ಇದೊಂದು ಸಂಪದ್ಭರಿತ ಶ್ರೀಮಂತ ನಗರ; ಆದರೆ ಇಲ್ಲಿನ ರಾಜವಾಹನ ಸೈಕಲ್
ಇಲ್ಲಿನ ಮುಖ್ಯ ವ್ಯಾಪಾರ ಕೇಂದ್ರವಾದ ಸ್ಟ್ರೋಗೆಟ್ನಲ್ಲಿ 1962ರಿಂದಲೇ ಮೋಟಾರು ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ
ದೆಹಲಿಯ ಮಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ವತಿಯಿಂದ ನಾಲ್ಕು ದಿನಗಳ ಮಟ್ಟಿಗೆ ಡೆನ್ಮಾರ್ಕ್ ಮತ್ತು ನಾರ್ವೆಗೆ ಪ್ರವಾಸ ಮಾಡಲು ಆಹ್ವಾನ ಬಂದದ್ದು ಅನಿರೀಕ್ಷಿತವಾದದ್ದಾದರೂ, ವೀಸಾ ಪಡೆಯಲು ಸಾಕಷ್ಟು ಸರ್ಕಸ್ ಮಾಡಬೇಕಾಯಿತು.
ಈ ಪ್ರವಾಸದಲ್ಲಿ ನನ್ನ ಸ್ನೇಹಿತ ನವೀನ್ ಶರ್ಮ ಕೂಡಾ ಪ್ರತಿನಿಧಿಯಾಗಿದ್ದರು. ನಾವು ದುಬೈ, ಪ್ಯಾರೀಸ್ ಮುಖಾಂತರ ಕೊಪೆಂಹೆಗೆನ್ಗೆ ಪಯಣಿಸಬೇಕಿತ್ತು. ಪ್ಯಾರೀಸ್ ವಿಮಾನ ನಿಲ್ದಾಣದ ಬಗ್ಗೆ ಗಾಭರಿಯಾಗುವಂತೆಯೇ ನವೀನ್ ವಿವರಿಸಿದ. “ನಾವು ಕೊಪೆಂಹೆಗೆನ್ಗೆ ಹೋಗುವ ಟರ್ಮಿನಲ್ ಬೇರೆ ಮತ್ತು ದೂರ. ಆದ್ದರಿಂದ ತರಾತುರಿಯಿಂದ ನಡೆಯದಿದ್ದರೆ, ವಿಮಾನ ತಪ್ಪುವ ಸಾಧ್ಯತೆ0iÉುೀ ಹೆಚ್ಚು” ಎಂದು ಎಚ್ಚರಿಸಿದ್ದ.
ಅವನ ಎಚ್ಚರ ಮುಂಜಾನೆ ನಿಜವಾಯಿತು. ಪ್ಯಾರೀಸ್ನಲ್ಲಿ ಇಮಿಗ್ರೇಷನ್ ಮುಗಿಸಿ ಹೊರಬಂದಾಗ ಕೊಪೆಂಹೆಗೆನ್ ವಿಮಾನ ಹೊರಡಲು ಕೇವಲ 45 ನಿಮಿಷಗಳಿದ್ದವು. ಜೋರಾಗಿ ಓಡುವಂತೆಯೇ ನಡೆದು, ದೂರದ ಇನ್ನೊಂದು ಟರ್ಮಿನಲ್ ತಲುಪಿ ವಿಮಾನದಲ್ಲಿ ಕುಳಿತಾಗ ಮನಸ್ಸಿಗೆ ನಿರಾಳ.
ಮುಂಜಾನೆ ಒಂಬತ್ತಕ್ಕೆ ವಿಮಾನದಿಂದ ಕೊಪೆಂಹೆಗೆನ್ ಪರಿಸರದ ಅದ್ಭುತವಾದ ದೃಶ್ಯ: ಹಸಿರ ಹಾಸಿಗೆಯ ನಡುವೆ ಒಂದಸ್ತಿನ ಕೆಂಪು ಹೆಂಚಿನ ತೋಟದ ಮನೆಗಳು; ಪಕ್ಕದಲ್ಲಿಯೇ ಹರಿಯುತ್ತಿದ್ದ ನಿರ್ಮಲವಾದ ತೊರೆಗಳು, ಅಲ್ಲಲ್ಲಿ ಜೋಡಿಸಿಟ್ಟಿದ್ದಂತಿದ್ದ ಬಿಳಿಯ ವಿಂಡ್ಮಿಲ್ಗಳಿಂದ ಕೂಡಿ, ಮೊದಲ ನೋಟಕ್ಕೆ ಇದೊಂದು ವಿಸ್ಮಯಕಾರೀ ಮಾಯಾಲೋಕದಂತಿತ್ತು.
ಅಲ್ಲಿನ ಪ್ರತಿಷ್ಟಿತ ಹೋಟೆಲ್ ರಾಡಿಸನ್ನಲ್ಲಿ ನಮಗೆ ಉಳಿಯುವ ವ್ಯವಸ್ಥೆಯಾಗಿತ್ತು. ಶಾಕಾಹಾರಿ ಊಟದ ನಂತರ ನಾನೂ ಮತ್ತು ನವೀನ್ ತಿರುಗಾಡಲು ಹೊರಟೆವು.
ಕೊಪೆಂಹೆಗೆನ್ ಡೆನ್ಮಾರ್ಕಿನ ರಾಜಧಾನಿ ಮತ್ತು ಉತ್ತರ ಯೂರೋಪಿನ ಅತ್ಯಂತ ಕ್ರಿಯಾತ್ಮಕ ಮತ್ತು ಪ್ರಗತಿಶೀಲ ನಗರ. ಪ್ರಾಚೀನ ಕಾಲದಿಂದಲೂ ವ್ಯಾಪಾರಕ್ಕೆ ಹೆಸರುವಾಸಿಯಾಗಿರುವ ಕೊಪೆಂಹೆಗೆನ್ನ ಹೆಸರಿನ ಅರ್ಥ-ವರ್ತಕರ ಬಂದರು. ಇಲ್ಲಿನ ರಾಜವಂಶ ಪ್ರಪಂಚದಲ್ಲೇ ಪುರಾತನವಾದದ್ದು ಎಂದು ಹೆಸರುವಾಸಿಯಾದರೂ, “ಈ ನಗರದಲ್ಲೇನೋ ಆಧುನಿಕತೆ ಇದೆ” ಎಂಬ ಈಗ ಚಾಲ್ತಿಯಲ್ಲಿರುವ ಮಾತು, ಶೇಕ್ಸ್ಪಿಯರ್ನ ಪ್ರಸಿದ್ಧ ಉಲ್ಲೇಖನವನ್ನು ನೆನಪಿಗೆ ತರುವಂತಿದ್ದು, ಈ ನಗರದಲ್ಲಿನ ಉನ್ಮಾದಕಾರೀ ಮತ್ತು ಹರೆಯದ ಚೈತನ್ಯದ ಪ್ರತಿಬಿಂಬದಂತಿದೆ. ಈ ಚೈತನ್ಯದ ಸಂಕೇತವೆಂಬಂತೆ ಎಲ್ಲೆಲ್ಲೂ ಸೈಕಲ್ ಸವಾರರು.
ಸೈಕಲ್:ಇಲ್ಲಿನ ರಾಜವಾಹನ
ಪರಿಸರ ಪ್ರೇಮಿ ಕೊಪೆಂಹೆಗೆನ್ನ ರಾಜವಾಹನ ಸೈಕಲ್ ಎಂದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗಬಹುದು. ಇಂದಿನ ಆಧುನಿಕ ಯುಗದಲ್ಲಿ, ಅದರಲ್ಲೂ ಪ್ರಗತಿಶೀಲ ನಗರವಾದ ಕೊಪೆಂಹೆಗೆನ್ನಲ್ಲೇಕೆ ಸೈಕಲ್ಗೆ ಇಷ್ಟೊಂದು ಮರ್ಯಾದೆ ಎನಿಸುವುದು ಸಹಜ. ತನ್ನ ಪರಿಸರವನ್ನು ಸಂರಕ್ಷಿಸಿ, ಜಗತ್ತಿಗೇ ಮಾದರಿಯಾಗಿರುವ ಕೊಪೆಂಹೆಗೆನ್, ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ಅನೇಕ ಹೆಜ್ಜೆಗಳಲ್ಲಿ ಸೈಕಲ್ ಬಳಕೆಯೂ ಒಂದು. ಹಾಗಾಗಿಯೇ, ನಮಗೆ ಎಲ್ಲೆಲ್ಲೂ ಸೈಕಲ್ ಸವಾರರು ಕಾಣುತ್ತಿದ್ದು, ಉತ್ಸಾಹದಿಂದ ಸೈಕಲ್ಗಳಿಗಾಗಿಯೇ ಮೀಸಲಾಗಿದ್ದ ರಸ್ತೆಯಲ್ಲಿ ಚಲಿಸುತ್ತಿದ್ದರು. 11 ಲಕ್ಷ ಜನಸಂಖ್ಯೆಂiÀi ಶ್ರೀಮಂತ ನಗರ ಕೊಪೆಂಹೆಗೆನ್ನಲ್ಲಿ 33% ನಾಗರೀಕರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಬಳಸುವುದು ಸೈಕಲ್!
ಇದೊಂದು ವಿಚಿತ್ರ ಸತ್ಯ; ಈ ಸುಂದರ ಸುಸಜ್ಜಿತ ನಗರದಲ್ಲಿ ಪ್ರಯಾಣ ಉಚಿತ! ಪ್ರವಾಸಿಗರಿಗೆ ಇಲ್ಲಿ ಉಚಿತ ಸೈಕಲ್ಗಳ ವ್ಯವಸ್ಥೆಯಿದೆ. ನೂರಕ್ಕೂ ಹೆಚ್ಚಿನ ನಿಲ್ದಾಣಗಳಲ್ಲಿರುವ ಸೈಕಲ್ಗಳ ಲಾಕರಿಗೆ 20 ಡಾನಿಶ್ ಕ್ರೋನರ್ [170/- ರೂಪಾಯಿಗಳು] ಹಾಕಿ, ಸೈಕಲ್ ಉಪಯೋಗದ ನಂತರ, ಡಿಪಾಸಿಟ್ ವಾಪಸ್ ಪಡೆಯಬಹುದು. ಸೈಕಲ್ ನಿಮಗೆ ಹಿಡಿಸಲಿಲ್ಲವೋ ಚಿಂತೆಯಿಲ್ಲ; ನಿಮಗಾಗಿ ಬಸ್, ಮೆಟ್ರೊ, ಟ್ರೈನ್, ಟಾಕ್ಸಿ ವ್ಯವಸ್ಥೆಯಿದೆ.
ಕೊಪೆಂಹೆಗೆನ್ ಕ್ಲೈಮೇಟ್ ಕೌಂಸಿಲ್
ಪರಿಸರಕ್ಕೆ ಸಂಬಂಧಪಟ್ಟಂತ ಕಾರ್ಯತಂತ್ರಗಳನ್ನು ರೂಪಿಸಲು ಸರ್ಕಾರದ ಜೊತೆಗೆ ಕೊಪೆಂಹೆಗೆನ್ ಕ್ಲೈಮೇಟ್ ಕೌಂಸಿಲ್ ಸೇರಿದಂತೆ ಅನೇಕ ಸಂಸ್ಥೆಗಳ ಸಹಯೋಗವಿದೆ. ಇಲ್ಲಿನ ಪರಿಸರದಲ್ಲಿ ಕಾರ್ಬನ್ ಪ್ರಮಾಣವನ್ನು 2025ಕ್ಕೆ ಕನಿಷ್ಟ ಪ್ರಮಾಣಕ್ಕೆ ತರಲು ಐವತ್ತು ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳಲ್ಲಿ ಅತಿ ಮುಖ್ಯವಾದ ಯೋಜನೆಗಳೆಂದರೆ: ಹೆಚ್ಚಿನ ವಿಂಡ್ಮಿಲ್ಗಳ ಮತ್ತು ವಿದ್ಯುತ್ಶಕ್ತಿಯ ವಾಹನಗಳ ಬಳಕೆ, ವಾಹನಗಳ ಮಾಲಿನ್ಯದ ನಿಯಂತ್ರಣ ಮತ್ತು ನಾಗರೀಕರು ಬಳಸುವ ಶಕ್ತಿಯ [ಎನರ್ಜಿ] ಉಳಿತಾಯ. ವಿಂಡ್ಮಿಲ್ಗಳ ಬಳಕೆಯಿಂದ ಈಗಾಗಲೇ ದೇಶದ ಶೇಕಡ 20ರಷ್ಟಿನ ವಿದ್ಯುತ್ಶಕ್ತಿಯ ಉತ್ಪಾದನೆಯಾಗುತ್ತಿದೆ. 2010ರವರೆಗೆ ಪರಿಸರ ಸಂಬಂಧಿತ 34 ಯೋಜನೆಗಳು ಕಾರ್ಯಗತವಾಗುತ್ತಿದ್ದು, 2015ಕ್ಕೆ ಶೇಕಡಾ 20ರಷ್ಟಿನ ಕಾರ್ಬನ್ ಕಡಿಮೆಯಾಗುವ ನಿರೀಕ್ಷೆಯಿದೆ.
ವಾಹನ ರಹಿತ: ಸ್ಟ್ರೋಗೆಟ್
ಪರಿಸರ ಪ್ರೇಮಿ ಕೊಪೆಂಹೆಗೆನ್ನ ಮುಖ್ಯ ಆಕರ್ಷಣೆ ಇಲ್ಲಿನ ‘ಸ್ಟ್ರೋಗೆಟ್’-ಬೆಂಗಳೂರಿನ ಎಮ್.ಜಿ. ರಸ್ತೆಯಂತೆ. ಒಂದು ಲಕ್ಷ ಚದರ ಮೀಟರ್ ಸುತ್ತಳತೆಯ ‘ಸ್ಟ್ರೋಗೆಟ್’, ಕೇವಲ ಪಾದಚಾರಿಗಳಿಗೇ ಮೀಸಲಾದ ಬೃಹತ್ ವ್ಯಾಪಾರ ಸ್ಥಳ. ಅಂದರೆ, ಇಲ್ಲಿ ವಾಹನ ಸಂಚಾರ ನಿಷೇಧ! ಇವರ ಮುಂದಾಲೋಚನೆ ಮೆಚ್ಚುವಂತದ್ದು; ಏಕೆಂದರೆ ವಾಹನ ನಿಷೇಧ ಆಚರಣೆಗೆ ಬಂದಿದ್ದು 1962ರಲ್ಲಿ.
ಪ್ರತಿನಿತ್ಯ ಸುಮಾರು 250,000 ಜನರು ‘ಸ್ಟ್ರೋಗೆಟ್’ಯ ಮಳಿಗೆಗಳಿಗೆ ಮತ್ತು ಶಾಪಿಂಗ್ ಮಾಲ್ಗಳಿಗೆ ಭೇಟಿ ನೀಡುತ್ತಾರೆ. ಯೂರೋಪಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾ ವಸ್ತುಗಳೂ, ಅಭರಣಗಳೂ, ವಸ್ತ್ರಗಳೂ ಇಲ್ಲಿ ಹೇರಳವಾಗಿವೆ. ವಾಹನಗಳಿಲ್ಲದೆ, ನಿರಾತಂಕವಾಗಿ, ನಿಶ್ಚಿಂತೆಯಿಂದ ಓಡಾಡಬಹುದಾದ ಇಲ್ಲಿನ ಅನುಭವ, ಅಪರೂಪ. ನಮ್ಮ ಎಮ್.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ, ವಾಹನ ಸಂಚಾರಗಳನ್ನು ನಿಷೇಧಿಸಿ, ನಾವೆಲ್ಲಾ ನಿರಾತಂಕವಾಗಿ ಓಡಾಡುವ ಸಮಯ ನಮ್ಮ ಕಾಲದಲ್ಲೇ ಬರಬಹುದೇ ಎನ್ನುವುದೊಂದು ಯಕ್ಷಪ್ರಶ್ನೆ.
ಭಾವನಾತ್ಮಕ ಸಂಕೇತ:ಲಿಟಲ್ ಮರ್ಮೇಡ್
ಕೊಪೆಂಹೆಗೆನ್ ಮತ್ಸ್ಯಕನ್ಯೆಯ ನಗರವೂ ಹೌದು. ಅದೊಂದು ದುರಂತ ಕಥೆ. ಅಪಘಾತಕ್ಕೀಡಾದ ಹಡಗಿನಲ್ಲಿ ಪಯಣಿಸುತ್ತಿದ್ದ ಯುವರಾಜನನ್ನು ಬದುಕಿಸಲು ಹೋದ ಮತ್ಯ್ಸಕನ್ಯೆ ಕೊನೆಗೆ ಅವನನ್ನೇ ಪ್ರೀತಿಸತೊಡಗಿದಳು. ಆದರೆ ಅವನ ಪ್ರೀತಿಗಾಗಿ ಅವಳು ನೀಡಿದ ಬೆಲೆ ಅಪಾರ. ಭೂಮಿಯ ಮೇಲಿದ್ದ ಯುವರಾಜನನ್ನು ನೀರಿನಲ್ಲಿರುತ್ತಿದ್ದ ಮತ್ಸ್ಯಕನ್ಯೆ ಭೇಟಿ ಮಾಡುವುದಾದರೂ ಹೇಗೆ? ಕೊನೆಗೆ ತನ್ನ ಕಂಠ ಮತ್ತು ಮತ್ಸ್ಯಪುಚ್ಚವನ್ನೇ ಮಾಟಗಾತಿಯೊಬ್ಬಳ ಕಾಲುಗಳಿಗೆ ವಿನಿಮಯ ಮಾಡಿಕೊಂಡು ಸಾಗರವನ್ನು ದಾಟಿ ಭೂಮಿಗೆ ಬಂದಳು. ದೇಹದ ಸ್ವರೂಪವನ್ನೇ ಬದಲಾಯಿಸಿಕೊಂಡ ಮತ್ಸ್ಯಕನ್ಯೆಗೆ ಕಾಲುಗಳು ಖಡ್ಗದಂತೆ ಸ್ಪರ್ಶವಾಗಿ, ಹೆಜ್ಜೆ ಹೆಜ್ಜೆಗೂ ತೀರ್ವವಾದ ನೋವನ್ನು ಅನುಭವಿಸುತ್ತಿದ್ದಳು. ಇಷ್ಟೆಲ್ಲಾ ನೋವನ್ನು ಅನುಭವಿಸಿ, ಮಾಡಿದ ತ್ಯಾಗಕ್ಕೆ ಪ್ರತಿಫಲ ಸಿಗದೆ, ಮತ್ಸ್ಯಕನ್ಯೆಗೆ ಯುವರಾಜ ಕೊನೆಗೂ ಸಿಗಲೇ ಇಲ್ಲ.
1913ರಲ್ಲಿ ಎಡ್ವರ್ಡ್ ಎರಿಕ್ಸನ್ರಿಂದ ಈ ಪ್ರತಿಮೆಯ ನಿರ್ಮಾಣವಾಗಿ, ಇದು ಬಿಯರ್ ತಯಾರಿಸುತ್ತಿದ್ದ ಕಾರ್ಲ್ ಜೇಕಬ್ಸನ್, ಕೊಪೆಂಹೆಗೆನ್ಗೆ ನೀಡಿದ ಉಡುಗೊರೆ. ಸಮುದ್ರ ತೀರದಲ್ಲಿ ಅಪಾರವಾದ ಜಲರಾಶಿಯನ್ನು ನಿಟ್ಟಿಸುತ್ತಾ, ತನ್ನ ಬಾಲ್ಯಾವಸ್ಥೆಯನ್ನು ನೆನೆಯುತ್ತಾ, ತನ್ನ ಪ್ರಿಯತಮನಿಗಾಗಿ ಕಾಯುತ್ತಾ ಕುಳಿತಿರುವ ಈ ಪ್ರತಿಮೆಯಲ್ಲಿ ಮತ್ಸ್ಯಕನ್ಯೆಯ ಎರಡೂ ರೂಪಗಳನ್ನು ಅತ್ಯಂತ ಸೂಕ್ತವಾಗಿ, ಸೂಕ್ಷ್ಮವಾಗಿ ಕೆತ್ತಲಾಗಿದೆ.
ಇಲ್ಲಿನ ಕಡಲ ತೀರದಲ್ಲಿರುವ ಲಿಟಲ್ ಮರ್ಮೇಡ್ನ ಸುಂದರ ಪ್ರತಿಮೆ ಕೊಪೆನ್ಹೆಗೆನ್ಗೊಂದು ಹೆಗ್ಗಳಿಕೆಯೇ ಸರಿ. ಜನಪ್ರಿಯ ಪ್ರವಾಸೀ ತಾಣವಾಗಿರುವ ಲಿಟಲ್ ಮರ್ಮೇಡ್ನ ಪಕ್ಕದಲ್ಲಿ ಭಾವಚಿತ್ರ ತೆಗೆಸಿಕೊಳ್ಳಲು ಕಿರಿಯರಿಂದ ಹಿರಿಯರವರೆಗೂ ನೂಕುನುಗ್ಗಲು. ಲಿಟಲ್ ಮರ್ಮೇಡ್ನ ಖಾಸಗೀ ಚಿತ್ರವನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಇಪ್ಪತ್ತು ನಿಮಿಷಗಳಾಯಿತು. ಇಂದಿಗೂ ಏಕಾಂಗಿಯಾಗಿ, ಏಕಚಿತ್ತದಲ್ಲಿ ಕಾಯುತ್ತಲಿರುವ ಲಿಟಲ್ ಮರ್ಮೇಡ್ನ ಭಂಗಿ, ಅವಿಸ್ಮರಣೀಯ.
ಸುಮಾರು ನೂರು ವರುಷಗಳಿಂದ ಬೇಸತ್ತು ಬಳಲಿದ್ದ ಈ ಮತ್ಸ್ಯಕನ್ಯೆ ಈಗಷ್ಟೇ ಸಂಚರಿಸಲಾರಂಬಿಸಿದ್ದಾಳೆ! ಕಳೆದ ನವೆಂಬರ್ನಲ್ಲಿ ಚೀನಾ ದೇಶದಲ್ಲಿ ನಡೆದ ವಲ್ರ್ಡ್¥sóÉೀರ್ನಲ್ಲಿ ಡಾನಿಶ್ ಪೆವಿಲಿಯನ್ನ ಸಂಕೇತವೆಂಬಂತೆ ಭಾಗವಹಿಸಿದ್ದ ಮತ್ಸ್ಯಕನ್ಯೆ, ಮತ್ತೆ ಮನೆಗೆ ಹಿಂತಿರುಗಿದ್ದಾಳೆ.
ಪಬ್ ಸಿಟಿ: ಕೊಪೆಂಹೆಗೆನ್
ಹಾ! ಹೇಳಲು ಮರೆತೆ. ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿರುವ ‘ಕಾಲ್ರ್ಸ್ಬರ್ಗ್’ ಬಿಯರ್ ಇಲ್ಲೇ ತಯಾರಾಗುತ್ತದೆಯಾದ್ದರಿಂದ, ಇದೂ ಸಹ ಬೆಂಗಳೂರಿನಂತೆ ಪಬ್ ಸಿಟಿ. ಇಲ್ಲಿರುವ ಕಾರ್ಲ್ ಜೇಕಬ್ಸನ್ ನಿರ್ಮಿತ ಸಂಗ್ರಹಾಲಯದಲ್ಲಿ ಬಿಯರ್ ಚರಿತ್ರೆ ಮತ್ತು ತಂತ್ರಜ್ಞಾನವನ್ನು, ಬೆಳಕು ಮತ್ತು ಶಬ್ದದ ಮುಖಾಂತರ ವಿವರಿಸುವ ವ್ಯವಸ್ಥೆಯಿದೆ. ವಿಶ್ವದಲ್ಲೇ ವ್ಯಾಪಕವಾದ, ವಿಶೇಷವಾದ ಬಾಟಲ್ಗಳ ಸಂಗ್ರಹವನ್ನೂ ವೀಕ್ಷಿಸಬಹುದು. ಅಷ್ಟೇ ಅಲ್ಲ; ಬಿಯರ್ ಪ್ರಿಯರಿಗೆ ಇಲ್ಲಿನ ಜೇಕಬ್ಸನ್ ಬ್ರಿವರಿಯಲ್ಲಿ ಉತ್ಪಾದನಾ ಮಾಹಿತಿಯ ಜೊತೆಗೆ ತಾಜಾ ಬಿಯರ್ ಸವಿಯುವ ಅವಕಾಶವುಂಟು.
ಕೊಪೆಂಹೆಗೆನ್ನಲ್ಲಿ ಇನ್ನೊಂದು ವಿಶೇಷವಿದೆ. ಈ ಪಬ್ ಸಿಟಿಯಲ್ಲಿ ಕಾಫಿಗೂ ಅಷ್ಟೇ ಮಹತ್ವವಿದೆ. ಕಾಫಿ ಡೆನ್ಮಾರ್ಕಿನ ರಾಷ್ಟ್ರೀಯ ಪಾನೀಯವಾಗಿದ್ದು, ಸ್ಥಳೀಯ ಸಂಸ್ಕೃತಿಯ ಒಂದು ಪ್ರಮುಖ ಅಂಗ. ಕೊಪೆಂಹೆಗೆನ್ನ 98% ಮನೆಗಳಲ್ಲಿ ಕಾಫಿ ಸದಾ ಲಭ್ಯವಂತೆ!. ಡೆನ್ಮಾರ್ಕಿನ ಆಹಾರ ಪದ್ದತಿ ಶೀತವಲಯಕ್ಕೆ ಹತ್ತಿರವಿರುವ ಇಲ್ಲಿನ ಹವಾಮಾನಕ್ಕೆ ತಕ್ಕಂತಿದೆ. ಡೇನಿಶ್ ಪೇಸ್ಟ್ರಿಯಂತೂ ಪ್ರಪಂಚದಾದ್ಯಂತ ಜನಪ್ರಿಯ. ಇಲ್ಲಿ ಬಿಯರ್, ಕಾಫಿಯ ಜೊತೆಗೆ ನಮ್ಮ ತಿಂಡಿ ಊಟಕ್ಕೇನೂ ತೊಂದರೆಯಾಗದು. ಏಕೆಂದರೆ, ಇಪ್ಪತ್ತಕ್ಕಿಂತಲೂ ಹೆಚ್ಚಿನ ಭಾರತೀಯ ಉಪಾಹಾರಗೃಹಗಳಿವೆ.
ಕೊಪೆಂಹೆಗೆನ್ ಅಪೇರ
ನೋಡಲೇಬೇಕಾದ ಕೊಪೆಂಹೆಗೆನ್ನ ಅಪೇರ ಯೂರೋಪಿನ ಅಪೇರಾಗಳಲ್ಲೇ ವಿನೂತನ. 2005ರಲ್ಲಿ ಉದ್ಘಾಟಣೆಯಾದ ಅಪೇರಾಗೆ ತಗುಲಿದ ವೆಚ್ಚ 2500 ಕೋಟಿ ರೂಪಾಯಿಗಳು. ಇಲ್ಲಿ ಮುಖ್ಯ ವೇದಿಕೆಯ ಜೊತೆಗೆ ಹೊಂದಿಕೊಂಡಂತೆ ಇನ್ನೂ ಐದು ವೇದಿಕೆಗಳಿವೆ. ಪ್ರೇಕ್ಷರಿಗೆ ಶ್ರೇಷ್ಟವಾದ ಅನುಭವಕ್ಕಾಗಿ ಇಲ್ಲಿನ ಪ್ರತಿ 1492 ಆಸನಗಳನ್ನು ವಿಶಿಷ್ಟವಾಗಿ ಸ್ಥಿರಗೊಳಿಸಲಾಗಿದೆ. ಒಂದೇ ಬಾರಿಗೆ 110 ಕಲಾವಿದರ ವಾದ್ಯಗೋಷ್ಠಿ ನಡೆಸಲು ಅನುಕೂಲವಿದ್ದು, ಸಂಗೀತ-ನಾಟ್ಯಕ್ಕೆ ಬೇಕಾದ ಅಸಾಧಾರಣವಾದ ಧ್ವನಿ-ವ್ಯವಸ್ಥೆಯನ್ನೂ ಮಾಡಲಾಗಿದೆ.
ಯೂರೋಪ್ ಚರಿತ್ರೆ, ಸಂಗೀತ, ಸಾಹಿತ್ಯ, ನಾಟಕ, ಕಲೆಗಳ ತೌರೂರು. ಹಾಗಾಗಿಯೇ ಕೊಪೆಂಹೆಗೆನ್ನಲ್ಲಿ ಲೂಸಿಯಾನ ಮತ್ತು ಗ್ಲೈಪೆÇಟೆಕ್ ಸೇರಿದಂತೆ ಅನೇಕ ಪ್ರಸಿದ್ಧ ವಸ್ತು ಸಂಗ್ರಹಾಲಯಗಳಿವೆ. ಸಮೀಪದಲ್ಲೇ ರೋಮ್ ನಗರದಲ್ಲಿರುವ ‘ಟ್ರೆವಿ’ ಕಾರಂಜಿಯಂತೆ, ಇಲ್ಲೂ ನಮ್ಮ ಕೋರಿಕೆಗಳನ್ನು ಪೂರೈಸುವ ‘ಜೆ¥sóïವೊüûನ್’ಕಾರಂಜಿಯಿದೆ. ಈ ಕಾರಂಜಿ ಸಹಾ ಬೀರ್ ತಯಾರಕ ಕಾರ್ಲ್ ಜೇಕಬ್ಸನ್ ನಗರಕ್ಕೆ ನೀಡಿದ ಬಳುವಳಿ.
ಪರಿಸರ ಸಂರಕ್ಷಣೆಯಲ್ಲಿ: ಕೊಪೆಂಹೆಗೆನ್
ಬಿಸಿಯಾಗುತ್ತಿರುವ ಪೃಥ್ವಿಯ ಪರಿಣಾಮವಾಗಿ ಪ್ರಕೃತಿ ವಿಕೋಪಗಳ ಇತ್ತೀಚಿನ ಘಟಣೆಗಳ ಹಿನ್ನೆಲೆಯಲ್ಲಿ ನಿಸರ್ಗವೇ ಸ್ವರ್ಗವೆಂದು ಪರಿಗಣಿಸಿರುವ ಡೆನ್ಮಾರ್ಕ್, ಪರಿಸರ ಸಂರಕ್ಷಣೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಶ್ಲಾಘನೀಯ ಹಾಗೂ ಅನುಕರಣೀಯ. ಪರಿಸರ ಸಮಸ್ಯೆಗಳಿಗೆ ಸ್ಪಂದಿಸಿ ಮತ್ತು ಅವುಗಳ ಪರಿಹಾರಕ್ಕೆ ಒಂದಾಗಿರುವ ದೇಶಗಳ ಮುಂಚೂಣಿಯಲ್ಲಿದೆ ಡೆನ್ಮಾರ್ಕ್. ಹಾಗಾಗಿ ಬಿಸಿಯಾಗುತ್ತಿರುವ ಪೃಥ್ವಿ ಮತ್ತು ಪರಿಸರದ ಎಲ್ಲಾ ಚರ್ಚೆ, ಕಾರ್ಯಾಚರಣೆಗಳ ಕೇಂದ್ರಬಿಂದುವೇ ಕೊಪೆಂಹೆಗೆನ್. ಈ ನಿಟ್ಟಿನಲ್ಲಿ ಕೊಪೆಂಹೆಗೆನ್ ಕ್ಲೈಮೇಟ್ ಕೌಂಸಿಲ್ ಮತ್ತು ವಿಶ್ವಸಂಸ್ಥೆ ಸಂಯೋಜಿತ ಕ್ಲೈಮೇಟ್ ಸಮಾವೇಶ ಕೊಪೆಂಹೆಗೆನ್ನಲ್ಲಿ ಡಿಸೆಂಬರ್ 2009ರಲ್ಲಿ ನಡೆದು ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಪರಿಸರವನ್ನು ಕಾಪಾಡುವ ನಿಮಿತ್ತದ ಪ್ರಯತ್ನಗಳು ಫಲಕಾರಿಯಾಗುವ ಎಲ್ಲಾ ಲಕ್ಷಣಗಳು ಈಗಾಗಲೇ ಇಲ್ಲಿ ಕಾಣುತ್ತಿದೆ. ಆದ್ದರಿಂದಲೇ 2008ರಲ್ಲಿ ಮೊನೊಕ್ಲೆ ಎಂಬ ಲಂಡನ್ ಪತ್ರಿಕೆ, ಮಾನವ ಸಮುದಾಯ ಜೀವಿಸಲು, ಪ್ರಪಂಚದ ಇಪ್ಪತ್ತು ಶ್ರೇಷ್ಟ ನಗರಗಳ ಪಟ್ಟಿಯನ್ನು ಮಾಡಿ, ಅದರ ಅಗ್ರ ಸ್ಥಾನವನ್ನು ಕೊಪೆಂಹೆಗೆನ್ಗೆ ನೀಡಿ, ‘ಉತೃಕ್ಷ್ಟವಾಗಿ ರೂಪಿಸಿದ ನಗರ’ ಎಂಬ ಬಿರುದನ್ನೂ ನೀಡಿದೆ.
ಸಂಪದ್ಭರಿತ ಈ ದೇಶದ ನಿಸರ್ಗವೂ ಹಾಗೆಯೇ. ಆಧುನೀಕರಣದ ಮಾಲಿನ್ಯದಿಂದ ಮುಕ್ತವಾದ, ಸ್ವಚ್ಛವಾದ ಗಾಳಿ, ಎಲ್ಲೆಲ್ಲೂ ಹಚ್ಚಹಸಿರಾದ ಗಿಡಮರಗಳು, ವಿಶಾಲವಾದ ಸಮುದ್ರದ ನಡುವೆ, ಆಕಾಶವನ್ನೇ ಚುಂಬಿಸುತ್ತಿರುವಂತಾ ಹಿಮದ ಶ್ವೇತಪರ್ವತಗಳ ಈ ನಾಡಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ನೀವು ಇನ್ನೂ ಹೋಗಿಲ್ವೆ!