ಮಾರ್ಕೆಟಿಂಗ್ ಒತ್ತಡದ ವೃತ್ತಿಯಲ್ಲ

ನಿಮ್ಮ ಪರಿಶ್ರಮಕ್ಕೂ, ಸಾಧನೆಗೂ ಪ್ರತಿಫಲ ಸಿಗುವ ಉದ್ಯೋಗವೇ ಮಾರ್ಕೆಟಿಂಗ್. ಆದರೂ, ಉದ್ಯೋಗ ಮೇಳಗಳಲ್ಲಿ ಕೇಳಿ ಬರುವ ಅಭ್ಯರ್ಥಿಗಳ ಅನುಮಾನ, ಅಪನಂಬಿಕೆಗಳು: “ಮಾರ್ಕೆಟಿಂಗ್ ಅಂದರೆ ಒತ್ತಡದ ಬದುಕು”; “ಮಾರ್ಕೆಟಿಂಗ್ ಅಂದರೆ ಬೀದಿ-ಬೀದಿಯನ್ನು ಸುತ್ತಬೇಕು”; “ಸುಡುಬಿಸಿಲು, ಮಳೆ, ಚಳಿ, ಗಾಳಿಗಳನ್ನು ಲೆಕ್ಕಿಸದೆ, ಮಾಡಬೇಕಾಗುವ ಮಾರ್ಕೆಟಿಂಗ್ ಎಲ್ಲರಿಗೂ ಅಸಾಧ್ಯ”, ಇತ್ಯಾದಿ. ವಾಸ್ತವವಾಗಿ, ಈ ಅನಿಸಿಕೆಗಳಲ್ಲಿ ಸತ್ಯವಿಲ್ಲ; ಈ ಅನುಮಾನ, ಅಪನಂಬಿಕೆಗಳಿಗೆ, ಸರಿಯಾದ ಮಾಹಿತಿ, ಮಾರ್ಗದರ್ಶನವಿಲ್ಲದಿರುವುದೇ ಕಾರಣ.

ದಿನವೆಲ್ಲಾ ಸುತ್ತಬೇಕು

ಒಂದು ಕಾಲದಲ್ಲಿ ಮಾರ್ಕೆಟಿಂಗ್ ಅಂದರೆ, ಗ್ರಾಹಕರನ್ನು ನಿರ್ವಹಿಸುವಲ್ಲಿ ದಿನವೆಲ್ಲಾ ಕಳೆಯುವ ಪರಿಸ್ಥಿತಿಯಿತ್ತು. ಆದರೆ, ಈಗಿನ ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿವೆ. ತಂತ್ರಜ್ಞಾನದ ಅಭಿವೃದ್ಧಿಯಿಂದ ಗ್ರಾಹಕರೊಂದಿಗೆ ನಿಗದಿತ ಭೇಟಿಗಳೇ ಹೆಚ್ಚಾಗಿದ್ದು, ಸಣ್ಣ ವಿಷಯಗಳನ್ನು ದೂರವಾಣಿ ಅಥವಾ ಇ-ಮೇಲ್ ಮುಖಾಂತರ ವ್ಯವಹರಿಸುವುದು ವಾಡಿಕೆಯಾಗಿದೆ. ಹಾಗಾಗಿ, ವ್ಯವಹಾರಗಳು ಅಂತಿಮ ಘಟ್ಟವನ್ನು ತಲುಪಿದ ಮೇಲೆ ಅಥವಾ ಗ್ರಾಹಕರು ನಿರ್ಧಾರಗಳನ್ನು ತೆಗೆದುಕೊಳ್ಳುವ ಮನಸ್ಥಿತಿಯಲ್ಲಿರುವಾಗ ಮಾತ್ರ, ಖುದ್ದಾಗಿ ಅವರನ್ನು ಕಾಣುವುದು ಅವಶ್ಯಕ. ಆದ್ದರಿಂದ ಈ ವಾದದಲ್ಲಿ ಈಗ ತಿರುಳಿಲ್ಲ.

ಮಾನಸಿಕ ಒತ್ತಡಗಳು

ಎಲ್ಲಾ ವೃತ್ತಿಗಳಲ್ಲಿರುವಂತೆ ಮಾರ್ಕೆಟಿಂಗ್‍ನಲ್ಲಿಯೂ ಅನೇಕ ಸವಾಲುಗಳಿರುವುದು ಸಾಮಾನ್ಯ. ಇವುಗಳಲ್ಲಿ ಮುಖ್ಯವಾದುದು, ಉತ್ಪನ್ನಗಳ ಮಾರಾಟದ ಗುರಿ ಅಥವಾ ಟಾರ್ಗೆಟ್. ಆದರೆ, ಮಾರಾಟವನ್ನು ಪ್ರಚೋದಿಸುವ ಸಾಧನೋಪಾಯಗಳನ್ನು ಬಳಸಿ, ಬೇಡಿಕೆ ಮತ್ತು ನಿಮ್ಮ ಸಾಮಥ್ರ್ಯವÀನ್ನು ಗಮನದಲ್ಲಿಟ್ಟುಕೊಂಡು ಟಾರ್ಗೆಟ್‍ಗಳನ್ನು ಸೃಷ್ಟಿಸಲಾಗುತ್ತದೆ. ಹಾಂ! ಪರಿಶ್ರಮವಿಲ್ಲದೆ, ನಿಮ್ಮ ಕಾರ್ಯಾಚರಣೆಯಲ್ಲಿ ದೋಷವಿದ್ದರೆ, ಒತ್ತಡ ಸ್ವಾಭಾವಿಕ. ಆದ್ದರಿಂದ, ಟಾರ್ಗೆಟ್‍ಗಳನ್ನು ಒತ್ತಡ ತರುವ ತೊಡಕೆಂದು ಭಾವಿಸುವುದರ ಬದಲು, ನಿಮ್ಮ ಅಭಿವೃದ್ಧಿಯ ಸೋಪಾನವೆಂದು ಪರಿಗಣಿಸಬೇಕು.

ಪ್ರತಿಕೂಲ ಹವಾಮಾನ

ಮಾರ್ಕೆಟಿಂಗ್ ವೃತ್ತಿಯೆಂದರೆ ಬಿಸಿಲು, ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಕೆಲವೊಮ್ಮೆ ಕೆಲಸ ಮಾಡಬೇಕಾಗಬಹುದಾದರೂ, ಇದು ಎಲ್ಲಾ ಸಂದರ್ಭಗಳಲ್ಲೂ ಅನ್ವಯಿಸುವುದಿಲ್ಲ. ಮೇಲಾಗಿ, ಇದು ಎಷ್ಟು ನಿಖರವಾಗಿ ನಿಮ್ಮ ದೈನಂದಿನ ಕಾರ್ಯಕ್ರಮವನ್ನು ರೂಪಿಸುತ್ತೀರಿ ಎನ್ನುವುದನ್ನು ಅವಲಂಬಿಸುತ್ತದೆ. ಉದಾಹರಣೆಗೆ, ದಿನದಲ್ಲಿ 4 ಗ್ರಾಹಕರ ಭೇಟಿಗಳು ಸಾಧ್ಯವಾಗುವುದಾದರೆ, ಈ ಭೇಟಿಗಳನ್ನು ಆದಷ್ಟು ಒಂದೇ ಪ್ರದೇಶದಲ್ಲಿ-ಉದಾಹರಣೆಗೆ ಎಂ.ಜಿ.ರೋಡ್, ಇಂದಿರಾನಗರ, ಜಯನಗರ, ಇತ್ಯಾದಿ-ನಿಗದಿಸಿ, ಪ್ರತಿಕೂಲ ಹವಾಮಾನದ ಅಡಚಣೆಗಳಿಂದ ಸಾಕಷ್ಟು ಮಟ್ಟಿಗೆ ಪಾರಾಗಬಹುದು.

ಮಾರ್ಕೆಟಿಂಗ್: ಪ್ರಗತಿಯ ಮಾರ್ಗ

ಮಾರ್ಕೆಟಿಂಗ್‍ನಲ್ಲಿ ಸವಾಲುಗಳ ಜೊತೆಯಲ್ಲೇ, ಅತ್ಯುತ್ತಮ ಅವಕಾಶಗಳೂ ಇರುತ್ತವೆ. ಉದ್ಯಮಗಳಲ್ಲಿ ಎಕ್ಸಿಕ್ಯೂಟಿವ್ಸ್‍ಗಳಿಗೆ ತರಬೇತಿ, ಉತ್ತಮ ವೇತನ, ದಿನನಿತ್ಯದ ಭತ್ಯ, ಬೋನಸ್ ಮತ್ತು ನಿಮ್ಮನ್ನು ಕಾರ್ಯಪ್ರವೃತ್ತರನ್ನಾಗಿಸುವ ಅನೇಕ ಇನ್ಸೆಂಟಿವ್‍ಗಳನ್ನೂ ಆಯೋಜಿಸುತ್ತಾರೆ. ಕಂಪನಿಗಳಲ್ಲಿ ತಿಂಗಳ ಸಂಬಳಕ್ಕಿಂತ, ಇನ್ಸೆಂಟಿವ್ ಮೊತ್ತವೇ ಅಧಿಕವಾಗಿರುವ ಅನೇಕ ಯೋಜನೆಗಳನ್ನು ನಾನೇ ವಿವಿಧ ಕಂಪನಿಗಳಲ್ಲಿ ಕಾರ್ಯಗತಗೊಳಿಸಿದ್ದೀನಿ. ಆದ್ದರಿಂದ, ಎಕ್ಸಿಕ್ಯೂಟಿವ್ಸ್‍ಗಳ ತಿಂಗಳ ಒಟ್ಟು ಆದಾಯ ಅವರ ಮೇಲಧಿಕಾರಿಗಳಿಗಿಂತ ಅಧಿಕವಾಗಿರುವುದು ಸಾಮಾನ್ಯ. ಈ ಕಾರಣಗಳಿಂದಲೇ, ಮಾರ್ಕೆಟಿಂಗ್ ವೃತ್ತಿಯಲ್ಲಿ ಹಣಗಳಿಕೆಯೊಂದಿಗೆ, ಶೀಘ್ರವಾದ ಪ್ರಗತಿಯನ್ನೂ ಗಳಿಸಹುದು.

ಮಾರ್ಕೆಟಿಂಗ್ ಉದ್ಯೋಗಗಳ ವೈವಿಧ್ಯತೆ

ಮಾರ್ಕೆಟಿಂಗ್ ಉದ್ಯಮವನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಬಹುದು.

  • ದಿನನಿತ್ಯದ ಬಳಕೆಯ ಅಲ್ಪ ಮೌಲ್ಯದ ಉತ್ಪನ್ನಗಳು: [ಆಹಾರ ಧಾನ್ಯಗಳು, ಹಾಲು, ತುಪ್ಪ, ಎಣ್ಣೆ, ಸೋಪ್, ಟೂತ್ ಪೇಸ್ಟ್, ಇತ್ಯಾದಿ]
  • ದೀರ್ಘಕಾಲ ಉಪಯೋಗಿಸುವ ಉತ್ಪನ್ನಗಳು: [ಮೋಟಾರ್ ವಾಹನಗಳು, ಟಿ.ವಿ., ರೆಫ್ರಿಜರೇಟರ್, ಮೊಬೈಲ್ ಫೋನ್, ಇತ್ಯಾದಿ]
  • ಕೈಗಾರಿಕೆಗಳಲ್ಲಿ, ಉದ್ದಿಮೆಗಳಲ್ಲಿ ಬಳಸುವ ಉತ್ಪನ್ನಗಳು: [ಉಕ್ಕು, ಕಬ್ಬಿಣ, ಕಚ್ಚಾ ಪದಾರ್ಥಗಳು, ಸಂಸ್ಕರಿಸಿದ ಪದಾರ್ಥಗಳು, ಇತ್ಯಾದಿ]
  • ಗ್ರಾಹಕರ ಸೇವೆಗಳು [ವಿಮಾನಯಾನ, ಹೋಟೆಲ್, ಆಸ್ಪತ್ರೆ, ಮೊಬೈಲ್ ಸರ್ವೀಸ್, ಮಾಧ್ಯಮ ಮತ್ತು ಪ್ರಚಾರ, ಇತ್ಯಾದಿ]

ಮಾರ್ಕೆಟಿಂಗ್: ಆಕರ್ಷಣೀಯ ಅವಕಾಶಗಳು

ಗ್ರಾಹಕ ಕೇಂದ್ರಿತ ದೃಷ್ಟಿಕೋನದಿಂದ ಮತ್ತು ಉತ್ಪನ್ನಗಳ ವರ್ಗ, ಪ್ರಾಮುಖ್ಯತೆ ಮತ್ತು ವಿತರಣಾ ಶೈಲಿಯನ್ನಾಧಾರಿಸಿ, ಮಾರ್ಕೆಟಿಂಗ್ ನೀತಿ ಮತ್ತು ನಿಯಮಗಳನ್ನು ರಚಿಸಲಾಗುತ್ತದೆ.

ಕಂಪನಿಯ ಮಾರ್ಕೆಟಿಂಗ್‍ನ ಧ್ಯೇಯ ಮತ್ತು ಟಾರ್ಗೆಟ್‍ಗಳನ್ನು ನಿರ್ಧರಿಸುವ ಮೊದಲು, ಗ್ರಾಹಕರ ನಿಷ್ಠೆಯನ್ನು ಉಳಿಸಿ ಮತ್ತು ಬೆಳೆಸುವ ನಿಟ್ಟಿನಲ್ಲಿ, ಅನೇಕ ಕಾರ್ಯತಂತ್ರಗಳನ್ನು ರಚಿಸಲಾಗುತ್ತದೆ. ಜೊತೆಗೆ, ಮಾರ್ಕೆಟಿಂಗ್ ವಿಭಾಗದಲ್ಲಿ ಮಾರಾಟವನ್ನು ಹೆಚ್ಚಿಸಲು ಪ್ರಚೋದಿಸುವ ಅನೇಕ ಸೂತ್ರಗಳಿದ್ದು, ಅಲ್ಲಿನ ವಾತಾವರಣವನ್ನು ಸ್ಪರ್ದಾತ್ಮಕವಾಗಿಯೂ, ಸ್ಪೂರ್ತಿಯುತವಾಗಿಯೂ

ಸೃಷ್ಟಿಸಲಾಗುತ್ತದೆ. ಜೊತೆಗೆ, ನಿಮ್ಮ ವಲಯದಲ್ಲಿ, ಕಾರ್ಯತಂತ್ರಗಳನ್ನು ರೂಪಿಸುವ ಸ್ವಾತಂತ್ರ ನಿಮಗಿರುತ್ತದೆ. ಈ ರೀತಿ, ಎಲ್ಲರ ಕಾರ್ಯಕ್ಷಮತೆಯಿಂದ, ಆದಾಯ ಮತ್ತು ಮಾರುಕಟ್ಟೆಯಲ್ಲಿನ ಪಾಲು ವರ್ಧಿಸಿ, ಕಂಪನಿ ಪ್ರಗತಿಯ ಪಥದಲ್ಲಿ ಸಾಗುತ್ತದೆ; ಮತ್ತು ಇದು ನೌಕರವರ್ಗದ ಪ್ರಗತಿಗೂ ಕಾರಣವಾಗುತ್ತದೆ.

ಮಾರ್ಕೆಟಿಂಗ್‍ನ ಇನ್ನೊಂದು ಆಕರ್ಷಣೆಯೆಂದರೆ, ನಿಮ್ಮ ದೈನಂದಿನ ಚಟುವಟಿಕೆಗಳು ನೀರಸವಾಗಿರದೆ, ವೈವಿಧ್ಯಮಯವಾಗಿರುತ್ತದೆ. ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಿ, ಅವರ ನಿಷ್ಠೆಯನ್ನು ಉಳಿಸಿ, ಹೊಸ ಗ್ರಾಹಕರನ್ನು ಬೆಳೆಸುತ್ತಿದ್ದಂತೆ, ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಿ, ಬದುಕಿನ ಸವಾಲುಗಳನ್ನು ಎದುರಿಸುವ ಸೂತ್ರಗಳ ಅರಿವು, ಸಹಜವಾಗಿಯೇ ನಿಮ್ಮಲ್ಲಾಗುತ್ತದೆ.

ವೃತ್ತಿಯ ಜೊತೆ ಬದುಕಿನಲ್ಲೂ ತ್ವರಿತವಾಗಿ ಅಭಿವೃದ್ಧಿಯಾಗುವ ಹಂಬಲವಿದ್ದು ಮತ್ತು ಅದನ್ನು ಕಷ್ಟಪಟ್ಟು ಸಾಧಿಸುವ ಛಲವಿದ್ದರೆ, ಮಾರ್ಕೆಟಿಂಗ್ ವೃತ್ತಿಯನ್ನು ಆರಿಸಿಕೊಳ್ಳಿ. ಮೂಲಭೂತವಾಗಿ, ಈ ವೃತ್ತಿಯಲ್ಲಿ ಯಶಸ್ವಿಯಾಗಲು, ಕಂಪನಿ ಮತ್ತು ಅದರ ಉತ್ಪನ್ನಗಳ ಮೇಲೆ ನಿಮಗೆ ಸಂಪೂರ್ಣ ವಿಶ್ವಾಸವಿರಬೇಕು; ಆ ಉತ್ಪನ್ನಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ದೃಢನಂಬಿಕೆಯಿರಬೇಕು. ಈ ಅಚಲವಾದ ವಿಶ್ವಾಸ ಮತ್ತು ನಂಬಿಕೆಯೇ ನಿಮ್ಮ ಪ್ರತಿಭೆಯನ್ನು ಅರಳಿಸಿ, ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು.

Download PDF document

                  

About author View all posts Author website

V Pradeep Kumar

Leave a Reply

Your email address will not be published. Required fields are marked *