ಇಂದಿನ ಹಣದುಬ್ಬರದ ದಿನಗಳಲ್ಲಿ, ಎಂ.ಬಿ.ಬಿ.ಎಸ್., ಬಿ.ಇ., ಎಂ.ಬಿ.ಎ., ಇತ್ಯಾದಿ ವೃತ್ತಿಪರ ಕೋರ್ಸ್‍ಗಳ ಕಾಲೇಜ್, ಹಾಸ್ಟೆಲ್ ಫೀಸ್ ಹೊಂದಿಸುವುದು ಸವಾಲೆನಿಸುತ್ತಿದೆಯೇ? ದಿನಕ್ಕೆ ಸ್ವಲ್ಪ ಸಮಯವನ್ನು ಕಾದಿಟ್ಟರೆ ಸಾಕು, ವಿದ್ಯಾರ್ಥಿಗಳಿಗೂ, ಇತರರಿಗೂ ದೈನಂದಿನ ಹಣಕಾಸಿನ ಅವಶ್ಯಕತೆಯನ್ನು ಪೂರೈಸುವ ಆವಕಾಶಗಳೀಗ ಲಭ್ಯ.
ಕೆಲಸಗಳು ಅನೇಕ; ಆಯ್ಕೆ ಸುಲಭ
ನಿಮಗಿರುವ ಸಮಯ, ಅಭಿರುಚಿ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಕೆಲಸಗಳಿವೆ.
- ಮಾರ್ಕೆಟಿಂಗ್: ಇಲ್ಲಿ ಹಲವು ಬಗೆಯ ಕೆಲಸಗಳಿವೆ. ಉದಾಹರಣೆಗೆ, ಆಫೀಸ್ ಅಥವಾ ಮನೆಯಲ್ಲಿ ಕುಳಿತು ಫೆÇೀನ್ ಮುಖಾಂತರ ಗ್ರಾಹಕರ ವಿವರಗಳನ್ನು ಶೇಖರಿಸಿ ಪ್ರಸ್ತುತಗೊಳಿಸುವುದು [ಅಪ್ಡೇಟ್], ಸಂಭಾವ್ಯ ಗ್ರಾಹಕರಿಗೆ ಉತ್ಪನ್ನಗಳ ಪ್ರಚಾರವನ್ನು ಮಾಡುವುದು ಇತ್ಯಾದಿ. ಈ ರೀತಿ, ಮಾರ್ಕೆಟಿಂಗ್ ಉದ್ಯೋಗಾವಕಾಶಗಳು ಅಪರಿಮಿತ ; ಆದಾಯ ನಿಮ್ಮ ಪರಿಶ್ರಮದ ಮೇಲೆ ಮಾತ್ರ ಅವಲಂಬಿತ.
- ಹೋಟೆಲ್, ಕಾಫಿ-ಶಾಪ್, ರೆಸ್ಟೋರೆಂಟ್‍ಗಳು: ಸ್ವಾಗತಿಸುವುದು, ಆರ್ಡರ್ ತೆಗೆದುಕೊಳ್ಳುವುದು, ಸಪ್ಲೈಸ್, ಬಿಲ್ಲಿಂಗ್, ಉಸ್ತುವಾರಿ, ಸೇವೆಯಲ್ಲಿನ ಕುಂದು ಕೊರತೆಗಳ ನಿವಾರಣೆ, ಇತ್ಯಾದಿ.
- ಮಾಧ್ಯಮಗಳು: ಟಿ.ವಿ. ಚಾನೆಲ್, ರೇಡಿಯೊ, ಪತ್ರಿಕೆಗಳ ಪ್ರಚಾರಕ್ಕಾಗಿ, ಸಂಶೋಧನೆಗಳಿಗಾಗಿ ನಿತ್ಯ ಅಥವಾ ವಾರಾಂತ್ಯದಲ್ಲಿ ಮಾಡುವ ಈ ಕೆಲಸಗಳಲ್ಲಿ, ಸಂದಾಯದೊಡನೆ ಒಳ್ಳೆಯ ಅನುಭವ ಸಹಾ ಲಭ್ಯ.
- ಅಧ್ಯಾಪನ: ನಿಮಗೆ ಗಣಿತದಲ್ಲಿ ಸಾಮಥ್ರ್ಯವಿದೆಯೇ? ಹಾಗಿದ್ದಲ್ಲಿ, ಬೇರೆ ವಿದ್ಯಾರ್ಥಿಗಳಿಗೆ ಕಲಿಸಿ ಸಹಾಯ ಮಾಡಬಾರದೇಕೆ? ಈ ರೀತಿ, ನಿಮ್ಮಲ್ಲಿರುವ ಕೌಶಲ್ಯವನ್ನು ಬೇರೆಯವರಿಗೆ ಕಲಿಸುವುದರಿಂದ, ಅಧ್ಯಾಪನದ ಜೊತೆ ಗಳಿಕೆ ಕೂಡ ಆಗುತ್ತದೆ.
- ಬರವಣಿಗೆ: ಇತ್ತೀಚೆಗೆ ಜನಪ್ರಿಯವಾಗಿರುವ ಮನೆಯಿಂದಲೂ ಮಾಡಬಹುದಾದ ಸ್ವತಂತ್ರವಾದ ಬರವಣಿಗೆಯಿಂದ [ಫ್ರೀಲಾನ್ಸ್ ಕಂಟೆಂಟ್ ರೈಟಿಂಗ್] ಅಂತರ್ಜಾಲದ ಪತ್ರಿಕೆಗಳಿಗೆ, ವೆಬ್ ಸೈಟ್‍ಗಳಿಗೆ, ಪುಸ್ತಕಗಳಿಗೆ, ಬರೆಯುವ ಮತ್ತು ಅನುವಾದಿಸುವ ಪಾರ್ಟ್ ಟೈಮ್ ಕೆಲಸಗಳಿವೆ. ಇದಲ್ಲದೆ, ಪ್ರಿಂಟ್ ಮಾಧ್ಯಮದ ಬರವಣಿಗೆಯನ್ನು ಕಂಪ್ಯೂಟರ್‍ಗೆ ಅಳವಡಿಸುವ ಕೆಲಸಗಳೂ ಇವೆ. ಹಾಂ! ಈ ಕೆಲಸಗಳಿಗೆ ಸಂದಾಯ ಡಾಲರ್‍ನಲ್ಲಿ! ಹಾಗಾಗಿ, ತಿಂಗಳಿಗೆ 40ರಿಂದ 50 ಸಾವಿರ ರೂಪಾಯಿಯ ಆದಾಯದ ಸಾಧ್ಯತೆಗಳಿವೆ!
- ಶಾಪಿಂಗ್ ಮಾಲ್: ಕ್ರೆಡಿಟ್ ಕಾರ್ಡ್, ಬ್ಯಾಂಕ್, ರೆಸಾರ್ಟ್, ಮೊಬೈಲ್ ಇತ್ಯಾದಿ ಉದ್ದಿಮೆಗಳಲ್ಲಿನ ಪೈಪೋಟಿಯಿಂದ ಪ್ರಚಾರದ ಅವಕಾಶಗಳು ಅತ್ಯಧಿಕವಾಗಿವೆ. ಅದೇ ರೀತಿ, ಮಾಲ್, ಸೂಪರ್ ಮಾರ್ಕೆಟ್‍ಗಳಲ್ಲಿ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಪ್ರವರ್ತಕರ ಅಗತ್ಯವಿರುತ್ತದೆ.
- ಪ್ರದರ್ಶನಗಳು: ಅತಿಥಿಗಳನ್ನು ಸ್ವಾಗತಿಸಿ, ಅವರನ್ನು ಪೂರ್ವನಿರ್ಧಾರಿತ ಸ್ಥಳಕ್ಕೆ ಕರೆದೊಯ್ಯುವುದು, ಉತ್ಪನ್ನಗಳ ಮಾಹಿತಿಯನ್ನು ನೀಡುವುದಂತಹ ಸರಳ ಜವಾಬ್ದಾರಿಗಳನ್ನು ನಿಭಾಯಿಸಿದರೆ, ಸಂಭಾವನೆ ಆಕರ್ಷಕ.
- ಹವ್ಯಾಸಿ ಉದ್ಯೋಗಗಳು: ನಿಮಗೆ ಸಂಗೀತ, ನೃತ್ಯ, ಚಿತ್ರಕಲೆ, ಈಜು, ಯೋಗ, ಇತ್ಯಾದಿಗಳಲ್ಲಿ ಪರಿಣತಿ ಇದ್ದಲ್ಲಿ, ಈಗಿರುವ ಬೇಡಿಕೆಯನ್ನು ಉಪಯೋಗಿಸಿಕೊಂಡು, ಗಳಿಕೆಯ ಮಾರ್ಗವನ್ನಾಗಿ ಪರಿವರ್ತಿಸಬಹುದು.
ಅನುಕೂಲಗಳೇನು?
- ಕರ್ತವ್ಯ ಮತು ಜವಾಬ್ದಾರಿ: ಸೋಮಾರಿತನ ಮಾಯವಾಗಿ, ಕರ್ತವ್ಯಗಳ ಮತ್ತು ಜವಾಬ್ದಾರಿಗಳ ಅರಿವಾಗಿ ಜೀವನದ ಮುಖ್ಯ ಪಾಠವನ್ನು ಕಲಿತಂತಾಗುತ್ತದೆ. ಹಾಗಾಗಿ, ನಡೆ, ನುಡಿಯಲ್ಲಿ ಪರಿಪಕ್ವತೆ ಬಂದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರ.
- ಶಿಸ್ತು ಮತ್ತು ಸಮಯ ಪ್ರಜ್ಞೆ: ಸಾಮಾನ್ಯವಾಗಿ ಪಾರ್ಟ್ ಟೈಮ್ ಕೆಲಸಗಳಲ್ಲಿ ಸಮಯದ ಒತ್ತಡವಿರುವುದು ಸ್ವಾಭಾವಿಕ. ಈ ಒತ್ತಡದಿಂದ, ಸಮಯ ಪ್ರಜ್ಞೆ ಮೂಡಿ, ಕೆಲಸವನ್ನು ನಿರ್ವಹಿಸುವ ಸಾಮಥ್ರ್ಯವೂ ಬೆಳೆಯುತ್ತದೆ. ಈ ಶಿಸ್ತು ಮತ್ತು ಸಮಯ ಪ್ರಜ್ಞೆ, ಜೀವನದ ಯಶಸ್ಸಿಗೆ ಅತ್ಯವಶ್ಯಕ.
- ಕೌಶಲ್ಯಗಳ ಕಲಿಯುವಿಕೆ: ಪಾರ್ಟ್ ಟೈಮ್ ಮಾರ್ಕೆಟಿಂಗ್ ಕೆಲಸಗಳಿಂದ ಸಂಬಂಧಪಟ್ಟ ಕೌಶಲ್ಯಗಳು-ಮಾತುಗಾರಿಕೆ, ವ್ಯಕ್ತಿತ್ವ ವಿಕಸನ, ಸಮಯೋಜಿತ ಜಾಣ್ಮೆ ಇತ್ಯಾದಿಗಳ-ಬಗ್ಗೆ ತರಬೇತಿ ಸಿಗುತ್ತದೆ. ಪಾರ್ಟ್ ಟೈಮ್ ಮತ್ತು ನೀವು ಅಪೇಕ್ಷಿಸುವ ಖಾಯಂ ವೃತ್ತಿಯಲ್ಲಿ ಹೊಂದಾಣಿಕೆಯಿದ್ದರೆ, ನೂತನ ಕೌಶಲ್ಯಗಳು ವೃತ್ತಿಯಲ್ಲಿ ಉಪಯೋಗಕ್ಕೆ ಬಂದು, ತ್ವರಿತವಾಗಿ ಉನ್ನತ ಪದವಿಯನ್ನು ಗಳಿಸಬಹುದು.
- ಸ್ವಾವಲಂಬನೆ: ಯೌವನದಲ್ಲಿಯೇ ಸ್ವಾವಲಂಬಿಗಳಾಗಿ ಜೀವನದಲ್ಲಿ ಮೇಲೆ ಬರುವುದು ಒಂದು ಹೆಮ್ಮೆಯ ವಿಚಾರ. ಜೊತೆಗೆ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಕೂಡಿಡಬಹುದು; ಅಗತ್ಯ ವಸ್ತುಗಳನ್ನು ಖರೀದಿಸಬಹುದು; ಸಂಸಾರಕ್ಕೂ ನೆರವಾಗಬಹುದು. ಮುಖ್ಯವಾಗಿ, ಜೀವನದ ನಿಯಮಗಳ, ಮೌಲ್ಯಗಳ ಅರಿವಾದಂತೆ, ಅಹಂಕಾರ, ಪ್ರತಿಷ್ಠೆಯ ಬದಲಾಗಿ ಆತ್ಮಾಭಿಮಾನ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.
ಪಾರ್ಟ್ ಟೈಮ್ ಕೆಲಸಗಳಲ್ಲಿ ವೈವಿಧ್ಯತೆಗಳಿವೆ; ಕಲಿಕೆಯ ದಾರಿಗಳಿವೆ. ಕುತೂಹಲವನ್ನು ಕೆರಳಿಸಿ, ಪ್ರತಿಭೆಯನ್ನು ಅರಳಿಸುವ ಸವಾಲುಗಳಿವೆ. ತಿಂಗಳೊಂದಕ್ಕೆ ಸುಮಾರು 10,000 ರೂಪಾಯಿಗಳವರೆಗೆ ಸಂಪಾದನೆಯಾಗಬಹುದು. ಅಷ್ಟೇ ಅಲ್ಲ! ಮಾನವ ಸಂಪನ್ಮೂಲ ಅಧಿಕಾರಿಗಳ ಪ್ರಕಾರ, ಇಂತಹ ಪಾರ್ಟ್ ಟೈಮ್ ಕೆಲಸಗಳು, ವಿದ್ಯಾಭ್ಯಾಸದ ನಂತರ ಖಾಯಂ ಕೆಲಸದ ನೇಮಕಾತಿಯಲ್ಲೂ ಸಹಾಯಕಾರಿ.
Super
ಪೀಣ್ಯ 2