ಉನ್ನತ ಶಿಕ್ಷಣಕ್ಕೆ ಬೇಕು ಮಾರ್ಗದರ್ಶನ

ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಜಾನ್ ಮೆಕಾಟ್ರಾನಿಕ್ಸ್‍ ಎಂಜಿನಿಯರಿಂಗ್‍ನ ಸ್ನಾತಕೋತ್ತರ ಪದವಿಯನ್ನು ಅಮೇರಿಕದಲ್ಲಿ ಗಳಿಸಿ ಅಪಾರವಾದ ಆಸೆ-ಆಕಾಂಕ್ಷೆಗಳಿಂದ ಭಾರತಕ್ಕೆಮರಳಿದಾಗ ಅವನಿಗಾದ ಶಾಕ್‍ ಅಷ್ಟಿಷ್ಟಲ್ಲ!ಏಕೆಂದರೆ, ಉದ್ಯೋಗದ ಸಂದರ್ಶನಗಳಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಂದ ಅವನು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದ. ಎಲ್ಲೆಡೆ ಅದೇ ಪ್ರಶ್ನೆ; ಅದೇ ಪ್ರತಿಕ್ರಿಯೆ. “ನಮಗೆ ಮೆಕಾನಿಕಲ್‍ ಅಥವಾ ಎಲೆಕ್ಟ್ರಾನಿಕ್ಸ್ ಪದವೀಧರರ ಅವಶ್ಯಕತೆಯಿದೆಯೇ ಹೊರತು ಮೆಕಾಟ್ರಾನಿಕ್ಸ್ ಪದವೀಧರರ ಅವಶ್ಯಕತೆಯಿಲ್ಲ”ಎಂದು ಸಂದರ್ಶಕರು ಹೇಳಿಬಿಡುತ್ತಿದ್ದರು. ಪ್ರತಿ ಸಂದರ್ಶನದಿಂದ ನಂತರವೂ ಯಾಕಾದರೂ ಈ ಕೋರ್ಸ್ ಮಾಡಿದೆನೋ ಎಂದು ಜಾನ್‍ಗೆ ಅನಿಸುತ್ತಿತ್ತು.

ನಿರುದ್ಯೋಗದ ಸವಾಲು ಒಂದೆಡೆಯಾದರೆ ಇಪ್ಪತೈದು ಲಕ್ಷ ಸಾಲವನ್ನುತೀರಿಸುವ ಮತ್ತು ಸಂಸಾರವನ್ನು ನೋಡಿಕೊಳ್ಳುವ ಜವಾಬ್ದಾರಿ ಬೇರೆ.ಕ್ಲಿಷ್ಟವಾದ ಈ ಸಮಸ್ಯೆಗಳಿಗೆ ಪರಿಹಾರ ಸಿಗದೆ, ತೀವ್ರವಾದ ಖಿನ್ನತೆಯಿಂದ ಬಳಲಿ ಮಾರ್ಗದರ್ಶನಕ್ಕೆ ನನ್ನ ಬಳಿ ಬಂದಾಗ ಜಾನ್ ಸಂಪೂರ್ಣವಾಗಿ ಕುಸಿದು ಹೋಗಿದ್ದ.

ಅವನ ಸಮಸ್ಯೆಗಂಭೀರವಾಗಿತ್ತು; ಪರಿಹಾರಕ್ಕೆತೀರ ಹೆಣಗಾಡಬೇಕಾಯಿತು.ಏಕೆಂದರೆ ಮೆಕಾಟ್ರಾನಿಕ್ಸ್‍ಎಂಜಿನಿಯರ್‍ಗಳಿಗೆ ಭಾರತದಲ್ಲಿ ಆಗ ಬೇಡಿಕೆಯಿರಲಿಲ್ಲ.ಇಡೀ ದೇಶದಲ್ಲಿ ಮೂರ್ನಾಲ್ಕು ಕಂಪನಿಗಳಿಗಷ್ಟೇಈ ವರ್ಗೀಕರಣದ ಎಂಜಿನಿಯರುಗಳ ಅವಶ್ಯಕತೆಯಿತ್ತು. ಅಷ್ಟಕ್ಕೂ, ಜಾನ್ ಮಾಡಿದ್ದ ತಪ್ಪಾದರೂ ಏನು? ಹೊಸ ವರ್ಗೀಕರಣವೆಂದು ಸೇರಿದ ಕೋರ್ಸಿಗೆ ಉದ್ಯೋಗವನ್ನು ಅನ್ವೇಷಿಸುವಾಗ ನಿರೀಕ್ಷಿತ ಬೇಡಿಕೆ ಬರಲಿಲ್ಲ; ಕೋರ್ಸ್‍ಗೆ ಸೇರುವ ಮೊದಲು ಮಾರ್ಗದರ್ಶಕರ [mentors] ಸಲಹೆಯನ್ನು ಪಡೆದಿರಲಿಲ್ಲ.

ಇಂತಹ ತಪ್ಪು ನಿರ್ಧಾರಗಳು, ಪ್ರಮಾದಗಳು ಈಗಲೂ ನಡೆಯುತ್ತಲೇ ಇವೆ. ಪೋಷಕರ ಒತ್ತಾಯದಿಂದಲೋ ಅಥವಾ ಮಾರ್ಗದರ್ಶನದಕೊರತೆಯಿಂದಲೋ, ವಿಧ್ಯಾರ್ಥಿಗಳು ಕೋರ್ಸ್‍ ಆಯ್ಕೆಯಲ್ಲಿ ಎಡವುತ್ತಿದ್ದಾರೆ. ತೀವ್ರವಾದ ಪ್ರಮಾದಗಳನ್ನು ಸರಿಪಡಿಸುವುದಕ್ಕೆಎಲ್ಲ ಸಂದರ್ಭಗಳಲ್ಲಿ ಸಾಧ್ಯವಿಲ್ಲ; ಹಾಗೊಮ್ಮೆ ಸಾಧ್ಯವಾದರೂ, ಜಾನ್ ಅನುಭವಿಸಿದಂತೆ ಅಗಾಧವಾದ ಶ್ರಮ ಮತ್ತು ಸಮಯ ಬೇಕಾಗುತ್ತದೆ.

ನಮ್ಮದೇಶದ ನಿಜವಾದ ಶಕ್ತಿಯೆಂದರೆ ನಮ್ಮಯುವಜನತೆ;ಅವರಿಂದಲೇ ದೇಶದ ಪ್ರಗತಿ ಸಾಧ್ಯ. ನಮ್ಮಯುವಜನತೆಯ ಇಚ್ಛಾಶಕ್ತಿ ಮತ್ತು ಅಪರಿಮಿತ ಚೈತನ್ಯ ಸಂಪೂರ್ಣವಾಗಿ ಬಳಕೆಯಾಗಬೇಕಾದರೆ, ಅವರಿಗೆ ಸೂಕ್ತವಾದ ಮಾರ್ಗದರ್ಶನದ ಅವಶ್ಯಕತೆಯಿದೆ. ಹಾಗಾಗಿ, ನಿಮ್ಮ ಶೈಕ್ಷಣಿಕ ಮತ್ತು ವೃತ್ತಿಜೀವನದ ಕನಸುಗಳನ್ನು ಸಾಕಾರಪಡಿಸಲು ಈ ಸೂತ್ರಗಳನ್ನು ಪಾಲಿಸಿ:

ನಿಮ್ಮ ಕನಸುಗಳೇನು?

ಬದುಕಿಗೊಂದು ಸ್ಪಷ್ಟವಾದ, ನಿಖರವಾದ, ಸಾಧಿಸಬಹುದಾದಮತ್ತು ಅಳೆಯಬಹುದಾದ ಗುರಿಯಿರಬೇಕು.ಇದನ್ನುSmart Goals ಅನ್ನುತ್ತೇವೆ. ಆ ಗುರಿಗಳು ನಿಮ್ಮನ್ನ ಸದಾಕಾಲ ಪ್ರೇರೇಪಿಸುವಂತಿರಬೇಕು.

ನಿಮ್ಮ ಶಕ್ತಿ, ಸಾಮರ್ಥ್ಯ, ಆಸಕ್ತಿ, ಅಭಿರುಚಿಗಳನ್ನು ಅರಿಯಿರಿ

ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ನಿಮ್ಮ ಸಾಮರ್ಥ್ಯ ಮತ್ತು ಅಭಿರುಚಿಗಳು ಆ ನಿಟ್ಟಿನಲ್ಲಿಯಿವೆಯೇ ಎಂಬುದು ಮುಖ್ಯವಾಗುತ್ತದೆ.ಉದಾಹರಣೆಗೆ, ನೀವು ಎಂಜಿನಿಯರಿಂಗ್ ಮಾಡುವ ಕನಸುಗಳಿದ್ದರೆ, ಗಣಿತದಲ್ಲಿ ಪರಿಣತಿಯಿರಬೇಕು; ಡಾಕ್ಟರ್‍ ಆಗಬೇಕಿದ್ದರೆ ಸೇವಾಮನೋಭಾವದ ಜೊತೆಗೆ ಚುರುಕಾದ ಜ್ಞಾಪಕ ಶಕ್ತಿಯಿರಬೇಕು; ಬಿಸಿನೆಸ್ ಮಾಡಬೇಕಾದರೆ ವ್ಯವಹಾರ ಜ್ಞಾನ, ಸಂವಹನಾ ಶಕ್ತಿ, ಸೂಕ್ಷ್ಮ ಮತ್ತು ಚುರುಕಾದ ಬುದ್ಧಿಶಕ್ತಿ ಇತ್ಯಾದಿ ಇರಬೇಕು;ಇಲ್ಲದಿದ್ದರೆ ಕಷ್ಟವಾದೀತು.

ಮಾರ್ಗದರ್ಶಕರನ್ನುಗುರುತಿಸಿ

ಅನೇಕ ಬಾರಿ ಮಾರ್ಗದರ್ಶಕರನ್ನು ಗುರುತಿಸುವುದೇ ಒಂದು ಸವಾಲಾಗುತ್ತದೆ. ಆದ್ದರಿಂದ, ಈ ಕೆಳಗಿನ ಅಂಶಗಳು ಗಮನದಲ್ಲಿರಲಿ:
ನಿಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಮಾರ್ಗದರ್ಶಕರಿಗೆ ವ್ಯಾಪಕವಾದ ಶೈಕ್ಷಣಿಕ, ಸ್ವಂತ ಅನುಭವ ಅಥವಾ ತರಬೇತಿಯಿದ್ದು ಆ ಕ್ಷೇತ್ರದಲ್ಲಿ ನೈಪುಣ್ಯತೆಯಿರಬೇಕು; ಆ ಕ್ಷೇತ್ರದಲ್ಲಿ ಮುಂದೇನಾಗಬಹುದೆಂಬ ದೂರದೃಷ್ಟಿಯಿರಬೇಕು. ವಿಧ್ಯಾರ್ಥಿಗಳಿಗೆ ಸಹಾಯ ಮಾಡುವ ಮನೋಭಾವ, ತಾಳ್ಮೆ ಮತ್ತು ಸಂವಹನಾ ಶಕ್ತಿಯಿರಬೇಕು.ಇಂತಹ ನೈಪುಣ್ಯತೆ ಶಿಕ್ಷಕರು ಅಥವಾ ಪೋಷಕರಲ್ಲಿದ್ದರೆ ಅವರೇ ನಿಮ್ಮ ಮಾರ್ಗದರ್ಶಕರಾಗಬಹುದು.

ಯಾವ ವೃತ್ತಿ? ಯಾವ ಕೋರ್ಸ್?

ಮಾರ್ಗದರ್ಶಕರನ್ನು ಗುರುತಿಸಿದ ಮೇಲೆ, ಅವರೊಡನೆ ಮುಕ್ತವಾಗಿ ನಿಮ್ಮ ಬದುಕಿನ ಕನಸುಗಳ ಕುರಿತು ಚರ್ಚಿಸಿ. ನಿಮಗೆ ಆಸಕ್ತಿಯಿರುವ ವೃತ್ತಿ ಮತ್ತು ಆ ವೃತ್ತಿಗೆ ಬೇಕಾಗುವ ಕೌಶಲ್ಯಗಳು ನಿಮ್ಮಲ್ಲಿವೆಯೇಎಂಬುದು ಮುಖ್ಯವಾಗುತ್ತದೆ.
ಇತ್ತಿಚೆಗೆ ನಡೆದ ಸರ್ವೆಗಳೂ ಸೇರಿದಂತೆ, ಅನೇಕ ಸರ್ವೆಗಳ ಪ್ರಕಾರ, ನಮ್ಮಪಧವೀಧರರಿಗೆ [ಎಂಜಿನಿಯರಿಂಗ್ ಮತ್ತು ಎಂ.ಬಿ.ಎ. ಸೇರಿದಂತೆ] ಹೆಚ್ಚಿನ ಮಟ್ಟಿಗೆಉದ್ಯೋಗಕ್ಕೆಅಗತ್ಯವಾದ ಕೌಶಲ್ಯಗಳಿರುವುದಿಲ್ಲ. ಹಾಗಾಗಿಯೇ, ಅನೇಕರಿಗೆ ಕ್ಯಾಂಪಸ್‍ನಲ್ಲಿ ನಡೆಯುವ ನೇರವಾದ ನೇಮಕಾತಿಗಳಲ್ಲಿ ಸೆಲೆಕ್ಷನ್ ಆಗುವುದಿಲ್ಲ; ಹಾಗೊಮ್ಮೆ ಆದರೂ ಅವರುಗಳಿಗೆ ಅಗಾಧವಾದ ತರಬೇತಿ ನೀಡಬೇಕಾಗುತ್ತದೆ.ಆದ್ದರಿಂದ, ನಿಮಗಿಷ್ಟವಿರುವ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಪಡೆಯಲು ಮಾರ್ಗೋಪಾಯಗಳನ್ನು ಪತ್ತೆಹಚ್ಚಿ, ಅದರ ಸಾಧಕ ಬಾದಕಗಳನ್ನುಪರಿಶೀಲಿಸಿ. ಇದಾದ ನಂತರವೇ ವೃತ್ತಿ,ಕೋರ್ಸ್ ಮತ್ತು ಕಾಲೇಜ್‍ ಕುರಿತು ಅಂತಿಮ ನಿರ್ಧಾರವನ್ನು ಮಾಡಬೇಕು.

ಮಾಗದರ್ಶಕರ ಸಂಪರ್ಕಜಾಲವನ್ನು ಬಳಸಿಕೊಳ್ಳಿ

ಮಾರ್ಗದರ್ಶಕರಿಗೆ ವ್ಯವಹಾರ ಮತ್ತು ವೃತ್ತಿಗೆ ಪ್ರಸ್ತುತವಾದ ವ್ಯಾಪಕವಾದ ಸಂಪರ್ಕಗಳಿರುತ್ತವೆ. ಅವರ ಮೂಲಕವೇ ವೃತ್ತಿಪರ ಜಾಲತಾಣಗಳ [www.linkedin.com ಇತ್ಯಾದಿ] ಸಂಪರ್ಕಗಳನ್ನು ನೀವು ಬೆಳೆಸಿಕೊಳ್ಳಿ. ಈ ಸಂಪರ್ಕಗಳಿಂದಶೈಕ್ಷಣಿಕಮತ್ತು ವೃತ್ತಿಪರ ಜೀವನದಲ್ಲಿ ನಿಮಗೆ ಅನುಕೂಲವಾಗುತ್ತದೆ. ಉದಾಹರಣೆಗಾಗಿ ಇಂಟರ್ನ್‍ಶಿಪ್, ಸಮ್ಮರ್ ಪ್ರಾಜೆಕ್ಟ್ಸ್ ಇತ್ಯಾದಿ.

ಯಶಸ್ವೀ ವೃತ್ತಿಜೀವನಕ್ಕೆ ಅಗತ್ಯವಾದ ಮೌಲ್ಯಗಳು

ಎಲ್ಲಾ ವೃತ್ತಿಗಳಿಗೂ ತನ್ನದೇ ಆದ, ನಿಯಮಗಳು, ನಿಬಂಧನೆಗಳು, ಕಟ್ಟುಕಟ್ಟಲೆಗಳು,ಮೌಲ್ಯಗಳು ರೂಢಿಗಳಿರುವುದು ಸಹಜ. ಮಾರ್ಗದರ್ಶಕರೊಡನೆ ಚರ್ಚಿಸಿ, ಇವುಗಳ ಮಹತ್ವವನ್ನು  ಅರಿತು ವಿಧ್ಯಾರ್ಥಿ ಜೀವನದಿಂದಲೇ ಅವುಗಳನ್ನು ಮೈಗೂಡಿಸಿಕೊಳ್ಳಬೇಕು.ಆಗಲೇ, ನಿಮ್ಮ ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯವಾಗಿರುವಂತೆ ರೂಪಿಸಿಕೊಳ್ಳಬಹುದು.

ಸಾಮಾನ್ಯವಾಗಿ ಮಾರ್ಗದರ್ಶನ ಮಾಡುವವರಿಗೆ ಇದೊಂದು ಸದಭಿರುಚಿಯಷ್ಟೇ ಹೊರತು ಸಂಪಾದನೆಯ ಮಾರ್ಗವಲ್ಲ. ಆದ್ದರಿಂದ, ಮಾರ್ಗದರ್ಶಕರ ಆಸಕ್ತಿ ಮತ್ತು ನಿಮ್ಮೊಡನೆ ಕಳೆಯುವ ಸಮಯದ ಸಲುವಾಗಿ ಸೂಕ್ತವಾದ ಗೌರವ ಅಭಿನಂದನೆಯನ್ನು ಸಲ್ಲಿಸಿ.

ಬದುಕು ಅರ್ಥಪೂರ್ಣವಾಗಬೇಕಾದರೆ, ಕನಸುಗಳು ಮಹತ್ವಾಕಾಂಕ್ಷೆಯಾಗಿ ಸಾಧನೆಯ ಶಿಖರವನ್ನು ನೀವು ತಲುಪಬೇಕು. ಆದರೆ, ಇಂದಿನ ಸ್ಪರ್ದಾತ್ಮಕ ಮತ್ತು ಚಲನಶೀಲ ಯುಗದಲ್ಲಿ ದೀರ್ಘಕಾಲೀನ ವೃತ್ತಿಪರ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಮಾರ್ಗದರ್ಶಕರ ದೃಷ್ಟಿಕೋನ, ವೃತ್ತಿಯ ಒಳನೋಟ ಮತ್ತು ಸಲಹೆ ನಿಮಗೆ ಸಿಕ್ಕಿದರೆ, ಹಂತ ಹಂತಕ್ಕೆಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಆದ್ದರಿಂದ ಮರೆಯದಿರಿ.ಶಿಕ್ಷಣ ಮತ್ತು ವೃತ್ತಿಜೀವನದ ರೂಪುರೇಷೆಗಳನ್ನು ಮಾರ್ಗದರ್ಶಕರೊಡನೆ ಸಮಾಲೋಚಿಸಿಯೇ ನಿರ್ಧರಿಸಿ. ಆಗಲೇ, ನಿಮ್ಮ ಪರಿಶ್ರಮಕ್ಕೆ ಸಫಲತೆ ದೊರಕಿ, ಉಜ್ವಲ ಭವಿಷ್ಯ ನಿಮ್ಮದಾಗಬಲ್ಲದು.

Download PDF Document

                                 

About author View all posts Author website

V Pradeep Kumar

Leave a Reply

Your email address will not be published. Required fields are marked *