1. ನಾನು ಎಸ್ಎಸ್ಎಲ್ಸಿ ಓದುತ್ತಿದ್ದು, ಮುಂದೆ ಐಎಎಸ್/ಐಪಿಎಸ್ ಅಧಿಕಾರಿಯಾಗುವ ಆಸೆಯಿದೆ. ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದು ಇಂಗ್ಲಿಷ್ ಕಷ್ಟವೆನಿಸುತ್ತಿದೆ. ಎಸ್ಎಸ್ಎಲ್ಸಿ ನಂತರ ಯಾವ ಕೋರ್ಸ್ ತೆಗೆದುಕೊಳ್ಳಬೇಕು?
ಎಸ್ಎಸ್ಎಲ್ಸಿ ವಿದ್ಯಾರ್ಥಿಯಾಗಿರುವಾಗಲೇ ಐಎಎಸ್/ಐಪಿಎಸ್ ಅಧಿಕಾರಿಯಾಗುವ ನಿಮ್ಮ ಗುರಿ ಶ್ಲಾಘನೀಯ.
ಯಾವುದೇ ಪದವಿಯ ನಂತರ ಯುಪಿಎಸ್ಸಿ ಪರೀಕ್ಷೆಯಲ್ಲಿ ಭಾಗವಹಿಸುವ ಅರ್ಹತೆ ಸಿಗುತ್ತದೆ. ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ ಬಿಎ, ಬಿ.ಎಸ್ಸಿ, ಬಿಕಾಂ, ಬಿ.ಟೆಕ್ ಮುಂತಾದ ಪದವಿಯನ್ನು ಮಾಡಬಹುದು. ಎರಡನೇ ವರ್ಷದ ಪದವಿಯಲ್ಲಿರುವಾಗಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡುವುದು ಸೂಕ್ತ. ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಬಹು ಆಯ್ಕೆ ಮಾದರಿಯಾಗಿರುತ್ತದೆ; ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದು; ಸಂದರ್ಶನವನ್ನು ಕನ್ನಡದಲ್ಲಿ ನೀಡಬಹುದು.
ಇಂಗ್ಲಿಷ್ ಕಲಿಕೆಗೆ ಸಹಾಯವಾಗಬಹುದಾದ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=NoFcIQAFDCA
2. ಸರ್, ನಾನು ಅಂತಿಮ ವರ್ಷದ ಪದವಿಯಲ್ಲಿದ್ದು, ಪೊಲೀಸ್ ಆಗುವ ಕನಸಿದೆ. ಅದರ ಜೊತೆ ಇತಿಹಾಸ ವಿಷಯದಲ್ಲಿ ಎಂಎ ಮಾಡಿ, ಶಿಕ್ಷಕನಾಗುವ ಅಸೆಯೂ ಇದೆ. ಆದರೆ, ನನಗೆ ಯಾವುದು ಮಾಡಿದರೆ ಸರಿ ಎಂದು ಗೊತ್ತಾಗುತ್ತಿಲ್ಲ, ಯಾವುದು ಸೂಕ್ತ ಎಂದು ತಿಳಿಸಿ.
ಯಾವುದೇ ವೃತ್ತಿಯ ಯಶಸ್ಸಿಗೆ ಆಸಕ್ತಿ, ಸಾಮರ್ಥ್ಯ, ಅಭಿರುಚಿ, ವೃತ್ತಿ ಸಂಬAಧಿತ ಜ್ಞಾನ ಮತ್ತು ಕೌಶಲಗಳಿರಬೇಕು. ಪೊಲೀಸ್ ವೃತ್ತಿಗೆ ನಾಯಕತ್ವದ ಕೌಶಲ, ದಿಟ್ಟತನ, ಸಹಭಾಗಿತ್ವದ ಕೌಶಲ, ಉತ್ತಮ ಸಂವಹನ, ಪರಿಶೋಧನಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳ ಜೊತೆ ಸಕಾರಾತ್ಮಕ ಧೋರಣೆಯಿರಬೇಕು; ಹಾಗೂ, ಮಾನಸಿಕ ಮತ್ತು ದೈಹಿಕ ಸದೃಢತೆಯಿರಬೇಕು. ಶಿಕ್ಷಕರಾಗಲು, ವೃತ್ತಿ ಸಂಬAಧಿತ ಕೌಶಲಗಳಾದ ತಾಳ್ಮೆ, ಸಹನೆ, ಸಂವಹನ, ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಕೌಶಲವಿರಬೇಕು. ಹಾಗಾಗಿ, ನೀವು ಪರಿಶೀಲಿಸುತ್ತಿರುವ ಎರಡೂ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಅಂಶಗಳು ವಿಭಿನ್ನ. ಹಾಗಾಗಿ, ನಿಮಗೆ ಸೂಕ್ತವೆನಿಸುವ, ಆತ್ಮಸಂತೃಪ್ತಿಯನ್ನು ತಂದುಕೊಡುವ ವೃತ್ತಿಯ ಅನುಸರಿಸುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0
3. ನಾನು 2020ರಲ್ಲಿ ಬಿಕಾಂ ಮಾಡಿದ್ದು, ಈವರೆಗೆ ಯಾವುದೇ ಒಳ್ಳೆಯ ಕೆಲಸ ಸಿಕ್ಕಿಲ್ಲ. ದಯವಿಟ್ಟು, ನಿಮ್ಮ ಸಲಹೆಯನ್ನು ನೀಡಿ.
ಬೇಡಿಕೆಯಲ್ಲಿರುವ ಬಿಕಾಂ ಪದವಿಯ ನಂತರವೂ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ವಿಶ್ಲೇಷಿಸಬೇಕು. ಪ್ರಮುಖವಾಗಿ, ನಿಮ್ಮ ಬಯೋಡೇಟಾ ನಿಮ್ಮಲ್ಲಿರುವ ವಿಶಿಷ್ಟ ಅರ್ಹತೆ, ಕೌಶಲ ಮತ್ತು ಸಾಮರ್ಥ್ಯಗಳನ್ನು ಪ್ರತಿಬಿಂಬಿಸುವುದೇ? ನೀವು ಈವರೆಗೆ ಮಾಡಿರುವ ಪ್ರಯತ್ನಗಳಿಂದ ಸಂದರ್ಶನಗಳು ಸಿಗುತ್ತಿದೆಯೇ? ಅಥವಾ, ಸಂದರ್ಶನದಲ್ಲಿ ಸಮಸ್ಯೆಯಾಗುತ್ತಿದೆಯೇ? ವೃತ್ತಿಯ ಅವಕಾಶಗಳನ್ನು ಹೆಚ್ಚಿಸುವ ಅಲ್ಪಾವಧಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ಗಳನ್ನು ಮಾಡಬಹುದೇ? ಈ ಎಲ್ಲಾ ಸಾಧ್ಯತೆಗಳನ್ನು ಕೂಲಂಕಶವಾಗಿ ಪರಿಶೀಲಿಸಿ.
ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸುವ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=T_z3ngIeyWk
4. ನಾನು ಬಿಕಾಂ ಮುಗಿಸಿದ್ದು, ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಉತ್ತಮವಾದ ಅಕೌಂಟೆಂಟ್ ಆಗಲು ಬಯಸುತ್ತೇನೆ. ಈ ವೃತ್ತಿಯಲ್ಲಿ ಭವಿಷ್ಯವಿದೆಯೇ? ಅಥವಾ ಬೇರೆ ಕ್ಷೇತ್ರಕ್ಕೆ ಹೋಗಬೇಕೆ? ಈ ಗೊಂದಲವನ್ನು ಪರಿಹರಿಸಿ.
ಅಕೌಂಟೆನ್ಸಿ ಕ್ಷೇತ್ರದಲ್ಲಿ ನಿಮಗೆ ಒಲವು ಮತ್ತು ಸ್ವಾಭಾವಿಕವಾದ ಪ್ರತಿಭೆಯಿದ್ದಲ್ಲಿ, ಬಿಕಾಂ ಪದವೀಧರರಿಗೆ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿ ಅತ್ಯುತ್ತಮ ಆಯ್ಕೆ. ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ಸಿಎ ಕೋರ್ಸ್ ಮಾಡಬಹುದು; ಕೋಚಿಂಗ್ ಕಡ್ಡಾಯವಲ್ಲ. ಮೇಲಾಗಿ, ಚಾರ್ಟರ್ಡ್ ಅಕೌಂಟೆAಟ್ ಇನ್ಸ್ಟಿಟ್ಯೂಟ್ ವತಿಯಿಂದ ನೀಡುವ ಕೋಚಿಂಗ್ ಮತ್ತು ಮಾರ್ಗದರ್ಶನದ ಸೌಲಭ್ಯವನ್ನು ನೀವು ಉಪಯೋಗಿಸಬಹುದು. ಒಟ್ಟಾರೆ, ಬಿಕಾಂ ನಂತರ ಸಿಎ ಕೋರ್ಸ್ ಮಾಡಲು ಕನಿಷ್ಠ 3-4 ವರ್ಷ ಬೇಕಾಗುತ್ತದೆ. ಸಿಎ ಸರಿಹೊಂದುವುದಿಲ್ಲವೆAದರೆ ಎಸಿಎಸ್, ಸಿಎಂಎ, ಎಂಕಾಂ, ಎಂಬಿಎ (ಹಣಕಾಸು) ಕೋರ್ಸ್ಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು.
ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=RyNVWuRVjbA
5. ನಾನು ಎರಡು ವರ್ಷಗಳ ಹಿಂದೆ ಬಿಕಾಂ ಮಾಡಿ, ನಂತರ ಬಿಇಡಿ ಕೋರ್ಸ್ನಲ್ಲಿ ಇಂಗ್ಲಿಷ್ ಮತ್ತು ವಾಣಿಜ್ಯ ಅಭ್ಯಾಸ ಮಾಡಿದ್ದು, ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಬೇಕೆಂದುಕೊAಡಿದ್ದೇನೆ. ಹಾಗೂ, ಈ ಕ್ಷೇತ್ರದ ಇನ್ನಿತರ ಅವಕಾಶಗಳ ಬಗ್ಗೆ ವಿಸ್ತೃತವಾಗಿ ತಿಳಿಸಿ.
ನಮ್ಮ ಅಭಿಪ್ರಾಯದಂತೆ, ಪ್ರೌಡಶಾಲೆಗಳಲ್ಲಿ ನೀವು ಇಂಗ್ಲಿಷ್ ಮತ್ತು ವಾಣಿಜ್ಯ ಸಂಬಂಧಿತ ವಿಷಯಗಳನ್ನು ಭೋಧಿಸಬಹುದು. ಹೆಚ್ಚಿನ ಅವಕಾಶಗಳಿಗಾಗಿ ಎಂಕಾಂ ಮಾಡಿ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆಎಸ್ಇಟಿ ಅಥವಾ ಎನ್ಇಟಿ) ಮೂಲಕ ಸರ್ಕಾರಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಬಹುದು. ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಗಾಗಿ, ಪಿ.ಎಚ್ಡಿ ಮಾಡಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಬಹುದು. ಪಿ.ಎಚ್ಡಿ ಪದವೀಧರರಿಗೆ ಕೆಎಸ್ಇಟಿ/ಎನ್ಇಟಿ ಅರ್ಹತಾ ಪರೀಕ್ಷೆಯ ಅವಶ್ಯಕತೆಯಿರುವುದಿಲ್ಲ.
ಅಭಿವೃದ್ಧಿಯ ಪಥದಲ್ಲಿರುವ ಈ ಕ್ಷೇತ್ರದಲ್ಲಿ ಭೋಧನಾ ವೃತ್ತಿಯ ಜೊತೆಗೆ ವಿಪುಲವಾದ ಇನ್ನಿತರ ಅವಕಾಶಗಳಿವೆ. ಉದಾಹರಣೆಗೆ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಆಡಳಿತಾತ್ಮಕ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಪಡೆಯಬಹುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ನೀಡಬಹುದು. ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವದ ನಂತರ ನೂತನ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಬಹುದು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಭೋಧನೆ ಮತ್ತು ಆಡಳಿತ ಸಂಬಂಧಿಸಿದ ಅವಕಾಶಗಳಿವೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ಹಾಗೂ, ಯುವ ಪ್ರತಿಭೆಗಳ ಮನಸ್ಸುಗಳನ್ನು ಸಕಾರಾತ್ಮಕವಾಗಿ ರೂಪಿಸಿ, ಅವರ ಸಾಮರ್ಥ್ಯಗಳನ್ನು ಪೋಷಿಸಿ, ಬದುಕಿನ ಅವರ ಕನಸುಗಳನ್ನು ಸಾಕಾರಗೊಳಿಸಲು ಪ್ರೇರೇಪಿಸುವ ಮಾರ್ಗದರ್ಶಕರಾಗಬಹುದು. ಈ ಎಲ್ಲಾ ಅವಕಾಶಗಳಿಗೆ ಸಂಬAಧಿಸಿದ ಅಭಿರುಚಿ, ಜ್ಞಾನ ಮತ್ತು ಕೌಶಲಗಳನ್ನು ಬೆಳೆಸಿಕೊಂಡು ನಿಮಗೆ ಸೂಕ್ತವೆನಿಸುವ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಿ, ಮುಖ್ಯವಾಗಿ, ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳಿಂದ ವೃತ್ತಿ ಯೋಜನೆಯನ್ನು ಕಾರ್ಯಗತಗೊಳಿಸಿ, ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/channel/UCH-ugIg9bBIyH5QQbn_JjIw
6. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವ ನನಗೆ ನೆನಪಿಟ್ಟುಕೊಳ್ಳಲು ಕಷ್ಟವಾಗುತ್ತಿದೆ. ನೆನಪಿನ ಶಕ್ತಿಯನ್ನು ವೃದ್ಧಿಸಲು ಸಲಹೆ ನೀಡಿ.
ಓದಿದ ವಿಷಯ ಮರೆತುಹೋಗುವುದು ಒಂದು ಗಂಭೀರವಾದ ಹಾಗೂ ಸಾಮಾನ್ಯವಾದ ಸಮಸ್ಯೆ. ಪರಿಣಾಮಕಾರಿ ಕಾರ್ಯತಂತ್ರಗಳನ್ನು ಓದುವಿಕೆಯಲ್ಲಿ ಅಳವಡಿಸದಿರುವುದರಿಂದ ಓದಿದ ವಿಷಯಗಳು ನಿಮ್ಮ ಅಲ್ಪಾವಧಿ ಸ್ಮರಣೆಯಲ್ಲಿ ಮಾತ್ರ ಇರುತ್ತದೆ. ಹಾಗಾಗಿ, ಪರೀಕ್ಷೆ/ಟೆಸ್ಟ್ಗಳಲ್ಲಿ ಓದಿದ ವಿಷಯ ಜ್ಞಾಪಕಕ್ಕೆ ಬರದೆ, ಸಮಸ್ಯೆಯಾಗುವುದು ಸಾಮಾನ್ಯ. ಓದಿದ ವಿಷಯಗಳು ದೀರ್ಘಾವಧಿ ಸ್ಮರಣೆಯಲ್ಲಿರಬೇಕಾದರೆ, ಓದುವಿಕೆ ಪರಿಣಾಮಕಾರಿಯಾಗಿರಬೇಕು. ಓದುವಿಕೆಯ ಕಾರ್ಯತಂತ್ರಗಳಲ್ಲಿ ಓದುವ ಪ್ರಕ್ರಿಯೆಯ ಜೊತೆ ಸಮೀಕ್ಷೆ, ಪ್ರಶ್ನಿಸುವಿಕೆ, ಪುನರುಚ್ಛಾರಣೆ ಮತ್ತು ಪುನರಾವರ್ತನೆ ಇರಬೇಕು. ಇದಲ್ಲದೆ ತರಗತಿಗಳಲ್ಲಿ, ಉಪನ್ಯಾಸದ ಟಿಪ್ಪಣಿಯನ್ನು ಸರಿಯಾದ ಕ್ರಮದಲ್ಲಿ, ಓದುವಿಕೆಗೆ ಪೂರಕವಾಗುವಂತೆ ಬರೆಯಬೇಕು. ಹಾಗೂ, ಮನೆಯಲ್ಲಿ ಓದುವಾಗ ಕಣ್ಣಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿರುತ್ತದೆ.
ದುರದೃಷ್ಟವಶಾತ್, ಹೆಚ್ಚಿನ ಶಾಲಾ/ಕಾಲೇಜುಗಳಲ್ಲಿ ಪರಿಣಾಮಕಾರಿ ಓದುವಿಕೆಯ ಈ ಕಾರ್ಯತಂತ್ರಗಳ ಕುರಿತು ತರಬೇತಿ ನೀಡಿರುವುದಿಲ್ಲ. ಪರಿಣಾಮಕಾರಿ ಓದುವಿಕೆಯ ಕಾರ್ಯತಂತ್ರಗಳು ಮತ್ತು ಟಿಪ್ಪಣಿ ಬರೆಯುವ ಕ್ರಮ ಇತ್ಯಾದಿ ವಿಷಯಗಳ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ, ನಿಮ್ಮ ಓದುವಿಕೆಯಲ್ಲಿ ಈ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡರೆ ನಿಮ್ಮ ಸಮಸ್ಯೆಯ ಪರಿಹಾರವಾಗುತ್ತದೆ: https://www.youtube.com/watch?v=3PzmKRaJHmk https://www.youtube.com/watch?v=Y2IPeZ6lbeM
- ನಾನು ಬಿ.ಟೆಕ್ (ಕಂಪ್ಯೂಟರ್ ಸೈನ್ಸ್) ಅಂತಿಮ ವರ್ಷದಲ್ಲಿದ್ದೇನೆ. ಇದಾದ ನಂತರ ಸಾಕಷ್ಟು ಶೈಕ್ಷಣಿಕ ಸಾಲವಿರುವುದರಿಂದ, ಕೆಲಸಕ್ಕೆ ಸೇರಬೇಕೇ ಅಥವಾ ಎಂಟೆಕ್ ಮಾಡುವುದೇ ಎಂಬ ಗೊಂದಲದಲ್ಲಿದ್ದೇನೆ. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ.
ಬಿ.ಟೆಕ್ (ಕಂಪ್ಯೂಟರ್ ಸೈನ್ಸ್) ಬೇಡಿಕೆಯಲ್ಲಿರುವ ಕ್ಷೇತ್ರ. ಸಾಮಾನ್ಯವಾಗಿ, ಈ ವಿಭಾಗದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿಯ ಅವಕಾಶವಿರುತ್ತದೆ. ಹಾಗಾಗಿ, ನಮ್ಮ ಅಭಿಪ್ರಾಯದಂತೆ, ನೀವು ಕ್ಯಾಂಪಸ್ ನೇಮಕಾತಿಯ ಮೂಲಕ ವೃತ್ತಿಯನ್ನು ಅರಸಬಹುದು. ಹಾಗೂ, ಎಂಟೆಕ್ ಪದವಿಯನ್ನು ಅರೆಕಾಲಿಕ/ವಾರಾಂತ್ಯದ ತರಗತಿಗಳ ಮೂಲಕ ಮಾಡಬಹುದು. ಅಥವಾ, ಕೆಲವು ವರ್ಷಗಳ ವೃತ್ತಿಯ ಅನುಭವದ ನಂತರ, ಕಂಪ್ಯೂಟರ್ ಸೈನ್ಸ್ನ ವಿಭಾಗಗಳಲ್ಲಿ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ರೊಬೊಟಿಕ್ಸ್ ಇತ್ಯಾದಿ) ನಿಮ್ಮ ಅಗತ್ಯಕ್ಕೆ ಅನುಗುಣವಾಗಿ, ಪೂರ್ಣಾವಧಿ ಎಂಟೆಕ್ ಮಾಡಬಹುದು. ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ, ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=faQz_iLCWEk
8. ನಾನು ಬಿಫಾರ್ಮ ಮುಗಿಸಿದ್ದು, ಫಾರ್ಮಕಾಲಜಿ ಮತ್ತು ಔಷಧ ನಿಯಂತ್ರಣ ವಿಷಯಗಳಲ್ಲಿ ಎಂಫಾರ್ಮ ಮಾಡಲು ಇಚ್ಛಿಸಿದ್ದೇನೆ. ಯಾವ ವಿಷಯಗಳಲ್ಲಿ ಮಾಡಿದರೆ, ಹೆಚ್ಚಿನ ಪ್ರಗತಿಯನ್ನು ಕಾಣಬಹುದು?
ಬಿ.ಫಾರ್ಮ ನಂತರ ಪರ್ಯಾಯ ಪ್ರವೇಶದ ಮೂಲಕ ಫಾರ್ಮ್.ಡಿ (ಡಾಕ್ಟರ್ ಇನ್ ಫಾರ್ಮಸಿ) ಕೂಡಾ ಮಾಡಬಹುದು. ನಮ್ಮ ಅಭಿಪ್ರಾಯದಂತೆ, ಫಾರ್ಮಕಾಲಜಿ, ಫಾರ್ಮಸ್ಯೂಟಿಕ್ಸ್, ಫಾರ್ಮಸ್ಯೂಟಿಕಲ್ ಟೆಕ್ನಾಲಜಿ, ಫಾರ್ಮಸ್ಯೂಟಿಕಲ್ ಮಾರ್ಕೆಟಿಂಗ್, ಗುಣಮಟ್ಟ ಮತ್ತು ನಿಯಂತ್ರಣ ವ್ಯವಹಾರಗಳು ಸೇರಿದಂತೆ ಈ ಕ್ಷೇತ್ರದ ಬಹುತೇಕ ವಿಭಾಗಗಳಿಗೆ ಬೇಡಿಕೆಯಿದೆ. ಆದರೆ, ಈ ವಿಭಾಗಗಳ ವೃತ್ತಿಯ ಯಶಸ್ಸಿಗೆ ಅಗತ್ಯವಾದ ಜ್ಞಾನ, ಕೌಶಲಗಳಲ್ಲಿ ವ್ಯತ್ಯಾಸಗಳಿದ್ದು, ನಿಮಗೆ ಯಾವ ವಿಭಾಗ ಸೂಕ್ತವೆಂದು ಸ್ವಯಂ-ಮೌಲ್ಯಮಾಪನದಿAದ ನಿರ್ಧರಿಸಿ.
ಎಂಫಾರ್ಮ/ಫಾರ್ಮ್.ಡಿ ನಂತರ ವಿಸ್ತಾರವಾಗಿ ಬೆಳೆಯುತ್ತಿರುವ ಫಾರ್ಮ ಔದ್ಯೋಗಿಕ ಕ್ಷೇತ್ರದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು, ಬಯೋಟೆಕ್ ಸಂಸ್ಥೆಗಳು, ಸೌಂದರ್ಯವರ್ಧಕ ಉತ್ಪಾದನಾ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಮುಂತಾದ ವಲಯಗಳಲ್ಲಿ ಅವಕಾಶಗಳಿವೆ. ಇದಲ್ಲದೆ, ಫಾರ್ಮ ಕ್ಷೇತ್ರದ ಯಾವುದೇ ಪದವಿಯ ನಂತರ ಔಷಧಿಗಳ ಮಾರಾಟಕ್ಕೆ ಡ್ರಗ್ ಕಂಟ್ರೋಲ್ ಇಲಾಖೆಯಿಂದ ಸಿಗುವ ಪರವಾನಗಿಯಿಂದ ಮೆಡಿಕಲ್ ಸ್ಟೋರ್ ವ್ಯವಹಾರವನ್ನು ನಡೆಸಬಹುದು. ಅನುಭವ ಮತ್ತು ನಿಬಂಧನೆಗಳ ಪ್ರಕಾರ ಔಷಧಿಗಳ ಉತ್ಪಾದನೆ ಮತ್ತು ಸಗಟು ವ್ಯಾಪಾರಕ್ಕೂ ಪರವಾನಗಿಯನ್ನು ಪಡೆದು ಉದ್ಯಮಿಗಳಾಗಬಹುದು. ಹಾಗಾಗಿ ಉನ್ನತ ಶಿಕ್ಷಣದ ನಂತರ, ಈ ಕ್ಷೇತ್ರದಲ್ಲಿ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/channel/UCH-ugIg9bBIyH5QQbn_JjIw
9. ನಾನು 12ನೇ ತರಗತಿ (ವಾಣಿಜ್ಯ) ಓದುತ್ತಿದ್ದು ಮುಂದೆ ಯಾವ ಆಯ್ಕೆಯನ್ನು ಮಾಡಿದರೆ ಒಳ್ಳೆಯದು?
ಪಿಯುಸಿ (ವಾಣಿಜ್ಯ) ನಂತರ ಮಾಡಬಹುದಾದ ಕೋರ್ಸ್ಗಳೆಂದರೆ ಸಿಎ (ಫೌಂಡೇಷನ್ ಕೋರ್ಸ್ ಮುಖಾಂತರ), ಬಿಕಾಂ (ಜನರಲ್, ಹಾನರ್ಸ್, ಬ್ಯಾಂಕಿAಗ್, ಫೈನಾನ್ಸ್, ಟೂರಿಸಮ್, ಪ್ರೊಫೆಷನಲ್, ಇಂಟರ್ನ್ಯಾಷನಲ್ ಫೈನಾನ್ಸ್ ಇತ್ಯಾದಿ), ಬಿಬಿಎ, ಬಿಸಿಎ, ಬಿಎಸ್ಡಬ್ಲು÷್ಯ, ಎಸಿಎಸ್, ಸಿಎಂಎ, ಇಂಟಿಗ್ರೇಟೆಡ್ ಎಲ್ಎಲ್ಬಿ ಇತ್ಯಾದಿ. ಹಾಗಾಗಿ, ನಿಮ್ಮ ಆಸಕ್ತಿ, ಸ್ವಾಭಾವಿಕ ಪ್ರತಿಭೆ ಮತ್ತು ವೃತ್ತಿ ಯೋಜನೆಯ ಅನುಸಾರ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=fuTaa5UjZCo
10. ನಾನು ದ್ವಿತೀಯ ಎಂ.ಎ (ಅರ್ಥಶಾಸ್ತ್ರ) ಮಾಡುತ್ತಿದ್ದು, ಎನ್ಇಟಿ ಪರೀಕ್ಷೆಗೆ ತಯಾರಿ ನಡೆಸುತಿದ್ದೇನೆ. ಆದರೆ, ಓದಿದ್ದು ಸರಿಯಾಗಿ ನೆನಪಿನಲ್ಲಿ ಉಳಿಯುತಿಲ್ಲ, ನಾನು ಪದವಿ ಕಾಲೇಜಿನ ಪ್ರಾಧ್ಯಾಪಕಳಾಗಬೇಕೆಂಬ ಗುರಿಯನ್ನು ಹೊಂದಿದ್ದೇನೆ. ಓದುವ ಕ್ರಮವನ್ನು ತಿಳಿಸಿ ಕೊಡಿ.
ಓದಿದ ವಿಷಯ ಮರೆತುಹೋಗುವುದು ಒಂದು ಗಂಭೀರವಾದ ಹಾಗೂ ಸಾಮಾನ್ಯವಾದ ಸಮಸ್ಯೆ. ಪರಿಣಾಮಕಾರಿ ಕಾರ್ಯತಂತ್ರಗಳನ್ನು ಓದುವಿಕೆಯಲ್ಲಿ ಅಳವಡಿಸದಿರುವುದರಿಂದ ಓದಿದ ವಿಷಯಗಳು ನಿಮ್ಮ ಅಲ್ಪಾವಧಿ ಸ್ಮರಣೆಯಲ್ಲಿ ಮಾತ್ರ ಇರುತ್ತದೆ. ಹಾಗಾಗಿ, ಪರೀಕ್ಷೆ/ಟೆಸ್ಟ್ಗಳಲ್ಲಿ ಓದಿದ ವಿಷಯ ಜ್ಞಾಪಕಕ್ಕೆ ಬರದೆ, ಸಮಸ್ಯೆಯಾಗುವುದು ಸಾಮಾನ್ಯ. ಓದಿದ ವಿಷಯಗಳು ದೀರ್ಘಾವಧಿ ಸ್ಮರಣೆಯಲ್ಲಿರಬೇಕಾದರೆ, ಓದುವಿಕೆ ಪರಿಣಾಮಕಾರಿಯಾಗಿರಬೇಕು. ಓದುವಿಕೆಯ ಕಾರ್ಯತಂತ್ರಗಳಲ್ಲಿ ಓದುವ ಪ್ರಕ್ರಿಯೆಯ ಜೊತೆ ಸಮೀಕ್ಷೆ, ಪ್ರಶ್ನಿಸುವಿಕೆ, ಪುನರುಚ್ಛಾರಣೆ ಮತ್ತು ಪುನರಾವರ್ತನೆ ಇರಬೇಕು. ಇದಲ್ಲದೆ ತರಗತಿಗಳಲ್ಲಿ, ಉಪನ್ಯಾಸದ ಟಿಪ್ಪಣಿಯನ್ನು ಸರಿಯಾದ ಕ್ರಮದಲ್ಲಿ, ಓದುವಿಕೆಗೆ ಪೂರಕವಾಗುವಂತೆ ಬರೆಯಬೇಕು. ಹಾಗೂ, ಮನೆಯಲ್ಲಿ ಓದುವಾಗ ಕಣ್ಣಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿರುತ್ತದೆ.
ದುರದೃಷ್ಟವಶಾತ್, ಹೆಚ್ಚಿನ ಶಾಲಾ/ಕಾಲೇಜುಗಳಲ್ಲಿ ಪರಿಣಾಮಕಾರಿ ಓದುವಿಕೆಯ ಈ ಕಾರ್ಯತಂತ್ರಗಳ ಕುರಿತು ತರಬೇತಿ ನೀಡಿರುವುದಿಲ್ಲ. ಪರಿಣಾಮಕಾರಿ ಓದುವಿಕೆಯ ಕಾರ್ಯತಂತ್ರಗಳು ಮತ್ತು ಟಿಪ್ಪಣಿ ಬರೆಯುವ ಕ್ರಮ ಇತ್ಯಾದಿ ವಿಷಯಗಳ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ, ನಿಮ್ಮ ಓದುವಿಕೆಯಲ್ಲಿ ಈ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡರೆ ನಿಮ್ಮ ಸಮಸ್ಯೆಯ ಪರಿಹಾರವಾಗುತ್ತದೆ: https://www.youtube.com/watch?v=3PzmKRaJHmk https://www.youtube.com/watch?v=Y2IPeZ6lbeM
11. ಸರ್, ನಾನು ಬಿಕಾಂ ಮುಗಿಸಿ, ಎಂಬಿಎ ಮಾಡಲು ಪಿಜಿಸಿಇಟಿ ಬರೆದಿದ್ದೇನೆ. ನನಗೆ ಎಲ್ಎಲ್ಬಿ ಮತ್ತು ಎಂಬಿಎ ಎರಡರಲ್ಲಿಯೂ ಆಸಕ್ತಿ ಇದ್ದು, ಭವಿಷ್ಯವನ್ನು ರೂಪಿಸಿಕೊಳ್ಳಲು ಯಾವುದು ಸೂಕ್ತವೆಂದು ತಿಳಿಸಿ. ಸಂಜೆ ಕಾಲೇಜು ಮೂಲಕ ಎಲ್ಎಲ್ಬಿ ಮಾಡಬಹುದೇ?
ನೀವು ಪರಿಶೀಲಿಸುತ್ತಿರುವ ಎರಡೂ ಕೋರ್ಸ್ ಸಂಬಂಧಿತ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಸ್ವಾಭಾವಿಕ ಪ್ರತಿಭೆ ಮತ್ತು ಕೌಶಲಗಳು ವಿಭಿನ್ನ. ಮೇಲ್ನೋಟಕ್ಕೆ, ವೃತ್ತಿಯ ಅವಕಾಶಗಳ ದೃಷ್ಟಿಯಿಂದ ಎಂಬಿಎ ಮಾಡುವುದು ಒಳ್ಳೆಯದು. ಹಾಗೂ, ನಮಗಿರುವ ಮಾಹಿತಿಯಂತೆ, ಎಲ್ಎಲ್ಬಿ (ರೆಗ್ಯುಲರ್) ಕೋರ್ಸ್ಗಳಿಗೆ ಮಾತ್ರ ಬಾರ್ ಕೌಂಸಿಲ್ ಮಾನ್ಯತೆಯಿರುತ್ತದೆ.
12. ನಾನು ಬಿ.ಎಸ್ಸಿ (ಪಿಸಿಎಮ್) ಪದವಿಯನ್ನು ಪೂರ್ಣಗೊಳಿಸಿದ್ದು, ಈಗ ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಮನೆಯಲ್ಲಿ ಬಿ.ಇಡಿ ಮಾಡಲು ಹೇಳುತ್ತಿದ್ದಾರೆ. ಬಿ.ಇಡಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.
ಬಿ.ಇಡಿ ನಂತರ ಪ್ರೌಡಶಾಲೆಗಳಲ್ಲಿ ನೀವು ಗಣಿತ/ವಿಜ್ಞಾನ ವಿಷಯಗಳನ್ನು ಭೋಧಿಸಬಹುದು. ಹೆಚ್ಚಿನ ಅವಕಾಶಗಳಿಗಾಗಿ ಎಂ.ಎಸ್ಸಿ ಮಾಡಿ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆಎಸ್ಇಟಿ ಅಥವಾ ಎನ್ಇಟಿ) ಮೂಲಕ ಸರ್ಕಾರಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಬಹುದು. ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಗಾಗಿ, ಪಿ.ಎಚ್ಡಿ ಮಾಡಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಬಹುದು. ಪಿ.ಎಚ್ಡಿ ಪದವೀಧರರಿಗೆ ಕೆಎಸ್ಇಟಿ/ಎನ್ಇಟಿ ಅರ್ಹತಾ ಪರೀಕ್ಷೆಯ ಅವಶ್ಯಕತೆಯಿರುವುದಿಲ್ಲ.
13. ನೆಟ್ ಮತ್ತು ಸ್ಲೆಟ್ ಪರೀಕ್ಷೆಗೆ ತಯಾರಿ ಹೇಗೆ?
ನೆಟ್ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಅಥವಾ ಸ್ಲೆಟ್/ಕೆಸ್ಇಟಿ (ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ) ಪರೀಕ್ಷೆಗಳ ಮೂಲಕ ಕಾಲೇಜು/ವಿಶ್ವವಿದ್ಯಾಲಯಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಾಗುತ್ತದೆ.
ನೆಟ್/ಸ್ಲೆಟ್ ಪರೀಕ್ಷೆಯಲ್ಲಿ ಒಟ್ಟು ಎರಡು ಪ್ರಶ್ನೆ ಪತ್ರಿಕೆಗಳಿರುತ್ತದೆ. ಮೂರು ಗಂಟೆಗಳ ಅವಧಿಯ ಈ ಪರೀಕ್ಷೆಯಲ್ಲಿ ಒಟ್ಟು ೧೫೦ ಪ್ರಶ್ನೆಗಳಿರುತ್ತದೆ (೩೦೦ ಅಂಕಗಳು). ಮೊದಲನೇ ಪತ್ರಿಕೆ ಭೋಧನೆ/ ಸಂಶೋಧನಾ ಕ್ರಮ, ಅಭಿರುಚಿ ಇತ್ಯಾದಿ ಕುರಿತದ್ದಾಗಿದ್ದು, ಎರಡನೇ ಪತ್ರಿಕೆ ನೀವು ಭೋಧಿಸುವ ವಿಷಯಕ್ಕೆ ಸಂಬಂಧಪಟ್ಟಿರುತ್ತದೆ. ಬಹುತೇಕ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿರುತ್ತದೆ. ವಿಷಯಸೂಚಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯ.
ಈ ಸಲಹೆಗಳನ್ನು ಗಮನಿಸಿ:
- ಈ ಪರೀಕ್ಷೆಗಳು ಸ್ಪರ್ಧಾತ್ಮಕವಾಗಿರುತ್ತದೆ. ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
- ವಿಷಯಸೂಚಿಯ ಪ್ರಕಾರ ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ ಮಾಹಿತಿಯನ್ನು ಸಂಗ್ರಹಿಸಿ.
- ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
- ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕöÈಷ್ಟವಾದ ಬರವಣಿಗೆ ಇರಬೇಕು. ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.
- ಜೊತೆಗೆ ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.
- ಪರಿಣಾಮಕಾರಿ ಓದುವಿಕೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk
14. ಸರ್, ನಾನು ಬಿಕಾಂ ಮುಗಿಸಿ, ಎಂಬಿಎ ಮಾಡಲು ಪಿಜಿಸಿಇಟಿ ಬರೆದಿದ್ದೇನೆ. ನನಗೆ ಎಲ್ಎಲ್ಬಿ ಮತ್ತು ಎಂಬಿಎ ಎರಡರಲ್ಲಿಯೂ ಆಸಕ್ತಿ ಇದ್ದು, ಭವಿಷ್ಯವನ್ನು ರೂಪಿಸಿಕೊಳ್ಳಲು ಯಾವುದು ಸೂಕ್ತವೆಂದು ತಿಳಿಸಿ. ಸಂಜೆ ಕಾಲೇಜು ಮೂಲಕ ಎಲ್ಎಲ್ಬಿ ಮಾಡಬಹುದೇ?
ನೀವು ಪರಿಶೀಲಿಸುತ್ತಿರುವ ಎರಡೂ ಕೋರ್ಸ್ ಸಂಬಂಧಿತ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಸ್ವಾಭಾವಿಕ ಪ್ರತಿಭೆ ಮತ್ತು ಕೌಶಲಗಳು ವಿಭಿನ್ನ. ಮೇಲ್ನೋಟಕ್ಕೆ, ವೃತ್ತಿಯ ಅವಕಾಶಗಳ ದೃಷ್ಟಿಯಿಂದ ಎಂಬಿಎ ಮಾಡುವುದು ಒಳ್ಳೆಯದು. ಹಾಗೂ, ನಮಗಿರುವ ಮಾಹಿತಿಯಂತೆ, ಎಲ್ಎಲ್ಬಿ (ರೆಗ್ಯುಲರ್) ಕೋರ್ಸ್ಗಳಿಗೆ ಮಾತ್ರ ಬಾರ್ ಕೌಂಸಿಲ್ ಮಾನ್ಯತೆಯಿರುತ್ತದೆ.