Q1. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿಯಾಗಬೇಕು?
ಉತ್ಸಾಹಭರಿತ ಮನಸ್ಸು, ಗುರಿ ಸೇರುವ ಸಂಕಲ್ಪ, ನಿಮ್ಮ ಸಾಮರ್ಥ್ಯದಲ್ಲಿ ಅಚಲವಾದ ಆತ್ಮವಿಶ್ವಾಸ ಮತ್ತು ಪರಿಣಾಮಕಾರಿ ಕಾರ್ಯತಂತ್ರ, ನಿಮ್ಮನ್ನು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಜೊತೆಗೆ, ಈ ಸಲಹೆಗಳನ್ನು ಅನುಸರಿಸಿ.
- ಪರೀಕ್ಷೆಯಲ್ಲಿ ಅಪೇಕ್ಷಿತ ಶೇಕಡಾವಾರು ಗುರಿಯನ್ನು ನಿರ್ಧರಿಸಿ.
- ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದು ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
- ಅಣಕು ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮತ್ತು ಸಹಪಾಟಿಗಳೊಡನೆ ಅಭ್ಯಾಸ ಮಾಡಿ.
- ಪ್ರಶ್ನೆಪತ್ರಿಕೆಯಲ್ಲಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
- ಖಚಿತವಾಗಿ ತಿಳಿದಿರುವ ಪ್ರಶ್ನೆಗಳು/ವಿಭಾಗಗಳನ್ನು ಮೊದಲು ಉತ್ತರಿಸಿ.
- ಪ್ರಶ್ನೆಗಳನ್ನು ಉತ್ತರಿಸುವಾಗ ವೇಗ ಮತ್ತು ನಿಖರತೆಯಲ್ಲಿ ಸಮತೋಲನವಿರಲಿ.
- ತಪ್ಪುದಾರಿಗೆಳೆಯಬಹುದಾದ ತಂತ್ರಗಾರಿಕೆಯ ಪ್ರಶ್ನೆಗಳ ಬಗ್ಗೆ ಎಚ್ಚರವಿರಲಿ.
- ಪರೀಕ್ಷೆಯ ದಿನದಂದು ಆದಷ್ಟು ಶಾಂತಚಿತ್ತದಿAದಿರುವುದರಿAದ ಒತ್ತಡ ಕಡಿಮೆಯಾಗಿ ಫಲಿತಾಂಶ ಉತ್ತಮವಾಗುತ್ತದೆ.
- ನಿಮ್ಮ ಆಸಕ್ತಿ, ಅಭಿರುಚಿ ಕುರಿತ ಪ್ರಶ್ನೆಗಳನ್ನು ಪ್ರಾಮಾಣಿಕವಾಗಿ ಉತ್ತರಿಸಿ.
- ತಿಳಿಯದ ಬಹು ಆಯ್ಕೆ ಪ್ರಶ್ನೆಗಳನ್ನು ಉತ್ತರಿಸುವಾಗ ಖಚಿತವಾದ ತಪ್ಪು ಆಯ್ಕೆಗಳನ್ನು ತೆಗೆದುಹಾಕಿ ಜಾಣತನದಿಂದ ಊಹಿಸಿ.
ಕಾರ್ಯತಂತ್ರಗಳನ್ನು ರೂಪಿಸುವ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/how-to-succeed-in-entrance-exams/
Q2. ಸರ್, ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ (ವಿಜ್ಞಾನ). ವಿಎಫೆಕ್ಸ್ ಮತ್ತು ಅನಿಮೇಷನ್ನಲ್ಲಿ ತುಂಬಾ ಆಸಕ್ತಿ ಇದೆ. ಯಾವ ಕಾಲೇಜಿಗೆ ಸೇರಿದರೆ ಉತ್ತಮ?ಈ ಕ್ಷೇತ್ರದ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.
ವಿಎಫೆಕ್ಸ್ ಮತ್ತು ಅನಿಮೇಷನ್ ಈಗ ಬೇಡಿಕೆಯಲ್ಲಿರುವ ಕ್ಷೇತ್ರ. ಸೃಜನಶೀಲತೆಯೊಂದಿಗೆ ಈ ಕ್ಷೇತ್ರದಲ್ಲಿ ಸ್ವಾಭಾವಿಕ ಆಸಕ್ತಿ ಮತ್ತು ಕಂಪ್ಯೂಟರ್ ಬಳಕೆಯಲ್ಲಿ ಪರಿಣತಿಯಿದ್ದಲ್ಲಿ ಬಿಎಸ್ಸಿ (ವಿಎಫೆಕ್ಸ್, ಅನಿಮೇಷನ್, ಗೇಮ್ ಡಿಸೈನಿಂಗ್ ಇತ್ಯಾದಿ) ಮಾಡಬಹುದು. ಚಿತ್ರೋದ್ಯಮ, ಟಿವಿ ಚಾನೆಲ್ಗಳು, ಸ್ಟುಡಿಯೋಗಳು, ಗೇಮಿಂಗ್ ಸಂಸ್ಥೆಗಳು, ಜಾಹೀರಾತು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ ಅನೇಕ ವೈವಿಧ್ಯಮಯ ಕ್ಷೇತ್ರಗಳಲ್ಲಿ ಆಕರ್ಷಕ ಉದ್ಯೋಗಾವಕಾಶಗಳಿವೆ.
ಈ ಕೋರ್ಸ್ ಸಂಬAಧಪಟ್ಟ ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://collegedunia.com/courses/bachelor-of-science-bsc-animation-and-vfx
Q3. ನಾನು 2016 ರಲ್ಲಿ ಬಿಕಾಂ ಪದವಿಯನ್ನು ಪೂರ್ಣಗೊಳಿಸಿ ಕೆಲವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಕೆಲಸದಲ್ಲಿ ಸಂಪೂರ್ಣವಾದ ತೃಪ್ತಿಯಿಲ್ಲದೆ ರಾಜೀನಾಮೆ ನೀಡಿ ಸಿವಿಲ್ ಸರ್ವೀಸಸ್ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದ್ದೇನೆ. ಆದರೆ ಈಗ ನನಗೆ 26 ವರ್ಷ. ಈ ವಯಸ್ಸಿನಲ್ಲಿ ಹೀಗೆ ಮುಂದುವರೆಯಬಹುದೇ?
ತೃಪ್ತಿಯಿಲ್ಲದ ವೃತ್ತಿಜೀವನದಿಂದ ಖಾಸಗಿ ಜೀವನದ ಮೇಲೂ ಪರಿಣಾಮವಾಗುವುದು ಸಹಜ. ಈಗಲೂ ಕಾಲ ಮಿಂಚಿಲ್ಲ; ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಪರೀಕ್ಷೆಗಳಿಗೆ ಕ್ರಮವಾಗಿ ಗರಿಷ್ಟ 35 ಮತ್ತು 32 ವರ್ಷದ ಮಿತಿಯಿದೆ. ಹಾಗಾಗಿ, ಈ ಪರೀಕ್ಷೆಗಳ ಮೂಲಕ ನಿಮ್ಮ ವೃತ್ತಿಜೀವನವನ್ನ ಪುನಃಪ್ರಾರಂಭಿಸಬಹುದು.
Q4. ನಾನು ಬಿಎಸ್ಸಿ (ಪಿಸಿಎಂ) ಮುಗಿಸಿದ್ದೇನೆ. ಪೊಲೀಸ್ ಮತ್ತು ಎಸ್ಡಿಎ ಪರೀಕ್ಷೆ ಬರೆದಿದ್ದೇನೆ. ಆದರೆ, ಈ ನೇಮಕಾತಿ ತಡವಾಗಬಹುದೆಂದು ಮನೆಯಲ್ಲಿ ಎಂಎಸ್ಸಿ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ನಿಮ್ಮ ಸಲಹೆ ಬೇಕು.
ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪರಿಗಣಿಸಿ ಯಾವ ವೃತ್ತಿಯಲ್ಲಿ ಹೆಚ್ಚಿನ ತೃಪ್ತಿ ಮತ್ತು ಯಶಸ್ಸು ನಿಮ್ಮದಾಗಬಹುದೆಂದು ಪರಿಶೀಲಿಸಿ. ಅದರಂತೆ ವೃತ್ತಿಯೋಜನೆಯನ್ನು ತಯಾರಿಸಿ ಸೂಕ್ತವಾದ ಕೋರ್ಸ್ ಮತ್ತು ವೃತ್ತಿಯನ್ನು ಅನುಸರಿಸಿ.
Q5. ಬಿಕಾಂ ಮುಗಿಸಿ ಎಂಕಾಂ ಮಾಡುತ್ತಾ ಕೆಪಿಎಸ್ಸಿ ಮತ್ತು ಕೆಎಸ್ಪಿ ಪರೀಕ್ಷೆಗಳಿಗೆ ತಯಾರಿ ಮಾಡಬೇಕೆಂದುಕೊAಡಿದ್ದೇನೆ. ನನ್ನ ನಿರ್ಧಾರ ಸರಿ ಇದೆಯೇ? ನಿಮ್ಮ ಮಾರ್ಗದರ್ಶನ ನೀಡಿ.
ನೀವು ನೀಡಿರುವ ಇಷ್ಟೇ ಮಾಹಿತಿಯಿಂದ ನಿಮ್ಮ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲಾಗುವುದಿಲ್ಲ. ಆದರೂ, ಕೆಪಿಎಸ್ಸಿ ಮತ್ತು ಕೆಎಸ್ಪಿ ಪರೀಕ್ಷೆಗಳ ಮೂಲಕ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.
Q6. ನಾನು 2015 ರಲ್ಲಿ ಬಿಎ ಮಾಡಿ ನಂತರ 2017 ರಲ್ಲಿ ಬಿಪಿಇಡಿ ಮಾಡಿದ್ದೇನೆ. ಆದರೆ ನನ್ನ ಬಿಎ ಶೇ 59 ಇದೆ. ಈಗ ನಾನು ಮತ್ತೊಮ್ಮೆ ಬಿಎ ಮಾಡಲು ಬಯಸಿದ್ದು ಬಿಪಿಇಡಿ ನೇಮಕಾತಿಯಲ್ಲಿ ನಾನು ಈಗ ಮಾಡುವ ಬಿಎ ಪದವಿಯನ್ನು ಪರಿಗಣಿಸುತ್ತಾರಾ?
ನಮಗಿರುವ ಮಾಹಿತಿಯಂತೆ ಬಿಪಿಇಡಿ ಸಂಬAಧಿತ ನೇಮಕಾತಿಯಲ್ಲಿ ಬಿಎ ಪದವಿಯ ಫಲಿತಾಂಶ ಗಣನೆಗೆ ಬರುವ ಸಾಧ್ಯತೆ ಕಡಿಮೆ.
Q7. ನಾನು ಬಿಕಾಂ ಮುಗಿಸಿದ್ದೇನೆ. ಈಗ ಪಿಎಸ್ಐ ಪರೀಕ್ಷೆಗೆ ಓದಬೇಕು ಮತ್ತು ಎಂಕಾಂ ಮಾಡಬೇಕು. ಎರಡನ್ನೂ ನಿಭಾಯಿಸುವುದು ಹೇಗೆ?
ವೃತ್ತಿಯೋಜನೆಯಂತೆ ಪಿಎಸ್ಐ ಪರೀಕ್ಷೆಗೆ ತಯಾರಾಗುತ್ತಿರುವ ನಿಮಗೆ ಎಂಕಾA ಅಗತ್ಯವಿದೆಯೇ ಎಂದು ಇನ್ನೊಮ್ಮೆ ಯೋಚಿಸಿ. ಆದರೆ, ಎರಡನ್ನೂ ಮಾಡಬೇಕೆನಿಸಿದರೆ ನಿಭಾಯಿಸುವುದು ಕಷ್ಟವೇನಲ್ಲ. ಸಮಯದ ನಿರ್ವಹಣೆ ಕುರಿತು ನವೆಂಬರ್ 29 ರ ಪ್ರಶ್ನೋತ್ತರದಲ್ಲಿ ಸುದೀರ್ಘವಾದ ಮಾರ್ಗದರ್ಶನವಿದೆ. ದಯವಿಟ್ಟು ಓದಿಕೊಳ್ಳಿ.
Q8. ನಾನು ಕಳೆದ 4 ವರ್ಷಗಳಿಂದ ವಕೀಲಿ ವೃತ್ತಿಯಲ್ಲಿದ್ದು ಈ ವೃತ್ತಿಯನ್ನು ಪ್ರೀತಿಸುತ್ತೇನೆ. ಹಾಗೂ, ನನಗೆ ಸಮಾಜಸೇವೆಯಲ್ಲಿ ಆಸಕ್ತಿಯಿದ್ದು ಅನೇಕ ಯೋಜನೆಗಳು ಮನಸ್ಸಿನಲ್ಲಿದೆ. ಈ ನಿಟ್ಟಿನಲ್ಲಿ ಎಂಎಸ್ಡಬ್ಲ್ಯು ಮಾಡಲು ಇಚ್ಛಿಸಿದ್ದೇನೆ. ನಿಮ್ಮ ಸಲಹೆ ನೀಡಿ.
ನೀವು ತಿಳಿಸಿರುವ ಅನೇಕ ಯೋಜನೆಗಳು ಶ್ಲಾಘನೀಯ. ಆದರೆ, ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಎಂಎಸ್ಡಬ್ಲ್ಯು ಕೋರ್ಸ್ ಮಾಡುವ ಅಗತ್ಯವಿಲ್ಲವೆನ್ನುವುದು ನಮ್ಮ ಅಭಿಪ್ರಾಯ. ನಿಮಗೆ ಆಸಕ್ತಿಯಿರುವ ಯೋಜನೆಗಳಲ್ಲಿ ತೊಡಗಿರುವ ಅನೇಕ ಸಮಾಜ ಸೇವಾ ಸಂಸ್ಥೆಗಳೊಡನೆ ಕೈಜೋಡಿಸಿ ಸಮಾಜಕ್ಕೆ ನಿಮ್ಮ ಕೊಡುಗೆಯನ್ನು ನೀಡಬಹುದು.
Q9. ನಾನು ಈಗ 3 ವರ್ಷದ ಡಿಪ್ಲೊಮಾ ಮುಗಿಸಿದ್ದು ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದೇನೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಬರೆಯುವ ಕನಸಿದ್ದು ಬಿಎ ಪದವಿಯನ್ನು ದೂರಶಿಕ್ಷಣದ ಮುಖಾಂತರ ಮಾಡುತ್ತಿದ್ದೇನೆ. ನನ್ನ ಆಯ್ಕೆ ಸರಿಯೇ? ಅದಕ್ಕೆ ಹೇಗೆ ತಯಾರಿ ಮಾಡಬೇಕು?
ನೀವು ಈಗಾಗಲೇ ವೃತ್ತಿಯಲ್ಲಿರುವುದರಿಂದ ನಿಮ್ಮ ನಿರ್ಧಾರ ಸರಿಯೆನಿಸುತ್ತದೆ. ಯುಪಿಎಸ್ಸಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವ ನಿಮ್ಮ ನಿರ್ಧಾರ ಮೆಚ್ಚುವಂತದ್ದು. ನಿಗದಿತ ದಿನಚರಿಯೊಂದಿಗೆ ಪ್ರಚಲಿತ ವಿದ್ಯಮಾನಗಳ ಮಾಹಿತಿ, ಬರವಣಿಗೆಯ ಗುಣಮಟ್ಟ, ವಿಷಯಗಳ ಆಳವಾದ ಅಧ್ಯಯನ, ಪುನರಾವರ್ತನೆ ಇತ್ಯಾದಿಗಳ ಬಗ್ಗೆ ಪರಿಪೂರ್ಣವಾದ ತಯಾರಿಯಿರಲಿ. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.
Q10. ನಾನು ದೂರಶಿಕ್ಷಣದಲ್ಲಿ ಬಿಎಸ್ಸಿ (ಲೈಬ್ರರಿ ಸೈನ್ಸ್) ತೆಗೆದುಕೊಂಡಿದ್ದೇನೆ. ಈ ಕೋರ್ಸಿನ ಬಗೆಗಿನ ಸರ್ಕಾರಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಿ.
ಈ ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳ ಗ್ರಂಥಾಲಯಗಳು, ರಾಯಭಾರ ಕಚೇರಿಗಳು, ವಸ್ತುಸಂಗ್ರಹಾಲಯಗಳು, ಗ್ಯಾಲರಿಗಳು, ಸುದ್ದಿ ಸಂಸ್ಥೆಗಳು, ಫೋಟೋ ಮತ್ತು ಚಲನಚಿತ್ರ ಗ್ರಂಥಾಲಯಗಳು ಇತ್ಯಾದಿಗಳಲ್ಲಿ ಉದ್ಯೋಗಗಳನ್ನು ಅರಸಬಹುದು.
Q11. ನನಗೀಗ 68 ವರ್ಷ. ನಾನು 2014 ರಲ್ಲಿ ನಿವೃತ್ತಿ ಪಡೆದಿದ್ದೇನೆ. ಈಗ ನನಗೆ ಕಾನೂನು ಪುಸ್ತಕಗಳನ್ನು ಓದಬೇಕೆಂದು ಬಹಳಷ್ಟು ಆಸೆಯಿದೆ. ಈಗ ಓದಬಹುದೇ? ಕಾನೂನಿನ ಪುಸ್ತಕಗಳು ಕನ್ನಡದಲ್ಲಿ ಇದೆಯೇ?
ಈ ವಯಸ್ಸಿನಲ್ಲೂ ಇರುವ ನಿಮ್ಮ ಜ್ಞಾನಾರ್ಜನೆಯ ಅಸಕ್ತಿ, ಹಂಬಲ ಶ್ಲಾಘನೀಯ. ಕಾನೂನು ವಿಸ್ತಾರವಾದ ಕ್ಷೇತ್ರ; ನಿಮಗೆ ಕಾನೂನಿನ ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆ ಎನ್ನುವುದನ್ನು ಗುರುತಿಸಿ. ಕಾನೂನು ಸಂಬAಧಿತ ಕನ್ನಡದ ಪುಸ್ತಕಗಳು ಕಾನೂನು ಪುಸ್ತಕ ಮಾರಾಟ ಸಂಸ್ಥೆಗಳು, ಇ-ಕಾಮರ್ಸ್ ಸಂಸ್ಥೆಗಳ ಮುಖಾಂತರ ಲಭ್ಯ. ಹಾಗೂ, ಆನ್ಲೈನ್ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿಯೂ ನೀವು ಶೋಧಿಸಬಹುದು.
Q12. ಸರ್, ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡಿನಲ್ಲಿ ನನ್ನ ಹೆಸರನ್ನು ತಪ್ಪಾಗಿ ಮುದ್ರಿಸಲಾಗಿದೆ. ಇದನ್ನು ಹೇಗೆ ಸರಿಪಡಿಸಿಕೊಳ್ಳಬಹುದು?
ಸಂಬಂಧ ಪಟ್ಟ ದಾಖಲೆಗಳೊಂದಿಗೆ ನಿಮ್ಮ ಶಾಲೆಯ ಮೂಲಕ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಅರ್ಜಿ ಸಲ್ಲಿಸಿ.
Q13. ನಾನು ಅಕೌಂಟಿಂಗ್ ಮತ್ತು ಟ್ಯಾಕ್ಸೇಷನ್ನಲ್ಲಿ ಎಂಕಾಂ ಮಾಡಲು ಬಯಸುತ್ತೇನೆ ಅಥವಾ 6 ತಿಂಗಳ ಬಿಸಿನೆಸ್ ಅಕೌಂಟಿಂಗ್ ಮತ್ತು ಟ್ಯಾಕ್ಸೇಶನ್ ಕೋರ್ಸ್ ಮಾಡಬಹುದೇ?
ಭವಿಷ್ಯದ ವೃತ್ತಿಜೀವನದ ದೃಷ್ಟಿಯಿಂದ ಎಂಕಾಂ ಮಾಡುವುದು ಉತ್ತಮ.
Q14. ನಾನು ಬಿಎಸ್ಸಿ 3ನೇ ವರ್ಷದಲ್ಲಿ ಓದುತ್ತಿದ್ದೇನೆ. ಪದವಿ ಮುಗಿದ ನಂತರ ಏನು ಮಾಡಬೇಕು? ನಿಮ್ಮ ಸಲಹೆಯನ್ನು ನೀಡಿ ಸರ್.
-ನಿಮ್ಮ ವೃತ್ತಿಯೋಜನೆಯಂತೆ ಬಿಎಸ್ಸಿ ನಂತರ ಎಂಎಸ್ಸಿ, ಎಂಬಿಎ, ಎಂಸಿಎ, ಡೇಟಾ ಸೈನ್ಸ್, ಮೆಷೀನ್ ಲರ್ನಿಂಗ್, ಸಿಎ, ಎಸಿಎಸ್ ಇತ್ಯಾದಿ ಕೋರ್ಸ್ಗಳನ್ನು ಮಾಡಬಹುದು.
-ಸಂಶೋಧನೆ ಅಥವಾ ಅಧ್ಯಾಪನ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಸ್ನಾತಕೋತ್ತರ ಕೋರ್ಸ್ ಮಾಡಿ ನಂತರ ಡಾಕ್ಟರೇಟ್ ಮಾಡಬಹುದು.
-ಪದವಿಯ ನಂತರ ವೃತ್ತಿಜೀವನವನ್ನು ಪ್ರಾರಂಭಿಸುವ ಇಚ್ಛೆಯಿದ್ದರೆ ಯುಪಿಎಸ್ಸಿ, ಕೆಪಿಎಸ್ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸಬಹುದು.
-ಹಾಗೂ, ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿರುವ ಖಾಸಗಿ ಕ್ಷೇತ್ರದಲ್ಲಿ ಪದವೀಧರರಿಗೆ ಈಗ ಸಾಕಷ್ಟು ಬೇಡಿಕೆ ಇದೆ. ಆದ್ದರಿಂದ, ಈ ಕ್ಷೇತ್ರದ ಕೆಲಸಗಳಿಗೆ ಸೇರಿ, ದೂರ ಶಿಕ್ಷಣ ಅಥವಾ ಸಂಜೆ ಕಾಲೇಜುಗಳ ಮೂಲಕ ವೃತ್ತಿ ಸಂಬಂಧಿತ ಅಲ್ಪಾವಧಿ ಕೋರ್ಸ್ ಅಥವಾ ಉನ್ನತ ಶಿಕ್ಷಣವನ್ನು ಮುಂದುವರೆಸಿಕೊಂಡು ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.
ಪ್ರಮುಖವಾಗಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ತಯಾರಿಸಿ, ಅದರಂತೆ ನಿರ್ಧರಿಸಿ.
Q15. ನಾನು ಬಿಎಸ್ಸಿ, ಬಿಎಡ್ (ಪಿಎಂಸಿಎಸ್) ಮುಗಿಸಿದ್ದೀನಿ. ಮೂರು ಬಾರಿ ಟಿಇಟಿ ಪರೀಕ್ಷೆಗೆ ಅರ್ಹತೆ ಗಳಿಸಿದ್ದು ಸಿಟಿಇಟಿಗಾಗಿ ಕಾಯುತ್ತಿದ್ದೇನೆ. ಆದರೆ ಕೆಲವು ಸರ್ಕಾರಿ ನಿಯಮಗಳ ಪ್ರಕಾರ ಪಿಎಂಸಿಎಸ್ ತೆಗೆದುಕೊಂಡಿವರಿಗೆ ಸಿಟಿಇಟಿ ಬರೆಯಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ನನಗೆ ಶಿಕ್ಷಕ ವೃತ್ತಿ ಆಯ್ಕೆ ಮಾಡಬೇಕೆಂಬ ಹಂಬಲವಿದೆ. ನನ್ನ ಕನಸು ಈಡೇರಲು ಏನು ಮಾಡಬೇಕು?
ಅಂಜಲಿ ಮಹಾಂತೇಶ್, ಊರು ತಿಳಿಸಿಲ್ಲ.
ನಮಗಿರುವ ಮಾಹಿತಿಯಂತೆ ಸಿಟಿಇಟಿ ಪರೀಕ್ಷೆ ಬರೆಯಲು ಯಾವುದಾದರೂ ಪದವಿಯ ಜೊತೆಗೆ ಬಿಎಡ್ ಆಗಿರಬೇಕು. ಹಾಗಾಗಿ, ನಿಮಗೆ ಸಿಟಿಇಟಿ ಪರೀಕ್ಷೆ ಬರೆಯುವ ಅರ್ಹತೆ ಇದೆ ಎನ್ನುವುದು ನನ್ನ ಅಭಿಪ್ರಾಯ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ctet.nic.in/WebInfo/Page/Page?PageId=1&LangId=P
Q16. ನಮಸ್ತೆ ಸರ್. ನಾನು ಬಿಕಾಂ ಮುಗಿಸಿ ಎಂಬಿಎ ಮೊದಲ ವರ್ಷಕ್ಕೆ ನಿಲ್ಲಿಸಿ 1 ವರ್ಷ ಆಗಿದೆ. ಈಗ ಅದೇ ಕೋರ್ಸನ್ನು ಮುಂದುವರೆಸಲು ಸಾಧ್ಯವೇ?
ಸಾಮಾನ್ಯವಾಗಿ 1 ವರ್ಷದ ಅಂತರಕ್ಕೆ ಸಕಾರಣಗಳಿದ್ದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಬಹುದು. ಹಾಗಾಗಿ, ನಿಮ್ಮ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ.
Q17. ನಾನು ಡಿಪ್ಲೊಮಾ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದೇನೆ. ನಾನು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದಾ? ಯಾವ ಪರೀಕ್ಷೆಗಳನ್ನು ಬರೆಯಬಹುದು?
ನೀವು ಮಾಡುತ್ತಿರುವ ಡಿಪ್ಲೊಮಾ ಬಗ್ಗೆ ನೀಡಿರುವ ಕಿರು ಮಾಹಿತಿಯಿಂದ ನಿರ್ಧಿಷ್ಟವಾಗಿ ಪ್ರತಿಕ್ರಿಯಿಸಲಾಗದು. ಸಾಮಾನ್ಯವಾಗಿ ಡಿಪ್ಲೊಮಾ ನಂತರ ಎಸ್ಎಸ್ಸಿ (ಸಿಎಚ್ಎಸ್ಎಲ್), ಎಸ್ಎಸ್ಸಿ (ಎಂಟಿಎಸ್), ಆರ್ಆರ್ಬಿ (ರೈಲ್ವೇಸ್), ಡಿಆರ್ಡಿಒ, ಕೆಪಿಎಸ್ಸಿ ಮುಂತಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು. ಕೆಲವೊಮ್ಮೆ, ಪವರ್ ಗ್ರಿಡ್ ಕಾರ್ಪೊರೇಷನ್ನಂತಹ ಅನೇಕ ಸರ್ಕಾರಿ ಸಂಸ್ಥೆಗಳಲ್ಲಿ ನೇರ ನೇಮಕಾತಿಯೂ ನಡೆಯುತ್ತದೆ. ಇನ್ನೂ ಓದುವ ಇಚ್ಛೆಯಿದ್ದಲ್ಲಿ, ಪಾರ್ಶ್ವ ಪ್ರವೇಶದ ಅವಕಾಶವನ್ನು ಬಳಸಿಕೊಂಡು ಎಂಜಿನಿಯರಿಂಗ್ ಕೋರ್ಸ್ ಮಾಡಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಬಹುದು.
Q18. ಬಿಸಿಎ ಮುಗಿದ ಮೇಲೆ ಯಾವುದನ್ನು ಆರಿಸಿಕೊಂಡರೆ ಉತ್ತಮ? ಜಾವಾ ಅಥವಾ ಸಿ++? ಐಟಿ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿ.
ಐಟಿ ವಿಸ್ತಾರವಾದ ಕ್ಷೇತ್ರ. ಈಗ ತ್ವರಿತವಾದ ಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಐಟಿ ಕ್ಷೇತ್ರದಲ್ಲಿರುವ ಅನೇಕ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಹಾಗೂ, ಈ ಕ್ಷೇತ್ರದಲ್ಲಿರುವ ಆಕರ್ಷಕ ಮತ್ತು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ಸ್ಪಷ್ಟವಾದ ವೃತ್ತಿಯೋಜನೆಯಿರಲೇ ಬೇಕು. ಆದ್ದರಿಂದ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿದರೆ ನಿಮಗೆ ಯಾವ ಪ್ರೋಗ್ರಾಮಿಂಗ್ ಭಾಷೆಯ ಪರಿಣತಿ ಬೇಕಾಗುತ್ತದೆ ಎಂದು ಅರಿವಾಗುತ್ತದೆ. ಏಕೆಂದರೆ, ಪ್ರತಿ ಭಾಷೆಗೆ ತನ್ನದೇ ಆದ ಉಪಯುಕ್ತತೆ ಮತ್ತು ಇತಿಮಿತಿಯಿರುತ್ತದೆ.
ಪ್ರೋಗ್ರಾಮಿಂಗ್ ಭಾಷೆಗಳಲ್ಲಿ, ಮೇಲ್ನೋಟಕ್ಕೆ ಸಿ++ ಕೋರ್ಸ್ ಉತ್ತಮವೆಂದೆನಿಸಿದರೂ ಜೊತೆಯಲ್ಲಿ ಜಾವಾ ಮತ್ತು ಪೈಥಾನ್ ಕೋರ್ಸುಗಳನ್ನು ಮಾಡುವುದರಿಂದ ನಿಮ್ಮ ಕೌಶಲಗಳಲ್ಲಿ ವೈವಿಧ್ಯತೆಗಳಿದ್ದು ಹೆಚ್ಚಿನ ಉದ್ಯೋಗಾವಕಾಶಕ್ಕೆ ಅರ್ಹರಾಗಬಲ್ಲಿರಿ. ಈ ಕೋರ್ಸ್ಗಳನ್ನು ಮಾಡಿದ ನಂತರ ಐಟಿ ಕ್ಷೇತ್ರದಲ್ಲಿ ಪ್ರೋಗ್ರಾಮರ್, ಸಾಪ್ಫ್ವೇರ್ ಡೆವಲಪರ್, ಕ್ವಾಲಿಟಿ ಅನಲಿಸ್ಟ್ ಮುಂತಾದ ಹುದ್ದೆಗಳನ್ನು ಅರಸಿ, ನಿಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://hackr.io/blog/best-programming-languages-to-learn-2022-jobs-future
Q19. ನಾನು ಬಿಎಸ್ಸಿ (ಫಿಸಿಕ್ಸ್, ಎಲೆಕ್ಟಾçನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್) ಮುಗಿಸಿದ್ದೇನೆ. ಹಾಗೂ, ಎಂಎಸ್ಸಿ(ಕAಪ್ಯೂಟರ್ ಸೈನ್ಸ್) ಮುಗಿಸಿದ್ದೇನೆ. ಮುಂದೆ ಬಿಎಡ್ ಮಾಡಬೇಕು ಎಂದುಕೊAಡಿದ್ದೇನೆ. ಆದರೆ, ಡಿಗ್ರಿಯಲ್ಲಿ ಗಣಿತ ಮಾಡಿಲ್ಲದೇ ಇರುವುದರಿಂದ ಬಿಎಡ್ ಮಾಡಲಾಗುವುದಿಲ್ಲ ಎನ್ನುತ್ತಿದ್ದಾರೆ. ದಯವಿಟ್ಟು ಮಾರ್ಗದರ್ಶನ ಮಾಡಿ.
ಬಿಎಸ್ಸಿ ಸೇರಿದಂತೆ ಯಾವುದೇ ಪದವಿ ಪರೀಕ್ಷೆಯಲ್ಲಿ ಶೇ 50 ಅಂಕಗಳಿದ್ದಲ್ಲಿ ಬಿಎಡ್ ಮಾಡಲು ಅರ್ಹತೆಯಿದೆ ಎನ್ನುವುದು ನನ್ನ ಅಭಿಪ್ರಾಯ.
Q20. ನಾನು ಬಿಕಾಂ ಅಂತಿಮ ವರ್ಷದಲ್ಲಿದ್ದೇನೆ, ನಾನು ಎಂಕಾA ಮಾಡಬೇಕೆಂದುಕೊAಡಿದ್ದು, ಎಂಕಾA ಕೋರ್ಸನ್ನು ಪ್ರತೇಕ ವಿಷಯಗಳ ಕುರಿತು ಮಾಡಬೇಕಾ ಅಥವಾ ಸಾಮಾನ್ಯವಾದ ಕೋರ್ಸ್ ಇದೆಯೇ? ಎಂಕಾAನಲ್ಲಿ ವಿಷಯಾಧಾರಿತ ಅಧ್ಯಯನವಿದ್ದರೆ ತಿಳಿಸಿಕೊಡಿ ಸರ್.
ಎಂಕಾಂ ಕೋರ್ಸಿನಲ್ಲಿ ಎರಡು ವಿಧಗಳಿರುತ್ತದೆ.
- ಎಂಕಾಂ
- ಎಂಕಾಂ (ಸ್ಪೆಷಲೈಜೇಷನ್-ಅಕೌಂಟಿಂಗ್, ಅಕೌಂಟಿಂಗ್ ಮತ್ತು ಫೈನಾನ್ಸ್, ಟ್ಯಾಕ್ಸೇಷನ್, ಬ್ಯಾಂಕಿಂಗ್ ಮತ್ತು ಇನ್ಶೂರೆನ್ಸ್, ಇಂಟರ್ನ್ಯಾಷನಲ್ ಬಿಸಿನೆಸ್, ಮಾರ್ಕೆಟಿಂಗ್, ಇನ್ವೆಸ್ಟ್ಮೆಂಟ್ಸ್, ಎಕನಾಮಿಕ್ಸ್ ಇತ್ಯಾದಿ). ಈ ಕೋರ್ಸುಗಳಲ್ಲಿ ಕಡ್ಡಾಯವಾದ ವಿಷಯಗಳ ಜೊತೆಗೆ ಐಚ್ಛಿಕ ವಿಷಯಗಳಿರುತ್ತವೆ. ನಿಮ್ಮ ವೃತ್ತಿಜೀವನದ ಆದ್ಯತೆಯಂತೆ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಗಮನಿಸಿ: https://www.shiksha.com/m-com-chp
Q21. ನಾನು ನಾಯಕ (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದ್ದೇನೆ. ಪಿಸಿ ಆಗಲು ವಯಸ್ಸು ಮೀರಿದೆ. ಈಗ ಸಬ್ ಇನ್ಸ್ಪೆಕ್ಟರ್ಗೆ ಓದುತ್ತಿದ್ದೇನೆ. ಪಿಎಸ್ಐ, ಪಿಡಿಒ, ಎಸ್ಡಿಎ ಹಾಗೂ ಕೆಎಎಸ್ ಪರೀಕ್ಷೆಯ ವಯೋಮಿತಿ ಬಗ್ಗೆ ಮಾಹಿತಿ ನೀಡಿ.
ನಮಗಿರುವ ಮಾಹಿತಿಯಂತೆ ಪರಿಶಿಷ್ಟ ಪಂಗಡಗಳಿಗೆ ಅನ್ಯಯವಾಗುವ ವಯೋಮಿತಿ ಹೀಗಿರುತ್ತದೆ: ಪಿಎಸ್ಐ (32 ವರ್ಷ), ಪಿಡಿಒ (40 ವರ್ಷ) ಎಸ್ಡಿಎ (40 ವರ್ಷ) ಮತ್ತು ಕೆಎಎಸ್ (40 ವರ್ಷ).
Q22. ನಾನು ಪಿಯುಸಿ (ವಿಜ್ಞಾನ) ಓದಿ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ಬಿಎ ಮಾಡಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು?
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಇದೇ ತಿಂಗಳ 6ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಗಮನಿಸಿ: http://www.vpradeepkumar.com/how-to-succeed-in-entrance-exams/
Q23. ನಾನು ಯುಪಿಎಸ್ಸಿ ತರಬೇತಿ ಪಡೆಯುತ್ತಿದ್ದೇನೆ. ಆದರೆ, ನನಗೆ ಇಂಗ್ಲಿಷ್ ಭಾಷೆ ಅರ್ಥವಾಗುತ್ತಿಲ್ಲ. ನಾನು ಕನ್ನಡದಲ್ಲೇ ಅಭ್ಯಾಸ ನಡೆಸಿದರೆ ಪೂರ್ವಭಾವಿ ಪರೀಕ್ಷೆಗೆ ತೊಂದರೆಯಾಗುತ್ತದೆ. ದಯವಿಟ್ಟು ಇಂಗ್ಲೀಷ್ ಕಲಿಯಲು ಸುಲಭದ ಉಪಾಯಗಳನ್ನು ತಿಳಿಸಿ.
ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಲ್ಲ; ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಕಾರ್ಯತಂತ್ರ ಮತ್ತು ಪರಿಶ್ರಮವಿದ್ದಲ್ಲಿ, ಇಂಗ್ಲಿಷ್ ಕಲಿಯಬಹುದು. ಮೊದಲಿಗೆ, ಈ ಸಲಹೆಗಳನ್ನು ಅನುಸರಿಸಿ:
-ಆತ್ಮವಿಶ್ವಾಸ: ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ ಹಿಂಜರಿಕೆಯಿಲ್ಲದೆ, ಆತ್ಮವಿಶ್ವಾಸದಿಂದ ಕಲಿಕೆಯನ್ನು ಪ್ರಾರಂಭಿಸಿ.
-ಓದುವುದು: ಇಂಗ್ಲಿಷ್ ವಾರ್ತಾಪತ್ರಿಕೆಗಳನ್ನು, ಪುಸ್ತಕಗಳನ್ನು, ಲೇಖನಗಳನ್ನು ದಿನನಿತ್ಯ ಓದಿ. ಪದಬಳಕೆ, ವಾಕ್ಯ ರಚನೆ, ವ್ಯಾಕರಣವನ್ನು ಗಮನಿಸಿ. ಸಾಧ್ಯವಾದರೆ, ಉಚ್ಛಾರಣೆಗೆ ಸಹಾಯವಾಗುವಂತೆ ಜೋರಾಗಿ ಓದಿ. ಅರ್ಥವಾಗದ ಪದಗಳನ್ನು ನಿಘಂಟಿನ ಮೂಲಕ ಅರ್ಥೈಸಿಕೊಳ್ಳಿ.
-ಮಾತನಾಡುವುದು: ಆತ್ಮೀಯರೊಂದಿಗೆ ಸರಳವಾದ ವಿಷಯಗಳನ್ನು ಮಾತನಾಡಲು ಪ್ರಯತ್ನಿಸಿ. ತಪ್ಪು-ಒಪ್ಪುಗಳಾದಲ್ಲಿ, ಸಂಕೋಚ ಪಡದೆ ಪ್ರಯತ್ನವನ್ನು ಮುಂದುವರೆಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು, ಕನ್ನಡಿಯ ಮುಂದೆ ಆಂಗಿಕ ಭಾಷೆಯನ್ನು ಬಳಸಿ ಮಾತನಾಡಿ.
-ವೀಡಿಯೊ, ಚಲನಚಿತ್ರಗಳ ವೀಕ್ಷಣೆ: ಕನ್ನಡದ ಉಪಶೀರ್ಷಿಕೆಗಳಿರುವ ಇಂಗ್ಲಿಷ್ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿ. ಅದೇ ರೀತಿ, ಯೂಟ್ಯೂಬ್ನಲ್ಲಿ ಇಂಗ್ಲಿಷ್ ಕಲಿಕೆಗೆ ನೆರವಾಗುವ ವೀಡಿಯೋಗಳನ್ನು ವೀಕ್ಷಿಸಿ. ಹಾಗೆಯೇ, ಸಾಧಕರ ಭಾಷಣಗಳನ್ನು ಕೇಳುವುದರಿಂದ ಪ್ರೇರೇಪಿತರಾಗುವುದರ ಜೊತೆಗೆ ಇಂಗ್ಲೀಷ್ ಕಲಿಯುವಿಕೆಗೆ ಸಹಾಯವಾಗುತ್ತದೆ.
-ಮೊಬೈಲ್ ಅಪ್ಲಿಕೇಶನ್ಸ್ ಬಳಕೆ: ಇಂಗ್ಲಿಷ್ ಕಲಿಕೆಗೆ ಅನುಕೂಲವಾಗುವ ಹಲವಾರು ಮೊಬೈಲ್ ಅಪ್ಲಿಕೇಶನ್ಸ್ಗಳನ್ನು ಬಳಸಿ.
ಈ ಸಲಹೆಗಳನ್ನು ನಿರಂತರವಾಗಿ ಕೆಲವು ತಿಂಗಳ ಕಾಲ ಅನುಸರಿಸಿದ ನಂತರ ನಿಮ್ಮ ಇಂಗ್ಲಿಷ್ ಕಲಿಕೆ ಒಂದು ಹಂತಕ್ಕೆ ತಲುಪುತ್ತದೆ. ಆಗ, ನೀವು ಯುಪಿಎಸ್ಸಿ ತರಬೇತಿ ಪಡೆಯುತ್ತಿರುವ ಸಂಸ್ಥೆ ಅಥವಾ ಆನ್ಲೈನ್ ಕೋರ್ಸ್ಗಳ ಮೂಲಕ ಹೆಚ್ಚಿನ ಪರಿಣತಿಯನ್ನು ಗಳಿಸಿ. ಶುಭಹಾರೈಕೆಗಳು.
Q24. ನಾನು ಎರಡನೇ ಪಿಯುಸಿ (ವಿಜ್ಞಾನ) ಓದುತ್ತಿದ್ದೇನೆ. ನನಗೆ ಓದಲು ಇತ್ತೀಚೆಗೆ ತುಂಬಾ ಕಷ್ಟವಾಗಿ ಓದಲು ಆಸಕ್ತಿ ಇಲ್ಲದಂತಾಗಿದೆ. ಇದರಿಂದ ಮನೆಯಲ್ಲಿ ನನ್ನ ಬಗ್ಗೆ ಕೋಪಗೊಂಡಿದ್ದಾರೆ. ಆದ ಕಾರಣ, ನಾನು ಎರಡನೇ ಪಿಯುಸಿ ಮುಗಿಸಿ ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆಯಾಗದ ಯಾವ ಕೋರ್ಸ್ ಮಾಡಿದರೆ ಒಳ್ಳೆಯದು? ಮತ್ತು ಬೇಗ ಕೆಲಸ ಪಡೆದುಕೊಳ್ಳುವ ಕೋರ್ಸ್ ಇದ್ದರೆ ದಯವಿಟ್ಟು ತಿಳಿಸಿ.
ನಿಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡಿರುವ ಮನೆಯವರ ಪ್ರತಿಕ್ರಿಯೆ ಸಹಜ. ಈಗಿನ ಪರಿಸ್ಥಿತಿಯಿಂದ ಎದೆಗುಂದದೆ ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಸಾಧಕರ ಕಥೆಗಳನ್ನು ಓದಿ, ವೀಡಿಯೋಗಳನ್ನು ವೀಕ್ಷಿಸಿ; ಸ್ವಯಂ ಪ್ರೇರಣೆಯನ್ನು ಬೆಳೆಸಿಕೊಂಡು ನೀವೂ ಒಬ್ಬ ಸಾಧಕರಾಗಲು ಪ್ರಯತ್ನಿಸಿ. ಹಾಗೂ, ಈ ಕುರಿತು ನಿಮ್ಮ ಮನೆಯವರಿಗೆ ಮನವರಿಕೆಯಾಗುವಂತೆ ವಿವರಿಸಿ, ಅವರ ಬೆಂಬಲವನ್ನು ಪಡೆಯಿರಿ.
ಎಂಜಿನಿಯರಿAಗ್, ಬಿಎಸ್ಸಿ ಅಥವಾ ನಿಮಗಿಷ್ಟವಿರುವ ಕೋರ್ಸ್ ಮಾಡಲು ಸರ್ಕಾರಿ ಕಾಲೇಜುಗಳನ್ನು ಸೇರಬಹುದು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಆ ಅನುಕೂಲಗಳನ್ನು ಪಡೆದುಕೊಳ್ಳಿ. ಅಗತ್ಯವಿದ್ದರೆ, ವಿದ್ಯಾಭ್ಯಾಸದ ಜೊತೆಗೆ ಅರೆಕಾಲಿಕ ಕೆಲಸಗಳನ್ನು ಮಾಡಿ ಆರ್ಥಿಕ ಸಮಸ್ಯೆಯ ಭಾರವನ್ನು ತಗ್ಗಿಸಿ ಮನೆಯವರ ವಿಶ್ವಾಸವನ್ನು ಗಳಿಸಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/self-motivation
ಸರ್, ನಾನು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು ಸಿಎಂಎ (ಯುಎಸ್ಎ) ಕೋರ್ಸ್ ಬಗ್ಗೆ ತಿಳಿಸಿ. ಎಂಬಿಎ ಮತ್ತು ಸಿಎಂಎ ಇವೆರಡರಲ್ಲಿ, ಯಾವುದಕ್ಕೆ ಹೆಚ್ಚು ಅವಕಾಶಗಳಿವೆ?
ಸುದರ್ಶನ್, ಮಂಗಳೂರು.
ಸಿಎಂಎ, ಹಣಕಾಸಿನ ವ್ಯವಹಾರಗಳ ನಿರ್ವಹಣೆಗೆ ಸಂಬಂಧಪಟ್ಟ ಕ್ಷೇತ್ರ; ಎಂಬಿಎ ಉದ್ಯಮಗಳ ನಿರ್ವಹಣೆಗೆ ಸಂಬಂಧಪಟ್ಟ ಕ್ಷೇತ್ರ.
ಸಿಎಂಎ (ಯುಎಸ್ಎ) ಕೋರ್ಸನ್ನು ಪದವಿಯ ನಂತರ, ಎರಡು ವರ್ಷಗಳ ಹಣಕಾಸು ಸಂಬAಧಿತ ಕೆಲಸದ ಅನುಭವದ ನಂತರ ಮಾಡಬಹುದು. ನಿಮ್ಮ ಪರಿಶ್ರಮ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಈ ಕೋರ್ಸನ್ನು 6 ತಿಂಗಳಿಂದ 3 ವರ್ಷದ ಒಳಗೆ ಮುಗಿಸಬಹುದು. ಕೋರ್ಸ್ ಮುಗಿದ ನಂತರ, ವಿಶೇಷವಾಗಿ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಹೆಚ್ಚು ಉದ್ಯೋಗಾವಕಾಶಗಳಿವೆ. ಎಂಬಿಎ ಕೋರ್ಸನ್ನು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಮಾಡಿದರೆ ಕ್ಯಾಂಪಸ್ ಮುಖಾಂತರ ಆಕರ್ಷಕ ಉದ್ಯೋಗಾವಕಾಶಗಳಿರುತ್ತದೆ.
ಹಾಗಾಗಿ, ನೀವು ಕೇಳಿರುವ ಎರಡೂ ಕೋರ್ಸ್ಗಳಿಗೆ ವಿಪುಲವಾದ ಉದ್ಯೋಗಾವಕಾಶಗಳಿದ್ದು, ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಂತೆ ನಿರ್ಧರಿಸಿ.
Q25. ಸರ್, ನಾನು ಬಿಕಾಂ ಮುಗಿಸಿದ್ದೇನೆ. ನನಗೆ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದೆ. ಅದೇ ಉದ್ಯೋಗದಲ್ಲಿ ಮುಂದುವರಿಯಲೇ? ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ನನಗೆ ಭವಿಷ್ಯವಿದೆಯೇ?
ಕೋವಿಡ್19 ಆಘಾತದಿಂದ ಹೆಚ್ಚು ಬಳಲಿದ ಇವೆಂಟ್ ಮ್ಯಾನೇಜ್ಮೆಂಟ್ ಕ್ಷೇತ್ರ, ಈಗ ಚೇತರಿಸಿಕೊಳ್ಳುವ ಹಾದಿಯಲ್ಲಿದೆ. ದೀರ್ಘಾವಧಿಯಲ್ಲಿ ಸಾಕಷ್ಟು ಬೇಡಿಕೆಯಿರುತ್ತದೆಯಾದರೂ, ಇದೊಂದು ಅತಿ ಹೆಚ್ಚು ಪೈಪೋಟಿಯಿರುವ ಸ್ಪರ್ಧಾತ್ಮಕ ಕ್ಷೇತ್ರ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಂವಹನ ಕೌಶಲ, ಶಿಸ್ತು, ಪರಿಶ್ರಮ ಮತ್ತು ನಾಯಕತ್ವದ ಕೌಶಲವಿದ್ದು, ಕಾರ್ಯಕ್ಷಮತೆ ನಿರೀಕ್ಷೆಯಂತಿರಬೇಕು.
Q26. ನಾನು ಡಿಪ್ಲೊಮಾ ಮಾಡಿ ಬಿಎ ಮುಗಿಸಿದ್ದೇನೆ. ನಾನು ಪಿಎಸ್ಐ, ಪಿಡಿಒ, ಕೆಎಎಸ್ ಪರೀಕ್ಷೆ ಬರೆಯಬಹುದೇ?
ನೀವು ಪದವಿಯನ್ನು ಮುಗಿಸಿರುವುದರಿಂದ, ಪಿಎಸ್ಐ, ಪಿಡಿಒ ಮತ್ತು ಕೆಎಎಸ್ ಪರೀಕ್ಷೆಯನ್ನು ಬರೆಯಬಹುದು.
ನಾನು ಬಿಇ (ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಮುಗಿಸಿದ್ದೇನೆ). ಮುಂದೆ, ಇದೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದುಕೊಂಡಿದ್ದೇನೆ. ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿ.
ಐಟಿ, ಟೆಲಿಕಾಮ್, ಆಟೊಮೊಬೈಲ್, ಏರೋಸ್ಪೇಸ್, ಸ್ಟೀಲ್, ವಿದ್ಯುತ್ ಉತ್ಪಾದನೆ, ಪ್ರಸರಣೆ ಮತ್ತು ವಿತರಣೆ ಸಂಸ್ಥೆಗಳು, ರೈಲ್ವೇಸ್, ಪ್ರಾಪರ್ಟಿ, ಎಂಜಿನಿಯರಿಂಗ್ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.
ನಾನು ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೆ, ಎಂಎಸ್ಸಿ ಮುಗಿಸಿ ಎನ್ಇಟಿ ಪರೀಕ್ಷೆಯನ್ನು ಗಣಿತದಲ್ಲಿ ಮಾಡಬೇಕೆಂದುಕೊAಡಿದ್ದೀನಿ. ನಿಮ್ಮ ಮಾರ್ಗದರ್ಶನ ನೀಡಿ.
ಅಮರೇಶ್, ಊರು ತಿಳಿಸಿಲ್ಲ.
ಎನ್ಇಟಿ ಪರೀಕ್ಷೆಯ ಎಲ್ಲಾ ವಿವರಗಳಿಗಾಗಿ ಗಮನಿಸಿ: https://prepp.in/csir-ugc-net-exam/exam-pattern
Q27. ನಾನು ಬಿಎ ಮುಗಿಸಿದ್ದೀನಿ ಮತ್ತು ಪಿಎಸ್ಐ ಆಗಬೇಕು. ಆದರೆ, ಮುಂದೇನು ಮಾಡಬೇಕು ತಿಳಿಯುತ್ತಿಲ್ಲ. ದಯವಿಟ್ಟು ಮಾರ್ಗದರ್ಶನ ನೀಡಿ.
Q28. ಸರ್, ನಾನು ಪದವಿ (ಬಿಎ) ಮುಗಿಸಿದ್ದು, ಪಿಎಸ್ಐ ಆಗಲು ಇಚ್ಚಿಸಿದ್ದು, ಇದಕ್ಕೆ ಹೇಗೆ ತಯಾರಿ ನಡೆಸಬೇಕು?
Q29. ನಾನು ಪೊಲೀಸ್ ಇಲಾಖೆಯ ಪಿಸಿ ಮತ್ತು ಪಿಎಸ್ಐ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ ಮತ್ತು ಹಲವಾರು ಪರೀಕ್ಷೆಗಳನ್ನು ಬರೆದು ಸೋತಿದ್ದೇನೆ. ನಾನು ಎಲ್ಲಿ ಎಡವುತ್ತಿದ್ದೇನೆ ತಿಳಿಯುತ್ತಿಲ.್ಲ ಹಾಗಾಗಿ ಅದನ್ನು ತಿಳಿಯುವ ಮಾರ್ಗ ತಿಳಿಸಿ. ಪ್ರಸ್ತುತ ಯೂಟ್ಯೂಬ್ನ ಆನ್ಲೈನ್ ತರಗತಿಗಳನ್ನು ನಾವು ಹೇಗೆ ಸದ್ಭಳಕೆ ಮಾಡಿಕೊಳ್ಳಬಹುದು?
ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ ಮತ್ತು ವಿಷಯಸೂಚಿಗೆ ಗಮನಿಸಿ: https://prepp.in/karnataka-police-exam
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/how-to-succeed-in-entrance-exams/
Q30. ನಾನು ಕನ್ನಡ ಶಿಕ್ಷಕನಾಗಬೇಕೆಂಬ ಆಸೆ ಇತ್ತು. ಆದರೆ, ನಾನು ಎಂಜಿನಿಯರಿಂಗ್ ಮಾಡಿದ್ದೇನೆ. ಮುಂದೇನು ಮಾಡಿದರೆ, ನನ್ನ ಗುರಿ ತಲುಪಬಹುದು?
ಎಂಜಿನಿಯರಿಂಗ್ ಪದವೀಧರರು ಬಿಇಡಿ ಮಾಡುವ ಅಗತ್ಯವಿಲ್ಲದೆ ಕರ್ನಾಟಕ ಸರ್ಕಾರದ ಟಿಇಟಿ ಪರೀಕ್ಷೆಯನ್ನು ಪಾಸಾಗಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಕಲಿಸುವ ವ್ಯವಸ್ಥೆ ಈಗ ಜಾರಿಯಾಗುತ್ತಿದೆ. ಈ ರೀತಿ, ನೀವು ಅತಿ ಶೀಘ್ರದಲ್ಲಿ ಶಿಕ್ಷಕರಾಗಿ, ವೃತ್ತಿ ಸಂಬಂಧಿತ ಕೌಶಲಗಳಾದ ತಾಳ್ಮೆ, ಸಹನೆ, ಸಂವಹನ, ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಕೌಶಲ ಮತ್ತು ನಾಯಕತ್ವದ ಕೌಶಲಗಳು ನಿಮ್ಮಲ್ಲಿವೆಯೇ ಎಂದು ಮತ್ತು ಈ ವೃತ್ತಿಯಲ್ಲಿ ನಿಮಗೆ ಸಂತೃಪ್ತಿ ಸಿಗುವುದೇ ಎಂದು ಸ್ವತಃ ಪರೀಕ್ಷಿಸಬಹುದು. ಇದಾದ ನಂತರ, ನಿಮ್ಮ ಆದ್ಯತೆಯಂತೆ, ಕನ್ನಡ ಭಾಷೆ ಅಥವಾ ಇನ್ನಿತರ ವಿಷಯಗಳಲ್ಲಿ ಪರಿಣತಿ ಗಳಿಸಿ ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸಬಹುದು.