Q1. ಎಂಸಿಎ ಪೂರ್ಣಗೊಳಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಸದ್ಯಕ್ಕೆ ಎಂಬಿಎ ಮಾಡಬೇಕು ಎಂದುಕೊಡಿದ್ದೇನೆ. ಆದರೆ, ಯಾವ ವಿಷಯದಲ್ಲಿ ಎಂಬಿಎ ಮಾಡಬೇಕು ಎಂದು ತಿಳಿಯುತ್ತಿಲ್ಲ. ಈ ಬಗ್ಗೆ ಗೊಂದಲವಿದೆ. ದಯವಿಟ್ಟು ಪರಿಹರಿಸಿ.
ಎಂಬಿಎ ನಂತರ ಮುಂದೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿದ್ದರೆ ಅಥವಾ ನಿಮ್ಮ ಅಭಿರುಚಿ ಮತ್ತು ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಭವಿಷ್ಯದ ಕನಸುಗಳಂತೆ ವೃತ್ತಿಯೋಜನೆಯನ್ನು ಮಾಡಿದರೆ, ಯಾವ ವಿಷಯದಲ್ಲಿ ಎಂಬಿಎ ಮಾಡಬೇಕು ಎನ್ನುವುದು ಅರಿವಾಗುತ್ತದೆ. ಉದಾಹರಣೆಗೆ, ತಂತ್ರಜ್ಞಾನ ಕ್ಷೇತ್ರದಲ್ಲೇ ಭವಿಷ್ಯವನ್ನು ರೂಪಿಸಿಕೊಳ್ಳಬೇಕೇ ಅಥವಾ ಇನ್ನಿತರ ಕ್ಷೇತ್ರಗಳ ಅವಕಾಶಗಳನ್ನು ಬಳಸಿಕೊಳ್ಳಬೇಕೇ ಎನ್ನುವುದು ಸ್ಪಷ್ಟವಾಗಬೇಕು. ಈಗ ಎಂಬಿಎ ಕೋರ್ಸ್ ಅನ್ನು ಸುಮಾರು ೨೫ಕ್ಕೂ (ಐಟಿ, ಮಾರ್ಕೆಟಿಂಗ್, ಎಚ್‌ಆರ್, ಆಪರೇಷನ್ಸ್, ಸಪ್ಲೆöÊ ಚೈನ್, ಹಾಸ್ಪಿಟಲ್, ಸ್ಪೋರ್ಟ್ಸ್, ಇವೆಂಟ್ಸ್, ಸೈಬರ್ ಸೆಕ್ಯೂರಿಟಿ ಇತ್ಯಾದಿ) ಹೆಚ್ಚು ವಿಭಾಗಗಳಲ್ಲಿ ಮಾಡಬಹುದು. ವೃತ್ತಿ ಯೋಜನೆಯನ್ನು ಕುರಿತ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ:
https://www.youtube.com/c/EducationalExpertManagementCareerConsultant
Q2. ನನಗೀಗ ೨೮ ವರ್ಷ. ೨೦೧೩ರಲ್ಲಿ ಪಿಯುಸಿ (ವಿಜ್ಞಾನ) ಉತ್ತೀರ್ಣನಾಗಿದ್ದೇನೆ. ಕುಟುಂಬದ ಆರ್ಥಿಕ ಸಮಸ್ಯೆಗಳಿಂದ, ಶಿಕ್ಷಣ ಮುಂದುವರಿಸಲಾಗದೆ ಉದ್ಯೋಗ ಮಾಡಬೇಕಾಯಿತು, ಆದರೆ, ಪಶುವೈದ್ಯನಾಗಬೇಕೆಂದು ನನ್ನ ಕನಸಾಗಿತ್ತು. ಈಗ, ನಾನು ಬಿವಿಎಸ್‌ಸಿ ಕೋರ್ಸ್ ಮಾಡಬಹುದೇ? ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ ಮತ್ತು ಶೈಕ್ಷಣಿಕ ಸಾಲ ದೊರೆಯುವುದೇ? ದಯವಿಟ್ಟು ತಿಳಿಸಿ.
ನೀಟ್ ಪರೀಕ್ಷೆಗಿದ್ದ ಗರಿಷ್ಟ ವಯೋಮಿತಿಯನ್ನು ಇತ್ತೀಚೆಗಷ್ಟೇ ತೆಗೆದುಹಾಕಲಾಗಿದೆ. ಹಾಗಾಗಿ, ನೀವು ನೀಟ್ ಪ್ರವೇಶ ಪರೀಕ್ಷೆಯ ಮೂಲಕ ಬಿವಿಎಸ್‌ಸಿ ಕೋರ್ಸ್ ಮಾಡಬಹುದು.
ವೆಟರ್ನರಿ ಸೈನ್ಸ್ ಈಗ ಬೇಡಿಕೆಯಲ್ಲಿರುವ ಕ್ಷೇತ್ರ. ಬಿವಿಎಸ್‌ಸಿ ಕೋರ್ಸ್ ನಂತರ ಕೃಷಿ ಮತ್ತು ಪಶುಪಾಲನಾ ಇಲಾಖೆಗಳು, ಕೋಳಿ ಸಾಕಣೆ ಕೇಂದ್ರಗಳು, ಪಶುವೈದ್ಯಕೀಯ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು, ನಾಯಿ ತರಬೇತಿ ಕೇಂದ್ರಗಳು, ಮೃಗಾಲಯಗಳು, ವನ್ಯಜೀವಿ ಅಭಯಾರಣ್ಯಗಳು, ಸಂಶೋಧನಾ ಕೇಂದ್ರಗಳು, ಪ್ರಾಣಿಗಳ ಸಂತಾನೋತ್ಪತ್ತಿ ಕೇಂದ್ರಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಯುಪಿಎಸ್‌ಸಿ/ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳಬಹುದು. ಹಾಗೂ, ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಶು ವೈದ್ಯಾಧಿಕಾರಿ ಹುದ್ದೆಗಳಿಗೂ ಪ್ರಯತ್ನಿಸಬಹುದು. ಶೈಕ್ಷಣಿಕ ಸಾಲವೂ ದೊರಕುತ್ತದೆ.
Q3. ನಾನು ಪಿಯುಸಿ (ವಿಜ್ಞಾನ) ಮತ್ತು ಡಿಪ್ಲೊಮಾ (ಎಜುಕೇಷನ್) ಕೋರ್ಸ್ ಮುಗಿಸಿ ೮ ವರ್ಷವಾಯಿತು. ನಂತರ, ಕೌಟುಂಬಿಕ ಕಾರಣಗಳಿಂದ ಪದವಿಯನ್ನು ಮುಗಿಸಲಾಗದೆ, ಈಗ ಪೂರ್ಣಗೊಳಿಸಲು ನಿರ್ಧರಿಸಿದ್ದೇನೆ. ಆದರೆ, ಜಿಪಿಎಸ್‌ಟಿಆರ್ ಪರೀಕ್ಷೆ ತೆಗೆದುಕೊಳ್ಳಲು ಬಿಎ ಅಥವಾ ಬಿ.ಎಸ್ಸಿ ಯಾವುದು ಉತ್ತಮ? ಸದ್ಯ ಬಿ.ಎಸ್ಸಿ ಓದಲು ಕಷ್ಟವಾಗಬಹುದು; ಆದರೆ ಶಿಕ್ಷಕಿಯಾಗಲೇಬೇಕು. ದಯಮಾಡಿ, ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ.
ನೀವು ಶಾಲೆಯಲ್ಲಿ ಭೋಧಿಸಲು ಇಚ್ಛಿಸುವ ವಿಷಯವನ್ನು ಪದವಿಯಲ್ಲಿ ಓದಿರಬೇಕು. ಹಾಗಾಗಿ, ಆಸಕ್ತಿ, ಅಭಿರುಚಿ ಮತ್ತು ಅನುಕೂಲದಂತೆ, ಯಾವ ಪದವಿಯನ್ನು ಮಾಡಬೇಕೆನ್ನುವುದನ್ನು ನಿರ್ಧರಿಸಿ.
ಕರ್ನಾಟಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ (ಜಿಪಿಎಸ್‌ಟಿಆರ್) ೪೦೦ ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯ ಮಾದರಿ ಹೀಗಿರುತ್ತದೆ:
- ಸಾಮಾನ್ಯ ಜ್ಞಾನ (ಬಹು ಆಯ್ಕೆ ಮಾದರಿ); ಇದು ಎಲ್ಲ ವಿಷಯದ ಹುದ್ದೆಗಳಿಗೆ ಕಡ್ಡಾಯ; ಗರಿಷ್ಟ ಅಂಕ ೧೫೦.
- ವಿಷಯ ಸಾಮರ್ಥ್ಯ/ಜ್ಞಾನ (ನಿರ್ಧಿಷ್ಟ ವಿಷಯದ ಪತ್ರಿಕೆ); ಗರಿಷ್ಟ ಅಂಕ ೧೫೦.
- ಭಾಷಾ ಸಾಮರ್ಥ್ಯ ಪತ್ರಿಕೆ (ವಿವರಣಾತ್ಮಕ ಮಾದರಿಯ ಪ್ರಶ್ನೆಗಳು); ಆಯಾ ವಿಷಯದ ಬೋಧನಾ ಮಾಧ್ಯಮಕ್ಕೆ ಸಂಬAಧಿಸಿದ ಭಾಷಾ ಸಾಮರ್ಥ್ಯದ ಪರೀಕ್ಷೆ; ಗರಿಷ್ಟ ಅಂಕ ೧0೦.
ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.schooleducation.kar.nic.in/
Q4. ನಾನು ಎಂಜಿನಿಯರಿಂಗ್ (ಇಸಿಇ) ಕೋರ್ಸ್ ಅನ್ನು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮುಗಿಸಿ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದೇನೆ. ಮುಂದೆ, ಎಂಬಿಎ ಅಥವಾ ಎಂಟೆಕ್ ಮಾಡುವ ಬಯಕೆಯಿದೆ. ದೂರ ಶಿಕ್ಷಣ ಅಥವಾ ಸಂಜೆ ಕಾಲೇಜು, ಇವೆರಡರಲ್ಲಿ ಯಾವುದರಲ್ಲಿ ಮಾಡಿದರೆ ಒಳಿತು? ಈ ಕುರಿತು ಹೆಚ್ಚಿನ ಮಾಹಿತಿ ತಿಳಿಸಿ.
ಮೊದಲಿಗೆ, ಎಂಟೆಕ್ ಮಾಡಬೇಕೇ ಅಥವಾ ಎಂಬಿಎ ಮಾಡಬೇಕೇ ಎಂದು ನಿರ್ಧರಿಸಿ. ಎಂಟೆಕ್ ಕೋರ್ಸ್ ಮಾಡುವುದಾದರೆ ರೆಗ್ಯುಲರ್ ಪದ್ಧತಿಯಲ್ಲಿ ಮಾಡುವುದು ಸೂಕ್ತ. ಎಂಬಿಎ ಕೋರ್ಸ್ ಅನ್ನು ರೆಗ್ಯುಲರ್, ದೂರ ಶಿಕ್ಷಣ ಅಥವಾ ಆನ್‌ಲೈನ್ ಪದ್ಧತಿಯಲ್ಲಿ ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU
Q5. ಮಾನ್ಯರೇ, ನಾನು ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬಿಕಾಂ ಮೊದಲ ವರ್ಷವನ್ನು ಮುಗಿಸಿ, ಎರಡನೇ ಮತ್ತು ಮೂರನೇ ವರ್ಷವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಮುಖಾಂತರ ಮುಗಿಸಿರುತ್ತೇನೆ. ಈ ಪದವಿಯು ಮಾನ್ಯವೇ? ಮತ್ತು ಇದರ ಆಧಾರದ ಮೇಲೆ ನಾನು ದೂರ ಶಿಕ್ಷಣದ ಮೂಲಕ ಎಂಎ (ಅರ್ಥಶಾಸ್ತç) ಮಾಡಬಹುದೇ?
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ಮಾನ್ಯತೆ ಪಡೆದ ದೂರ ಶಿಕ್ಷಣದ ಎಲ್ಲಾ ಪದವಿ ಕೋರ್ಸ್ಗಳಿಗೆ ಮಾನ್ಯತೆಯಿದೆ. ಹಾಗಾಗಿ, ನೀವು ಎಂಎ (ಅರ್ಥಶಾಸ್ತç) ಕೋರ್ಸನ್ನು ದೂರಶಿಕ್ಷಣದ ಮೂಲಕ ಮಾಡಬಹುದು. ನೀವು ಪದವಿಯನ್ನು ಮುಗಿಸಿರುವ ವರ್ಷಕ್ಕೆ ಸಂಬAಧಿಸಿದಂತೆ ಮಾನ್ಯತೆಯ ಖಚಿತವಾದ ಮಾಹಿತಿಗಾಗಿ ಗಮನಿಸಿ: https://deb.ugc.ac.in/
Q6. ಬಿಕಾಂ ಪೂರ್ಣಗೊಳಿಸಿದ್ದೇನೆ. ಕನ್ನಡದಲ್ಲಿ ಎಂಎ ಮಾಡಬೇಕು ಎಂದುಕೊಂಡಿದ್ದೇನೆ. ಎಂಎ ಕನ್ನಡಕ್ಕೆ ಭವಿಷ್ಯವಿದೆಯೇ? ಪ್ರಾಧ್ಯಾಪಕರಾಗಲು ಸಾಧ್ಯವೇ? ದಯಮಾಡಿ ತಿಳಿಸಿ ಸರ್.
ಕನ್ನಡ ಭಾಷೆಯನ್ನು ಕಲಿಯುವ ಆಸಕ್ತಿಯಿದ್ದರೆ ಎಂಎ ಮಾಡಬಹುದು. ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ವಿಷಯಗಳಲ್ಲಿ ಶಿಕ್ಷಣ ಮುಂದುವರೆಸುವುದು ಉತ್ತಮ. ಹಾಗೂ, ಶಿಕ್ಷಣದ ನಂತರದ ಬದುಕಿನ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಆ ಕನಸುಗಳನ್ನು ನನಸಾಗಿಸಲು ಸೂಕ್ತವಾದ ವೃತ್ತಿಯ ಬಗ್ಗೆ ಮೊದಲೇ ನಿಶ್ಚಯಿಸಬೇಕು. ಏಕೆಂದರೆ, ಯಶಸ್ಸಿನ ಹಾದಿಯಲ್ಲಿ ವೈಯಕ್ತಿಕ ಬದುಕಿನ ಕನಸುಗಳೇ ಪ್ರೇರಣೆ.
ಶಿಕ್ಷಣದ ನಂತರ, ಪ್ರಿಂಟ್, ಎಲೆಕ್ಟಾçನಿಕ್ ಮತ್ತು ಡಿಜಿಟಲ್ ಸೇರಿದಂತೆ ಮಾಧ್ಯಮಗಳು, ವಿಷಯಾಭಿವೃದ್ಧಿ, ಪ್ರಕಾಶನ ಸಂಸ್ಥೆಗಳು, ಚಿತ್ರೋಧ್ಯಮ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಇ-ಕಾಮರ್ಸ್, ಕೋಚಿಂಗ್ ತರಗತಿಗಳು, ಶಿಕ್ಷಣ ಸೇರಿದಂತೆ ಅನೇಕ ವಲಯಗಳಲ್ಲಿ ವೃತ್ತಿಯ ಅವಕಾಶಗಳಿವೆ. ಹಾಗೂ, ಎಂಎ ನಂತರ ಪಿಎಚ್‌ಡಿ ಮಾಡಿ ಪ್ರಾಧ್ಯಾಪಕರಾಗಬಹುದು.
Q7. ನನ್ನ ಮಗ ಸಿವಿಲ್ ಇಂಜಿನಿಯರಿಂಗ್ ಮಾಡುತ್ತಿದ್ದು, ವೈದ್ಯಕೀಯ ಕಾರಣಗಳಿಂದ ಅನುತ್ತೀರ್ಣನಾಗಿರುತ್ತಾನೆ. ಆದರೆ, ಈಗ ಅವನಿಗೆ ಸಾಫ್ಟ್ವೇರ್ ಎಂಜಿನಿಯರ್ ಆಗುವ ಇಚ್ಚೆಯಿದೆ. ಹಾಗಾದರೆ, ಅವನು ಯಾವ ಕೋರ್ಸ್ ಮಾಡಬಹುದು? ಎಂಜಿನಿಯರಿಂಗ್ ಮುಗಿಸಿದ ಮೇಲೆ ಆ ಸಾಧ್ಯತೆ ಇದೆಯೇ? ಎಂಬಿಎ ಮಾಡಿಸುವುದು ಒಳ್ಳೆಯದೇ? ವಿದೇಶಗಳಲ್ಲಿ ಎಂಎಸ್ ಮಾಡಿಸುವುದು ಉತ್ತಮವೇ? ದಯವಿಟ್ಟು ಮಾರ್ಗದರ್ಶನ ಮಾಡಿ.
ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರಕ್ಕೂ ಸಾಫ್ಟ್ವೇರ್ ಕ್ಷೇತ್ರಕ್ಕೂ ಸಂಬಂಧವಿಲ್ಲ. ಹಾಗಾಗಿ, ಸಿವಿಲ್ ಎಂಜಿನಿಯರಿಂಗ್ ಮುಗಿಸಿ ಆ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಬಹುದು.
ಸಾಫ್ಟ್ವೇರ್ ಬೇಡಿಕೆಯಲ್ಲಿರುವ ಕ್ಷೇತ್ರ; ಎಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್ ಇತ್ಯಾದಿ) ಅಥವಾ ಬಿಸಿಎ/ಎಂಸಿಎ ಮಾಡಿ ಸಾಫ್ಟ್ವೇರ್ ವೃತ್ತಿಯನ್ನು ಅರಸಬಹುದು. ಅಥವಾ, ಬೇಡಿಕೆಯಲ್ಲಿರುವ ಅರೆಕಾಲಿಕ ಕೋರ್ಸ್ಗಳಾದ ಮೆಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಪೈಥಾನ್, ಜಾವ, ಸಿ++, ಸ್ವಿಫ್ಟ್, ಲೈನಕ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಇತ್ಯಾದಿ ಕೋರ್ಸ್ಗಳನ್ನು ಮಾಡಿ ಸಾಫ್ಟ್ವೇರ್ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ನಿಮ್ಮ ಪ್ರಶ್ನೆಯಲ್ಲಿ ಅನೇಕ ಸಾಧ್ಯತೆಗಳೂ ಹಾಗೂ ಗೊಂದಲಗಳೂ ಕಾಣುತ್ತಿವೆ. ಹಾಗಾಗಿ, ಹೆಚ್ಚಿನ ಮಾರ್ಗದರ್ಶನಕ್ಕಾಗಿ ವೃತ್ತಿ ಸಮಾಲೋಚಕರನ್ನು ಸಂಪರ್ಕಿಸುವುದು ಉತ್ತಮ.
Q8. ನಾನು ಬಿಕಾಂ ಪದವೀಧರನಾಗಿದ್ದು, ಪ್ರತಿಯೊಂದು ಸೆಮಿಸ್ಟರ್‌ನಲ್ಲಿಯೂ ಅರ್ಥಶಾಸ್ತç ವಿಷಯವನ್ನು ಓದಿದ್ದು, ಈಗ ಅಧಿಸೂಚನೆ ಹೊರಡಿಸಲಾದ ಸಾಂಖ್ಯಿಕ ನಿರೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹನಾಗಿರುತ್ತೇನೆಯೇ?
ಸಾಂಖ್ಯಿಕ ನಿರೀಕ್ಷಕ ಹುದ್ದೆಯ ವಿದ್ಯಾರ್ಹತೆಗೆ ಪದವಿಯಲ್ಲಿ ಅರ್ಥಶಾಸ್ತç ವಿಷಯವನ್ನು ಓದಿರಬೇಕು. ಹಾಗಾಗಿ, ನಮ್ಮ ಅಭಿಪ್ರಾಯದಂತೆ ನಿಮಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆಯಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:
https://www.kpsc.kar.nic.in/Notification%20Statistic%20Inspector%20RPC%20105%20post%2015-10-2022.pdf
Q9. ನಾನು ಬಿಇ (ಎಲೆಕ್ಟಾçನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್) ಮಾಡಿದ್ದೇನೆ. ಆರಂಭದಲ್ಲಿ, ಮೂರು ವರ್ಷ ದತ್ತಾಂಶ ಸಂಗ್ರಹ ಸಂಸ್ಥೆಯಲ್ಲಿ ಕೆಲಸ ಮಾಡಿದೆ. ನಂತರ, ಅನಿವಾರ್ಯ ಕಾರಣಗಳಿಂದ ಸಪ್ಲೆöÊ ಚೈನ್ ವಿಭಾಗದಲ್ಲಿ ಕೆಲಸ ಮಾಡಿದೆ. ಈಗ, ಕೆಲಸವಿಲ್ಲದೆ ಇದ್ದೇನೆ. ಸಪ್ಲೈ ಚೈನ್ ಕ್ಷೇತ್ರವನ್ನೇ ಆರಿಸಿಕೊಳ್ಳಲೇ? ಇದಕ್ಕಾಗಿ ಯಾವ ಕೋರ್ಸ್ ಮಾಡಬೇಕು? ಹೇಗೆ ಮುಂದುವರಿಯಬೇಕೋ ತಿಳಿಯುತ್ತಿಲ್ಲ. ಮಾರ್ಗದರ್ಶನ ಮಾಡಬಹುದೇ?
ನೀವು ಓದಿರುವ ಕೋರ್ಸಿಗೂ ಈವರೆಗೆ ಮಾಡಿರುವ ಉದ್ಯೋಗಕ್ಕೂ ನೇರವಾದ ಸಂಬAಧವಿಲ್ಲ; ಆದರೆ ಚಿಂತೆಯಿಲ್ಲ. ನಮ್ಮ ಅಭಿಪ್ರಾಯದಂತೆ, ನಿಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಮೂರು ಮಾರ್ಗಗಳಿವೆ:
- ದತ್ತಾಂಶ ಸಂಗ್ರಹ, ಪರಿಷ್ಕರಣೆ ಮತ್ತು ನಿರ್ವಹಣೆ ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಈ ಕ್ಷೇತ್ರದಲ್ಲಿ ನಿಮ್ಮ ಅನುಭವದ ಆಧಾರದ ಮೇಲೆ, ಉದ್ಯೋಗವನ್ನು ಅರಸುವ ಸಾಧ್ಯತೆಯನ್ನು ಪರಿಶೀಲಿಸಿ. ಜೊತೆಗೆ ಸಂಜೆ ಕಾಲೇಜು/ಆನ್‌ಲೈನ್ ಮುಖಾಂತರ ಡೇಟಾ ಅನಲಿಟಿಕ್ಸ್ ಡಿಪ್ಲೊಮಾ ಕೋರ್ಸ್/ಎಂಬಿಎ (ಡೇಟಾ ಅನಲಿಟಿಕ್ಸ್) ಮಾಡಬಹುದು.
- ಸಪ್ಲೆöÊ ಚೈನ್ ಕೂಡಾ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಮಾಡುತ್ತಾ ಸಂಜೆ ಕಾಲೇಜು/ಆನ್‌ಲೈನ್ ಮುಖಾಂತರ ಎಂಬಿಎ (ಸಪ್ಲೆöÊ ಚೈನ್) ಮಾಡಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.
- ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನೂ ಆಸಕ್ತಿಯಿದ್ದರೆ, ಎಂಇ/ಎAಟೆಕ್ ಮಾಡಬಹುದು.
ಪ್ರಮುಖವಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಭಿರುಚಿ, ಆಸಕ್ತಿ ಮತ್ತು ಅನುಭವದ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಆಯ್ಕೆ ಸುಲಭವಾಗುತ್ತದೆ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor
Q10. ೨೦೧೩ರಲ್ಲಿ ಬಿಸಿಎ ಮುಗಿಸಿದ್ದೇನೆ. ೩೧ ವರ್ಷವಾಗಿದ್ದು, ಮದುವೆಯಾಗಿದ್ದೇನೆ. ಈಗ, ನನಗೆ ಉದ್ಯೋಗದ ಅವಶ್ಯಕತೆ ಇದೆ; ಆದರೆ, ಯಾವುದೇ ಕೆಲಸ ಸಿಗುತ್ತಿಲ್ಲ. ಈಗ ಏನು ಮಾಡಬೇಕು ತಿಳಿಯುತ್ತಿಲ್ಲ. ಮರಳಿ ಕೆಲಸ ಪಡೆಯಲು ಯಾವುದಾದರೂ ಕೋರ್ಸ್ ಮಾಡಬೇಕೆ? ದಯವಿಟ್ಟು ತಿಳಿಸಿ ಸರ್.
ಬದುಕಿನಲ್ಲಿ ಮುನ್ನಡೆಯಬೇಕು ಎನ್ನುವುದರ ಜೊತೆಗೆ ಸ್ಪಷ್ಟವಾದ ಗುರಿಯಿರಬೇಕು; ಅದನ್ನು ಸಾಧಿಸುವ ಆತ್ಮವಿಶ್ವಾಸವಿರಬೇಕು.
ಐಟಿ ವಿಸ್ತಾರವಾದ ಕ್ಷೇತ್ರ. ಈ ಕ್ಷೇತ್ರದಲ್ಲಿರುವ ಆಕರ್ಷಕ ಮತ್ತು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ವೃತ್ತಿಯೋಜನೆಯಿರಬೇಕು. ಆದ್ದರಿಂದ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿದರೆ ನಿಮಗೆ ಯಾವ ಕ್ಷೇತ್ರ ಸೂಕ್ತವೆಂದು ಅರಿವಾಗುತ್ತದೆ. ಕ್ಷೇತ್ರದ ಆಯ್ಕೆಗೆ ಅನುಗುಣವಾಗಿ ಪ್ರೋಗ್ರಾಮಿಂಗ್, ಡೇಟಾ ಸೈಂಟಿಸ್ಟ್, ವೆಬ್ ಡೆವಲಪ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಪ್ರಾಡಕ್ಟ್ ಮ್ಯಾನೇಜ್‌ಮೆಂಟ್, ಬ್ಲಾಕ್‌ಚೈನ್ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಮಾಡಿದ ನಂತರ ಉದ್ಯೋಗವನ್ನು ಅರಸಬಹುದು.
ಈಗ ಮನೆಯಿಂದಲೇ ಮಾಡಬಹುದಾದ ಅನೇಕ ವೃತ್ತಿಗಳೂ ಇವೆ. ಉದಾಹರಣೆಗೆ, ವೆಬ್ ಡೆವಲಪ್‌ಮೆಂಟ್, ಯುಎಕ್ಸ್ ಡಿಸೈನರ್, ದತ್ತಾಂಶ ನಿರ್ವಹಣೆ, ವಿಷಯಾಭಿವೃದ್ಧಿ, ಅನುವಾದ, ಸಬ್‌ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್ ಇತ್ಯಾದಿ ಅವಕಾಶಗಳಿವೆ. ಹಾಗೂ, ನಿಮ್ಮ ವಯಸ್ಸಿಗೆ ಅನುಗುಣವಾಗಿ ಲಭ್ಯವಿರುವ ಸರ್ಕಾರಿ ವಲಯದ ಅವಕಾಶಗಳನ್ನೂ ಪರಿಶೀಲಿಸಿ.
ವೃತ್ತಿ ಸಂದರ್ಶನದಲ್ಲಿ ಸಫಲತೆಯನ್ನು ಪಡೆಯಲು ಸೂಕ್ತವಾದ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=T_z3ngIeyWk
Q11. ಪತ್ರಿಕೋದ್ಯಮ ಮಾಡಿ ಕೆಲಸವಿಲ್ಲದೆ ಇದ್ದೇನೆ. ಹೇಗಾದರೂ ಮಾಡಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ಮಾರ್ಗದರ್ಶನ ಮಾಡಿ ಸರ್.
ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಹಂಬಲದ ಜೊತೆಗೆ ಆ ಕನಸುಗಳನ್ನು ಸಾಕಾರಗೊಳಿಸಲು ಸಕಾರಾತ್ಮಕವಾಗಿ ಪರಿಶ್ರಮ ಪಡಬೇಕಾಗುತ್ತದೆ.
ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಪತ್ರಿಕೋದ್ಯಮ ಕೋರ್ಸ್ ಜೊತೆಗೆ ವೃತ್ತಿ ಸಂಬAಧಿತ ಕೌಶಲಗಳಾದ ಸಂವಹನ (ಓದುವಿಕೆ, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ಭಾಷಾ ಪರಿಣತಿ, ವಿಶ್ಲೇಷಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವ ಮುನ್ನ ತನಿಖೆ ಅಥವಾ ಪರಿಶೋಧನೆ ಮಾಡುವ ಮನಸ್ಥಿತಿ ಇರಬೇಕು. ಇದಲ್ಲದೆ, ಬೇರೆ ವೃತ್ತಿಗಳಿಗೆ ಹೋಲಿಸಿದರೆ ಪತ್ರಕರ್ತರಿಗೆ ಹೆಚ್ಚಿನ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿರುವುದು ಸಹಜ; ಹಾಗಾಗಿ, ಪ್ರಾಮಾಣಿಕತೆ, ನಿಷ್ಠೆ, ಬದ್ದತೆಯನ್ನು ನಿಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು.
ಅತ್ಯಂತ ವಿಸ್ತಾರವಾದ ಈ ಕ್ಷೇತ್ರದಲ್ಲಿ ಮುದ್ರಣ ಮಾಧ್ಯಮ (ದಿನ ಪತ್ರಿಕೆಗಳು, ನಿಯತಕಾಲಿಕೆಗಳು ಇತ್ಯಾದಿ), ಟೆಲಿವಿಷನ್, ರೇಡಿಯೊ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ಸ್, ಬ್ಲಾಗ್ಸ್, ವಿಡಿಯೊ, ಪಾಡ್‌ಕಾಸ್ಟ್ ಇತ್ಯಾದಿ ವಲಯಗಳಿವೆ. ನಿಮ್ಮ ಆಸಕ್ತಿ, ಅಭಿರುಚಿಯಂತೆ, ಹೆಚ್ಚಿನ ತಜ್ಞತೆಗಾಗಿ ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ ಮಾಡಿ, ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.
ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/four-key-skills-for-employment/
Q12. ನಾನು ಪಿಯುಸಿ(ವಿಜ್ಞಾನ)ದ ನಂತರ ಬಿಕಾಂ ಮುಗಿಸಿದ್ದೇನೆ. ನಂತರ, ಎಲ್‌ಎಲ್‌ಬಿ ವಕೀಲ ವೃತ್ತಿಯನ್ನು ಮಾಡಬೇಕೆಂಬ ಬಯಕೆ ಇತ್ತು. ಆದರೆ, ಅದರಲ್ಲಿ ಯಶಸ್ಸು ಕಾಣುವುದಕ್ಕೆ ಬಹಳ ಸಮಯ ಹಿಡಿಯುವುದರಿಂದ, ನನ್ನ ಎರಡನೇ ಆಯ್ಕೆ ಎಂಬಿಎ. ನನಗೆ ಇಂಗ್ಲಿಷ್ ಭಾಷಾ ಜ್ಞಾನದ ಕೊರತೆಯಿದೆ. ಆದರೆ, ವೇದಿಕೆ ಮೇಲೆ ಉತ್ತಮವಾಗಿ ಮಾತನಾಡುವ ಧೈರ್ಯವಿದೆ. ಹಾಗಾಗಿ, ನಾನು ಆಂಕರಿಂಗ್ ವೃತ್ತಿಗೆ ಹೋದರೆ ಹೇಗೆ? ಈ ಗೊಂದಲಗಳಿಗೆ ಪರಿಹಾರ ತಿಳಿಸಿ ಸರ್.
ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ ಮತ್ತು ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿದರೆ ನಿಮ್ಮಲ್ಲಿರುವ ಅನೇಕ ಗೊಂದಲಗಳಿಗೆ ಪರಿಹಾರವನ್ನು ನೀವೇ ಕಂಡುಕೊಳ್ಳಬಹುದು. ಎಲ್‌ಎಲ್‌ಬಿ ಬದಲು ಎಂಬಿಎ ಮಾಡುವ ಆಲೋಚನೆ ಸರಿಯಿದೆ ಎನಿಸುತ್ತದೆ. ಈಗ, ಎಂಬಿಎ ಸುಮಾರು ೨೫ಕ್ಕೂ ಹೆಚ್ಚಿನ ವಿಭಾಗಗಳಲ್ಲಿ (ಇವೆಂಟ್ಸ್ ಮ್ಯಾನೇಜ್‌ಮೆಂಟ್, ಮಾರ್ಕೆಟಿಂಗ್, ಎಚ್‌ಆರ್, ಫೈನಾನ್ಸ್ ಇತ್ಯಾದಿ) ಮಾಡಬಹುದು. ಹಾಗಾಗಿ, ನಿಮ್ಮ ಸ್ವಾಭಾವಿಕ ಆಸಕ್ತಿ, ಅಭಿರುಚಿ ಯಾವ ವಿಭಾಗದಲ್ಲಿದೆ ಎಂದು ತಿಳಿದು ಅದರಂತೆ ಎಂಬಿಎ ಕೋರ್ಸ್ ಆಯ್ಕೆಯಿರಲಿ. ಇಂಗ್ಲಿಷ್ ಭಾಷಾ ಪರಿಣತಿಗಾಗಿ, ಈ ಸಲಹೆಗಳನ್ನು ಅನುಸರಿಸಿ:
- ಓದುವುದು: ಇಂಗ್ಲಿಷ್ ದಿನ ಪತ್ರಿಕೆಗಳನ್ನು, ಪುಸ್ತಕಗಳನ್ನು, ಲೇಖನಗಳನ್ನು ದಿನನಿತ್ಯ ಓದಿ. ಪದಬಳಕೆ, ವಾಕ್ಯ ರಚನೆ, ವ್ಯಾಕರಣವನ್ನು ಗಮನಿಸಿ. ಸಾಧ್ಯವಾದರೆ, ಉಚ್ಛಾರಣೆಗೆ ಸಹಾಯವಾಗುವಂತೆ ಜೋರಾಗಿ ಓದಿ. ಅರ್ಥವಾಗದ ಪದಗಳನ್ನು ನಿಘಂಟಿನ ಮೂಲಕ ಅರ್ಥೈಸಿಕೊಳ್ಳಿ.
- ಮಾತನಾಡುವುದು: ಆತ್ಮೀಯರೊಂದಿಗೆ ಸರಳವಾದ ವಿಷಯಗಳನ್ನು ಮಾತನಾಡಲು ಪ್ರಯತ್ನಿಸಿ. ತಪ್ಪು-ಒಪ್ಪುಗಳಾದಲ್ಲಿ, ಸಂಕೋಚ ಪಡದೆ ಪ್ರಯತ್ನವನ್ನು ಮುಂದುವರೆಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು, ಕನ್ನಡಿಯ ಮುಂದೆ ಆಂಗಿಕ ಭಾಷೆಯನ್ನು ಬಳಸಿ ಮಾತನಾಡಿ.
- ಬರೆಯುವುದು: ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ವಾಕ್ಯರಚನೆಯಲ್ಲಿರುವ ವ್ಯತ್ಯಾಸಗಳನ್ನು ಗಮನಿಸಿ, ಕಂಪ್ಯೂಟರ್‌ನಲ್ಲಿಯೇ ಸರಳ ವಾಕ್ಯಗಳನ್ನು ರಚಿಸಿ, ಕಾಲಕ್ರಮೇಣ ಕ್ಲಿಷ್ಟವಾದ ವಾಕ್ಯಗಳನ್ನು ರಚಿಸಲು ಪ್ರಾರಂಭಿಸಿ. ನೀವು ರಚಿಸಿದ ವಾಕ್ಯಗಳ ವ್ಯಾಕರಣದಲ್ಲಿನ ಲೋಪದೋಷಗಳನ್ನು ಆಪ್ಸ್ (ಮೈಕ್ರೊಸಾಫ್ಟ್ ವರ್ಡ್, ಗ್ರಾಮರ್ಲಿ ಇತ್ಯಾದಿ) ಮೂಲಕ ಸರಿಪಡಿಸಿ. ಆಪ್ಸ್ ಸೆಟಿಂಗ್ಸ್ ಅನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಿಸಿ.
- ವೀಡಿಯೊ, ಚಲನಚಿತ್ರಗಳ ವೀಕ್ಷಣೆ: ಕನ್ನಡದ ಉಪಶೀರ್ಷಿಕೆಗಳಿರುವ ಇಂಗ್ಲಿಷ್ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸಾಕ್ಷ್ಯ ಚಿತ್ರಗಳನ್ನು ವೀಕ್ಷಿಸಿ. ಅದೇ ರೀತಿ, ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ಕಲಿಕೆಗೆ ನೆರವಾಗುವ ವೀಡಿಯೋಗಳನ್ನು ವೀಕ್ಷಿಸಿ. ಸಾಧಕರ ಭಾಷಣಗಳನ್ನು ಕೇಳುವುದರಿಂದ ಪ್ರೇರೇಪಿತರಾಗುವುದರ ಜೊತೆಗೆ ಇಂಗ್ಲಿಷ್ ಕಲಿಯುವಿಕೆಗೆ ಸಹಾಯವಾಗುತ್ತದೆ.
- ಮೊಬೈಲ್ ಅಪ್ಲಿಕೇಶನ್ಸ್ ಬಳಕೆ: ಇಂಗ್ಲಿಷ್ ಕಲಿಕೆಗೆ ಅನುಕೂಲವಾಗುವ ಹಲವಾರು ಮೊಬೈಲ್ ಅಪ್ಲಿಕೇಶನ್ಸ್ಗಳಿವೆ (ಹಲೊ ಇಂಗ್ಲಿಷ್, ಡ್ಯುಒಲಿಂಗೊ, ಹಲೊ ಟಾಕ್ ಇತ್ಯಾದಿ). ಇವುಗಳನ್ನು ಬಳಸಿ.
ಈ ಸಲಹೆಗಳನ್ನು ನಿರಂತರವಾಗಿ ಕೆಲವು ತಿಂಗಳ ಕಾಲ ಅನುಸರಿಸಿದ ನಂತರ ನಿಮ್ಮ ಇಂಗ್ಲಿಷ್ ಕಲಿಕೆ ಒಂದು ಹಂತಕ್ಕೆ ತಲುಪುತ್ತದೆ. ಜೊತೆಗೆ, ಎಂಬಿಎ ಕಲಿಕೆಯಲ್ಲಿ ಇಂಗ್ಲಿಷ್ ಭಾಷಾ ಪರಿಣತಿ ಸಾಮಾನ್ಯವಾಗಿಯೇ ಹೆಚ್ಚಾಗುತ್ತದೆ.
ಎಂಬಿಎ ನಂತರ ವೃತ್ತಿ ಜೀವನವನ್ನು ಅನುಸರಿಸಿಕೊಂಡು, ನಿರೂಪಣೆಯ (ಆಂಕರಿಂಗ್) ಅವಕಾಶಗಳನ್ನು ಪ್ರವೃತ್ತಿಯಂತೆ ಬಳಸಿಕೊಳ್ಳಿ. ವೃತ್ತಿ ಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/@ExpertCareerConsultantAuthor
Q13. ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ೨ನೇ ವರ್ಷ ಓದುತ್ತಿದ್ದೇನೆ. ನಾನು ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್ ಪರೀಕ್ಷೆ ಬರೆಯಬೇಕು ಎಂದುಕೊಂಡಿದ್ದೇನೆ. ಇದಕ್ಕೆ ಸಿದ್ಧತೆ ಹೇಗೆ? ಯಾವಾಗ ಬರೆಯಬಹುದು?
ಕೇಂದ್ರ ಲೋಕಸೇವಾ ಆಯೋಗ ನಡೆಸುವ ಇಂಡಿಯನ್ ಎಂಜಿನಿಯರಿಂಗ್ ಸರ್ವೀಸಸ್ (ಐಇಎಸ್) ಪರೀಕ್ಷೆಯನ್ನು ಬರೆಯಲು ಎಂಜಿನಿಯರಿಂಗ್ ಪದವೀಧರರಿಗೆ ಅರ್ಹತೆ ಇರುತ್ತದೆ. ಈ ಪರೀಕ್ಷೆ ಮೂರು ಹಂತದಲ್ಲಿ ನಡೆಯುತ್ತದೆ:
- ಪೂರ್ವಭಾವಿ ಪರೀಕ್ಷೆ.
- ಮುಖ್ಯ ಪರೀಕ್ಷೆ.
- ವ್ಯಕ್ತಿತ್ವ ಪರೀಕ್ಷೆ/ಸಂದರ್ಶನ.
ಪೂರ್ವಭಾವಿ ಪರೀಕ್ಷೆಗೆ ಬೆಂಗಳೂರು, ಧಾರವಾಡ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳಿರುತ್ತವೆ. ನೀವು ಎಂಜಿನಿಯರಿಂಗ್ ಕೋರ್ಸಿನ ಅಂತಿಮ ವರ್ಷದಲ್ಲಿರುವಾಗ ಅಂದಿನ ನಿಯಮಾವಳಿಗನ್ನು ಗಮನಿಸಿ, ಈ ಪರೀಕ್ಷೆಯನ್ನು ಬರೆಯಬಹುದು.
ಐಎಎಸ್ ಪರೀಕ್ಷೆಯಂತೆ ಇದೂ ಕೂಡ ಕಠಿಣವಾದ ಪರೀಕ್ಷೆ. ನೇಮಕಾತಿಗೆ ನೀವು ಆರಿಸಿಕೊಳ್ಳುವ ವಿಭಾಗಕ್ಕೆ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟಿçಕಲ್, ಎಲೆಕ್ಟಾçನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್) ಅನ್ವಯಿಸುವ ಪಠ್ಯಕ್ರಮವನ್ನು ಅರ್ಥಮಾಡಿಕೊಂಡು, ಈ ಸಲಹೆಗಳನ್ನು ಗಮನಿಸಿ ತಯಾರಾಗಬಹುದು:
- ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು.
- ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಬರವಣಿಗೆ ಇರಬೇಕು.
- ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆ ಅತ್ಯಗತ್ಯ.
- ಗೂಗಲ್ ಮತ್ತು ಯೂಟ್ಯೂಬಿನಲ್ಲಿ, ತಯಾರಿ ಕುರಿತ ಮಾಹಿತಿ ಮತ್ತು ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ.
ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.shiksha.com/exams/ies-exam
Q14: ನಾನು ಪಿಯುಸಿ ನಂತರ ನೀಟ್ ಪರೀಕ್ಷೆಯಲ್ಲಿ 413 ಅಂಕಗಳನ್ನು ಪಡೆದಿದ್ದೇನೆ. ಕೆಸಿಇಟಿ ಪರೀಕ್ಷೆಯ ಮುಖಾಂತರ ಕೃಷಿಯಲ್ಲಿ 4001 ಮತ್ತು ಪಶುವೈದ್ಯಕೀಯ ವಿಜ್ಞಾನದಲ್ಲಿ 3408 ರ‍್ಯಾಂಕ್ ಪಡೆದಿದ್ದೇನೆ. ನನಗೆ ಎಂಜಿನಿಯರಿAಗ್ನಲ್ಲೂ ಆಸಕ್ತಿಯಿದೆ. ಈಗ ಕೃಷಿ ಸೀಟ್ ಸಿಕ್ಕಿದೆ; ಆದರೆ, ಕೃಷಿ ತೆಗೆದುಕೊಳ್ಳಲು ಸಿದ್ಧನಿಲ್ಲ, ದಂತವೈದ್ಯಕೀಯ ಸೀಟು ಸಿಕ್ಕಿದೆಯಾದರೂ ಅದನ್ನು ರದ್ದುಗೊಳಿಸಲು ತಂದೆಯವರು ಹೇಳಿದ್ದಾರೆ. ನಾನು ಆಯುರ್ವೇದ ತೆಗೆದುಕೊಳ್ಳಬೇಕೆಂದು ಅವರು ಬಯಸುತ್ತಾರೆ. ಹಾಗಾಗಿ, ಆಯುರ್ವೇದ ಮತ್ತು ದಂತವೈದ್ಯಕೀಯ ಆಯ್ಕೆಗಳ ಮದ್ಯೆ ಗೊಂದಲಕ್ಕೊಳಗಾಗಿದ್ದೇನೆ. ಆದ್ದರಿಂದ, ದಯವಿಟ್ಟು ನನಗೆ ಯಾವುದು ಉತ್ತಮ ಸೂಚಿಸಿ.
ನೀವು ಇಷ್ಟೊಂದು ವಿಭಿನ್ನವಾದ ಆಯ್ಕೆಗಳನ್ನು (ದಂತವೈದ್ಯಕೀಯ, ಪಶುವೈದ್ಯಕೀಯ, ಕೃಷಿ, ಆಯುರ್ವೇದ, ಎಂಜಿನಿಯರಿಂಗ್) ಈಗಲೂ ಪರಿಶೀಲಿಸುತ್ತಿದ್ದರೆ ಗೊಂದಲವಾಗುವುದು ಸಹಜ. ಈ ಗೊಂದಲಗಳ ಪರಿಹಾರಕ್ಕೆ ಈ ಸೂಚನೆಗಳನ್ನು ಗಮನಿಸಿ:
- ನಿಮ್ಮ ಪ್ರತಿಭೆ, ಆಸಕ್ತಿ, ಅಭಿರುಚಿ ಯಾವ ಕ್ಷೇತ್ರದಲ್ಲಿದೆ ಎಂದು ಅರಿಯಬೇಕು. ಇದನ್ನು ಆಪ್ಟಿಟ್ಯೂಡ್ ಟೆಸ್ಟ್ ಅಥವಾ ಸ್ವಯಂ ಮೌಲ್ಯಮಾಪನದಿಂದ ಅರಿಯಬಹುದು.
- ನಿಮ್ಮ ಭವಿಷ್ಯದ ಆಸೆ, ಆಕಾಂಕ್ಷೆಗಳಿಗೂ ನಿಮ್ಮ ಪ್ರತಿಭೆ, ಆಸಕ್ತಿ, ಅಭಿರುಚಿಗೂ ಹೊಂದಾಣಿಕೆಯಿರಬೇಕು.
- ಈ ಅಂಶಗಳನ್ನು ಗಮನಿಸಿ ವೃತ್ತಿಯೋಜನೆಯನ್ನು ಮಾಡಿದರೆ ಯಾವ ವೃತ್ತಿ/ಕೋರ್ಸ್ ಸೂಕ್ತವೆಂದು ತಿಳಿಯುತ್ತದೆ.
ಆಯುರ್ವೇದ ಮತ್ತು ದಂತವೈದ್ಯಕೀಯಗಳೆರಡೂ ಬೇಡಿಕೆಯಲ್ಲಿರುವ ಕ್ಷೇತ್ರಗಳು. ಮೇಲ್ನೋಟಕ್ಕೆ, ದಂತವೈದ್ಯಕೀಯಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದೆನಿಸಿದರೂ, ವೃತ್ತಿಯೋಜನೆ ಮಾಡಿದ ನಂತರವೇ ನಿರ್ಧರಿಸುವುದು ಸೂಕ್ತ. ವೃತ್ತಿಯೋಜನೆಯನ್ನು ಮಾಡುವ ಪ್ರಕ್ರಿಯೆಯ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor
Q15: ನಾನು ಪಿಯುಸಿ (ವಿಜ್ಞಾನ) ಮುಗಿಸಿದ್ದು, ಈಗ ಬಿಎ ದ್ವಿತೀಯ ವರ್ಷದಲ್ಲಿದ್ದೇನೆ. ನಾನೊಬ್ಬ ಕನ್ನಡ ಮಾಧ್ಯಮದ ವಿದ್ಯಾರ್ಥಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಹೇಳಿ ಸರ್.
ಉತ್ಸಾಹಭರಿತ ಮನಸ್ಸು, ಗುರಿ ಸೇರುವ ಸಂಕಲ್ಪ, ನಿಮ್ಮ ಸಾಮರ್ಥ್ಯದಲ್ಲಿ ಅಚಲವಾದ ಆತ್ಮವಿಶ್ವಾಸ ಮತ್ತು ಪರಿಣಾಮಕಾರಿ ಕಾರ್ಯತಂತ್ರವಿದ್ದರೆ, ನಿಮ್ಮನ್ನು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಜೊತೆಗೆ, ಈ ಸಲಹೆಗಳನ್ನು ಅನುಸರಿಸಿ.
- ಪರೀಕ್ಷೆಯ ಮಾದರಿ, ಪಠ್ಯಕ್ರಮ ಇತ್ಯಾದಿಗಳನ್ನು ಗಮನಿಸಿ.
- ಪರೀಕ್ಷೆಯಲ್ಲಿ ಅಪೇಕ್ಷಿತ ಶೇಕಡಾವಾರು ಗುರಿಯನ್ನು ನಿರ್ಧರಿಸಿ.
- ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದು ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
- ಅಣಕು ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮತ್ತು ಸಹಪಾಟಿಗಳೊಡನೆ ಅಭ್ಯಾಸ ಮಾಡಿ.
- ಪ್ರಶ್ನೆಪತ್ರಿಕೆಯಲ್ಲಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
- ಖಚಿತವಾಗಿ ತಿಳಿದಿರುವ ಪ್ರಶ್ನೆಗಳು/ವಿಭಾಗಗಳನ್ನು ಮೊದಲು ಉತ್ತರಿಸಿ.
- ಪ್ರಶ್ನೆಗಳನ್ನು ಉತ್ತರಿಸುವಾಗ ವೇಗ ಮತ್ತು ನಿಖರತೆಯಲ್ಲಿ ಸಮತೋಲನವಿರಲಿ.
- ತಪ್ಪುದಾರಿಗೆಳೆಯಬಹುದಾದ ತಂತ್ರಗಾರಿಕೆಯ ಪ್ರಶ್ನೆಗಳ ಬಗ್ಗೆ ಎಚ್ಚರವಿರಲಿ.
- ಪರೀಕ್ಷೆಯ ದಿನದಂದು ಆದಷ್ಟು ಶಾಂತಚಿತ್ತದಿAದಿರುವುದರಿAದ ಒತ್ತಡ ಕಡಿಮೆಯಾಗಿ ಫಲಿತಾಂಶ ಉತ್ತಮವಾಗುತ್ತದೆ.
- ನಿಮ್ಮ ಆಸಕ್ತಿ, ಅಭಿರುಚಿ ಕುರಿತ ಪ್ರಶ್ನೆಗಳನ್ನು ಪ್ರಾಮಾಣಿಕವಾಗಿ ಉತ್ತರಿಸಿ.
- ತಿಳಿಯದ ಬಹು ಆಯ್ಕೆ ಪ್ರಶ್ನೆಗಳನ್ನು ಉತ್ತರಿಸುವಾಗ ಖಚಿತವಾದ ತಪ್ಪು ಆಯ್ಕೆಗಳನ್ನು ತೆಗೆದುಹಾಕಿ ಜಾಣತನದಿಂದ ಊಹಿಸಿ.
ಈಗ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಬಹುದು. ಕಾರ್ಯತಂತ್ರಗಳನ್ನು ರೂಪಿಸುವ ಮಾರ್ಗದರ್ಶನಕ್ಕಾಗಿ ಗಮನಿಸಿ:
http://www.vpradeepkumar.com/how-to-succeed-in-entrance-exams/
Q16: ನಾನು ಬಿಎ 2ನೇ ವರ್ಷದಲ್ಲಿದ್ದು, ಪದವಿ ನಂತರ ಯಾವ ಕೋರ್ಸ್ ಮಾಡಿದರೆ ಉದ್ಯೋಗ ಲಭಿಸುತ್ತದೆ? ಎಂಎಸ್ಡಬ್ಲ್ಯು ಮಾಡಬೇಕೆಂದಿರುವೆ. ಇದರ ಬಗ್ಗೆ ಮಾಹಿತಿ ಕೊಡಿ ಸರ್.
ನೀವು ಬಿಎ ಕೋರ್ಸನ್ನು ಯಾವ ವಿಷಯದಲ್ಲಿ ಮಾಡುತ್ತಿದ್ದೀರೆಂದು ತಿಳಿಸಿಲ್ಲ. ಬಿಎ ನಂತರದ ಆಯ್ಕೆಗಳಲ್ಲಿ ವಿಪುಲತೆಯೂ ವೈವಿಧ್ಯತೆಯೂ ಇದೆ. ನೀವು ಬಿಎ ನಂತರ ಮಾಡಬಹುದಾದ ಕೋರ್ಸ್ಗಳೆಂದರೆ ಐಎಎಸ್, ಕೆಎಎಸ್, ಎಂಎ, ಎಂಬಿಎ, ಎಲ್‌ಎಲ್‌ಬಿ, ಸಿಎ, ಎಸಿಎಸ್, ಬಿ.ಇಡಿ, ಬಿಪಿಇಡಿ, ಎಂಎಸ್‌ಡಬ್ಲ್ಯು, ಜರ್ನಲಿಸಮ್, ಫೈನ್ ಆರ್ಟ್ಸ್, ಡಿಸೈನ್ ಕೋರ್ಸ್ಗಳು (ಗ್ರಾಫಿಕ್ಸ್, ವಿಎಫ್‌ಎಕ್ಸ್, ಗೇಮ್ಸ್, ಫ್ಯಾಷನ್ ಇತ್ಯಾದಿ), ವಿದೇಶಿ ಮತ್ತು ಭಾರತೀಯ ಭಾಷೆಗಳು, ವಿಷಯಾನುಸಾರ ಸರ್ಟಿಫಿಕೆಟ್ ಮತ್ತು ಡಿಪ್ಲೊಮಾ ಕೋರ್ಸ್ಗಳು ಇತ್ಯಾದಿ.
ಬಿಎ ಕೋರ್ಸನ್ನು ಸಂಬಂಧಪಟ್ಟ ವಿಷಯದಲ್ಲಿ ಮಾಡಿದ್ದಲ್ಲಿ, ಎಂಎಸ್‌ಡಬ್ಲ್ಯು ಕೋರ್ಸ್ಗೆ ಅರ್ಹತೆಯಿರುತ್ತದೆ. ಒಂದು ಸಂಸ್ಥೆಯ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಎಲ್ಲಾ ಪ್ರಯತ್ನಗಳನ್ನು ಕೇಂದ್ರೀಕರಿಸಿ, ಯೋಜನೆಗಳನ್ನು ನಿಷ್ಠೆಯಿಂದ ಕಾರ್ಯಗತಗೊಳಿಸುವುದೇ ಆಡಳಿತ ವರ್ಗದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ, ಮಾನವ ಸಂಪನ್ಮೂಲದ ನಿರ್ವಹಣೆ, ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಹೆಚ್ಚಿನ ಪ್ರಾಮುಖ್ಯವನ್ನು ಪಡೆದಿದೆ. ಹಾಗಾಗಿ, ಎಂಎಸ್‌ಡಬ್ಲ್ಯುಪದವೀಧರರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿ ಮತ್ತು ನಿರ್ವಹಣೆ, ಕಾರ್ಮಿಕ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ, ಸಮುದಾಯದ ಅಭಿವೃದ್ಧಿ ಇತ್ಯಾದಿ ವಲಯಗಳಲ್ಲಿ ವ್ಯಾಪಕವಾದ ಉದ್ಯೊಗಾವಕಾಶಗಳಿವೆ.
Q17: ಬಿ.ಎಸ್ಸಿ ಓದುತ್ತಿದ್ದೇನೆ. ನಂತರ ಎಂ.ಎಸ್ಸಿ ಮಾಡಬೇಕಾದರೆ ಹೇಗೆ ಸಿದ್ಧತೆ ಮಾಡಬೇಕು?
ಮೊದಲಿಗೆ, ಎಂ.ಎಸ್ಸಿ ನಂತರದ ನಿಮ್ಮ ವೃತ್ತಿಜೀವನದ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು ಮತ್ತು ಅದರಂತೆ ಶಿಕ್ಷಣವನ್ನು ಮುಂದುವರೆಸಬೇಕು. ಹಾಗೂ, ಯಾವ ವಿಷಯದಲ್ಲಿ ( ಉದಾಹರಣೆಗೆ ಭೌತಶಾಸ್ತç, ಗಣಿತ, ರಸಾಯನ ಶಾಸ್ತç ಇತ್ಯಾದಿ) ಮತ್ತು ಯಾವ ವಿಭಾಗದಲ್ಲಿ ( ಉದಾಹರಣೆಗೆ ಭೌತಶಾಸ್ತçದ ವಿಭಾಗಗಳಾದ ಆಸ್ಟೊçÃಫಿಸಿಕ್ಸ್, ಜಿಯೋಫಿಸಿಕ್ಸ್, ಥರ್ಮೋಡೈನಾಮಿಕ್ಸ್, ಕ್ವಾಂಟಮ್ ಮೆಕ್ಯಾನಿಕ್ಸ್ ಇತ್ಯಾದಿ) ಎಂ.ಎಸ್ಸಿ ಮಾಡಬೇಕು ಎಂದು ನಿರ್ಧರಿಸಿ.
ಆಯ್ಕೆ ಮಾಡಿದ ವಿಭಾಗಕ್ಕೆ ಸಂಬAಧಿಸಿದAತೆ, ಯಾವ ವಿಶ್ವವಿದ್ಯಾಲಯ ಸೂಕ್ತವೆಂದು ನಿರ್ಧರಿಸಲು ಮೂಲ ಸೌಕರ್ಯ, ಪ್ರಾಧ್ಯಾಪಕ ವರ್ಗ, ಪ್ರಯೋಗಾಲಯಗಳು, ಗ್ರಂಥಾಲಯ, ಉದ್ಯಮಗಳ ಸಹಯೋಗ, ನೇಮಕಾತಿ ದಾಖಲೆ ಇತ್ಯಾದಿ ಅಂಶಗಳನ್ನು ಪರಿಶೀಲಿಸಿ. ನಿಮಗೆ ಸೂಕ್ತವೆನಿಸಿದ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಗಳ ಮಾದರಿ, ಪಠ್ಯಕ್ರಮ ಇತ್ಯಾದಿಗಳನ್ನು ಗಮನಿಸಿ, ಕಾರ್ಯತಂತ್ರವನ್ನು ರೂಪಿಸಿ, ತಯಾರಾಗಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ಮುಂತಾದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿದರೆ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.
Q18: ನಾನು ಈಗ ಬಿಎ ಮುಗಿಸಿದ್ದೇನೆ. ನನಗೆ ಒಂದು ಗೊಂದಲ ಇದೆ ಬಿ.ಎ ಮುಗಿದ ತಕ್ಷಣ ಬಿ.ಇಡಿ, ಅಥವಾ ಎಂಎ ಅಥವಾ ಎಲ್ಎಲ್ಬಿ ಮಾಡಬಹುದು ಆದರೆ ನಾನು ಪದವಿಯಲ್ಲಿ ಸಮಾಜಶಾಸ್ತ್ರ ವಿಷಯವನ್ನು ತೆಗೆದುಕೊಂಡಿದ್ದೇನೆ. ಹಾಗಾಗಿ, ಎಂಎಸ್‌ಡಬ್ಲ್ಯು ಮಾಡಿದರೆ ನನಗೆ ಮುಂದೆ ಉದ್ಯೋಗಾವಕಾಶವಿರುತ್ತದೆಯೇ?
ವೃತ್ತಿ/ಕೋರ್ಸ್ ಆಯ್ಕೆಯ ಪ್ರಕ್ರಿಯೆಯಲ್ಲಿ ಅನೇಕ ಆಯ್ಕೆಗಳಿದ್ದರೆ (ಬಿ.ಇಡಿ, ಎಂಎ, ಎಲ್‌ಎಲ್‌ಬಿ, ಎಂಎಸ್‌ಡಬ್ಲ್ಯು, ಗೊಂದಲ ಹೆಚ್ಚಾಗಿ ನಿರ್ಧಾರ ಕ್ಲಿಷ್ಟವಾಗುತ್ತದೆ. ಎಂಎಸ್‌ಡಬ್ಲ್ಯು ನಂತರ ವ್ಯಾಪಕವಾದ ಉದ್ಯೋಗಾವಕಾಶಗಳಿವೆ; ಆದರೆ, ನಿಮಗೆ ಅದು ಸೂಕ್ತವೇ ಎಂದು ಯೋಚಿಸಿ. ನಿಮ್ಮ ಅಭಿರುಚಿ, ಆಸಕ್ತಿ, ಮತ್ತು ಸಾಮರ್ಥ್ಯಗಳನ್ನು ಅರ್ಥಮಾಡಿಕೊಂಡು, ಸೂಕ್ತವಾದ ಎರಡು ಆಯ್ಕೆಗಳನ್ನು ಪರಿಶೀಲಿಸಿ, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು.
Q19: ನನ್ನ ಮಗ ಬಿಎ, ಎಲ್ಎಲ್ಬಿ ಓದುತ್ತಿದ್ದು ಎಲ್ಎಲ್ಎಮ್ ಮಾಡುವ ಆಸೆಯಿದೆ. ನಂತರ ಇದೇ ವೃತ್ತಿಯಲ್ಲಿ ಮುಂದುವರೆಯವುದು ಸರಿಯೇ ಅಥವಾ ಐಎಎಸ್, ಐಪಿಎಸ್ ಪರೀಕ್ಷೆಗೆ ತಯಾರಿ ಮಾಡುವುದೇ? ನನ್ನ ಗೊಂದಲ ಬಗೆಹರಿಸಿ.
ವಕೀಲಿ ವೃತ್ತಿಗೂ ಭಾರತೀಯ ಆಡಳಿತ ಸೇವೆಯ ವೃತ್ತಿಗೂ ಅಗತ್ಯವಾದ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ಹಾಗಾಗಿ, ಆಪ್ಟಿಟ್ಯೂಡ್ ಟೆಸ್ಟ್/ಸ್ವಯಂ-ಮೌಲ್ಯಮಾಪನದ ಆಧಾರದ ಮೇಲೆ ನಿರ್ಧರಿಸುವುದು ಸೂಕ್ತ.