ವೃತ್ತಿಪರ ಕೋರ್ಸ್: ಅಲ್ಪವಿರಾಮ ಯುಕ್ತವೇ?

ಇದು ಕೆಲವು ದಿನಗಳ ಹಿಂದೆ ನಡೆದ ಘಟನೆ. ದ್ವಿತೀಯ ಪಿ..ಯು.ಸಿ.ಯಲ್ಲಿ ಉತ್ತೀರ್ಣನಾದ  ಸಂತೋಷ್‍ನ ತಂದೆಯ ಫೋನ್.

“ಸಾರ್, ನನ್ನ ಮಗನಿಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗೀ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸೀಟ್ ಸಿಕ್ಕಿದೆ. ಈ ಕೋವಿಡ್ ಸಮಯದಲ್ಲಿ ಅನೇಕ ಆತಂಕಗಳಿವೆ, ಗೊಂದಲಗಳಿವೆ. ಆದ್ದರಿಂದ ಏನು ಮಾಡಬಹುದು?” ಎಂದು ಕೇಳಿದರು.

“ಸರಿ. ನಿಮ್ಮ ಆತಂಕಗಳೇನು?”

“ಪ್ರವೇಶದ ಫೀಸ್ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನೂ ಈಗಲೇ ಮುಗಿಸಬೇಕು. ಆದರೆ, ಸದ್ಯಕ್ಕೆ ಆನ್‍ಲೈನ್ ತರಗತಿಗಳು ಮಾತ್ರವಿರುತ್ತದೆ.  ಆದರೆ, ಕ್ರಮಬದ್ಧವಾದ ತರಗತಿಗಳ ಆರಂಭದ ಬಗ್ಗೆ ಖಚಿತವಾದ ಮಾಹಿತಿ ಇಲ್ಲ”, ಎಂದರು.

ನಾನು ಯೋಚನೆ ಮಾಡಿ ಹೇಳಿದೆ, “ಇದೊಂದು ಅಸಾಮಾನ್ಯವಾದ ಪರಿಸ್ಥಿತಿ. ಎಂಜಿನಿಯರಿಂಗ್ ಒಂದು ವೃತ್ತಿಪರ ಕೋರ್ಸ್. ಇಲ್ಲಿ ತರಗತಿಗಳ ಜೊತೆ, ಅಸೈನ್‍ಮೆಂಟ್ಸ್, ಲ್ಯಾಬೋರೇಟರಿ ಕೆಲಸಗಳು, ಪ್ರಾಜೆಕ್ಟ್ಸ್, ವರ್ಕ್‍ಶಾಪ್ ಪ್ರಾಕ್ಟೀಸ್ ಇವೆಲ್ಲವೂ ಇರುತ್ತವೆ. ಮುಖ್ಯವಾಗಿ, ಅಧ್ಯಾಪಕರ ಜೊತೆ ಖುದ್ದಾಗಿ ಚರ್ಚಿಸುವ, ಗೊಂದಲಗಳನ್ನು ಪರಿಹರಿಸಿಕೊಳ್ಳುವ ಅನಿವಾರ್ಯತೆಗಳಿರುತ್ತದೆ. ಹಾಗಾಗಿ, ಈ ವರ್ಷ ಎಂಜಿನಿಯರಿಂಗ್ ಕೋರ್ಸ್‍ಗೆ ಸೇರದಿರುವುದೂ ಒಂದು ಆಯ್ಕೆ” ಎಂದೆ.

“ಹಾಗಾದರೆ, ಒಂದು ವರ್ಷ ಹಾಳಾಗುವುದಲ್ಲವೇ?” ಅವರ ಪ್ರಶ್ನೆ ಸರಿಯಾಗಿಯೇ ಇತ್ತು.

“ಈ ವರ್ಷ ಹಾಳಾಗದಂತೆ, ಸಮಯದ ಸದುಪಯೋಗದ ಮಾರ್ಗದರ್ಶನ ಮಾಡುವುದೇ ನಿಮ್ಮ ಮತ್ತು ನಮ್ಮ ಕತ್ರ್ಯವ್ಯ” ಎಂದು ಹೇಳುತ್ತಾ ಮುಂದುವರಿದೆ, “ಉದಾಹರಣೆಗೆ, ಕಂಪ್ಯೂಟರ್ ಸೈನ್ಸ್‍ಗೆ ಸಂಭಂದಿಸಿದ ಅನೇಕ ಅರೆಕಾಲೀನ ಆನ್‍ಲೈನ್ ಕೋರ್ಸ್‍ಗಳಿವೆ. ಈ ಕೋರ್ಸ್‍ಗಳನ್ನು ಮಾಡುವುದರಿಂದ ಕಂಪ್ಯೂಟರ್ ಸೈನ್ಸ್ ವಿಷಯಗಳನ್ನು ಕಲಿಯುವುದರ ಜೊತೆಗೆ  ಈ ವಿಭಾಗದಲ್ಲಿ ಸಂತೋಷ್‍ಗೆ ನಿಜವಾದ ವೃತ್ತಿಪರ ಆಸಕ್ತಿಯಿದೆಯೇ ಎಂದು ಅವನಿಗೇ ತಿಳಿಯುತ್ತದೆ. ಈ ಕೋರ್ಸ್‍ಗಳಲ್ಲಿನ ಕಲಿಕೆ ಮತ್ತು ಕೌಶಲ, ಎಂಜಿನಿಯರಿಂಗ್ ಕೋರ್ಸ್‍ನಲ್ಲಿ ಮತ್ತು ವೃತ್ತಿಯಲ್ಲಿಯೂ ಉಪಯುಕ್ತವಾಗುತ್ತದೆ. ಜೊತೆಗೆ, ಉದ್ಯೋಗಕ್ಕೆ ಬೇಕಾದ ಅನೇಕ ಕೌಶಲಗಳನ್ನು ವೃದ್ಧಿಸುವ, ವ್ಯಕ್ತಿತ್ವವನ್ನು ಬೆಳೆಸುವ ಆನ್‍ಲೈನ್ ಕೋರ್ಸ್‍ಗಳನ್ನೂ ಮಾಡಬಹುದು. ಇನ್ನೂ ಸಮಯವಿದ್ದಲ್ಲಿ, ಅಭಿರುಚಿ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಮನೆಯಿಂದಲೇ ಮಾಡಬಹುದಾದ ಅರೆಕಾಲೀನ ಕೆಲಸಗಳನ್ನು ಮಾಡಿ ಹಣ ಸಂಪಾದನೆಯ ಜೊತೆ, ಜವಾಬ್ದಾರಿ, ಶಿಸ್ತು, ಸಮಯಪ್ರಜ್ಞೆ,   ಸ್ವಾವಲಂಬನೆಗಳಂತಹ ಜೀವನದ ಪಾಠಗಳನ್ನೂ ಕಲಿಯಬಹುದು” ಎಂದು ವಿವರಿಸಿದೆ.

“ಸಾರ್, ಈ ಸಾಧ್ಯತೆ ನಮಗೆ ಹೊಳೆದೇ ಇರಲಿಲ್ಲ. ಧನ್ಯವಾದಗಳು.” ಎಂದರು.

ಹಾಗಾಗಿ, ವಿಧ್ಯಾರ್ಥಿಗಳೂ, ಪೋಷಕರೂ ಈ ಸಮಯದಲ್ಲಿ ವೃತ್ತಿಪರ ಕೋರ್ಸ್‍ಗಳಾದ ಎಂಜಿನಿಯರಿಂಗ್ ಇತ್ಯಾದಿಗಳ  ಪ್ರವೇಶವನ್ನು ನಿರ್ಧರಿಸುವಾಗ ಒಂದು ವರ್ಷದ ಅಲ್ಪವಿರಾಮವೂ ಸಾಧ್ಯತೆಯೆಂದು ಭಾವಿಸಬಹುದು.

ಈ ಸಾಧ್ಯತೆಯನ್ನು ಪಿ.ಯು.ಸಿ. ಮುಗಿಸಿರುವ ವಿಧ್ಯಾರ್ಥಿಗಳಲ್ಲದೆ, ಸ್ನಾತಕೋತ್ತರ ಕೋರ್ಸ್‍ಗಳನ್ನು ಮಾಡಲಿಚ್ಛಿಸುವ ವಿಧ್ಯಾರ್ಥಿಗಳೂ ಪರಿಗಣಿಸಬಹುದು. ಹಾಂ! ಈ ಅಲ್ಪವಿರಾಮವನ್ನು ವ್ಯರ್ಥ ಮಾಡದೆ, ಸದುಪಯೋಗಿಸಿಕೊಂಡರೆ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಈ ರೀತಿ ಸಹಾಯಕಾರಿ:

  • ಮುಂದೆ ಮಾಡಲಿರುವ ಕೋರ್ಸ್‍ನಲ್ಲಿ ಮತ್ತು ಸಂಭಂದಿತ ವೃತ್ತಿಯಲ್ಲಿ ನಿಮಗೆ ನಿಜವಾದ ಆಸಕ್ತಿ, ಶ್ರದ್ಧೆ, ಬದ್ಧತೆಯಿದೆಯೇ ಎಂದು ಖಾತರಿಯಾಗುತ್ತದೆ.
  • ಆಸಕ್ತಿಯಿಲ್ಲದಿದ್ದರೆ, ಬೇರೊಂದು ಕೋರ್ಸ್ ಮತ್ತು ವೃತ್ತಿಯನ್ನು ಆರಿಸಿಕೊಳ್ಳುವ ಅವಕಾಶವಿರುತ್ತದೆ.
  • ಅರೆಕಾಲೀನ ವೃತ್ತಿಗಳಿಂದ ವ್ಯಕ್ತಿತ್ವದ ಅಭಿವೃದ್ಧಿ.
  • ಉದ್ಯೋಗಕ್ಕೆ ಪದವಿಗಳಷ್ಟೇ ಸಾಕಾಗುವುದಿಲ್ಲವೆಂಬ ಅಂಶ ಆಗಿಂದಾಗ್ಗೆ ನಡೆಯುತ್ತಿರುವ ಸಮೀಕ್ಷೆಗಳಲ್ಲಿ ಕಂಡುಬಂದಿದೆ. ಹಾಗಾಗಿ, ಉದ್ಯೋಗಕ್ಕೆ ಬೇಕಾಗುವ ಪ್ರಾಥಮಿಕ ಕೌಶಲಗಳು ಮತ್ತು ವೃತ್ತಿಪರ ಕೌಶಲಗಳ ಅಭಿವೃದ್ಧಿಗೆ ಪೂರಕವಾದ ಕೋರ್ಸ್‍ಗಳಿಂದ ಪರಿಪೂರ್ಣವಾದ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬಹುದು.

ಅನಿಶ್ಚತೆಗಳು, ಗೊಂದಲಗಳಿರುವ ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ವಿಧ್ಯಾರ್ಥಿಗಳೂ, ಪೋಷಕರೂ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಪರಿಗಣಿಸಿ, ಮುಕ್ತವಾಗಿ ಚರ್ಚಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಬೇಕು.

Download PDF document

               

About author View all posts Author website

V Pradeep Kumar

Leave a Reply

Your email address will not be published. Required fields are marked *