ಪ್ರಗತಿಯ ಹಾದಿಯಲ್ಲಿರುವ ನಮ್ಮದೇಶದ ಮುಂದೆ ಕುಂಠಿತವಾದ ಗ್ರಾಹಕರ ಬೇಡಿಕೆ, ನಿರುದ್ಯೋಗದಂತಹ ಗುರುತರವಾದ ಸಮಸ್ಯೆಗಳನ್ನು ಒಳಗೊಂಡಂತೆ ಅನೇಕ ಸವಾಲುಗಳಿವೆ. ಹಾಗಾಗಿ, ವಿದ್ಯಾಭ್ಯಾಸವನ್ನು ಮುಗಿಸಿ ವೃತ್ತಿ ಭವಿಷ್ಯದ ಅನೇಕ ಕನಸುಗಳನ್ನು ಕಟ್ಟಿಕೊಂಡಿರುವ ನಮ್ಮ ಯುವಜನತೆಯ ಮನದಲ್ಲಿ ತಳಮಳ ಮತ್ತು ಆತಂಕ ಸಹಜವಾದದ್ದೇ.
ಆದರೆ, ನಿಮ್ಮ ವ್ಯಕ್ತಿತ್ವ, ಆಸಕ್ತಿ, ಅಭಿರುಚಿಗೆ ತಕ್ಕಂತೆ ವೃತ್ತಿಯನ್ನು ಅರಸಿ ಸೆಲೆಕ್ಷನ್‍ಗೆ ಬರುವ ಕಂಪನಿಗಳ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಅರಿತು ಪೂರ್ವಸಿದ್ಧತೆ ಮಾಡಿಕೊಂಡರೆ, ಸೆಲೆಕ್ಷನ್ ಪ್ರಕ್ರಿಯೆಯಲ್ಲಿ ಯಶಸ್ಸು ನಿಮ್ಮದಾಗಬಲ್ಲದು.
ಯಶಸ್ಸಿನ ಸೂತ್ರಗಳು
ಸಾಮಾನ್ಯವಾಗಿ ಆಯ್ಕೆಯ ಪ್ರಕ್ರಿಯೆಯಲ್ಲಿ ಆಪ್ಟಿಟ್ಯೂಡ್ ಟೆಸ್ಟ್, ಸಮೂಹ ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ ಸೇರಿದಂತೆ ಮೂರು ಹಂತಗಳಿರುತ್ತವೆ.
ಆಪ್ಟಿಟ್ಯೂಡ್ ಟೆಸ್ಟ್ ತಯಾರಿ ಹೇಗೆ?
ಈ ಟೆಸ್ಟ್ ಗಳಲ್ಲಿ ವಿಷಯ ಮತ್ತು ಇಂಗ್ಲೀಷ್ ಪರಿಣತೆ, ಸಂವಹನ ಕೌಶಲ, ತಾರ್ಕಿಕ ಆಲೋಚನಾ ಮತ್ತು ಕಲ್ಪನಾ ಶಕ್ತಿ, ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಸಂಖ್ಯಾ ಮತ್ತು ಪದಗ್ರಹಿಕೆ, ಮನೋಭಾವ, ಸ್ವಭಾವ, ವಿಶ್ವಾಸಾರ್ಹತೆ ಇತ್ಯಾದಿಗಳನ್ನು ಪರೀಕ್ಷಿಸುವ ಪ್ರಶ್ನೆಗಳಿರುತ್ತದೆ. ಮುಖ್ಯ ವಿಭಾಗಗಳಲ್ಲಿ ಮತ್ತು ಒಟ್ಟಾರೆ ಗಳಿಸಬೇಕಾದ ಕಟ್‍ಆಫ್ ಅಂಕಗಳ ಬಗ್ಗೆ ಕ್ಯಾಂಪಸ್‍ಗೆ ಬರುವ ಕಂಪನಿಗಳ ನಿಬಂಧನೆಗಳನ್ನು ಮತ್ತು ಪರೀಕ್ಷೆಯ ವಿನ್ಯಾಸವನ್ನು ಅರಿಯಿರಿ. ವ್ಯಾಕರಣದ ಕೌಶಲವನ್ನು ತೀಕ್ಷ್ಣಗೊಳಿಸಿ ಮತ್ತು ನಿಮ್ಮ ಸಾಮಾನ್ಯ ಜ್ಞಾನವನ್ನು ಪರಿಷ್ಕರಿಸಿ.
ಆಪ್ಟಿಟ್ಯೂಡ್ ಟೆಸ್ಟ್ ಗಳ ಪ್ರಶ್ನೆಪತ್ರಿಕೆಗಳನ್ನು ವೈಯಕ್ತಿಕವಾಗಿ ಅಥವಾ ಸಹಪಾಠಿಗಳ ಜೊತೆಗೂಡಿ ಉತ್ತರಿಸುವುದರಿಂದ ನಿಮ್ಮಸಾಮರ್ಥ್ಯ ಮತ್ತು ದೌರ್ಬಲ್ಯಗಳ ಅರಿವಾಗಿ ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಈ ಟೆಸ್ಟ್ ಗಳನ್ನು 4-5 ಬಾರಿ ಪ್ರಾಕ್ಟೀಸ್ ಮಾಡಿದರೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
ಸಮೂಹ ಚರ್ಚೆ
ಈ ಚರ್ಚೆಗಳೊಂದು ರೀತಿಯ ವ್ಯಕ್ತಿತ್ವ ಪರೀಕ್ಷೆಯ ವಿಧಾನ.
ಸಾಮಾನ್ಯ ತಿಳುವಳಿಕೆ, ಸಂವಹನ ಕೌಶಲ, ನಾಯಕತ್ವದ ಸಾಮರ್ಥ್ಯ ಮತ್ತು ಅಂತರ್ ವೈಯಕ್ತಿಕ ನೈಪುಣ್ಯತೆಗಳಂತಹ ಪ್ರಾರ್ಥಮಿಕ ಕೌಶಲಗಳು ಇಂದು ಎಲ್ಲಾ ಉದ್ಯೋಗಗಳಿಗೂ ಅವಶ್ಯಕ.
ಸಮೂಹ ಚರ್ಚೆಯೆಂದರೆ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಭಾಗವಹಿಸುವ 8-10 ಅಭ್ಯರ್ಥಿಗಳು ಒಟ್ಟಾಗಿ ಸೇರಿ ಪ್ರಚಲಿತ ವಿಷಯವನ್ನು ಚರ್ಚಿಸುವುದು. ಉದಾಹರಣೆಗೆ ನಮ್ಮ ಶಿಕ್ಷಣ ಪದ್ಧತಿ, ಜಾಗತಿಕರಣ ಮತ್ತು ಆರ್ಥಿಕ ಪ್ರಗತಿ; ಯುವಜನಾಂಗದ ಸಮಸ್ಯೆಗಳು ಇತ್ಯಾದಿ, ಕಂಪನಿಯ ನಿರ್ವಾಹಕರು ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಆದರೆಚರ್ಚೆಯ ಸ್ವರೂಪ, ಅಭ್ಯರ್ಥಿಗಳ ಭಾಗವಹಿಸುವಿಕೆ, ಪ್ರಕ್ರಿಯೆ ಕುರಿತು ಟಿಪ್ಪಣಿ ಮಾಡಿಕೊಳ್ಳುತ್ತಿರುತ್ತಾರೆ.
ಮೊದಲು ಚರ್ಚೆಯನ್ನು ಶುರು ಮಾಡುವರು ನಿರ್ವಾಹಕರ ಗಮನವನ್ನು ಸೆಳೆಯುತ್ತಾರೆ. ಆದರೆ, ವಿಷಯದ ಬಗ್ಗೆ ನಿಮಗೆ ಅರಿವೇ ಇರದಿದ್ದರೆ?
ಚಿಂತಿಸುವ ಅಗತ್ಯವಿಲ್ಲ; ಎಲ್ಲರಿಗೂ ಚರ್ಚೆಯನ್ನು ಕ್ರಮಬದ್ಧವಾಗಿ ಪಾಲಿಸಲು ಸಲಹೆಯನ್ನು ನೀಡಿ. ಉದಾಹರಣೆಗೆ, “ಸ್ನೇಹಿತರೆ, ಈಗ ಚರ್ಚೆಯನ್ನು ಪ್ರಾರಂಭಿಸಿ ಒಂದು ನಿಮಿಷದ ಮಿತಿಯಲ್ಲಿ ಎಲ್ಲರೂ ಕ್ರಮಭದ್ಧವಾಗಿ ಮಾತನಾಡೋಣ. ಶಶಿ…ನೀವು ಮೊದಲು ಮಾತನಾಡಬಯಸುತ್ತೀರ?”ಈ ರೀತಿ, ಉಪಾಯವಾಗಿ ಚರ್ಚೆಯ ಮುಂದಾಳತ್ವ ವಹಿಸಿದರೆ, ನಿರ್ವಾಹಕರ ಗಮನವನ್ನು ಸೆಳೆಯುವುದರ ಜೊತೆಗೆ ನಿಮಗೆ ವಿಷಯದ ಸಂಪೂರ್ಣ ಮಾಹಿತಿಲಭಿಸುತ್ತದೆ.
ನಿಮ್ಮ ಅಭಿಪ್ರಾಯವನ್ನು ಮಂಡಿಸುವಾಗ, ಪ್ರಸಿದ್ಧ ವ್ಯಕ್ತಿಗಳ ಉಲ್ಲೇಖನಗಳನ್ನೂ, ಹೋಲಿಕೆಗಳನ್ನೂ ಬಳಸಿದರೆ, ನಿಮ್ಮವಾದಗಳು ಇನ್ನೂ ಪರಿಣಾಮಕಾರಿಯಾಗಿರುತ್ತದೆ.
ಕೆಲವೊಮ್ಮೆ, ಇಂತಹ ಚರ್ಚೆಗಳಲ್ಲಿ ಗೊಂದಲ, ಕಲಹಗಳಾಗಬಹುದು; ಅಥವಾ ಆಕ್ರಮಣಕಾರಿ ಅಭ್ಯರ್ಥಿಗಳಿದ್ದು, ಸೌಮ್ಯ ಸ್ವಭಾವದ ಅಭ್ಯರ್ಥಿಗಳಿಗೆ ಮಾತನಾಡಲು ಅವಕಾಶವಿಲ್ಲದಾಗಬಹುದು. ಹೀಗಾದಲ್ಲಿ ಚರ್ಚೆಯ ಸ್ವರೂಪವನ್ನು ಬದಲಾಯಿಸಿ ನಿರೂಪಕರಾಗಲು ಪ್ರಯತ್ನಿಸಿ.
ಚರ್ಚೆ ಮುಗಿಯುವುದಕ್ಕೆ ಮುಂಚೆ, ಚರ್ಚೆಯ ಸಾರಾಂಶವನ್ನು ಗುಂಪಿನ ಅನಧಿಕೃತ ಪ್ರತಿನಿಧಿಯಂತೆ ಒತ್ತಿ ಹೇಳುವುದರಿಂದ ನಿಮ್ಮ ನಾಯಕತ್ವದ ಗುಣಗಳು ಎದ್ದುಕಾಣುತ್ತದೆ.
ವೈಯಕ್ತಿಕ ಸಂದರ್ಶನ
ಸಂದರ್ಶಕರು ಕೇಳುವ ಸರಳ ಮತ್ತು ಸಾಮಾನ್ಯ ಪ್ರಶ್ನೆಗಳ ಹಿಂದೆ ನಿಮ್ಮ ವ್ಯಕ್ತಿತ್ವವನ್ನು ಗ್ರಹಿಸುವ ಉದ್ದೇಶವಿರುತ್ತದೆ. ಅಂದರೆ, ಒಂದು ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಶ್ನೆಗಳನ್ನು ಕ್ರಮವಾಗಿ ಕೇಳುತ್ತಾ ಹೋಗುವುದು ಸಂದರ್ಶನದ ಮುಖ್ಯತಂತ್ರ. ಉದಾಹರಣೆಗೆ, ‘ನೀವು ಬಿಡುವಿನಲ್ಲಿ ಯಾವ ಆಟವನ್ನಾಡ ಬಯಸುತ್ತೀರಿ ಎನ್ನುವುದು ಅತ್ಯಂತ ಸಾಮಾನ್ಯ ಪ್ರಶ್ನೆಯೆಂದು ನಿಮಗೆ ಅನಿಸಬಹುದು. ಆದರೆ, ಈ ನಿಟ್ಟಿನಲ್ಲಿ ಪ್ರಶ್ನೆಗಳನ್ನು ಉತ್ತರಿಸುತ್ತಾ ಹೋದಂತೆ, ನಿಮ್ಮ ವ್ಯಕ್ತಿತ್ವದ ಬಗ್ಗೆ ಅಭಿಪ್ರಾಯ ಮೂಡುತ್ತಿರುತ್ತದೆ.
ಉದಾಹರಣೆಗೆ, ಫುಟ್‍ಬಾಲ್ ಆಟಗಾರ ಮತ್ತು ಚೆಸ್ ಆಟಗಾರನ ವ್ಯಕ್ತಿತ್ವದಲ್ಲಿ ಗಮನಾರ್ಹ ವ್ಯತ್ಯಾಸಗಳಿರುತ್ತವೆ. ಸೂಕ್ಷ್ಮವಾದ ಈ ವ್ಯತ್ಯಾಸಗಳನ್ನು ಗುರುತಿಸಿ, ವೃತ್ತಿಯ ಅವಶ್ಯಕತೆಗಳಿಗೂ, ನಿಮ್ಮ ಸಾಮರ್ಥ್ಯ ಮತ್ತು ವ್ಯಕ್ತಿತ್ವದ ವೈಶಿಷ್ಟ್ಯತೆಗೂ ಹೋಲಿಸಿ, ವೃತ್ತಿಯಲ್ಲಿ ನಿಮ್ಮ ಸಫಲತೆಯ ಸಾಧ್ಯತೆಯನ್ನು ಅಂದಾಜು ಮಾಡಿ, ಅಂತಿಮ ಆಯ್ಕೆ ಮಾಡುವುದೇ ಸಂದರ್ಶಕರ ಜವಾಬ್ದಾರಿ. ಆದ್ದರಿಂದ, ಪಠ್ಯೇತರ ವಿಷಯಗಳ ಕುರಿತ ಪ್ರಶ್ನೆಗಳು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವುದರಿಂದ, ಎಚ್ಚರದಿಂದಿರುವುದು ಸೂಕ್ತ.
ವೃತ್ತಿಜೀವನದಲ್ಲಿ ಅನೇಕ ಸವಾಲುಗಳನ್ನೂ, ಸಂದಿಗ್ಧ ಸನ್ನಿವೇಶಗಳನ್ನೂ ಎದುರಿಸುವಾಗ, ಮಾನಸಿಕ ಒತ್ತಡವಾಗುವುದು ಸಹಜ. ಹಾಗಾಗಿ, ಸಂದರ್ಶಕರು ಉದ್ದೇಶಪೂರ್ವಕವಾಗಿ ಒತ್ತಡ ತರುವಂತಹ ಪ್ರಶ್ನೆಗಳನ್ನೂ, ಸನ್ನಿವೇಶಗಳನ್ನೂ ಸೃಷ್ಠಿಸಿ, ಅಭ್ಯರ್ಥಿಗಳ ಯೋಗ್ಯತೆಯನ್ನು ನಿರ್ಧರಿಸುತ್ತಾರೆ. ಇಂತಹ ಪ್ರಶ್ನೆಗಳಿಗೆ ಸೌಮ್ಯವಾಗಿ ಸಮಯೋಚಿತವಾಗಿ ಉತ್ತರಿಸುವುದರಿಂದ, ನಿಮ್ಮ ವ್ಯಕ್ತಿತ್ವದ ಪ್ರೌಢತೆ ಎದ್ದು ಕಾಣುತ್ತದೆ.
ವೈಯಕ್ತಿಕ ಸಂದರ್ಶನದಲ್ಲಿ ಪ್ರಶ್ನೆಗಳು ಹೀಗಿರಬಹುದು
- ನಿಮ್ಮ ಬಗ್ಗೆ ಏನನ್ನು ಹೇಳಲು ಬಯಸುತ್ತೀರ?
- ನಿಮ್ಮ ವೃತ್ತಿ ಜೀವನದ ಕನಸುಗಳೇನು?
- ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು?
- ನಿಮ್ಮ ಈವರೆಗಿನ ಹಾದಿಯಲ್ಲಿನ ಸಾಧನೆಗಳೇನು?
- ನಮ್ಮ ಕಂಪನಿಯನ್ನೇ ಏಕೆ ಸೇರಬಯಸುತ್ತೀರ?
- ಇನ್ನು ಐದು/ಹತ್ತು ವರ್ಷಗಳಲ್ಲಿ ನೀವು ಯಾವ ಹಂತ/ಪದವಿಯನ್ನು ಗಳಿಸಲು ಇಚ್ಛಿಸುತ್ತೀರ? ಮತ್ತು ಹೇಗೆ?
ಸಂದರ್ಶನ ನಡೆಯುವಾಗ ನಿಮಗರಿವಿಲ್ಲದಂತೆಯೇ ನಿಮ್ಮ ವಿವಿಧ ಕೌಶಲಗಳ ಪರೀಕ್ಷೆಯಾಗುತ್ತಿರುತ್ತದೆ. ಕಂಪನಿಗಳು ಅಥವಾ ಶಿಕ್ಷಣ ಸಂಸ್ಥೆ ಡ್ರೆಸ್‍ಕೋಡ್ ಸೂಚಿಸದಿದ್ದರೆ, ನಿಮ್ಮ ವೇಷಭೂಷಣ ಸಾಂಪ್ರದಾಯಿಕವಾಗಿದ್ದು, ಅಚ್ಚುಕಟ್ಟಾಗಿರಲಿ. ಏಕೆಂದರೆ, ಸಂದರ್ಶಕರು ನಿಮ್ಮನ್ನು ನೋಡಿದ ಮೊದಲ ಕ್ಷಣದ ಅನಿಸಿಕೆ ಮುಖ್ಯ. ಹಾಗಾಗಿ, ದೇಹಭಾಷೆಗೂ ಆಲೋಚನೆಗಳಿಗೂ ಸಾಮ್ಯತೆಯಿದ್ದು ದೇಹದ ನಿಲುವು ಮತ್ತು ಚಲನೆ, ನಿಮ್ಮೊಳಗಿನ ಸಕಾರಾತ್ಮಕ ಆಲೋಚನೆಗಳಿಗೆ ಪೂರಕವಾಗಿರಬೇಕು.
ಸಾಮಾನ್ಯವಾಗಿ, ಕ್ಯಾಂಪಸ್ ಆಯ್ಕೆಗೆ ಬರುವ ಕಂಪನಿಗಳು ಅತ್ಯುತ್ತಮ ಶ್ರೇಣಿಯಲ್ಲಿದ್ದು, ಒಳ್ಳೆಯ ಪ್ಯಾಕೇಜ್, ತರಬೇತಿ ಮತ್ತು ಸವಲತ್ತುಗಳನ್ನು ನೀಡುತ್ತವೆ. ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಯಲ್ಲಿ ಆತ್ಮವಿಶ್ವಾಸದಿಂದಲೂ, ಆಶಾಭಾವನೆಯಿಂದಲೂ ಭಾಗವಹಿಸಿ. ಕ್ಯಾಂಪಸ್ ಮೂಲಕ ನೇರ ನಾಮಕಾತಿಯಾದಲ್ಲಿ ಅದೊಂದು ಹೆಮ್ಮೆ ಮತ್ತು ವೃತ್ತಿಜೀವನದ ಯಶಸ್ಸಿನ ಏಣಿಯಂತೆ. ಆದ್ದರಿಂದ, ನಿರಂತರವಾದ ಪರಿಶ್ರಮದಿಂದ ನಿಮ್ಮ ವೃತ್ತಿ ಜೀವನದ ಕನಸುಗಳನ್ನು ಸಾಕಾರ ಮಾಡುವ ಇಂತಹ ಸದವಕಾಶಗಳನ್ನು ಬಳಸಿಕೊಳ್ಳಿ. ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಯಶಸ್ಸನ್ನು ಗಳಿಸಿ, ನಿಮ್ಮ ಪೋಷಕರು ಮತ್ತು ಶಿಕ್ಷಣ ಸಂಸ್ಥೆಯವರು ನಿಮ್ಮ ಸಾಧನೆಯನ್ನು ನೋಡಿ ಮೆಚ್ಚುವಂತಾಗಲಿ.