ಉದ್ಯೋಗ: ಯಶಸ್ಸಿನ ಸೂತ್ರಗಳು

ಉದ್ಯೋಗಿಗಳ ಕಾರ್ಯಕ್ಷಮತೆಯ ಬಗ್ಗೆ ಸಾಮಾನ್ಯವಾಗಿ ಯಾವುದೇ ಸಂಸ್ಥೆಯ ಮುಖ್ಯಸ್ಥರ ಅಭಿಪ್ರಾಯವನ್ನು ಕೇಳಿ: ಶೇಕಡ 20% ಮಾತ್ರ ಅತ್ಯುತ್ತಮ ಮತ್ತು ಶೇಕಡ 60% ಸಾಧಾರಣ ಮಟ್ಟವೆನ್ನುವ ಅಭಿಪ್ರಾಯ ಬರುವುದು ಸಹಜ. ಉಳಿದ 20% ಉದ್ಯೋಗಿಗಳು ನಿರುಪಯೋಗಿಗಳೆನ್ನುವ ಅಭಿಪ್ರಾಯ ನಿಜಕ್ಕೂ ವಿಷಾದಕರ.

ಉದ್ಯೋಗಿಗಳ ಕಾರ್ಯಕ್ಷಮತೆ, ವೈಯಕ್ತಿಕ ಮನೋಭಾವ ಮತ್ತು ಕೌಶಲಗಳನ್ನು ಅವಲಂಬಿಸುತ್ತದೆಯಾದರೂ, ಉದ್ಯೋಗದ ಕಾರ್ಯವಿವರಣೆ [Job description] ಮತ್ತು ಸಂಸ್ಥೆಯ ನಿರೀಕ್ಷೆಗಳ ಕುರಿತಂತೆ ಸ್ಪಷ್ಟವಾದ ಪರಿಕಲ್ಪನೆವಿಲ್ಲದಿರುವುದೂ ಒಂದು ಮುಖ್ಯ ಕಾರಣ. ಆರ್ಥಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಲ್ಲಿರುವ ಇಂದಿನ ದಿನಗಳಲ್ಲಿ, ಉತ್ತಮ ಉದ್ಯೋಗಿಗಳಾಗಲು ಎಲ್ಲ ಪ್ರಯತ್ನಗಳನ್ನು ಮಾಡುವುದು ಅಪೇಕ್ಷಣೀಯ.

ಯಶಸ್ಸಿನ ಸೂತ್ರಗಳು

1. ಕೆಲಸದ ನಿರ್ವಹಣೆ [Performance]

ನೀಡಿದ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸುವುದು ಉದ್ಯೋಗಿಗಳ ಆದ್ಯ ಕರ್ತವ್ಯ. ನಿರಾಸಕ್ತಿಯಿಂದ ಕಾಟಾಚಾರಕ್ಕಾಗಿ ಉದ್ಯೋಗದಲ್ಲಿ ತೊಡಗಿರುವವರನ್ನೂ, ತೀರ್ವವಾದ ಹಂಬಲ ಮತ್ತು ಹೊಣೆಗಾರಿಕೆಯಿಂದ ಪರಿಶ್ರಮ ಮಾಡುವವರನ್ನೂ ನಾವು ನೋಡುತ್ತಿರುತ್ತೇವೆ. ಕಾರ್ಯನಿರ್ವಹಣೆ ಗುಣಾತ್ಮಕವಾಗಿರಬೇಕೆಂದರೆ ಕೆಲಸದ ಬಗ್ಗೆ ಒಲವು ಮತ್ತು ಉತ್ಸಾಹವಿರಲೇಬೇಕು. ಏಕೆಂದರೆ, ಒಲವಿರದ ಕೆಲಸಗಳಲ್ಲಿ ಯಶಸ್ಸು ಅಸಾಧ್ಯ. ಅದೇ ರೀತಿ, ಕಾಲಹರಣೆ ಮತ್ತು ವಿರಾಮ ಸಮಯದ ನಡುವಿನ ವ್ಯತ್ಯಾಸವನ್ನು ಅರಿತು, ಪ್ರತಿಯೊಂದು ಚಟುವಟಿಕೆಗಳನ್ನೂ ಆದ್ಯತೆಗೆ ಅನುಗುಣವಾಗಿ ಮಾಡಬೇಕು.

2. ಮನೋಭಾವ ಮತ್ತು ಮೌಲ್ಯಗಳು [Attitude & Values]

ಸಂಸ್ಥೆಯ ಮೌಲ್ಯಗಳಿಗೆ, ಕಾರ್ಯನೀತಿಗೆ ಬದ್ಧರಾಗಿದ್ದು, ನಿಷ್ಟೆಯಿಂದಲೂ, ಪ್ರಾಮಾಣಿಕತೆಯಿಂದಲೂ ಕಾರ್ಯನಿರ್ವಹಿಸಬೇಕು. ಸಂಸ್ಥೆಯ ಬಗ್ಗೆಯೂ, ಉತ್ಪನ್ನಗಳ ಬಗ್ಗೆಯೂ ವಿಶ್ವಾಸವಿರಬೇಕು. ಹಾಗೆಯೇ, ಆತ್ಮ ವಿಶ್ವಾಸವೂ ಇರಬೇಕು. ಉದಾಹರಣೆಗೆ, ನೀವು ಮಾರ್ಕೆಟಿಂಗ್ ಕ್ಷೇತ್ರದಲ್ಲಿದ್ದರೆ, ಈ ಮನೋಭಾವವಿಲ್ಲದೆ ಕೆಲಸ ಮಾಡುವುದು ಅಸಾಧ್ಯ. ಮುಖ್ಯವಾಗಿ, ಸಂಸ್ಥೆಯ ಪ್ರಗತಿಯಿಂದಲೇ ನಮ್ಮ ಪ್ರಗತಿಯೆನ್ನುವ ಮನೋಭಾವ ಯಶಸ್ಸಿಗೆ ಮೂಲ.

3. ಶಿಸ್ತು ಮತ್ತು ಶಿಷ್ಟಾಚಾರ [Discipline & Manners]

ಸಂಸ್ಥೆಯ ನಿಯಮಗಳನ್ನು ಅರಿತೇ ನೀವು ಉದ್ಯೋಗವನ್ನು ಸೇರಿರುತ್ತೀರಿ; ಹಾಗಿರುವಾಗ ಸಂಸ್ಥೆಯ ನಿಯಮಪಾಲನೆಗಳು ಕಡ್ಡಾಯ. ಅನೇಕ ಸಂಸ್ಥೆಗಳ ಕಾರ್ಯನಿರ್ವಹಣೆಯ ನನ್ನ ಅನುಭವದಲ್ಲಿ, ಕಾರ್ಯಕ್ಷಮತೆಗಿಂತಲೂ, ಶಿಸ್ತು ಮತ್ತು ನಿಯಮಪಾಲನೆ ಪ್ರಮುಖವೆನಿಸುತ್ತದೆ. ಸಮಯಕ್ಕೆ ಸರಿಯಾಗಿ ಹಾಜರಾಗುವುದು, ಕಾಲಾವಧಿಗೆ ತಕ್ಕಂತೆ ಜವಾಬ್ದಾರಿಯ ನಿರ್ವಹಣೆ ಮತ್ತು ವರದಿಯನ್ನು ಮಾಡುವುದು ಅವಶ್ಯಕ. ಹಾಗೂ, ಸಂಸ್ಥೆಯ ಕುರಿತು ಇತರ ಉದ್ಯೋಗಿಗಳೊಡನೆ ನಕಾರಾತ್ಮಕವಾದ ಟೀಕೆ ಅಥವಾ ಹರಟೆಯಲ್ಲಿ ತೊಡಗಬೇಡಿ.

4. ನಾಯಕತ್ವ [Initiative & Leadership]

ಯಾವ ಉದ್ಯೋಗಿಗಳಲ್ಲಿ ನಾಯಕತ್ವದ ಕೌಶಲಗಳಿವೆ ಮತ್ತು ಹೆಚ್ಚಿನ ಜವಾಬ್ದಾರಿಗೆ ಯಾರು ಅರ್ಹರು ಎನ್ನುವುದನ್ನು ಆಗಿಂದಾಗ್ಗೆ ಸಂಸ್ಥೆಯ ಮುಖ್ಯಸ್ಥರು ಪರಿಶೀಲಿಸುತ್ತಿರುತ್ತಾರೆ. ನಿಮ್ಮ ಆಂತರ್ಯದಲ್ಲಿರಬಹುದಾದ ನೈಪುಣ್ಯತೆಗಳಿಂದ, ಹೊಣೆಗಾರಿಕೆ ಮತ್ತು ನಾಯಕತ್ವದ ಕೌಶಲಗಳನ್ನು ವೃದ್ಧಿಸಿಕೊಳ್ಳಿ. ಪ್ರತಿಫಲವನ್ನು ನಿರೀಕ್ಷಿಸದೆ, ಸಂದರ್ಭಕ್ಕೆ ತಕ್ಕಂತೆ, ಈ ಕೌಶಲಗಳನ್ನು ಸಂಸ್ಥೆಯ ಏಳಿಗೆಗಾಗಿ ಬಳಸಿಕೊಳ್ಳಿ. ಇದರಿಂದ, ಸಂಸ್ಥೆಯೊಡನೆ ನಿಮ್ಮ ವಿಶ್ವಾಸಾರ್ಹತೆ ಹೆಚ್ಚುತ್ತದೆ.

ನಿಮ್ಮಲ್ಲಿದೆ ಅಪಾರ ಶಕ್ತಿ

ತಾಂತ್ರಿಕ ಕೌಶಲಗಳಿಂದ ಉದ್ಯೋಗ ದೊರಕುತ್ತದೆಯೇ ಹೊರತು ಪ್ರಗತಿಯಲ್ಲ. ಅನೇಕ ಉದ್ಯೋಗಪರ ಸಮೀಕ್ಷೆಗಳ ಪ್ರಕಾರ ನಾಯಕತ್ವದ ಕೌಶಲ ಮತ್ತು ಸಕಾರಾತ್ಮಕವಾದ ಮನೋಭಾವದ ಕೊರತೆಯಿಂದ, ಹೆಚ್ಚಿನ ಉದ್ಯೋಗಿಗಳು ಪ್ರಗತಿಯನ್ನು ಸಾಧಿಸಲಾಗುವುದಿಲ್ಲ. ಎಲ್ಲ ಸಂಸ್ಥೆಗಳಲ್ಲೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವ ಬಯಕೆಯಿರುತ್ತದೆಯಾದರೂ, ಇಂದಿನ ದಿನಗಳಲ್ಲಿ, ಕಾರ್ಯನಿರ್ವಹಣೆಯಲ್ಲಿನ ಕೊರತೆಗಳನ್ನೂ, ನ್ಯೂನತೆಗಳನ್ನೂ ದೀರ್ಘಾವದಿಯಲ್ಲಿ ಸಹಿಸಲಾಗದು.

ನಿಮ್ಮ ಜೀವನದ ಗುರಿಯನ್ನು ಯೋಜನೆಯೆಂಬ ವಾಹನದ ಮೂಲಕವೇ ತಲುಪಲು ಸಾದ್ಯ. ತರ್ಕಬದ್ಧ ಆಲೋಚನೆಯಿಂದ, ನಿಮ್ಮ ವೃತ್ತಿಗೆ ಸಂಬಂಧಿಸಿದ ಯೋಜನೆಗಳನ್ನು ಸರಾಗವಾಗಿ ರೂಪಿಸುವ ಶಕ್ತಿ ಬೆಳೆಯುತ್ತದೆ. ಕಳೆದ ಶತಮಾನದ ಪ್ರಸಿದ್ಧ ಲೇಖಕ ನೆಪೋಲಿಯನ್ ಹಿಲ್ ಹೇಳಿದಂತೆ, ನಮ್ಮ ಮನಸ್ಸು ಯಾವುದೆಲ್ಲವನ್ನು ಕಲ್ಪಿಸಿಕೊಳ್ಳಬಲ್ಲದೋ, ಹಾಗೂ ಆ ಸಾಧ್ಯತೆಯನ್ನು ನಂಬಬಲ್ಲದೋ, ಅವುಗಳನ್ನು ಸಾಧಿಸಬಹುದು. ನಿಮ್ಮ ಅಭಿರುಚಿಗೆ ಅನುಗುಣವಾಗಿ, ನಿಮಗೆ ಒಲವಿರುವ ವೃತ್ತಿಯನ್ನೇ ಆರಿಸಿಕೊಳ್ಳಿ. ಯಶಸ್ಸಿನ ಪರಿಕಲ್ಪನೆಯಿಂದ ನಿರಂತರವಾದ ಕಠಿಣ ಪರಿಶ್ರಮದಲ್ಲಿ ತೊಡಗಬೇಕು. ನಿಮ್ಮಲ್ಲಿರುವ ಅಪಾರ ಶಕ್ತಿಯನ್ನು ಗುರುತಿಸಿಕೊಂಡು, ನಾಯಕತ್ವದ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು. ವೃತ್ತಿಯನ್ನು ತೀರ್ವವಾದ ಒಲವಿನಿಂದ, ಉತ್ಸಾಹದಿಂದ, ಆಶಾಭಾವನೆಯಿಂದ ಅನುಸರಿಸಿ. ಯಶಸ್ಸು ನಿಮ್ಮದಾಗುವುದರಲ್ಲಿ ಆತ್ಮವಿಶ್ವಾಸವಿರಲಿ.

The Do’s

  • ಆಂತರಿಕ ಪ್ರೇರಣೆಯೆನ್ನುವ ಚಾಲಕ ಶಕ್ತಿ ನಿಮ್ಮಲ್ಲಿರಲಿ.
  • ಸಾಧನೆಯೆ ಹಂಬಲವಿರಲಿ; ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಳ್ಳಿ.
  • ಪ್ರತಿಫಲ ಬಯಸದೆ ಪಡೆಯುವುದಕ್ಕಿಂತ ಹೆಚ್ಚಾಗಿ ನೀಡಿ.
  • ಸಕಾರಾತ್ಮಕವಾಗಿ ಚಿಂತಿಸಿ; ಕೆಲಸಗಳನ್ನು ಇಷ್ಟಪಟ್ಟು ಮಾಡಿ.
  • ಸಮಯಕ್ಕೆ ಮುಂಚಿತವಾಗಿ ಹಾಜರಾಗಲು ಪ್ರಯತ್ನಿಸಿ.

The Don’ts

  • ಸಂಸ್ಥೆಯ ನಿಯಮ, ಶಿಷ್ಟಾಚಾರದ ಉಲ್ಲಂಘನೆಯಾಗದಿರಲಿ.
  • ಹಿರಿಯ ಅಧಿಕಾರಿಗಳನ್ನು, ಸಂಸ್ಥೆಯ ಧೋರಣೆಯನ್ನು ಸಾರ್ವಜನಿಕವಾಗಿ ಟೀಕಿಸದಿರಿ.
  • ಅನಾರೋಗ್ಯದ ರಜೆಯನ್ನು ದುರ್ಬಳಿಸದಿರಿ.
  • ಸೌಲಭ್ಯ, ಸೌಕರ್ಯಗಳನ್ನು ದುರುಪಯೋಗಿಸದಿರಿ.
  • ಕೆಲಸಗಳನ್ನು ಮುಂದೂಡುವ, ವಿಳಂಬ ಪ್ರವೃತ್ತಿಯಿಲ್ಲದಿರಲಿ.

Download PDF Document

                     

About author View all posts Author website

V Pradeep Kumar

Leave a Reply

Your email address will not be published. Required fields are marked *