1. ಸರ್, ನಾನು ಬಿಇ ಪದವಿಯನ್ನು ಮುಗಿಸಿ, ಐಪಿಎಸ್ ಅಧಿಕಾರಿಯಾಗಿ ಸೇವೆ ಮಾಡಬೇಕೆಂದು ಇಚ್ಛಿಸುತ್ತೇನೆ. ಈಗ, ನನಗೆ ಕೆಲಸದ ಅನಿವಾರ್ಯವಿರುವುದರಿಂದ ಯಾವ ಕೆಲಸವನ್ನು ಮಾಡಿದರೆ ಸೂಕ್ತ? ಯುಪಿಎಸ್‌ಸಿ ಪರೀಕ್ಷೆಯ ತಯಾರಿ ಹೇಗೆ?
2. ನಾನು ಈ ವರ್ಷ ಬಿಕಾಂ ಪದವಿಯನ್ನು ಮುಗಿಸಿದ್ದೇನೆ. ನನಗೆ ಐಪಿಎಸ್ ಅಧಿಕಾರಿಯಾಗುವ ಆಸೆಯಿದೆ. ಕರ್ನಾಟಕದಲ್ಲಿ ಕನ್ನಡ ಮಾದ್ಯಮದಲ್ಲಿ ಕೋಚಿಂಗ್ ನೀಡುವ ಸೆಂಟರ್‌ಗಳ ಮಾಹಿತಿಯನ್ನು ತಿಳಿಸುವಿರಾ? ಮತ್ತು ಕನ್ನಡದಲ್ಲಿ ಯುಪಿಎಸ್‌ಸಿ ತಯಾರಿ ಬಗ್ಗೆ ತಿಳಿಸಿ. ̶ ಪ್ರದೀಪ್, ಕೊಪ್ಪಳ.
ಐಪಿಎಸ್ ಅಧಿಕಾರಿಯಾಗಬೇಕೆನ್ನುವ ನಿಮ್ಮ ಆಕಾಂಕ್ಷೆಗೆ ಅಭಿನಂದನೆಗಳು ಮತ್ತು ಶುಭಹಾರೈಕೆಗಳು. ಯುಪಿಎಸ್‌ಸಿ ಆಯೋಜಿಸುವ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.
ಪೂರ್ವಭಾವಿ (ಬಹು ಆಯ್ಕೆ ಮಾದರಿ-ಇಂಗ್ಲಿಷ್/ಹಿಂದಿ)
- ಮುಖ್ಯ ಪರೀಕ್ಷೆ (ಕನ್ನಡದಲ್ಲಿ ಬರೆಯಬಹುದು).
- ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ (ಕನ್ನಡದಲ್ಲಿ ನೀಡಬಹುದು)
- ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು.
- ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ, ಏಕಾಗ್ರತೆಯ ಜೊತೆಗೆ ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಕೆಲಸದ ಅನಿವಾರ್ಯತೆಯಿದ್ದರೆ ಸುಲಭವಾಗಿ ನಿಭಾಯಿಸಬಹುದಾದ ಮತ್ತು ನಿಮ್ಮ ವಿದ್ಯಾರ್ಹತೆಗೆ ಅನುಗುಣವಾದ ವೃತ್ತಿಯನ್ನು ಅರಸಬಹುದು. ಹಾಗೂ, ವೃತ್ತಿಯ ಜೊತೆಗೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಬಹುದೇ ಎಂದು ಪರಿಶೀಲಿಸಿ.
ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯುವ ನಿಮ್ಮ ಆಲೋಚನೆ ಶ್ಲಾಘನೀಯ. ಕನ್ನಡ ಮಾಧ್ಯಮದಲ್ಲಿ ತರಬೇತಿ ನೀಡುವ ಹಲವಾರು ಕೋಚಿಂಗ್ ಸೆಂಟರ್‌ಗಳಿವೆ; ಯಾವ ಸೆಂಟರ್ ಸೇರಬೇಕೆನ್ನುವ ನಿರ್ಧಾರ ನಿಮ್ಮದು. ಈ ಸಲಹೆಗಳು ನಿಮ್ಮ ಗಮನದಲ್ಲಿರಲಿ:
- ಅಧ್ಯಯನದ ಮಾಹಿತಿಯನ್ನು (ಸ್ಟಡಿ ಮೆಟೀರಿಯಲ್) ಆದಷ್ಟು ಕನ್ನಡದಲ್ಲಿ ಸಂಗ್ರಹಿಸಿ; ಇಂಗ್ಲಿಷ್ ಮಾಹಿತಿಯಿದ್ದರೆ ಕನ್ನಡಕ್ಕೆ ಅನುವಾದಿಸಿಕೊಂಡು ಓದಬೇಕು.
- ವಿಷಯಾನುಸಾರ ಕನ್ನಡದಲ್ಲಿಯೇ ಅಧ್ಯಯನ ಮಾಡಬೇಕು.
- ಕನ್ನಡದಲ್ಲಿ ಬರೆಯುವ ವೇಗವನ್ನು ಹೆಚ್ಚಿಸಿಕೊಳ್ಳಿ; ಬರವಣಿಗೆ ಸುಲಭವಾಗಿ ಅರ್ಥವಾಗುವಂತಿರಲಿ.
ಪರಿಣಾಮಕಾರಿ ಓದುವಿಕೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk
3. ಸರ್, ನಾನು ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ. ನನಗೆ ಕೆಎಎಸ್ ಮಾಡುವ ಆಸೆಯಿದೆ. ಆದರೆ, ಎಲ್ಲರೂ ಮೊದಲು ಒಂದು ಕೆಲಸ ನೋಡಿಕೋ; ನಂತರ ಏನಾದರೂ ಮಾಡಬಹುದು ಎನ್ನುತ್ತಿದ್ದಾರೆ. ನಾನು ಈಗಾಗಲೇ ಅಭ್ಯಾಸವನ್ನು ಪ್ರಾರಂಭಿಸಿದ್ದೇನೆ. ನನಗೆ ಮನೆಯವರು ಮದುವೆ ಮಾಡಲು ನಿರ್ಧರಿಸಿದ್ದಾರೆ. ಏನು ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ. ಸಲಹೆ ನೀಡಿ. ಧನ್ಯವಾದಗಳು.
ಬದುಕಿನ ನಿಮ್ಮ ಕನಸುಗಳು, ವೃತ್ತಿಯ ಆಯ್ಕೆ ಮತ್ತು ನಿಮ್ಮ ಸನ್ನದ್ಧತೆಯ ಬಗ್ಗೆ ಮನೆಯವರಿಗೆ ಮನವರಿಕೆ ಮಾಡಿ, ಒಮ್ಮತದ ನಿರ್ಧಾರಕ್ಕೆ ಬರಲು ಪ್ರಯತ್ನಿಸಿ.
ಸಾಧನೆಯ ಹಾದಿಯಲ್ಲಿ, ಆಂತರಿಕ ಮತ್ತು ಬಾಹ್ಯ ಪರಿಸರದ ಅಡಚಣೆಗಳು, ತೊಂದರೆಗಳು ಸರ್ವೇಸಾಮಾನ್ಯ. ನಿಮ್ಮ ಕನಸುಗಳು ಸಾಕಾರವಾಗಬೇಕಾದರೆ, ಸ್ವಯಂಪ್ರೇರಣೆಯೇ ನಿಮ್ಮ ಸಾಧನೆಗೆ ಸಂಜೀವಿನಿಯಾಗಬೇಕು. ಸವಾಲುಗಳನ್ನು ನಿರೀಕ್ಷಿಸಿ, ಮನಸ್ಸು ಸ್ಥಿತಪ್ರಜ್ಞೆಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ. ಹಾಗಾಗಿ, ಇನ್ನೂ ಹೆಚ್ಚಿನ ಏಕಾಗ್ರತೆ, ದೃಢತೆ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಿ, ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಪ್ರಯತ್ನಿಸಿ. ನಿಮಗೆ ಸಾಧ್ಯವೆನಿಸಿದರೆ, ಕೆಎಎಸ್ ಪರೀಕ್ಷೆಯ ತಯಾರಿಯ ಜೊತೆ ಸೂಕ್ತವಾದ ಅರೆಕಾಲಿಕ/ಪೂರ್ಣಕಾಲಿಕ ಉದ್ಯೋಗವನ್ನು ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/self-motivation/
4. ನಾನು ಬಿಕಾಂ ಪೂರ್ಣಗೊಳಿಸಿದ್ದೇನೆ. ನನಗೆ ಕನ್ನಡ ಶಿಕ್ಷಕಿ ಅಥವಾ ಪ್ರಾಧ್ಯಾಪಕಿ ಆಗಬೇಕೆಂಬ ಆಸೆ ಇದೆ. ನಾನು ಈಗ ಎಂಎ (ಕನ್ನಡ ಸಾಹಿತ್ಯ) ಮಾಡಬೇಕೆಂದು ಅಂದುಕೊಂಡಿದ್ದೇನೆ. ಎಂಎ ನಂತರ ಉದ್ಯೋಗಾವಕಾಶಗಳು ಇದೆಯೇ? ದಯವಿಟ್ಟು ಏನು ಮಾಡಬಹುದೆಂದು ಮಾರ್ಗದರ್ಶನ ನೀಡಿ ̶ ಸಂಧ್ಯಾ, ಬೆಂಗಳೂರು.
ಎಂಎ (ಕನ್ನಡ) ಪದವಿಯ ನಂತರ ಅನೇಕ ಉದ್ಯೋಗಾವಕಾಶಗಳಿವೆ. ಉದಾಹರಣೆಗೆ, ಸಹಾಯಕ
ಎಂಎ (ಕನ್ನಡ) ಪದವಿಯ ನಂತರ ಅನೇಕ ಉದ್ಯೋಗಾವಕಾಶಗಳಿವೆ. ಉದಾಹರಣೆಗೆ, ಸಹಾಯಕ ಪ್ರಾಧ್ಯಾಪಕರು/ಉಪನ್ಯಾಸಕರು, ಸಂಶೋಧಕರು, ವಿಷಯ ಬರಹಗಾರರು, ಮಾಡರೇಟರ್/ಅನುವಾದಕರು, ಕನ್ನಡ ಚಿತ್ರಕಥೆಗಾರರು, ಭಾಷಾ ತಜ್ಞರು, ಸುದ್ದಿ ಸಂಪಾದಕರು/ಪತ್ರಕರ್ತರು, ಪ್ರವಾಸ ಮಾರ್ಗದರ್ಶಿಗಳು, ಧ್ವನಿ-ಕಲಾವಿದರು, ಲೇಖಕರು ಇತ್ಯಾದಿ. ಆಯಾ ವೃತ್ತಿಗೆ ಸಂಬAಧಿಸಿದಂತೆ, ಹೆಚ್ಚಿನ ತಜ್ಞತೆಗಾಗಿ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ಗಳನ್ನು ಆನ್‌ಲೈನ್/ದೂರಶಿಕ್ಷಣದ ಮೂಲಕ ಮಾಡುವುದು ಸೂಕ್ತ.
ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕಿಯಾಗಲು ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಾವಳಿಯಂತೆ ಪಿಎಚ್.ಡಿ ಮಾಡಿರಬೇಕು.
ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿದರೆ, ಬಿಕಾಂ ನಂತರ ಯಾವ ಕೋರ್ಸ್ ಮಾಡಬಹುದು ಎಂದು ಸ್ಪಷ್ಟವಾಗುತ್ತದೆ. ವೃತ್ತಿಯೋಜನೆ ಮಾಡುವ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor
5. ನಾನು ಬಿಎ ವ್ಯಾಸಂಗ ಮಾಡುತ್ತಿದ್ದು, ಮುಂದೆ ರಾಷ್ಟç ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತೇನೆ. ಈಗ ಸದ್ಯಕ್ಕೆ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗೆ ತಯಾರಿ ಹೇಗೆ ಮಾಡಬೇಕು ಮತ್ತು ಅದರ ಜೊತೆ ಮುಂದಿನ ತಯಾರಿ ಹೇಗಿರಬೇಕು? ̶ ಅಂಕಿತ್ ಎ.ಎಸ್, ಊರು ತಿಳಿಸಿಲ್ಲ.
ರಾಷ್ಟç ಮಟ್ಟದಲ್ಲಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿವೆ. ಆಯಾ ಪರೀಕ್ಷೆಗಳ ಮಾದರಿ, ಪಠ್ಯಕ್ರಮ, ಐಚ್ಛಿಕ ವಿಷಯಗಳು, ನಿಯಮಾವಳಿಗಳನ್ನು ಅರ್ಥಮಾಡಿಕೊಂಡು, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯತಂತ್ರವನ್ನು ರೂಪಿಸಬೇಕು. ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ, ದೈಹಿಕ ಮಾನದಂಡಗಳು ಮತ್ತುವಿಷಯಸೂಚಿಗೆ ಗಮನಿಸಿ: https://prepp.in/karnataka-police-exam
6. ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಮುಂದೆ, ನಾನು ಎಂಬಿಬಿಸ್ ಮಾಡಲು ಆಸಕ್ತಿ ಹೊಂದಿದ್ದೇನೆ. ಆದರೆ, ನಾನು ಅದಕ್ಕೆ ಯಾವುದೇ ತಯಾರಿ ನಡೆಸಿರುವುದಿಲ್ಲ. ಈ ಕಡಿಮೆ ಅವಧಿಯಲ್ಲಿ ನಾನು ಯಾವ ರೀತಿ ಓದಬೇಕು? ನನಗೆ ಎಂಬಿಬಿಎಸ್ ಮತ್ತು ಬಿ.ಎಸ್ಸಿ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದೇನೆ. ಯಾವುದು ಉತ್ತಮ ಎಂದು ನನಗೆ ತಿಳಿಯುತ್ತಿಲ್ಲ. ದಯವಿಟ್ಟು ಮಾರ್ಗದರ್ಶನ ಮಾಡಿ. ̶ ಸಂತೋಷ್ ಜಿ, ಕಾರಿಗನೂರು, ಹೊಸಪೇಟೆ.
ನಿಮಗೆ ವೈದ್ಯಕೀಯ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಈಗಲೂ ಕಾಲ ಮಿಂಚಿಲ್ಲ. ಈ ವೃತ್ತಿಯಲ್ಲಿ ಯಶಸ್ವಿಯಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅತ್ಯಗತ್ಯ. ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ, ಏಕಾಗ್ರತೆ, ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಹಿಂದಿನ ವರ್ಷಗಳ ರ‍್ಯಾಂಕ್ ಮತ್ತು ಅಂಕಗಳ ಆಧಾರದ ಮೇಲೆ, ನಾನಾ ಕಾಲೇಜುಗಳಲ್ಲಿ ಸೀಟ್ ಲಭಿಸಿದ ಮಾಹಿತಿಯನ್ನು ಪರಿಶೀಲಿಸಿ, ನಿಮ್ಮ ಗುರಿ ಮತ್ತು ಕಾರ್ಯತಂತ್ರವನ್ನು ನಿರ್ಧರಿಸಬೇಕು.
ನಿಮಗಿರುವ ಎರಡು ಆಯ್ಕೆಗಳಲ್ಲಿ, ಮೊದಲ ಆದ್ಯತೆ ಎಂಬಿಬಿಎಸ್ ಆಗಿರಲಿ. ಪರಿಣಾಮಕಾರಿ ಓದುವಿಕೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk
7. ಸರ್, ನಾನು ಬಿಎ ಅಂತಿಮ ವರ್ಷದ ವಿದ್ಯಾರ್ಥಿ. ಬಿಎ ಮುಗಿದ ನಂತರ ಅರ್ಥಶಾಸ್ತçದಲ್ಲಿ ಎಂಎ ಮಾಡಬೇಕು ಅನ್ನುವ ನಿರ್ಧಾರದಲ್ಲಿದ್ದೀನಿ. ಹೀಗೆ ಮಾಡಿದರೆ ಉಪನ್ಯಾಸಕರಾಗಬಹುದೇ? ಅಥವಾ, ಬೇರೆ ಆಯ್ಕೆಗಳಿವೆಯೇ?
ಎಂಎ ನಂತರ ಬಿ.ಇಡಿ ಮಾಡಿ, ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ
ಪ್ರೌಢಶಾಲೆಗಳಲ್ಲಿ/ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಬಹುದು. ಶಿಕ್ಷಕ ವೃತ್ತಿಯನ್ನು ಅನುಸರಿಸಲು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು.
ಅರ್ಥಶಾಸ್ತçದಲ್ಲಿ ಎಂಎ ಮಾಡಿದ ನಂತರ ಬ್ಯಾಂಕಿಂಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ, ಮಾಧ್ಯಮ, ವಿಷಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿಯೂ ಅವಕಾಶಗಳಿವೆ. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದ ಇಲಾಖೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು.
8. ಸರ್, ನಾನು ಎಂಕಾಂ ಪದವಿಯನ್ನು 2021ರಲ್ಲಿ ಪೂರ್ಣಗೊಳಿಸಿದ್ದೇನೆ. ಪಿಡಿಒ ಅಧಿಕಾರಿಯಾಗಿ ಸೇವೆ ಮಾಡಬೇಕೆಂದು ಇಚ್ಛಿಸುತ್ತೇನೆ. ಈಗಾಗಲೆ ತಯಾರಿಯನ್ನು ಪ್ರಾರಂಭಿಸಿದ್ದೇನೆ. ನನ್ನ ತಂದೆ-ತಾಯಿಯರು ಸ್ಪರ್ಧಾತ್ಮಕ ಪರೀಕ್ಷೆಯ ಆಸೆಯನ್ನು ಬಿಟ್ಟು 1 ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿ, ಮದುವೆಯಾಗು ಎಂದು ಸಲಹೆ ನೀಡುತ್ತಿದ್ದಾರೆ. ನಾನು ಹೇಗೆ ಮುಂದುವರಿದರೆ ಉತ್ತಮ? ̶ ಬಿ.ಛಾಯ, ಶಿವಮೊಗ್ಗ.
ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಕೌಶಲಗಳನ್ನು ಗಮನಿಸಿ ಯಾವ ವೃತ್ತಿ ನಿಮಗೆ ಸರಿಹೊಂದುತ್ತದೆ ಎಂದು ಇನ್ನೊಮ್ಮೆ ಪರಿಶೀಲಿಸಿ. ಹಾಗೂ, ವೃತ್ತಿಯ ಆಯ್ಕೆ, ವೈಯಕ್ತಿಕ ಮತ್ತು ವೃತ್ತಿಪರ ಬದುಕಿನ ಧ್ಯೇಯಗಳು ಮತ್ತು ನಿಮ್ಮ ಸನ್ನದ್ಧತೆಯ ಬಗ್ಗೆ ಮನೆಯವರಿಗೆ ಮನವರಿಕೆ ಮಾಡಿ, ಒಮ್ಮತದ ನಿರ್ಧಾರಕ್ಕೆ ಬರಲು ಪ್ರಯತ್ನಿಸಿ. ಹಾಗೂ, ಶಿಕ್ಷಕಿಯಾಗಬೇಕಾದರೆ ಬಿ.ಇಡಿ ಕೋರ್ಸ್ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆನ್ನುವುದು ನಿಮ್ಮ ಗಮನದಲ್ಲಿರಲಿ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/@ExpertCareerConsultantAuthor
9. ನಾನು ಬಿಕಾಂ 2ನೇ ವರ್ಷದ ವಿದ್ಯಾರ್ಥಿ. ನನಗೆ ಎಂಬಿಎ ಮಾಡುವ ಆಸೆಯಿದೆ. ಆದರೆ, ಮನೆಯಲ್ಲಿ ಅದಕ್ಕೆ ಭವಿಷ್ಯವಿಲ್ಲ; ಸಿಇಟಿ ಓದು ಅಂತಿದ್ದಾರೆ. ಮಾರ್ಗದರ್ಶನ ಮಾಡಿ ಸರ್.
ಉದ್ಯಮದ ಜವಾಬ್ದಾರಿಗಳನ್ನು ನಿರ್ವಹಿಸಲು ಸಮಗ್ರವಾದ ತಿಳುವಳಿಕೆಯನ್ನು-ಮಾರುಕಟ್ಟೆಯ ನಿರ್ವಹಣೆ, ಹಣಕಾಸಿನ ಆಡಳಿತ, ಆಯವ್ಯಯ ಶಾಸ್ತ್ರ, ಬಂಡವಾಳ ಪೂರೈಕೆ, ಉತ್ಪಾದನೆ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ-ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಈ ಕೋರ್ಸಿನಲ್ಲಿ ಕಲಿಸುವ ಅನೇಕ ತತ್ವಗಳು, ಸೂತ್ರಗಳು ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದಲ್ಲೂ ಉಪಯುಕ್ತ. ಹಾಗಾಗಿ, ಎಂಬಿಎ ಪದವೀಧರರಿಗೆ ಖಾಸಗಿ ಕ್ಷೇತ್ರದಲ್ಲಿ ಬೇಡಿಕೆಯಿದೆ.
ಎಂಬಿಎ ನಂತರ ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ವಂತ ಉದ್ಯಮವನ್ನು ಆರಂಭಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=WHZTFCmu3zg
10. ಸರ್. ನಾನು ಪಿಯುಸಿ ಓದುತ್ತಿದ್ದು, ನನಗೆ ಮನೆಯಲ್ಲಿ ಮದುವೆ ಮಾಡಲು ನೋಡುತ್ತಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ. ರಾಜ್ಯಶಾಸ್ತ್ರ, ಇತಿಹಾಸ ಹಾಗೂ ಅರ್ಥಶಾಸ್ತ್ರ, ವಿಷಯಗಳಲ್ಲಿ ಆಸಕ್ತಿಯಿದೆ. ಮನೆಯಲ್ಲಿ ಬಡತನ ಹಾಗೂ ಕೀಳರಿಮೆ ಕಾರಣಕ್ಕೆ ಎಲ್ಲರೆದುರು ಮಾತನಾಡಲು ಹೆದರುತ್ತೇನೆ. ನನಗೆ ಒಳ್ಳೆಯ ಉದ್ಯೋಗ ಮಾಡಬೇಕೆಂಬ ಆಸಕ್ತಿ ಇದೆ. ಒಳ್ಳೆಯ ಕಾಲೇಜಿನಲ್ಲಿ ಓದಲು ಸ್ಕಾಲರ್‌ಶಿಪ್ ಎಲ್ಲಿ ಸಿಗುತ್ತದೆ? ಯಾರ ನೆರವು ಪಡೆಯಬಹುದು ತಿಳಿಸಿ. ಹೆಸರು, ಊರು ತಿಳಿಸಿಲ್ಲ.
ಈಗಿನ ಪರಿಸ್ಥಿತಿಯಿಂದ ಎದೆಗುಂದದೆ, ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಜೀವನದ ಬಗ್ಗೆ ರಾಜಿಯಾಗದಿರಿ; ಏಕೆಂದರೆ, ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸ್ಪಷ್ಟವಾಗುವುದರ ಜೊತೆಗೆ ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯಿಂದ ಜೀವನದ ಗುರಿಗಳನ್ನು ಸಾಧಿಸುವ ಛಲ, ಆತ್ಮವಿಶ್ವಾಸವನ್ನು ಹುಟ್ಟುಹಾಕಿ, ಕೀಳರಿಮೆಯಿಂದ ಹೊರಬರಲು ಸಾಧ್ಯವಾಗುತ್ತದೆ.
ನಿಮಗೆ ಆಸಕ್ತಿಯಿರುವ ಅರ್ಥಶಾಸ್ತ್ರ, ವಿಷಯಕ್ಕೆ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಬಿಎ ಅಥವಾ ಬಿಎ (ಅರ್ಥಶಾಸ್ತ್ರ -ಆನರ್ಸ್) ಮಾಡಿ, ಬ್ಯಾಂಕಿAಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್ಸ್ಯೂರೆನ್ಸ್, ರೀಟೇಲ್ ಮುಂತಾದ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಕೆಲಸಗಳನ್ನೂ ಪಡೆದುಕೊಳ್ಳಬಹುದು. ವೃತ್ತಿಯ ಜೊತೆಗೆ, ಹೆಚ್ಚಿನ ತಜ್ಞತೆಗಾಗಿ, ಅರ್ಥಶಾಸ್ತçದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಬಿಎ ಕೋರ್ಸನ್ನು ಮಾಡಿ, ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಖಾಸಗಿ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅನೇಕ ಸ್ಕಾಲರ್‌ಶಿಪ್‌ಗಳ ಮಾಹಿತಿ ಅಂತರ್ಜಾಲದಲ್ಲಿ ಸುಲಭವಾಗಿ ಸಿಗುತ್ತದೆ.
ವೃತ್ತಿಯೋಜನೆ, ವೈವಾಹಿಕ ಜೀವನದ ಆಲೋಚನೆಗಳು, ವೃತ್ತಿ ಮತ್ತು ವೈಯಕ್ತಿಕ ಜೀವನದ ಧ್ಯೇಯಗಳು ಮತ್ತು ಈ ನಿಟ್ಟಿನಲ್ಲಿ ನಿಮ್ಮ ಸನ್ನದ್ಧತೆಯ ಬಗ್ಗೆ ಮನೆಯವರಿಗೆ ಮನವರಿಕೆ ಮಾಡಿ, ಒಮ್ಮತದ ನಿರ್ಧಾರಕ್ಕೆ ಬರಲು ಪ್ರಯತ್ನಿಸಿ. ಏಕೆಂದರೆ, ನಿಮ್ಮ ಯೋಜನೆಗಳಿಗೆ ಕುಟುಂಬದ ಬೆಂಬಲವಿದ್ದರೆ, ಸಾಧನೆ ಸುಲಭವಾಗುತ್ತದೆ.
ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor
11. ಸರ್, ನನಗೆ ಗಣಿತ ಬಹಳ ಆಸಕ್ತಿಕರ ವಿಷಯ. ಎಂಥಾ ಸಮಸ್ಯೆಗಳನ್ನೂ ಕೂಡಾ ಸುಲಭವಾಗಿ ಪರಿಹರಿಸುತ್ತೇನೆ. ಅಪ್ಪ, ಅಮ್ಮನ ಒತ್ತಾಯಕ್ಕೆ ಎಂಜಿನಿಯರಿAಗ್ (ಎಲೆಕ್ಟಾçನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್) ಮಾಡಿದೆ. ಉತ್ತಮ ಉದ್ಯೋಗವೂ ಸಿಗಲಿಲ್ಲ. ನನ್ನ ಆಸಕ್ತಿಕರ ಗಣಿತ ಕ್ಷೇತ್ರಕ್ಕೆ ಬದಲಾಯಿಸಿಕೊಳ್ಳಬಹುದೇ? ಆಗಬಹುದಾದರೆ, ಏನು ಮಾಡಬೇಕು?
ಮೊದಲಿಗೆ, ಎಂಜಿನಿಯರಿಂಗ್ ಮಾಡಿದ ನಂತರವೂ ಉತ್ತಮ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ, ಉದ್ಯೋಗದಲ್ಲಿ ಯಶಸ್ವಿಯಾಗಲು ಎಂಜಿನಿಯರಿಂಗ್ ಜ್ಞಾನದ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿ ಸಂಬAಧಿತ ಕೌಶಲಗಳ ಅಗತ್ಯವಿರುತ್ತದೆ ಮತ್ತು ಉದ್ಯೋಗದ ಸಂದರ್ಶನಗಳಲ್ಲಿ ಇವುಗಳು ಅಭ್ಯರ್ಥಿಗಳಲ್ಲಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಉದಾಹರಣೆಗೆ, ಪ್ರಾಥಮಿಕ ಕೌಶಲಗಳಾದ ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ ಮತ್ತು ನಾಯಕತ್ವದ ಕೌಶಲಗಳು ಯಾವುದೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ. ಹಾಗೂ, ವೃತ್ತಿ ಸಂಬಂಧಿತ ಕೌಶಲಗಳಾದ ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ ಇತ್ಯಾದಿ ಕೌಶಲಗಳೂ ಎಂಜಿನಿಯರಿಂಗ್ ಉದ್ಯೋಗದ ಆಕಾಂಕ್ಷಿಗಳಲ್ಲಿರಬೇಕು.
ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ಈ ಕೌಶಲಗಳನ್ನು ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು. ನಿಮಗಿರುವ ಗಣಿತದ ತಜ್ಞತೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉಪಯುಕ್ತ. ಹಾಗಾಗಿ ನಮ್ಮ ಅಭಿಪ್ರಾಯದಂತೆ, ಎಂಜಿನಿಯರಿAಗ್ ಕ್ಷೇತ್ರದಲ್ಲಿ ಮುಂದುವರಿಯುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ.
ವ್ಯಕ್ತಿತ್ವ ಮತ್ತು ವೃತ್ತಿಗೆ ಸಂಬAಧಿಸಿದ ಕೌಶಲಗಳನ್ನು ಕಲಿಯಲು ಇಂದು ವಿಭಿನ್ನವಾದ ಮತ್ತು ವಿಸ್ತಾರವಾದ ಅವಕಾಶಗಳಿವೆ. ವ್ಯಕ್ತಿತ್ವ ವೃದ್ಧಿಸುವ ಕೇಂದ್ರಗಳು, ಕೌಶಲ ತರಬೇತಿ ಕೇಂದ್ರಗಳು, ಕೌಶಲ ಆಯೋಗಗಳು, ಆನ್‌ಲೈನ್ ತರಗತಿಗಳು, ಸಾಧಕರ ಯಶಸ್ಸಿನ ಕಥೆಗಳು, ವಿಡಿಯೊಗಳು, ಪುಸ್ತಕಗಳು ಇತ್ಯಾದಿಗಳನ್ನು ಉಪಯೋಗಿಸಿಕೊಂಡು ವ್ಯಕ್ತಿತ್ವದ ಪರಿಪೂರ್ಣತೆಯನ್ನು ಗಳಿಸಿ, ವೃತ್ತಿ ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದು.
ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=T_z3ngIeyWk
12. ಇಂಗ್ಲಿಷ್ ಜ್ಞಾನವನ್ನು ವೃದ್ಧಿ ಮಾಡಿಕೊಂಡು ಕೀಳರಿಮೆ ಇಲ್ಲದೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದು ಹೇಗೆ ಎಂದು ಕಲಿಸಿಕೊಡಿ ಸರ್. – ವಿಂಧ್ಯಾ ಬುಧ್ಯ, ಶಿರಸಿ.
ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಕಾರ್ಯತಂತ್ರ ಮತ್ತು ಪರಿಶ್ರಮವಿದ್ದಲ್ಲಿ, ಇಂಗ್ಲಿಷ್ ಕಲಿಯಬಹುದು. ಮೊದಲಿಗೆ, ಈ ಸಲಹೆಗಳನ್ನು ಅನುಸರಿಸಿ:
- ಆತ್ಮವಿಶ್ವಾಸ: ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ ಹಿಂಜರಿಕೆಯಿಲ್ಲದೆ, ಆತ್ಮವಿಶ್ವಾಸದಿಂದ ಪ್ರಾರಂಭಿಸಿ.
- ಓದುವುದು: ಇಂಗ್ಲಿಷ್ ವಾರ್ತಾಪತ್ರಿಕೆಗಳನ್ನು, ಪುಸ್ತಕಗಳನ್ನು, ಲೇಖನಗಳನ್ನು ದಿನನಿತ್ಯ ಓದಿ. ಪದಬಳಕೆ, ವಾಕ್ಯ ರಚನೆ, ವ್ಯಾಕರಣವನ್ನು ಗಮನಿಸಿ. ಸಾಧ್ಯವಾದರೆ, ಉಚ್ಛಾರಣೆಗೆ ಸಹಾಯವಾಗುವಂತೆ ಜೋರಾಗಿ ಓದಿ. ಅರ್ಥವಾಗದ ಪದಗಳನ್ನು ನಿಘಂಟಿನ ಮೂಲಕ ಅರ್ಥೈಸಿಕೊಳ್ಳಿ.
- ಮಾತನಾಡುವುದು: ಆತ್ಮೀಯರೊಂದಿಗೆ ಸರಳವಾದ ವಿಷಯಗಳನ್ನು ಮಾತನಾಡಲು ಪ್ರಯತ್ನಿಸಿ. ತಪ್ಪು-ಒಪ್ಪುಗಳಾದಲ್ಲಿ, ಸಂಕೋಚವಿಲ್ಲದೆ ಪ್ರಯತ್ನವನ್ನು ಮುಂದುವರೆಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು, ಕನ್ನಡಿಯ ಮುಂದೆ ಆಂಗಿಕ ಭಾಷೆಯನ್ನು ಬಳಸಿ ಮಾತನಾಡಿ.
- ಬರೆಯುವುದು: ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ವಾಕ್ಯರಚನೆಯಲ್ಲಿರುವ ವ್ಯತ್ಯಾಸಗಳನ್ನು ಗಮನಿಸಿ, ಕಂಪ್ಯೂಟರ್‌ನಲ್ಲಿಯೇ ಸರಳ ವಾಕ್ಯಗಳನ್ನು ರಚಿಸಿ. ಕಾಲಕ್ರಮೇಣ ಕ್ಲಿಷ್ಟವಾದ ವಾಕ್ಯಗಳನ್ನು ರಚಿಸಲು ಪ್ರಾರಂಭಿಸಿ. ನೀವು ರಚಿಸಿದ ವಾಕ್ಯಗಳ ವ್ಯಾಕರಣದಲ್ಲಿನ ಲೋಪದೋಷಗಳನ್ನು ಆಪ್ಸ್ (ಮೈಕ್ರೊಸಾಫ್ಟ್ ವರ್ಡ್, ಗ್ರಾಮರ್ಲಿ ಇತ್ಯಾದಿ) ಮೂಲಕ ಸರಿಪಡಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಪ್ಸ್ ಸೆಟಿಂಗ್ಸ್ ಅನ್ನು ಹೊಂದಿಸಿ.
- ವಿಡಿಯೊ, ಚಲನಚಿತ್ರಗಳ ವೀಕ್ಷಣೆ: ಉಪಶೀರ್ಷಿಕೆಗಳಿರುವ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿ. ಅದೇ ರೀತಿ, ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ಕಲಿಕೆಗೆ ನೆರವಾಗುವ ವಿಡಿಯೋಗಳನ್ನು ವೀಕ್ಷಿಸಿ. ಹಾಗೆಯೇ, ಸಾಧಕರ ಭಾಷಣಗಳನ್ನು ಕೇಳುವುದರಿಂದ ಪ್ರೇರೇಪಿತರಾಗುವುದರ ಜೊತೆಗೆ ಇಂಗ್ಲಿಷ್ ಕಲಿಯುವಿಕೆಗೆ ಸಹಾಯವಾಗುತ್ತದೆ.
- ಮೊಬೈಲ್ ಅಪ್ಲಿಕೇಶನ್ಸ್ ಬಳಕೆ: ಇಂಗ್ಲಿಷ್ ಕಲಿಕೆಗೆ ಅನುಕೂಲವಾಗುವ ಹಲವಾರು ಮೊಬೈಲ್ ಅಪ್ಲಿಕೇಶನ್ಸ್ಗಳನ್ನು (ಹೆಲೊ ಇಂಗ್ಲಿಷ್, ಡ್ಯುಒಲಿಂಗೊ, ಹೆಲೊ ಟಾಕ್ ಇತ್ಯಾದಿ) ಬಳಸಿ.
ಈ ಸಲಹೆಗಳನ್ನು ನಿರಂತರವಾಗಿ ಕೆಲವು ತಿಂಗಳ ಕಾಲ ಅನುಸರಿಸಿದ ನಂತರ ನಿಮ್ಮ ಇಂಗ್ಲಿಷ್ ಕಲಿಕೆ ಒಂದು ಹಂತಕ್ಕೆ ತಲುಪುತ್ತದೆ. ಆಗ, ಅಗತ್ಯವಿದ್ದರೆ ಹೆಚ್ಚುವರಿ ಕೋರ್ಸ್ಗಳ ಮೂಲಕ ಪರಿಣತಿಯನ್ನು ಗಳಿಸಿ.
13. ಸರ್, ನಾನು ಬಿ.ಎಸ್ಸಿ ಪದವಿಯ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ೫ ಪತ್ರಿಕೆಗಳಿದ್ದು ಅದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಆಯ್ಕೆಗಳಿವೆ. ನಾವು ಯಾವುದಾದರೂ ಒಂದು ಪತ್ರಿಕೆ ಕನ್ನಡ ಭಾಷೆಯಲ್ಲಿ ಬರೆದು ಇನ್ನೊಂದನ್ನು ಇಂಗ್ಲಿಷ್‌ನಲ್ಲಿ ಬರೆಯಬಹುದೇ? ̶ ಅಜಯ, ಬಾಗಲಕೋಟೆ.
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಎಎಸ್ ಮುಖ್ಯ ಪರೀಕ್ಷೆಯ ಮಾದರಿ ಹೀಗಿರುತ್ತದೆ.
- ಅರ್ಹತಾದಾಯಕ ಪತ್ರಿಕೆಗಳು (150 ಅಂಕಗಳ 2 ಪತ್ರಿಕೆಗಳು): ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್.
- ಕಡ್ಡಾಯ ಪತ್ರಿಕೆಗಳು (250 ಅಂಕಗಳ 5 ಪತ್ರಿಕೆಗಳು; ಒಟ್ಟಾರೆ 1250 ಅಂಕಗಳು)
- ಪ್ರಬಂಧ-1
- ಸಾಮಾನ್ಯ ಅಧ್ಯಯನ-2
- ಸಾಮಾನ್ಯ ಅಧ್ಯಯನ-3
- ಸಾಮಾನ್ಯ ಅಧ್ಯಯನ-4
- ಸಾಮಾನ್ಯ ಅಧ್ಯಯನ-5
ಕಡ್ಡಾಯ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಮುದ್ರಿಸಲಾಗಿರುತ್ತದೆ. ನಮಗಿರುವ ಮಾಹಿತಿಯಂತೆ, ಅಭ್ಯರ್ಥಿಗಳು ಪತ್ರಿಕೆಯ ಉತ್ತರಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಉತ್ತರಿಸಬೇಕು.
ನಿಖರವಾದ ಮಾಹಿತಿಗಾಗಿ 2022ರ ಪರೀಕ್ಷೆಯ ಅಧಿಸೂಚನೆಯನ್ನು ಗಮನಿಸಿ ಅಥವಾ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ಜಾಲತಾಣವನ್ನು ಗಮನಿಸಿ: https://kpsc.kar.nic.in/
14. ನಾನು ಬಿಕಾಂ ಪದವೀಧರನಾಗಿದ್ದು ನನ್ನ ವಯಸ್ಸು 26. ಪ್ರಸ್ತುತ ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು ನನಗೆ ನನ್ನ 14ನೇ ವಯಸ್ಸಿಗೆ ಬಾಲ್ಯ ವಿವಾಹವಾಗಿದೆ. ಆದರೆ, ನಾನು ಆ ಹುಡುಗಿಯ ಜೊತೆ ಸಂಸಾರವನ್ನು ಪ್ರಾರಂಭಿಸಿಲ್ಲ ಹಾಗೂ ನಮ್ಮಿಬ್ಬರಿಗೂ ಈ ಮದುವೆ ಇಷ್ಟವಿಲ್ಲದ ಕಾರಣ ದೂರ ಇದ್ದೇವೆ. ಪ್ರಸ್ತುತ ನಾನು ಪ್ರಸ್ತುತ ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಅವಿವಾಹಿತ ಎಂದು ಸೂಚಿಸಿದ್ದು, ಇದರಿಂದ ಮುಂದೆ ನನ್ನ ನೇಮಕಾತಿಯಲ್ಲಿ ತೊಂದರೆ ಆಗುತ್ತದೆಯೇ ಎಂದು ತಿಳಿಸಿಕೊಡಿ. ̶ ಶಿವಕುಮಾರ್, ಕೊಪ್ಪಳ ಜಿಲ್ಲೆ.
ನಿಮ್ಮ ಸಂದಿಗ್ಧ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ, ಬಾಲ್ಯ ವಿವಾಹ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಹಾಗೂ, ಸರ್ಕಾರಿ ಸೇವೆಗೆ ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿಯನ್ನು ನೀಡಿದರೆ, ಮುಂದೆ ತೊಂದರೆಯಾಗುವ ಸಾಧ್ಯತೆಯಿದೆ. ಹಾಗಾಗಿ, ಕಾನೂನು ಸಲಹೆಗಾರರನ್ನು ಸಂಪರ್ಕಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ.
15. ಸರ್ ನಮಸ್ಕಾರ. ನಾನು ಸರ್ಕಾರಿ ಮಹಾವಿದ್ಯಾಲಯದಲ್ಲಿ ಐಚ್ಛಿಕ ವಿಷಯವಾಗಿ ಗ್ರಾಮೀಣ ಅಭಿವೃದ್ಧಿ ವಿಷಯವನ್ನು ತೆಗೆದುಕೊಂಡು, ಪ್ರಥಮ ಸ್ಥಾನದೊಂದಿಗೆ ಉತ್ತೀರ್ಣನಾಗಿದ್ದೇನೆ. ಈಗ, ಪಿಡಿಒ ಹುದ್ದೆಗೆ ತಯಾರಿ ಆಗಬೇಕು ಎಂದುಕೊAಡಿದ್ದೇನೆ. ಆದ ಕಾರಣ, ತಾವು ನನಗೆ ಮಾರ್ಗದರ್ಶನವನ್ನು ನೀಡಬೇಕಾಗಿ ವಿನಂತಿ. ಧನ್ಯವಾದಗಳು. ̶ ಬಸವರಾಜ, ಊರು ತಿಳಿಸಿಲ್ಲ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಬೇಕೆನ್ನುವ ನಿಮಗೆ ಅಭಿನಂದನೆಗಳು. ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಪಂಚಾಯತ್ ಮಟ್ಟದಲ್ಲಿನ ಸರ್ವತೋಮುಖ ಅಭಿವೃದ್ಧಿ ಇತ್ಯಾದಿ ಪ್ರಮುಖ ಜವಾಬ್ದಾರಿಗಳಿರುವ ಈ ಹುದ್ದೆಯನ್ನು ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಇದಾದ ನಂತರ, ದಾಖಲಾತಿಗಳ ಪರಿಶೀಲನೆಯಾಗಿ ಅಂತಿಮ ಆಯ್ಕೆ ಪಟ್ಟಿಯನ್ನು ಮಾಡಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಪ್ರಶ್ನೆಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್ ಇರುತ್ತದೆ. ಎರಡನೇ ಪತ್ರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬAಧಪಟ್ಟಿರುತ್ತದೆ. ಈ ಪರೀಕ್ಷೆಯನ್ನು ಎಲ್ಲಾ ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ-ಅಧ್ಯಯನದಿಂದ ತಯಾರಾಗುವುದೇ ಅಥವಾ ಕೋಚಿಂಗ್ ಸೆಂಟರ್ ಸೇರಬೇಕೇ ಎನ್ನುವ ನಿರ್ಧಾರ ನಿಮ್ಮದು. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ, ನಿರಂತರ ಅಭ್ಯಾಸ, ಪರಿಣಾಮಕಾರಿ ಓದುವಿಕೆ ಮತ್ತು ಮಾರ್ಗದರ್ಶನವಿರಬೇಕು. ಹಾಗಾಗಿ, ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk
16. ನಾನು ಎಂಎ (ಇಂಗ್ಲಿಷ್) ಮುಗಿಸಿದ್ದೇನೆ. ರಾಷ್ಟಿçÃಯ ಅರ್ಹತಾ ಪರೀಕ್ಷೆಗೆ (ನೆಟ್) ತಯಾರಿ ನಡೆಸುತ್ತಿದ್ದೇನೆ. ಬಿಇಡಿ ತೆಗೆದುಕೊಂಡಿಲ್ಲ. ಶಿಕ್ಷಕ ವೃತ್ತಿಯಲ್ಲದೆ, ಬೇರೆ ಯಾವ ವೃತ್ತಿಯ ಆಯ್ಕೆಗಳಿವೆಯೆಂದು ತಿಳಿಸಿ.
ಶಿಕ್ಷಣದ ನಂತರದ ಬದುಕಿನ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಆ ಕನಸುಗಳನ್ನು ನನಸಾಗಿಸಲು ಸೂಕ್ತವಾದ ವೃತ್ತಿಯ ಬಗ್ಗೆ ಮೊದಲೇ ನಿಶ್ಚಯಿಸಿರಬೇಕು. ಏಕೆಂದರೆ, ಯಶಸ್ಸಿನ ಹಾದಿಯಲ್ಲಿ ವೈಯಕ್ತಿಕ ಬದುಕಿನ ಕನಸುಗಳೇ ಪ್ರೇರಣೆ. ಎಂಎ (ಇಂಗ್ಲಿಷ್) ನಂತರ, ಪ್ರಿಂಟ್ ಮತ್ತು ಎಲೆಕ್ಟಾçನಿಕ್ ಸೇರಿದಂತೆ ಮಾಧ್ಯಮಗಳು, ಪ್ರಕಾಶನ ಸಂಸ್ಥೆಗಳು, ಚಿತ್ರೋಧ್ಯಮ ಮತ್ತು ಮನರಂಜನಾ ಕ್ಷೇತ್ರ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಇ-ಕಾಮರ್ಸ್, ಕೋಚಿಂಗ್ ತರಗತಿಗಳು, ಭಾಷಾಂತರ, ವಿಷಯಾಭಿವೃದ್ಧಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಂತೆ ಸೂಕ್ತ ಕ್ಷೇತ್ರವನ್ನು ಆಯ್ಕೆ ಮಾಡಿ, ವೃತ್ತಿ ಯೋಜನೆಯನ್ನು ಮಾಡಬೇಕು. ಆಯಾ ಕ್ಷೇತ್ರಗಳಿಗೆ ಸಂಬAಧಿಸಿದAತೆ, ಕೌಶಲಾಭಿವೃದ್ಧಿಗೆ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ಗಳನ್ನು ಮಾಡುವುದು ಸೂಕ್ತ. ವೃತ್ತಿಯೋಜನೆ ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor
17. ನಮಸ್ಕಾರ ಸರ್, ನಾನು ಬಿಎ ಪ್ರಥಮ ಸೆಮಿಸ್ಟರ್ ಓದುತ್ತಿದ್ದೇನೆ. ಯುಪಿಎಸ್‌ಸಿ ಪರೀಕ್ಷೆ ಬರಿಯಬೇಕೆಂಬ ಆಸೆಯಿದೆ. ನಾನು ಯಾವ ರೀತಿ ತಯಾರಾಗಬೇಕು? ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿ; ಇಂಗ್ಲಿಷ್ ಭಾಷೆ ಮಾತನಾಡಲು ಹೇಗೆ ಪ್ರಯತ್ನಿಸಬೇಕು? ̶ ಸುನೀಲ್ ಮೇಲ್ಮಟ್ಟಿ, ಗೋಕಾಕ್.
ಯುಪಿಎಸ್‌ಸಿ ಆಯೋಜಿಸುವ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.
- ಪೂರ್ವಭಾವಿ (ಬಹು ಆಯ್ಕೆ ಮಾದರಿ-ಇಂಗ್ಲಿಷ್/ಹಿAದಿ).
- ಮುಖ್ಯ ಪರೀಕ್ಷೆ (ಕನ್ನಡದಲ್ಲಿ ಬರೆಯಬಹುದು).
- ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ (ಕನ್ನಡದಲ್ಲಿ ನೀಡಬಹುದು).
ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ, ಏಕಾಗ್ರತೆಯ ಜೊತೆಗೆ ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಇಂಗ್ಲಿಷ್ ಕಲಿಕೆ ಕುರಿತ ಉಪಯುಕ್ತ ಮಾಹಿತಿಯನ್ನು ಕಳೆದ ವರ್ಷದ ಅಕ್ಟೋಬರ್ 3ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.
18. ನಾನು, ಬಿಎ ಅಂತಿಮ ವರ್ಷದ ವಿದ್ಯಾರ್ಥಿ. ಎಂಎ (ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ) ಮಾಡಬೇಕೆಂದು ನಿರ್ಧರಿಸಿದ್ದೇನೆ. ಎಂಎ ಮುಗಿದ ನಂತರ ನನಗೆ ಯಾವ ಆಯ್ಕೆಗಳಿರುತ್ತವೆ?
ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿ, ಮತ್ತು ಪದವಿಯ ನಂತರ ವೃತ್ತಿ ನಿರ್ವಹಣೆಗೆ ಬೇಕಾಗುವ ಕೌಶಲಗಳನ್ನು ಗಮನದಲ್ಲಿಟ್ಟುಕೊಂಡು, ಎಂಎ (ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ) ಕೋರ್ಸ್ ಮಾಡಲು ನಿರ್ಧರಿಸಿದ್ದೀರಿ ಎಂದು ಭಾವಿಸುತ್ತೇನೆ.
ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ವಿಧಿ ವಿಜ್ಞಾನ ಲ್ಯಾಬೋರೇಟರಿಗಳು, ಸಿಐಡಿ, ಸಿಬಿಐ, ಐಬಿ, ಪೋಲೀಸ್ ಇಲಾಖೆ, ನರ್ಕೋಟಿಕ್ಸ್ ಇಲಾಖೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು.
19. ಬಹಳ ಕಾಲದಿಂದ ನನಗೆ ಪಿಎಸ್‌ಐ ಆಗಬೇಕೆಂಬ ಕನಸು ಇತ್ತು, ಆದರೆ, ಈಗ ಮನೆಯ ಪರಿಸ್ಥಿತಿಯ ಸಲುವಾಗಿ ಓದುವುದನ್ನು ಅರ್ಧಕ್ಕೇ ಬಿಟ್ಟಿದ್ದೇನೆ. ೨೦೨೨ರಲ್ಲಿ ಹೆಸ್ಕಾಂ ಲೈನ್‌ಮ್ಯಾನ್ ಆಗಿ ಕೆಲಸವನ್ನು ಮಾಡುತ್ತಿದ್ದೇನೆ. ಆದರೆ, ನನ್ನ ಕನಸನ್ನು ಮತ್ತೆ ನನಸು ಮಾಡಿಕೊಳ್ಳಲು ಅವಕಾಶವಿದೆಯೇ? ದಯವಿಟ್ಟು ಮಾರ್ಗದರ್ಶನ ನೀಡಿ.
ಮನಸ್ಸಿದ್ದರೆ ಮಾರ್ಗವೆಂಬುದು ಜನಪ್ರಿಯ ನುಡಿಗಟ್ಟು ಮಾತ್ರವಲ್ಲ; ಅದರಲ್ಲಿದೆ ಮಾನವನ ಅಂತರಾಳದಲ್ಲಿರುವ ಅಪಾರವಾದ ಶಕ್ತಿಯನ್ನು ಕೇಂದ್ರೀಕರಿಸಿ, ಬದುಕಿನ ಕನಸುಗಳನ್ನು ಸಾಕಾರಗೊಳಿಸುವ ರಹಸ್ಯ. ಏಕೆಂದರೆ, ಮಾನವನ ಚೈತನ್ಯಕ್ಕೆ, ಬುದ್ಧಿಶಕ್ತಿಗೆ ಮಿತಿಯಿಲ್ಲ; ಇಲ್ಲದ ಆ ಮಿತಿಯನ್ನು ನಮ್ಮ ಸೀಮಿತ ಆಲೋಚನೆಗಳಿಂದ, ನಕಾರಾತ್ಮಕ ಚಿಂತನೆಗಳಿAದ ನಾವೇ ಸ್ವತಃ ನಿರ್ಮಿಸುತ್ತೇವೆ. ಇದನ್ನು ತಡೆಯಲು, ನಮ್ಮ ಕನಸುಗಳು ಮಹತ್ವಾಕಾಂಶೆಯಾಗಬೇಕು.
ಆದ್ದರಿಂದ, ನಿಮ್ಮ ಶಕ್ತಿ, ಸಾಮರ್ಥ್ಯದಲ್ಲಿ ಪ್ರಬಲವಾದ ನಂಬಿಕೆಯಿಟ್ಟುಕೊಳ್ಳುವ ಮೂಲಕ ಸ್ವಯಂಪ್ರೇರಣೆಯನ್ನು ಬೆಳೆಸಿಕೊಂಡು, ಪಿಎಸ್‌ಐ ಆಗುವ ನಿಮ್ಮ ಕನಸನ್ನು ಸಾಕಾರಗೊಳಿಸುವ ಸದವಕಾಶ ಈಗ ನಿಮ್ಮ ಮುಂದಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ಆಗಲು ಯಾವುದಾದರೂ ಪದವಿಯ ಜೊತೆ ನಾಯಕತ್ವದ ಕೌಶಲ, ದಿಟ್ಟತನ, ಸಹಭಾಗಿತ್ವದ ಕೌಶಲ, ಉತ್ತಮ ಸಂವಹನ, ಪರಿಶೋಧನಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳ ಜೊತೆ ಸಕಾರಾತ್ಮಕ ಧೋರಣೆಯಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಪಿಎಸ್‌ಐ ನೇಮಕಾತಿಯಲ್ಲಿ ಭಾಗವಹಿಸಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಪಿಎಸ್‌ಐ ನೇಮಕಾತಿಯ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ksp-recruitment.in/
20. ನಾನು ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ. ನನ್ನ ಎಲ್ಲ ಅಂಕಪಟ್ಟಿಗಳಲ್ಲಿ ತಂದೆ ತಾಯಿಯವರ ಹೆಸರು ತಪ್ಪಾಗಿದೆ. ಮುಂದೆ ಸರ್ಕಾರಿ ಉದೋಗ್ಯದಲ್ಲಿ ಏನಾದರೂ ಸಮಸ್ಯೆಯಾಗಬಹುದೇ?
ಸರ್ಕಾರಿ ಉದ್ಯೋಗದ ಅಪೇಕ್ಷೆಯಿರುವುದರಿಂದ, ಸಮಯವಿರುವಾಗಲೇ ಅಂಕಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವುದು ಸೂಕ್ತ. ದಾಖಲಾತಿಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವ ವ್ಯವಸ್ಥೆಯಿದೆ. ಹಾಗಾಗಿ, ನಿಗದಿತ ಅರ್ಜಿಯನ್ನು ಕಾಲೇಜಿನ ಮುಖಾಂತರ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ.