‘ಎಸ್ಸೆಸ್ಸೆಲ್ಸಿ ಮುಗಿಸಿದ್ದೇನೆ. ಪಿಯುಸಿ ನಂತರ, ಸಿಇಟಿಗೆ ತಯಾರಿಯಾದರೆ ಸಾಕಾ? ಅಥವಾ ಇಂಟಿಗ್ರೇಟೆಡ್ ಕೋರ್ಸ್ ಓದಿ ಜೆಇಇ–ನೀಟ್ ‘ ಪರೀಕ್ಷೆಗೂ ಈಗಿನಿಂದಲೇ ಸಿದ್ಧಗೊಳಿಸುವ ಕಾಲೇಜಿಗೆ ಹೋಗಬೇಕಾ?’
‘ನನಗೆ ಗಣಿತ ಕಷ್ಟ. ಬರೀ ಬಯಾಲಜಿ ಕಾಂಬಿನೇಷನ್ ಸಬ್ಜೆಕ್ಟ್ ಓದಿದರೆ ಸಾಕಲ್ಲವಾ? ಆಗ ಬರೀ ಲೈಫ್ ಸೈನ್ಸ್ ಪದವಿಯನ್ನಷ್ಟೇ ಓದಬೇಕು, ಎಐ, ರೊಬೊಟಿಕ್ಸ್ ಸೈನ್ಸ್ ಎಲ್ಲ ಓದೋಕಾಗಲ್ಲವಲ್ಲಾ. ಏನು ಮಾಡೋದು?‘
‘ಪಿಯುಸಿ ಮುಗಿಯುತ್ತಿದೆ. ಪದವಿಯಲ್ಲಿ ಯಾವ ಸ್ಟಿçÃಮ್ ಆಯ್ಕೆ ಮಾಡ್ಕೋಬೇಕು? ಡಿಪ್ಲೊಮಾ, ಎಂಜಿನಿಯರಿಂಗ್, ವೈದ್ಯಕೀಯ; ಅದರಲ್ಲಿ ಆಯುರ್ವೇದ, ಡೆಂಟಲ್ …ಯಾವುದನ್ನು ಆಯ್ಕೆ ಮಾಡ್ಕೊಳ್ಳಲಿ? ಈ ಕೋರ್ಸ್ಗಳಿಗೆಲ್ಲ ಭವಿಷ್ಯ ಇದೆಯಾ, ನಾನು ಓದೋಕೆ ಆಗುತ್ತಾ?‘
‘ಅಂತಿಮ ವರ್ಷದ ಎಂ.ಟೆಕ್ ಮಾಡುತ್ತಿದ್ದೇನೆ. ಮುಂದೆ ಪಿಎಚ್.ಡಿ ಮಾಡಬೇಕಾ ಅಥವಾ ಉದ್ಯೋಗಕ್ಕೆ ಹೋಗಬೇಕಾ?
‘ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡುತ್ತಿದ್ದೇನೆ. ನಂತರ ಏನು ಮಾಡಬಹುದು.. ಇನ್ನೂ ಓದಿದರೆ ಸಮಯ ಓಡ್ತಿರುತ್ತದೆ. ಉದ್ಯೋಗ ಮಾಡ್ಕೊಂಡು ಓದಿದರೆ.. ಹೇಗೆ?‘
ಇನ್ನೊಂದು ಶೈಕ್ಷಣಿಕ ವರ್ಷ ಮುಗಿದಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುತ್ತಲಿದೆ. ಪದವಿ ಪರೀಕ್ಷೆಗಳು ಇನ್ನೇನು ಆರಂಭವಾಗಬೇಕು. ಈಗ ಮನೆ ಮನೆಗಳಲ್ಲಿ ಮಕ್ಕಳು ಮತ್ತು ಪೋಷಕರ ನಡುವೆ ಇಂಥದ್ದೇ ಚರ್ಚೆಗಳು ನಡೆಯುತ್ತಿವೆ. ಚರ್ಚೆಗಳಲ್ಲಿ ಗೊಂದಲ ಮೂಡಿಸುವ ಪ್ರಶ್ನೆಗಳದ್ದೇ ಕಾರುಬಾರು..!
ಹೀಗೆ ಗೊಂದಲ ಸೃಷ್ಟಿಯಾಗಲು ಪ್ರಮುಖವಾದ ಕಾರಣ, ವಿದ್ಯಾರ್ಥಿಗಳು ತಮ್ಮನ್ನು ತಾವು ಅರ್ಥ ಮಾಡಿಕೊಳ್ಳದೆ, ವೃತ್ತಿಯೋಜನೆಯನ್ನೂ ಮಾಡಿಕೊಳ್ಳದೇ, ವೃತ್ತಿ/ಕೋರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು. ಅಷ್ಟೇ ಅಲ್ಲ, ಕೆಲವೊಮ್ಮೆ ತೀರಾ ವಿಭಿನ್ನ ವಾದ ಕೋರ್ಸ್/ವೃತ್ತಿಗಳನ್ನು ಒಂದೇ ಸಮಯದಲ್ಲಿ ಪರಿಗಣಿಸುವುದರಿಂದಲೂ, ಯಾವುದು ಸೂಕ್ತವೆಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಹಾಗಾದರೆ, ತಮ್ಮನ್ನು ತಾವು ಸಂಪೂರ್ಣವಾಗಿ ಅರಿತು ಮುಂದಿನ ವೃತ್ತಿ/ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಹೇಗೆ?
ಇಂಥಹ ಸಂದರ್ಭ ಎದುರಾದಾಗ, ಅದನ್ನು ಸಮರ್ಥವಾಗಿ ಎದುರಿಸಲು ಕಾರ್ಪೊರೇಟ್ ಸಂಸ್ಥೆಗಳು ಉಪಯೋಗಿಸುವ ಒಂದು ಪ್ರಮುಖ ಸಾಧನವೆಂದರೆ, ಅದು ‘ಸ್ವಾಟ್ ಅನಾಲಿಸಿಸ್ ‘(SWOT ANALYSIS). ಈ ವಿಶ್ಲೇಷಣೆಯಲ್ಲಿ ಸಾಮರ್ಥ್ಯಗಳು (Strengths), ದೌರ್ಬಲ್ಯಗಳು (Weaknesses), ಅವಕಾಶಗಳು (Opportunities) ಹಾಗೂ ಅಂಜಿಕೆಗಳನ್ನು (Threats) ಗುರುತಿಸಬೇಕು. ಅದೇ ರೀತಿ ಈ ಸ್ವಾಟ್ ವಿಧಾನವನ್ನು ವೃತ್ತಿ /ಕೋರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ಬಳಸಿಕೊಳ್ಳಬಹುದು. ಇದು, ಶಾಲಾಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ನಡೆಸುತ್ತಿರುವ ವೃತ್ತಿಯೋಜನೆ ಕಾರ್ಯಾಗಾರಗಳಿಂದ ಲಭಿಸಿರುವ ಮಾಹಿತಿ ಮತ್ತು ಅನುಭವವೂ ಹೌದು.
ಸ್ವಾಟ್ ವಿಶ್ಲೇಷಣೆ ಹೇಗೆ?
ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳುತ್ತಾ (ಸ್ವಯಂ-ಪ್ರಶ್ನೆಗಾರಿಕೆಯಿಂದ) ನಿಮ್ಮ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಅಂಜಿಕೆಗಳನ್ನು ನಿಷ್ಪಕ್ಷಪಾತವಾಗಿ ಗುರುತಿಸಿ, ಸ್ವ-ವಿಮರ್ಶೆಯನ್ನು ಮಾಡಬೇಕು.
ಈ ವಿಶ್ಲೇಷಣೆಯಲ್ಲಿ, ನಿಮಗೆ ನೀವೇ ಹಾಕಿಕೊಳ್ಳುವ ಪ್ರಶ್ನೆಗಳು ಈ ರೀತಿಯಲ್ಲಿರಬಹುದು:
ಸಾಮರ್ಥ್ಯಗಳು (ಇವುಗಳನ್ನು ಹೆಚ್ಚಿಸುವ, ವರ್ಧಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು)
- ನನಗೆ ಯಾವ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯಿದೆ?
- ನನಗೆ ಯಾವ ವಿಷಯಗಳನ್ನು ವೇಗವಾಗಿ ಗ್ರಹಿಸಲು ಆಗುತ್ತದೆ?
- ನನ್ನ ವೈಯಕ್ತಿಕ ಗುಣಲಕ್ಷಣಗಳು, ಕೌಶಲಗಳು (ಸಂವಹನ, ನಾಯಕತ್ವದ ಗುಣಗಳು,
- ಆಶಾವಾದ, ಸಕಾರಾತ್ಮಕ ಮನೋಭಾವ, ಸಮಯದ ನಿರ್ವಹಣೆ, ಶಿಸ್ತು ಇತ್ಯಾದಿ) ಯಾವುವು?
- ಸಹಪಾಠಿಗಳಿಗಿಂತ ಯಾವ ಕಾರ್ಯಗಳನ್ನು ನಾನು ಉತ್ತಮವಾಗಿ ಮಾಡಬಹುದು?
- ನನ್ನ ಕೌಟುಂಬಿಕ ಹಿನ್ನೆಲೆ, ಸಂಪನ್ಮೂಲಗಳೇನು?
- ನನ್ನ ವೈಯಕ್ತಿಕ ಮೌಲ್ಯಗಳೇನು (ಪ್ರಾಮಾಣಿಕತೆ, ನೈತಿಕತೆ, ನಿಷ್ಠೆ ಇತ್ಯಾದಿ)
ದೌರ್ಬಲ್ಯಗಳು (ಇವುಗಳನ್ನು ನಿಯಂತ್ರಿಸಿಕೊಳ್ಳಬೇಕು/ಪರಿಹರಿಸಿಕೊಳ್ಳಬೇಕು)
- ನನಗೆ ಕಷ್ಟವೆನಿಸುವ ವಿಷಯಗಳೇನು? ಕ್ಷೇತ್ರಗಳೇನು?
- ನನ್ನ ದೌರ್ಬಲ್ಯಗಳೇನು? (ಮುಂಗೋಪ, ಋಣಾತ್ಮಕ ಮನೋಭಾವ, ನಿರಾಶಾವಾದ,
- ಅಸ್ತವ್ಯಸ್ತತೆ, ಸೋಮಾರಿತನ ಇತ್ಯಾದಿ)
- ದೌರ್ಬಲ್ಯಗಳನ್ನು ನಿಯಂತ್ರಿಸುವುದು/ಪರಿಹರಿಸುವುದು ಹೇಗೆ?
- ನನಗೆ ಯಾವ ಕೆಲಸಗಳನ್ನು ನಿರ್ವಹಿಸಲು ಆಗುವುದಿಲ್ಲ/ಇಚ್ಛಿಸುವುದಿಲ್ಲ?
ಅವಕಾಶಗಳು (ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು)
- ನನಗಿರುವ ಸಾಮರ್ಥ್ಯವನ್ನು ಪರಿಗಣಿಸಿದರೆ ಇರುವ ಶೈಕ್ಷಣಿಕ ಅವಕಾಶಗಳೇನು?
- ನನ್ನ ಬದುಕಿನ ಕನಸುಗಳೇನು, ಗುರಿಗಳೇನು, ಜವಾಬ್ದಾರಿಗಳೇನು?
- ಅವುಗಳನ್ನು ಸಾಧಿಸಲು ಶೈಕ್ಷಣಿಕ/ವೃತ್ತಿ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು?
- ನನಗಿರುವ ವೃತ್ತಿಯ ಅವಕಾಶಗಳೇನು? (ಖಾಸಗಿ, ಸರ್ಕಾರಿ, ಸ್ವಂತ ಉದ್ದಿಮೆ, ವಿದೇಶಿ ಅಧ್ಯಯನ ಇತ್ಯಾದಿ).
ಅಂಜಿಕೆಗಳು (ಇವುಗಳನ್ನು ಪುನರ್ಮೌಲ್ಯಗೊಳಿಸಿ, ತಡೆಗಟ್ಟಬೇಕು)
- ನಾನು ಅಪೇಕ್ಷಿಸುವ ಕ್ಷೇತ್ರದಲ್ಲಿ ನನ್ನ ದೌರ್ಬಲ್ಯಗಳಿಂದ ತೊಂದರೆಗಳಾಗಬಹುದೇ?
- ಈ ಕ್ಷೇತ್ರದಲ್ಲಿ ಬೇಡಿಕೆ ಇನ್ನೂ ಇರುತ್ತದೆಯೇ?
- ನಾನು ಅಪೇಕ್ಷಿಸುವ ಕ್ಷೇತ್ರದಲ್ಲಿನ ಸ್ಪರ್ಧಾತ್ಮಕ ಅಂಶಗಳೇನು?
- ಬಾಹ್ಯ ಕ್ಷೇತ್ರದ ಬದಲಾವಣೆಗಳಿಂದ (ಸರ್ಕಾರದ ನೀತಿ, ನಿಯಮಗಳು, ಕಾನೂನು, ತಂತ್ರಜ್ಞಾನ, ಆವಿಷ್ಕಾರಗಳು, ಗ್ರಾಹಕರ ಆದ್ಯತೆಗಳು ಇತ್ಯಾದಿ) ಆಗಬಹುದಾದ ಪರಿಣಾಮಗಳೇನು?
ಅಂತಿಮ ನಿರ್ಧಾರ ಸುಲಭ
ಈ ರೀತಿ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುತ್ತಾ ಹೋದಂತೆ, ಸ್ವ-ವಿಮರ್ಷೆ ಸಂಪೂರ್ಣವಾಗಿಯೂ, ಸಮಗ್ರವಾಗಿಯೂ ಆಗುತ್ತದೆ. ಸ್ವ-ವಿರ್ಶೆಯ ಈ ಪ್ರಕ್ರಿಯೆಯಿಂದ ಹೊಸದೊAದು, ಅಮೂಲ್ಯವಾದ ವ್ಯಕ್ತಿತ್ವದ ಒಳನೋಟ ಸಿಗುತ್ತದೆ. ಹಾಗಾಗಿ, ವಿವಿಧ ಕೋರ್ಸ್ಗಳಿಗೆ ಅಗತ್ಯವಿರುವ ಜ್ಞಾನ, ಕೌಶಲಗಳು ಮತ್ತು ಮನೋಧೋರಣೆಗಳಿಗೂ ವ್ಯಕ್ತಿತ್ವದ ಗುಣಲಕ್ಷಣಗಳಿಗೂ ಹೋಲಿಸಿ, ಯಾವ ಕೋರ್ಸ್ ಮತ್ತು ವೃತ್ತಿ ಸೂಕ್ತವೆಂದು ನಿರ್ಧರಿಸಬಹುದು. ವಿಶೇಷವಾಗಿ, ವಿದ್ಯಾರ್ಥಿಗಳು ಹಲವಾರು ಆಯ್ಕೆಗಳನ್ನು ಪರಿಗಣಿಸುವಾಗ ಸ್ವಾಟ್ ವಿಶ್ಲೇಷಣೆಯ ಸಾಧನವನ್ನು ಸಮರ್ಪಕವಾಗಿ ಉಪಯೋಗಿಸಿದರೆ, ಸರಿಯಾದ ಕೋರ್ಸ್/ವೃತ್ತಿಯ ಆಯ್ಕೆ ಮಾಡಿ, ಬದುಕಿನ ಕನಸುಗಳನ್ನು ಸಾಕಾರಗೊಳಿಸಬಹುದು.
ಸ್ವಾಟ್ ಅನಾಲಿಸಿಸ್ ಮತ್ತು ವೃತ್ತಿ ಯೋಜನೆ-ಉದಾಹರಣೆ
ಈಗಷ್ಟೇ ಪಿಯುಸಿ ಮುಗಿಸಿರುವ ಸಂತೋಷ್‌ನ ಉದಾಹರಣೆಯನ್ನು ಸಂಕ್ಷಿಪ್ತವಾಗಿ ಗಮನಿಸೋಣ:
ಸಾಮರ್ಥ್ಯಗಳು
- ಆಕರ್ಷಕ ವ್ಯಕ್ತಿತ್ವ, ಸಕಾರಾತ್ಮಕ ಧೋರಣೆ, ಮಾತುಗಾರಿಕೆ, ಅಂತರ್-ವೈಯಕ್ತಿಕ ಕೌಶಲ್ಯ.
ದೌರ್ಬಲ್ಯಗಳು
- ಪಿಯುಸಿ ಪರೀಕ್ಷೆಯಲ್ಲಿ ಸಾಧಾರಣ ಫಲಿತಾಂಶ, ಗಣಿತ, ಆರ್ಥಿಕ ಸಮಸ್ಯೆಗಳು.
- ಅಜಾಗರೂಕತೆ, ಅಸ್ತವ್ಯಸ್ತತೆ, ಗಡಿಬಿಡಿ, ಚಂಚಲತೆ.
ಅವಕಾಶಗಳು
- ಪದವಿ ಕೋರ್ಸ್ ನಂತರ ಉನ್ನತ ಶಿಕ್ಷಣಕಾಗಿ ಎಂಬಿಎ, ಶೈಕ್ಷಣಿಕ ಸಾಲ.
- ಆರ್ಥಿಕವಾಗಿ ಫಲದಾಯಕವಾದ ಮಾರ್ಕೆಟಿಂಗ್ ವೃತ್ತಿಯಿಂದ ತೃಪ್ತಿಕರವಾದ ಜೀವನಶೈಲಿ. ಎಂಬಿಎ ನಂತರ ಉದ್ಯೋಗದಲ್ಲಿ ಮತ್ತಷ್ಟು ಪ್ರಗತಿ.
ಅಂಜಿಕೆಗಳು
- ಇ-ಕಾಮರ್ಸ್ ಜನಪ್ರಿಯವಾಗುತ್ತಿರುವುದರಿಂದ, ಮಾರ್ಕೆಟಿಂಗ್ ವೃತ್ತಿಯ ಮೇಲಿನ ಪರಿಣಾಮಗಳು.
- ಬಿ.ಎಸ್ಸಿ, ಎಂಬಿಎ ಮಾಡಲು ಆಗುವ ಐದು ವರ್ಷಗಳಲ್ಲಿ ಮಾನವ ಸಂಪನ್ಮೂಲಕ್ಕೆ ಬೇಡಿಕೆಗಿಂತ ಪೂರೈಕೆ ಹೆಚ್ಚಾಗುವ ಸಾಧ್ಯತೆ.
ಕೋರ್ಸ್/ವೃತ್ತಿ ಯೋಜನೆ
ಈ ಎಲ್ಲಾ ಅಂಶಗಳನ್ನು ವಿಶ್ಲೇಷಿಸಿ, ಬಿ.ಎಸ್ಸಿ ಕೋರ್ಸ್ ಆಯ್ಕೆ. ವಾರಾಂತ್ಯದಲ್ಲಿ ಮಾರ್ಕೆಟಿಂಗ್ ಸಂಬಂಧಿತ ಅರೆಕಾಲಿಕ ಕೆಲಸಗಳು. ಬಿ.ಎಸ್ಸಿ ನಂತರ ಮಾರ್ಕೆಟಿಂಗ್ ವೃತ್ತಿಯನ್ನು ಅನುಸರಿಸಿ, ಸಂಜೆ ಕಾಲೇಜಿನ ಮೂಲಕ ಎಕ್ಸಿಕ್ಯೂಟಿವ್ ಎಂಬಿಎ ಮಾಡುವ ನಿರ್ಧಾರ.