ಕಲಿಕೆ ಜೊತೆ ಗಳಿಕೆ

ನೀವು ಭವಿಷ್ಯದ ಕನಸುಗಳನ್ನು ಕಾಣುತ್ತಾ ಕಾಲೇಜಿನಲ್ಲಿದ್ದೀರಾ? ಕಾಲೇಜ್, ಹಾಸ್ಟೆಲ್ ಶುಲ್ಕ, ಇತ್ಯಾದಿಗಳಿಗೆ ಹಣ ಒದಗಿಸುವುದು ಸವಾಲೆನಿಸುತ್ತಿದೆಯೇ? ಹಣದ ಕೊರತೆಯಿಂದ, ವ್ಯಕ್ತಿತ್ವ ವಿಕಸನ ಅಥವಾ ಇತರ ಕೋರ್ಸ್ ಸೇರಲಾಗುತ್ತಿಲ್ಲವೇ? ಹಾಗಿದ್ದಲ್ಲಿ, ಮುಂದೆ ಓದಿ.

ಆಕಾಶ್, ನಗರದ ಕಾಲೇಜೊಂದರಲ್ಲಿ ಅಂತಿಮ ಬಿ.ಬಿ.ಎ. ಓದುತ್ತಿದ್ದಾನೆ. ಕ್ಯಾಟ್ ಪರೀಕ್ಷೆಯಲ್ಲಿ ಪಾಸಾಗಿ ಐ.ಐ.ಎಂ.ನಲ್ಲಿ ಮ್ಯಾನೇಜ್‍ಮೆಂಟ್ ಮಾಡುವ ಆಕಾಂಕ್ಷೆ ಅವನದು. ಕಾಲೇಜ್ ಮುಗಿದ ಮೇಲೆ, ಕ್ಯಾಟ್ ಪರೀಕ್ಷೆಗೆ ಕೋಚಿಂಗ್; ನಂತರ ರಾತ್ರಿ ಒಂಬತ್ತರವರೆಗೆ ಫಾಸ್ಟ್ ಫುಡ್ ಕೆಫೆಯಲ್ಲಿ ಕೆಲಸ. ಹಾಸ್ಟೆಲ್‍ನಲ್ಲಿ ಮಲಗುವ ಮುಂಚೆ ಒಂದೆರಡು ಗಂಟೆ ವ್ಯಾಸಂಗ. ಇದು ಅವನ ದಿನಚರಿ.

ಆಕಾಶ್‍ನಂತಹ ವಿಧ್ಯಾರ್ಥಿಗಳನ್ನು ನೋಡಿದರೆ ಹೆಮ್ಮೆಯೆನಿಸುತ್ತದೆ. ವಾಸ್ತವವಾಗಿ, ಇಂದು ಅನೇಕ ವಿಧ್ಯಾರ್ಥಿಗಳು ಪಾರ್ಟ್ ಟೈಮ್ ಕೆಲಸಗಳನ್ನು ಮಾಡುತ್ತಾ, ಸ್ವಾವಲಂಬಿಗಳಾಗಿದ್ದಾರೆ. ಆದ್ದರಿಂದ, ನಿಮಗೂ ಹಣದ ಅವಶ್ಯಕತೆಯಿದ್ದಲ್ಲಿ ಯೋಚಿಸುವ ಅಗತ್ಯವಿಲ್ಲ. ದಿನಕ್ಕೆ ಒಂದೆರಡು ಗಂಟೆಯನ್ನು ಕಾದಿಟ್ಟರೆ ಸಾಕು; ನಿಮ್ಮ ದೈನಂದಿನ ಅಥವಾ ಹೆಚ್ಚುವರಿ ಹಣದ ಅವಶ್ಯಕತೆಯನ್ನು ಪೂರೈಸುವ ಆವಕಾಶಗಳೀಗ ಲಭ್ಯ.

ಪಾರ್ಟ್ ಟೈಮ್ ಕೆಲಸಗಳೇಕೆ ಬೇಕು?

ಶಿಕ್ಷಣ ಈಗೊಂದು ವ್ಯಾಪಾರವಾಗಿದೆ. ಪದವಿ, ಸ್ನಾತಕೋತ್ತರ ಕೋರ್ಸ್‍ಗಳ ಕಾಲೇಜ್, ಹಾಸ್ಟೆಲ್ ಶುಲ್ಕಗಳು ಹೆಚ್ಚಾಗುತ್ತಲೇ ಇದೆ. ಇದಲ್ಲದೆ, ಪುಸ್ತಕ, ಬಸ್, ಬಟ್ಟೆಬರೆಗಳೂ ದುಬಾರಿಯಾಗುತ್ತಿದೆ. ಇನ್ನು ವೃತ್ತಿಪರ ಕೋರ್ಸ್‍ಗಳಾದ ಎಂ.ಬಿ.ಬಿ.ಎಸ್., ಬಿ.ಇ., ಎಂ.ಬಿ.ಎ. ಇತ್ಯಾದಿಗಳಿಗೆ, ಕೇವಲ ಅರ್ಹತೆಯಿದ್ದರೆ ಸಾಲದು; ಈ ಕೋರ್ಸ್‍ಗಳಿಗೆ ಹಣ ಒದಗಿಸುವುದೊಂದು ಸಾಹಸವೇ. ಆದರೆ, ಪಾರ್ಟ್ ಟೈಮ್ ಕೆಲಸಗಳನ್ನು ಮಾಡಲು ಇವಷ್ಟೇ ಕಾರಣಗಳಲ್ಲ. ಅನೇಕ ಮಧ್ಯಮ ಮತ್ತು ಉನ್ನತ ವರ್ಗದ ವಿಧ್ಯಾರ್ಥಿಗಳ ಬೇರೆ ಅಭಿಪ್ರಾಯಗಳಿವೆ. ಎರಡನೇ ಬಿ.ಎಸ್.ಸಿ. ವಿಧ್ಯಾರ್ಥಿನಿ ಸೌಮ್ಯ ಹೇಳುವಂತೆ, ‘ಮುಂದೆ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡುವ ಇಚ್ಛೆಯಿದೆ. ಆದ್ದರಿಂದಲೇ, ನಾನೀಗ ಪಂಚತಾರ ಹೋಟೆಲೊಂದರಲ್ಲಿ ಪಾರ್ಟ್ ಟೈಮ್ ಮಾಡುತ್ತಿದ್ದೇನೆ. ವಾರಾಂತ್ಯದಲ್ಲಿ ಮಾತ್ರ ಮಾಡುವ ಈ ಕೆಲಸದಿಂದ ಅನುಭವದ ಜೊತೆಗೆ, ನನ್ನ ವೈಯಕ್ತಿಕ ಅವಶ್ಯಕತೆಗಳಿಗಾಗಿ ಮನೆಯಲ್ಲಿ ಹಣವನ್ನು ಕೇಳುವ ಗೋಜಿಲ್ಲ’. ಇನ್ನಿತರ ವಿಧ್ಯಾರ್ಥಿಗಳು, ತಮ್ಮ ಒಡನಾಡಿಗಳ ಪ್ರಭಾವದಿಂದಲೂ, ಪಾಕೆಟ್ ಹಣ ನೀಡುವ ಸ್ವಾತಂತ್ರದಿಂದಲೂ, ಪಾರ್ಟ್ ಟೈ ಕೆಲಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಕೆಲಸಗಳು ಅನೇಕ; ಆಯ್ಕೆ ಸುಲಭ

ಜಾಗತೀಕರಣದ ಬಳಿಕ, ಪಾರ್ಟ್ ಟೈಮ್ ಕೆಲಸಗಳ ಆಯ್ಕೆ ಸುಲಭ. ಏಕೆಂದರೆ, ನಿಮಗಿರುವ ಸಮಯ, ಅಭಿರುಚಿ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಕೆಲಸಗಳಿವೆ. ಅವುಗಳ ಬಗೆ ಹೀಗಿದೆ:

ಮಾರ್ಕೆಟಿಂಗ್

ಈ ವೃತ್ತಿಯಲ್ಲಿ ಎರಡು ಬಗೆಗಳಿವೆ. ಒಂದು, ನೀವು ಆಫೀಸ್ ಅಥವಾ ಮನೆಯಲ್ಲಿ ಕುಳಿತು ಫೆÇೀನ್ ಮುಖಾಂತರ ಗ್ರಾಹಕರ ವಿವರಗಳನ್ನು ಶೇಖರಿಸುವುದು, ಅದರಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು, ಇತ್ಯಾದಿ. ಇದಕ್ಕೆ ಡೇಟಾಬೇಸ್ ಮ್ಯಾನೇಜ್‍ಮೆಂಟ್ ಎಂದೂ ಕರೆಯುತ್ತಾರೆ. ಇದೊಂದು ಸುಲಬದ ಕೆಲಸ ಮತ್ತು ನೀವು ಕಂಪ್ಯೂಟರ್‍ಗೆ ಅಳವಡಿಸುವ ಪ್ರತಿಯೊಂದು ಗ್ರಾಹಕರ ದಾಖಲೆಗೂ ನಿಗದಿತ ಫೀ ದೊರೆಯುತ್ತದೆ. ಎರಡನೆಯದಾಗಿ, ಉದ್ದಿಮೆಗಳಿಗೆ ಮತ್ತು ಮನೆಮನೆಗಳಿಗೆ ಭೇಟಿ ನೀಡಿ ಉತ್ಪನ್ನಗಳ ಪ್ರಚಾರವನ್ನು ಮಾಡುವ ಕೆಲಸಗಳೂ ದೊರೆಯುತ್ತವೆ. ಇದರ ಜೊತೆಗೆ, ಅನೇಕ ಅಫೀಸುಗಳಲ್ಲಿ ತಾತ್ಕಾಲಿಕ ಕೆಲಸಗಳಿರುತ್ತವೆ.

ಹೋಟೆಲ್, ಕಾಫಿ-ಶಾಪ್, ರೆಸ್ಟೋರೆಂಟ್‍ಗಳು

ಗ್ರಾಹಕರಿಗೆ ನೆರವಾಗುವ ಅನೇಕ ಸೇವೆಗಳಿಗೆ-ತಿಂಡಿ, ತಿನಿಸುಗಳ ಪಟ್ಟಿ, ಸರಬರಾಜು, ಬಿಲ್ಲಿಂಗ್, ಉಸ್ತುವಾರಿ, ಸತ್ಕಾರ-ಬದ್ಧರಾಗಿರುವುದು, ಸೇವೆಯಲ್ಲಿನ ಕುಂದು ಕೊರತೆಗಳ ನಿವಾರಣೆಗೆ ಗಮನ ಕೊಡುವುದು. ಈಗ, ಇಂತಹ ಅನೇಕ ಕೆಲಸಗಳು ವಿಧ್ಯಾರ್ಥಿಗಳಿಗೆ ಲಭ್ಯ.

ಮಾಧ್ಯಮಗಳು

ಇಂದಿನ ಸ್ಪರ್ಧಾತ್ಮಕ ಉದ್ಯಮಗಳಲ್ಲಿ ಮಾಧ್ಯಮಗಳೂ ಸೇರಿವೆ. ಟಿ.ವಿ. ಚಾನೆಲ್, ರೇಡಿಯೊ, ಪತ್ರಿಕೆಗಳ ಪ್ರಚಾರಕ್ಕಾಗಿ ಮತ್ತು ಸಂಶೋಧನೆಗಾಗಿ, ವಿಧ್ಯಾರ್ಥಿಗಳನ್ನು ಅವಲಂಬಿಸುತ್ತಾರೆ. ದಿನಂಪ್ರತಿ ಒಂದೆರಡು ಗಂಟೆ ಅಥವಾ ವಾರಾಂತ್ಯದಲ್ಲಿ ಮಾಡುವ ಈ ಕೆಲಸದಲ್ಲಿ ನಿಮಗೆ ಒಳ್ಳೆಯ ಅನುಭವ ಸಹಾ ಲಭ್ಯ.

ಅಧ್ಯಾಪನ

ಬೇರೆ ವಿಧ್ಯಾರ್ಥಿಗಳಿಗೆ ಕಲಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಬೇರೆಯವರಿಗೆ ಕಲಿಸುವುದರಿಂದ, ನಿಮ್ಮ ಕಲಿಕೆಯೂ ನಿರಂತರವಾಗಿರುತ್ತದೆ. ನಿಮ್ಮ ಜ್ಞಾನಾರ್ಜನೆಯ ಜೊತೆಗೆ ಆದರ್ಶವಾದ ಕೆಲಸ ಮಾಡಿದಂತೆಯೂ ಆಗುತ್ತದೆ. ಇದಲ್ಲದೆ, ನಿಮ್ಮ ಹಣದ ಅಗತ್ಯಗಳಿಗೆ ಸಹಾಯವಾಗುತ್ತದೆ.

ಬರವಣಿಗೆ, ಅನುವಾದ

ನಿಮಗೆ ಬರವಣಿಗೆಯಲ್ಲಿ ಅಭಿರುಚಿ ಇದ್ದಲ್ಲಿ, ಈ ನಿಟ್ಟಿನಲ್ಲಿ ಅನೇಕ ಅವಕಾಶಗಳಿವೆ. ಪ್ರಿಂಟ್ ಮಾಧ್ಯಮದ ಜೊತೆಗೆ ಅಂತರ್ಜಾಲದ ಅನೇಕ ಪತ್ರಿಕೆಗಳಿಗೆ, ವೆಬ್ ಸೈಟ್‍ಗಳಿಗೆ, ಪುಸ್ತಕಗಳಿಗೆ, ಬರೆಯುವ ಮತ್ತು ಅನುವಾದಿಸುವ ಪಾರ್ಟ್ ಟೈಮ್ ಕೆಲಸಗಳಿವೆ. ಮತ್ತು, ಪ್ರಿಂಟ್ ಮಾಧ್ಯಮದ ಬರವಣಿಗೆಯನ್ನು ಕಂಪ್ಯೂಟರ್‍ಗೆ ಅಳವಡಿಸುವ ಕೆಲಸಗಳೂ ಸಿಗುತ್ತವೆ.

ಶಾಪಿಂಗ್ ಮಾಲ್

ನೀವು ಯುವಕ, ಯುವತಿಯರನ್ನು ಮಾಲ್‍ಗಳಲ್ಲಿ ಕ್ರೆಡಿಟ್ ಕಾರ್ಡ್, ಬ್ಯಾಂಕ್, ರೆಸಾರ್ಟ್, ಮೊಬೈಲ್ ಇತ್ಯಾದಿಗಳ ಪ್ರಚಾರ ಮಾಡುತ್ತಿರುವುದನ್ನು ನೋಡಿರಬಹುದು. ಅದೇ ರೀತಿ, ಸೂಪರ್ ಮಾರ್ಕೆಟ್ಟಿನ ಒಳಗಡೆಯೂ, ಅನೇಕ ನೂತನ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಪಾರ್ಟ್ ಟೈಮ್ ಪ್ರವರ್ತಕರನ್ನು ನಿಯಮಿಸುತ್ತಾರೆ.

ಪ್ರದರ್ಶನಗಳು

ಅನೇಕ ಸಮ್ಮೇಳನಗಳಿಗೆ, ಪ್ರದರ್ಶನಗಳಿಗೆ ಪ್ರಚಾರಕರು ಮತ್ತು ಪರಿಚಾರಿಕೆಯರ ಅಗತ್ಯವಿರುತ್ತದೆ. ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ, ಅವರನ್ನು ಪೂರ್ವನಿರ್ಧಾರಿತ ಸ್ಥಳಕ್ಕೆ ಕರೆದೊಯ್ಯುವುದು ಅಥವಾ ಉತ್ಪನ್ನಗಳ ಮಾಹಿತಿಯನ್ನು ನೀಡುವುದು. ಇಂತಹ ಸರಳ ಜವಾಬ್ದಾರಿಗಳನ್ನು ನಿಭಾಯಿಸಿದರೆ, ಆಕರ್ಷಕ ಸಂಭಾವನೆ ಸಿಗುತ್ತದೆ.

ಹವ್ಯಾಸಿ ಉದ್ಯೋಗಗಳು

ನಿಮಗೆ ವಿವಿಧ ಹವ್ಯಾಸಗಳಲ್ಲಿ ಹೆಚ್ಚಿನ ಅಭಿರುಚಿ ಇರಬಹುದು. ಉದಾಹರಣೆಗೆ, ಸಂಗೀತ, ನೃತ್ಯ, ಚಿತ್ರಕಲೆ, ಈಜು, ಯೋಗ, ಇತ್ಯಾದಿಗಳಲ್ಲಿ ಪರಿಣತಿ ಇದ್ದರೆ, ಇತರರಿಗೆ ಹೇಳಿಕೊಡುವುದು ಹೆಚ್ಚಿನ ಆದಾಯಕ್ಕೆ ಆಧಾರವಾಗಬಹುದು.

ಆದ್ದರಿಂದ, ಈಗ ನಿಮ್ಮ ಅಭಿರುಚಿಗೆ ತಕ್ಕಂತೆ, ನಿಮಗೆ ಒಪ್ಪಿಗೆಯಾಗುವ ಕೆಲಸ ಸಿಗುತ್ತದೆ.

ಪಾರ್ಟ್ ಟೈಮ್ ಕೆಲಸಗಳ ಅನುಕೂಲಗಳೇನು?

ಪಾರ್ಟ್ ಟೈಮ್ ಕೆಲಸಗಳಿಂದ ವಿಧ್ಯಾರ್ಥಿಗಳಿಗೆ ಆಗುವ ಲಾಭಗಳು, ಪ್ರಯೋಜನಗಳು ಅನೇಕ.

ಕರ್ತವ್ಯ ಮತು ಜವಾಬ್ದಾರಿ

ಪ್ರಾಯದಲ್ಲೇ ಕೆಲಸಕ್ಕೆ ಸೇರುವುದರಿಂದ ನಿಮ್ಮ ಕರ್ತವ್ಯಗಳ ಮತ್ತು ಜವಾಬ್ದಾರಿಗಳ ಅರಿವು ನಿಮಗಾಗುತ್ತದೆ. ಏಕೆಂದರೆ, ಯಾವುದೇ ಕೆಲಸಕ್ಕೆ ಸೇರಿದಾಗ, ಈ ವಿಷಯಗಳಿಗೇ ನಿಮ್ಮ ತರಬೇತಿಯಲ್ಲಿ ಒತ್ತು ನೀಡಲಾಗುತ್ತದೆ. ಈ ಅರಿವು, ನಿಮ್ಮ ವಿಧ್ಯಾರ್ಥಿ ಮತ್ತು ಖಾಸಗಿ ಜೀವನದಲ್ಲೂ ಉಪಯುಕ್ತ. ಹಾಗಾಗಿ, ನಿಮ್ಮ ನಡೆ, ನುಡಿಯಲ್ಲಿ ಪರಿಪಕ್ವತೆ ಸಹಜವಾಗಿಯೇ ಬರುತ್ತದೆ. ಪರಿಣಾಮವಾಗಿ, ನೀವು ಕಾಲೇಜು ಮತ್ತು ಮನೆಯಲ್ಲಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರ.

ಶಿಸ್ತು ಮತ್ತು ಸಮಯ ಪ್ರಜ್ಞೆ

ಸಾಧನೆಗೆ ಶಿಸ್ತೇ ಅತಿ ಮುಖ್ಯ. ಪಾರ್ಟ್ ಟೈಮ್ ಕೆಲಸದಲ್ಲಿ, ನಿಮ್ಮ ಸಮಯದ ಮೇಲೆ ಹೆಚ್ಚಿನ ಒತ್ತಡ ಮೂಡುವುದು ಸ್ವಾಭಾವಿಕ. ಈ ಒತ್ತಡದ ಸಕಾರಾತ್ಮಕ ಪ್ರಯೋಜನವೇನೆಂದರೆ, ನಿಮ್ಮಲ್ಲಿ ಸಮಯ ಪ್ರಜ್ಞೆ ಮೂಡಿ, ಸಮಯವನ್ನು ನಿರ್ವಹಿಸುವ ಸಾಮಥ್ರ್ಯವೂ ಬೆಳೆಯುತ್ತದೆ. ಅಮೂಲ್ಯವಾದ ಸಮಯವನ್ನು ವೇಳಾಪಟ್ಟಿಯಂತೆ ವ್ಯವಸ್ಥಿತವಾಗಿ ಉಪಯೋಗಿಸುತ್ತೀರ. ಈ ಶಿಸ್ತು ಮತ್ತು ಸಮಯ ಪ್ರಜ್ಞೆ, ಜೀವನದ ಯಶಸ್ಸಿಗೆ ಅತ್ಯವಶ್ಯಕ.

ಕೌಶಲ್ಯಗಳ ಕಲಿಯುವಿಕೆ

ನೀವು ಯಾವ ಕೆಲಸವನ್ನು ಆರಿಸಿಕೊಳ್ಳುತ್ತಿರಿ ಎನ್ನುವುದರ ಮೇಲೆ, ನಿಮಗೆ ವಿವಿಧ ಕೌಶಲ್ಯಗಳ ಮಾಹಿತಿ ಮತ್ತು ತರಬೇತಿಯಾಗುತ್ತದೆ. ಉದಾಹರಣೆಗೆ, ನೀವು ಮಾರ್ಕೆಟಿಂಗ್‍ನಲ್ಲಿ ಪಾರ್ಟ್ ಟೈಮ್ ಕೆಲಸವನ್ನು ಒಪ್ಪಿಕೊಂಡರೆ, ನಿಮಗೆ ಇದಕ್ಕೆ ಸಂಬಂಧಪಟ್ಟ ಕೌಶಲ್ಯಗಳು-ಮಾತುಗಾರಿಕೆ, ವ್ಯಕ್ತಿತ್ವ ವಿಕಸನ , ಸಮಯೋಜಿತ ಜಾಣ್ಮೆ-ಇತ್ಯಾದಿಗಳ ಬಗೆ ತರಬೇತಿ ಸಿಗುತ್ತದೆ. ಸಾಮಾನ್ಯವಾಗಿ, ನಿಮ್ಮ ಅಭಿರುಚಿಯ ಆಧಾರದ ಮೇಲೆ, ನಿಮ್ಮ ವೃತ್ತಿಯ ನಿರ್ಧಾರವಾಗುತ್ತದೆ. ಪಾರ್ಟ್ ಟೈಮ್ ಮತ್ತು ನೀವು ಅಪೇಕ್ಷಿಸುವ ಖಾಯಂ ವೃತ್ತಿಯಲ್ಲಿ ಹೊಂದಾಣಿಕೆಯಿದ್ದರೆ, ನೀವು ಬೆಳೆಸಿಕೊಂಡ ನೂತನ ಕೌಶಲ್ಯಗಳು ಉಪಯೋಗಕ್ಕೆ ಬಂದು, ವೃತ್ತಿಯಲ್ಲಿ ಮೇಲುಮಟ್ಟವನ್ನು ತಲಪಲು ಸಾಧ್ಯವಾಗುತ್ತದೆ.

ಸ್ವಾವಲಂಬನೆ

ಪಾರ್ಟ್ ಟೈಮ್ ಕೆಲಸಗಳಿಂದ ನಿಮ್ಮ ಹಣದ ಸಮಸ್ಯೆಗಳ ನಿವಾರಣೆಯಾಗುತ್ತದೆ. ನಿಮ್ಮ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಹಣವನ್ನು ಕೂಡಿಡಬಹುದು; ಜೊತೆಗೆ, ಸಂಸಾರಕ್ಕೂ ನೆರವಾಗಬಹುದು. ಎಲ್ಲಕ್ಕಿಂತ ಹೆಚ್ಚಿನದಾಗಿ, ಸ್ವಾವಲಂಬಿತರಾಗಿ ಜೀವನದಲ್ಲಿ ಮೇಲೆ ಬರುವುದು ಒಂದು ಹೆಮ್ಮೆಯ ವಿಚಾರ. ಜೀವನದ ನಿಯಮಗಳ, ಮೌಲ್ಯಗಳ ಮಹತ್ವ ಮತ್ತು ಪ್ರಯೋಜನಗಳ ಅರಿವಾದಂತೆ, ನಿಮ್ಮಲ್ಲಿ ಅಹಂಕಾರ, ಪ್ರತಿಷ್ಠೆಯ ಬದಲಾಗಿ ಆತ್ಮಾಭಿಮಾನ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.

ಪಾರ್ಟ್ ಟೈಮ್ ಕೆಲಸಗಳಲ್ಲಿ ವೈವಿಧ್ಯತೆಗಳಿವೆ; ಕುತೂಹಲ ಕೆರಳಿಸುವ ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸಲು, ಬೇಕಾಗುವ ಕೌಶಲ್ಯಗಳ ತರಬೇತಿ ನಿಮ್ಮದಾಗುತ್ತದೆ. ನೀವು ಆರಿಸಿಕೊಳ್ಳುವ ಕೆಲಸವನ್ನು ಅವಲಂಬಿಸಿ, ತಿಂಗಳೊಂದಕ್ಕೆ ಸುಮಾರು 10,000 ರೂಪಾಯಿಗಳವರೆಗೆ ಸಂಪಾದನೆಯಾಗಬಹುದು. ಕಾಪೆರ್Çರೇಟ್ ವಲಯದ ಅನೇಕ ಮಾನವ ಸಂಪನ್ಮೂಲ ಅಧಿಕಾರಿಗಳ ಪ್ರಕಾರ, ಇಂತಹ ಪಾರ್ಟ್ ಟೈಮ್ ಕೆಲಸಗಳು, ವಿಧ್ಯಾಭ್ಯಾಸದ ನಂತರ ಖಾಯಂ ಕೆಲಸ ಸಿಗುವಲ್ಲಿಯೂ ಸಹಾಯಕಾರಿ. ಆದರೆ, ಯಾವಾಗಲೂ ನಿಮ್ಮ ಒಳಿತನ್ನೇ ಬಯಸುವ ನಿಮ್ಮ ತಂದೆತಾಯಿಯರೊಡನೆ ಸಮಾಲೋಚಿಸಿಯೇ, ಕೆಲಸದ ಬಗ್ಗೆ ನಿರ್ಧರಿಸಿ.

ಪಾರ್ಟ್ ಟೈಮ್ ಕೆಲಸವೆಂದರೆ ಅದೊಂದು ಅವಮಾನವೂ ಅಲ್ಲ; ಶಾಪವೂ ಅಲ್ಲ. ಬದಲಾಗಿ, ನಿಮ್ಮ ಸಹಜ ಮಾನಸಿಕ ಪ್ರವೃತ್ತಿ ಸಕಾರಾತ್ಮಕವಾಗಿ ಬೆಳೆಯುತ್ತದೆ. ಪರಿಣಾಮವಾಗಿ, ನಿಮ್ಮ ಮೌಲ್ಯಗಳು ಊರ್ಜಿತಗೊಂಡು, ನಿಮ್ಮ ವ್ಯಕ್ತಿತ್ವ ಅಚ್ಚುಕಟ್ಟಾಗುತ್ತದೆ. ನಿಮ್ಮ ಮತ್ತು ಮನೆಯವರ ಆಸೆ, ಅಭಿಲಾಶೆಗಳಿಗೆ ಪೂರಕವಾಗಿ, ನಿಮ್ಮ ಯಶಸ್ಸಿನ ದಾರಿದೀಪವಾಗುತ್ತದೆ.

ಅಮೇರಿಕ ದೇಶದ ಹೆಸರಾಂತ ಮುತ್ಸದ್ದಿ, ಲೇಖಕ ಮತ್ತು ವಿಜ್ಞಾನಿ, ಬೆಂಜಮಿನ್ ಫ್ರಾಂಕ್ಲಿನ್ ಹೇಳಿದಂತೆ, ‘ಸ್ವತಂತ್ರವಾಗಿರಿ, ಚಟುವಟಿಕೆಯಿಂದಿರಿ, ದುಂದುವೆಚ್ಚ ಮಾಡದಿರಿ, ಈ ಕಿವಿಮಾತು ಮರೆಯದಿರಿ’.

Download PDF document

                                       

About author View all posts Author website

V Pradeep Kumar

Leave a Reply

Your email address will not be published. Required fields are marked *