Q&A, 21st June, 2021
Q1. ನಾನು ಎರಡನೇ ವರ್ಷದ ಬಿಎಸ್ಸಿಯಲ್ಲಿ ಓದುತ್ತಿದ್ದು ಗಣಿತದಲ್ಲಿ ಎಂಎಸ್ಸಿ ಕೋರ್ಸ್ ಅನ್ನು ಮಾಡಲಿಚ್ಛಿಸಿದ್ದೇನೆ. ಆದರೆ, ನನ್ನ ಹಿತೈಶಿಗಳು ಭೌತಶಾಸ್ತ್ರದಲ್ಲಿ ಮಾಡಿದರೆ ಹೆಚ್ಚಿನ ಅವಕಾಶಗಳಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದನ್ನು ತೆಗೆದುಕೊಳ್ಳಲಿ?
ಎಂಎಸ್ಸಿ. ಗಣಿತದಲ್ಲಿಯೂ ಸಾಕಷ್ಟು ಅವಕಾಶಗಳಿವೆ. ಖಾಸಗೀ ಕ್ಷೇತ್ರದ ಐಟಿ, ರಿಸರ್ಚ್ ಕಂಪನಿಗಳಲ್ಲಿ, ಸರ್ಕಾರಿ ವಲಯದಲ್ಲಿ ವೃತ್ತಿಯ ಅವಕಾಶಗಳಿರುತ್ತವೆ. ಇದಲ್ಲದೆ, ಡಾಕ್ಟರೇಟ್ ಮಾಡಿ ಅಥವಾ ಒ.Sಛಿ. ನಂತರವೂ ಶಿಕ್ಷಕ ವೃತ್ತಿಯ ಅವಕಾಶಗಳಿವೆ. ಇದಲ್ಲದೆ, ಐಎಎಸ್ ಕೂಡಾ ಮಾಡಬಹುದು. ಹಾಗಾಗಿ, ನಿಮಗೆ ಒಲವಿರುವ ವಿಷಯವನ್ನು ಆರಿಸುವುದು ಉತ್ತಮ.
Q2. ದ್ವಿತೀಯ ಪಿ.ಯು.ಸಿ. (ಕಾಮರ್ಸ್) ನಂತರ ಏನು ಮಾಡಬಹುದು?
ದ್ವಿತೀಯ ಪಿ.ಯು.ಸಿ. (ಕಾಮರ್ಸ್) ನಂತರ ಬಿಕಾಂ, ಸಿಎ, ಎಸಿಎಸ್, ಐಸಿಡಬ್ಯುಎ ಇತ್ಯಾದಿಯಂತೆ ಅವಕಾಶಗಳಿವೆ. ನಿಮಗೆ ಇಷ್ಟವಿರುವ ವೃತ್ತಿಯನ್ನು ಮೊದಲು ನಿರ್ಧರಿಸಿ ಅದರಂತೆ ಕೋರ್ಸ್ ಅಯ್ಕೆ ಉತ್ತಮ.
Q3. ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ್ದೇನೆ. ಸ್ಪರ್ದಾತ್ಮಕ ಪರೀಕೆಗಳಲ್ಲಿ ಆಸಕ್ತಿ ಇದೆ. ಶಿಕ್ಷಣ ಸಂಬಂಧಿತ ಸಾಲವಿರುವುದರಿಂದ ಮೊದಲು ಕೆಲಸಕ್ಕೆ ಸೇರಿ ಸ್ಪರ್ಧಾತ್ಮಕ ಪರೀಕೆಗಳಿಗೆ ತಯಾರಾಗಲೇ? ಗೊಂದಲವಿದೆ; ಸಹಾಯ ಮಾಡಿ.
ನೀವು ಸಾಲ ಪಡೆದಿರುವ ಸಂಸ್ಥೆಯ ಜೊತೆ ಮಾತನಾಡಿ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬಹುದು. ಬ್ಯಾಂಕ್ಗಳಲ್ಲಿ ಇಂತಹ ವ್ಯವಸ್ಥೆ ಇದೆ. ನೀವು ಯಾವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿಯಿದ್ದೀರಿ ಎನ್ನುವ ಮಾಹಿತಿ ಇಲ್ಲ, ಹಾಗಾಗಿ, ಕೆಲಸಕ್ಕೆ ಸೇರಿಯೂ ಕೂಡ ಸಮಯದ ನಿರ್ವಹಣೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಬಹುದು. ಅಂತಿಮ ನಿರ್ಧಾರ ನಿಮ್ಮ ವೈಯಕ್ತಿಕ ಆದ್ಯತೆಯಂತಿರಲಿ.
Q4. ನಾನು 10ನೇ ತರಗತಿಯ ವಿದ್ಯಾರ್ಥಿ ಹಾಗೂ ಐಎಎಸ್ ಮಾಡಲು ಬಯಸಿದ್ದೆನೆ. ನಾನೊಬ್ಬ ಕನ್ನಡ ಮಾಧ್ಯಮ ವಿದ್ಯಾರ್ಥಿ. ಹಾಗಾಗಿ ನನಗೆ ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಇಲ್ಲ. ನಾನು ಯಾವ ವಿಭಾಗ ಆರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ.
ಐಎಎಸ್ ಮಾಡಿದ ಮೇಲೆ ಅಖಿಲ ಭಾರತ, ಗ್ರೂಪ್ ಎ, ಗ್ರೂಪ್ ಬಿ ಸೇರಿದಂತೆ, ಯಾವ ಸವೀಸ್ ವಿಭಾಗಕ್ಕೆ ಸೇರಬೇಕು ಎನ್ನುವ ಯೋಜನೆಯಿದ್ದರೆ, ಅದಕ್ಕೆ ಅನುಗುಣವಾಗಿ ಪಿಯುಸಿ ವಿಷಯಗಳ ಆಯ್ಕೆ ಸುಲಭ. ನೀವು ಪಿಯುಸಿಯಲ್ಲಿ ಆರ್ಟ್ಸ್ ಅಥವಾ ಕಾಮರ್ಸ್ ತೆಗೆದುಕೊಳ್ಳಬಹುದು.
Q5. ನಾನು 10ನೇ ತರಗತಿಯಲ್ಲಿ ಓದುತ್ತಿದ್ದೇನೆ. 10ನೇ ತರಗತಿ ಆದ ಮೇಲೆ ಯಾವ ವಿಭಾಗ ತೆಗೆದುಕೊಳ್ಳುವ ಗೊಂದಲದಲ್ಲಿದ್ದೀನಿ. ನಾನು ಯಾವ ವಿಭಾಗ ತೆಗೆದುಕೊಳ್ಳುವದು ಸೂಕ್ತ?
ಕೋರ್ಸ್ ನಿರ್ಧಾರಕ್ಕೆ ಮುಂಚೆ ನಿಮ್ಮ ವೃತ್ತಿ ಜೀವನದ ಬಗ್ಗೆ ಚಿಂತಿಸಿ. ನಿಮಗೆ ಇಷ್ಟವಿರುವ, ಒಲವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಆರಿಸುವುದು ಒಳ್ಳೆಯದು. ಅಂದರೆ, ಡಾಕ್ಟರ್, ಎಂಜಿನಿಯರ್, ಲಾಯರ್, ವಿಜ್ಞಾನಿ, ಶಿಕ್ಷಕ ವೃತ್ತಿ, ಫ್ಯಾಶನ್ ಡಿಸೈನರ್, ಆರ್ಕಿಟೆಕ್ಟ್, ಜರ್ನಲಿಸ್ಟ್, ಐಎಎಸ್ ಸೇರಿದಂತೆ ನೂರಾರು ವೃತ್ತಿಗಳಿವೆ. ವೃತ್ತಿಯ ಆಯ್ಕೆಯ ನಂತರ ಪಿಯುಸಿ ವಿಭಾಗದ ಆಯ್ಕೆಯಲ್ಲಿ ಗೊಂದಲವಿರುವುದಿಲ್ಲ.
Q6. ನನಗೆ ಐಎಎಸ್ ಆಗಬೇಕು ಅಂತ ಆಸೆ. 10 ನೇ ತರಗತಿ ನಂತರ ಬಿಎ ಅಥವಾ ಬಿಎಸ್ಸಿ ತೆಗೆದುಕೊಳ್ಳಬೇಕಾ? ಅದನ್ನು ಓದುವುದಕ್ಕೆ ಎಷ್ಟು ಖರ್ಚಾಗುತ್ತದೆ. ಫೀಸ್? ಮತ್ತೆ ಕೆಲಸ ಸಿಕ್ಕಿದ ಮೇಲೆ ಕರ್ನಾಟಕದಲ್ಲಿ ಕೆಲಸ ಮಾಡಬೇಕು ಅಂದರೆ ಏನು ಮಾಡಬೇಕು.
ಐಎಎಸ್ ಪರೀಕ್ಷೆಯನ್ನು ಯಾವುದೇ ಪದವಿಯ ನಂತರ ಮಾಡಬಹುದು. ಹಾಗಾಗಿ ಬಿಎ ಅಥವಾ ಬಿಎಸ್ಸಿ ಆಯ್ಕೆ ನಿಮ್ಮದು. ಐಎಎಸ್ ಪರೀಕ್ಷೆಯ ತಯಾರಿಗೆ ನೀವು ಕೋಚಿಂಗ್ ತೆಗೆದುಕೊಳ್ಳಬಹುದು. ಅಥವಾ ಅಧ್ಯಯನಕ್ಕೆ ಬೇಕಾದ ಪುಸ್ತಕಗಳನ್ನು ಖರೀದಿಸಿ [ಸುಮಾರು 20 ಸಾವಿರ] ನೀವೇ ತಯಾರಿ ಮಾಡಿಕೊಳ್ಳಬಹುದು. ಕೋಚಿಂಗ್ ತೆಗೆದುಕೊಂಡರೆ ಸುಮಾರು 1 ರಿಂದ 1.5 ಲಕ್ಷ ಖರ್ಚಾಗಬಹುದು. ಐಎಎಸ್ ನೇಮಕಾತಿಯ ಉದ್ದೇಶ ಮತ್ತು ನಿಯಮಗಳ ಅನುಸಾರ, ಅಧಿಕಾರಿಗಳು ತಮ್ಮ ರಾಜ್ಯಕ್ಕೆ ಸಾಮಾನ್ಯವಾಗಿ ನೇಮಕವಾಗುವುದಿಲ್ಲ.
Q7. ನಾನು ಬಿಕಾಂ ಮಾಡಿ ಐಸಿಡಬ್ಯುಎ ಕೋರ್ಸಿನ ಇಂಟರ್ಮೀಡಿಯೆಟ್ ಒಂದು ಗ್ರೂಪ್ ಮುಗಿಸಿದ್ದೇನೆ. ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಕೆಳಗೆ ಕೆಲಸ ಮಾಡುತ್ತಿದ್ದೆ. ಲಾಕ್ ಡೌನ್ ಕಾರಣದಿಂದ ಈಗ ಅದೂ ಇಲ್ಲದೆ ಮನೆಯಲ್ಲಿದ್ದೇನೆ. ಉಳಿದಿರುವ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಲು ಇನ್ನೂ ಎರಡು ವರ್ಷಗಳಾಗುತ್ತದೆ. ನಿಮ್ಮ ಸಲಹೆ ಬೇಕು.
ಸಾಧ್ಯವಾದರೆ, ನಿಮ್ಮ ವೃತ್ತಿ ಸಂಬಂಧಿತ ವ್ಯಕ್ತಿತ್ವ ವಿಕಸನದ ಕೋರ್ಸ್ ಮಾಡಿ. ಆನ್ಲೈನ್ ಶುಲ್ಕ ರಹಿತ ಕೋರ್ಸ್ಗಳೂ ಇವೆ. ಈ ಕೋರ್ಸ್ ಮತ್ತು ಬಿಕಾಂ ಕೋರ್ಸ್ ಆಧಾರದ ಮೇಲೆ ಕೆಲಸಕ್ಕೆ ಸೇರಿ, ಐಸಿಡಬ್ಯುಎ ಮುಂದುವರೆಸಿ. ಈ ಕಾರ್ಯದಲ್ಲಿ ಸಮಯದ ನಿರ್ವಹಣೆ ಅತ್ಯಗತ್ಯ.
Q8. ಬಿಟೆಕ್ ಕೋರ್ಸ್ ಬಗ್ಗೆ ಮಾಹಿತಿ ನೀಡಿ. ಹಾಗೂ ಡಿಫಾರ್ಮ ಕೋರ್ಸ್ ಉಪಯುಕ್ತತೆ ಬಗ್ಗೆ ತಿಳಿಸಿ.
ಬಿಟೆಕ್ ಕೋರ್ಸ್ನಲ್ಲಿ 100ಕ್ಕೂ ಹೆಚ್ಚು ಸ್ಪೆಷಲೈಶನ್ಗಳಿವೆ ಹಾಗೂ ದೇಶದಲ್ಲಿ 3500 ಕ್ಕೂ ಹೆಚ್ಚು ಕಾಲೇಜುಗಳಿವೆ. ಬಿಟೆಕ್ ಪಾಸಾದ ವಿದ್ಯಾರ್ಥಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಎಂಜಿನಿಯರಿಂಗ್ ವೃತ್ತಿಗೆ ಮುಖ್ಯವಾಗಿ ಸಂವಹನ ಕೌಶಲ್ಯ, ತಾರ್ಕಿಕ ಪ್ರತಿಪಾದನಾ ಕೌಶಲ್ಯ ಅಂದ್ರೆ ಸಮಸ್ಯೆಗಳನ್ನ ಅರ್ಥ ಮಾಡಿಕೊಂಡು ಪರಿಹಾರವನ್ನ ಒದಗಿಸೋ ಕೌಶಲ್ಯ, ವಿಶ್ಲೇಷಣೆ ಮಾಡೋ ಕೌಶಲ್ಯಗಳು ಬೇಕಾಗುತ್ತದೆ. ವೃತ್ತಿಯ ಯಶಸ್ಸಿಗೆ ವಿಧ್ಯಾರ್ಥಿಗಳು ಈ ಕೌಶಲ್ಯಗಳನ್ನೂ ಸಹ ಬೆಳೆಸಿಕೊಳ್ಳಬೇಕು.
ಡಿಫಾರ್ಮ ಕೋರ್ಸ್ ನಂತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಫಾರ್ಮಸಿಸ್ಟ್ ಕೆಲಸ ಮಾಡಬಹುದು. ಹಾಗೂ ನೋಂದಣಿ ನಂತರ, ಮೆಡಿಕಲ್ ಸ್ಟೋರ್ ವ್ಯಾಪಾರ ಮಾಡಬಹುದು.
Q9. ಪಿಯುಸಿ ನಂತರ ನಾನು ಆಯ್ಕೆ ಮಾಡಲು ಇಚ್ಛಿಸುವ ಕೋರ್ಸ್ಗೆ ಕಳಿಸಲು ನನ್ನ ತಂದೆಗೆ ಒಪ್ಪಿಗೆ ಇಲ್ಲ. ಅವರನ್ನು ಒಪ್ಪಿಸಲು ಸಾಧ್ಯವಾಗಿಲ್ಲ, ಏನು ಮಾಡಬೇಕು?
ಎಲ್ಲಾ ಪೋಷಕರು ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದೇ ಬಯಸುತ್ತಾರೆ. ಪ್ರಾಯಶ: ನಿಮ್ಮ ತಂದೆಯವರಿಗೆ, ನೀವು ಇಚ್ಛಿಸುವ ಕೋರ್ಸ್ನ್ನು ಯಶಸ್ವಿಯಾಗಿ ಪೂರೈಸಲು ಬೇಕಾದ ಸಾಮಥ್ರ್ಯಗಳು ನಿಮ್ಮಲ್ಲಿ ಇವೆಯೇ ಎನ್ನುವ ಅಥವಾ ಕೋರ್ಸ್ ಸಂಬಂಧಿತ ವೃತ್ತಿಗಳ ಬಗ್ಗೆ ಇನ್ನಿತರ ಸಂದೇಹಗಳಿರಬಹುದು. ಆದ್ದರಿಂದ, ಅವರ ಸಂದೇಹಗಳ, ಸಮಸ್ಯೆಗಳ ನಿವಾರಣೆಯನ್ನು ನೀವು ಮಾಡಲೇಬೇಕು. ಇದು ಸಾಧ್ಯವಾಗದಿದ್ದರೆ, ಶೈಕ್ಷಣಿಕ ಸಮಾಲೋಚಕರನ್ನು ಸಂಪರ್ಕಿ.
Q10. ನಾನು 12ನೇ ತರಗತಿಯ ನಂತರ ಅಇಖಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನನಗೆ, ಅರಣ್ಯ ಶಾಸ್ತ್ರ, ವನ್ಯಜೀವಿಗಳು, ಪಕ್ಷಿ ವಿಜ್ಞಾನ, ಪರಿಸರ ಸಂರಕ್ಷಣೆ ವಿಷಯಗಳಲ್ಲಿ ಆಸಕ್ತಿ. ಮನೆಯ ನಿರ್ವಹಣೆಯನ್ನು ನಾನೇ ಮಾಡಬೇಕು. ಸೂಕ್ತ ಕೋರ್ಸ್, ಒಳ್ಳೆಯ ಸಂಬಳ ದೊರಕುವ ಸರ್ಕಾರಿ ನೌಕರಿಯ ಬಗ್ಗೆ ಮಾಹಿತಿಯನ್ನು ನೀಡಿ.
ಬಹಳ ಒಳ್ಳೆಯ ವಿಷಯಗಳಲ್ಲಿ ನಿಮ್ಮ ಆಸಕ್ತಿ ಇದೆ. ಅಭಿನಂದನೆಗಳು. ನಿಮಗೆ ಇಷ್ಟವಿರುವ ಈ ಯಾವುದೇ ವಿಚಾರಗಳಲ್ಲಿ ಪದವಿಯನ್ನು ಪಡೆದು ಪ್ರವೇಶ ಪರೀಕ್ಷೆಗಳ ಮುಖಾಂತರ ಸರ್ಕಾರಿ ನೌಕರಿಯನ್ನು ಪಡೆಯಬಹುದು.
Q11. ನಾನೀಗ 11ನೇ ತರಗತಿಯಿಂದ 12ನೇ ತರಗತಿಗೆ ಹೋಗುತ್ತಿದ್ದೇನೆ. ಕಾಲೇಜಿನ ಕ್ಲಾಸುಗಳು ಮತ್ತು ನೀಟ್ ಕೋಚಿಂಗ್ ಕ್ಲಾಸುಗಳೆರಡೂ ಆನ್ಲೈನ್ ಇರುವುದರಿಂದ ನಿಭಾಯಿಸಲು ಕಷ್ಟವಾಗುತ್ತಿದೆ.
ನಿಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲೆ; ಆದರೆ, ಸಧ್ಯಕ್ಕೆ ಆಫ್ಲೈನ್ ತರಗತಿಗಳ ಸಾಧ್ಯತೆ ಇಲ್ಲ. ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದ ವೇಳೆಗೆ ಆಫ್ಲೈನ್ ತರಗತಿಗಳನ್ನು ನಿರೀಕ್ಷಿಸಬಹುದು.
ಈಗ ಅತಿ ಹೆಚ್ಚೆನಿಸಿರುವ ಆನ್ಲೈನ್ ಕ್ಲಾಸುಗಳ ಮಧ್ಯೆ ನಿಯಮಿತ ವಿರಾಮವನ್ನು ತೆಗೆದುಕೊಳ್ಳುವುದರಿಂದ ಮತ್ತು ದಿನಕ್ಕೆ ಒಂದೆರಡು ಬಾರಿ ಭ್ರಾಮರಿ ಪ್ರಾಣಾಯಾಮವನ್ನು ಮಾಡುವುದರಿಂದ ನಿಮ್ಮಲ್ಲಿ ಉಂಟಾಗುತ್ತಿರುವ ಒತ್ತಡವನ್ನು ನಿಯಂತ್ರಿಸಬಹುದು.
Q&A, 28th June, 2021
Q1. ನಾನು 10ನೇ ತರಗತಿಯಲ್ಲಿ ಓದುತ್ತಿದ್ದು ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್ ಮಾಡಬೇಕೆಂದುಕೊಂಡಿದ್ದೇನೆ. ಹಾಗಾಗಿ, ಇದರ ಖರ್ಚು ಎಷ್ಟು ಮತ್ತು ಯಾವ ಪರೀಕ್ಷೆ ಬರೆದು ಉತ್ತೀರ್ಣನಾಗಬೇಕು?
10ನೇ ತರಗತಿಯಲ್ಲಿರುವಾಗಲೇ ಡಾಕ್ಟರೇಟ್ ಮಾಡಬೇಕೆನ್ನುವ ದೂರದೃಷ್ಟಿಯಿರುವ ನಿಮಗೆ ಅಭಿನಂದನೆಗಳು. ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮಾಡಿ ನಂತರ ನಿಮಗಿಷ್ಟವಿರುವ ವಿಜ್ಞಾನದ ವಿಷಯದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಮಾಡಿ. ಇದಾದ ನಂತರ, ಅಂದರೆ ಸುಮಾರು 7 ವರ್ಷಗಳ ನಂತರ ಡಾಕ್ಟರೇಟ್ ಮಾಡಬಹುದು. ಆದರೆ, ಈಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ [2020] ಅನುಷ್ಠಾನಗೊಳ್ಳುತ್ತಿದ್ದು ಅದರಂತೆ 4 ವರ್ಷದ ಬಿಎಸ್ಸಿ [ರಿಸರ್ಚ್] ನಂತರ ನೇರವಾಗಿ ಡಾಕ್ಟರೇಟ್ ಮಾಡುವ ಅವಕಾಶವಿರುವ ಸಾಧ್ಯತೆಯಿದೆ. ಹಾಗಾಗಿ, ದ್ವಿತೀಯ ಪಿಯುಸಿ ಮಾಡುತ್ತಿರುವಾಗ ಈ ಸಾದ್ಯತೆ, ನಿಯಮ, ಖರ್ಚುವೆಚ್ಚಗಳ ಕುರಿತು ವಿಚಾರಿಸಿ.
Q2. ನಾನು ಬಿಬಿಎ ಪದವಿ ಮುಗಿಸಿದ್ದೇನೆ. ನಾನು ಎಂಎ ಎಕನಾಮಿಕ್ಸ್ ಮಾಡಬೇಕು ಎಂಬ ಆಸೆ ಇದೆ ಮತ್ತು ಪಿಎಚ್ಡಿ ಮಾಡಿ ಡಾಕ್ಟರೇಟ್ ಗೌರವ ಪಡೆಯುವ ಕನಸು ಇದೆ. ನಾನು ಪದವಿ ಮಾಡುವ ವಿಷಯದಲ್ಲಿಯೇ ಮಾಡಬೇಕೆ? ಅಧ್ಯಾಪಕ ವೃತ್ತಿಯಲ್ಲಿ ಆಸಕ್ತಿಯಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.
ಈಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ [2020] ಯಂತೆ ಸ್ನಾತಕೋತ್ತರ ಮತ್ತು ಪಿಎಚ್ಡಿ ಪದವಿಗಳ ಉದ್ದೇಶ, ನಿಯಮ ಮತ್ತು ಪ್ರವೇಶ ಪ್ರಕ್ರಿಯೆಯಲ್ಲ್ಲಿ ತೀವ್ರವಾದ ಬದಲಾವಣೆಗಳಿವೆ. ಆದರೆ, ಅನುಷ್ಠಾನದ ಪ್ರಕ್ರಿಯೆ ಈಗಷ್ಟೇ ಶುರುವಾಗುತ್ತಿದೆ. ಹಾಗಾಗಿ, ಈ ವಿಷಯದಲ್ಲಿ ನಿಖರವಾದ ಮಾಹಿತಿಗಾಗಿ ನೇರವಾಗಿ ನೀವು ಮಾಡಬೇಕೆಂದು ಇಚ್ಛಿಸಿರುವ ವಿಶ್ವವಿದ್ಯಾನಿಲಯದಲ್ಲಿ ವಿಚಾರಿಸಿ.
Q3. ಬಿಟೆಕ್ [ಎಐ ಮತ್ತು ಮೆಷೀನ್ ಲರ್ನಿಂಗ್] ಮತ್ತು ಬಿಟೆಕ್ [ಡೇಟ ಸೈನ್ಸ್] ನಡುವೆ ಯಾವ ಕೋರ್ಸಿಗೆ ಹೆಚ್ಚು ವೃತ್ತಿಯ ಅವಕಾಶಗಳಿವೆ?
ಈ ಎರಡೂ ಕೋರ್ಸ್ಗಳಿಗೆ ಈಗ ಬೇಡಿಕೆಯಿದ್ದು ಹೆಚ್ಚಿನ ಅವಕಾಶಗಳಿವೆ. ಹಾಗಾಗಿ, ನಿಮಗೆ ಇಷ್ಟವಿರುವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು.
Q4. ನಾನು ಈಗ ಬಿಎ ಎರಡನೇ ಸೆಮಿಸ್ಟರ್ ಓದುತ್ತಾ ಇದ್ದೀನಿ. ನಾನು ಐಎಎಸ್ ಪರೀಕ್ಷೆ ಬರಿಯಬೇಕು. ಹಾಗಾಗಿ, ಐಎಎಸ್ ಪರೀಕ್ಷೆಯ ತಯಾರಿ ಬಗ್ಗೆ ತಿಳಿಸಿ.
ಐ.ಎ.ಎಸ್. ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.
- ಪೂರ್ವಭಾವಿ. 200 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳು.
- ಮುಖ್ಯ ಪರೀಕ್ಷೆ. ಪ್ರಬಂಧ ರೂಪದ ಲಿಖಿತ ಪರೀಕ್ಷೆ. 250 ಅಂಕಗಳ ಒಂಬತ್ತು ಪ್ರಶ್ನೆಪತ್ರಿಕೆಗಳು.
- ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.
ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಐಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.
Q5. ನಾನು ಡಿಪ್ಲೊಮ ಇ ಅಂಡ್ ಸಿ ಮಾಡಿದ್ದು ಲ್ಯಾಟರಲ್ ಎಂಟ್ರಿ ಎಂಜಿನಿಯರಿಂಗ್ ಆಗಿದೆ. ಕಾನ್ಸ್ಟೆಬಲ್ ಮತ್ತು ಎಸ್ಡಿಎ ಗೆ ಅರ್ಹತೆ ಇದೆಯೇ? ಹಾಗೂ ಕೆಎಎಸ್, ಪಿಡಿಒ, ಎಫ್ಡಿಎ ಪರೀಕ್ಷೆ ಬರೆಯಬಹುದೇ?
ನೀವು ಎಂಜಿನಿಯರಿಂಗ್ ಪದವೀಧರರಾಗಿದ್ದಲ್ಲಿ ಈ ಎಲ್ಲಾ ಪರೀಕ್ಷೆಗಳನ್ನು ಬರೆಯಬಹುದು. ನಿಮ್ಮಲ್ಲಿ ಎನ್ಐಒಎಸ್ ಸರ್ಟಿಫಿಕೆಟ್ ಇಲ್ಲದಿದ್ದರೆ ಅರ್ಜಿ ಸಲ್ಲಿಸಿ ಪಡೆಯುವುದು ಉತ್ತಮ.
Q6. ನಾನು ಬಿಬಿಎಮ್ ಡಿಗ್ರಿ ಮುಗಿಸಿದ್ದೇನೆ. ಪಿಎಸ್ಐ ಪರೀಕ್ಷೆಗೆ ತಯಾರಾಗಬೇಕೆಂದುಕೊಂಡಿದ್ದೇನೆ. ಆದರೆ, 3ಬಿ ಕೋಟಾದಡಿಯಲ್ಲಿ ಕೆಲಸ ಸುಲಭವಾಗಿ ಸಿಗುವುದಿಲ್ಲ ಎನ್ನುತ್ತಾರೆ. ಖಾಸಗಿ ಕೆಲಸ ಒಳ್ಳೆಯದೇ?
ವೃತ್ತಿ ನಮ್ಮ ಇಡೀ ಜೀವನವನ್ನ ಆವರಿಸಿಕೊಳ್ಳೋ ಒಂದು ಆಯಾಮ. ಕಲಿತ ವಿದ್ಯೆಗೂ, ನಿಮ್ಮಲ್ಲಿರುವ ಸ್ವಾಭಾವಿಕ ಕೌಶಲ್ಯಗಳಿಗೂ ಸರಿಹೊಂದುವಂತಹ, ನಿಮ್ಮ ಇಷ್ಟ, ಅಭಿರುಚಿಗೆ ಸ್ಪಂದಿಸುವಂತಹ ವೃತ್ತಿಯನ್ನು ಗುರುತಿಸಬೇಕು. ಹಾಗಾಗಿ, ಇಲ್ಲಿ ಮುಖ್ಯವಾದ ಪ್ರಶ್ನೆಯೆಂದರೆ ನಿಮಗೆ ಒಲವಿರುವ ವೃತ್ತಿ ಯಾವುದು? ಅದನ್ನು ಗುರುತಿಸಿ, ಅದರಂತೆ ನಿಮ್ಮ ವೃತ್ತಿಯ ಆಯ್ಕೆ ಇರಲಿ. ಸಾಧನೆಯ ಹಾದಿಯಲ್ಲಿ ಸುಲಭವಾದದ್ದು ಯಾವುದೂ ಇಲ್ಲ; ಅದರಂತೆಯೇ ಅಸಾಧ್ಯವೆನ್ನುವುದೂ ಇಲ್ಲ.
Q7. ನಾನು ಬಿಇ [ಇಸಿಇ] ನಾಲ್ಕನೇ ವರ್ಷದಲ್ಲಿ ಓದುತ್ತಿದ್ದು ಈ ವಿಭಾಗದಲ್ಲಿ ಆಸಕ್ತಿ ಇದೆ. ಈ ಕೋರ್ಸ್ ಆದ ನಂತರ ಯಾವ ಕೋರ್ಸ್ ಮಾಡಬಹುದು? ಸಂಬಳ ಹೆಚ್ಚು ಸಿಗುವ ಕೋರ್ಸ್ ಕುರಿತು ಸಲಹೆ ನೀಡಿ.
ಎಂಜಿನಿಯರಿಂಗ್ ಪದವಿಯ ನಂತರ ನೀವು ರೊಬೊಟಿಕ್, ಎಲೆಕ್ಕ್ಟ್ರಾನಿಕ್ಸ್, ಟೆಲಿಕಮ್ಯೂನಿಕೇಷನ್, ಮೈಕ್ರೊ ಎಲೆಕ್ಟ್ರಾನಿಕ್ಸ್, ವಿಎಲ್ಎಸ್ಐ ಮುಂತಾದ ವಿಷಯಗಳಲ್ಲಿ ಎಂಟೆಕ್ ಮಾಡಿ ಪ್ಲೇಸ್ಮೆಂಟ್ ಪ್ರಕ್ರಿಯೆಯಲ್ಲಿ ಭಾಗವಹಿಸಿ. ವೃತ್ತಿಯಲ್ಲಿ ಸಿಗುವ ಆದಾಯಕ್ಕಿಂತ ಸಾಧನೆಯ ಮಾರ್ಗದಲ್ಲಿ ಸಿಗುವ ಸಂತೃಪ್ತಿ ಹೆಚ್ಚು ಮುಖ್ಯ. ಹಾಗಾಗಿ, ನಿಮಗೆ ಇಷ್ಟವಿರುವ ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಿ.
Q8. ನಾನು ಈಗ ಎಂಎಸ್ಸಿ ಮೊದಲನೇ ವರ್ಷದಲ್ಲಿ ಓದುತ್ತಿದ್ದೇನೆ. ಈಗ, ಎಂಎಸ್ಸಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಸರಿಯೇ?
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವೈವಿಧ್ಯತೆಗಳಿವೆ. ನೀವು ಐಎಎಸ್ ಅಂತಹ ಕಠಿಣವಾದ ಪರೀಕ್ಷೆಗಳ ಬಗ್ಗೆ ಉತ್ಸುಕತೆಯಿದ್ದರೆ ಈಗಿನಿಂದಲೇ ತಯಾರಿ ಮಾಡುವುದು ಒಳ್ಳೆಯದು. ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳಾದರೆ ಮುಂದಿನ ವರ್ಷದಿಂದ ತಯಾರಿ ಮಾಡಬಹುದು. ಆದರೆ, ಈ ಪರೀಕ್ಷೆಗಳ ತಯಾರಿಯಿಂದ ನೀವು ಮಾಡುತ್ತಿರುವ ಕೋರ್ಸ್ ಮೇಲೆ ಪರಿಣಾಮವಾಗದಂತೆ ಸಮಯದ ನಿರ್ವಹಣೆಯಿರಲಿ.
Q9. ನಾನು ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಓದುತ್ತಿದ್ದೀನಿ. ಕ್ಯಾಂಪಸ್ ನೇಮಕಾತಿ ಆಗಿದೆ. ಎಂಬಿಎ ಮಾಡುವ ಆಸೆ ಇದೆ. ನಿಮ್ಮ ಮಾರ್ಗದರ್ಶನ ಬೇಕಾಗಿದೆ.
ಕ್ಯಾಂಪಸ್ ನೇಮಕಾತಿಗೆ ಅಭಿನಂದನೆಗಳು. ಈಗಾಗಲೇ ನೇಮಕಾತಿ ಆಗಿರುವುದರಿಂದ, ಎಂಬಿಎ ಕೋರ್ಸನ್ನು ಐಐಎಮ್ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಲಭ್ಯವಿರುವ ವಾರಾಂತ್ಯದ ಎಗ್ಸಿಕ್ಯೂಟಿವ್ ಕೋರ್ಸ್ ಮಾಡುವುದು ಉತ್ತಮ.
Q10. ನಾನು ಬಿಕಾಂ 2ನೇ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿ ಇದೆ. ನಾನು ಮುಂದೆ ಏನು ಮಾಡಬಹುದು ಸರ್?
ನಿಮ್ಮ ವೃತ್ತಿ ಯೋಜನೆಯ ಆದ್ಯತೆಯಂತೆ ಮೊದಲಿಗೆ ನಿಮ್ಮ ಓದುವಿಕೆಯನ್ನು ಮುಂದುವರಿಸಬೇಕಾ ಅಥವಾ ಕೆಲಸಕ್ಕೆ ಸೇರಬೇಕಾ ಎಂದು ನಿರ್ಧರಿಸಿ. ಬಿಕಾಂ ನಂತರ ಎಂಕಾಂ, ಎಂಬಿಎ, ಚಾರ್ಟರ್ಡ್ ಅಕೌಂಟೆಂಟ್, ಕಂಪನಿ ಸೆಕ್ರೆಟರಿ ಕೋರ್ಸ್ಗಳಿವೆ. ಸಾರ್ವಜನಿಕ ವಲಯದಲ್ಲಿ ಕೆಲಸಕ್ಕೆ ಸೇರಬೇಕಾದರೆ ನಿಮಗಿಷ್ಟವಿರುವ ವೃತ್ತಿ ಸಂಬಂಧಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ.
Q11. ನಾನು ಸೈಕಾಲಜಿ, ಎಕನಾಮಿಕ್ಸ್ ಮತ್ತು ಸೋಷಿಯಾಲಜಿ ವಿಷಯಗಲ್ಲಿ 2020ರಲ್ಲಿ ಪದವಿಯನ್ನು ಗಳಿಸಿ ವಿದೇಶದಲ್ಲಿ ಸ್ನಾತಕೋತ್ತರ ಕೋರ್ಸ್ ಮಾಡುವ ಯೋಜನೆಯಿದ್ದು ಕೋವಿಡ್ ಕಾರಣದಿಂದ ಕಳೆದ ವರ್ಷ ಮಾಡಲಾಗಲಿಲ್ಲ. ಹಾಗಾಗಿ ಈ ವರ್ಷ ಸೂಕ್ತವೇ? ಅಥವಾ ಈ ಪಿಡುಗು ಶಮನವಾಗುವ ತನಕ ಕಾಯುವುದು ಒಳ್ಳೆಯದೇ, ತಿಳಿಸಿ.
ನೀವು ನೀಡಿರುವ ಮಾಹಿತಿಯಂತೆ ಈಗಾಗಲೇ ನಿಮ್ಮ ಯೋಜನೆಯನ್ನು ಕಳೆದ ವರ್ಷದಿಂದ ಈ ವರ್ಷಕ್ಕೆ ಮುಂದೂಡಿದ್ದೀರಿ. ಈಗ ಅನೇಕ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುವ ಅಂತಿಮ ತಯಾರಿಯಲ್ಲಿದ್ದಾರೆ. ಜೊತೆಗೆ ವಿದೇಶಗಳಲ್ಲಿನ ಹಲವಾರು ವಿಶ್ವವಿದ್ಯಾನಿಲಯಗಳು ಪ್ರವೇಶದ ನಿಯಮಾವಳಿಗಳನ್ನು ಬದಲಿಸಿ ವಿದ್ಯಾರ್ಥಿ-ಸ್ನೇಹಿ ಸುಧಾರಣೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಹಾಗಾಗಿ, ನೀವು ಉನ್ನತ ಶಿಕ್ಷಣ ಬಯಸುವ ದೇಶ ಮತ್ತು ವಿಶ್ವವಿದ್ಯಾನಿಲಯದ ನಿಯಮಗಳು ಮತ್ತು ಅಲ್ಲಿನ ಪರಿಸ್ಥಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ನಿರ್ಧರಿಸಿ.
Q12. ನಾನು ಅಂತಿಮ ವರ್ಷದ ಎಂಎಸ್ಸಿ (ಗಣಿತ) ಮಾಡುತ್ತಿದ್ದೇನೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿನ ವೃತ್ತಿಯ ಅವಕಾಶಗಳ ಬಗ್ಗೆ ತಿಳಿಸಿ.
ಎಂಎಸ್ಸಿ(ಗಣಿತ) ನಂತರ ಶಿಕ್ಷಕ ವೃತ್ತಿಯಲ್ಲಿಯೇ ಹೆಚ್ಚು ಅವಕಾಶಗಳಿವೆ ಎನ್ನುವ ಅಭಿಪ್ರಾಯ ಸರಿಯಲ್ಲ. ನಿಮಗೆ ವಿಷಯದಲ್ಲಿ ಪರಿಣತಿಯಿದ್ದರೆ ಖಾಸಗಿ ಕ್ಷೇತ್ರದ ಐಟಿ, ತಂತ್ರಜ್ಞಾನ, ರಿಸರ್ಚ್ ಕಂಪನಿಗಳಲ್ಲಿ ಹಾಗೂ ಸರ್ಕಾರಿ ವಲಯದಲ್ಲಿ ವೃತ್ತಿಯ ಅವಕಾಶಗಳಿವೆ. ಹಾಗಾಗಿ, ಸರ್ಕಾರಿ ವಲಯದ ಕೆಲಸಗಳಿಗೆ ಸ್ಪರ್ದಾತ್ಮಕ ಪರೀಕ್ಷೆಗಳ ಮುಖಾಂತರ ಪ್ರಯತ್ನಿಸಿ ಮತ್ತು ಖಾಸಗಿ ಕ್ಷೇತ್ರದ ಅವಕಾಶಗಳನ್ನೂ ಗಮನಿಸಿ.
Q13. ನಾನು ಆರ್ಟ್ಸ್ ವಿಭಾಗದ ಎರಡನೇ ಪಿಯುಸಿ ಪ್ರೈವೇಟ್ ವಿದ್ಯಾರ್ಥಿ. ಮುಂದೆ ಐಎಎಸ್ ಮಾಡುವ ಗುರಿ ಇದೆ. ಡಿಗ್ರಿಯಲ್ಲಿ ಯಾವ ವಿಷಯ ತೆಗೆದುಕೊಂಡರೆ ಅನುಕೂಲವಾಗಬಹುದು.
ನಿಮ್ಮ ಸ್ವಾಭಾವಿಕ ಆಸಕ್ತಿ ಮತ್ತು ಪ್ರತಿಭೆಯಿರುವ ವಿಷಯದಲ್ಲಿ ಡಿಗ್ರಿ ಮಾಡಿದರೆ ಅನುಕೂಲ. ಉದಾಹರಣೆಗೆ, ಎಕಾನಾಮಿಕ್ಸ್, ಸೋಷಿಯಾಲಜಿ, ಪೊಲಿಟಿಕಲ್ ಸೈನ್ಸ್ ಇತ್ಯಾದಿ. ಐಎಎಸ್ ಮಾಡಿದ ಮೇಲೆ ಯಾವ ಸವೀಸ್ ವಿಭಾಗಕ್ಕೆ ಸೇರಬೇಕು ಎಂದು ಆಲೋಚಿಸಿ, ಅದರ ಅನುಗುಣವಾಗಿ ಡಿಗ್ರಿ ವಿಷಯಗಳ ಆಯ್ಕೆ ಸುಲಭ.
Q14. ನಾನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ. ನನಗೆ ಪದವಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ (ನರ್ಸಿಂಗ್) ಮುಂದುವರಿಯಬೇಕು ಎಂಬ ಬಯಕೆ. ಆದರೆ ನನ್ನ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಸರ್ಕಾರದಿಂದ ನಾನು ಪಡೆಯಬಹುದಾದ ವಿಧ್ಯಾರ್ಥಿ ವೇತನಗಳು ಮತ್ತು ಸರ್ಕಾರದ ಸೀಟು ಪಡೆಯಲು ನಾನು ಏನು ಮಾಡಬೇಕು ಎಂಬುದನ್ನು ತಿಳಿಸಿ.
ಬಿಎಸ್ಸಿ ನರ್ಸಿಂಗ್ ಕೋರ್ಸಿಗೆ ಪಿಯುಸಿ ಫಲಿತಾಂಶದ ಆಧಾರದ ಮೇಲೆ ಪ್ರವೇಶದ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ, ಡೈರೆಕ್ಟೊರೇಟ್ ಅಫ್ ಮೆಡಿಕಲ್ ಎಜುಕೇಷನ್ ವೆಬ್ಸೈಟನ್ನು ಪರಾಮರ್ಶಿಸಿ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್ಶಿಪ್ ಸೌಲಭ್ಯಗಳಿವೆ.
ಹೆಚ್ಚಿನ ವಿವರಗಳಿಗಾಗಿ ಗಮನಿಸಿ https://scholarships.gov.in/ಇದರ ಜೊತೆಗೆ ವಿದ್ಯಾ ಸಂಸ್ಥೆಗಳು, ಖಾಸಗಿ ಕಂಪನಿಗಳು, ಟ್ರಸ್ಟ್ಗಳು ಈ ನಿಟ್ಟಿನಲ್ಲಿ ಅನೇಕ ಸ್ಕಾಲರ್ಶಿಪ್ ಸೌಲಭ್ಯಗಳನ್ನು ನೀಡುತ್ತಿವೆ.
Q15. ನಾನು 10ನೇ ತರಗತಿಯಲ್ಲಿ ಓದುತ್ತಿದ್ದು, ಇದಾದ ನಂತರ ಪಿಯುಸಿ ಮತ್ತು ಡಿಪ್ಲೊಮಾ ಇವೆರಡರಲ್ಲಿ ಯಾವುದು ಒಳ್ಳೆಯದು? ಮುಂದೆ ಏರೋನಾಟಿಕಲ್ ಎಂಜಿನಿಯರಿಂಗ್ ಮಾಡುವ ಆಲೋಚನೆ ಇದೆ. ಇದಕ್ಕಾಗುವ ಖರ್ಚು ಮತ್ತು ಯಾವ ಕಾಲೇಜು ಉತ್ತಮ?
ಪಿಯುಸಿ ಮಾಡಿ ಏರೋನಾಟಿಕಲ್ ಎಂಜಿನಿಯರಿಂಗ್ ಡಿಗ್ರಿ ಮಾಡುವುದು ಉತ್ತಮ. ಉತ್ತಮ ಕಾಲೇಜುಗಳ ಆಯ್ಕೆಗೆ ಅಂತರ್ಜಾಲದಲ್ಲಿ ನ್ಯಾಷನಲ್ ಇನ್ಫರ್ಮೇಷನ್ ರ್ಯಾಂಕಿಂಗ್ ಫ್ರೇಮ್ವರ್ಕ್ ಮತ್ತು ಇನ್ನಿತರ ಸಂಸ್ಥೆಗಳ ರ್ಯಾಂಕಿಂಗ್ ಮಾಹಿತಿಯನ್ನು ಪರಾಮರ್ಶಿಸಿ. ಸರ್ಕಾರಿ ಕಾಲೇಜು, ಪ್ರೈವೇಟ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಮತ್ತು ಮ್ಯಾನೇಜ್ಮೆಂಟ್ ಕೋಟಾಗಳಲ್ಲಿನ ಫೀಸ್ ಮತ್ತು ಇನ್ನಿತರ ಶುಲ್ಕಗಳಲ್ಲಿ ತೀವ್ರವಾದ ವ್ಯತ್ಯಾಸಗಳಿರುವುದರಿಂದ ನಿಖರವಾಗಿ ಈಗಲೇ ಹೇಳಲಾಗುವುದಿಲ್ಲ. ಹಾಗಾಗಿ, ನೀವು ಎರಡನೇ ಪಿಯುಸಿ ಓದುತ್ತಿರುವಾಗ ಈ ಬಗ್ಗೆ ವಿಚಾರಿಸುವುದು ಸೂಕ್ತ.