ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ವಾರ, ಸಹೋದ್ಯೋಗಿಗಳೊಡನೆ ಕೆಲಸದ ನಿಮಿತ್ತ ಜರ್ಮನಿಯ ನ್ಯೂರಂಬರ್ಗಿಗೆ ಹೋಗುವುದು ಒಂದು ವಾಡಿಕೆಯತಾಂಗಿದೆ. ರಕ್ತವನ್ನು ಹೆಪ್ಪುಗೊಳಿಸುವಂತಹ ಛಳಿಯಲ್ಲಿ, ಕೆಲವೊಮ್ಮೆ ಹೇರಳವಾದ ಹಿಮಪಾತ ಅಥವಾ ಜಡಿಮಳೆಯಲ್ಲಿ ಸಾವಯವ ಪದಾರ್ಥಗಳ ವಾಣಿಜ್ಯ ಮೇಳಕ್ಕೆ ಹೋಗುವಾಗ, ನಮ್ಮ ಗುರುತು ನಮಗೇ ಸಿಗದಂತಹ ತರಾವರಿ ಉಣ್ಣೆಯ ಪೋಷಾಕುಗಳನ್ನು ಧರಿಸಿಯೂ, ತಡೆಯಲಾರದ ಛಳಿಯ ಅನುಭವವನ್ನು ವಿವರಿಸಲು ಅಸಾಧ್ಯ; ಆ ಅರಿವು ಇಂದ್ರಿಯಗಳಿಂದ ಅನುಭವಿಸಿದರೇ ಮಾತ್ರ!
ಮುಂಜಾನೆಯಿಂದ ಸಂಜೆಯವರಿಗೂ ಮೇಳದಲ್ಲೇ ಇರುವುದು ಅವಶ್ಯವಾದ್ದರಿಂದ, ನ್ಯೂರಂಬರ್ಗಿನ ಇತಿಹಾಸದ ಕುರುಹಾಗಿ ಉಳಿದಿರುವ ಸ್ಮಾರಕಗಳಿಗೆ ಅನೇಕ ವರ್ಷಗಳಿಂದ ಭೇಟಿ ಕೊಡಲು ಆಗಿರಲೇ ಇಲ್ಲ. ಹಾಗಾಗಿ, ಈ ವರ್ಷ ನೋಡಲೇಬೇಕೆಂಬ ನಮ್ಮ ಹಂಬಲ ಕೊನೆಗೂ ಈಡೇರಿತು.
ಹಿಟ್ಲರನ ಪ್ರೀತಿಪಾತ್ರ ನಗರ-ನ್ಯೂರಂಬರ್ಗ್
ಜರ್ಮನಿ ಎಂದೊಡನೆ ನೆನಪಾಗುವ ಹಿಟ್ಲರ್ನ ಸಮಾನಾರ್ಥಕ ಪದವೇ ದುಷ್ಟತನ. ಎರಡನೇ ವಿಶ್ವ ಸಮರದ ತೀವ್ರತೆ ಮತ್ತು ರೌದ್ರತೆ, ಲಕ್ಷಾಂತರ ಯಹೂದಿಗಳ, ರಷ್ಯನ್ನರ ಮೇಲೆ ನಡೆಸಿದ ಕ್ರೌರ್ಯ ಮತ್ತು ಸಾಮೂಹಿಕ ಹತ್ಯಾಕಾಂಡ, ಏಪ್ರಿಲ್ 30, 1945ರಂದು ಪ್ರೇಯಸಿಯೊಡನೆ ತಾವೇ ತಂದುಕೊಂಡ ದುರಂತ ಸಾವು ಇತ್ಯಾದಿ ನೆನಪುಗಳು ಸಾಮಾನ್ಯ. ನಿಜಕ್ಕೂ ಅವನಂತಹ ಕ್ರೂರ, ಆಕರ್ಷಕ ವ್ಯಕ್ತಿತ್ವ ಇತಿಹಾಸವನ್ನೆಷ್ಟು ಕೆದಕಿದರೂ ಸಿಗಲಾರದು. ಈ ಕಾಲಘಟ್ಟದಲ್ಲಿ ಫ್ರಾಂಕ್ಫರ್ಟ್, ಬರ್ಲಿನ್, ಮೂನಿಚ್, ಕೊಲೋನ್ ನಗರಗಳಂತೆ ನ್ಯೂರಂಬರ್ಗ್ ಹೆಸರುವಾಸಿಯಲ್ಲ; ಆದರೆ, ಹಿಟ್ಲರ್ ಹಾಗೂ ನಾಜಿû ಪಕ್ಷದ ಸಂಘಟನಾ ಸಮಾವೇಶ, ಸಭೆಗಳಿಗೂ, ವಿಶ್ವಸಮರದ ಎಲ್ಲ ಆಗುಹೋಗುಗಳಿಗೂ, ಮೂಕಸಾಕ್ಷಿಯಂತಿದೆ ಇಂದಿನ ನ್ಯೂರಂಬರ್ಗ್.
ಹಿಟ್ಲರ್ ಇತಿಹಾಸದ ಅತ್ಯಂತ ಕ್ರೂರ ಸರ್ವಾಧಿಕಾರಿಯೆನ್ನುವುದು ನಿರ್ವಿವಾದ. ಅವನ ಪ್ರಭಾವೀ ನಾಯಕತ್ವದ ಹಿಂದೆ ಇಡೀ ಜರ್ಮನಿಯನ್ನು ಅತ್ಯಂತ ಬಲಿಷ್ಟ ರಾಷ್ಟ್ರವನ್ನಾಗಿ ಮಾರ್ಪಡಿಸುವ ಮಹತ್ವಾಕಾಂಶೆಯೊಂದಿಗೆ ಪಕ್ಷವನ್ನು ಕಟ್ಟಲು ಬೇಕಾದ ದೂರದೃಷ್ಟಿ ಮತ್ತು ಮೂಲಭೂತ ಸಂಪನ್ಮೂಲಗಳ ಅರಿವಿತ್ತು. ಹಿಟ್ಲರನ ವ್ಯಕ್ತಿತ್ವವನ್ನು ಕೂಲಂಕುಶವಾಗಿ ಅಧ್ಯಯನ ಮಾಡಿರುವ ಮನೋವಿಜ್ಞಾನಿಗಳ ಅಭಿಪ್ರಾಯದಂತೆ, ತನ್ನಲ್ಲಿನ ಆಂತರಿಕ ದೌರ್ಬಲ್ಯಗಳಿಂದ ಪಾರಾಗಲು, ತನ್ನ ಹಿರಿಮೆಯನ್ನು ತೋರಿಸುವ ಹಂಬಲವಿತ್ತು; ಹಾಗಾಗಿ ಎಲ್ಲವನ್ನೂ ಅದ್ದೂರಿಯಾಗಿ, ವೈಭವೀಕರಿಸುವ ತಂತ್ರಗಾರಿಕೆಯಿತ್ತು.
ಹಿಟ್ಲರ್- ಪರಿಣಾಮಕಾರಿ ಸಂವಹನಕಾರ
ರಾಷ್ಟ್ರನಾಯಕರುಗಳಿಗೆ ಜನತೆಯ ಬೆಂಬಲ ಗಳಿಸಲು, ಆಶಯಗಳನ್ನು, ಕನಸುಗಳನ್ನು ವೈಭವೀಕರಿಸಿ, ಮನಮುಟ್ಟುವ ಮಾತುಗಾರಿಕೆಯೇ ಅತಿಮುಖ್ಯ. ಹಿಟ್ಲರನ ಮಾತುಗಾರಿಕೆ ಅಸಾಧಾರಾಣ ಮತ್ತು ಪ್ರಖ್ಯಾತ. ಲಕ್ಷಾಂತರ ಸಭಿಕರೊಡನೆ ನೇರ ದೃಷ್ಟಿ ಸಂಪರ್ಕ, ದೇಶಪ್ರೇಮದ ಆವೇಶದ ಮಾತುಗಳಿಗೂ, ಹಾವಭಾವಗಳ ದೇಹಭಾಷೆಗೂ ಎಡಬಿಡದ ಸಾಮರಸ್ಯ; ಧ್ವನಿಯ ಏರಿಳಿತ, ಧಾಟಿ, ಶೈಲಿಗಳಿಂದ ಹಿಟ್ಲರನ ಸಂವಹನಾ ಕೌಶಲ್ಯ ಅತ್ಯಂತ ಪರಿಣಾಮಕಾರಿಯಾಗಿತ್ತು. ಜರ್ಮನಿಯನ್ನು ಜಗತ್ತಿನ ಅತ್ಯಂತ ಬಲಿಷ್ಟ ರಾಷ್ಟ್ರವನ್ನಾಗಿಸುವ ಕನಸನ್ನು ನನಸಾಗಿಸಲು ರೈತ, ಕಾರ್ಮಿಕ ಮತ್ತು ಜನಸಾಮಾನ್ಯರ ಬೆಂಬಲದ ಅವಶ್ಯಕತೆಯನ್ನು ಭಾವೋದ್ವೇಗದೊಂದಿಗೆ ವಿವರಿಸುತ್ತಿದ್ದ. ಜೊತೆಗೆ, ತಾನು ಸುಳ್ಳು ಹೇಳಲಾರೆ, ಮೋಸ ಮಾಡಲಾರೆಯೆಂದು ಪದೇ ಪದೇ ಹೇಳುತ್ತಿದ್ದ ಹಿಟ್ಲರನಿಗೆ ಯಾವುದೇ ಸುಳ್ಳು ಆಶ್ವಾಸನೆಯನ್ನು ಅತಿಶಯೋಕ್ತಿಸಿ, ಪುನರಾವರ್ತಿಸುತ್ತಾ ಹೋದಲ್ಲಿ ಜನತೆಯ ವಿಶ್ವಾಸಗಳಿಸಬಹುದೆಂಬ ಬಲವಾದ ನಂಬಿಕೆಯಿತ್ತು. ಸತ್ಯವಾದ ಈ ಒಳಗುಟ್ಟೇ ಇಂದಿನ ರಾಜಕೀಯ ಕ್ಷೇತ್ರ ಮತ್ತು ಪ್ರಚಾರ, ಜಾಹೀರಾತು ಉದ್ಯಮದ ಜೀವಾಳ!
ನ್ಯೂರಂಬರ್ಗ್, ಜರ್ಮನಿಯ ವೈಶಿಷ್ಟ್ಯಪೂರ್ಣ ಜರ್ಮನ್ ನಗರವೆಂದೆನ್ನುತ್ತಿದ್ದ ಹಿಟ್ಲರನಿಗೆ ಪ್ರೀತಿಪಾತ್ರ. 1933ರಲ್ಲಿ ಹಿಟ್ಲರ್, ನ್ಯೂರಂಬರ್ಗ್ ನಗರವನ್ನು ನಾಜಿû ಪಕ್ಷದ ಎಲ್ಲ ಪ್ರಚಾರ ಸಭೆಗಳ ನಗರವೆಂದು ಘೋಷಿಸಿದ ಮೇಲೆ, ಅದಕ್ಕಾಗಿ ಸೂಕ್ತ ಮೈದಾನಗಳನ್ನು ಮತ್ತು ಕಟ್ಟಡಗಳನ್ನು ನಿರ್ಮಿಸಲು ನಿರ್ಧರಿಸಲಾಯಿತು. ಅಂತೆಯೇ, 1934ರಲ್ಲಿ ಹಿಟ್ಲರನ ನಂಬಿಕೆಗೆ ಪಾತ್ರನಾದ ವಾಸ್ತುಶಿಲ್ಪಿ ಆಲ್ಬರ್ಟ್ ಸ್ಪೀರ್ ತಯಾರಿಸಿದ ಪ್ಲಾನ್ ಅನುಮೋದನೆಯಾಯಿತು.
ಸುಮಾರು 11 ಕಿ.ಮೀ. ವಿಸ್ತಾರದ ಸಂಕೀರ್ಣದಲ್ಲಿ ವಿವಿಧೋದ್ದೇಶಕ್ಕಾಗಿ ಬಳಸಲು 10 ಕಟ್ಟಡಗಳ ನಕ್ಷೆಯನ್ನು ಸ್ಪೀರ್ ತಯಾರಿಸಿದ.
1. ಲೂಯಿಪೋಲ್ಡ್
ಈ ವೇದಿಕೆಯಲ್ಲಿನ ಸ್ಥಳಾವಾಕಾಶವೆಷ್ಟು ಗೊತ್ತೇ? ಸುಮಾರು 1,50,000 ಪಕ್ಷದ ಕಾರ್ಯಕರ್ತರು ಮತ್ತು ನಿವಾಸಿಗಳು ಕುಳಿತುಕೊಳ್ಳಲು ನಿರ್ಮಿಸಿದ ಈ ಬೃಹತ್ ಸಭಾಂಗಣವೇ 1935ರಿಂದ ನಡೆದ ನಾಜಿû ಪಕ್ಷದ ಎಲ್ಲ ಸಮಾವೇಶಗಳಿಗೆ ಸಾಕ್ಷಿ. ಇಲ್ಲಿಯೇ, ಸಮರದಲ್ಲಿ ಮೃತರಾದ ಯೋಧರಿಗೆ ಗೌರವ ಸೂಚಿಸುವ ಮತ್ತು ನಾಗರಿಕರಲ್ಲಿ ದೇಶಾಭಿಮಾನವನ್ನು ಬೆಳೆಸುವ ಕಾರ್ಯಕ್ರಮಗಳೂ ನಡೆಯುತ್ತಿತ್ತು.
2. ಕಾಂಗ್ರೆಸ್ ಹಾಲ್
ಈ ಭವನವನ್ನು ನಾಜಿû ಪಕ್ಷದ ಅಂತರಾಷ್ಟ್ರೀಯ ವಿಭಾಗದ ಅವಶ್ಯಕತೆಗಾಗಿ ನಿರ್ಮಿಸಲು ಆಯೋಜಿಸಲಾಯಿತು. ಇದರ ಆಯೋಜನೆಯ ಸ್ಪೂರ್ತಿ ರೋಮ್ ನಗರದ ಕೊಲೊಸಿಯಮ್ ಕಟ್ಟಡ. ಸುಮಾರು 50,000 ಜನರಿಗಾಗಿ ಇಲ್ಲಿ ಸ್ಥಳಾವಕಾಶ ಕಲ್ಪಿಸುವ ಉದ್ದೇಶವಿತ್ತು.
1935ರಲ್ಲಿ ಈ ಭವನಕ್ಕೆ ಅಡಿಗಲ್ಲನ್ನು ಹಾಕಲಾದರೂ, ಎರಡನೇ ವಿಶ್ವ ಸಮರದ ಕಾರಣದಿಂದ ಇದರ ಛಾವಣಿ ಪೂರ್ಣಗೊಳ್ಳಲೇ ಇಲ್ಲ. ಅಪೂರ್ಣವಾಗಿರುವ ಈ ಭವನದ ನಿರ್ವಹಣೆಯ ಜವಾಬ್ದಾರಿಯನ್ನು ನ್ಯೂರಂಬರ್ಗಿನ ಮುನಿಸಿಪಾಲಿಟಿಗೆ ವಹಿಸಲಾಗಿದೆ.
3. eóÉಪ್ಲಿನ್ ಫೀಲ್ಡ್
ಸುಮಾರು 1 ಲಕ್ಷ ಜನರು ಸೇರಬಹುದಾದ ಈ ಬೃಹತ್ ಮೈದಾನವನ್ನು ಸ್ಪೀರ್ ತಯಾರಿಸಿದ ನಕ್ಷೆಯ ಪ್ರಕಾರ 1935- 1937ರ ನಡುವೆ ನಿರ್ಮಿಸಲಾಯಿತು. ಈ ಎಲ್ಲ ಕಟ್ಟಡಗಳನ್ನು ಬೃಹತ್ ಪ್ರಮಾಣದಲ್ಲಿ ನಿರ್ಮಿಸುವದರ ಉದ್ದೇಶ, ಕಾರ್ಯಕರ್ತರ ವೈಯಕ್ತಿಕ ವ್ಯಕ್ತಿತ್ವ ತ್ರುಣಕ್ಕೆ ಸಮಾನವೆಂದೂ, ಆದರೂ ತಾವೊಂದು ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇವೆ ಎನ್ನುವ ಭಾವನೆಯನ್ನು ಮೂಡಿಸುವುದಾಗಿತ್ತು. ಇಲ್ಲಿಯೇ, 1938ರಲ್ಲಿ ಹಿಟ್ಲರ್ ಕೊನೆಯ ಬಾರಿಗೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಎನ್ನುವುದನ್ನು ಸ್ಮರಿಸಬಹುದು. ತದನಂತರ, ಎರಡನೇ ವಿಶ್ವಸಮರ ಆರಂಭವಾಯಿತು; ಆ ಸಮರದ ಅಂತ್ಯದಲ್ಲಿ, 1945ರಲ್ಲಿ ಈ ಕಟ್ಟಡದ ಮೇಲ್ಭಾಗದಲ್ಲಿದ್ದ ನಾಜಿû ಪಕ್ಷದ ಸ್ವಸ್ತಿಕ್ ಚಿನ್ಹೆಯನ್ನು ಅಮೇರಿಕದ ಸೇನೆಯವರು ಸಾಂಕೇತಿಕವಾಗಿ ಸ್ಪೋಟಿಸಿದರು.
ಈಗ ನ್ಯೂರಂಬರ್ಗ್ ಮುನಿಸಿಪಾಲಿಟಿಯವರು ಇದರ ನಿರ್ವಹಣೆಯನ್ನು ಮಾಡುತ್ತಿದ್ದು, ಸಾರ್ವಜನಿಕ ಕಾರ್ಯಕ್ರಮಗಳಿಗೊಂದು ಜನಪ್ರಿಯ ತಾಣ.
4. ಮುನಿಸಿಪಲ್ ಸ್ಟೇಡಿಯಮ್
ಪಕ್ಷದ ಯುವ ವಿಭಾಗದ ಪೆರೇಡ್ ಮತ್ತಿತರ ಚಟುವಟಿಕೆಗಳಿಗೆ, 1923 ಮತ್ತು 1928ರ ನಡುವೆ ನಿರ್ಮಿಸಲಾದ ಸ್ಟೇಡಿಯಮ್ನ್ನು ಬಳಸಿಕೊಳ್ಳಲಾಯಿತು. ಅನೇಕ ಬಾರಿ ನವೀಕರಣಗೊಂಡಿರುವ ಈ ಸ್ಟೇಡಿಯಮ್, ವಿಶ್ವ ಫುಟ್ಬಾಲ್ ಸೇರಿದಂತೆ ಅನೇಕ ಕ್ರೀಡಾ ಚಟುವಟಿಕೆಗಳಿಗೆ ಜನಪ್ರಿಯ.
ಸ್ವಾಭಿಮಾನಿ ಮೇಯರ್
ಸುಮಾರು ಐದು ಲಕ್ಷ ಜನಸಂಖ್ಯೆಯ ಈ ಪುಟ್ಟ ನಗರ ಇಂದು ನೂರಕ್ಕೂ ಹೆಚ್ಚಿನ ಅಂತರಾಷ್ಟ್ರೀಯ ವಾಣಿಜ್ಯ ಮೇಳಗಳಿಗೆ ಜನಪ್ರಿಯ ತಾಣ.
ನಮ್ಮ ಸಾವಯವ ಮೇಳದ ಉದ್ಘಾಟನೆಗೆ ನ್ಯೂರಂಬರ್ಗ್ ನಗರದ ಮೇಯರ್ ಬಂದಿದ್ದರು. ಸ್ವಾಗತ ಭಾಷಣದಲ್ಲಿ ನ್ಯೂರಂಬರ್ಗ್ನ ವ್ಯವಸ್ಥೆ, ಸೌಕರ್ಯಗಳ ಬಗ್ಗೆ ಅತ್ಯಂತ ಸ್ವಾಭಿಮಾನದಿಂದ ಮಾತನಾಡುತ್ತಿದ್ದರು. ನಗರದ ಮೂಲಭೂತ ಸೌಕರ್ಯ, ಸೇವೆಗಳ ದಕ್ಷತೆಯ ಕುರಿತ ಅವರ ಆತ್ಮವಿಶ್ವಾಸ, ನಮ್ಮ ನಗರಗಳ ಬಗ್ಗೆ ಕೇಳಲಸಾಧ್ಯ!
ಜರ್ಮನಿ ಸೇರಿದಂತೆ ಅನೇಕ ಮುಂದುವರಿದ ರಾಷ್ಟ್ರಗಳಲ್ಲಿ, ವಾಣಿಜ್ಯ ಮತ್ತು ಪ್ರವಾಸೋಧ್ಯಮವನ್ನು ಉತ್ತೇಜಿಸುವ ರೀತಿ ಅನುಕರಣೀಯ. ಸಾವಯವ ಮೇಳ ಸೇರಿದಂತೆ ಇಲ್ಲಿ ನಡೆಯುವ ವಾಣಿಜ್ಯ ಮೇಳಗಳಲ್ಲಿ ಭಾಗವಹಿಸುವ ಪ್ರತಿನಿಧಿಗಳು ನಗರದ ಬಸ್, ಮೆಟ್ರೊಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ನಗರದ ಮೆಟ್ರೊ ಪ್ರಯಾಣ ಒಂದು ರೀತಿಯಲ್ಲಿ ವಿಶಿಷ್ಟ; ಏಕೆಂದರೆ, ಇಲ್ಲಿ ಮೆಟ್ರೋ ಟ್ರೈನಿನಲ್ಲಿ ಅಥವಾ ನಿಲ್ದಾಣದಲ್ಲಿ ತಪಾಸಣೆಯಿರುವುದಿಲ್ಲ; ಎಲ್ಲರೂ ಟಿಕೆಟ್ ಅಥವಾ ಪಾಸ್ ತೆಗೆದುಕೊಂಡೇ ಪ್ರಯಾಣಿಸುತ್ತಾರೆ ಎನ್ನುವ ನಂಬಿಕೆ ಮತ್ತು ವಿಶ್ವಾಸ.
ಇತಿಹಾಸದಲ್ಲಿ ಹಿಟ್ಲರ್ ಅತ್ಯಂತ ದುಷ್ಟ ನಾಯಕನೆಂದು ಗುರುತಿಸಲಾಗಿದೆ. ಆದರೂ, ಜರ್ಮನಿಯ ಭವಿಷ್ಯ ಜನತೆಯ ಕೈಯಲ್ಲಿದೆಯೆನ್ನುವ ವಿಶ್ವಾಸವನ್ನು ಬೆಳೆಸಿ, ಅವರಲ್ಲಿ ದೇಶಾಭಿಮಾನವನ್ನು ಮೂಡಿಸಿದ ನಾಯಕ ಹಿಟ್ಲರ್ ಎನ್ನುವುದರಲ್ಲಿ ಎರಡು ಮಾತಿಲ್ಲ.