ಸುಮಾರು ಎಂಟು ವರ್ಷಗಳ ಹಿಂದಿನ ಮಾತು. ದುಬೈನಲ್ಲಿದ್ದ ನನ್ನ ಸ್ನೇಹಿತರ ಮಗ, ರಾಹುಲ್‍ಗೆ ಮಾರ್ಗದರ್ಶನ ಮಾಡುತ್ತಿದ್ದೆ. ಆಗೊಮ್ಮೆ, ನೀನು ‘ವೃತ್ತಿಜೀವನದಲ್ಲೇನು ಮಾಡಬೇಕೆಂದುಕೊಂಡಿದ್ದೀಯ’ ಎಂದು ಕೇಳಿದಾಗ, ಅವನ ಉತ್ತರ “ಏರೋನಾಟಿಕಲ್ ಎಂಜಿನಿಯರ್ ಆಗಿ, ಅಮೇರಿಕದಲ್ಲಿರುವ ನಾಸ ಸೇರುವುದೇ ನನ್ನ ಕನಸು”, ನನ್ನನ್ನು ನಿಜಕ್ಕೂ ಆಶ್ಚರ್ಯಚಕಿತನನ್ನಾಗಿ ಮಾಡಿತು. ಏಕೆಂದರೆ, ರಾಹುಲ್‍ಗೆ ಆಗ ಕೇವಲ ಎಂಟು ವರ್ಷ ಮಾತ್ರ!
ಈಗ ರಾಹುಲ್ ತನ್ನ ತಂದೆತಾಯಿಯರೊಡನೆ ಕೆನಡ ನಿವಾಸಿ; ಕೆನಡದಲ್ಲಿನ ಪ್ರತಿಷ್ಟಿತ ಏರೋನಾಟಿಕಲ್ ಎಂಜಿನಿಯರಿಂಗ್ ಕಾಲೇಜ್ ಸೇರಲು ಎಲ್ಲಾ ತಯಾರಿಯನ್ನು ಮಾಡುತ್ತಿದ್ದಾನೆ. ಇಂತಹ ನಿಖರವಾದ ಗುರಿ ಮತ್ತು ಪ್ರಬಲವಾದ ನಂಬಿಕೆಯ ಜೊತೆಗೆ, ಹೆತ್ತವರ ಸಂಪೂರ್ಣ ಬೆಂಬಲವೂ ಇರುವುದರಿಂದ, ರಾಹುಲ್ ತನ್ನ ಗುರಿಯನ್ನು ಮುಟ್ಟುವುದರಲ್ಲಿ ಯಾವ ಸಂಶಯವೂ ನನಗಿಲ್ಲ.
ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ಅವರ ಮಾತೊಂದು ಜ್ಞಾಪಕಕ್ಕೆ ಬರುತ್ತದೆ, “ಜ್ಞಾನಕ್ಕಿಂತ ಕಲ್ಪನಾಶಕ್ತಿಯೇ ಮುಖ್ಯ”. ಪ್ರಾಯಶಃ ಆದ್ದರಿಂದಲೇ, ಅವರು ಹೇಳುತ್ತಿದ್ದರು, “ನಾನು ನನ್ನ ಜೀವಿತ ಅವಧಿಯಲ್ಲಿ ಕೇವಲ ಶೇ. 25ರಷ್ಟು ಬೌದ್ಧಿಕ ಸಾಮಥ್ರ್ಯ ಬಳಸಿರಬಹುದು”. ಈ ಕಾರಣದಿಂದಲೇ, ಮಾನವನ ಚೈತನ್ಯಕ್ಕೆ, ಬುದ್ಧಿಶಕ್ತಿಗೆ ಮಿತಿಯಿಲ್ಲ; ಇಲ್ಲದ ಆ ಮಿತಿಯನ್ನು ನಮ್ಮ ಸೀಮಿತ ಆಲೋಚನೆಗಳಿಂದ, ನಕಾರಾತ್ಮಕ ಚಿಂತನೆಗಳಿಂದ ನಾವೇ ಸ್ವತಃ ನಿರ್ಮಿಸುತ್ತೇವೆ. ಇದನ್ನು ತಡೆಯಲು, ನಮ್ಮ ಕನಸುಗಳು ಮಹತ್ವಾಕಾಂಶೆಯಾಗಬೇಕು. ಆ ನಿಟ್ಟಿನಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಕಾರ್ಯಗಳನ್ನು ಮಾಡಲು, ನಮ್ಮ ಶಕ್ತಿ, ಸಾಮಥ್ರ್ಯದಲ್ಲಿ ಪ್ರಬಲವಾದ ನಂಬಿಕೆಯಿರಬೇಕು. ಇಂತಹ ಪ್ರಬಲವಾದ ನಂಬಿಕೆಯೇ, ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಅತ್ಯವಶ್ಯಕವಾದ ಪ್ರೇರಣೆ.
ಕನಸುಗಳನ್ನು ಸಾಕಾರಗೊಳಿಸುವುದು ಹೇಗೆ?
ಕನಸುಗಳನ್ನು ಸಾಕಾರಗೊಳಿಸಲು ನಾವು ಸಕಾರಾತ್ಮಕವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ನಿರ್ಧಿಷ್ಟವಾದ ಗುರಿಯತ್ತ ಸಾಗಲು, ದಿನನಿತ್ಯವೂ ಪರಿಶ್ರಮಪಡಬೇಕಾಗುತ್ತದೆ. ಇಂತಹ ಸತವಾದ ಪರಿಶ್ರಮಕ್ಕೆ, ಪ್ರೇರಣೆಯೇ ಅಗತ್ಯವಾದ ಪ್ರಚೋದನೆ. ಉದಾಹರಣೆಗೆ ಬೋನಸ್, ಕಮೀಷನ್, ಹೊಗಳಿಕೆ, ಪ್ರಶಂಸೆ, ಶ್ಲಾಘನೆಗಳೆಲ್ಲವೂ ನಮ್ಮನ್ನು ಪ್ರೇರೇಪಿಸುವ ಸಾಧನಗಳು. ಆದರೆ, ಬಾಹ್ಯ ಪ್ರಪಂಚದ ಈ ಪ್ರೇರಣೆಯ ಸಾಧನಗಳು ತಾತ್ಕಾಲಿಕ. ನಿಮ್ಮ ಸುತ್ತಮುತ್ತ ಇರುವ ಹೆತ್ತವರು, ಅಧ್ಯಾಪಕರು ಮತ್ತು ಸ್ನೇಹಿತರು, ನಿಮ್ಮ ಅಭಿವೃದ್ಧಿಯಲ್ಲಿ ಸಹಜವಾದ ಆಸಕ್ತಿಯುಳ್ಳವರು. ಆದರೆ, ಈ ಆಸಕ್ತಿ ಪ್ರೇರಣೆಯಾಗಿ ಪರಿವರ್ತನೆಗೊಂಡರೂ, ಸದಾಕಾಲ ನಿಮ್ಮನ್ನು ಉತ್ತೇಜಿಸಿ, ಪ್ರಚೋದಿಸುವ ಸಾಧ್ಯತೆಗಳು ಕಡಿಮೆ. ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಆಂತರಿಕ ಪ್ರೇರಣೆ ಹೆಚ್ಚು ಪರಿಣಾಮಕಾರಿ ಮತ್ತು ಶಾಶ್ವತ. ಏಕೆಂದರೆ, ಆಂತರಿಕ ಪ್ರೇರಣೆ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮನ್ನು ಅಪೇಕ್ಷಣೀಯ ಮತ್ತು ಸಕಾರಾತ್ಮಕ ಕಾರ್ಯಗಳಲ್ಲಿ ತೊಡಗಿಸಿ, ನಮ್ಮ ಗುರಿಯತ್ತ ಮುನ್ನಡೆಸಿಕೊಂಡು ಹೋಗುತ್ತದೆ. ವೃತ್ತಿಜೀವನವನ್ನು ರೂಪಿಸಲು ಇಂತಹ ಸ್ವ-ಪ್ರೇರಣೆ ಅತ್ಯವಶ್ಯಕ.
ಪ್ರೇರಣೆಯನ್ನು ಬೆಳೆಸಿಕೊಳ್ಳುವುದು ಹೇಗೆ?
ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಹಂಬಲ ಎಲ್ಲರಿಗೂ ಇರುವುದು ಸಾಮಾನ್ಯ. ಆದರೆ ಯಶಸ್ವಿಯಾಗುವುದು ಹೇಗೆ?
ನೀವು ಯಶಸ್ಸಿನ ಕನಸು ಕಾಣುವ ಮುಂಚೆ, ನೀವು ಕಲಿಯುತ್ತಿರುವ ವಿದ್ಯೆಗೂ, ನಿಮ್ಮಲ್ಲಿರುವ ಇತರ ಕೌಶಲ್ಯಗಳಿಗೂ ಸರಿಹೊಂದುವಂತ, ನಿಮ್ಮ ಇಷ್ಟ, ಅಭಿರುಚಿಗೆ ಸ್ಪಂದಿಸುವಂತ, ವೃತ್ತಿಯನ್ನು ಗುರುತಿಸಬೇಕು. ಇದು ಬಹುರಾಷ್ಟ್ರೀಯ ಸಂಸ್ಥೆಯಲ್ಲಿನ ಉದ್ಯೋಗವಿರಬಹುದು; ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿರಬಹುದು ಅಥವಾ ಸ್ವಂತ ಉದ್ದಿಮೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿರಬಹುದು. ಆದರೆ ಮುಖ್ಯವಾಗಿ, ಒಲವಿರುವಂತಹ ವೃತ್ತಿಯನ್ನೇ ನೀವು ಆರಿಸಿಕೊಳ್ಳಬೇಕು. ಏಕೆಂದರೆ, ಒಲವಿಲ್ಲದ ವೃತ್ತಿ ನೀರಸಮಯ; ಅಂತಹ ವೃತ್ತಿಯಲ್ಲಿ ಯಶಸ್ಸು ಅಸಾಧ್ಯ. ಆದ್ದರಿಂದ, ಮೊಟ್ಟಮೊದಲ ಹೆಜ್ಜೆಯೆಂದರೆ, ನಿಮಗೆ ಒಲವಿರುವಂತಹ, ನಿಮ್ಮ ಸ್ವಾಭಾವಿಕ ಪ್ರತಿಭೆ ಅರಳುವಂತಹ ವೃತ್ತಿಯನ್ನು ಆರಿಸಿಕೊಳ್ಳಿ.
ಇದಾದ ನಂತರ, ವೃತ್ತಿಯ ಯಶಸ್ಸಿಗೆ ಬೇಕಾಗುವ ಪ್ರಮುಖ ಅಂಶಗಳನ್ನು ಗಮನಿಸಿ. ಉದಾಹರಣೆಗೆ, ಮಾಹಿತಿ ತಂತ್ರಜ್ಞಾನ ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಿದೆ. ಈ ಕ್ಷೇತ್ರವನ್ನು ಆರಿಸಿಕೊಳ್ಳುವುದಾದರೆ, ಇಲ್ಲಿನ ಯಶಸ್ಸಿಗೆ ಅಗತ್ಯವಾದ ವಿದ್ಯೆ, ಬೌದ್ಧಿಕ ಸಾಮಥ್ರ್ಯ, ಇತರ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ಅದೇ ರೀತಿ, ಕ್ಯಾಂಪಸ್ ನೇಮಕಾತಿಯಲ್ಲಿನ ಸವಾಲುಗಳನ್ನೂ, ಅವಕಾಶಗಳನ್ನೂ ಗಮನಿಸಿ, ಅದಕ್ಕೆ ತಕ್ಕಂತೆ, ತಯಾರಾಗಿ. ಇವೆಲ್ಲಕ್ಕಿಂತ ಮಿಗಿಲಾಗಿ, ನಿಮ್ಮ ವೈಯಕ್ತಿಕ ಇತಿಮಿತಿಗಳ ಲೆಕ್ಕಾಚಾರದಿಂದ ಈ ಕ್ಷೇತ್ರದಲ್ಲಿ ನಿಮ್ಮ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ನಿರ್ಧರಿಸಿ. ಸುಮಾರು ಹತ್ತು ವರ್ಷಗಳಲ್ಲಿ, ಸಣ್ಣ ಅಥವಾ ಮಧ್ಯಮ ವರ್ಗದ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥರಾಗಬೇಕೆನ್ನುವ ಧ್ಯೇಯ ನಿಮ್ಮದಾದರೆ, ಈ ಗುರಿಯನ್ನು ಸಾಧಿಸಿದ ಬಳಿಕ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಿಗುವ ಲಾಭ, ಪ್ರಯೋಜನ, ಜೀವನ ಶೈಲಿ, ಅಂತಸ್ತು, ಸ್ಥಾನಮಾನಗಳ ಬಗ್ಗೆ ಯೋಚಿಸಿ. ಈ ರೀತಿ, ಯಾವುದೇ ವೃತ್ತಿಯನ್ನು ಅನುಸರಿಸುವುದರಿಂದಾಗುವ ವೈಯಕ್ತಿಕ, ಕೌಟುಂಬಿಕ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗಳು, ನಿಮ್ಮ ಯಶಸ್ಸಿನ ಅಳತೆಗೋಲುಗಳೇ ಎಂದು ಯೋಚಿಸಿ. ಸಾಮಾನ್ಯವಾಗಿ ಮೂಲಭೂತ ಅಗತ್ಯಗಳು ಪೂರೈಸುತ್ತಿದ್ದಂತೆ, ಯಶಸ್ಸಿನ ಅಳತೆಗೋಲುಗಳು ಬದಲಾಗುವುದು ಸ್ವಾಭಾವಿಕ. ಆದ್ದರಿಂದ, ವೃತ್ತಿಯ ವಿವಿಧ ಹಂತ ತಲುಪಿದ್ದಂತೆಯೇ, ಈ ಅಳತೆಗೋಲುಗಳು ಬದಲಾಗಿ ಮೇಲ್ಮಟ್ಟದ, ಆದರ್ಶವಾದ ಗುರಿಯತ್ತ ನಾವು ಶ್ರಮಿಸಬೇಕು. ಇದೇ ವೃತ್ತಿಪರತೆಯ ಮುಖ್ಯ ಲಕ್ಷಣ.
ಯಶಸ್ಸಿನ ಹಾದಿ ಸುಗಮವಾಗಿಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ವೃತ್ತಿಯಲ್ಲಿ ಬರಬಹುದಾದ ಹಿನ್ನಡೆ, ಅಡಚಣೆ ಮತ್ತು ಸವಾಲುಗಳನ್ನು ನಿರೀಕ್ಷಿಸಿದರೆ, ಅದರಿಂದಾಗುವ ಆಘಾತಗಳನ್ನು ಸ್ವಲ್ಪಮಟ್ಟಿಗಾದರೂ ತಡೆಗಟ್ಟಿ, ಅಂತಹ ಸಂದರ್ಭಗಳನ್ನು ಧೈರ್ಯದಿಂದ ಎದುರಿಸಬಹುದು.
ಬದುಕಿನಲ್ಲಿ ನಾವು ಏನನ್ನು ನೋಡಬಯಸುತ್ತೇವೋ, ಅದೇ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣುತ್ತದೆ. ಆದ್ದರಿಂದಲೇ, ನಾವು ಸಕಾರಾತ್ಮಕ ದೃಷ್ಟಿಕೋನ ಉಳ್ಳವರಾಗಬೇಕು. ಎಲ್ಲಕ್ಕಿಂತ ಹೆಚ್ಚಿನದಾಗಿ, ನಿಮ್ಮ ಸಾಮಥ್ರ್ಯದಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಇಟ್ಟುಕೊಳ್ಳಬೇಕು. ಆತ್ಮವಿಶ್ವಾಸವನ್ನು ಕಳೆದುಕೊಂಡರೆ, ನಿಮ್ಮ ಸರ್ವಸ್ವವನ್ನೂ ಕಳೆದುಕೊಂಡಂತೆಯೇ ಎನ್ನುವುದನ್ನು ಮರೆಯದಿರಿ. ಏಕೆಂದರೆ, ಆತ್ಮವಿಶ್ವಾಸದಿಂದ ಧೈರ್ಯ ಉಂಟಾಗುತ್ತದೆ. ಈ ಧೈರ್ಯವೇ ನಿಮ್ಮ ವ್ಯಕ್ತಿತ್ವದ ಆಸ್ತಿ.
ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಸ್ವ-ಸಲಹೆಗಳಿಂದ [ಆಟೋ ಸಜೆಷನ್], ಪ್ರೇರಣೆಯಾಗುತ್ತದೆ. ಉದಾಹರಣೆಗೆ ನೀವು ವಿಧ್ಯಾರ್ಥಿಯಾಗಿದ್ದಲ್ಲಿ, ‘ನಾನು ಶ್ರದ್ಧೆಯಿಂದ ಪ್ರತಿನಿತ್ಯ ಅಭ್ಯಾಸ ಮಾಡಿದರೆ ಈ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಲ್ಲೆ’, ‘ನಾನು ಈ ಬಾರಿಯ ಕ್ಯಾಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಬಲ್ಲೆ’, ‘ಏಷ್ಟೇ ಕಷ್ಟವಾದರೂ ನಾನು ನನ್ನ ವೃತ್ತಿಯ ಗುರಿಯಿಂದ ವಿಮುಖನಾಗುವುದಿಲ್ಲ’, ಎಂಬಂತಹ ಸ್ವ-ಸಲಹೆಗಳು ಪ್ರಯೋಜನಕಾರಿ.
ಸಾಧಕರ ಕಥೆಗಳು ಪ್ರೇರಣಕಾರಿ
ಮಹಾತ್ಮ ಗಾಂಧಿಯವರ ಆತ್ಮಕಥೆ ಎಲ್ಲರಿಗೂ ತಿಳಿದಿದೆ. ದೇಶಕ್ಕೆ ಸ್ವಾತಂತ್ರ ತಂದುಕೊಡುವ ಅವರ ಕನಸನ್ನು ಸಾಕಾರಗೊಳಿಸಲು ಪಟ್ಟ ಕಠಿಣ ಪರಿಶ್ರಮದ ಹಿಂದೆ, ಅವರ ಆಂತರಿಕ ಪ್ರೇರಣೆಯೂ ಪ್ರಮುಖ ಕಾರಣವಾಗಿತ್ತು. ಅದೇ ರೀತಿ ಸ್ವಾಮಿ ವಿವೇಕಾನಂದ, ಸ್ಟೀವ್ ಜಾಬ್ಸ್, ಎ.ಪಿ.ಜೆ. ಅಬ್ದುಲ್ ಕಲಾಮ್, ಎನ್.ಆರ್. ನಾರಾಯಣಮೂರ್ತಿ, ಬಿಲ್ ಗೇಟ್ಸ್‍ರಂತಹ ಮಹಾನ್ ಸಾಧಕರ ಕಥೆಗಳು ಕುತೂಹಲಕಾರಿ ಮತ್ತು ಪ್ರೇರಣಕಾರಿ. ಹೊರನೋಟಕ್ಕೆ ಗೋಚರಿಸದ ಅವರ ಸಾಧನೆಯ ಹಿಂದಿನ ಒಳಗುಟ್ಟನ್ನು ಅರಿಯಲು, ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಿ.
ಯಶಸ್ಸಿನ ಸೂತ್ರಗಳನ್ನು ಪ್ರತಿಬಿಂಬಿಸುವಂತ ಅನೇಕ ಪುಸ್ತಕಗಳು ಮತ್ತು ಚಲನಚಿತ್ರಗಳು ಈಗ ಮಾರುಕಟ್ಟೆಯಲ್ಲಿವೆ. ಸಾಧಕರ ಸ್ಪೂರ್ತಿಯುತ ಕಥೆಗಳನ್ನು ಕೇಳುವ, ಓದುವ ಮತ್ತು ವಿಡಿಯೋ, ಚಲನಚಿತ್ರಗಳನ್ನು ನೋಡುವುದರಿಂದ, ನಮ್ಮಲ್ಲಿಯೂ ಸಾಧನೆಯ ಛಲ ಹುಟ್ಟುತ್ತದೆ. ಇಂತಹ ಉತ್ತಮ ಆಸಕ್ತಿ, ಅಭಿರುಚಿಗಳಿಂದ ಆಂತರಿಕ ಪ್ರೇರಣೆ ಸೃಷ್ಟಿಯಾಗುತ್ತದೆ. ಆದ್ದರಿಂದಲೇ, ಇತ್ತೀಚಿನ ವ್ಯಕ್ತಿತ್ವ ತರಬೇತಿ ಶಿಬಿರಗಳಲ್ಲಿ ಅನೇಕ ಚಲನಚಿತ್ರಗಳ ಆಯ್ದ ಭಾಗಗಳನ್ನು ವೀಕ್ಷಿಸಿ, ಚರ್ಚೆ ಮತ್ತು ವಿಶ್ಲೇಷಣೆಯ ಮುಖಾಂತರ ಸಂವಹನ ಕೌಶಲ, ಮನೋಭಾವ, ಸ್ಪೂರ್ತಿ, ಪ್ರೇರಣೆ ಇತ್ಯಾದಿಗಳ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿ, ನಮ್ಮ ವ್ಯಕ್ತಿತ್ವದಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಉತ್ತೇಜಿಸಲಾಗುತ್ತದೆ.
ಕ್ರೈಸಿಸ್ ಎಂದರೆ ಅವಕಾಶ!
ವಾಸ್ತವವಾಗಿ, ಇಂಗ್ಲೀಷಿನ ‘ಕ್ರೈಸಿಸ್’ ಅಕ್ಷರವನ್ನು ಚೈನೀಸ್ ಭಾಷೆಯಲ್ಲಿ ಎರಡು ಚಿಹ್ನೆಗಳಿಂದ ಗುರುತಿಸಲಾಗುತ್ತದೆ; ಮೊದಲ ಚಿಹ್ನೆಯಲ್ಲಿ ಅಪಾಯವೆಂದೂ, ಎರಡನೇ ಚಿಹ್ನೆಯಲ್ಲಿ ಅವಕಾಶವೆಂದೂ ಅರ್ಥೈಸಲಾಗುತ್ತದೆ. ಇದರ ವ್ಯಾಖ್ಯಾನವೇನೆಂದರೆ, ವಿಷಮ ಪರಿಸ್ಥಿತಿಗಳು ಮತ್ತು ಸವಾಲುಗಳು ಯಶಸ್ಸಿನ ಸೋಪಾನಗಳೆಂದೇ ಅರಿತು, ಎದೆಗುಂದದೆ ಧೈರ್ಯದಿಂದ ಮುನ್ನಡೆಯಬೇಕು. ಸಾಧಾರಣ ವ್ಯಕ್ತಿಗಳಿಗೂ, ಸಾಧಕರಿಗೂ ಇರುವ ವ್ಯತ್ಯಾಸವೇ ಅವರಲ್ಲಿನ ಆಂತರಿಕ ಪ್ರೇರಣೆ.
ಪ್ರಸಿದ್ಧ ಇಂಗ್ಲೀಷ್ ಲೇಖಕ ನೆಪೋಲಿಯನ್ ಹಿಲ್, ಕಳೆದ ಶತಮಾನದ ಸುಮಾರು 500ಕ್ಕೂ ಹೆಚ್ಚಿನ ಸಾಧಕರನ್ನು ಭೇಟಿ ಮಾಡಿ, ಅವರ ಯಶಸ್ಸಿನ ಸೂತ್ರಗಳನ್ನು ಅರಿತು, ‘ತಿಂಕ್ ಅಂಡ್ ಗ್ರೊ ರಿಚ್’ ಎಂಬ ಅದ್ಭುತ ಪುಸ್ತಕವನ್ನು 1937ರಲ್ಲಿ ಪ್ರಕಟಿಸಿದ್ದರು. ಈವರೆಗೂ, ಈ ಪುಸ್ತಕದ ಸುಮಾರು 20ದಶಲಕ್ಷ ಪ್ರತಿಗಳು ಮಾರಾಟವಾಗಿದೆಯೆಂದು ಹೇಳಲಾಗಿದೆ. ನೆಪೋಲಿಯನ್ ಹಿಲ್ ಅವರ ಪ್ರಕಾರ, ಮತ್ತೆ ಮತ್ತೆ ಚಿಂತನೆ ಮಾಡುವ ಹವ್ಯಾಸ ಮುಖ್ಯ; ಇದರಿಂದ ಗುರಿ, ಯೋಜನೆಗಳು ಸ್ಪಷ್ಟ ರೂಪ ತಳೆಯುತ್ತದೆ.
ಸಾಧನೆಯ ಹಾದಿಯಲ್ಲಿನ ಕಷ್ಟಗಳನ್ನೂ, ಸವಾಲುಗಳನ್ನೂ, ಯಶಸ್ವಿಯಾಗಿ ಎದುರಿಸಿದಾಗ, ಆತ್ಮತೃಪ್ತಿಯ ಭಾವನೆ ಸಹಜವಾಗಿಯೇ ಉಂಟಾಗುತ್ತದೆ. ಯಶಸ್ಸಿನ ಹಾದಿಯಲ್ಲಿನ ಪ್ರತಿಯೊಂದು ಹಂತವನ್ನು ಸೇರಿದಾಗ, ತೃಪ್ತಿಯಿಂದ ಆ ಘಳಿಗೆಯನ್ನು ಆನಂದಿಸುವ, ವಿಶ್ರಮಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಮೈಮನಗಳು ತಣಿದು, ಮುಂದಿನ ಹಂತಕ್ಕೆ ಹೋಗಲು ಸಜ್ಜಾಗುತ್ತವೆ.
ಇದೇ ರೀತಿ, ಕೆಲಸಗಳನ್ನು ಮಾಡಬೇಕಾದಾಗ ತಕ್ಷಣವೇ ಮಾಡಿಬಿಡಬೇಕು. ಕೆಲಸಗಳನ್ನು ಆಲಸ್ಯದಿಂದ ಮುಂದೂಡುವುದು, ನಾಳೆ ಮಾಡಿದರೂ ಆಗುತ್ತದೆಯೆಂಬ ಮನೋಧರ್ಮ ನಕಾರಾತ್ಮಕ ಮತ್ತು ಅಪಾಯಕಾರಿ. ಇಂತಹ ಭಾವನೆಗಳನ್ನು ನಮ್ಮೊಳಗಿಂದ ಹೊರದೂಡಿ, ಸಕ್ರಿಯವಾಗಿ ಕಾರ್ಯಶೀಲರಾಗಬೇಕು. ಪ್ರಸಿದ್ಧ ಉದ್ಯಮಿ ವಾಲ್ಟ್ ಡಿಸ್ನಿ ಹೇಳಿದಂತೆ, “ನಾವು ನಿನ್ನೆಯದನ್ನು ಬದಲಿಸಲು ಸಾಧ್ಯವಿಲ್ಲ; ನಾವು ಏನು ಮಾಡುವುದಿದ್ದರೂ ಇಂದೇ ಮಾಡಬೇಕು. ನಾಳೆಯತ್ತ, ನಾವು ಇಟ್ಟುಕೊಳ್ಳಬೇಕಾಗಿರುವುದು ಆಶಯವಷ್ಟೇ”.
ನಿಮ್ಮ ವೃತ್ತಿ ಮತ್ತು ಖಾಸಗೀ ಜೀವನಕ್ಕೊಂದು ಗುರಿಯಿರಲಿ; ಅದನ್ನು ಸಾಧಿಸುವ ಮಾರ್ಗವೂ ಸಮರ್ಪಕವಾಗಿರಲಿ. ಈ ದಿಸೆಯಲ್ಲಿ, ಸ್ವಾಮಿ ವಿವೇಕಾನಂದರವರ ಮಾತೊಂದನ್ನು ಗಮನಿಸಿ, “ಏಳು! ಎದ್ದೇಳು! ನಿನ್ನ ಭವಿಷ್ಯವನ್ನು ರೂಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊರು. ನಿನ್ನ ಉತ್ತರೋತ್ತರ ಶ್ರೇಯಸ್ಸಿಗೆ ಬೇಕಾದ ಎಲ್ಲ ಶಕ್ತಿ, ಸಾಮಥ್ರ್ಯಗಳೂ ನಿನ್ನೊಳಗೇ ಇವೆ. ನೋಡು, ಮನ ಮಾಡು. ಏಳು, ಎದ್ದೇಳು. ಭವ್ಯ ಭವಿಷ್ಯದ ನಿರ್ಮಾಣಕ್ಕೆ ಇಂದೇ ಅಡಿ ಇಡು”.
ಜೀವನದಲ್ಲಿ ಅಸಾಧ್ಯವೆನ್ನುವುದು ಯಾವುದೂ ಇಲ್ಲ; ಏಕೆಂದರೆ, ನಿಮ್ಮ ಅಂತರಂಗದ ಆಳದಲ್ಲಿದೆ ಅಪಾರ ಶಕ್ತಿ; ಅದರ ಮೂಲವೇ ಆಂತರಿಕ ಪ್ರೇರಣೆ.