ಸಮ್ಮರ್ ಪ್ರಾಜೆಕ್ಟ್: ಭವಿಷ್ಯವನ್ನು ರೂಪಿಸುವ ಮಾರ್ಗ

ಜಾಗತೀಕರಣದ ನಂತರ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ. ಆದರೂ, ಉದ್ಯಮ ಕ್ಷೇತ್ರದಲ್ಲಿ ಇಂದಿಗೂ ಕೇಳಿಬರುವ ಮಾತು, “ಉತ್ತಮ ಅಭ್ಯರ್ಥಿಗಳೇ ಸಿಕ್ಕುತ್ತಿಲ್ಲ”. ಇದೇ ರೀತಿ, ಅಭ್ಯರ್ಥಿಗಳೂ ಸಹ, ಉತ್ತಮ ಉದ್ಯೋಗದ ಹುಡುಕಾಟದಲ್ಲಿರುವುದು ಸಾಮಾನ್ಯವಾಗಿದೆ. ಉದ್ಯೋಗಾವಕಾಶಗಳು ಹೆಚ್ಚಾಗಿರುವುದರ ಜೊತೆಗೆ, ಎಂಜಿನಿಯರಿಂಗ್, ಮ್ಯಾನೇಜ್‍ಮೆಂಟ್ ಮತ್ತಿತರ ಕೋರ್ಸ್‍ಗಳಿಂದ ತೇರ್ಗಡೆಯಾಗಿ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ವೃದ್ಧಿಸಿರುವ ಹಿನ್ನೆಲೆಯಲ್ಲಿ, ಇಂದಿನ ಬೇಡಿಕೆ-ಪೂರೈಕೆಗಳಲ್ಲಿರುವ ಅಸಮತೋಲನವೊಂದು ವಿಪರ್ಯಾಸ.

ಸುಮಾರು ಮೂರು ದಶಕಗಳ ಹಿಂದಿನ ಮಾತು. ಎಂ.ಬಿ.ಎ. ಕೋರ್ಸಿನ ಅಂತಿಮ ಸೆಮೆಸ್ಟರ್ ಮುಗಿಸಿ ಸಮ್ಮರ್ ಪ್ರಾಜೆಕ್ಟನ್ನೂ ಮುಗಿಸಿದ್ದ ನನಗೆ, ಎರಡು ಉತ್ತಮ ಕಂಪನಿಗಳಲ್ಲಿ ಅವಕಾಶ ದೊರಕಿತ್ತು. ಕೋರ್ಸಿನ ಸಲುವಾಗಿ ಎರಡು ಪ್ರಾಜೆಕ್ಟ್‍ಗಳನ್ನು ಮುಗಿಸಿ, ವೃತ್ತಿಯನ್ನು ಪ್ರಾರಂಭಿಸುವ ನನ್ನ ಯೋಜನೆ ಯಶಸ್ವಿಯಾಗಿತ್ತು. ಈಗ, ಎಂ.ಬಿ.ಎ., ಎಂಜಿನಿಯರಿಂಗ್, ಎಂ.ಸಿ.ಎ. ಮುಂತಾದ ಕೋರ್ಸುಗಳಲ್ಲಿ ಪ್ರಾಯೋಗಿಕ ಅರಿವು ಮತ್ತು ಅನುಭವವನ್ನು ಪಡೆಯುವ ನಿಟ್ಟಿನಲ್ಲಿ, ಸಂಶೋಧನೆಗಳು ಅಥವಾ ಸಮ್ಮರ್ ಪ್ರಾಜೆಕ್ಟ್‍ಗಳು ಕಡ್ಡಾಯವಾಗಿರುವುದು ಸ್ವಾಗತಾರ್ಹ. ಆದರೆ, ವಿದ್ಯಾರ್ಥಿಗಳು ಪ್ರಾಜೆಕ್ಟ್‍ಗಳಿಂದ ವೃತ್ತಿಜೀವನದ ಗುರಿಯನ್ನು ಸೇರುವುದು ಹೇಗೆ?

ಸ್ನಾತಕೋತ್ತರ ಮತ್ತು ವೃತ್ತಿಪರ ಕೋರ್ಸ್‍ಗಳ ಮಧ್ಯಂತರ ಬಿಡುವಿನ ಅವಧಿಯಲ್ಲಿ, ಒಂದೆರಡು ಪ್ರಾಜೆಕ್ಟ್ ಮಾಡಬೇಕಾಗುತ್ತದೆ. ವೃತ್ತಿ ಜೀವನದ ಮೊಟ್ಟಮೊದಲ ಪರಿಚಯವನ್ನು ನೀಡುವ ಈ ಅವಕಾಶಗಳು, ಕಲಿತ ಸಿದ್ಧಾಂತಗಳನ್ನು ವ್ಯಾವಹಾರಿಕವಾಗಿ ಬಳಸುವ ಕೌಶಲವನ್ನೂ ಬೆಳೆಸುತ್ತದೆ. ಆದರೆ, ಈ ಸೀಮಿತ ಉದ್ದೇಶದಿಂದಲೂ, ತರಾತುರಿಯಿಂದಲೂ ಪ್ರಾಜೆಕ್ಟ್ ಮಾಡದೆ, ನೀವು ಭಿನ್ನವಾಗಿ ಯೋಚಿಸಬೇಕು. ಈ ಅವಕಾಶಗಳನ್ನು ಗಂಭೀರವಾಗಿ ಪರಿಗಣಿಸಿ, ಬುದ್ಧಿವಂತಿಕೆಯಿಂದ ಬಳಸಿದರೆ, ವೃತ್ತಿಜೀವನಕ್ಕೊಂದು ಭದ್ರ ಬುನಾದಿಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ಪ್ರಾಜೆಕ್ಟ್ ಆಯ್ಕೆ ಹೇಗೆ?

“ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನೂ ಮಾಡುವುದಿಲ್ಲ; ಅವರು ಕೆಲಸ ಮಾಡುವ ರೀತಿ ಭಿನ್ನವಾಗಿರುವುದಷ್ಟೆ” ಎನ್ನುವ ಪ್ರಖ್ಯಾತ ಲೇಖಕ ಮತ್ತು ಭಾಷಣಕಾರ ಶಿವ್ ಖೇರಾ ಅವರ ಮಾತುಗಳಲ್ಲಿ, ಕನಸುಗಳನ್ನು ಸಾಕಾರಗೊಳಿಸುವ ಸರಳ ತತ್ವವಿದೆ. ಕನಸುಗಳು, ಮಹತ್ವಾಕಾಂಕ್ಷೆಯಾಗಬೇಕು; ಆ ನಿಟ್ಟಿನಲ್ಲಿ ಸರಿಯಾದ ಸಮಯದಲ್ಲಿ, ಸರಿಯಾದ ಕಾರ್ಯಗಳನ್ನು ಮಾಡುವುದೇ ಸಾಧನೆಯ ಮಾರ್ಗ.

ವೃತ್ತಿಪರ ಕೋರ್ಸ್‍ಗಳಲ್ಲಿ ಸ್ಪೆಷಲೈಜೇಷನ್ ಅಥವಾ ತಜ್ಞತೆಯ ಅವಕಾಶವಿರುವುತ್ತದೆ. ಉದಾಹರಣೆಗೆ, ಎಂಜಿನಿಯರಿಂಗ್‍ನಲ್ಲಿ ಎಲೆಕ್ಟ್ರಾನಿಕ್ಸ್, ಟೆಲಿಕಮ್ಯೂನಿಕೇಷನ್, ಮೆಕಾನಿಕಲ್ ಇತ್ಯಾದಿ ಅಥವಾ ಮ್ಯಾನೇಜ್‍ಮೆಂಟ್ ಕೋರ್ಸಿನಲ್ಲಿ ಮಾರ್ಕೆಟಿಂಗ್, ಐ.ಟಿ., ಪ್ರೊಡಕ್ಷನ್ ಇತ್ಯಾದಿಗಳಿರುತ್ತವೆ. ಪ್ರಾಜೆಕ್ಟ್ ಆಯ್ಕೆ ಮಾಡುವ ಮುನ್ನ, ಈ ವಿಷಯಗಳ ಕುರಿತು ಮಾರ್ಗದರ್ಶಕರೊಡನೆ ಸಮಾಲೋಚಿಸಿ:

  • ನಿಮ್ಮ ತಜ್ಞತೆಗೆ ಸಂಬಂಧಿಸಿದಂತೆ ಸೂಕ್ತವಾದ ಉದ್ಯಮ ಯಾವುದು? ಉದಾಹರಣೆಗೆ, ಮಾರ್ಕೆಟಿಂಗ್‍ನಲ್ಲಿ ನಾಲ್ಕು ವರ್ಗಗಳಿವೆ: ಅಲ್ಪ ಮೊತ್ತದ ದಿನಬಳಕೆ ವಸ್ತುಗಳ ವ್ಯಾಪಾರ; ದೀರ್ಘ ಕಾಲ ಬಳಸುವ ಉತ್ಪನ್ನಗಳು, ಕೈಗಾರಿಕೆಗಳಲ್ಲಿ ಬಳಸುವ ಕಚ್ಚಾ ಮತ್ತು ಸಂಸ್ಕರಿಸಿದ ಪದಾರ್ಥಗಳು, ಮತ್ತು ಗ್ರಾಹಕರಿಗೆ ಸೇವೆ, ನೆರವು ನೀಡುವ ಸರ್ವೀಸಸ್ ಮಾರ್ಕೆಟಿಂಗ್.
  • ಮಾರ್ಕೆಟಿಂಗ್ ವೃತ್ತಿಯಲ್ಲಿರುವ ವರ್ಗೀಕರಣವನ್ನು ಗುರುತಿಸಿ, ಅಲ್ಲಿರುವ ಅವಕಾಶಗಳನ್ನೂ, ಸವಾಲುಗಳನ್ನೂ ಗಮನಿಸಿ, ಯಾವುದು ಸೂಕ್ತವೆಂದು ನಿರ್ಧರಿಸಿ. ಉದಾಹರಣೆಗೆ, ನೀವು ಸರ್ವೀಸಸ್ ಮಾರ್ಕೆಟಿಂಗ್‍ನ್ನು ಆಯ್ಕೆ ಮಾಡಿದ್ದರೆ, ಇಲ್ಲಿರುವ ಹಲವಾರು ಉದ್ಯಮಗಳನ್ನು ಗಮನಿಸಿ: ಹಣಕಾಸು, ವಿಮಾ, ಹಣಹೂಡಿಕೆ, ಹೋಟೆಲ್, ವಿಮಾನಯಾನ, ಪ್ರವಾಸ, ಆಸ್ಪತ್ರೆಗಳು ಇತ್ಯಾದಿ. ಹಾಗೆಯೇ, ನಿಮ್ಮ ಆದ್ಯತೆಗಳೇನೆಂದು ನಿರ್ಧರಿಸಿ; ಉದಾಹರಣೆಗೆ, ಹಣಕಾಸು ಅಥವಾ ಬ್ಯಾಂಕಿಂಗ್.
  • ಹಣಕಾಸು ಮತ್ತು ಬ್ಯಾಂಕಿಂಗ್‍ಗೆ ಸಂಬಂಧಿಸಿದಂತೆ, ಅಗ್ರಸ್ಥಾನದಲ್ಲಿರುವ ಕಂಪನಿಗಳನ್ನು ಗುರುತಿಸಿ, ಅವು ಕಾರ್ಯಾಚರಣೆ ನಡೆಸುವ ಮುಖ್ಯ ಕಛೇರಿ, ಶಾಖೆಗಳು, ಅವಕಾಶಗಳನ್ನು ಪರಿಗಣಿಸಿ, ನಿಮಗೆ ಯಾವುದು ಸೂಕ್ತವೆಂದು ನಿರ್ಧರಿಸಿ.
  • ಪ್ರಾಧ್ಯಾಪಕರು ಮತ್ತು ಪ್ಲೇಸ್‍ಮೆಂಟ್ ಅಧಿಕಾರಿಗಳೊಡನೆ ಸಮಾಲೋಚಿಸಿ. ನಿಮ್ಮ ಆದ್ಯತೆಗಳಂತೆ ಕಂಪನಿಗಳೊಡನೆ ವ್ಯವಹರಿಸಲು ವಿನಂತಿಸಿ; ಅಥವಾ ನೇರವಾಗಿ ನೀವೇ ಸಂಪರ್ಕಿಸಿ. ಸಾಮಾನ್ಯವಾಗಿ, ವಿದ್ಯಾರ್ಥಿಗಳು ಪ್ರಾಜೆಕ್ಟ್‍ಗಳಿಂದಾಗುವ ಅನುಕೂಲಗಳನ್ನು ವಿವರಿಸುವುದಿಲ್ಲ; ಹಾಗಾಗಿ, ಕಂಪನಿಗಳಿಂದ ಪ್ರತಿಕ್ರಿಯೆ ಬರುವ ಸಂಭವವೂ ಕಮ್ಮಿ. ಆದರೆ, ಪ್ರಾಜೆಕ್ಟಿನಿಂದಾಗುವ ಅನುಕೂಲಗಳನ್ನು ಮನವರಿಕೆ ಮಾಡಿದರೆ, ಕಂಪನಿಯವರೂ ಪ್ರತಿಸ್ಪಂದಿಸುತ್ತಾರೆ.

ಸಮ್ಮರ್ ಪ್ರಾಜೆಕ್ಟ್‍ನಿಂದ ಭವಿಷ್ಯವನ್ನು ರೂಪಿಸುವುದು ಹೇಗೆ?

ವೃತ್ತಿ ಜೀವನದ ಗುರಿ ಮತ್ತು ಸಾಧನೆಯ ಬಗ್ಗೆ ನಿಮಗೆ ಸ್ಪಷ್ಟವಾದ ಕಲ್ಪನೆ ಇರಬೇಕು. ಪ್ರಾಜೆಕ್ಟನ್ನು ಸಮರ್ಥವಾಗಿ ನಿರ್ವಹಿಸಲು, ಕಾಲೇಜಿನಲ್ಲಿ ಅಥವಾ ಕಂಪನಿಯಲ್ಲಿ ಮಾರ್ಗದರ್ಶಕರ ಅಗತ್ಯವಿರುತ್ತದೆ.

ಆದ್ದರಿಂದ, ನಿಮ್ಮ ಭವಿಷ್ಯವನ್ನು ರೂಪಿಸಲು ಈ ಸಲಹೆಗಳನ್ನು ಗಮನಿಸಿ:

ಅಧ್ಯಯನ

ಉದ್ಯಮದಲ್ಲಿನ ಸವಾಲುಗಳು, ಪ್ರಾಜೆಕ್ಟ್ ಮಾಡಲು ಆಶಿಸುವ ಕಂಪನಿಯ ಬಗ್ಗೆ, ಪ್ರತಿಸ್ಪರ್ದಿಗಳ ಸಾಮಥ್ರ್ಯ ಮತ್ತು ದೌರ್ಬಲ್ಯಗಳು, ಮಾರುಕಟ್ಟೆ ಮತ್ತು ತಂತ್ರಜ್ಞಾನ, ಇವುಗಳ ಬಗ್ಗೆ ಷೇರು ಮಾರುಕಟ್ಟೆ, ಇಂಟರ್ನೆಟ್, ಪತ್ರಿಕೆಗಳು, ಉದ್ಯಮದ ಜಾಲತಾಣಗಳನ್ನು ಸಂಶೋಧಿಸಿ. ಸೀಮಿತ ಸಮೀಕ್ಷೆಗಳಿಂದಲೂ ಮಾಹಿತಿಯನ್ನು ಸಂಗ್ರಹಿಸಬಹುದು.

ವಿಷಯದ ಪರಿಕಲ್ಪನೆ

ಈ ಮಾಹಿತಿಗಳಿಂದ ಅಲ್ಪಾವಧಿ ಮತ್ತು ದೀರ್ಘಾವಧಿ ಕಾರ್ಯತಂತ್ರಗಳನ್ನು ಅರ್ಥೈಸಿಕೊಂಡು, ಕಂಪನಿಗೆ ಉಪಯುಕ್ತವಾದ ವಿಷಯದಲ್ಲಿ ಪ್ರಾಜೆಕ್ಟ್ ಮಾಡಬೇಕು. ಹೆಚ್ಚಿನ ವಿದ್ಯಾರ್ಥಿಗಳು, ಕಂಪನಿಯ ರಚನೆ ಮತ್ತು ಆಡಳಿತದ ಅಧ್ಯಯನವನ್ನೇ ಮಾಡುತ್ತಾರೆ. ಪರ್ಯಾಯವಾಗಿ, ಪ್ರಸ್ತುತವಾದ ಸಮಸ್ಯೆ ಅಥವಾ ವಿಷಯವನ್ನು ಆರಿಸಿಕೊಳ್ಳುವುದರಿಂದ ಕಂಪನಿಯವರಿಗೆ ಪ್ರಾಜೆಕ್ಟಿನಿಂದಾಗುವ ಪ್ರಯೋಜನ ಮತ್ತು ನಿಮ್ಮ ಕಾರ್ಯವೈಖರಿಯ ವಿಭಿನ್ನತೆಯ ಅರಿವಾಗುತ್ತದೆ. ಉದಾಹರಣೆಗೆ, ಸಾಧಾರಣವಾಗಿ ಪ್ರಸ್ತುತವಾಗಿರುವ ವಿಷಯಗಳೆಂದರೆ: ಉತ್ಪನ್ನ ಮತ್ತು ತಂತ್ರಜ್ಞಾನ, ಗ್ರಾಹಕರ ಆಸಕ್ತಿ ಮತ್ತು ಅಭಿರುಚಿಯಲ್ಲಿನ ಬದಲಾವಣೆಗಳು, ಗ್ರಾಹಕರ ತೃಪ್ತಿಯ ಮಟ್ಟ, ಅಪೇಕ್ಷೆ ಮತ್ತು ನಿರೀಕ್ಷೆ, ಸೇವೆಯಲ್ಲಿನ ಕೊರತೆಗಳು ಮತ್ತು ಅಳತೆಗೋಲುಗಳು, ಪ್ರಚಾರದ ಉದ್ದೇಶ ಮತ್ತು ಸಾರ್ಥಕತೆ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ, ಇತ್ಯಾದಿ.

ಪ್ರಸ್ತಾವನೆ

ಇಂತಹ ನಿರ್ಧಿಷ್ಟ, ಪ್ರಸ್ತುತ ಮತ್ತು ಪ್ರಚಲಿತ ವಿಷಯವನ್ನು ಆರಿಸಿ, ಹಲವಾರು ಕಂಪನಿಗಳಿಗೆ ಅಚ್ಚುಕಟ್ಟಾದ ಪ್ರಸ್ತಾವನೆಯನ್ನು ಕಳುಹಿಸಿ. ಈ ರೀತಿಯ ಪ್ರಸ್ತಾವನೆಯನ್ನು ಆಡಳಿತವರ್ಗದವರು ಗಂಭೀರವಾಗಿ ಪರಿಗಣಿಸುತ್ತಾರೆ. ಮೇಲಾಗಿ, ಇಂತಹ ವೃತ್ತಿಪರ ಪ್ರಾಜೆಕ್ಟ್ ಮಾಡಲು, ನಿಮಗೆ ಅನುಮೋದನೆ ಮತ್ತು ಸಂಪೂರ್ಣವಾದ ಸಹಕಾರ ದೊರಕುತ್ತದೆ.

ವಿನ್ಯಾಸ

ಮಾರ್ಗದರ್ಶಕರೊಡನೆ ಸಮಾಲೋಚಿಸಿ ವಿಧಾನಶಾಸ್ತ್ರ, ಪ್ರಶ್ನಾವಳಿಯ ರಚನೆ ಮತ್ತು ವಿನ್ಯಾಸದ ಬಗ್ಗೆ ನಿರ್ಧರಿಸಿ. ಪ್ರಾಜೆಕ್ಟಿನ ವಿನ್ಯಾಸದಲ್ಲಿ ಉದ್ಯಮದ ಸಮಸ್ಯೆ ಬಗ್ಗೆ ಮಾಹಿತಿ, ನಿಯಂತ್ರಿಸಲಾಗುವ ಮತ್ತು ನಿಯಂತ್ರಿಸಲಾಗದ ಅಂಶಗಳ ಅಧ್ಯಯನ, ಪರ್ಯಾಯ ಯೋಜನೆಗಳು, ನಿರ್ಣಯ ಪ್ರಕ್ರಿಯೆಯ ಮೌಲ್ಯಮಾಪನ, ಇತ್ಯಾದಿಗಳ ವ್ಯಾಖ್ಯಾನವಿರಬೇಕು. ಅನುಸರಿಸುವ ವಿಧಾನಗಳು, ಸಮೀಕ್ಷೆಗಳು, ಮಾಹಿತಿ ಸಂಗ್ರಹಣೆ, ಇತ್ಯಾದಿ ಕಾರ್ಯಗಳಲ್ಲಿ ಗುಣಮಟ್ಟವನ್ನು ಕಾಪಾಡುವ ಪ್ರಾಮಾಣಿಕ ಪ್ರಯತ್ನವಿರಲಿ. ಇಂತಹ ವೃತ್ತಿಪರ ಧೋರಣೆಯಿಂದ ಕಂಪನಿಯವರಲ್ಲಿ ವಿಶ್ವಾಸವನ್ನು ಮೂಡಿಸಬಹುದು.

ಮಾಹಿತಿ ಸಂಗ್ರಹಣೆ

ಪ್ರಾಜೆಕ್ಟ್ ಪ್ರಕ್ರಿಯೆಯಲ್ಲಿ ಪ್ರಶ್ನಾವಳಿಯಿಂದ ಸಂಗ್ರಹವಾಗುವ ಮಾಹಿತಿ ಮುಖ್ಯ. ಎಲ್ಲಾ ವಾದಗಳಿಗೂ, ವಿಶ್ಲೇಷಣೆಗೂ, ಇದೇ ಆಧಾರ. ಆದ್ದರಿಂದ, ನಿಖರವಾದ ಮತ್ತು ವಿಸ್ವಾಸಾರ್ಹ ಮಾಹಿತಿಯನ್ನೊದಗಿಸುವ ಪ್ರಾರ್ಥಮಿಕ ಸಮೀಕ್ಷೆಗಳು ಉಪಯುಕ್ತ. ಪ್ರಾಜೆಕ್ಟ್ ಮುಕ್ತಾಯದ ಹಂತವನ್ನು ಸಮೀಪಿಸುತ್ತಿದ್ದಂತೆ, ವಿಶ್ಲೇಷಣೆ ಮಾಡಲು, ಸಾಕಷ್ಟು ಮಾಹಿತಿ, ಆಧಾರಾಂಶಗಳಿವೆಯೇ ಎಂದು ಪರೀಕ್ಷಿಸಿ. ಈ ಹಂತದಲ್ಲಿ ಬೇರೆ ಮೂಲಗಳಿಂದ ಲಭ್ಯವಿರುವ ಮಾಹಿತಿ, ದತ್ತಾಂಶವನ್ನು ಪರಿಗಣಿಸಬಹುದು.

ವಿಶ್ಲೇಷಣೆ ಮತ್ತು ವರದಿ

ಕಂಪನಿಯ ಇತಿಮಿತಿಗಳನ್ನು ಗಮನಿಸಿ, ಯಾವುದೇ ರೀತಿಯ ಒಲವಿಲ್ಲದೆ, ಪಕ್ಷಪಾತವಿಲ್ಲದೆ, ವಿಶ್ಲೇಷಣೆ ಅರ್ಥಗರ್ಭಿತವಾಗಿರಲಿ. ಲಾಭ-ನಷ್ಟ, ಸಾಮಥ್ರ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಆತಂಕಗಳನ್ನು ವಿಶ್ಲೇಷಿಸಿ, ವಾದಗಳು ಅಂಗೀಕರಿಸುವಂತಿರಬೇಕು. ಆಡಳಿತದ ಸುಧಾರಣೆಗೆ, ಸಮಸ್ಯೆಗಳ ಪರಿಹಾರಕ್ಕೆ, ವಿಶ್ಲೇಷಣೆ ನಿರ್ಣಾಯಕವಾಗಿದ್ದು, ನೀವು ನೀಡುವ ಸಲಹೆ, ಶಿಫಾರಸುಗಳು ಕಾರ್ಯಗತ ಮಾಡುವಂತಿರಬೇಕು.

ವರದಿಯ ನಿರೂಪಣೆ

ಪ್ರಾಜೆಕ್ಟ್ ಮುಕ್ತಾಯವಾದ ನಂತರ, ಸಮಗ್ರವಾದ ವರದಿಯನ್ನು ನಿರ್ವಾಹಕರ ಸಮ್ಮುಖದಲ್ಲಿ ಪರಿಣಾಮಕಾರಿಯಾಗಿ ಮಂಡಿಸಬೇಕು. ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ನಿರ್ವಾಹಕರಿಗಿರಬಹುದಾದ ಸಂದೇಹ, ಸಂಶಯಗಳನ್ನು ಊಹಿಸಿ, ಅದರ ನಿವಾರಣೆಯ ಬಗ್ಗೆಯೂ ಸಲಹೆಗಳಿರಲಿ. ಈ ರೀತಿ, ಪ್ರಾಜೆಕ್ಟನ್ನು ವೃತ್ತಿಪರ ಧೋರಣೆಯಿಂದ ಪೂರ್ಣಗೊಳಿಸಿದರೆ, ನಿಮ್ಮ ನೇಮಕಾತಿಯ ಬಗ್ಗೆ ಅನುಕೂಲಕರ ಅಭಿಪ್ರಾಯ ಕಂಪನಿಯಲ್ಲಿ ಮೂಡುತ್ತದೆ.

ಸಂಶೋಧನೆಗಳಿಂದಲೇ ಉದ್ಯಮದ ಭವಿಷ್ಯದ ರಚನೆ

ನಮ್ಮ ಅರ್ಥವ್ಯವಸ್ಥೆ ಜ್ಞಾನದ ತಳಹದಿಯ ಮೇಲಿದ್ದು, ಖಾಸಗೀ ಕ್ಷೇತ್ರದ ನಿರ್ವಹಣೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಮಾರುಕಟ್ಟೆಯಲ್ಲಿನ ಅವಕಾಶಗಳು ಮತ್ತು ಆತಂಕಗಳು, ಗ್ರಾಹಕರಾಧಾರಿತ ಮಾರುಕಟ್ಟೆಯ ವಿಭಜನೆ ಮತ್ತು ಆಯ್ಕೆ, ಮಾರಾಟಗಾರಿಕೆ ಯೋಜನೆಗಳ ರಚನೆ, ನಿರ್ವಹಣೆ ಮತ್ತು ನಿಯಂತ್ರಣ ಮೊದಲಾದವುಗಳ ಬಗ್ಗೆ ನಿರ್ವಾಹಕರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಂಪನಿಯ ಭವಿಷ್ಯವನ್ನು ರೂಪಿಸುವ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು, ನಿರ್ವಾಹಕರು ನಿಖರವಾದ ಮತ್ತು ವಿಶ್ವಾಸಾರ್ಹವಾದ ಮಾಹಿತಿಯನ್ನು ಅವಲಂಬಿಸುತ್ತಾರೆ. ಈ ಮಾಹಿತಿಯನ್ನು ಒದಗಿಸುವುದೇ ಪ್ರಾಜೆಕ್ಟ್‍ಗಳ ಮೂಲ ಉದ್ದೇಶ ಮತ್ತು ಪರಿಣಾಮವಾಗಿರಬೇಕು.

ಆದರೆ, ಕೋರ್ಸಿನ ಸಲುವಾಗಿ ಮಾಡುವ ಪ್ರಾಜೆಕ್ಟ್‍ಗಳನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸುತ್ತಾರೆಯೇ ಎಂಬ ಸಂಶಯ ಕಂಪನಿಯವರಿಗಿರುವುದು ಸಹಜ. ಇಂತಹ ಸಂಶಯಗಳನ್ನು ವೃತ್ತಿಪರ ಧೋರಣೆಯಿಂದಲೂ, ನಿರ್ಧಿಷ್ಟವಾದ ಪ್ರಾಜೆಕ್ಟಿನ ಪರಿಕಲ್ಪನೆಯಿಂದಲೂ, ನಿವಾರಿಸಬಹುದು.

ಉದ್ಯಮ ಕ್ಷೇತ್ರದಲ್ಲಿ ಜಾಗತೀಕರಣದ ನಂತರ ಹೊಸ ಸಮಸ್ಯೆಗಳೂ, ಸವಾಲುಗಳಿರುವುದೂ ಸಾಮಾನ್ಯ. ಕೆಲವೊಮ್ಮೆ, ಮೇಲ್ನೋಟಕ್ಕೆ ಈ ಸಮಸ್ಯೆಗಳು ಗೋಚರವಾಗದಿದ್ದರೂ, ಸಮಸ್ಯೆಗಳು ಅಸ್ತಿತ್ವದಲ್ಲಿಲ್ಲ ಎನ್ನುವ ಹಾಗಿಲ್ಲ. ಆದ್ದರಿಂದ, ಸಮಸ್ಯೆಗಳನ್ನು ಗುರುತಿಸಲು ಅಥವಾ ಪರಿಹರಿಸಲು, ಸಂಶೋಧನೆ ಅಥವಾ ಪ್ರಾಜೆಕ್ಟ್‍ಗಳನ್ನು ನಿಯೋಜಿಸಲು ಕಂಪನಿಯವರು ಕಾತುರರಾಗಿರುತ್ತಾರೆ. ಇಂತಹ ಪ್ರಾಜೆಕ್ಟ್‍ಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳ ಮುಖಾಂತರ ಮಾಡಿದರೆ, ಗುಣಮಟ್ಟದ ಜೊತೆಗೆ ಖರ್ಚುವೆಚ್ಚಗಳೂ ಮಿತಿಯಲ್ಲಿರುತ್ತದೆ.

ನೀವು ಮಾಡುವ ಪ್ರಾಜೆಕ್ಟ್‍ನ ಉದ್ದೇಶ ಪರಿಶೋಧಾತ್ಮಕ ಅಥವಾ ಗುಣಾತ್ಮಕವಾಗಿರಲಿ; ನಿರ್ವಹಣೆಯಲ್ಲಿ ಉದ್ಯೋಗಶೀಲತೆಯಿದ್ದು, ವಿಷಯ ಕಂಪನಿಯ ಅಬಿವೃದ್ಧಿಗೆ ಪೂರಕವಾಗಿರಲಿ. ನಿಮ್ಮ ವರದಿಯಲ್ಲಿನ ಸಲಹೆ ಮತ್ತು ಶಿಫಾರಸುಗಳು ನಿರ್ಣಯ ಪ್ರಕ್ರಿಯೆಯಲ್ಲಿ ಸಹಾಯಕವಾದರೆ, ಈ ಆಧಾರದಿಂದಲೇ, ನಿರ್ವಾಹಕರು ಕಾರ್ಯತಂತ್ರವನ್ನು ರೂಪಿಸುತ್ತಾರೆ. ಪ್ರಾಜೆಕ್ಟ್ ಈ ಹಂತಕ್ಕೆ ತಲುಪಿದರೆ, ನೀವು ಬಯಸುವ ಕಂಪನಿಯಲ್ಲಿ ವೃತ್ತಿಜೀವನವನ್ನು ಪ್ರಾರಂಬಿಸಿ, ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬಹುದು.

Download PDF document

                                       

About author View all posts Author website

V Pradeep Kumar

Leave a Reply

Your email address will not be published. Required fields are marked *