ಕೆಲವು ವರ್ಷಗಳ ಹಿಂದಿನವರೆಗೂ ಚೀನಾ ಎಂದರೆ ಹಲವು ಗೌಪ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡಂತೆ ಭಾಸವಾಗುತ್ತಿತ್ತು.
ಆದರೆ ಈಗ ಇಡೀ ವಿಶ್ವಕ್ಕೇ ತನ್ನ ಮಾರುಕಟ್ಟೆ ಮೂಲಕ ತೆರೆದುಕೊಂಡಿರುವ ಚೀನಾ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿದೆ. ಇದರ ರಾಜಧಾನಿ ಬೀಜಿಂಗ್ ಪುರಾತನ ಹಾಗೂ ಆಧುನಿಕ ಚೀನಾದ ಪ್ರತೀಕವಾಗಿದ್ದು, ಅತ್ಯುತ್ತಮ ಪ್ರವಾಸೀ ತಾಣವಾಗಿದೆ.
ಚೀನಾ ನಮ್ಮ ನೆರೆಯ ರಾಷ್ಟ್ರವಾದರೂ, ಕೆಲವು ವರ್ಷಗಳ ಹಿಂದಿನವರೆಗೂ ವಿದೇಶೀಯರಿಗೆ ಹಲವಾರು ಗೌಪ್ಯಗಳನ್ನು ತನ್ನ ಬೃಹತ್ ಗೋಡೆಗಳ ಹಿಂದೆ ಅಡಗಿಸಿಕೊಂಡಂತೆ ಭಾಸವಾಗುತ್ತಿತ್ತು. ಅಲ್ಲಿಯ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಶ್ರೀಮಂತಿಕೆ ಕಮ್ಯೂನಿಸಂ ಆಡಳಿತದ ಮಧ್ಯೆ ಹೂತುಹೋದಂತಿತ್ತು. ಚೀನೀಯರೆಂದರೆ ನೆಲದ ಮೇಲೆ ಹರಿದಾಡುವ, ಆಕಾಶದಲ್ಲಿ ಹಾರಾಡುವ, ನೀರಿನಲ್ಲಿ ಈಜಾಡುವ ಎಲ್ಲಾ ಜೀವಜಂತುಗಳನ್ನೂ ಸ್ವಾಹಾ ಮಾಡಿ ಜೀರ್ಣಿಸಿಕೊಳ್ಳುವರು ಎಂಬ ಭಾವನೆ ಬಹುತೇಕರಲ್ಲಿತ್ತು.
ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಚೀನಾದ ಅಗ್ಗದ ಗ್ರಾಹಕ ವಸ್ತುಗಳು ಭಾರತದ ಮಾರುಕಟ್ಟೆಗೆ ಪ್ರವಾಹೋಪಾದಿಯಲ್ಲಿ ಹರಿದು ಬಂದ ಮೇಲೆ ಅಲ್ಲಿಯ ತಂತ್ರಜ್ಞಾನ, ಕೈಗಾರಿಕೆ ಕುರಿತು ಕ್ರಮೇಣ ಕುತೂಹಲ ಮೂಡಲಾರಂಭಿಸಿದ್ದಂತೂ ಹೌದು. ಆಗಾಗ ಭಾರತದ ಜೊತೆ ಗಡಿಯಲ್ಲಿ ಸಣ್ಣಪುಟ್ಟ ತಂಟೆ ಎಬ್ಬಿಸುತ್ತ ನಾಯಕನಂತೆ ವರ್ತಿಸುತ್ತಿರುವ ಅದರ ಈಗಿನ ಅಭಿವೃದ್ಧಿಯ ವೇಗವನ್ನು ನೋಡಿದರೆ ಅಮೇರಿಕವನ್ನು ‘ದೊಡ್ಡಣ್ಣ’ನ ಸ್ಥಾನಮಾನದಿಂದ ಕಿತ್ತು ಹಾಕಿ ಅಲ್ಲಿ ಚೀನಾದ ಕೆಂಪು ಬಣ್ಣವನ್ನು ಢಾಳಾಗಿ ಬಳಿಯುವ ದಿನಗಳು ದೂರವಿಲ್ಲ ಎನಿಸುತ್ತದೆ.
ಆದರೆ ಈಗ ಇಡೀ ವಿಶ್ವಕ್ಕೇ ತನ್ನ ಮಾರುಕಟ್ಟೆ ಮೂಲಕ ತೆರೆದುಕೊಂಡಿರುವ ಚೀನಾ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿದೆ. ಇದರ ರಾಜಧಾನಿ ಬೀಜಿಂಗ್ ಪುರಾತನ ಹಾಗೂ ಆಧುನಿಕ ಚೀನಾದ ಪ್ರತೀಕವಾಗಿದ್ದು, ಅತ್ಯುತ್ತಮ ಪ್ರವಾಸೀ ತಾಣವಾಗಿದೆ.
ಇಡೀ ವಿಶ್ವವೇ ತಮ್ಮ ಮಾರುಕಟ್ಟೆ ಎನ್ನುವ ಯೋಜನೆಯನ್ನು ಅನುಷ್ಠಾನಗೊಳಿಸಿ ಮುನ್ನಡೆಯುತ್ತಿದ್ದ ಈ ದೇಶವನ್ನು ನೋಡಬೇಕೆನ್ನುವ ಕುತೂಹಲ, ಬಯಕೆ ಇತ್ತೀಚೆಗಷ್ಟೇ ಈಡೇರಿತು.
ಮ್ಯಾಂಡರಿನ್-ಕಬ್ಬಿಣದ ಕಡಲೆಯೇನಲ್ಲ!
ಮುಂಬೈನಿಂದ ಬೈಜಿಂಗಿಗೆ 8 ಗಂಟೆಗಳ ಪ್ರಯಾಣ. ಕಸ್ಟಮ್ಸ್ ಇತ್ಯಾದಿಗಳನ್ನು ಮುಗಿಸಿ ಹೊರಬರುತ್ತಿದ್ದಂತೆ ಹಸನ್ಮುಖಿ ಚೈನೀಸ್ ಯುವತಿ ಚೆಂಗ್, ‘ನೀ ಹೌ’ ಎಂದು ಸ್ವಾಗತಿಸಿದಳು. ಲವಲವಿಕೆಯಿಂದ ಇಂಗ್ಲೀಷ್ನಲ್ಲಿ ಮಾತನಾಡುತ್ತಿದ್ದ ಅವಳ ಉಚ್ಛಾರಣೆಯಲ್ಲಿ ಸ್ಥಳೀಯ ಪ್ರಭಾವವಿದ್ದರೂ ಅರ್ಥವಾಗುವಂತಿತ್ತು. ಮಾತೃಭಾಷೆಯ ಅಭಿಮಾನ ವಿಶ್ವವ್ಯಾಪಿ; ಮ್ಯಾಂಡರಿನ್ ಭಾಷೆಯ ಬಗ್ಗೆ ತಿಳಿವಳಿಕೆ ಕೊಟ್ಟು, ಕೆಲವು ಸಾಮಾನ್ಯ ಸಂಭಾಷಣೆಗಳನ್ನು ಕಲಿಸುವುದಾಗಿ ತಿಳಿಸಿದಳು.
‘ನೀ ಹೌ’ ಎನ್ನುವುದು ‘ಹೆಲೋ’ ಎನ್ನುವಂತೆ. ‘ಹೌ ಆರ್ ಯು’ ಅಂತ ಇಂಗ್ಲೀಷ್ನಲ್ಲಿ ಕೇಳಬೇಕಾದರೆ ‘ನೀ ಹೌ ಮ’ ಎನ್ನಬೇಕಷ್ಟೆ. ಹಲವಾರು ಸಾಮಾನ್ಯ ವಾಕ್ಯಗಳನ್ನು ಕೆಲವೇ ನಿಮಿಷಗಳಲ್ಲಿ ಚೆಂಗ್ ಕಲಿಸಿ ನಮ್ಮ ವಿಶ್ವಾಸವನ್ನು ಗಳಿಸಿದಳು.
ಚೀನೀಯರ ಚಾಣಾಕ್ಷತನ
ಚೀನಿಯರು ಆಕ್ರಮಣಕಾರಿತನಕ್ಕೂ, ಚಾಣಾಕ್ಷತನಕ್ಕೂ ಹೆಸರುವಾಸಿ; ಆ ಅನುಭವ ಮೊದಲ ಗಂಟೆಯಲ್ಲೇ ಆಯಿತು!
ನಮ್ಮ ವಿಶ್ವಾಸವನ್ನು ಗಳಿಸಿದ ಚೆಂಗ್ ಚೀನಾದ ಯುವಾನ್ ಕರೆನ್ಸಿಗೂ, ಅಮೇರಿಕದ ಡಾಲರಿಗೂ ಇರುವ ವಿನಿಮಯದ ರೇಟನ್ನು ವಿವರಿಸಿ, ದೇಶದಲ್ಲಿ ವ್ಯವಸ್ಥಿತವಾಗಿ ನಕಲಿ ಯುವಾನ್ಗಳಿರುವುದರಿಂದ ನಾವು ಜಾಗರೂಕರಾಗಿರಬೇಕೆಂದೂ, ಹೋಟೆಲ್ ಅಥವಾ ಬ್ಯಾಂಕ್ಗಳಿಗಿಂತಲೂ ಅತ್ಯಂತ ಕಮ್ಮಿ ರೇಟಿನಲ್ಲಿ ತಾನು ಕೊಡುತ್ತೇನೆಂದು ಒತ್ತಾಯಪೂರ್ವಕವಾಗಿ ತಿಳಿಸಿದಳು. ಅವಳನ್ನು ನಂಬಿದ ಅನೇಕ ಸಹಪ್ರವಾಸಿಗರು ವಿನಿಮಯ ಮಾಡಿಕೊಂಡರು; ಅನುಮಾನವಿದ್ದರೂ ಇರಲಿ ಎಂದು ನಾನೂ ಸಹ ಕನಿಷ್ಠ ಮೊತ್ತದ ವಿನಿಮಯ ಮಾಡಿಕೊಂಡೆ. ಕುತೂಹಲದಿಂದ ಹೋಟೆಲ್ ತಲುಪಿದ ತಕ್ಷಣ ವಿಚಾರಿಸಿದಾಗ, ಅವರ ರೇಟ್ ಇನ್ನೂ ಕಮ್ಮಿಯೆಂದು ತಿಳಿದಾಗ, ಚೀನೀಯರ ಚಾಣಾಕ್ಷತನದ ಬಗ್ಗೆ ಖಾತರಿಯಾಯಿತು. ನಾವೆಲ್ಲರೂ ಬಸ್ಸಿನಿಂದ ಇಳಿಯುವ ಮುಂಚೆ, ಸುಮಾರು ಹತ್ತು ಸಾವಿರ ಡಾಲರಷ್ಟನ್ನು ವಿನಿಮಯ ಮಾಡಿದ್ದ ಚೆಂಗ್, ಕನಿಷ್ಠ ಐದು ಸಾವಿರ ಯುವಾನ್ನ ಲಾಭ ಮಾಡಿಕೊಂಡಿದ್ದಳು. ಲಾಬಿಯಲ್ಲಿ ಸಿಕ್ಕಾಗ ಅವಳನ್ನು ನಾನು ಕೇಳಿದಾಗ ಉತ್ತರವಿಲ್ಲದೆ ಪೆಚ್ಚಾದಳು.
ಪುರಾತನ ಚಾರಿತ್ರಿಕ ಸ್ಥಳಗಳು
ಬೀಜಿಂಗ್, ಪುರಾತನ ಮತ್ತು ಆಧುನಿಕ ಚೀನಾದ ಪ್ರತೀಕವಾಗಿದ್ದು, ಪೂರ್ವದ ಪರಿಮಳವೂ ಪಶ್ಚಿಮದ ಶೈಲಿಯೂ ಹದವಾಗಿ ಬೆರೆತಿರುವ ಅದ್ಭುತವಾದ ಸಂಸ್ಕೃತಿ. ಇಲ್ಲಿ ನೋಡಲೇಬೇಕಾದ ಅನೇಕ ರೋಚಕ, ಕುತೂಹಲಕಾರಿ ಸ್ಥಳಗಳಿವೆ.
- ಗ್ರೇಟ್ ವಾಲ್: ಸ್ವಾಭಾವಿಕವಾಗಿಯೇ ನಮ್ಮ ಪ್ರವಾಸ ಪುರಾತನ ಪ್ರಪಂಚದ ಉಳಿದಿರುವ ಅದ್ಭುತಗಳಲ್ಲೊಂದಾದ ಗ್ರೇಟ್ ವಾಲ್ನಿಂದಲೇ ಶುರುವಾಯಿತು. ಎಷ್ಟೋ ಕಿಲೋಮೀಟರ್ ದೂರದಿಂದ ನೋಡಿದಾಕ್ಷಣ, ‘ಅಗೋ, ಗ್ರೇಟ್ ವಾಲ್’ ಎಂದು ಬಸ್ಸಿನಲ್ಲಿದ್ದವರೆಲ್ಲರೂ ಒಕ್ಕೊರಲಿನಿಂದ ಉದ್ಘಾರವೆತ್ತಿದ ಆ ಕ್ಷಣ, ಗ್ರೇಟ್ ವಾಲಿನ ವಿಸ್ಮಯಕಾರಿ ಸೋಜಿಗಕ್ಕೊಂದು ಸಾಕ್ಷಿ.ಕಡಿದಾದ ಬೆಟ್ಟಗುಡ್ಡಗಳು, ವಿಸ್ತಾರವಾದ ಬಯಲು ಪ್ರದೇಶಗಳ ಪ್ರಾಕೃತಿಕ ನೋಟಕ್ಕೆ ಹೊಂದಿಕೊಂಡಂತೆ ಮಹಾ ಗೋಡೆಯ ನಿರ್ಮಾಣ. ಸುಮಾರು 5 ಅಡಿಗಳ ಎತ್ತರ; ಸುಮಾರು 8ರಿಂದ 15 ಅಡಿ ಅಂತರದಲ್ಲಿ ಎರಡು ಗೋಡೆಗಳು; ಮಧ್ಯೆ ಮೆಟ್ಟಲುಗಳು; ಆದರೆ ಅವುಗಳ ಎತ್ತರ ಸರಿಸಮನಾಗಿಲ್ಲ. ಮೋಡ ಕವಿದಿತ್ತು; ಛಳಿ ತೀಕ್ಷ್ಣವಾಗಿರಲಿಲ್ಲ. ಟ್ರೆಕ್ ಮಾಡಲು ಹೇಳಿಮಾಡಿಸಿದಂತಹ ವಾತಾವರಣ. ವರ್ಷಗಳ ಬಯಕೆ ಸಾಕಾರವಾಗಿ ನಮ್ಮ ಮುಂದೆ ಭವ್ಯವಾಗಿದ್ದ ಮಹಾ ಗೋಡೆಯನ್ನು ಉತ್ಸಾಹದಿಂದ ಹತ್ತಲಾರಂಬಿಸಿದೆವು. ಗೋಡೆಯ ಮಧ್ಯೆ ಅಲ್ಲಲ್ಲಿ ಕಾವಲುಗೋಪುರಗಳ ನಿರ್ಮಾಣದಿಂದಲೂ ವಾಸ್ತುಶಿಲ್ಪದ ಶೈಲಿಯಿಂದಲೂ, ಇಡೀ ಸಂಕೀರ್ಣದ ದೃಶ್ಯ ರಮಣಿಯವಾಗಿತ್ತು.ಈ ಮಹಾ ಗೋಡೆ ಉತ್ತರ ಚೀನಾದ ನೆರೆ ರಾಷ್ಟ್ರ ಮಂಗೋಲಿಯದ ಗಡಿ ಪ್ರದೇಶದಲ್ಲಿ, ಪಶ್ಚಿಮದಿಂದ ಪೂರ್ವಕ್ಕೆ ಕಟ್ಟಿದ್ದು, 8850 ಕಿ.ಮೀ. ಉದ್ದವೆನ್ನಲಾಗುತ್ತದೆ; ಇನ್ನೊಂದು ಸರ್ವೆಯ ಪ್ರಕಾರ 21, 196 ಕಿ.ಮೀ. ಉದ್ದವಿದೆ. ಆದರೆ, ಮಹಾ ಗೋಡೆಯನ್ನು ಸುಭದ್ರ ಪಡಿಸಿ, ಸುಸ್ಥಿತಿಯಲ್ಲಿಟ್ಟುಕೊಂಡಿರುವುದು ಸುಮಾರು 5000 ಕಿ.ಮೀ. ಎನ್ನಲಾಗುತ್ತದೆ; ಆದರೆ, ಈ ಬಗ್ಗೆ ನಿಖರವಾದ ಮಾಹಿತಿಯಿಲ್ಲ.
ಉತ್ತರದ ನೆರೆರಾಷ್ಟ್ರಗಳೊಡನೆ ನೈಸರ್ಗಿಕ ಗಡಿಯಿಲ್ಲದಿರುವದರಿಂದ, ಆಕ್ರಮಣಗಳಿಂದ ರಕ್ಷಣೆಗೂ ಮತ್ತು ತೆರಿಗೆ, ಸುಂಕಗಳ ವಸೂಲಿಗೆಂದೂ, ಈ ಮಹಾ ಗೋಡೆಯನ್ನು ಕಟ್ಟುವ ಯೋಜನೆ ಕ್ರಿ.ಪೂ. 7ನೇ ಶತಮಾನದಲ್ಲಿ ಶುರುವಾಗಿ ಸುಮಾರು ಕ್ರಿ.ಶ. 16ನೇ ಶತಮಾನದವರೆಗೆ, ಅನೇಕ ರಾಜವಂಶಗಳ ಆಡಳಿತದ ಅವಧಿಯಲ್ಲಿ ಸಂಪೂರ್ಣವಾಗಿತೆನ್ನಲಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಪ್ರಾಚೀನ ರೇಶ್ಮೆ ಮಾರ್ಗವನ್ನು ಪ್ರತಿಬಿಂಬಿಸುವಂತಿದೆ.
ಹಾಂ! ನೆನಪಿಗೆ ಬಂತು. ಇದೇ ಪ್ರಾಚೀನಾ ರೇಶ್ಮೆ ಮಾರ್ಗವನ್ನು ಪುನರುತ್ಥಾನಗೊಳಿಸುವ ಪ್ರಯತ್ನದ ಭಾಗವಾಗಿ ಕೋಲ್ಕತ್ತ ಮತ್ತು ಚೀನಾದ ಪೂರ್ವದ ಗಡಿಯಲ್ಲಿರುವ ಕುನ್ಮಿಂಗ್ ನಡುವೆ, ಬಾಂಗ್ಲಾದೇಶ ಮತ್ತು ಬರ್ಮ ಮೂಲಕ ಹೈ ಸ್ಪೀಡ್ ರೈಲು ಸಂಪರ್ಕದ ಯೋಜನೆ ಸಾಕಾರವಾದರೆ ನಾಲ್ಕೂ ದೇಶಗಳ ಪ್ರವಾಸೋಧ್ಯಮದ ಅಭಿವೃದ್ಧಿಗೊಂದು ಸಕಾರಾತ್ಮಕ ಪ್ರಚೋದನೆಯಾಗಬಲ್ಲದು.ಈ ಮಹಾ ಗೋಡೆಯು ಮಾನವನ ಅಸಾಧಾರಣ ಕಲ್ಪನೆಯ ಕನಸನ್ನು ನನಸನ್ನಾಗಿಸಲು ಅವಶ್ಯಕವಾದ ದೃಡಸಂಕಲ್ಪ ಮತ್ತು ವಾಸ್ತುಶಿಲ್ಪದ ಚಾತುರ್ಯದ ಅದ್ಭುತ ದೃಷ್ಟಾಂತವೆಂದರೆ ಉತ್ಪ್ರೇಕ್ಷೆಯಲ್ಲ! - ಟಿಯನನ್ಮೆನ್ ಚೌಕ: ಜಗತ್ತಿನ ಬೃಹತ್ ಚೌಕಗಳಲ್ಲಿ ಮೂರನೇ ಸ್ಥಾನವೆಂಬ ಖ್ಯಾತಿ(?); ಆದರೆ, ಜೂನ್ 4, 1989ರಂದು ಪ್ರಜಾಪ್ರಭುತ್ವದ ಪರವಾಗಿ ನಡೆಯುತ್ತಿದ್ದ ಕ್ರಾಂತಿಯನ್ನು, ಸುಮಾರು 30,000 ಸೇನೆಯ ಬಲದೊಂದಿಗೆ ಹತ್ತಿಕ್ಕಿದ ಕರಾಳ ನೆನಪುಗಳನ್ನು ಮರುಕಳಿಸುವ ಸ್ಮಾರಕ ಸ್ಥಳವೆಂದರೆ ತಪ್ಪಾಗಲಾರದು. ಅಂದು ಶಾಂತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದ ಸಾವಿರಾರು ಜನರನ್ನು ಸೇನೆಯ ಗುಂಡೇಟಿನಿಂದ ಕಗ್ಗೊಲೆ ಮಾಡಲಾಯಿತು. ಅಭಿವ್ಯಕ್ತಿ ಸ್ವಾತಂತ್ರವಿಲ್ಲದ ಚೀನಾದಲ್ಲಿ ಇಂದಿಗೂ ಈ ವಿಷಯದ ಬಗ್ಗೆ ಮಾತನಾಡುವ ಹಾಗಿಲ್ಲ; ಹಾಗಾಗಿ, ಚೆಂಗ್ ಈ ವಿಷಯವನ್ನೇ ಪ್ರಸ್ತಾಪಿಸಲಿಲ್ಲ!ನನಗಂತೂ, ಭಾರತದಲ್ಲಿ 1975ರಲ್ಲಿ ದಿ. ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ನಡೆದ ಕ್ರಾಂತಿ, ನಂತರದ ತುರ್ತುಪರಿಸ್ಥಿತಿಯ ದಿನಗಳು ಮತ್ತು ಎರಡೂ ಕ್ರಾಂತಿಗಳಲ್ಲಿನ ಒಂದಷ್ಟು ಸಾಮ್ಯತೆಗಳನ್ನು ನೆನಪಿಸಿದ ಸ್ಥಳ.
- ನಿಷೇಧಿತ ನಗರ: ಟಿಯನನ್ಮೆನ್ ಚೌಕಕ್ಕೆ ಹೊಂದಿಕೊಂಡಂತಿರುವ ಪುರಾತನ ಪ್ರದೇಶ; ಹೆಸರಿಗೆ ನಿಷೇಧಿತ ನಗರ [ಫೋರ್ಬಿಡನ್ ಸಿಟಿ]; ಆದರೆ, ಇದನ್ನು ವೀಕ್ಷಿಸದೆ ಯಾವ ಪ್ರವಾಸಿಗರೂ ಬರುವುದಿಲ್ಲ! ಚೀನಾದ ರಾಜಮನೆತನದ ವಸತಿಗೂ, ಲಾಸ-ವಿಲಾಸಕ್ಕೂ, ಆಡಳಿತಕ್ಕೂ ತಕ್ಕಂತೆ ಕಟ್ಟಿದ ವಿಶಾಲವಾದ ಪುಟ್ಟದೊಂದು ನಗರ.
- ಸಮ್ಮರ್ ಪ್ಯಾಲೇಸ್: ಸುಮಾರು ಒಂಬತ್ತು ಶತಮಾನಗಳ ಹಿಂದಿನ ಸಮ್ಮರ್ ಪ್ಯಾಲೇಸ್ ಅವರಣದಲ್ಲಿರುವ ಬೃಹತ್ ಸರೋವರ, ಉದ್ಯಾನವನಗಳು ಪ್ರವಾಸಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಏಕೆಂದರೆ 700 ಎಕರೆಯಷ್ಟು ವಿಸ್ತೀರ್ಣದ ಪ್ಯಾಲೇಸ್ ನಗರದ ಕೇಂದ್ರ ಭಾಗದಲ್ಲಿದೆ. ಜಗತ್ತಿನ ಅತಿ ಹೆಚ್ಚು ವಾಯುಮಾಲಿನ್ಯದ ನಗರವೆಂಬ ಕುಖ್ಯಾತಿಯಿರುವ ಬೀಜಿಂಗ್ಗೆ ಇದೊಂದು ಚೇತೋಹಾರಿ ವಾತಾವರಣದ ವರದಾನ; ಬೆಂಗಳೂರಿನ 450 ಎಕರೆಯ ಪ್ಯಾಲೇಸ್ ಪ್ರದೇಶದಂತೆ. ಹಾಗಾಗಿ, ಸಮ್ಮರ್ ಪ್ಯಾಲೇಸ್ ಬೀಜಿಂಗ್ನ ಪ್ರಮುಖ ಆಕರ್ಷಣೆ.
- ಗೋಲ್ಡನ್ ಮಾಸ್ಕ್ ಶೋ: ದೇಶದ ಇತಿಹಾಸವನ್ನು ವೈಭವೀಕರಿಸಿ ಸಂಗೀತ, ನೃತ್ಯ ನಾಟಕಗಳಿಂದ ವರ್ಣಿಸುವ, ಅತ್ಯಂತ ಸೃಜನಶೀಲತೆಯಿಂದ ನಿರ್ಮಿಸಿರುವ ಈ ಶೋ ಬೀಜಿಂಗ್ ಪ್ರವಾಸಿಗರಿಗೆ ಕಡ್ಡಾಯವೆಂದೇ ಹೇಳಬೇಕು! ಪೌರಾಣಿಕ ವಸ್ತುಸ್ಥಿತಿಯಲ್ಲಿನ ಪೀತಿ, ಪ್ರಣಯ, ಯುದ್ಧ, ಕಲಹ, ರಾಜವಂಶಗಳ ಜೀವನ ಶೈಲಿಗಳ ಮನಕಲಕುವ ಚಿತ್ರಕತೆ ಮತ್ತು ನಟನೆ, ಮೂರು ಹಂತದ ಕ್ರಿಯಾತ್ಮಕ ವೇದಿಕೆ, ಮೈಮನವನ್ನು ಉದ್ರೇಕಿಸುವ ಜಿಮ್ನ್ಯಾಸ್ಟಿಕ್ಸ್, ಅದಕ್ಕೊಪ್ಪುವ ಸಂಗೀತದೊಂದಿಗೆ ದೇಶ ವಿದೇಶದ ಸುಮಾರು 200 ಕಲಾವಿದರು ಪ್ರದರ್ಶಿಸುತ್ತಾರೆ. ನಾನಂತೂ ಇಂತಹ ಬೃಹತ್ ಕಲಾತ್ಮಕ ಕೃತಿಯನ್ನು ಇನ್ನೆಲ್ಲೂ ನೋಡಿರಲಿಲ್ಲ.
ಬೀಜಿಂಗಿನ ಶೌಚಾಲಯಗಳು
ಇಲ್ಲಿನ ಸಾರ್ವಕನಿಕ ಶೌಚಾಲಯಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯಾದರೂ, ಇತ್ತೀಚಿನ ವರ್ಷಗಳ ತನಕ ಈ ನಿಟ್ಟಿನಲ್ಲಿ ಗಮನಾರ್ಹ ಅಭಿವೃದ್ಧಿ ಆಗಿರಲಿಲ್ಲ. ಹಾಗಾಗಿ, 2008ರಲ್ಲಿ ನಡೆದ ಒಲಂಪಿಕ್ಸ್ ಸಮಯಕ್ಕೆ ಸಾವಿರಾರು ಶೌಚಾಲಯಗಳನ್ನು ನಿರ್ಮಿಸಲಾಯಿತು. ಅಂಕಿಅಂಶಗಳ ಪ್ರಕಾರ, ಎರಡು ಕೋಟಿ ಜನಸಂಖ್ಯೆಯ ಈ ನಗರದಲ್ಲಿ 6000ಕ್ಕೂ ಹೆಚ್ಚು ಶೌಚಾಲಯಗಳಿವೆ; ಹಾಗೂ ಪ್ರತಿ ವೃತ್ತದಲ್ಲೂ ಸಮೀಪದಲ್ಲಿರುವ ಶೌಚಾಲಯಗಳ ಸಂಕೇತಗಳಿವೆ; ವಿಷಾದವೆಂದರೆ, ಒಂದು ಕೋಟಿ ಜನಸಂಖ್ಯೆಯ ಬೆಂಗಳೂರಿನಲ್ಲಿರುವುದು ಕೇವಲ 504.
ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿದ್ದರೆ ಸಾಕು. ಆದರೆ, ಜಗತ್ತಿಗೆ ತೋರುಗಾರಿಕೆಯ ಹೆಗ್ಗುರುತುಗಳನ್ನು ಪ್ರದರ್ಶಿಸಲು ಕಾತುರದಿಂದಿರುವ ಚೀನಾ, ಬೀಜಿಂಗ್ನಲ್ಲಿ ಪಂಚತಾರ ಶೌಚಾಲಯಗಳನ್ನು ನಿರ್ಮಿಸಿದೆ. ಇಂತಹದೊಂದು ಶೌಚಾಲಯದಲ್ಲಿ ಎಟಿಎಂ, ವೆಂಡಿಂಗ್ ಮೆಷಿನ್, ವೈಫೈ, ಪರ್ಸನಲ್ ಟಿವಿ, ಸಂಗೀತ, ಕಾರ್ ಬ್ಯಾಟರಿ ಚಾರ್ಚಿಂಗ್ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇವೆಲ್ಲ ನಿಜಕ್ಕೂ ಬೇಕೆ? ಪರಿಸರ ನೈರ್ಮಲ್ಯವನ್ನು ಕಾಪಾಡಲು ಈ ಅದ್ದೂರಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆಯೆನ್ನುತ್ತಾರೆ.
ದೈನಂದಿನ ಜನಜೀವನ
ಒಂದು ಕಾಲಘಟ್ಟದಲ್ಲಿ ಚೀನಾ ಜನಸಂಖ್ಯೆ ಜಗತ್ತಿನ 21%ರಷ್ಟಿದ್ದು, ದೇಶದ ಅಭಿವೃದ್ಧಿಗೆ ಅಡ್ಡಿಯಾಗಿತ್ತು. ಹಾಗಾಗಿ, ಸುಮಾರು ಮೂರು ದಶಕಗಳ ಹಿಂದೆ ದೇಶವನ್ನಾಳುವ ಕಮ್ಯೂನಿಸ್ಟ್ ಪಕ್ಷದ ‘ಒಂದೇ ಮಗು’ವೆನ್ನುವ ಕುಟುಂಬ ಯೋಜನಾ ನೀತಿಯನ್ನು ಜಾರಿಗೊಳ್ಳಿಸಲಾಗಿತ್ತು. ಇತ್ತೀಚೆಗಷ್ಟೇ ಇದನ್ನು ಸಡಿಲಗೊಳಿಸಿ ‘ಎರಡು ಮಕ್ಕಳ’ ಮಿತಿಯನ್ನು ಜಾರಿಗೊಳಿಸಿದ್ದರ ಖುಶಿಯನ್ನು ಚೆಂಗ್ ಹಂಚಿಕೊಂಡಳು. ಚೀನೀಯರ ಸ್ವಾತಂತ್ರಕ್ಕೆ ಮತ್ತು ಮಾನವ ಹಕ್ಕುಗಳಿಗೆ ಈ ಹೊಸ ನೀತಿಯಲ್ಲಿನ ಕಡಿವಾಣದ ಬಗ್ಗೆ ವ್ಯಾಪಕವಾಗಿ ಟೀಕೆಗಳಿದ್ದರೂ, ಸರ್ಕಾರದ ನೀತಿ, ನಿಯಮಗಳ ಬಗ್ಗೆ ಮಾತನಾಡಲು ಚೆಂಗ್ ಸಿದ್ದವಿರಲಿಲ್ಲ. ತಮ್ಮ ರಾಷ್ಟ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಬೇರೊಂದು ದೃಷ್ಟಿಕೋನವಿದ್ದು, ಸರ್ಕಾರವನ್ನು ಯಾರೂ ಸಾರ್ವಜನಿಕವಾಗಿ ಖಂಡಿಸುವಂತಿಲ್ಲವೆಂದು ಹೇಳಿದಳು. ಆದ್ದರಿಂದ, ದೇಶವನ್ನೂ, ತಮ್ಮ ಜನಜೀವನವನ್ನೂ ಆಗಿಂದಾಗ್ಗೆ ಹೊಗಳುತ್ತಿದ್ದ ಚೆಂಗ್ಳ ಮಾತುಗಳು, ಇವಳು ಕಮ್ಯೂನಿಸಮ್ನ ಹೊಗಳುಭಟ್ಟಳೋ ಎಂಬ ಅನುಮಾನವನ್ನೂ ಮೂಡಿಸುತ್ತಿತ್ತು.
ಚೀನಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರವಿಲ್ಲದಿದ್ದರೂ, ಕೌಟುಂಬಿಕ ವಿಚಾರಗಳಲ್ಲಿ ಭಾರತದೊಡನೆ ಸಾಮ್ಯತೆಗಳಿವೆ. ಮೂರು ತಲೆಮಾರಿನರು ಒಂದೇ ಸೂರಿನಲ್ಲಿರುವುದು ಸರ್ವೇಸಾಮಾನ್ಯ. ಮದುವೆಯ ವಿಚಾರದಲ್ಲಿ ತಂದೆ ತಾಯಿಯರ, ಹಿರಿಯರ ಅಭಿಪ್ರಾಯ ಮುಖ್ಯ. ಅದೇ ರೀತಿ, ಹಿರಿಯರು ಮೊಮ್ಮಕ್ಕಳನ್ನು ನೋಡಿಕೊಳ್ಳುವುದು ನಮ್ಮಲ್ಲಿರುವಂತೆ. ಇಂದಿನ ಜಾಗತೀಕರಣದ ಯುಗದಲ್ಲಿ, ಯುವಪೀಳಿಗೆಯವರು ಉದ್ಯೋಗಕ್ಕಾಗಿ ವಲಸೆ ಹೋಗುವುದು, ಮದುವೆಗೆ ಮುಂಚೆ ಆರ್ಥಿಕ ಭದ್ರತೆಯ ಬಗ್ಗೆ ಗಮನ ಹರಿಸುವುದು ಸಹಾ ನಮ್ಮ ಯುವಪೀಳಿಗೆಯವರಂತೆಯೇ.
ಬೀಜಿಂಗ್ನಲ್ಲಿ ನಮ್ಮಲ್ಲಿನ ಮಹಾನಗರಗಳಿಗಿಂತ ದಟ್ಟವಾದ ಟ್ರಾಫಿಕ್ ಒತ್ತಡವುಂಟು. 2010ರಲ್ಲಿ ಇಲ್ಲಿ ಉಂಟಾದ ಟ್ರಾಫಿಕ್ ಜಾಮ್ 62ಮೈಲಿ ಹಬ್ಬಿ, ಅದನ್ನು ನಿವಾರಿಸಲು ಸುಮಾರು 12 ದಿನ ಬೇಕಾಯಿತಂತೆ! ಈ ಸಮಸ್ಯೆಯಿಂದ ರೋಸಿಹೋಗಿದ್ದ ಸರ್ಕಾರ, ಹೊಸದೊಂದು ಪ್ರಯೋಗವನ್ನು ಮಾಡುತ್ತಿದೆ. ರಸ್ತೆಯಲ್ಲಿ ಸಂಚರಿಸುವ ಕಾರು, ಇತ್ಯಾದಿ ಲಘು ಮೋಟಾರ್ ಗಾಡಿಗಳ ಮೇಲೆ ಸಂಚರಿಸುವ ಬಸ್ಸನ್ನು ಪ್ರಾಯೋಗಿಕವಾಗಿ ಬಿಡಲಾಗಿದೆ. ಸುಮಾರು 300 ಮಂದಿಯನ್ನು ಕೊಂಡೊಯ್ಯಬಹುದಾದ ಈ ಸಂಚಾರಿ ವ್ಯವಸ್ಥೆಯ (ಖಿಇಃ – ಖಿಡಿಚಿಟಿsiಣ ಇಟevಚಿಣeಜ ಃus) ಪರಿಕಲ್ಪನೆಯಂತೂ ಶ್ಲಾಘನೀಯ.
ಆಹಾರ ಪದ್ದತಿ
ಚೈನೀಸ್ ಆಡುಗೆಗಳು ಜಗತ್ತಿನೆಲ್ಲೆಡೆ ಜನಪ್ರಿಯ. ಇಲ್ಲಿ ಅಕ್ಕಿ ಅಥವಾ ನೂಡಲ್ಸ್ ಮುಖ್ಯ ಆಹಾರ; ಸೇವಿಸಲು ಚಾಪ್ಸ್ಟಿಕ್ಸ್ ಬಳಕೆ. ಜೊತೆಗೆ, ತರಕಾರಿ, ಮೀನು ಮತ್ತು ಮಾಂಸ ಸಾಮಾನ್ಯ. ಸೂಪ್ನಂತಹ ದ್ರವರೂಪದ ಆಹಾರದ ಬಳಕೆ ಅತಿ ಹೆಚ್ಚು.
ಆಹಾರ ಪದ್ದತಿಯೂ ನಮಗಿಂತ ಭಿನ್ನ. ಮುಂಜಾನೆಯ ಉಪಹಾರ ಬೇಗನೆ; ಹಾಗೆಯೇ ರಾತ್ರಿಯ ಊಟ. ಉದ್ಯೋಗದಿಂದ ಬಂದ ಕೂಡಲೇ ಊಟ ಮುಗಿಸಿ ಪಾರ್ಕಿಗೆ ಅಥವಾ ವಿಹಾರಕ್ಕೆ ಹೋಗುವುದೊಂದು ವಾಡಿಕೆ.
ಇಲ್ಲಿ ಸಸ್ಯಾಹಾರಿಗಳಂತೂ ಅತಿ ವಿರಳ! ಜನಸಂಖ್ಯೆಯ 4%ರಷ್ಟು ಮಾತ್ರ; ಭಾರತದಲ್ಲಿ ಇದರ ತದ್ವಿರುದ್ಧ 31%ರಷ್ಟು. ಹಾಗಾಗಿ, ಚೀನಾ ದೇಶಕ್ಕೆ ಪ್ರವಾಸಕ್ಕೆ ಬರುವ ಸಸ್ಯಾಹಾರಿಗಳು ಗುಂಪಿನಲ್ಲಿ [ಕಂಡಕ್ಟೆಡ್ ಟೂರ್] ಪ್ರವಾಸಕ್ಕೆ ಬಂದರೆ ಇಲ್ಲಿರುವ ಅನೇಕ ಭಾರತೀಯ ರೆಸ್ಟೋರೆಂಟ್ಗಳನ್ನು ತಲಪುವುದು ಸುಲಭ.
ಒಂದೇ ಗುರಿ; ವಿಭಿನ್ನ ಹಾದಿ
ಅಭಿವೃದ್ಧಿಯ ಪಥದಲ್ಲಿ ವಿಭಿನ್ನ ಹಾದಿಯನ್ನು ಆಯ್ಕೆ ಮಾಡಿಕೊಂಡರೂ, ನಮ್ಮೆರಡೂ ದೇಶಗಳ ಗುರಿ ಒಂದೇ. ಇತ್ತೀಚಿನ ವರದಿಯೊಂದರ ಪ್ರಕಾರ, ಬಡತನ ನಿರ್ಮೂಲನದ ಗುರಿಯಲ್ಲಿ ಚೀನಾ ನಮಗಿಂತ ಹೆಚ್ಚಿನ ವೇಗವಾಗಿ ಪ್ರಗತಿಯನ್ನು ಸಾಧಿಸಿದೆ. ಈ ಗುರಿಯ ಸಾಧನೆಯಲ್ಲಿ ಚೀನಾದ ಪ್ರಗತಿ ನಮ್ಮನ್ನು ಮೂಕವಿಸ್ಮಯರನ್ನಾಗಿ ಮಾಡುವುದಲ್ಲದೆ, ಭಾರತದಲ್ಲಿನ ಪ್ರಗತಿ ಮತ್ತು ಸಮಸ್ಯೆಗಳ ಆತ್ಮಾವಲೋಕಕ್ಕೆ ಪ್ರೇರಣೆಯಾಗುತ್ತದೆ. ಬೀಜಿಂಗ್ ಪ್ರವಾಸದ ಪ್ರಾಮುಖ್ಯತೆ ಕೇವಲ ಸೋಜಿಗಗಳು, ಆಕರ್ಷಣೆಗಳು, ಮನೋರಂಜನೆ ಮತ್ತು ಖರೀದಿಗಳಿಗಷ್ಟೇ ಅಲ್ಲ; ಜಾಗತಿಕ ಜಗತ್ತಿನ ಪ್ರಮುಖ ಶಕ್ತಿಯಾಗಿರುವ ಚೀನಾ ಜೊತೆ ಸೌಹಾರ್ಧ ಮತ್ತು ಫಲಪ್ರದ ಸಂಬಧವನ್ನು ಬೆಳೆಸಿಕೊಳ್ಳುವ ಅವಶ್ಯಕತೆಯಿರುವ ಈ ಸಂದರ್ಭದಲ್ಲಿ, ನಮ್ಮ ನೆರೆರಾಷ್ಟ್ರದ ಸಮಾಜ, ಸಂಸ್ಕೃತಿಗಳ ಬಗ್ಗೆ, ವಿಶೇಷವಾಗಿ ಇಲ್ಲಿನ ಪಾರದರ್ಶಕತೆಯ ಬಗ್ಗೆ ನಮಗಿರುವ ನಂಬಿಕೆ-ಅಪನಂಬಿಕೆಗಳ ಸತ್ಯಾಸತ್ಯತೆಯ ಅನ್ವೇಷಣೆಗೂ ಕೂಡ ಈ ಪ್ರವಾಸ ದಾರಿ ಮಾಡಿಕೊಡುತ್ತದೆ.