Q&A, 2nd August, 2021
Q1. ನಾನು ಈಗ 2ನೇ ಸೆಮಿಸ್ಟರ್ ಎಂಜಿನಿಯರಿಂಗ್ (ಇಸಿ) ಮಾಡುತ್ತಿದ್ದೀನಿ. ರೈಲ್ವೇಸ್ ಪರೀಕ್ಷೆ ಮತ್ತು ತಯಾರಿ ಬಗ್ಗೆ ಮಾಹಿತಿ ನೀಡಿ. – ಶ್ರೇಯಸ್ ದೇಶ್ಪಾಂಡೆ, ಬೆಂಗಳೂರು
ರೈಲ್ವೇಸ್ ಹುದ್ದೆಗಳ ನೇಮಕಾತಿ, ಮೂರು ಹಂತದ ಪರೀಕ್ಷೆಗಳ ಮೂಲಕ ನಡೆಯುತ್ತದೆ.
- ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಹಂತ-1: ಎಲ್ಲಾ ಹುದ್ದೆಗಳಿಗೆ ಅನ್ವಯ.
- ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಹಂತ-2: ಆಯಾ ಹುದ್ದೆಗಳಿಗೆ ಅನ್ವಯವಾಗುವ ಪರೀಕ್ಷೆ.
- ವೈದ್ಯಕೀಯ ಪರೀಕ್ಷೆ/ದಾಖಲೆಗಳ ಪರಿಶೀಲನೆ.
ಈ ಎಲ್ಲಾ ಪರೀಕ್ಷೆಗಳನ್ನು 21 ವಲಯಗಳಲ್ಲಿರುವ ರೈಲ್ವೇಸ್ ರೆಕ್ರೂಟ್ಮೆಂಟ್ ಬೋರ್ಡ್ ನಡೆಸುತ್ತದೆ ಮತ್ತು ಅರ್ಹತೆಯ ಆಧಾರದ ಮೇಲೆ ನೇಮಕಾತಿ ಆಗುತ್ತದೆ. ಆದರೆ, ಕೆಲವೊಮ್ಮೆ ಕೆಳಹಂತದ ಹುದ್ದೆಗಳಿಗೆ ಅರ್ಹತೆಯ ಆಧಾರದ ಮೇಲೆ ನೇರ ನೇಮಕಾತಿ ಆಗುವುದೂ ಉಂಟು.
ಪರೀಕ್ಷೆಯ ಮಾದರಿ, ವಿಷಯಸೂಚಿಕೆ ಮತ್ತು ಹೆಚ್ಚಿನ ವಿವರಗಳಿಗಾಗಿ ಗಮನಿಸಿ: http://rrcb.gov.in/
Q2. ನಾನು 2ನೇ ಪಿಯುಸಿ ಮುಗಿಸಿ ಪ್ಯಾರಾಮೆಡಿಕಲ್ ಮಾಡಿ ಯುಪಿಎಸ್ಸಿ ಪರೀಕ್ಷೆ ಬರೆಯಬಹುದಾ?
ಯುಪಿಎಸ್ಸಿ ಪರೀಕ್ಷೆಯನ್ನು ಪ್ಯಾರಾಮೆಡಿಕಲ್ ಸೇರಿದಂತೆ ಯಾವುದೇ ಪದವಿಯ ನಂತರ ಬರೆಯಬಹುದು.
Q3. ನಾನು ಈಗಷ್ಟೇ ದ್ವಿತೀಯ ಪಿಯುಸಿ ಸೇರಿದ್ದೇನೆ. ನನಗೆ ವಿಎಫ್ಎಕ್ಸ್, ಅನಿಮೇಷನ್, ಗೇಮ್ ಡಿಸೈನಿಂಗ್ನಲ್ಲಿ ಮುಂದುವರಿಯಬೇಕು ಎಂದು ಆಸಕ್ತಿ ಇದೆ. ದ್ವಿತೀಯ ಪಿಯುಸಿ ನಂತರ ಯಾವ ಕೋರ್ಸ್ ಮಾಡಿದರೆ ಉತ್ತಮ? – ಪ್ರಜ್ವಲ್.
ಈ ಸೃಜನಾತ್ಮಕ ಕ್ಷೇತ್ರಗಳಲ್ಲಿ ಆಸಕ್ತಿಯಿದ್ದರೆ ಈ ಕ್ಷೇತ್ರದ ಸ್ಪೆಷಲೈಜೇಷನ್ ಅಂದರೆ ವಿಎಫ್ಎಕ್ಸ್, ಅನಿಮೇಷನ್, ಗೇಮ್ ಡಿಸೈನಿಂಗ್ ಮತ್ತು ಡೆವೆಲಪ್ಮೆಂಟ್ ಇರುವ ಬಿಎಸ್ಸಿ ಕೋರ್ಸ್ ಮಾಡಬಹುದು. ಈ ಕ್ಷೇತ್ರಗಳಲ್ಲಿ ಸಾಕಷ್ಟು ವೈವಿಧ್ಯತೆಗಳಿವೆ ಮತ್ತು ಅದರಂತೆ ಉದ್ಯೋಗದ ಅವಕಾಶಗಳಿವೆ. ಹಾಗಾಗಿ, ನಿಮಗೆ ಯಾವ ಸ್ಪೆಷಲೈಜೇಷನ್ನಲ್ಲಿ ಆಸಕ್ತಿಯಿದೆ ಎಂದು ತಿಳಿದು, ಅದರಂತೆ ಕೋರ್ಸ್ ಮತ್ತು ಕಾಲೇಜು ಆಯ್ಕೆ ಮಾಡಬಹುದು.
Q4. ನಾನು ಎನ್ಐಡಿ ಸ್ನಾತಕೋತ್ತರ ಸಂದರ್ಶನವನ್ನು ಮುಗಿಸಿದ್ದೇನೆ. ನಾನು ಎಸ್ಟಿ ವರ್ಗಕ್ಕೆ ಸೇರಿದ್ದು ಒಂದು ವೇಳೆ ಪಾಸಾದರೆ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿ. ಇದಕ್ಕೆ ಉದ್ಯೋಗದ ಅವಕಾಶ ಹೇಗಿದೆ? – ತುಮಕೂರು
ಅರ್ಹತೆ, ಆದಾಯದ ಆಧಾರದ ಮೇಲೆ ಎನ್ಐಡಿ ಮತ್ತು ಫೋರ್ಡ್ ಫೌಂಡೇಷನ್ ಸ್ಕಾಲರ್ಶಿಪ್ ಸೌಲಭ್ಯಗಳಿವೆ. ಹೆಚ್ಚಿನ ಮಾಹಿತಿಗಾಗಿ ಎನ್ಐಡಿ ಸಂಸ್ಥೆಯಲ್ಲಿ ವಿಚಾರಿಸಿ. ಹಾಗೂ, ನಿಮ್ಮ ವರ್ಗಕ್ಕೆ ಮತ್ತು ಎನ್ಐಡಿ ವಿದ್ಯಾರ್ಥಿಗಳಿಗೆ ಅನ್ವಯವಾಗುವ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ, ಪುಸ್ತಕಗಳು, ಉಚಿತ ಕಂಪ್ಯೂಟರ್ ಮತ್ತು ಸ್ಕಾಲರ್ಶಿಪ್ ಯೋಜನೆಗಳಿವೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: http://socialjustice.nic.in/SchemeList/Send/27?mid=24541
ಎನ್ಐಡಿ ಸ್ನಾತಕೋತ್ತರ ಕೋರ್ಸ್ ನಂತರ ಡಿಸೈನ್ ಸಂಬಂಧಿತ ಉದ್ಯೋಗಾವಕಾಶಗಳು ಅನೇಕ ಕ್ಷೇತ್ರಗಳಲ್ಲಿ ಲಭ್ಯ. ಉದಾಹರಣೆಗೆ ಫ್ಯಾಷನ್, ಟೆಕ್ಸ್ಟೈಲ್, ಲೆದರ್, ಅಪರೆಲ್, ಪ್ರಾಡಕ್ಟ್ಸ್, ಸೆರಾಮಿಕ್, ಫರ್ನಿಚರ್ ಇತ್ಯಾದಿ. ಹಾಗೂ, ಎನ್ಐಡಿ ಸಂಸ್ಥೆಯಲ್ಲಿ ಪ್ಲೇಸ್ಮೆಂಟ್ ಸೆಲ್ ಸಹಾ ಕಾರ್ಯ ನಿರ್ವಹಿಸುತ್ತಿದೆ.
Q&A for 9th August, 2021
Q1. ನಾನು ಕಮರ್ಷಿಯಲ್ ಪೈಲಟ್ ಆಗಬೇಕೆಂದುಕೊಂಡಿದ್ದೇನೆ. ಆದರೆ ಆರ್ಥಿಕ ಸಮಸ್ಯೆಯಿದೆ. ಒಬಿಸಿಗೆ ಅನ್ಯವವಾಗುವ ಸ್ಕಾಲರ್ಶಿಪ್ ಸೌಲಭ್ಯಗಳಿವೆಯೇ? – ಚವಾಣ್, ಮೈಸೂರು.
Q2. ನಾನು ದ್ವಿತೀಯ ಸೈನ್ಸ್ ಪಿಯುಸಿ ಈಗಷ್ಟೇ ಮುಗಿಸಿದ್ದು ಕಮರ್ಷಿಯಲ್ ಪೈಲಟ್ ಆಗಬೇಕೆಂದುಕೊಂಡಿದ್ದೇನೆ. ಕಮರ್ಷಿಯಲ್ ಪೈಲಟ್ ಲೈಸೆಂಸ್ (ಸಿಪಿಎಲ್) ನಂತರ ಏರ್ಲೈನ್ಸ್ನಲ್ಲಿ ಉದ್ಯೋಗ ಸಿಗಬಹುದೇ? ಬಿಎಸ್ಸಿ ಏವಿಯೇಷನ್ ಎಲ್ಲಿ ಮಾಡಬಹುದು? ಪೈಲಟ್ ಉದ್ಯೋಗಕ್ಕೆ ಭವಿಷ್ಯ ಹೇಗಿದೆ. – ಗೀತ ಗಣೇಶ್, ಬೆಂಗಳೂರು.
ಕಮರ್ಷಿಯಲ್ ಪೈಲಟ್ ಆಗಲು ಅನುಕೂಲವಾಗುವ ಅನೇಕ ಕೋರ್ಸ್ಗಳಿವೆ. ಉದಾಹರಣೆಗೆ ಬಿಎಸ್ಸಿ (ಏವಿಯೇಷನ್), ಬಿಟೆಕ್ (ಏರೋಸ್ಪೇಸ್ ಎಂಜಿನಿಯರಿಂಗ್) ಇತ್ಯಾದಿ. ಆದರೆ, ಈ ಪದವಿಗಳ ಆಧಾರದ ಮೇಲೆ ಸಿಪಿಎಲ್ ಸಿಗುವುದಿಲ್ಲ; ಆದರೆ, ಸ್ವಲ್ಪ ಸುಲಭವಾಗಬಹುದು. ಸಿಪಿಎಲ್ಗಾಗಿ ಡಿಜಿಸಿಎ ಅನುಮೋದಿತ ಸಂಸ್ಥೆಗಳಲ್ಲಿ ತರಬೇತಿ ಪಡೆದು ಕನಿಷ್ಠ 200 ಗಂಟೆಗಳಷ್ಟು ಹಾರಾಟದ ನಂತರ ಸಿಪಿಎಲ್ಗೆ ಪ್ರಯತ್ನಿಸಬಹುದು.
ಈಗ ಕೋವಿಡ್ ಕಾರಣದಿಂದ ಏರ್ಲೈನ್ಸ್ ಉದ್ದಿಮೆ ಸಂಕಷ್ಟದಲ್ಲಿದೆ. ಆದರೆ, ಇನ್ನೆರಡು ಮೂರು ವರ್ಷಗಳಲ್ಲಿ ಪುನಶ್ಚೇತನಗೊಂಡು ಪ್ರಗತಿಯ ಹಾದಿಗೆ ಬರುವ ನಿರೀಕ್ಷೆಯಿದೆ.
ಒಬಿಸಿ ವರ್ಗದ ಸಿಪಿಎಲ್ ಕೋರ್ಸ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸೌಲಭ್ಯವಿದೆ. ಹೆಚ್ಚಿನ ವಿವರಗಳಿಗೆ ಗಮನಿಸಿ: http://socialjustice.nic.in/SchemeList/Send/4?mid=32549
Q3. ಫುಲ್ ಸ್ಟ್ಯಾಕ್ ಡೆವಲಪರ್ ಕೋರ್ಸ್ ಮತ್ತು ವೆಬ್ ಡಿಸೈನೆರ್/ಡೆವಲಪರ್ ನಡುವಿನ ವ್ಯತ್ಯಾಸ, ಮಾಹಿತಿ ಮತ್ತು ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ. – ಮಧುಸೂಧನ್, ಬೆಂಗಳೂರು.
ವೆಬ್ ಡಿಸೈನರ್ ಕೋರ್ಸ್ಗಳಲ್ಲಿ ಡಿಸೈನ್ ಸಂಬಂಧಿತ ತಂತ್ರಜ್ಞಾನವನ್ನು ಕಲಿಸಲಾಗುತ್ತದೆ; ಹಾಗಾಗಿ ಇದೊಂದು ಸೃಜನಾತ್ಮಕ ವೃತ್ತಿ. ಫುಲ್ ಸ್ಟ್ಯಾಕ್ ಡೆವಲಪರ್ಸ್, ಫ್ರಂಟ್ ಎಂಡ್ ಮತ್ತು ಬ್ಯಾಕ್ ಎಂಡ್ ಕೆಲಸಗಳಿಗೆ ಅನ್ಯಯವಾಗುವ ಎಲ್ಲಾ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿರುತ್ತಾರೆ. ಹಾಗಾಗಿ, ವೆಬ್ ಡಿಸೈನ್ ಕೋರ್ಸ್ ಒಂದು ಸೀಮಿತ ವಲಯದ ಡಿಸೈನ್ ತಂತ್ರಜ್ಞಾನಗಳಿಗೆ ಸಂಬಂಧಿಸಿದ್ದು ಫುಲ್ ಸ್ಟ್ಯಾಕ್ ಡೆವಲಪರ್ ಕೋರ್ಸ್ ದತ್ತಾಂಶ, ಸರ್ವರ್, ಸಿಸ್ಟಮ್ಸ್, ಗ್ರಾಹಕ ಸಂಬಂಧಿತ ಬಹುಬಗೆಯ ಕೌಶಲಗಳನ್ನು ಕಲಿಸುವ ಸಮಗ್ರವಾದ ಕೋರ್ಸ್. ಹಾಗಾಗಿ, ಫುಲ್ ಸ್ಟ್ಯಾಕ್ ಡೆವಲಪರ್ಗಳಿಗೆ ಹೆಚ್ಚಿನ ಬೇಡಿಕೆಯಿದೆ.
Q4. ನಾನು ಈಗ ದ್ವಿತೀಯ ಪಿಯುಸಿ (ಸೈನ್ಸ್) ಓದುತ್ತಿದ್ದೇನೆ. ನಾನು ಸಿಎ ಮಾಡಲು ಸಾಧ್ಯವೇ? – ನಿತೀಶ್, ಹೊನ್ನಾಳಿ.
ಪಿಯುಸಿ (ಸೈನ್ಸ್) ಮುಗಿಸಿ ಸಿಎ ಫೌಂಡೇಷನ್ ಕೋರ್ಸ್ ಮಾಡಬೇಕು. ನಂತರ ಇಂಟರ್ಮೀಡಿಯೆಟ್ ಮತ್ತು ಫೈನಲ್ ಕೋರ್ಸ್ಗಳನ್ನು ಮಾಡಬೇಕು. ಹೆಚ್ಚಿನ ವಿವರಗಳಿಗೆ ಗಮನಿಸಿ: https://www.icai.org/
Q5. ನಾನು ಪಿಯುಸಿ ಮುಗಿಸಿ ಸಿಇಟಿಗೆ ತಯಾರಿ ನಡೆಸುತ್ತಿದ್ದೇನೆ. ಯಾವ ಎಂಜಿನಿಯರಿಂಗ್ ಕೋರ್ಸಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ? – ಬೃಂದಾ, ಮೈಸೂರು.
Q6. ನಾನು ಪ್ರಥಮ ಪಿಯುಸಿ ಓದುತ್ತಿದ್ದೇನೆ. ಬಿಟೆಕ್(ಕಂಪ್ಯೂಟರ್ ಸೈನ್ಸ್) ಕೋರ್ಸ್ ಮಾಡಿದರೆ ಒಳ್ಳೆಯದೇ? ಬಿಟೆಕ್ ಮತ್ತು ಬಿಇ ಕೋರ್ಸ್ಗಳ ವ್ಯತ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ. – ಪವನ್, ಶಿವಮೊಗ್ಗ.
ಎಂಜಿನಿಯರಿಂಗ್ ಕೋರ್ಸಿನಲ್ಲಿ ಹಲವಾರು ಸ್ಪೆಷಲೈಜೇಷನ್ಗಳಿವೆ. ಯಾವುದೇ ಸ್ಪೆಷಲೈಜೇಷನ್ ಮಾಡಿದರೂ ಸಹ, ಕೋರ್ಸ್ ಫಲಿತಾಂಶ ಉತ್ಕೃಷ್ಟವಾಗಿದ್ದರೆ ಬೇಡಿಕೆ ಇದೆ. ಕಂಪ್ಯೂಟರ್ ಸೈನ್ಸ್, ಐಟಿ, ರೊಬಾಟಿಕ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಮೆಕ್ಯಾನಿಕಲ್ ಇತ್ಯಾದಿ ಕೋರ್ಸ್ಗಳಿಗೆ ಹೆಚ್ಚಿನ ಬೇಡಿಕೆ ಇದೆ.
ವಿಶ್ವವಿದ್ಯಾಲಯಗಳ ಸಂಪ್ರದಾಯ ಮತ್ತು ಆದ್ಯತೆಯಂತೆ ಎಂಜಿನಿಯರಿಂಗ್ ಕೋರ್ಸ್ಗಳನ್ನು ಬಿಟೆಕ್ ಅಥವಾ ಬಿಇ ಎಂದು ಗುರುತಿಸಲಾಗುತ್ತದೆ. ಹಾಗಾಗಿ, ಈಗ ನಾಮಾವಳಿಯ ಭಿನ್ನತೆಯನ್ನು ಬಿಟ್ಟರೆ ಕೋರ್ಸ್ಗಳಲ್ಲಿ ವ್ಯತ್ಯಾಸಗಳಿಲ್ಲ. ಹಾಗೂ, ಉದ್ಯೋಗದ ದೃಷ್ಟಿಯಿಂದ ಎರಡೂ ಕೋರ್ಸ್ಗಳಿಗೆ ಸರಿಸಮನಾದ ಮಾನ್ಯತೆಯಿದೆ.
ಎಂಜಿನಿಯರಿಂಗ್ ಕೋರ್ಸ್ ಮಾಡಲು ತಾರ್ಕಿಕ ಪ್ರತಿಪಾದನಾ ಕೌಶಲ, ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಕೌಶಲ ಮತ್ತು ವಿಶ್ಲೇಷಣಾ ಕೌಶಲಗಳ ಜೊತೆಗೆ ಆಯಾ ಸ್ಪೆಷಲೈಜೇಷನ್ ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆ ಇರಬೇಕು.
Q7. ನಾನು ಎಂಬಿಎ ಮುಗಿಸಿದ್ದೇನೆ. ನಾನು ಕೆಎಸ್ಇಟಿ ಬರೆಯಬಹುದೇ? ಯಾವ ವಿಷಯದಲ್ಲಿ ಬರೆಯಬಹುದು? – ರಾಕೇಶ್.
ನೀವು ಕೆಎಸ್ಇಟಿ ಪರೀಕ್ಷೆಯನ್ನು ಮ್ಯಾನೇಜ್ಮೆಂಟ್ ವಿಷಯದಲ್ಲಿ ಬರೆಯಬಹುದು.
Q8. ನಾನು ಬಿಕಾಂ ಓದುತ್ತಿದ್ದೇನೆ. ಪಿಯುಸಿ ಅರ್ಹತೆಯ ಆಧಾರದ ಮೇಲೆ ರೈಲ್ವೆಯಲ್ಲಿ ಉದ್ಯೋಗ ಸಿಗಬಹುದೇ? – ಬಿಂದು ಯಮುನ, ಧಾರವಾಡ.
ಪಿಯುಸಿ ಅರ್ಹತೆಯ ಆಧಾರದ ಮೇಲೆ ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ ನಡೆಸುವ ಎನ್ಟಿಪಿಸಿ ಪರೀಕ್ಷೆಯ ಮುಖಾಂತರ ನಾನ್ ಟೆಕ್ನಿಕಲ್ ಹುದ್ದೆಗಳಿಗೆ ನೀವು ಪ್ರಯತ್ನಿಸಬಹುದು.
Q9. ನಾನು ಬಿಎ ನಾಲ್ಕನೇ ಸೆಮಿಸ್ಟರ್ ಮುಗಿಸಿ ತದನಂತರ ಆರ್ಥಿಕ ಸಮಸ್ಯೆಗಳಿಂದ ಉಳಿದ ಸೆಮಿಸ್ಟರ್ಗಳನ್ನು ಮುಗಿಸಲಾಗಲಿಲ್ಲ. ಮುಂದೇನು ಮಾಡುವುದೆಂದು ತೋಚುತ್ತಿಲ್ಲ. ನಿಮ್ಮ ಸಲಹೆ ನೀಡಿ. – ವಿ ನರಸು ಮೌರ್ಯ, ಮರ್ಚಟಹಾಳ್
ಮೊದಲು, ಉಳಿದ ಸೆಮಿಸ್ಟರ್ಗಳನ್ನು ಮುಗಿಸುವ ಸಾಧ್ಯತೆಗಳನ್ನು ಪರಿಶೀಲಿಸಿ.
ಅದು ಸಾಧ್ಯವಿಲ್ಲದಿದ್ದರೆ, ಸಂಜೆ ಕಾಲೇಜು ಅಥವಾ ದೂರ ಶಿಕ್ಷಣದ ಮುಖಾಂತರ ಮಾಡಬಹುದಾದ ಅನೇಕ ಡಿಪ್ಲೊಮ, ಸರ್ಟಿಫಿಕೆಟ್, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳಿವೆ. ಜೊತೆಗೆ, ಜಗತ್ತಿನ ಹೆಸರಾಂತ ವಿಶ್ವವಿದ್ಯಾಲಯಗಳು (ಭಾರತದ ವಿಶ್ವವಿದ್ಯಾಲಯಗಳೂ ಸೇರಿದಂತೆ) ನಡೆಸುವ ಮ್ಯಾಸ್ಸೀವ್ ಓಪನ್ ಆನ್ಲೈನ್ ಕೋರ್ಸ್ಗಳಿವೆ (ಎಂಒಒಸಿ). ಆದ್ದರಿಂದ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಕೋರ್ಸ್ ಆಯ್ಕೆ ಮಾಡಿ ವಿದ್ಯಾಭ್ಯಾಸವನ್ನು ಮುಂದುವರಿಸಿ, ನಿಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.
Q10. ಡಿಪ್ಲೊಮ (ಕಂಪ್ಯೂಟರ್ ಸೈನ್ಸ್) ನಂತರ ನಾನು ಅಗ್ರಿಕಲ್ಚರ್ ಎಂಜಿನಿಯರಿಂಗ್ ಮಾಡಬಹುದೇ? – ಸೌಂದರ್ಯ, ದಾವಣಗೆರೆ.
ಸಾಮಾನ್ಯವಾಗಿ 3 ವರ್ಷದ ಡಿಪ್ಲೊಮ ನಂತರ ಅದೇ ವಿಷಯದ ಎಂಜಿನಿಯರಿಂಗ್ ಕೋರ್ಸಿಗೆ ಅಥವಾ ಸಂಬಂಧಿತ ಕೋರ್ಸ್ಗಳಿಗೆ ಲ್ಯಾಟರಲ್ ಎಂಟ್ರಿಯ ಅವಕಾಶವಿದೆ. ಹಾಗಾಗಿ, ನೀವು ಮಾಡಿರುವ ಕಂಪ್ಯೂಟರ್ ಸೈನ್ಸ್ ಡಿಪ್ಲೊಮ ಆಧಾರದ ಮೇಲೆ ಅಗ್ರಿಕಲ್ಚರ್ ಎಂಜಿನಿಯರಿಂಗ್ ಕೋರ್ಸ್ಗೆ ಲ್ಯಾಟರಲ್ ಎಂಟ್ರಿಯ ಅವಕಾಶ ಅನುಮಾನ. ಖಚಿತವಾದ ಮಾಹಿತಿಗಾಗಿ ನೀವು ಸೇರ ಬಯಸುವ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ.
ಈ ಎಂಜಿನಿಯರಿಂಗ್ ಕೋರ್ಸಿನಲ್ಲಿ ಕೃಷಿ ಮತ್ತು ಕೃಷಿ ಉದ್ಯಮಗಳ ದಕ್ಷತೆಯನ್ನು ಸುಧಾರಿಸಲು ಹಾಗೂ ನೈಸರ್ಗಿಕ ಮತ್ತು ನವೀಕರಿಸಬಹುದಾದ ಸಂಪಲ್ಮೂಲನಗಳ ಸುಸ್ಥಿತಿಯನ್ನು ಖಚಿತಪಡಿಸಲು ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಿದ್ಧಾಂತ ಮತ್ತು ತತ್ವಗಳನ್ನು ಬಳಸಲಾಗುತ್ತದೆ.
Q11. ನಾನು ಪಿಯುಸಿ ಸೈನ್ಸ್ ಮಾಡುತ್ತಿದ್ದೇನೆ. ಮುಂದೆ ಬ್ಯಾಂಕ್ ಸೇರಬೇಕಾದರೆ ಯಾವ ಕೋರ್ಸ್ ಮಾಡಬೇಕು? – ಪ್ರಭಾಕರ್ ರೆಡ್ಡಿ.
ನೀವು ಬಿಕಾಂ (ಬ್ಯಾಂಕಿಂಗ್ ಅಂಡ್ ಫೈನಾನ್ಸ್) ಮಾಡಬಹುದು. ಆದರೆ, ಯಾವುದೇ ಪದವಿಯ ನಂತರವೂ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹುದ್ದೆಗಳಿಗೆ ಪ್ರಯತ್ನಿಸಬಹುದು. ಪದವಿಯ ನಂತರ ಐಬಿಪಿಎಸ್ ಅಥವಾ ಆಯಾ ಬ್ಯಾಂಕ್ ನಡೆಸುವ ಅರ್ಹತಾ ಪರೀಕ್ಷೆಯ ಮುಖಾಂತರ ನೇಮಕಾತಿ ಆಗುತ್ತದೆ.
Q12. ನಾನು ಬಿಬಿಎ ಮಾಡುತ್ತಿದ್ದೇನೆ. ಬಿಬಿಎ ಪದವೀಧರರಿಗೆ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಕೆಲಸ ಸಿಗಬಹುದೇ? – ಧೀರಜ್ ಎಂ, ಬೆನಕನಹಳ್ಳಿ.
ಸಾಮಾನ್ಯವಾಗಿ ಬಿಕಾಂ ಪದವೀಧರರನ್ನು ಅಥವಾ ಆರ್ಟಿಕಲ್ ತರಬೇತಿಗೆ ನೋಂದಾಯಿಸಿರುವರನ್ನು ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳು ನೇಮಕಾತಿ ಮಾಡುವ ವಾಡಿಕೆಯಿದೆ.
Q13. ನಾನು ಬಿಎಸ್ಸಿ ಕೋರ್ಸನ್ನು 2015 ರಲ್ಲಿ ಸೇರಿ ಎರಡು ವರ್ಷ ಮುಗಿಸಿ ಸರ್ಕಾರಿ ನೌಕರಿಯಲ್ಲಿದ್ದೇನೆ. ನೌಕರಿಯಲ್ಲಿದ್ದುಕೊಂಡು ಮೂರನೇ ವರ್ಷ ಮುಗಿಸಬಹುದೇ? – ಸಿದ್ದು, ವಿಜಯಪುರ.
ನೀವು ನೀಡಿರುವ ಮಾಹಿತಿಯಂತೆ ನೌಕರಿಯಲ್ಲಿದ್ದುಕೊಂಡು ಕೋರ್ಸ್ ಮುಗಿಸಲು ಸಾಧ್ಯವಿಲ್ಲವೆನಿಸುತ್ತದೆ. ಆದರೆ, ನೀವು ಉದ್ಯೋಗದಲ್ಲಿರುವ ಇಲಾಖೆಯಿಂದ ಅಧ್ಯಯನ ರಜೆ ಮಂಜೂರಾತಿ ಸಾಧ್ಯವೇ ಎಂದು ಪರಿಶೀಲಿಸಿ.
Q&A for 16th August, 2021
Q1. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಮಾಡುತ್ತಿದ್ದೇನೆ. ಆರ್ಥಿಕ ಸಮಸ್ಯೆಯಿರುವುದರಿಂದ ಕಡಿಮೆ ಶುಲ್ಕದ ಯಾವ ಕೋರ್ಸ್ ಮಾಡಿದರೆ ಉತ್ತಮ ಎಂದು ತಿಳಿಸಿ. – ಶೃಂಗೇರಿ.
ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ನಿಮ್ಮ ಸಾಮಥ್ರ್ಯ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪ್ರತಿಬಿಂಬಿಸುವ ವೃತ್ತಿಯ ಬಗ್ಗೆ ಚಿಂತಿಸಿ. ಅದರಂತೆ ಕೋರ್ಸ್ ಆಯ್ಕೆ ಮಾಡಿ, ಸರ್ಕಾರಿ ಕಾಲೇಜುಗಳಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಆ ಅನುಕೂಲಗಳನ್ನು ಪಡೆದುಕೊಳ್ಳಿ. ಜೊತೆಗೆ, ನಿಮಗೆ ಸಹಾಯವಾಗಬಹುದಾದ ಅನೇಕ ಅರೆಕಾಲಿಕ ಕೆಲಸಗಳನ್ನು ಕೂಡಾ ಮಾಡಬಹುದು.
ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಹಾಗಾಗಿ, ನಿಮ್ಮ ಈಗಿನ ಪರಿಸ್ಥಿತಿಯಿಂದ ಎದೆಗುಂದದೆ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಸಾಧಕರ ಕಥೆಗಳನ್ನು ಓದಿ, ವೀಡಿಯೋಗಳನ್ನು ವೀಕ್ಷಿಸಿ; ಸ್ವಯಂ ಪ್ರೇರಣೆಯನ್ನು ಬೆಳೆಸಿಕೊಂಡು ನೀವೂ ಒಬ್ಬ ಸಾಧಕರಾಗಿ.
Q2. ನಾನು ಪಿಯುಸಿ ಮುಗಿಸಿ ಎಂಜಿನಿಯರಿಂಗ್ ಮಾಡಿ ರಿಸರ್ಚ್ ಅಂಡ್ ಅನಾಲ್ಯಿಸ್ (ರಾ) ಅಥವಾ ಇಂಟೆಲಿಜನ್ಸ್ ಬ್ಯೂರೋ(ಐಬಿ)ಗೆ ಸೇರಬೇಕೆಂದುಕೊಂಡಿದ್ದೇನೆ. ಎಂಜಿನಿಯರಿಂಗ್ನಲ್ಲಿ ಯಾವ ಬ್ರ್ಯಾಂಚ್ ಓದಬೇಕು? ಕೆಲಸಕ್ಕೆ ಯಾವ ಪರೀಕ್ಷೆಗಳನ್ನು ಬರೆಯಬೇಕು? – ಪೃಥ್ವಿ.
ರಾ ಮತ್ತು ಐಬಿ ಸರ್ಕಾರಿ ವಲಯದ ಪ್ರತಿಷ್ಟಿತ ಸಂಸ್ಥೆಗಳು. ಹಾಗಾಗಿ, ಇಲ್ಲಿನ ಹುದ್ದೆಗಳ ನೇಮಕಾತಿಗೆ ಕಠಿಣವಾದ ಪ್ರಕ್ರಿಯೆಯಿದೆ.
ಯಾವುದೇ ಪದವಿಯ ನಂತರ ಐಬಿ ಸಂಸ್ಥೆಗಾದರೆ ಕೇಂದ್ರ ಗೃಹ ಸಚಿವಾಲಯ ನಡೆಸುವ ಐಬಿ ಎಸಿಐಒ ಪರೀಕ್ಷೆಯನ್ನು ಬರೆಯಬೇಕು. ರಾ ಸಂಸ್ಥೆಗೆ ವೃತ್ತಿ ಸಂಬಂಧಿತ ಅನುಭವವಿರಬೇಕು ಮತ್ತು ಗ್ರೂಪ್ ಎ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಬರೆಯಬೇಕು. ಸಾಮಾನ್ಯವಾಗಿ ಇನ್ನಿತರ ಸರ್ಕಾರಿ ಇಲಾಖೆಗಳಿಂದ ಅನುಭವಿ ಅಧಿಕಾರಿಗಳನ್ನು ರಾ ಸಂಸ್ಥೆಗೆ ನೇಮಕಾತಿ ಮಾಡಿಕೊಳ್ಳುವ ವಾಡಿಕೆಯಿದೆ.
Q3. ನಾನು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯsóದಲ್ಲಿ ಸ್ನಾತಕೋತ್ತರ ಪದವಿಯನ್ನು ಈಗಷ್ಟೇ ಮುಗಿಸಿದ್ದು, ಆಕಾಶವಾಣಿ ಅಥವಾ ದೂರದರ್ಶನ ವಾಹಿನಿಯಲ್ಲಿ ನಿರೂಪಕಿ/ವಾಯ್ಸ್ ಓವರ್ ಆರ್ಟಿಸ್ಟ್ ಆಗಬೇಕೆಂದುಕೊಂಡಿದ್ದೇನೆ. ಈ ವಿಭಾಗದಲ್ಲಿ ಸರ್ಕಾರಿ ಕೆಲಸ ಪಡೆಯಲು ಯಾವ ಸ್ಪರ್ಧಾತ್ಮಕ ಪರೀಕ್ಷೆಗಳಿವೆ? – ಪಲ್ಲವಿ ಎಸ್.ಜಿ., ಬಾಗಲಕೋಟೆ.
ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದ ಕೆಲಸಗಳಿಗೆ ವೃತ್ತಿ ಸಂಬಂಧಿತ ಅನುಭವ ಮತ್ತು ಅರ್ಹತೆಯಿರಬೇಕು. ಹಾಗೂ, ಸಾಮಾನ್ಯವಾಗಿ ಲಿಖಿತ ಪರೀಕ್ಷೆ, ಸ್ಕ್ರೀನ್ ಟೆಸ್ಟ್ ಮತ್ತು ಸಂದರ್ಶನದ ಮುಖಾಂತರ ನೇಮಕಾತಿಯಾಗುತ್ತದೆ. ಕೆಲವೊಮ್ಮೆ, ಕಾಂಟ್ರಾಕ್ಟ್ ನೇಮಕಾತಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://prasarbharati.gov.in/
Q4. ನಾನು ಪಿಯುಸಿ ಮುಗಿಸಿ ಬಿಬಿಎ (ಏವಿಯೇಷನ್) ಮಾಡಬೇಕೆಂದುಕೊಂಡಿದ್ದೇನೆ. ನನಗೆ ಈ ಕೋರ್ಸ್ ಮತ್ತು ಉದ್ಯೋಗದ ಕುರಿತು ಮಾಹಿತಿ ನೀಡಿ. – ಸಂಜಯ್, ಶಿವಮೊಗ್ಗ.
ಬಿಬಿಎ (ಏವಿಯೇಷನ್) ಕೋರ್ಸಿನಲ್ಲಿ ಏರ್ಲೈನ್ಸ್ ಸಂಬಂಧಿತ ವಿಷಯಗಳ ಬಗ್ಗೆ ಅಂದರೆ ಏರ್ಪೋರ್ಟ್ ಮ್ಯಾನೇಜ್ಮೆಂಟ್, ಸೆಕ್ಯೂರಿಟಿ, ಇನ್ಫರ್ಮೇಷನ್ ಸಿಸ್ಟಮ್ ಮ್ಯಾನೇಜ್ಮೆಂಟ್, ಮಾರ್ಕೆಟಿಂಗ್, ಕಾರ್ಗೊ ಇತ್ಯಾದಿಗಳ ಕುರಿತು ಜ್ಞಾನಾರ್ಜನೆಯಾಗುತ್ತದೆ. ಹಾಗಾಗಿ, ಈ ಕೋರ್ಸ್ ನಂತರ ಏರ್ಲೈನ್ಸ್ ಮತ್ತು ಏರ್ಪೋರ್ಟ್ಗಳಲ್ಲಿ ಉದ್ಯೋಗಾವಕಾಶಗಳಿವೆ. ಆದರೆ, ಈಗ ಕೋವಿಡ್ ಕಾರಣದಿಂದ ಏರ್ಲೈನ್ಸ್ ಉದ್ದಿಮೆ ಸಂಕಷ್ಟದಲ್ಲಿದೆ. ಆದರೆ, ಇನ್ನೆರಡು ಮೂರು ವರ್ಷಗಳಲ್ಲಿ ಪುನಶ್ಚೇತನಗೊಂಡು ಪ್ರಗತಿಯ ಹಾದಿಗೆ ಬರುವ ನಿರೀಕ್ಷೆಯಿದೆ.
Q5. ನಾನು ಬಿಬಿಎ ಅಂತಿಮ ವರ್ಷದಲ್ಲಿದ್ದು ಮುಂದೆ ಎಂಬಿಎ (ಎಚ್ಆರ್) ಮಾಡಲು ಇಚ್ಛಿಸಿದ್ದೇನೆ. ಈ ಕೋರ್ಸ್ ನಂತರ ಉದ್ಯೋಗದ ಅವಕಾಶಗಳ ಕುರಿತು ತಿಳಿಸಿ. – ಆಸ್ಮ ಭಾನು, ಮೈಸೂರು.
ಆದಷ್ಟು, ಕ್ಯಾಂಪಸ್ ನೇಮಕಾತಿ ಇರುವ, ಉತ್ತಮ ರ್ಯಾಂಕಿಂಗ್ ಇರುವ ಪ್ರತಿಷ್ಟಿತ ಕಾಲೇಜು/ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಬೇಕು. ಈ ಮಾಹಿತಿಯನ್ನು ಅನೇಕ ಮಾದ್ಯಮಗಳು ಅಂತರ್ಜಾಲದಲ್ಲಿ ಪ್ರಕಟಿಸುತ್ತವೆ.
ಎಂಬಿಎ (ಎಚ್ಆರ್) ಪದವೀಧರರಿಗೆ ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಬೇಡಿಕೆಯಿದೆ. ಈ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲು ಅನುಭೂತಿ, ತಾಳ್ಮೆ, ಯೋಜನಾ ಶಕ್ತಿ, ಸಮಯದ ನಿರ್ವಹಣೆ, ಉತ್ತಮ ಸಂವಹನ, ಅಂತರ್ ವೈಯಕ್ತಿಕ ನೈಪುಣ್ಯತೆ, ನಾಯಕತ್ವದ ಕೌಶಲ ಸೇರಿದಂತೆ ಸಕಾರಾತ್ಮಕ ಮನೋಭಾವ ಮತ್ತು ವೃತ್ತಿ ಸಂಬಂಧಿತ ಕೌಶಲಗಳ ಅಗತ್ಯವಿದೆ. ಇವುಗಳನ್ನು ಉದ್ಯೋಗದ ಸಂದರ್ಶನದಲ್ಲಿ ಪರೀಕ್ಷಿಸಲಾಗುತ್ತದೆ.
ಸರ್ಕಾರಿ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಯುಪಿಎಸ್ಸಿ/ಕೆಪಿಎಸ್ಸಿ ಸ್ಪರ್ದಾತ್ಮಕ ಪರೀಕ್ಷೆಗಳ ಮುಖಾಂತರ ಅನ್ವೇಷಿಸಬಹುದು.
Q6. ನಾನು ಪಿಯುಸಿ ಕಾಮರ್ಸ್ 2018ರಲ್ಲಿ ಉತ್ತರ ಪ್ರದೇಶದಿಂದ ಪಾಸಾಗಿದ್ದೇನೆ. ಈಗ ನಾನು ಬಿಎ ಅಥವಾ ಯಾವ ಕೋರ್ಸ್ ಮಾಡಬಹುದು? – ಮಾನಸ, ತುಮಕೂರು.
ನೀವು ಬಿಕಾಂ, ಬಿಎ, ಬಿಸಿಎ, ಬಿಬಿಎ, ಸಿಎ, ಎಸಿಎಸ್, ಐಸಿಎಂಎ ಕೋರ್ಸ್ಗಳನ್ನು ಮಾಡಬಹುದು.
Q7. ನಾನು ಬಿಎ ಮೊದಲ ವರ್ಷದಲ್ಲಿದ್ದೇನೆ ಮತ್ತು ಪೋಲೀಸ್ ಅದಿಕಾರಿಯಾಗಬೇಕಾದರೆ ಯಾವ ಪರೀಕ್ಷೆಯನ್ನು ಬರೆಯಬೇಕು? – ಸುನೀಲ್ ಎಲ್.
ಪೋಲೀಸ್ ಇಲಾಖೆಗೆ ಸಂಬಂಧಿತ ಅನೇಕ ವಿಭಾಗಗಳಿವೆ ಮತ್ತು ಅನುಭವ, ಅರ್ಹತೆಯ ಆಧಾರದ ಮೇಲೆ ಹುದ್ದೆಗಳಿವೆ. ದೇಹದಾಡ್ರ್ಯತೆ, ಪೂರ್ವಭಾವಿ, ಫೈನಲ್ಸ್ ಸೇರಿದಂತೆ ಅನೇಕ ಹಂತಗಳ ಪರೀಕ್ಷೆಗಳಿವೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: http://rec21.ksp-online.in/
Q8. ಕರ್ನಾಟಕದಲ್ಲಿ ಪದವಿಯ ನಂತರ ಅನ್ವಯವಾಗುವ ಹುದ್ದೆಗಳಿಗೆ ನಡೆಸುವ ರೈಲ್ವೆ ಪರೀಕ್ಷೆಗಳ ಬಗ್ಗೆ ತಿಳಿಸಿ. – ವಿಷ್ಣು ನಾಯಕ.
ರೈಲ್ವೇಸ್ ಹುದ್ದೆಗಳ ನೇಮಕಾತಿ, ಮೂರು ಹಂತದ ಪರೀಕ್ಷೆಗಳ ಮೂಲಕ ನಡೆಯುತ್ತದೆ.
- ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಹಂತ-1: ಎಲ್ಲಾ ಹುದ್ದೆಗಳಿಗೆ ಅನ್ವಯ.
- ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಹಂತ-2: ಆಯಾ ಹುದ್ದೆಗಳಿಗೆ ಅನ್ವಯವಾಗುವ ಪರೀಕ್ಷೆ.
- ವೈದ್ಯಕೀಯ ಪರೀಕ್ಷೆ/ದಾಖಲೆಗಳ ಪರಿಶೀಲನೆ.
ಪರೀಕ್ಷೆಯ ಮಾದರಿ, ವಿಷಯಸೂಚಿಕೆ ಮತ್ತು ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://rrbbnc.gov.in/
Q9. ನಾನು ಬಿಇ ( ಇಸಿಇ) ಮುಗಿಸಿದ್ದೇನೆ ಮತ್ತು ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ. ಮುಂದಿನ ಕೋರ್ಸ್ ಅಥವಾ ಸರ್ಕಾರಿ ಕೆಲಸಗಳ ಬಗ್ಗೆ ತಿಳಿಸಿ? – ಮನೋಜ್ ಕೆ.
ಯಾವುದೇ ಕೋರ್ಸ್ ಮಾಡುವ ಮುಂಚೆ ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿ ಜೀವನದ ಯೋಜನೆಯನ್ನು ಮಾಡಿದರೆ ಪದವಿಯ ನಂತರ ಮುಂದೇನು ಎನ್ನುವ ಯಾವುದೇ ಗೊಂದಲಗಳಿರುವುದಿಲ್ಲ. ಹಾಗಾಗಿ, ಈಗಲೂ ನಿಮಗಿರುವ ಅವಕಾಶಗಳ ಬಗ್ಗೆ ಕೂಲಂಕಶವಾಗಿ ಪರಿಶಿಲಿಸಿ ನಿಮ್ಮ ವೃತ್ತಿ ಜೀವನದ ಯೋಜನೆಯನ್ನು ರೂಪಿಸಿ.
ಬಿಇ ಪದವಿಯ ಆಧಾರದ ಮೇಲೆ ಯುಪಿಎಸ್ಸಿ/ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸಬಹುದು. ಹಾಗೂ, ಖಾಸಗಿ ಕ್ಷೇತ್ರದ ಟೆಲಿಕಮ್ಯೂನಿಕೇಷನ್ಸ್, ಎಲೆಕ್ಟ್ರಾನಿಕ್ಸ್, ಐಟಿ, ಮೊಬೈಲ್, ಇಂಟರ್ನೆಟ್ ಕಂಪನಿಗಳಲ್ಲಿ ಉದ್ಯೋಗವನ್ನು ಅರಸಬಹುದು.
ವೃತ್ತಿ ಜೀವನದ ಯೋಜನೆಯಂತೆ ವಿದ್ಯಾಭ್ಯಾಸವನ್ನು ಮುಂದುವರೆಸುವುದಾದರೆ ಎಂಇ, ಎಂಟೆಕ್, ಎಂಬಿಎ ಸೇರಿದಂತೆ ಅನೇಕ ಉನ್ನತ ಶಿಕ್ಷಣದ ಕೋರ್ಸ್ಗಳನ್ನು ಮಾಡಬಹುದು.
Q10. ಪ್ಯಾರಾ ಮೆಡಿಕಲ್ ಕೋರ್ಸ್ ಬಗ್ಗೆ ತಿಳಿಸಿ. – ವಿನಯ್.
ಈಗ ಹೆಚ್ಚಿನ ಬೇಡಿಕೆಯಿರುವ ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಕೆಲವು ಪ್ಯಾರ ಮೆಡಿಕಲ್ ಕೋರ್ಸ್ಗಳೆಂದರೆ ಬಿಎಸ್ಸಿ ( ನರ್ಸಿಂಗ್, ಫಿಸಿಯೋತೆರಪಿ, ರೇಡಿಯಾಲಜಿ, ಇಮೇಜಿಂಗ್, ಕಾರ್ಡಿಯಾಕ್ ಕೇರ್, ಅನಸ್ತೀಷಿಯ ಇತ್ಯಾದಿ).
ಸಾಮಾನ್ಯವಾಗಿ, ಇವೆಲ್ಲವೂ 3-4 ವರ್ಷದ ಕೋರ್ಸ್ಗಳು ಮತ್ತು ಕೋರ್ಸ್ ಮುಗಿದ ನಂತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ಸ್, ಲ್ಯಾಬೊರೇಟರೀಸ್, ಮೆಡಿಕಲ್ ಕಾಲೇಜುಗಳಲ್ಲಿ ಉದ್ಯೋಗವನ್ನು ಅರಸಬಹುದು. ಹೆಚ್ಚಿನ ಮಾಹಿತಿಗಾಗಿ, ಕರ್ನಾಟಕ ಪ್ಯಾರ ಮೆಡಿಕಲ್ ಬೋರ್ಡನ್ನು ಸಂಪರ್ಕಿಸಿ.
Q11. ಮದುವೆಯಾಗುವ ಹುಡುಗನ ಜಾತಿ ಕುರುಬ ಆಗಿದ್ದು, ಹುಡುಗಿಯ ಜಾತಿ ನಾಯಕ (ಎಸ್ಟಿ) ಆಗಿದ್ದಾಗ, ಸರ್ಕಾರಿ ನೌಕರಿಯನ್ನು ಯಾವ ಜಾತಿಯ ಆಧಾರದ ಮೇಲೆ ಪಡೆಯಬಹುದು.
ನಮಗಿರುವ ಮಾಹಿತಿಯಂತೆ ಅರ್ಜಿದಾರರ ಜಾತಿಗೆ ಅನ್ವಯಿಸುವ ಮೀಸಲಾತಿಯ ಆಧಾರದ ಮೇಲೆ ಸರ್ಕಾರಿ ನೌಕರಿಗೆ ಪ್ರಯತ್ನಿಸಬೇಕು.
Q&A for 23rd August, 2021
Q1. ಯಾವುದೇ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಕನಿಷ್ಟ ಎಷ್ಟು ಗಂಟೆಗಳು ಅಭ್ಯಾಸ ನಿರತರಾಗಿರಬೇಕು? ವಿಷಯಾವಾರು ಅಭ್ಯಾಸ ಹೇಗಿರಬೇಕು? – ಸುನೀಲ್ ಕುಮಾರ್ ಕೆ, ಮಡಿಕೇರಿ
ಪರೀಕ್ಷೆಗಳ ಪ್ರಾಮುಖ್ಯತೆ, ಕಠಿಣತೆಯ ಮಟ್ಟ ಹಾಗೂ ನಿಮ್ಮ ಧ್ಯೇಯ ಮತ್ತು ಸಾಮಥ್ರ್ಯದ ಆಧಾರದ ಮೇಲೆ ಸೂಕ್ತ ಕಾರ್ಯತಂತ್ರವನ್ನು ರೂಪಿಸಬೇಕು. ಎಷ್ಟು ಸಮಯ ಓದಬೇಕು ಎನ್ನುವುದಕ್ಕಿಂತ ಓದುವಿಕೆ ಪರಿಣಾಮಕಾರಿಯಾಗಿರಬೇಕು. ಅದೇ ರೀತಿ ತರಗತಿಗಳಲ್ಲಿ ಪ್ರಶ್ನೆಗಳನ್ನು ಕೇಳುವುದರಿಂದ ವಿಷಯದ ಬಗ್ಗೆ ಒಳನೋಟಗಳು ಲಭಿಸಿ ನಿಮ್ಮಲ್ಲಿ ವಿಮರ್ಶಾತ್ಮಕ ಚಿಂತನಾ ಕೌಶಲ್ಯದ ಅಭಿವೃದ್ಧಿಯಾಗಿ ಕಲಿಕೆ ಪರಿಪೂರ್ಣವಾಗುತ್ತದೆ. ಹಾಗೂ, ಈ ಸಲಹೆಗಳನ್ನು ಗಮನಿಸಿ:
- SQ3R ನಂತಹ ಓದುವಿಕೆಯ ತಂತ್ರಗಾರಿಕೆ ಉಪಯುಕ್ತ.
- ಹಿಂದಿನ ಉಪನ್ಯಾಸದ ಟಿಪ್ಪಣಿಗಳನ್ನು ನೋಡಿ ಮುಂದಿನ ಉಪನ್ಯಾಸಕ್ಕೆ ತಯಾರಾಗಿ.
- ಮನಸ್ಸು ಉಲ್ಲಾಸವಾಗಿರುವಾಗ, ಕಠಿಣ ವಿಷಯಗಳು ಮತ್ತು ಕಡಿಮೆ ಆಸಕ್ತಿಯಿರುವ ವಿಷಯಗಳನ್ನು ಓದಿ.
- ದಿನನಿತ್ಯದ ಅಧ್ಯಯನ ವೇಳಾಪಟ್ಟಿಯನ್ನು ಪಾಲಿಸಿ.
- ಆದಷ್ಟು ಶಾಂತ ವಾತಾವರಣದಲ್ಲಿ ಏಕಾಗ್ರತೆಯಿಂದ ಓದಿ.
- ನಿಯತಕಾಲಿಕವಾಗಿ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ.
- ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುವ ಭ್ರಮರಿ ಪ್ರಾಣಾಯಾಮವನ್ನು ದಿನಕ್ಕೆ 2-3 ಬಾರಿ ಅಭ್ಯಾಸ ಮಾಡಿ.
Q2. ನಾನು ಹತ್ತನೇ ತರಗತಿಯಲ್ಲಿ ಶೇ 88ರಷ್ಟು ಅಂಕ ಗಳಿಸಿರುವೆ. ಮುಂದೆ ಡಿಪೆÇ್ಲಮಾ ಸಿಎಸ್ನಲ್ಲಿ ಮಾಡಬೇಕು. ಆದರೆ, ಎನ್ಇಪಿ ಪ್ರಕಾರ ಭವಿಷ್ಯದಲ್ಲಿ ಏನಾದರೂ ತೊಂದರೆ ಆಗಬಹುದು ಎಂಬ ಭಯವಿದೆ. ದಯಮಾಡಿ ಮಾರ್ಗದರ್ಶನ ನೀಡಿ. – ಅಮೋಘವರ್ಷ ಯು.ಎ.
ಬದುಕಿನ ಕನಸುಗಳು ಮತ್ತು ನಿಮ್ಮ ಸಾಮಥ್ರ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ವೃತ್ತಿ ಮತ್ತು ಅದರಂತೆ ಕೋರ್ಸ್ ಆಯ್ಕೆಯಿರಲಿ. ಡಿಪ್ಲೊಮಾ ಕೋರ್ಸ್ಗಳಿಗೆ ಈ ವರ್ಷದಿಂದಲೇ ಎನ್ಇಪಿಯ ನೂತನ ನಿಯಮಗಳು ಅನ್ವಯವಾಗುವುದೆಂದು ಕರ್ನಾಟಕ ಸರ್ಕಾರ ಇತ್ತೀಚಿಗೆ ಘೋಷಿಸಿದೆ. ಹಾಗಾಗಿ, ಭವಿಷ್ಯದ ಕುರಿತು ಆತಂಕ ಪಡಬೇಕಿಲ್ಲ.
Q3. ನಾನು ಪಿಯುಸಿ ಮುಗಿಸಿ ಬಿಡಿಸೈನ್ (ಕಮ್ಯೂನಿಕೇಷನ್) ಮಾಡಲಿಚ್ಛಿಸಿದ್ದೇನೆ. ಆದರೆ, ಭವಿಷ್ಯದ ಕುರಿತು ಆತಂಕವಿದೆ. ಈ ಕೋರ್ಸ್ ಮಾಡಬಹುದೇ? – ವೈಷ್ಣವಿ ಬಿ.ವಿ., ಶಿವಮೊಗ್ಗ.
ಈ ಕೋರ್ಸ್ ಮಾಡಿದ ನಂತರ ಮಾಧ್ಯಮ ಮತ್ತು ಸಂವಹನ, ಜಾಹೀರಾತು ಮತ್ತು ಪ್ರಚಾರ, ಸಾರ್ವಜನಿಕ ಸಂಪರ್ಕ, ಶಿಕ್ಷಣ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಇದೊಂದು ಸೃಜನಾತ್ಮಕ ಕ್ಷೇತ್ರ. ಹಾಗಾಗಿ, ಸೃಜನಶೀಲತೆಯಿದ್ದು, ಡಿಸೈನ್ ಸಂಬಂಧಿತ ಸಾಫ್ಟ್ವೇರ್ ಬಳಕೆಯಲ್ಲಿ ಪರಿಣತಿಯಿರಬೇಕು. ಆದಷ್ಟು, ಕ್ಯಾಂಪಸ್ ಪ್ಲೇಸ್ಮೆಂಟ್ ಸೌಲಭ್ಯವಿರುವ ಕಾಲೇಜಿನಲ್ಲಿ ಈ ಕೋರ್ಸ್ ಮಾಡಬಹುದು.
Q4. ನನ್ನ ಮಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 98 ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ. ಮುಂದೆ ಯಾವ ಕೋರ್ಸ್ ಮಾಡುವುದು ಉತ್ತಮ ಮತ್ತು ಉದ್ಯೋಗಾವಕಾಶ ಇರುವ ಕೋರ್ಸ್ನ ಮಾಹಿತಿಯನ್ನು ದಯಮಾಡಿ ತಿಳಿಸಿ. – ಮೂಡಿಗೆರೆ
ಪಿಯುಸಿ ಫಲಿತಾಂಶದ ಪ್ರಕಾರ ನಿಮ್ಮ ಮಗಳು ಪ್ರತಿಭಾವಂತ ವಿದ್ಯಾರ್ಥಿ. ಎಲ್ಲಾ ಕ್ಷೇತ್ರಗಳಲ್ಲೂ ಪ್ರತಿಭಾವಂತರಿಗೆ ಮನ್ನಣೆ ಮತ್ತು ಅವಕಾಶಗಳಿವೆ. ಹಾಗಾಗಿ, ಸ್ವಾಭಾವಿಕ ಅಭಿರುಚಿ ಮತ್ತು ಆಸಕ್ತಿಯಿರುವ ವೃತ್ತಿಯ ಬಗ್ಗೆ ನಿರ್ಧರಿಸಿ, ಅದರಂತೆ ಕೋರ್ಸ್ ಆಯ್ಕೆ ಮಾಡಬಹುದು.
Q5. ನಾನು ಬಿಎಸ್ಸಿ ಪದವೀಧರ. ಮುಂದೆ ಎಲ್ಎಲ್ಬಿ ಕಾನೂನು ಪದವಿ ಮಾಡಬೇಕೆಂದುಕೊಂಡಿದ್ದೇನೆ. ಎಲ್ಎಲ್ಬಿಯನ್ನು ದೂರ ಶಿಕ್ಷಣ ಕಾಲೇಜಿನಿಂದ ಪಡೆಯಬಹುದೇ ಮತ್ತು ನ್ಯಾಯಾಲಯದಲ್ಲಿ ವಾದಿಸಲು ಅವಕಾಶ ಸಿಗುವುದೇ? – ರಮೇಶ, ಬೆಳಗಾವಿ.
ನಮಗಿರುವ ಮಾಹಿತಿಯಂತೆ ದೂರ ಶಿಕ್ಷಣದಿಂದ ಪಡೆದ ಎಲ್ಎಲ್ಬಿ ಕೋರ್ಸಿಗೆ ಬಾರ್ ಕೌಂಸಿಲ್ನ ಮಾನ್ಯತೆಯಿಲ್ಲ.
Q6. ಎಸ್ಎಸ್ಎಲ್ಸಿ ನಂತರ ಪಿಯುಸಿ ಮಾಡಿ ಬಿ.ಇ ಮಾಡುವುದು ಒಳ್ಳೆಯದೆ? ಅಥವಾ ಡಿಪೆÇ್ಲಮಾ ಮಾಡಿ ಬಿ.ಇ ಮಾಡುವುದು ಒಳ್ಳೆಯದೆ? – ಸುಜನ್.ಪಿ, ದೊಡ್ಡಬಳ್ಳಾಪುರ
ಸಾಮಾನ್ಯವಾಗಿ, ಪಿಯುಸಿ ನಂತರ ಬಿಇ ಮಾಡುವುದು ಸೂಕ್ತವೆನ್ನುವುದು ನಮ್ಮ ಅಭಿಪ್ರಾಯ. ಆದರೂ, ನಿಮ್ಮ ವೃತ್ತಿ ಯೋಜನೆಯ ಆದ್ಯತೆಗಳಂತೆ ನಿರ್ಧರಿಸಿ.
Q7. ನಾನು ದ್ವಿತೀಯ ಪಿಯುಸಿ (ಕಲಾ ವಿಭಾಗ) ಓದುತ್ತಿದ್ದೇನೆ. ಮುಂದೆ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆ ಇದೆ. ಪಿಯುಸಿ ನಂತರ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಯಾವ ಕೋರ್ಸ್ ಮಾಡಬೇಕು ಮತ್ತು ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? – ಎಮ್. ಡಿ. ಮಾನ್ಯ ಗೌಡ, ಚಿಕ್ಕಮಗಳೂರು.
ಐಎಎಸ್ ವೃತ್ತಿ ಕುರಿತ ಪ್ರಶ್ನೆಗಳನ್ನು ಇದೇ ವರ್ಷದ ಜೂನ್ 21 ಮತ್ತು ಜೂನ್ 28ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.
Q8. ನಾನು ಎಂಎ ದೂರ ಶಿಕ್ಷಣದಲ್ಲಿ ಮಾಡುತ್ತಿದ್ದು ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರ ತೆಗೆದುಕೊಂಡಿದ್ದೇನೆ. ಪ್ರೊಫೆಸರ್ ಆಗುವ ಗುರಿ ಇದ್ದು, ಮುಂದಿನ ದಾರಿ ತಿಳಿಸಿ. ಮತ್ತು ಎಂಎ ಸಂಬಂಧಿತ ಸರ್ಕಾರಿ ಉದ್ಯೋಗದ ಕುರಿತು ತಿಳಿಸಿ. – ಶ್ವೇತಾ ನಾಯ್ಕ್, ಕಾರವಾರ
ಎಂಎ ನಂತರ ಡಾಕ್ಟೊರೇಟ್ ಮಾಡಿ ಎನ್ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಪ್ರೊಫೆಸರ್ ಹುದ್ದೆಗೆ ಪ್ರಯತ್ನಿಸಬಹುದು.
ಸರ್ಕಾರಿ ಉದ್ಯೋಗಗಳಿಗೆ ಎಂಎ ನಂತರ ಕೆಪಿಎಸ್ಸಿ/ಯುಪಿಎಸ್ಸಿ ಪರೀಕ್ಷೆಗಳ ಮುಖಾಂತರ ಪ್ರಯತ್ನಿಸಬಹುದು. ಹಾಗೂ, ಆರ್ಕಿಯಾಲಿಜಿಕಲ್ ಸರ್ವೆ ಅಫ್ ಇಂಡಿಯ (ಎಎಸ್ಐ) ಇಲಾಖೆ ಕೆಲವು ಹುದ್ದೆಗಳಿಗೆ ಮತ್ತು ಇಂಟರ್ನ್ಶಿಪ್ ಅವಕಾಶಗಳಿಗೆ ನೇರವಾಗಿಯೂ ನೇಮಕಾತಿಯನ್ನು ಮಾಡುತ್ತಾರೆ. ಹೆಚ್ಚಿನ ವಿವರಗಳಿಗೆ ಗಮನಿಸಿ: https://asi.nic.in/
Q&A for 30th August, 2021
Q1. ಪದವಿ ಮುಗಿಸಿಕೊಂಡು ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಪ್ರಬಂಧ ಬರೆಯುವುದು ಹೇಗೆ? ಯಾವ ವಿಷಯದ ಮೇಲೆ ಬರೆದರೆ ಪೂರ್ಣ ಅಂಕ ಸಿಗುತ್ತದೆ? – ಕೃಷ್ಣಮೂರ್ತಿ ಟಿ.ಎಸ್., ಹುಣಸಗಿ, ಯಾದಗಿರಿ.
Q2. ನಾನು ಪದವಿಯನ್ನು ಮುಗಿಸಿ ಪಿಎಸ್ಐ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಆದರೆ, ಎಷ್ಟು ಓದಿದರೂ ಉತ್ತರಗಳು ನೆನಪಿಗೆ ಬರುವುದಿಲ್ಲ. ಏನು ಮಾಡಬೇಕು? – ಕನಕರಾಯ, ಕೊಪ್ಪಳ.
ಪರೀಕ್ಷೆಗೆ ಹೇಗೆ ಓದಬೇಕು ಎನ್ನುವುದನ್ನು ಇದೇ ತಿಂಗಳ 23ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಪರೀಕ್ಷೆಯಲ್ಲಿ ಸೂಚಿಸಿದ ವಿಷಯದ ಮೇಲೆ ಪ್ರಬಂಧ ಬರೆಯುವುದರ ಬಗ್ಗೆ ಈ ಸಲಹೆಗಳನ್ನು ಗಮನಿಸಿ:
- ಪ್ರಬಂಧ ರಚನೆಯಲ್ಲಿ ಪೀಠಿಕೆ, ವಿಷಯದ ಮಂಡನೆ ಮತ್ತು ಪ್ರತಿಪಾದನೆ ಹಾಗೂ ಮುಕ್ತಾಯದ ಹಂತಗಳನ್ನು ಅನುಸರಿಸಿ.
- ಪ್ರಚಲಿತ ವಿದ್ಯಮಾನಗಳ ಬಗ್ಗೆ ದಿನಪತ್ರಿಕೆ, ಸುದ್ದಿ ವಾಹಿನಿ, ಇತ್ಯಾದಿಗಳಿಂದ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸಿ.
- ಸ್ವಂತ ಆಲೋಚನೆಗಳಿಂದಲೂ ವಿಮರ್ಶಾತ್ಮಕ ಕೌಶಲ್ಯದಿಂದಲೂ ವಿಷಯದ ಮಂಡನೆ ಮಾಡಬೇಕು.
- ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಷ್ಟಿತ ಸಂಸ್ಥೆಗಳ ಸಂಶೋಧನೆಗಳ, ಸಮೀಕ್ಷೆಗಳ ಅಂಕಿ ಅಂಶಗಳನ್ನು, ವರದಿಯನ್ನು, ಸಾರಾಂಶವನ್ನು, ಉದಾಹರಣೆಗಳನ್ನು ಉಲ್ಲೇಖಿಸಿದರೆ ಪ್ರಬಂಧದ ಮೌಲ್ಯ ವೃದ್ಧಿಯಾಗುತ್ತದೆ.
- ನಿಷ್ಪಕ್ಷವಾದ ಆಲೋಚನೆಗಳು, ಪರ್ಯಾಯ ಚಿಂತನೆಗಳಿದ್ದು ಪ್ರಬಂಧ ಸವಿಸ್ತಾರವಾಗಿಯೂ, ವಿಶಿಷ್ಟವಾಗಿಯೂ ಮೂಡಿ ಬಂದು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತಿರಬೇಕು.
- ಪರೀಕ್ಷೆಗೆ ಮುಂಚೆ ಪ್ರಬಂಧಗಳನ್ನು ಬರೆದು ಸ್ವಯಂ ವಿಮರ್ಶೆಗೆ ಒಳಪಡಿಸಿ. ಇದರಿಂದ ವಿಷಯಗಳ ಸಂಗ್ರಹಣೆ, ಸೂಕ್ತ ಪದಗಳ ಬಳಕೆ ಮತ್ತು ಸಮಯದ ನಿರ್ವಹಣೆಯ ಬಗ್ಗೆ ಅರಿವು ಮೂಡಿ, ಇನ್ನೂ ಉನ್ನತ ಮಟ್ಟದ ಪ್ರಬಂಧಗಳನ್ನು ಬರೆಯಲು ಸಾಧ್ಯವಾಗುತ್ತದೆ.
- ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.
Q3. ನಾನು ದ್ವಿತೀಯ (ಪಿಯುಸಿ) ವಿಜ್ಞಾನ ವಿಭಾಗದಲ್ಲಿ ಮಾಡುತ್ತಿದ್ದೇನೆ. ಮುಂದೆ ಬಿಸಿಎ ಮತ್ತು ಎಂಸಿಎ ಮಾಡಬೇಕೆಂದುಕೊಂಡಿದ್ದೇನೆ. ಇದರ ವಿವರವನ್ನು ತಿಳಿಸಿ. – ಚಿಕ್ಕಮಗಳೂರು.
ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ಪಥದಲ್ಲಿರುವ ಕ್ಷೇತ್ರ. ಹಾಗಾಗಿ, ಬಿಟೆಕ್ ಮತ್ತು ಬಿಸಿಎ ಪದವೀಧರರಿಗೆ ಬೇಡಿಕೆ ಇದೆ. ಮೂರು ವರ್ಷದ ಬಿಸಿಎ ಕೋರ್ಸಿನಲ್ಲಿ ವೃತ್ತಿನಿರತ ಇಂಗ್ಲೀಷ್, ಗಣಿತ, ಸಂಖ್ಯಾಶಾಸ್ತ್ರ ಸೇರಿದಂತೆ ಮಾಹಿತಿ ತಂತ್ರಜ್ಞಾನ ಸಂಬಂಧಿತ ವಿಷಯಗಳನ್ನು ಕಲಿಸಲಾಗುತ್ತದೆ. ಬಿಸಿಎ ನಂತರ ಕ್ಯಾಂಪಸ್ ನೇಮಕಾತಿಯ ಮುಖಾಂತರ ವೃತ್ತಿಯನ್ನು ಆರಂಭಿಸಬಹುದು ಅಥವಾ ಎರಡು ವರ್ಷದ ಎಂಸಿಎ ಕೋರ್ಸ್ ಮಾಡಬಹುದು. ಹಾಗಾಗಿ, ಕ್ಯಾಂಪಸ್ ನೇಮಕಾತಿಯಿರುವ ಕಾಲೇಜಿನಲ್ಲಿ ಬಿಸಿಎ ಮಾಡುವುದು ಉತ್ತಮ. ನೀವು ಸೇರಬಯಸುವ ಕಾಲೇಜನ್ನು ಅವಲಂಬಿಸಿ ಪ್ರವೇಶಾತಿ ನೇರವಾಗಿಯೂ ಕೆಲವೊಮ್ಮೆ ಪ್ರವೇಶ ಪರೀಕ್ಷೆಯ ಮುಖಾಂತರವೂ ಆಗುತ್ತದೆ.
Q4. ನಾನು ದ್ವಿತೀಯ ಪಿಯುಸಿ ಮಾಡುತ್ತಿದ್ದೇನೆ. ಬಿಎಸ್ಸಿ (ಕೃಷಿ) ಮಾಡಿ ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿ ಇದೆ. ಇದರ ಬಗ್ಗೆ ಮಾರ್ಗದರ್ಶನ ನೀಡಿ.
ಐಎಎಸ್ ವೃತ್ತಿ ಕುರಿತ ಪ್ರಶ್ನೆಗಳನ್ನು ಇದೇ ವರ್ಷದ ಜೂನ್ 21 ಮತ್ತು ಜೂನ್ 28ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.
Q5. ನಾನು 10ನೇ ತರಗತಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದೇನೆ. ಮುಂದೆ ಕಾಮರ್ಸ್ ತೆಗೆದುಕೊಳ್ಳಬೇಕೆಂದುಕೊಂಡಿದ್ದೇನೆ. ನಿಮ್ಮ ಸಲಹೆ ಬೇಕು.
Q6. ನಾನು ಬಿಕಾಂ ಓದುತ್ತಿದ್ದು, ನಂತರ ಯಾವ ಕೋರ್ಸ್ ಮಾಡಬೇಕೆಂದು ತಿಳಿಸಿ. – ಮಂಜುನಾಥ್.
ಕಾಮರ್ಸ್ ವಿಸ್ತಾರವಾದ ಕ್ಶೇತ್ರ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿ ಈ ಕ್ಷೇತ್ರದಲ್ಲಿದ್ದು ಭವಿಷ್ಯದಲ್ಲಿ ಯಾವ ವೃತ್ತಿಯನ್ನು ಅರಸಬೇಕು ಎನ್ನುವುದರ ಬಗ್ಗೆ ಸ್ಪಷ್ಟವಾದ ಕಲ್ಪನೆ ಮತ್ತು ಯೋಜನೆಯಿರಬೇಕು. ಹಾಗಿದ್ದಲ್ಲಿ, ಪಿಯುಸಿ ನಂತರ ಈಗ ಬೇಡಿಕೆಯಲ್ಲಿರುವ ಬಿಕಾಂ ಕೋರ್ಸ್ ಮಾಡಬಹುದು ಅಥವಾ ಪಿಯುಸಿ ನಂತರ ನೇರವಾಗಿ ವೃತ್ತಿಪರ ಕೋರ್ಸ್ಗಳಾದ ಸಿಎ, ಎಸಿಎಸ್, ಐಸಿಎಂಎ ಕೋರ್ಸ್ಗಳನ್ನು ಮಾಡಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು. ಬಿಕಾಂ ನಂತರವಾದರೆ, ನೇರವಾಗಿ ಈ ಕೋರ್ಸ್ಗಳ ಇಂಟರ್ಮೀಡಿಯೆಟ್ ಪರೀಕ್ಷೆಯನ್ನು ಬರೆಯಬಹುದು.
Q7. ನಾನು ಎಂಎಸ್ಸಿ (ಗಣಿತ) ಕೋರ್ಸಿಗೆ ಮಾನಸಗಂಗೋತ್ರಿಯಲ್ಲಿ 2016ರಲ್ಲಿ ಪ್ರವೇಶಾತಿ ಪಡೆದು ಕೆಲಸಕ್ಕೆ ಸೇರಿದ ಕಾರಣದಿಂದ 2019ರಲ್ಲಿ ಎರಡನೇ ವರ್ಷಕ್ಕೆ ಕೆಎಸ್ಒಯು ಮುಕ್ತ ಗಂಗೋತ್ರಿಯಲ್ಲಿ ಪ್ರವೇಶಾತಿಯನ್ನು ಪಡೆದೆ. ಕಳೆದ ವರ್ಷ ಪರೀಕ್ಷೆ ನಡೆಯದೆ ಈ ಸೆಪ್ಟೆಂಬರ್ನಲ್ಲಿ ಪರೀಕ್ಷೆ ನಡೆಯಲಿದೆ. ನನ್ನ ಸ್ನಾತಕೋತ್ತರ ಪದವಿ ಪಡೆಯಲು ನಾಲ್ಕು ವರ್ಷ ಮೀರುವುದರಿಂದ ನನ್ನ ಪದವಿಗೆ ಮಾನ್ಯತೆ ದೊರೆಯುವುದೇ? ದಯವಿಟ್ಟು ಪರಿಹಾರ ತಿಳಿಸಿ. – ಪವನ್ ಕುಮಾರ್.
ನಿಮ್ಮ ಸ್ನಾತಕೋತ್ತರ ಪದವಿಗೆ ನಾಲ್ಕು ವರ್ಷಗಳಾಗಿರುವುದಕ್ಕೆ ಸಕಾರಣಗಳಿರುವುದರಿಂದ ಮಾನ್ಯತೆಯ ತೊಂದರೆ ಉದ್ಭವಿಸುವುದಿಲ್ಲ.
Q8. ಕಾನೂನು ಪದವಿಯ ಕುರಿತು ಮಾಹಿತಿ ನೀಡಿ. – ಪ್ರಭಾವತಿ.
ಕಾನೂನು ವೃತ್ತಿಗಾಗಿ ಯಾವುದಾದರೂ ಪದವಿಯ ನಂತರ 3 ವರ್ಷದ ಎಲ್ಎಲ್ಬಿ ಕೋರ್ಸ್ ಅಥವಾ ಪಿಯುಸಿ ನಂತರ 5 ವರ್ಷದ ಇಂಟಗ್ರೇಡೆಡ್ ಕೋರ್ಸ್ ಮಾಡಬೇಕು.
ಸಾಮಾನ್ಯವಾಗಿ ಈ ಕೋರ್ಸ್ಗಳಿಗೆ ಸಿಎಲ್ಎಟಿ/ಎಲ್ಎಸ್ಎಟಿ ಪ್ರವೇಶ ಪರೀಕ್ಷೆ ಬರೆಯಬೇಕು. ಆದರೆ, ಕೆಲವು ಕಾಲೇಜುಗಳಲ್ಲಿ ನೇರವಾಗಿಯೂ ಪ್ರವೇಶಾತಿಯಾಗುತ್ತದೆ. ಪ್ರಮುಖವಾಗಿ, ನೀವು ಮಾಡುವ ಕೋರ್ಸಿಗೆ ಬಾರ್ ಕೌಂಸಿಲ್ ಅಫ್ ಇಂಡಿಯ ಮಾನ್ಯತೆಯಿರಬೇಕು.
Q9. ನಾನು 2015ರಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿಗೆ ಸೇರಿದೆ. ಪ್ರವೇಶ ಪಡೆದರೂ ಒಂದು ದಿನವೂ ತರಗತಿಗೆ ಹೋಗಲಿಲ್ಲ; ಕೋರ್ಸ್ ಮುಗಿಸಲೂ ಇಲ್ಲ. ನನ್ನ ಎಲ್ಲಾ ಮೂಲ ದಾಖಲೆಗಳೂ ಅಲ್ಲಿಯೇ ಇದ್ದು ವಾಪಸ್ ಪಡೆಯಲು ದಂಡ ಪಾವತಿಸಿ ಎನ್ನುತ್ತಿದ್ದಾರೆ. ಸಲಹೆ ನೀಡಿ. – ಸುರಿ ಗೋವಿಂದ್.
ಕೋರ್ಸ್ ಮುಂದುವರೆಸದ ನಿರ್ಧಾರ ಕುರಿತು ವಿಶ್ವವಿದ್ಯಾಲಯದ ನಿಯಮಗಳನ್ನು ನೀವು ಪಾಲಿಸಿದ್ದೀರಾ ಎಂದು ತಿಳಿಯದು. ಆದರೆ, ಯುಜಿಸಿಯ ನಿಯಮಾವಳಿಗಳಂತೆ ಮೂಲ ದಾಖಲೆಗಳನ್ನು ಮತ್ತು ಪ್ರವೇಶಾತಿ ಶುಲ್ಕಗಳನ್ನೂ ಸಹ ಕೆಲವು ನಿಭಂದನೆಗಳ ಅನ್ವಯ ವಿದ್ಯಾರ್ಥಿಗಳಿಗೆ ಹಿಂತಿರುಗಿಸಬೇಕು. ಹಾಗಾಗಿ, ಸಂಬಂಧಪಟ್ಟ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಿ.
Q10. ನಾನು ಸಿವಿಲ್ ಎಂಜಿನಿಯರಿಂಗ್ ಮಾಡಿ ಬ್ಯಾಂಕಿಂಗ್ ಕ್ಷೇತ್ರವನ್ನು ಸೇರಬೇಕೆಂದುಕೊಂಡಿದ್ದೇನೆ. ಅನೇಕ ಬ್ಯಾಂಕ್ಗಳು ವಿಲೀನವಾಗುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಕೆಲಸಗಳು ಕಡಿಮೆಯಾಗಿ ಸ್ಪರ್ಧೆ ಹೆಚ್ಚಾಗಿ ಪರೀಕ್ಷೆ ಕಠಿಣವಾಗಬಹುದೇ?
ಬ್ಯಾಂಕಿಂಗ್ ಕ್ಷೇತ್ರ ತ್ವರಿತವಾಗಿ ಅಭಿವೃದ್ಧಿಯಾಗುತ್ತಿದ್ದು, ಈ ಕ್ಷೇತ್ರದಲ್ಲಿ ನೂತನ ಬ್ಯಾಂಕ್ಗಳೂ ಬರಲಿದೆ. ಹಾಗಾಗಿ, ಒಟ್ಟಾರೆ ಕೆಲಸಗಳು ಕಡಿಮೆಯಾಗಲಿದೆ ಎಂದೆನಿಸುವುದಿಲ್ಲ. ಆದರೆ, ಗ್ರಾಹಕರ ಆದ್ಯತೆಗಳಂತೆ ಬ್ಯಾಂಕಿಂಗ್ ಕೆಲಸಗಳ ವೈಶಿಷ್ಟ್ಯಗಳು ಮತ್ತು ವಿವರಣೆಗಳಲ್ಲಿ ಸುಧಾರಣೆಯಾಗುತ್ತಿದೆ.
Q11. ನಾನು 2011ರಲ್ಲಿ ಪಿಯುಸಿ ಮುಗಿಸಿದ್ದೇನೆ. ಈಗ ನಾನು ಪದವಿ ಶಿಕ್ಷಣ ಪಡೆಯಬಹುದೇ?
ವಿಶ್ವವಿದ್ಯಾಲಯಗಳಲ್ಲಿ ಪದವಿ ಪ್ರವೇಶಾತಿಗೆ ನಿಯಮಗಳ ಪ್ರಕಾರ ಗರಿಷ್ಟ ವಯಸ್ಸಿನ ಒಳಗಿರಬೇಕು. ಅದು ಸಾಧ್ಯವಿಲ್ಲದಿದ್ದರೆ, ಸಂಜೆ ಕಾಲೇಜು ಅಥವಾ ದೂರ ಶಿಕ್ಷಣದ ಮುಖಾಂತರ ಮಾಡಬಹುದಾದ ಅನೇಕ ಡಿಪ್ಲೊಮಾ, ಸರ್ಟಿಫಿಕೆಟ್, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳಿವೆ. ಜೊತೆಗೆ, ಜಗತ್ತಿನ ಹೆಸರಾಂತ ವಿಶ್ವವಿದ್ಯಾಲಯಗಳು (ಭಾರತದ ವಿಶ್ವವಿದ್ಯಾಲಯಗಳೂ ಸೇರಿದಂತೆ) ನಡೆಸುವ ಮ್ಯಾಸ್ಸೀವ್ ಓಪನ್ ಆನ್ಲೈನ್ ಕೋರ್ಸ್ಗಳಿವೆ (ಎಂಒಒಸಿ). ಆದ್ದರಿಂದ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಕೋರ್ಸ್ ಮಾಡಿ ನಿಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.
Q12. ನಾನು ಪಿಯುಸಿ ಮುಗಿಸಿ ಎಂಜಿನಿಯರಿಂಗ್ ಮಾಡಬೇಕೆಂಬ ಆಸೆ. ಆದರೆ, ಆರ್ಥಿಕ ಸಮಸ್ಯೆಯಿರುವುದರಿಂದ ಕಡಿಮೆ ವೆಚ್ಚದಲ್ಲಿ ಕೋರ್ಸ್ ಮುಗಿಸುವ ಬಗ್ಗೆ ತಿಳಿಸಿ. – ಅಕ್ಷತ.
ಆರ್ಥಿಕ ಸಮಸ್ಯೆಯ ಕುರಿತ ಪ್ರಶ್ನೆಯನ್ನು ಇದೇ ತಿಂಗಳ 16ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.