದಕ್ಕೆ ಅನುಗುಣವಾಗಿ ಮುಂದಿನ ವೃತ್ತಿಯ ಆಯ್ಕೆ ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/mentoring-crucial-for-higher-education/
Q8. ನಾನು ಇಂಗ್ಲಿಷ್ ಶಿಕ್ಷಕ. 2013 ರಿಂದ ಕೊಪ್ಪಳದ ಸರ್ಕಾರಿ ಶಾಲೆಯಲ್ಲಿ ವೃತ್ತಿ ಮಾಡುತ್ತಿದ್ದೇನೆ. 2004 ರಲ್ಲಿ ನಾನು ಪ್ರೆöÊಮರಿ ಶಾಲಾ ಶಿಕ್ಷಕನಾಗಿ ನೇಮಕಗೊಂಡಿದ್ದೆ. 2008–09 ರಲ್ಲಿ ರೆಗ್ಯುಲರ್ ಬಿಇಡಿ ಕೋರ್ಸ್ ಸೇರಿದ್ದೆ. ಅದೇ ವರ್ಷದಲ್ಲಿ ನಾನು ಖಾಸಗಿಯಾಗಿ ಇಂಗ್ಲಿಷ್ ಎಂಎ ಮುಗಿಸಿಕೊಂಡಿದ್ದೆ. ನಾನು, ಈಗ ಪಿಯು ಕಾಲೇಜ್ ಅಧ್ಯಾಪಕನಾಗಲು ಸಾಧ್ಯವೇ?
ನಮಗಿರುವ ಮಾಹಿತಿಯಂತೆ, ಪಿಯು ಕಾಲೇಜ್ ಅಧ್ಯಾಪಕರಾಗಲು, ಸಾಮಾನ್ಯ ವರ್ಗದವರಾದರೆ 40 ವರ್ಷದ ಒಳಗಿದ್ದು, ಬಿಇಡಿ ಪದವಿಯ ಜೊತೆಗೆ ಭೋಧಿಸುವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://www.pravinyata.com/karnataka-pu-lecturer-recruitment/
Q9. ಸರ್, ನಾನು ಎಂಬಿಎ ಮುಗಿಸಿ ಎಂಎನ್ಸಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ನನಗೆ ಸಾಫ್ಟ್ವೇರ್ ಕೋರ್ಸ್ ಮಾಡುವ ಆಸೆ. ಆದರೆ ನನಗೆ ಯಾವ ಕೋರ್ಸ್ ಸೂಕ್ತ ಹಾಗೂ ಸದ್ಯ ಐಟಿ ಕ್ಷೇತ್ರದಲ್ಲಿ ಟ್ರೆಂಡಿಂಗ್ ಇರುವ ಕೋರ್ಸ್ ಯಾವುದು ಎಂಬುದು ತಿಳಿಯುತ್ತಿಲ್ಲ. ಈ ವಿಷಯದಲ್ಲಿ ನನಗೆ ಸಹಾಯ ಮಾಡಿ.
ಕೃತಕ ಬುದ್ಧಿಮತ್ತೆ [ಎಐ] ಮತ್ತು ರೊಬೊಟಿಕ್ಸ್ ಈಗ ಬೇಡಿಕೆಯಲ್ಲಿರುವ ಹಾಗೂ ಭವಿಷ್ಯದಲ್ಲೂ ಬೇಡಿಕೆಯನ್ನು ನಿರೀಕ್ಷಿಸಬಹುದಾದ ಕ್ಷೇತ್ರ. ರೊಬೊಟಿಕ್ಸ್, ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಎಂಜಿನಿಯರಿಂಗ್, ಮೆಷಿನ್ ಲರ್ನಿಂಗ್ ಇತ್ಯಾದಿ ವಿಷಯಗಳ ಕುರಿತು ಡಿಪ್ಲೊಮಾ/ಸರ್ಟಿಫಿಕೇಟ್ ಕೋರ್ಸ್ ಮಾಡಿ ಈ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.
Q10. ನನ್ನ ತಂದೆ-ತಾಯಿಯವರ ದಾಖಲೆ ಮತ್ತು ನನ್ನ ಪದವಿಯವರೆಗಿನ ದಾಖಲೆಗಳಲ್ಲಿ ಅವರ ಹೆಸರುಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಇದರಿಂದ ಸರ್ಕಾರಿ ಉದ್ಯೋಗಕ್ಕೆ ದಾಖಲಾತಿ ಪರಿಶೀಲನೆಯ ವೇಳೆಯಲ್ಲಿ ತೊಂದರೆಯಾಗುತ್ತದೆಯೇ ತಿಳಿಸಿ? ಒಂದು ವೇಳೆ ಹಾಗಾದರೆ, ಸರಿಪಡಿಸಿಕೊಳ್ಳುವ ಬಗ್ಗೆ ತಿಳಿಸಿ.
ನಮಗಿರುವ ಮಾಹಿತಿಯಂತೆ ನಿಮ್ಮ ತಂದೆತಾಯಿಯವರ ಹೆಸರುಗಳಲ್ಲಿರುವ ಅಲ್ಪಸ್ವಲ್ಪ ವ್ಯತ್ಯಾಸಗಳಿಂದ ನಿಮ್ಮ ಉದ್ಯೋಗದ ದಾಖಲಾತಿ ಪರಿಶೀಲನೆಯ ಸಮಯದಲ್ಲಿ ತೊಂದರೆಯಾಗಲಾರದು. ಆದರೆ, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಅವರ ಹೆಸರುಗಳನ್ನು ನಿಮ್ಮ ದಾಖಲೆಗಳಲ್ಲಿರುವಂತೆ ನಮೂದಿಸುವುದು ಉತ್ತಮ. ಹಾಗೂ, ಅಗತ್ಯ ಬಿದ್ದರೆ, ಲೋಪದೋಷಗಳ ಕುರಿತು ಪ್ರಮಾಣಪತ್ರವನ್ನು ಸಲ್ಲಿಸಬಹುದು.
Q11. ಮಾನ್ಯರೆ, ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಮಾಡುತ್ತಿದ್ದೇನೆ. ಪದವಿಯ ನಂತರ ಎಂಬಿಎ ಮಾಡಬಹುದೇ ಅಥವಾ ಯಾವ ವೃತ್ತಿ ನನಗೆ ಸರಿಯಾದ ಆಯ್ಕೆಯಾಗಿರುತ್ತದೆ.
ಬಿಎ ಪದವಿಯ ನಂತರ ಎಂಬಿಎ ಮಾಡಬಹುದು. ನಿಮ್ಮ ಅಭಿರುಚಿ ಮತ್ತು ಆಸಕ್ತಿಯಂತೆ ವೃತ್ತಿ ಯೋಜನೆಯನ್ನು ಮಾಡಿ ಅದಕ್ಕೆ ಅನುಗುಣವಾಗಿ ವೃತ್ತಿಯನ್ನು ಅನುಸರಿಸಿ. ವೃತ್ತಿಜೀವನವನ್ನು ರುಪಿಸಿಕೊಳ್ಳುವ ಮಾರ್ಗದರ್ಶನಕ್ಕಾಗಿ ಈ ವೀಡಿಯೊ ವೀಕ್ಷಿಸಿ:
Q12. ಈಗ, ನಾನು ಪಿಯುಸಿ (ಕಲಾ ಸಂಯೋಜನೆ) ಕೋರ್ಸ್ ಅನ್ನು ಖಾಸಗಿಯಾಗಿ ಮುಗಿಸಿದ್ದು, ಇದು ಕಾನ್ಸ್ಟೇಬಲ್ ಹುದ್ದೆಗೆ ಅರ್ಹತೆಯಾಗುತ್ತದೆಯೇ?
ಪಿಯುಸಿ ಅಥವಾ ತತ್ಸಮಾನ ಕೋರ್ಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಹತೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://prepp.in/karnataka-police-exam#cpc_e
Q13. ನಾನು ಎಂಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಸಿವಿಲ್ ಪೇದೆ ಹುದ್ದೆಗೆ ಆಯ್ಕೆಯಾಗಿರುತ್ತೇನೆ. ಈ ಹುದ್ದೆಯಲ್ಲಿದ್ದುಕೊಂಡು ರೆಗ್ಯುಲರ್ ಪದವಿ ಪಡೆಯಲು ಅವಕಾಶವಿದೆಯೇ?
ನಮಗಿರುವ ಮಾಹಿತಿಯಂತೆ ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ಈಗ ಮಾಡುತ್ತಿರುವ ರೆಗ್ಯುಲರ್ ಎಂಎಸ್ಸಿ ಕೋರ್ಸ್ ಅನ್ನು ಮುಂದುವರೆಸಲಾಗುವುದಿಲ್ಲ. ಆದರೆ, ದೂರ ಶಿಕ್ಷಣದ ಮುಖಾಂತರ ಎಂಎಸ್ಸಿ ಕೋರ್ಸ್ ಅನ್ನು ಆಯ್ದ ಕೆಲವು ಸಂಯೋಜನೆಗಳಲ್ಲಿ ಮಾಡುವ ಅವಕಾಶವಿದೆ.
Q14. ದೂರ ಶಿಕ್ಷಣದ ಮೂಲಕ ಎಂಎಸ್ಸಿ ಹಾಗೂ ರೆಗ್ಯೂಲರ್ ಬಿಇಡಿ ಕೋರ್ಸ್ಗಳನ್ನು ಏಕಕಾಲಕ್ಕೆ ಕಲಿಯಬಹುದೇ?
ನಮಗಿರುವ ಮಾಹಿತಿಯಂತೆ, ಈ ಎರಡೂ ಕೋರ್ಸ್ಗಳನ್ನು ನೀವು ತಿಳಿಸಿರುವ ಹಾಗೆ ಏಕಕಾಲಕ್ಕೆ ಕಲಿಯುವ ಸಾಧ್ಯತೆಯಿದೆ. ನಿಖರವಾದ ಮಾಹಿತಿಗಾಗಿ ಸಂಬಂಧಪಟ್ಟ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ.
Q15. ನಾನು ದೂರ ಶಿಕ್ಷಣದ ಮೂಲಕ ಬಿಕಾಂ ಮಾಡಿದ್ದೇನೆ. ರಾಷ್ಟೀಕೃತ ಬ್ಯಾಂಕಿನ ಉದ್ಯೋಗಕ್ಕೆ ತೊಂದರೆ ಆಗುವುದಿಲ್ಲವೇ?ಸಂಜೆ ಕಾಲೇಜಿನ ಮೂಲಕ ಎಂಬಿಎ ಮಾಡಬಹುದೇ?
ನಮಗಿರುವ ಮಾಹಿತಿಯಂತೆ, ಯುಜಿಸಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಪದವಿ ಗಳಿಸಿದ ನಂತರ ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಇರುತ್ತದೆ. ಸಂಜೆ ಕಾಲೇಜಿನ ಮೂಲಕ ಎಂಬಿಎ ಮಾಡಬಹುದು.
ನಾನು ಪದವಿಯಲ್ಲಿ ಚರಿತ್ರೆ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯಗಳನ್ನು ಓದಿದ್ದೇನೆ. ಪ್ರಸ್ತುತ 2021-23 ರ ಬಿ.ಇಡಿ ತರಗತಿಗೆ ಪ್ರವೇಶ ಪಡೆದಿದ್ದೇನೆ. ಬಿ.ಇಡಿ ಕೋರ್ಸ್ನಲ್ಲಿ ನಾನು ಯಾವ ವಿಷಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಬಿ.ಇಡಿ ಮುಗಿಯುವುದಕ್ಕೂ ಮೊದಲು ನಾನು ಸಿಇಟಿ ಮತ್ತು ಟಿಇಟಿ ಬರೆಯಬಹುದೇ?
ಬಿ.ಇಡಿ ಕೋರ್ಸ್ ಕುರಿತ ಸಮಗ್ರ ಮಾಹಿತಿಗಾಗಿ ಗಮನಿಸಿ: https://www.collegedekho.com/courses/bed/
Q16. ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಸರ್ಕಾರಿ ಕೋಟಾದಲ್ಲಿ ಬಿಪಿಟಿ ಓದಬೇಕೆಂದಿದ್ದೇನೆ. ಇದಕ್ಕೆ ಅರ್ಜಿ ಸಲ್ಲಿಸುವುದು ಯಾವಾಗ?
2021-2022 ನೇ ಶೈಕ್ಷಣಿಕ ವರ್ಷದ ಪ್ರಕ್ರಿಯೆ 2021 ರ ಡಿಸೆಂಬರ್ನಲ್ಲಿ ಶುರುವಾಗಿತ್ತು. ಬಿಪಿಟಿ ಕೋರ್ಸ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಗಮನಿಸಿ: https://www.karnatakaphysio.org/
Q17. ನಾನು ದ್ವಿತೀಯ ಪಿಯುಸಿ ವಿದ್ಯಾರ್ಥಿ. ಕೆಸಿಇಟಿ 2022 ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಬಿವಿಎಸ್ಸಿ ಕೋರ್ಸ್ಗೆ ಭವಿಷ್ಯ ಇದೆಯೇ? ಸರ್ಕಾರಿ ಉದ್ಯೋಗ ಪಡೆಯಲು ಮಾರ್ಗದರ್ಶನ ನೀಡಿ.
ವೆಟರ್ನರಿ ಸೈನ್ಸ್ ಈಗ ಬೇಡಿಕೆಯಲ್ಲಿರುವ ಕ್ಷೇತ್ರ. ಬಿವಿಎಸ್ಸಿ ಕೋರ್ಸ್ ನಂತರ ಕೃಷಿ ಮತ್ತು ಪಶುಪಾಲನಾ ಇಲಾಖೆಗಳು, ಕೋಳಿ ಸಾಕಣೆ ಕೇಂದ್ರಗಳು, ಪಶುವೈದ್ಯಕೀಯ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು, ನಾಯಿ ತರಬೇತಿ ಕೇಂದ್ರಗಳು, ಮೃಗಾಲಯಗಳು, ವನ್ಯಜೀವಿ ಅಭಯಾರಣ್ಯಗಳು, ಸಂಶೋಧನಾ ಕೇಂದ್ರಗಳು, ಪ್ರಾಣಿಗಳ ಸಂತಾನೋತ್ಪತ್ತಿ ಕೇಂದ್ರಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಯುಪಿಎಸ್ಸಿ/ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳಬಹುದು. ಹಾಗೂ, ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಶು ವೈದ್ಯಾಧಿಕಾರಿ ಹುದ್ದೆಗಳಿಗೂ ಪ್ರಯತ್ನಿಸಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ: http://www.ahvs.kar.nic.in/kn-recruitment.html
Q18. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಬಿಸಿಎ ಕೂಡ ನಾಲ್ಕು ವರ್ಷ ಹಾಗೂ ಬಿಇ (ಕಂಪ್ಯೂಟರ್ ಸೈನ್ಸ್) ಕೂಡ 4 ವರ್ಷ. ಈ ಎರಡರಲ್ಲೂ ಇರುವ ವ್ಯತ್ಯಾಸವೇನು? ಉದ್ಯೋಗಾವಕಾಶಗಳಿಗೆ ಯಾವುದು ಉತ್ತಮ?
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಬಿಸಿಎ ಪದವಿಯನ್ನು ಮೂರು ವರ್ಷಗಳಲ್ಲಿ ಪಡೆಯಬಹುದು. ಬಿಸಿಎ (ಹಾನರ್ಸ್) ಕೋರ್ಸಿನ ನಾಲ್ಕನೇ ವರ್ಷ ಸಂಶೋಧನೆಗೆ ಮೀಸಲಾಗಿದ್ದು ಪಿಎಚ್ಡಿ ಮಾಡುವ ಅರ್ಹತೆಯಿರುತ್ತದೆ. ಬಿಸಿಎ ಮತ್ತು ಬಿಇ ಕೋರ್ಸ್ಗಳಲ್ಲಿನ ವ್ಯತ್ಯಾಸಗಳ ಕುರಿತು ಈ ವರ್ಷದ ಜನವರಿ 3 ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ವೃತ್ತಿಯ ಅವಕಾಶಗಳ ದೃಷ್ಠಿಯಿಂದ ಬಿಇ ಕೋರ್ಸ್ ಉತ್ತಮವೆನ್ನುವುದು ನನ್ನ ಅಭಿಪ್ರಾಯ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ.
Q19. ಸರ್, ನನ್ನ ಮಗಳಿಗೆ 38 ವರ್ಷ. ಅವಳು ಅಂಗವಿಕಲೆ. ಬಿಎ ಪದವಿ ಮುಗಿಸಿ ಇಗ್ನೊ ವಿಶ್ವವಿದ್ಯಾಲಯದ ಮೂಲಕ ಜರ್ಮನ್ ಭಾಷೆಯಲ್ಲಿ ಸರ್ಟಿಫಿಕೇಟ್ ಕೋರ್ಸ್ಗೆ ಸೇರಿದ್ದಾಳೆ. ಈ ಕೋರ್ಸ್ ಮುಗಿದ ಮೇಲೆ ಅವಳಿಗೆ ಬೆಂಗಳೂರಿನಲ್ಲಿ ಯಾವ ರೀತಿಯ ಉದ್ಯೋಗ ಸಿಗಬಹುದು?
ಜರ್ಮನ್ ಭಾಷೆಯ ತಜ್ಞತೆಯ ಆಧಾರದ ಮೇಲೆ ವೈದ್ಯಕೀಯ ಮತ್ತು ಆರೋಗ್ಯ, ಶಿಕ್ಷಣ, ಲಾಜಿಸ್ಟಿಕ್ಸ್, ಆಟೋಮೊಬೈಲ್, ಮಾಧ್ಯಮ, ಮನರಂಜನೆ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಹಣಕಾಸು ಸೇವೆಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ನಿರೀಕ್ಷಿಸಬಹುದು. ಹಾಗೂ, ಜರ್ಮನ್ ಭಾಷೆಯ ತಜ್ಞತೆಯಿದ್ದರೆ, ಮನೆಯಿಂದಲೇ ಮಾಡಬಹುದಾದ ವಿಷಯಾಭಿವೃದ್ಧಿ, ಅನುವಾದ, ಸಬ್ಟೈಟಲ್ಸ್, ಟ್ರಾನ್ಸಿಕ್ಷ್ಪ್ಪನ್ ಇತ್ಯಾದಿ ಅವಕಾಶಗಳೂ ಇವೆ.
Q20. ನಾನು ಮೆಕ್ಯಾನಿಕಲ್ ಉದ್ದಿಮೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ವೃತ್ತಿಯನ್ನು ಬದಲಿಸಿ ಸಾಫ್ಟ್ವೇರ್ ವೃತ್ತಿ ಮಾಡಬೇಕು ಎಂಬ ಆಸೆ ಇದೆ. ನನಗೆ ಸಲಹೆ ನೀಡಿ.
ವೃತ್ತಿಯನ್ನು ಬದಲಾಯಿಸುವುದು ಜೀವನದ ಪ್ರಮುಖ ನಿರ್ಧಾರ. ವೃತ್ತಿಯ ಯಶಸ್ಸಿಗೆ ವೃತ್ತಿ ಸಂಬಂಧಿತ ವಿಷಯದಲ್ಲಿ ಪರಿಣತಿ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ನಿರ್ಧಾರಕ್ಕೆ ಬರುವ ಮುನ್ನ ಈ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಅದ್ದರಿಂದ, ನೀವು ನೀಡಿರುವ ಕಿರು ಮಾಹಿತಿಯಿಂದ ಮಾರ್ಗದರ್ಶನ ನೀಡುವುದು ಸಾಧ್ಯವಿಲ್ಲ. ನೀವು ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ, ಸುದೀರ್ಘವಾಗಿ ಚರ್ಚಿಸುವುದು ಉತ್ತಮ.
Q21. ನಾನು ದ್ವಿತೀಯ ಪಿಯುಸಿ (ಸೈನ್ಸ್) ಮುಗಿಸಿದ್ದೇನೆ. ಮುಂದೆ, ಕೋರ್ಸ್ ಆಯ್ಕೆ ಬಗ್ಗೆ ಗೊಂದಲವಿದೆ. ಉದ್ಯೋಗ ಹಾಗೂ ಸಂಬಳದ ದೃಷ್ಟಿಯಿಂದ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು?
ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪರಿಗಣಿಸಿ ಯಾವ ವೃತ್ತಿಯಲ್ಲಿ ಹೆಚ್ಚಿನ ತೃಪ್ತಿ ಮತ್ತು ಯಶಸ್ಸು ನಿಮ್ಮದಾಗಬಹುದೆಂದು ಪರಿಶೀಲಿಸಿ. ಅದರಂತೆ ವೃತ್ತಿಯೋಜನೆಯನ್ನು ತಯಾರಿಸಿ, ಸೂಕ್ತವಾದ ಕೋರ್ಸ್ ಮತ್ತು ವೃತ್ತಿಯನ್ನು ಅನುಸರಿಸಿ. ದ್ವಿತೀಯ ಪಿಯುಸಿ ನಂತರದ ಮಾರ್ಗದರ್ಶನಕ್ಕಾಗಿ ಈ ವೀಡಿಯೊ ವೀಕ್ಷಿಸಿ: https://www.youtube.com/channel/UCH-ugIg9bBIyH5QQbn_JjIw
Q22. ನಾನು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ, ನನ್ನ ಶೈಕ್ಷಣಿಕ ದಾಖಲಾತಿಗಳಲ್ಲಿ ನನ್ನ ತಂದೆಯ ಹೆಸರಿನ ಮುಂದೆ ಬಿ ಟಿ ಎಂದಿದೆ; ಆದರೆ ಬೇರೆಲ್ಲೂ ಇಲ್ಲ. ಮುಂದೆ ದಾಖಲಾತಿ ಪರಿಶೀಲನೆ ವೇಳೆ ಇದರಿಂದ ತೊಂದರೆಯಾಗುತ್ತದೆಯೇ?
ನಮಗಿರುವ ಮಾಹಿತಿಯಂತೆ, ನಿಮ್ಮ ತಂದೆಯ ಹೆಸರಿನಲ್ಲಿರುವ ಅಲ್ಪಸ್ವಲ್ಪ ವ್ಯತ್ಯಾಸದಿಂದ ನಿಮ್ಮ ಉದ್ಯೋಗದ ದಾಖಲಾತಿ ಪರಿಶೀಲನೆಯ ಸಮಯದಲ್ಲಿ ತೊಂದರೆಯಾಗಲಾರದು. ಆದರೆ, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಅವರ ಹೆಸರುಗಳನ್ನು ನಿಮ್ಮ ದಾಖಲೆಗಳಲ್ಲಿರುವಂತೆ ನಮೂದಿಸುವುದು ಉತ್ತಮ. ಹಾಗೂ, ಅಗತ್ಯ ಬಿದ್ದರೆ, ಲೋಪದೋಷಗಳ ಕುರಿತು ಪ್ರಮಾಣಪತ್ರವನ್ನು ಸಲ್ಲಿಸಬಹುದು.
Q23. ನಾನು ದ್ವಿತೀಯ ಪಿಯುಸಿ ಓದುತ್ತಿರುವೆ. ಮುಂದೆ ಎಂಬಿಎ ಮಾಡುವ ಮೊದಲು ಬಿಕಾಂ ಒಳ್ಳೆಯದೇ ಅಥವಾ ಬಿಬಿಎ ಒಳ್ಳೆಯದೇ?
ಫೈನಾನ್ಸ್ ವಿಸ್ತಾರವಾದ ಕ್ಷೇತ್ರ. ಅಕೌಂಟಿಂಗ್, ಬ್ಯಾಂಕಿಂಗ್, ಇನ್ಶೂ ್ಯರೆನ್ಸ್, ಇನ್ವೆಸ್ಟ್ಮೆಂಟ್ ಕಾರ್ಪೊರೇಟ್ ಫೈನಾನ್ಸ್, ರಿಸ್ಕ್ ಮ್ಯಾನೇಜ್ಮೆಂಟ್ ಸೇರಿದಂತೆ ಅನೇಕ ಆಯ್ಕೆಗಳಿವೆ. ವೃತ್ತಿಯ ಅವಕಾಶಗಳ ದೃಷ್ಠಿಯಿಂದ, ನಿಮಗೆ ಆಸಕ್ತಿಯಿರುವ ವಿಷಯದಲ್ಲಿ ಬಿಕಾಂ ಮಾಡುವುದು ಒಳ್ಳೆಯದೆಂದು ನನ್ನ ಅಭಿಪ್ರಾಯ.
Q24. ನಾನು ಈಗ ಮ್ಯಾಥೆಮ್ಯಾಟಿಕ್ಸ್ನಲ್ಲಿ ಎಂಎಸ್ಸಿ ಮಾಡುತ್ತಿದ್ದೇನೆ. ಎಂಎಸ್ಸಿ ಮುಗಿದ ನಂತರ ಗೇಟ್ ಎಕ್ಸಾಂ ತೆಗೆದುಕೊಳ್ಳಬೇಕು ಅಂದುಕೊAಡಿದ್ದೇನೆ. ಪಿಎಚ್ಡಿ ಬದಲು ಎಂಟೆಕ್ ಮಾಡುವುದಾದರೆ, ಯಾವ ಯಾವ ವಿಷಯದಲ್ಲಿ ಮಾಡಬಹುದು ಎಂಬ ಗೊಂದಲವಿದೆ ಹಾಗೂ ಮ್ಯಾಥೆಮ್ಯಾಟಿಕ್ಸ್ನಲ್ಲಿ ವ್ಯಾಸಂಗ ಮಾಡುತ್ತಿರುವ ಕಾರಣ ನನಗೆ ಎಂಟೆಕ್ ಕೋರ್ಸ್ ಕಠಿಣವಾಗುತ್ತದೆಯೇ? ದಯವಿಟ್ಟು ಸಲಹೆ ನೀಡಬೇಕೆಂದು ವಿನಂತಿ.
ಎಂಟೆಕ್ ಮಾಡುವುದಾದರೆ ಅಪ್ಲೆöÊಡ್ ಮ್ಯಾಥೆಮ್ಯಾಟಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್ನಲ್ಲಿ ಮಾಡಬಹುದು. ಪ್ರಮುಖವಾಗಿ, ನಿಮ್ಮ ಸಾಮರ್ಥ್ಯ, ಆಸಕ್ತಿಗೆ ಅನುಗುಣವಾಗಿ ವೃತ್ತಿ ಯೋಜನೆಯನ್ನು ಮಾಡಿ ಅದರಂತೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವೀಡಿಯೊ ವೀಕ್ಷಿಸಿ:
Q25. ಸರ್, ಡಿಪ್ಲೊಮಾ ಪಿಯುಸಿಗೆ ತತ್ಸಮಾನ ಎಂದು ಸರ್ಕಾರ ಸ್ಪಷ್ಟೀಕರಣವನ್ನು ನೀಡಿದೆ. ಆದರೂ, ಪಿಯುಸಿ ಆಧಾರಿತ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಕೆಲವೊಮ್ಮೆ ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಮಾಹಿತಿ ಕೊಡಿ.
ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಅನ್ನು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ. ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ತೊಡಕಾಗುತ್ತಿದ್ದರೆ, ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಸಂಪರ್ಕಿಸಿ.
Q26. ನಾನು ಬಿಕಾಂ ಪದವಿ ಪಡೆದಿದ್ದು ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ನಮ್ಮ ಹೊಲದಲ್ಲಿ ವರದ ಮೇಲ್ದಂಡೆ ಕಾಲುವೆ ಹೋಗಿದ್ದು 1/2 ಎಕರೆ ಕಾಲುವೆಗೆ ಹೋಗಿದೆ. ಅದಕ್ಕಾಗಿ ಪಿಡಿಪಿ ಕೋಟಾದಲ್ಲಿ ನನಗೆ ಅರ್ಜಿ ಸಲ್ಲಿಸಲು ಅವಕಾಶ ಇದೆಯೇ? ಪಿಡಿಪಿ ಸರ್ಟಿಫಿಕೆಟ್ ಪಡೆಯುವುದು ಹೇಗೆ?
ನಮಗಿರುವ ಮಾಹಿತಿಯಂತೆ ಸಂಬಂಧಪಟ್ಟ ತಹಸೀಲ್ದಾರ್ ಕಛೇರಿಯಿಂದ ಪಿಡಿಪಿ ಸರ್ಟಿಫಿಕೆಟ್ ಪಡೆದು ಸರ್ಕಾರಿ ಉದ್ಯೋಗಕ್ಕೆ ಪಿಡಿಪಿ ಕೋಟಾದ ಅಡಿಯಲ್ಲಿ ಇನ್ನಿತರ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
Q27. ಸರ್, ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದಲ್ಲಿ ಬಿಎ ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇನೆ. ಇದರ ಜೊತೆಗೆ ನಾವು ರೆಗ್ಯುಲರ್ ಪದವಿಯನ್ನು ಮಾಡಬಹುದೇ?
ನಮಗಿರುವ ಮಾಹಿತಿಯಂತೆ ಯುಜಿಸಿ, ಎರಡು ಪದವಿ ಕೋರ್ಸ್ಗಳನ್ನು ಏಕಕಾಲದಲ್ಲಿ ( ರೆಗ್ಯುಲರ್ ಮತ್ತು ದೂರಶಿಕ್ಷಣ) ಮಾಡುವ ಅವಕಾಶವನ್ನು ಕಲ್ಪಿಸಿದೆ.