Q & A for Students – February 2023

1. ಸರ್ ನಾನು ಡಿಪ್ಲೊಮಾ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) 2017ರಲ್ಲಿ ಮುಗಿಸಿದ್ದೇನೆ. ನಾನು ಎಂಜಿನಿಯರಿAಗ್ ಬಿಟ್ಟು ಬೇರೆ ಯಾವ ಪದವಿ/ಕೋರ್ಸ್ ಮಾಡಬಹುದು? ದೂರ ಶಿಕ್ಷಣದಲ್ಲಿ ಮಾಡಬಹುದೇ? ಧನ್ಯವಾದಗಳು.

ನೀವು ಈಗ ಯಾವ ಉದ್ಯೋಗದಲ್ಲಿದ್ದೀರಿ ಎಂದು ತಿಳಿಸಿಲ್ಲ. ಹಾಗಾಗಿ, ಈಗ ಉದ್ಯೋಗದಲ್ಲಿರುವ ಅಥವಾ ನಿಮ್ಮ ಆಸಕ್ತಿ ಮತ್ತು ಅಭಿರುಚಿಯಂತೆ ಯಾವ ಉದ್ಯೋಗವನ್ನು ಮಾಡಲು ಇಚ್ಛಿಸುತ್ತೀರ, ಅದಕ್ಕೆ ಅನುಗುಣವಾಗಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಮಾಡಬಹುದು. ಉದಾಹರಣೆಗೆ ರೊಬೊಟಿಕ್ಸ್, ಮೆಕಾಟ್ರಾನಿಕ್ಸ್, ವಿಎಲ್‌ಎಸ್‌ಐ, ಪಿಎಲ್‌ಸಿ, ನೆಟ್‌ವರ್ಕಿಂಗ್, ಏರ್‌ಕ್ರಾಫ್ಟ್ ನಿರ್ವಹಣೆ, ಪ್ರೋಗ್ರಾಮಿಂಗ್,  ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್  ವಸ್ತುಗಳ ರಿಪೇರಿ ಮತ್ತು ನಿರ್ವಹಣೆ ಇತ್ಯಾದಿ. ಈ ಕೋರ್ಸ್ಗಳನ್ನು ವಾರಾಂತ್ಯ/ದೂರಶಿಕ್ಷಣ/ಆನ್‌ಲೈನ್ ಪದ್ಧತಿಗಳಲ್ಲಿ ಮಾಡಬಹುದು. ಹಾಗಾಗಿ, ವೃತ್ತಿಯ ಅನುಭವ, ಆಸಕ್ತಿ ಮತ್ತು ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯೋಜನೆಯನ್ನು ಮಾಡಿದರೆ, ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

2. ಸರ್, ನಾನು ಪದವಿಯನ್ನು ಮುಗಿಸಿ ಸರಕಾರಿ ಹುದ್ದೆಗಾಗಿ ಓದುತ್ತಿದ್ದೇನೆ. ನನ್ನ ಬಾಲ್ಯದ ಶಿಕ್ಷಣವನ್ನು ನಮ್ಮ ಹಳ್ಳಿಯ ಕನ್ನಡ ಶಾಲೆಯಲ್ಲಿ ಮುಗಿಸಿದ್ದು ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ಸರ್ಟಿಫಿಕೆಟ್  ಪಡೆಯಲು ಹೋದಾಗ ಶಾಲೆ ಬಿಟ್ಟ ಮಕ್ಕಳ ಚಿನ್ನರ ಅಂಗಳ ಕಾರ್ಯಕ್ರಮದಡಿ ನಿನ್ನನ್ನು ನೇರವಾಗಿ 2ನೇ ತರಗತಿಗೆ ದಾಖಲಿಸಿಕೊಳ್ಳಲಾಗಿದೆ ಎಂದರು. ಆದ್ದರಿಂದ, ಈಗ ಕನ್ನಡ ಮತ್ತು ಗ್ರಾಮೀಣ ಮಾಧ್ಯಮ ಸರ್ಟಿಫಿಕೆಟ್ ಸಿಗದೆ, ನನಗೆ ಕಲ್ಯಾಣ ಕರ್ನಾಟಕ ಸರ್ಟಿಫಿಕೆಟ್ ಕೂಡ ತಿರಸ್ಕರಿಸಿದ್ದಾರೆ. ಹಾಗಾಗಿ, ಸರ್ಕಾರಿ ಹುದ್ದೆಗಳಿಗೆ ಮೀಸಲಾತಿ ಸಿಗದೆ, ತೊಂದರೆಯಲ್ಲಿದ್ದೇನೆ. ದಯವಿಟ್ಟು ನಿಮ್ಮ ಸಲಹೆ ನೀಡಿ.

ಚಿಣ್ಣರ ಅಂಗಳ ಕಾರ್ಯಕ್ರಮದ ಅಡಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಅವರನ್ನು ಶಾಲಾವಾಹಿನಿಗೆ ಕರೆತರುವುದು ಸರ್ಕಾರದ ಅಧಿಕೃತ ಯೋಜನೆ. ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಮಗೆ ಅರ್ಹತಾ ಧೃಡೀಕರಣ ಪತ್ರವನ್ನು ನೀಡಬೇಕು. ಹಾಗಾಗಿ, ನಮ್ಮ ಅಭಿಪ್ರಾಯದಂತೆ ಈಗಲೂ ಈ ಅರ್ಹತಾ ಪತ್ರವನ್ನು ಪಡೆದುಕೊಂಡು, ಕಲ್ಯಾಣ ಕರ್ನಾಟಕ ಸರ್ಟಿಫಿಕೆಟ್‌ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಸಹಾಯಕ ಆಯುಕ್ತರ ಕಛೇರಿಯಲ್ಲಿ ವಿಚಾರಿಸಿ ಅಥವಾ ಈ ಜಾಲತಾಣವನ್ನು ಗಮನಿಸಿ: https://nadakacheri.karnataka.gov.in/ajsk

3. ನಮಸ್ಕಾರ ಸರ್. ನಾನು ೧೦ನೇ ತರಗತಿ ವಿದ್ಯಾರ್ಥಿ. ನನಗೆ ಎನ್‌ಡಿಎ ಸೇರುವ ಆಸೆ ಇದೆ ಇದರ ತಯಾರಿ ಹೇಗೆ ಮತ್ತು ಎನ್‌ಡಿಎ ಅಧಿಕಾರಿಗಳ ಕೆಲಸವೇನು? ಪಿಯುಸಿ ಜೊತೆಗೆ ತಯಾರಿ ನಡೆಸಬಹುದೇ? ದಯವಿಟ್ಟು ಸಲಹೆ ನೀಡಿ.

ದೇಶದ ರಕ್ಷಣಾ ಸೇವೆಗೆ ಸೇರಬೇಕೆನ್ನುವ ನಿಮಗೆ ಶುಭಹಾರೈಕೆಗಳು.

ಸರ್ಕಾರದ ಮಾನ್ಯತೆ ಪಡೆದ ಬೋರ್ಡ್/ಮಂಡಲಿಯಿಂದ ಪಿಯುಸಿ ಅಥವಾ ತತ್ಸಮಾನ ಕೋರ್ಸನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು, ಎನ್‌ಡಿಎ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಕನಿಷ್ಠ 16.5 ಮತ್ತು ಗರಿಷ್ಠ 19ವರ್ಷಗಳ ಒಳಗಿದ್ದಲ್ಲಿ, ಯುಪಿಎಸ್‌ಸಿ ಆಯೋಜಿಸುವ ಎನ್‌ಡಿಎ ಪರೀಕ್ಷೆ ಬರೆಯಬಹುದು.

ಎನ್‌ಡಿಎ ಕಠಿಣವಾದ ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ; ಆದ್ದರಿಂದ, ಪಿಯುಸಿ ಮಾಡುವಾಗಲೇ ಎನ್‌ಡಿಎ ತಯಾರಿಯನ್ನು ಶುರು ಮಾಡುವುದು ಸೂಕ್ತ. ಈ ಪರೀಕ್ಷೆಯಲ್ಲಿ ಗಣಿತ, ಇಂಗ್ಲಿಷ್, ಭೌತವಿಜ್ಞಾನ, ರಸಾಯನ ವಿಜ್ಞಾನ, ಸಾಮಾನ್ಯ ವಿಜ್ಞಾನ, ಭೂಗೋಳ, ಇತಿಹಾಸ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತ ಪ್ರಶ್ನೆ ಪತ್ರಿಕೆಗಳಿರುತ್ತವೆ.  ಪರೀಕ್ಷೆಯ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು, ನಿಮ್ಮ ಶಕ್ತಿ, ಸಾಮರ್ಥ್ಯ, ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯತಂತ್ರವನ್ನು ರೂಪಿಸಬೇಕು. ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ವ್ಯಕ್ತಿತ್ವ ಪರೀಕ್ಷೆ, ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯಿರುತ್ತದೆ. ಅಂತಿಮವಾಗಿ ಆಯ್ಕೆಯಾದ ನಂತರ 3 ವರ್ಷದ ತರಬೇತಿಯನ್ನು ಪುಣೆ ನಗರದಲ್ಲಿರುವ ಎನ್‌ಡಿಎ ಕ್ಯಾಂಪಸ್‌ನಲ್ಲಿ ನೀಡಲಾಗುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ನಿಮ್ಮ ಆಯ್ಕೆಯ ಅನುಸಾರ ( ಸೇನಾ ಪಡೆ, ವಾಯು ಪಡೆ, ನೌಕಾ ಪಡೆ) ಒಂದು ವರ್ಷದ ನಿರ್ದಿಷ್ಟವಾದ, ಮುಂದುವರೆದ ತರಬೇತಿಯಿರುತ್ತದೆ. ಈ ಅವಧಿಯಲ್ಲಿ ತರಬೇತಿ ಭತ್ಯವನ್ನು ನೀಡಲಾಗುತ್ತದೆ. ಈ ತರಬೇತಿಯ ನಂತರ ಕ್ರಮಬದ್ಧವಾದ ನೇಮಕಾತಿಯಾಗಿ, ಕೆಲಸದ ಸ್ಥಳ, ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸೂಚಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:

https://www.upsc.gov.in/sites/default/files/Notif-NDA-NA-I-Exam-2023-Engl-211222.pdf

4. ಸರ್, ನಾನು ಪದವಿಯನ್ನು ೨೦೨೨ರಲ್ಲಿ ಮುಗಿಸಿದ್ದೇನೆ. ಈಗ ಶಾಲಾಶಿಕ್ಷಣದಲ್ಲಿ ಬಿ.ಇಡಿ ಮಾಡಲು ಸರ್ಕಾರಿ ಕಾಲೇಜಿನಲ್ಲಿ ಸಿಗಲಿಲ್ಲ. ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಖಾಸಗಿ ಕಾಲೇಜಿನಲ್ಲಿ ಮಾಡಲಾಗುವುದಿಲ್ಲ. ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ.

ನಮ್ಮ ಬದುಕಿಗೊಂದು ಕೈಪಿಡಿ ಇಲ್ಲ; ಯಶಸ್ಸಿಗೆ ಇಂತದ್ದೇ ವೃತ್ತಿ ಮಾಡಬೇಕೆನ್ನುವ ನಿಯಮವಿಲ್ಲ. ಆದರೆ, ವೃತ್ತಿಯನ್ನು ನಮ್ಮ ಅಭಿರುಚಿಯಂತೆ, ಆಸಕ್ತಿಯಂತೆ ಆರಿಸಿ, ಪರಿಶ್ರಮದಿಂದ  ಅನುಸರಿಸಿದರೆ, ಬದುಕಿನಲ್ಲಿ ಯಶಸ್ಸು, ಸಂತೃಪ್ತಿ ಸಿಗುವುದರಲ್ಲಿ ಸಂದೇಹವಿಲ್ಲ. ಹಾಗಾಗಿ, ನೀವು ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಸ್ಕಾಲರ್‌ಶಿಪ್, ವಿದ್ಯಾರ್ಥಿ ವೇತನ ಮತ್ತು ಬ್ಯಾಂಕ್ ಸಾಲಗಳ ಕುರಿತ ಮಾಹಿತಿ ಇಂದಿನ ಪ್ರಶ್ನೋತ್ತರದಲ್ಲಿ ಪ್ರಕಟವಾಗಿದೆ. ದಯವಿಟ್ಟು ಓದಿಕೊಳ್ಳಿ.

ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

5. ಸರ್, ಎಸ್‌ಎಸ್‌ಎಲ್‌ಸಿ (ಶೇ 80) ಮುಗಿಸಿದ್ದೇನೆ. ಅಪ್ಪನಿಗೆ ಅನಾರೋಗ್ಯ; ಅಮ್ಮ ಅಂಗವೈಕಲ್ಯದಿAದ ಬಳಲುತ್ತಿದ್ದಾರೆ; ತಂಗಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅನಿವಾರ್ಯವಾಗಿ ಹೊಲಿಗೆ ಕೆಲಸ ಮಾಡುತ್ತಿದ್ದೇನೆ. ಮುಂದೆ ಬಹಳ ಓದಬೇಕೆಂಬ ಆಸೆಯಿದೆ. ಹಣಕ್ಕಾಗಿ ನೆಂಟರ ಮುಂದೆ ಕೈಯೊಡ್ಡಲು ಇಷ್ಟವಿಲ್ಲ. ಬಡವರಿಗಾಗಿಯೇ ಇರುವ ವಿದ್ಯಾರ್ಥಿವೇತನ, ಶೈಕ್ಷಣಿಕ ಸಾಲದ ಬಗ್ಗೆ ವಿಸ್ತöÈತವಾಗಿ ಮಾಹಿತಿ ನೀಡಬಹುದೇ? ಧನ್ಯವಾದಗಳು.

ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ನಿಮ್ಮ ಸಾಮರ್ಥ್ಯ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪ್ರತಿಬಿಂಬಿಸುವ ವೃತ್ತಿಯ ಬಗ್ಗೆ ಚಿಂತಿಸಿ. ಅದರಂತೆ ಕೋರ್ಸ್ ಆಯ್ಕೆ ಮಾಡಿ, ಸರ್ಕಾರಿ ಕಾಲೇಜುಗಳಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಆ ಅನುಕೂಲಗಳನ್ನು ಪಡೆದುಕೊಳ್ಳಿ. ಅಧ್ಯಯನದ ಜೊತೆಗೆ, ನೀವು ಈಗಾಗಲೇ ಮಾಡುತ್ತಿರುವ ಹೊಲಿಗೆ ಕೆಲಸ ಅಥವಾ ಇನ್ನಿತರ ಅರೆಕಾಲಿಕ ಕೆಲಸಗಳನ್ನು ಕೂಡಾ ಮಾಡಬಹುದು.

ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ಹೆಚ್ಚಿನ ವಿವರಗಳಿಗಾಗಿ ಈ ಜಾಲತಾಣಗಳನ್ನು ಗಮನಿಸಿ. https://scholarships.gov.in/ 
https://www.buddy4study.com/article/karnataka-scholarships

ಶೈಕ್ಷಣಿಕ ಸಾಲವನ್ನು ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿ ಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಈ ಸಾಲಗಳನ್ನು ಪಡೆಯಲು ವಿದ್ಯಾಲಕ್ಷ್ಮಿ  ಜಾಲತಾಣವನ್ನು  ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.vidyalakshmi.co.in/Students/

6. ನಾನು ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದು ಪಿ.ಎಚ್‌ಡಿ ಮಾಡುವ ಆಸೆಯಿದೆ. ಯಾವುದು ಉತ್ತಮ ಆಯ್ಕೆಯಾಗಬಹುದು? ದೂರಶಿಕ್ಷಣ ಅಥವಾ ನೇರವಾಗಿ ಮಾಡಬಹುದೇ? ಉತ್ತಮ ವಿಶ್ವವಿದ್ಯಾಲಯವನ್ನು ಸೂಚಿಸಿ

ಮೊದಲಿಗೆ, ನೀವು ಪಿ.ಎಚ್‌ಡಿ ಮಾಡುವ ಕ್ಷೇತ್ರ ಮತ್ತು ಸಂಶೋಧನಾ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಮತ್ತು ಕಲ್ಪನೆಯಿರಬೇಕು. ಆದ್ದರಿಂದ, ವಿಷಯದ ಕುರಿತು ಪೂರ್ವಭಾವಿ ಸಂಶೋಧನೆ ಮಾಡಬೇಕು. ಏಕೆಂದರೆ, ವಿಶ್ವವಿದ್ಯಾಲಯಗಳು, ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ಸಂಶೋಧನಾ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸೂಚಿಸುತ್ತವೆ. ಸಂಶೋಧನಾ ಕ್ಷೇತ್ರ, ವಿಷಯ, ನಿಮ್ಮ ವಾಸಸ್ಥಳ, ಪಿ.ಎಚ್‌ಡಿ ನಂತರದ ಯೋಜನೆ ಇತ್ಯಾದಿಗಳನ್ನು ಪರಿಗಣಿಸಿ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಬೇಕು. ಹಾಗೂ ಭವಿಷ್ಯದ ದೃಷ್ಟಿಯಿಂದ, ಪಿ.ಎಚ್‌ಡಿ ಕೋರ್ಸನ್ನು ರೆಗ್ಯುಲರ್ ಪದ್ಧತಿಯಲ್ಲಿ ಮಾಡುವುದು ಸೂಕ್ತ. ಪಿ.ಎಚ್‌ಡಿ ಮಾಡಲು ಬಯಸುವ  ವಿಶ್ವವಿದ್ಯಾಲಯದ ಅಧಿಸೂಚನೆಯಂತೆ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಪಿ.ಎಚ್‌ಡಿ ಕೋರ್ಸ್ ಅರ್ಜಿಯ ಪರಿಶೀಲನೆಯ ನಂತರ ಪ್ರವೇಶ ಪರೀಕ್ಷೆ ಮತ್ತು ಇನ್ನಿತರ ಪ್ರಕ್ರಿಯೆಗಳ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಂಶೋಧನೆಯಲ್ಲಿ ನಿಮಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಲು ಮಾರ್ಗದರ್ಶಕರನ್ನು ನಿಯೋಜಿಸಲಾಗುತ್ತದೆ. ಸಾಮಾನ್ಯವಾಗಿ, 3 ರಿಂದ 5 ವರ್ಷಗಳಲ್ಲಿ ಪಿ.ಎಚ್‌ಡಿ ಮುಗಿಸಬಹುದು.

7. ಸರ್ಕಾರಿ ವಕೀಲರಾಗುವುದು ಹೇಗೆ?

ಯಶಸ್ವೀ ವಕೀಲರಾಗಲು ವೃತ್ತಿಯ ಬಗ್ಗೆ ಸ್ವಾಭಾವಿಕ ಅಭಿರುಚಿ ಮತ್ತು ಆಸಕ್ತಿ, ಸಾಮಾನ್ಯ ಜ್ಞಾನ, ಕಾನೂನುಗಳ ಅರ್ಥೈಸುವಿಕೆ, ಉತ್ತಮ ಸಂವಹನ, ವಿಶ್ಲೇಷಾತ್ಮಕ ಕೌಶಲ, ನೆನಪಿನ ಶಕ್ತಿ, ಸಮಯ ಪ್ರಜ್ಞೆ, ಸಮಯದ ನಿರ್ವಹಣೆ, ಜಾಗರೂಕತೆ ಇತ್ಯಾದಿ ವೃತ್ತಿ ಸಂಬಂಧಿತ ಕೌಶಲಗಳು ಮತ್ತು ಎಲ್‌ಎಲ್‌ಬಿ ಅಥವಾ ಎಲ್‌ಎಲ್‌ಎಮ್ ಸ್ನಾತಕೋತ್ತರ ಪದವಿಯನ್ನು ಬಾರ್ ಕೌಂಸಿಲ್ ಮಾನ್ಯತೆ ಪಡೆದ ಕಾಲೇಜು/ವಿಶ್ವವಿದ್ಯಾಲಯದಿಂದ ಗಳಿಸಿರಬೇಕು. ಪದವಿಯ ನಂತರ, ವಕೀಲಿ ವೃತ್ತಿಯ ಸೇವೆ ಸಲ್ಲಿಸಲು ಬಾರ್ ಕೌಂಸಿಲ್ ಅಫ್ ಇಂಡಿಯ ಸಂಸ್ಥೆಯೊಂದಿಗೆ ನೋಂದಾಯಿಸಿಕೊಳ್ಳಬೇಕು. ದೇಶದ ಸಿವಿಲ್ ಅಥವಾ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಕನಿಷ್ಠ ಮೂರು ವರ್ಷಗಳ ಸೇವೆ ಸಲ್ಲಿಸಿದ ನಂತರ ಸರ್ಕಾರಿ ವಕೀಲರಾಗಲು ಅರ್ಹತೆಯಿರುತ್ತದೆ.

ಸರ್ಕಾರಿ ವಕೀಲರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು.    ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಮೌಖಿಕ ಸಂದರ್ಶನವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://cetonline.karnataka.gov.in/kea/asstprosecutor

8. ನಾನು ಬಿಎ ಪದವಿ ಮುಗಿಸಿದ್ದೇನೆ. ನಾನು ನನ್ನ ಸಹಿಯನ್ನು ಕಾಲೇಜು ದಾಖಲಾತಿಗಳಲ್ಲಿ ಇರುವಂತೆ ಮಾಡಿದ್ದೇನೆ. ಈಗ ನನ್ನ ಸಹಿ ಮಾಡುವ ರೀತಿಯನ್ನು ಬದಲಾಯಿಸಬೇಕೆಂದುಕೊAಡಿದ್ದೇನೆ. ಇದರಿಂದ ಏನಾದರೂ ತೊಂದರೆ ಆಗುತ್ತದೆಯೇ?

ನಮ್ಮ ಅಭಿಪ್ರಾಯದಂತೆ ಹಿಂದಿನ ಮತ್ತು ನೂತನ ಸಹಿ ಇರುವ ಧೃಡೀಕರಿಸಿದ ಪ್ರಮಾಣ ಪತ್ರವನ್ನು ಮಾಡಬೇಕು. ಈಗಿರುವ ಕಾಲೇಜು ದಾಖಲೆಗಳಲ್ಲಿರುವ ಸಹಿಯನ್ನು ಬದಲಾವಣೆ ಮಾಡಬೇಕಿದ್ದಲ್ಲಿ ಪ್ರಮಾಣಪತ್ರದೊಂದಿಗೆ  ಸಂಬಂಧಪಟ್ಟ ಕಾಲೇಜು/ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿ.

9. ನಾನು ಬಿಎ 2ನೇ ವರ್ಷದ ವಿದ್ಯಾರ್ಥಿ. ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಆಗಬೇಕೆಂದುಕೊಂಡಿದ್ದೇನೆ. ಇದಕ್ಕಾಗಿ ತಯಾರಿ ಹೇಗೆ? ಸಮಯದ ನಿರ್ವಹಣೆ ಹೇಗೆ ಮತ್ತು ಯಾವ ರೀತಿ ಓದಬೇಕು? ನಾನು, ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ ಇಂಗ್ಲಿಷ್ ಕಷ್ಟವೆನಿಸುತ್ತದೆ. ಇಂಗ್ಲಿಷ್ ಯಾವ ರೀತಿ ಕಲಿಯಬೇಕು ತಿಳಿಸಿ ಸರ್. ̶ ಜೆ.ಬಿ. ಕಟ್ಟಿಮನಿ, ಊರು ತಿಳಿಸಿಲ್ಲ.

ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ಆಗಲು ಯಾವುದಾದರೂ ಪದವಿಯ ಜೊತೆ ನಾಯಕತ್ವದ ಕೌಶಲ,  ದಿಟ್ಟತನ, ಸಹಭಾಗಿತ್ವದ ಕೌಶಲ, ಉತ್ತಮ ಸಂವಹನ, ಪರಿಶೋಧನಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳ ಜೊತೆ ಸಕಾರಾತ್ಮಕ ಧೋರಣೆಯಿರಬೇಕು; ಹಾಗೂ, ಮಾನಸಿಕ ಮತ್ತು ದೈಹಿಕ ಸದೃಡತೆಯಿರಬೇಕು. ಪ್ರಮುಖವಾಗಿ, ಈ ವೃತ್ತಿ ನಿಮಗೆ ಒಪ್ಪುತ್ತದೆಯೇ ಎಂದು ಖಚಿತವಾಗಬೇಕು. ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ ಮತ್ತು ವಿಷಯಸೂಚಿಗೆ ಗಮನಿಸಿ: https://prepp.in/karnataka-police-exam

ಇಂಗ್ಲಿಷ್ ಭಾಷೆಯನ್ನು ಕಲಿಯುವುದರ ಬಗ್ಗೆ ಕಳೆದ ವರ್ಷದ ಅಕ್ಟೋಬರ್ 3ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಪರಿಣಾಮಕಾರಿ ಓದುವಿಕೆ ಮತ್ತು ಸಮಯದ ನಿರ್ವಹಣೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ: https://www.youtube.com/@ExpertCareerConsultantAuthor
https://www.youtube.com/watch?v=AnAbzbLsFvM

10. ನಾನು ಅಂತಿಮ ವರ್ಷದ ಎಲ್‌ಎಲ್‌ಬಿ ಪದವಿಯನ್ನು ಓದುತ್ತಿದ್ದೇನೆ. ವಿದ್ಯಾಭ್ಯಾಸದ ಜೊತೆಗೆ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಬರೆಯಬಹುದೇ?

11. ಕಾನೂನು ಪದವಿಯನ್ನು ಮಾಡಿದ್ದೇನೆ. ಸಿವಿಲ್ ನ್ಯಾಯಾಧೀಶರಾಗಲು ಅರ್ಹತೆಯೇನು?
ಮತ್ತು ಜಿಲ್ಲಾ ನ್ಯಾಯಧೀಶರಾಗಲು ಇರುವ ಅರ್ಹತೆಯೇನು?

ಕಾನೂನು ಪದವಿಯ ನಂತರ ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು. ಹಾಗೂ, ಉಚ್ಛ ನ್ಯಾಯಾಲಯಗಳು, ಸಿವಿಲ್ ನ್ಯಾಯಾಧೀಶರ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಈ ಪರೀಕ್ಷೆಯಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯಿರುತ್ತದೆ. ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಮುಖ್ಯ ಪರೀಕ್ಷೆಯ ಅರ್ಹತೆಗಾಗಿ ಮಾತ್ರ ಪರಿಗಣಿಸಲಾಗುತ್ತದೆ.

ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://karnatakajudiciary.kar.nic.in/recruitmentNotification.php

12. ನಾನು ಪ್ರಥಮ ವರ್ಷದ ಎಂಎ (ಅರ್ಥಶಾಸ್ತ್ರ) ಓದುತ್ತಿದ್ದೇನೆ. ಇದನ್ನು ಬಿಟ್ಟು ಬಿ.ಇಡಿ ಮಾಡಬೇಕು ಅಂದುಕೊಂಡಿದ್ದೀನಿ. ಯಾವುದು ಮಾಡಿದರೆ ಸೂಕ್ತ ಎಂದು ತಿಳಿಸಿ ಸರ್?

ಖಚಿತವಾದ ವೃತ್ತಿಯೋಜನೆಯಿಲ್ಲದೆ ಕೋರ್ಸ್ಗಳನ್ನು ಮಾಡಿದರೆ ಇಂತಹ ಗೊಂದಲಗಳು ಸಾಮಾನ್ಯ. ಜೀವನದಲ್ಲಿ ನಿರ್ದಿಷ್ಟವಾದ, ಸ್ಪಷ್ಟವಾದ, ಸಾಧಿಸಬಹುದಾದ, ಮತ್ತು ಅಳೆಯಬಹುದಾದ ಗುರಿಯಿರಬೇಕು. ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಪಡೆಯಬಹುದು. ಎಂಎ (ಅರ್ಥಶಾಸ್ತ್ರ  ಮತ್ತು ಬಿ.ಇಡಿ ಸಂಬಂಧಿತ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ಕೌಶಲಗಳು ವಿಭಿನ್ನ. ಹಾಗಾಗಿ, ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆತ್ಮಸಂತೃಪ್ತಿಯನ್ನು ತಂದುಕೊಡುವ ವೃತ್ತಿಯೋಜನೆಯನ್ನು ಮಾಡಿ ಅದರಂತೆ ಮುಂದಿನ ನಿರ್ಧಾರವನ್ನು ಮಾಡುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ವೀಕ್ಷಿಸಿ:
https://www.youtube.com/watch?v=oyUMPrEKPPU

13. ನಾನು ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿAಗ್ ಮಾಡುತ್ತಿದ್ದೇನೆ. ಇದಾದ ನಂತರ ಏನು ಮಾಡಬೇಕು ತಿಳಿಯುತ್ತಿಲ್ಲ.

ಸಾಮಾನ್ಯವಾಗಿ ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಪ್ರತಿಭೆಯನ್ನು ಆಧಾರಿಸಿ ವೃತ್ತಿಯೋಜನೆಯನ್ನು ಮಾಡಿ, ಅದರಂತೆ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿಯೋಜನೆಯನ್ನು ಮಾಡದೆ, ಕೋರ್ಸ್ ಆಯ್ಕೆ ಮಾಡಿದರೆ ಇಂತಹ ಗೊಂದಲಗಳು ಸಾಮಾನ್ಯ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ನಂತರವಿರುವ ಈ ಆಯ್ಕೆಗಳನ್ನು ಪರಿಶೀಲಿಸಬಹುದು:

  • ಕ್ಯಾಂಪಸ್ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
  • ನಿಮಗೆ ಆಸಕ್ತಿಯಿರುವ ಕ್ಷೇತ್ರಕ್ಕೆ ಸಂಬAಧಿಸಿದಂತೆ ಅಲ್ಪಾವಧಿ ವೃತ್ತಿಪರ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ಗಳನ್ನು ಮಾಡಿ ವೃತ್ತಿಯ ಅವಕಾಶಗಳನ್ನು ಬಳಸಿಕೊಳ್ಳಬಹುದು.
  • ಹೆಚ್ಚಿನ ತಜ್ಞತೆಗಾಗಿ ಎಂಟೆಕ್/ಎಂಇ ( ಮೆಕ್ಯಾನಿಕಲ್, ಆಟೊಮೊಬೈಲ್, ಏರೊನಾಟಿಕಲ್ ಇತ್ಯಾದಿ) ಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

14. ನಾನು ದ್ವಿತೀಯ ಪಿಯುಸಿ ಮಾಡುತ್ತಿದ್ದೇನೆ. ಇದಾದ ನಂತರ ಬಿಎ, ಎಲ್‌ಎಲ್‌ಬಿ ಮಾಡಬೇಕೆಂದುಕೊAಡಿದ್ದೇನೆ. ದಯವಿಟ್ಟು ಆಯ್ಕೆ ಪ್ರಕ್ರಿಯೆ, ಶುಲ್ಕಗಳ ಬಗ್ಗೆ ಮಾರ್ಗದರ್ಶನ ನೀಡಿ.

ವಕೀಲಿ ವೃತ್ತಿಯನ್ನು ಅನುಸರಿಸಬೇಕೆನ್ನುವ ನಿಮ್ಮ ವೃತ್ತಿಯೋಜನೆ ಖಚಿತವಾಗಿದ್ದಲ್ಲಿ, ಐದು ವರ್ಷದ ಇಂಟಿಗ್ರೇಟೆಡ್ ಬಿಎ, ಎಲ್‌ಎಲ್‌ಬಿ ಕೋರ್ಸ್ ಮಾಡುವುದು ಸೂಕ್ತ. ಸಿಎಲ್‌ಎಟಿ, ಎಲ್‌ಎಸ್‌ಎಟಿ, ಎಐಎಲ್‌ಇಟಿ  ಮುಂತಾದ ಪರೀಕ್ಷೆಗಳ ಮೂಲಕ ಕೆಲವು ಸರ್ಕಾರಿ ಕಾಲೇಜುಗಳೂ ಸೇರಿದಂತೆ ಪ್ರತಿಷ್ಟಿತ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರವೇಶವನ್ನು ಪಡೆಯಬಹುದು. ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ ಇತ್ಯಾದಿಗಳು ನೀವು ಯಾವ ಕಾಲೇಜು (ಸರ್ಕಾರಿ, ಖಾಸಗಿ) ಸೇರುತ್ತೀರಿ ಎನ್ನುವುದನ್ನು ಅವಲಂಬಿಸಿರುತ್ತದೆ.  ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ಶೈಕ್ಷಣಿಕ ಸಾಲದ ಅವಶ್ಯಕತೆಯಿದ್ದಲ್ಲಿ, ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿ ಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ.

15. ನಾನು ಒಬ್ಬ ಸರ್ಕಾರಿ ನೌಕರನಾಗಿದ್ದು ವಕೀಲನಾಗಬೇಕೆಂಬ ಆಸೆ ಇದೆ. ಆದರೆ, ಈಗ ನಾನು ಕಾಲೇಜಿಗೆ ಹೋಗಲಾಗುವುದಿಲ್ಲ. ದೂರ ಶಿಕ್ಷಣ ಕೇಂದ್ರದಿಂದ ಎಲ್‌ಎಲ್‌ಬಿ ಕೋರ್ಸ್ ಮಾಡಬಹುದೇ? ಯಾವ ವಿಶ್ವವಿದ್ಯಾಲಯದಲ್ಲಿ ಈ ಅವಕಾಶವಿದೆ ತಿಳಿಸಿ. ̶ ಸರ್ಫರಾಜ ಮುಲ್ಲಾ, ಧಾರವಾಡ.

ವಕೀಲಿ ವೃತ್ತಿಯನ್ನು ಅನುಸರಿಸಲು ರೆಗ್ಯುಲರ್ ಪದ್ಧತಿಯಲ್ಲಿ ಎಲ್‌ಎಲ್‌ಬಿ ಕೋರ್ಸ್ ಮುಗಿಸಿ, ಬಾರ್ ಕೌಂಸಿಲ್ ಅಫ್ ಇಂಡಿಯ ಸಂಸ್ಥೆಗೆ ನೋಂದಾಯಿಸಿಕೊಳ್ಳಬೇಕು. ದೂರಶಿಕ್ಷಣದ ಎಲ್‌ಎಲ್‌ಬಿ ಪದವಿಗೆ ಬಾರ್ ಕೌಂಸಿಲ್‌ನ ಮಾನ್ಯತೆಯಿರುವುದಿಲ್ಲ, ಹಾಗಾಗಿ, ನಮಗಿರುವ ಮಾಹಿತಿಯಂತೆ ದೂರಶಿಕ್ಷಣದ ಮೂಲಕ ವಕೀಲರಾಗುವುದು ಸಾಧ್ಯವಿಲ್ಲ.

16. ಸರ್, ನಾನು ಸರ್ಕಾರಿ ಪ್ರೌಢ ಶಾಲಾಶಿಕ್ಷಕನಾಗಿದ್ದು ದಾಖಲೆಗಳಲ್ಲಿ ನನ್ನ ಹೆಸರು ತಪ್ಪಾಗಿದೆ. ಈಗ ಇದನ್ನು ಸರಿಪಡಿಸಿಕೊಳ್ಳುವ ಪ್ರಕ್ರಿಯೆ ಬಗ್ಗೆ ತಿಳಿಸಿ.

ನಮ್ಮ ಅಭಿಪ್ರಾಯದಂತೆ, ಸಣ್ಣ ತಪ್ಪುಗಳಿದ್ದಲ್ಲಿ ಸರಿಯಾದ ಹೆಸರಿನಲ್ಲಿ ದೃಢೀಕರಿಸಿದ ಪ್ರಮಾಣ ಪತ್ರವನ್ನು ಮಾಡಬೇಕು. ಸರ್ಕಾರಿ ದಾಖಲೆಗಳಲ್ಲಿ ಹೆಸರನ್ನು ಸರಿಪಡಿಸಲು ಪ್ರಮಾಣಪತ್ರದೊಂದಿಗೆ ಸಂಬAಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿ. ಆದರೆ, ಪ್ರಮುಖ ಬದಲಾವಣೆಗಳಿದ್ದಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಗಾಗಿ ಗಮನಿಸಿ: https://schooleducation.kar.nic.in/pdffiles/Forms_Proc/ChangeOfNameGovtServants.pdf

17. ನಾನು ಪದವಿಯನ್ನು ಮುಗಿಸಿ ಐಎಎಸ್/ಕೆಎಎಸ್‌ಗೆ ತಯಾರಿ ನಡೆಸುತ್ತಿದ್ದೇನೆ. ಪಿಯುಸಿ ಪರೀಕ್ಷೆಯ ಒಂದು ವಿಷಯವನ್ನು ಪೂರಕ ಪರೀಕ್ಷೆಯಲ್ಲಿ ಮುಗಿಸಿದ್ದೇನೆ. ಈ ಕಾರಣದಿಂದ, ಮುಂದೆ ಸರ್ಕಾರಿ ನೌಕರಿ ಪಡೆಯುವಾಗ ತೊಂದರೆಯಾಗುವುದೇ?

ಒಂದು ವಿಷಯವನ್ನು ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರಿಂದ ಸರ್ಕಾರಿ ನೌಕರಿಗೆ ತೊಂದರೆಯಾಗುವುದಿಲ್ಲ. ಆದರೆ, ವೈಯಕ್ತಿಕ ಸಂದರ್ಶನದಲ್ಲಿ ಈ ಕುರಿತ ಪ್ರಶ್ನೆಯನ್ನು ನಿರೀಕ್ಷಿಸಿ, ಸೂಕ್ತ ಉತ್ತರವನ್ನು ನೀಡಬಹುದು.