ಟೈಮ್ಸ್ ಸ್ಕೇರ್: ಜಗತ್ತಿನ ಅತ್ಯಂತ ಜನಪ್ರಿಯ ಸ್ಥಳ

39.20 ದಶಲಕ್ಷ ಜನರು ಭೇಟಿ ನೀಡುವ ಜಗತ್ತಿನ ಅತ್ಯಂತ ಜನಪ್ರಿಯ ಪ್ರೇಕ್ಷಣೀಯ ಸ್ಥಳವೇ ನ್ಯೂಯಾರ್ಕ್‍ನ ಟೈಮ್ಸ್ ಸ್ಕೇರ್. ಇದೊಂದು ಭೋಜನ ಪ್ರಿಯರ ಸ್ವರ್ಗವೂ ಕೂಡ!

ಜೂನ್ 21, ಸೂರ್ಯನ ಪ್ರಖರದ ತೀಕ್ಷಣೆಯÀನ್ನು ಅನುಭವಿಸುವ ಸುದೀರ್ಘವಾದ ದಿನ. ಅಂದು, ದೆಹಲಿಯ ವಿಮಾನ ನಿಲ್ದಾಣದಲ್ಲಿಳಿದಾಗ, ಆ ಪ್ರಖರ ಸುಮಾರು 47 ಡಿಗ್ರಿ ಸೆಂಟಿಗ್ರೇಡ್‍ನಷ್ಟಿದ್ದು, ತಂಪಾದ ಬೆಂಗಳೂರಿನಿಂದ ಏಕಾದರೂ ಬಂದೆನೋ ಎನಿಸಿತ್ತು.

ಮರುದಿನದ ಪತ್ರಿಕೆಯಲ್ಲಿ ಸೋಜಿಗದ ಸಂಗತಿ ವರದಿಯಾಗಿತ್ತು. ದೂರದ ನ್ಯೂಯಾರ್ಕ್‍ನಲ್ಲಿ, ಅದೇ ಜೂನ್ 21, ವಿಶೇಷವಾದ ದಿನ. ಮುಂಜಾನೆ, ನಿವಾಸಿಗಳು ನಗರದ ಕೇಂದ್ರ ಭಾಗವಾದ ಟೈಮ್ಸ್ ಸ್ಕೇರ್‍ಗೆ ತರಾತುರಿಯಲ್ಲಿ ಬಂದರು. ಕೈಯಲ್ಲಿದ್ದ ಮ್ಯಾಟ್‍ಗಳನ್ನು ರಸ್ತೆಯ ನಡುವೆ ಹಾಸಿ ಕುಳಿತರು. ನಿಮಿಷಗಳಲ್ಲಿ ಗುಂಪು ಸಾವಿರ ದಾಟಿ, ಶಿಕ್ಷಕರು ಸಭೆಯ ಮುಂಬಾಗಕ್ಕೆ ಬರುತ್ತಿದ್ದಂತೆ, ನಿವಾಸಿಗಳು ಯೋಗಾಭ್ಯಾಸದ ಭಂಗಿಯಲ್ಲಿ ಕುಳಿತು, ಓಂಕಾರದ ನುಡಿಯನ್ನು ಮುಗಿಲು ಮುಟ್ಟಿಸುತ್ತಿದ್ದಂತೆ, ಇಡೀ ಸಮೂಹದ ಯೋಗಾಭ್ಯಾಸ ಪ್ರಕ್ರಿಯೆ ಶುರು. ಹಾಂ! ಇದು ನ್ಯೂಯಾರ್ಕ್ ನಿವಾಸಿಗಳು ಗ್ರೀಷ್ಮ ಋತುವನ್ನು ಸ್ವಾಗತಿಸುವ ಅಪರೂಪದ ವೈಖರಿ.

ಪತ್ರಿಕೆಯಲ್ಲಿನ ವರದಿ ನೋಡುತ್ತಿದ್ದಂತೆ, ಟೈಮ್ಸ್ ಸ್ಕೇರ್‍ನಲ್ಲಿ ಹಗಲೂ ರಾತ್ರಿಯೆನ್ನದೆ ಅಲೆದಾಡಿದ ಸಮಯದ ಫ್ಲಾಶ್‍ಬ್ಯಾಕ್ ಮನದಲ್ಲಿಯೇ ಮೂಡಿದಾಗ, ದೆಹಲಿಯ ಖಡಕ್ ಬೇಸಿಗೆಯ ತಾಪ ಕೊಂಚಕಾಲ ಫಾರ್ವಡ್ ಆಗಿತ್ತು!

ಇಷ್ಟಾದರೂ, ಟೈಮ್ಸ್ ಸ್ಕೇರಿನ ಜನಪ್ರಿಯತೆಯ ಗುಟ್ಟೇನು? ಪ್ರಾಯಶಃ ನ್ಯೂಯಾರ್ಕ್ ನಿವಾಸಿಗಳೂ ನಿಖರವಾಗಿ ಉತ್ತರಿಸಲಾರರು; ಆದರೆ, ಸುಮಾರು 39.20 ದಶಲಕ್ಷ ಜನರು ತಪ್ಪಾಗಿರಲು ಸಾಧ್ಯವಿಲ್ಲ; ಏಕೆಂದರೆ, ಒಂದು ವರ್ಷದಲ್ಲಿ ಸುಮಾರು 39.20 ದಶಲಕ್ಷ ಜನರು ಭೇಟಿ ನೀಡುವ ಜಗತ್ತಿನ ಅತ್ಯಂತ ಜನಪ್ರಿಯ ಪ್ರೇಕ್ಷಣೀಯ ಸ್ಥಳವೇ ನ್ಯೂಯಾರ್ಕ್‍ನ ಟೈಮ್ಸ್ ಸ್ಕೇರ್. ಹಾಗಾಗಿ, ಕೇವಲ ಪ್ರವಾಸಕ್ಕಾಗಿಯೇ ಹೊರಟಿದ್ದ ನಮಗೆ, ಅನೇಕ ಕಥೆ, ಕಾದಂಬರಿಗಳಲ್ಲಿ ಓದಿ, ಚಲನಚಿತ್ರಗಳಲ್ಲಿ ನೋಡಿದ್ದುದರಿಂದ ಟೈಮ್ಸ್ ಸ್ಕೇರ್ ಬಗ್ಗೆ ಕುತೂಹಲ, ಕಾತರ ಹೆಚ್ಚಾಗಿಯೇ ಇತ್ತು.

ಟೈಮ್ಸ್ ಸ್ಕೇರಿನ ಮೊದಲ ಅನುಭವವನ್ನು ನೆನಸಿಕೊಂಡರೆ ರೋಮಾಂಚನವಾಗುವದಂತೂ ನಿಜ.

ಟೈಮ್ಸ್ ಸ್ಕೇರ್ ಜನಪ್ರಿಯತೆಯ ಗುಟ್ಟು

ಮ್ಯಾನ್‍ಹ್ಯಾಟನ್ ನ್ಯೂಯಾರ್ಕ ನಗರದ ಕೇಂದ್ರ ದ್ವೀಪ. ಇಲ್ಲಿನ ಪೆನ್ ಸ್ಟೇಶನ್ನಿನ ಹೊರಗೆ ಬಂದರೆ, ಇರುವುದು 34ನೇ ಸ್ಟ್ರೀಟ್; ಹತ್ತಿರದ 42ನೇ ಸ್ಟ್ರೀಟಿನ ಸುತ್ತಮುತ್ತಲಿರುವ ಪ್ರದೇಶವೆÉೀ ಟೈಮ್ಸ್ ಸ್ಕೇರ್. ಈ ಹೆಸರು ಹೇಗೆ ಬಂತು ಗೊತ್ತೇ?

ನ್ಯೂಯಾರ್ಕ್ ಟೈಮ್ಸ್ ಅಮೇರಿಕದ ಸುಮಾರು 163 ವರ್ಷಗಳಷ್ಟು ಹಳೆಯ, ಪ್ರಖ್ಯಾತ ದಿನಪತ್ರಿಕೆ. 1904ರಲ್ಲಿ ನೂತನ ಗಗನಚುಂಬಿ ಕಟ್ಟಡವನ್ನು ನಿರ್ಮಿಸಿದ ಸಂಸ್ಥೆ, ತನ್ನ ಕೇಂದ್ರ ಕಛೇರಿಯ ಕಟ್ಟಡಕ್ಕೆ ಇಟ್ಟ ಹೆಸರು ಟೈಮ್ಸ್ ಸ್ಕೇರ್. ಈ ಕಟ್ಟಡದ ಭೂಗರ್ಭದಲ್ಲಿ ನಿರ್ಮಿತವಾದ ಮೆಟ್ರೊ ಸ್ಟೇಶನ್ನಿಗೆ ಹೆಸರಿಡಬೇಕಾದ ಸಂದರ್ಭದಲ್ಲಿ ಬೇರಾವುದೇ ಸೂಕ್ತ ಹೆಸರಿಲ್ಲದೆ, ಟೈಮ್ಸ್ ಸ್ಕೇರ್ ಎಂದು ಕರೆಯಲಾಯಿತು. ಕಾಲಕ್ರಮೇಣ ಇಡೀ ಪ್ರದೇಶವೇ ಟೈಮ್ಸ್ ಸ್ಕೇರ್ ಎಂದು ಹೆಸರುವಾಸಿಯಾಯಿತು. 1913ರಲ್ಲಿ ನ್ಯೂಯಾರ್ಕ್ ಟೈಮ್ಸ್ ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರಿಸಿದರೂ, ಪ್ರದೇಶದ ಹೆಸರು ಟೈಮ್ಸ್ ಸ್ಕೇರ್ ಎಂದೇ ಮುಂದುವರಿದು, ದಿನದ 24 ಗಂಟೆಯೂ ಪ್ರಪಂಚದ ನಾಗರಿಕರೆಲ್ಲರನ್ನೂ ಒಂದುಗೂಡಿಸುವ ತಾಣವಾಗಿ ವಿಜೃಂಭಿಸುತ್ತಿದೆ. ಟೈಮ್ಸ್ ಸ್ಕೇರ್ ಮೆಟ್ರೊ ನಿಲ್ದಾಣವನ್ನು ವರ್ಷದಲ್ಲಿ ಉಪಯೋಗಿಸುವವರ ಸಂಖ್ಯೆ 18 ದಶಲಕ್ಷವೆಂದರೆ, ಇಲ್ಲಿನ ಜನಸಾಂದ್ರತೆಯ ಅರಿವಾಗಬಹುದು.

ಟೈಮ್ಸ್ ಸ್ಕೇರಿನ ಜನಪ್ರಿಯತೆಗೆ ನೂರಾರು ವರ್ಷಗಳ ಹಿಂದಿನಿಂದ ನಡೆದು ಬಂದ ಅನೇಕ ಸಾಂಸ್ಕೃತಿಕ ಆಚರಣೆಯ ಇತಿಹಾಸವಿದೆ; ಜೊತೆಗೆ ಈಗ ಹೋಟೆಲ್, ರೆಸ್ಟೋರೆಂಟ್, ಶಾಪಿಂಗ್ ಮತ್ತು ಮನರಂಜನೆಯ ರಾಜಧಾನಿಯೆಂದರೂ ತಪ್ಪಿಲ್ಲ. ಹಾಂ! ನೀವು ಭೋಜನ ಪ್ರಿಯರೇ? ಇಲ್ಲಿ 294 ಭಾರತೀಯ ರೆಸ್ಟೋರೆಂಟ್‍ಗಳೇ ಇವೆ ಎಂದರೆ, ನೀವು ಇಲ್ಲಿರುವ ವೈವಿಧ್ಯಮಯ ರೆಸ್ಟೋರೆಂಟ್‍ಗಳ ಸಂಖ್ಯೆಯನ್ನು ಊಹಿಸಬಲ್ಲಿರಿ. ಹಾಗಾಗಿ, ಇದು ಭೋಜನ ಪ್ರಿಯರ ಸ್ವರ್ಗವೇ ಸರಿ!

ಡ್ರಾಪಿಂಗ್ ದ ಬಾಲ್

ಹೊಸ ವರ್ಷವನ್ನು ಕೋಟ್ಯಾಂತರ ಕನಸುಗಳೊಂದಿಗೆ ಸ್ವಾಗತಿಸಲು, ಪ್ರತಿ ವರ್ಷದ ಡಿಸೆಂಬರ್ 31ನೇ ರಾತ್ರಿ ವಿಶ್ವದೆಲ್ಲೆಡೆ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಇಲ್ಲಿ ನಡೆಯುವ ಈ ಸಂಭ್ರಮ ವಿಶಿಷ್ಠ.

ಟೈಮ್ಸ್ ಸ್ಕೇರಿನ ಕಟ್ಟಡದ ತುತ್ತತುದಿಯ ದ್ವಜಸ್ಥಂಭದಿಂದ ಡಿಸೆಂಬರ್ 31ರ ರಾತ್ರಿ 11.59ರಿಂದ ಜಾರುತ್ತಾ ಕೆಳಗೆ ಬರುವ ಟೈಮ್ಸ್ ಬಾಲ್, ಹೊಸ ವರ್ಷವನ್ನು ಸ್ವಾಗತಿಸುವ ಸಂಕೇತದಂತೆ ಪೂರ್ವ ನಿಗದಿತ ಸ್ಥಳಕ್ಕೆ ಸರಿಯಾಗಿ ಮದ್ಯರಾತ್ರಿಯ 12 ಗಂಟೆಗೆ, ಅಂದರೆ 60 ಸೆಕೆಂಡುಗಳಲ್ಲಿ ಅಗಾಧವಾದ ಜನಸ್ತೋಮದ ಹರ್ಷೋದ್ಗಾರದ ನಡುವೆ ಬಂದು ಸೇರುತ್ತದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಎಷ್ಟು ಗೊತ್ತೇ? ಸುಮಾರು 8.5 ದಶಲಕ್ಷ ಜನಸಂಖ್ಯೆಯ ನ್ಯೂಯಾರ್ಕ್‍ನ ಒಂದು ದಶಲಕ್ಷ ನಿವಾಸಿಗಳು ಇಲ್ಲಿ ಸೇರಿರುತ್ತಾರೆನ್ನುವುದೇ ಈ ಆಚರಣೆಯ ಜನಪ್ರಿಯತೆಗೆ ಸಾಕ್ಷಿ.

ಸೋಲ್‍ಸ್ಟಿಸ್ ಸಂಭ್ರಮ

ಲಾಟಿನ್ ಭಾಷೆಯಲ್ಲಿ ಸೋಲ್‍ಸ್ಟಿಸ್ ಎಂದರೆ ಎತ್ತರದಲ್ಲಿ ಸ್ಥಿರವಾಗಿ ನಿಂತಿರುವ ಸೂರ್ಯ ಎಂದು ಅರ್ಥೈಸಿಕೊಳ್ಳಬಹುದು. ಬೇಸಿಗೆಯ ಸೋಲ್‍ಸ್ಟಿಸ್ ಎಂದರೆ, ತನ್ನ ಪಥದ ಉತ್ತುಂಗದಲ್ಲಿರುವ ಸೂರ್ಯ ಚಲನೆಯ ದಿಕ್ಕನ್ನು ಬದಲಿಸುವ ಮುಂಚಿನ ಸ್ಥಿತಿ ಅಥವಾ ಸ್ಥಾನ. ಜೂನ್ 21ರಂದು ಬರುವ ಬೇಸಿಗೆಯ ಸೋಲ್‍ಸ್ಟಿಸ್ ಆಚರಣೆಗೆಂದೇ, ಸಾವಿರಾರು ನಿವಾಸಿಗಳು ಮುಂಜಾನೆ ಟೈಮ್ಸ್ ಸ್ಕೇರಿನ ಆವರಣದಲ್ಲಿ ಸೇರಿ, ಯೋಗಾಭ್ಯಾಸ ಮಾಡಿ ಸಂಭ್ರಮಿಸುತ್ತಾರೆ.

ಮುಂಜಾನೆಯ 5.30ಕ್ಕೆ ಶುರುವಾಗುವ ಈ ಕಾರ್ಯಕ್ರಮಕ್ಕೆ ಹಲವಾರು ಸಹಶಿಕ್ಷಕರಿದ್ದು, ‘ನಿಮ್ಮ ದೇಹದ ಭಂಗಿಯಲ್ಲಿ ಸಮತೋಲನವಿರಲಿ; ಭುಜಗಳನ್ನು ನೇರವಾಗಿರಿಸಿ’ ಇತ್ಯಾದಿ ಸೂಚನೆಗಳನ್ನು ಕೊಡುತ್ತಿದ್ದಂತೆ, ಥಟ್ಟನೆ ನಿಲ್ಲುವ ವಾಹನಗಳ ಶಬ್ದದ ನಡುವೆ, ಪಾದಚಾರಿಗಳು ಒಂದು ಕ್ಷಣ ನಿಂತು, ಈ ಅಪರೂಪದ ದೃಶ್ಯವನ್ನು ನೋಡುತ್ತಾ ಮುಂದೆ ಸಾಗುತ್ತಾರೆ. ನಿರಂತರವಾಗಿ, ರಾತ್ರಿ 9.15ರವರೆಗೆ ಅನೇಕ ತಂಡಗಳ ಯೋಗಾಭ್ಯಾಸ ನಡೆದ ಈ ವರ್ಷದ ಆಚರಣೆಯಲ್ಲಿ ಭಾಗವಹಿಸಿದ ನಿವಾಸಿಗಳ ಸಂಖ್ಯೆ ಸುಮಾರು 11,000. ಜಗತ್ತಿನಲ್ಲಿ ಯೋಗಾಭ್ಯಾಸದ ಜನಪ್ರಿಯತೆಗೆ ಬೇರಾವ ಸಾಕ್ಷಿ ಬೇಕೆ?

ಟೇಸ್ಟ್ ಏಷಿಯ

ಏಷಿಯ ದೇಶಗಳ ಪ್ರತಿಷ್ಠಿತ ಶೆ¥sóïಗಳು ಟೈಮ್ಸ್ ಸ್ಕೇರಿನಲ್ಲಿ ನಡೆಯುವ ಪಾಕಶಾಸ್ತ್ರದ ಸ್ಪರ್ದೆಯಲ್ಲಿ ಭಾಗವಹಿಸಿ, ತಮ್ಮ ವಿಶಿಷ್ಠವಾದ, ಗೋಪ್ಯವಾದ ಪಾಕಸೂತ್ರಗಳ ಭಕ್ಷ್ಯಗಳನ್ನು ತಯಾರಿಸುತ್ತಾರೆ. ನಗರದ ನಿವಾಸಿಗಳು, ಪ್ರವಾಸಿಗರಿಗಿದೊಂದು ದೇಶ ವಿದೇಶಗಳ ಭಕ್ಷ್ಯಗಳನ್ನು ಆಸ್ವಾದಿಸಿ, ಆನಂದಿಸುವ ಅವಕಾಶ.

ಸಾಮಾನ್ಯವಾಗಿ, ಜೂನ್ ತಿಂಗಳಲ್ಲಿ ನಡೆಯುವ ಎರಡು ದಿನಗಳ ಈ ಉತ್ಸವದಲ್ಲಿ ಸಂಗೀತ, ನೃತ್ಯದ ಕಾರ್ಯಕ್ರಮಗಳೂ ನಡೆಯುವುದರಿಂದ ಮತ್ತು ಸ್ಥಳೀಯ ಟೆಲಿವಿಷನ್ ಚಾನೆಲ್‍ನಲ್ಲಿ ಪ್ರಸಾರವೂ ಆಗುವುದರಿಂದ, ಇದೊಂದು ಜನಪ್ರಿಯ ಸಾಂಸ್ಕೃತಿಕ ಜಾತ್ರೆಯಂತೆ.

ಬ್ರಾಡ್‍ವೆ

ಸಂಗೀತ, ನಾಟಕ ಪ್ರದರ್ಶನಕ್ಕಾಗಿಯೇ ಮೀಸಲಾಗಿರುವ ಸುಮಾರು 30 ಥಿಯೇಟರ್‍ಗಳಿರುವ ಬ್ರಾಡ್‍ವೆ ಇರುವುದೇ ಟೈಮ್ಸ್ ಸ್ಕೇರ್‍ನಲ್ಲಿ. ಲಂಡನ್‍ನ ವೆಸ್ಟ್‍ಎಂಡ್ ಹಾಗು ನ್ಯೂಯಾರ್ಕ್‍ನ ಬ್ರಾಡ್‍ವೆ ಥಿಯೇಟರ್‍ಗಳು, ಇಂಗ್ಲೀಷ್ ಸಾಂಸ್ಕೃತಿಕ ವಲಯದಲ್ಲಿ ಆದರ್ಶಪ್ರಾಯ ಮತ್ತು ಕಲಾವಿದರಿಗೆ ಇಲ್ಲಿ ಕೌಶಲ ಪ್ರದರ್ಶಿಸುವುದು ಒಂದು ಹೆಮ್ಮೆಯ ಅನುಭವ. ನೀವು ಕಲಾಭಿಮಾನಿಗಳೇ? ಹಾಗಿದ್ದಲ್ಲಿ, ಬ್ರಾಡ್‍ವೆ ಪರಿಸರದಲ್ಲಿ ಓಡಾಡಿ, ಪ್ರದರ್ಶನಗಳನ್ನು ನೋಡಿ ಈ ವಿಶಿಷ್ಠ ಅನುಭವವನ್ನು ಪಡೆಯಲೇಬೇಕು.

ಮುಖ್ಯ ಪ್ರೇಕ್ಷಣೀಯ ಸ್ಥಳಗಳು

ಮ್ಯಾನ್‍ಹ್ಯಾಟನ್ನಿನ ಕೇಂದ್ರಭಾಗದಲ್ಲಿರುವ ಟೈಮ್ಸ್‍ಸ್ಕೇರ್‍ನಿಂದ ಅನೇಕ ಸ್ಥಳಗಳಿಗೆ ನಡೆದೇ ಹೋಗಬಹುದು; ಮೆಟ್ರೊ, ಬಸ್, ಟ್ಯಾಕ್ಸಿ ಸೌಕರ್ಯವೂ ಇದೆ.
ಗ್ರಾಂಡ್ ಸೆಂಟ್ರಲ್ ಸ್ಟೇಶನ್

48 ಎಕರೆ ಪ್ರದೇಶದಲ್ಲಿ, 44 ಪ್ಲಾಟ್‍ಫಾರ್ಮ್‍ಗಳ, 100 ಟ್ರಾಕ್‍ಗಳಿರುವ, ದೇಶದ ಅತ್ಯಂತ ಬೃಹತ್ ಹಾಗೂ ಸುಂದರವಾದ ರೈಲ್ವೆ ನಿಲ್ದಾಣ ನಿರ್ಮಾಣವಾದದ್ದು 1871ರಲ್ಲಿ. ಸೂಕ್ಷ್ಮವಾದ ನೈಪುಣ್ಯತೆಯಿಂದಲೂ, ಭವ್ಯವಾಗಿಯೂ, ನಿರ್ಮಿಸಿರುವ ಈ ಮಾದರಿ ರೈಲ್ವೆ ನಿಲ್ದಾಣವನ್ನು, ನೋಡಲೇಬೇಕು. ಇಲ್ಲಿಂದ ನ್ಯೂಯಾರ್ಕ್ ಮೆಟ್ರೊ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರೈಲ್ವೆ ಸಂಪರ್ಕವಿದೆ.

ಬ್ರ್ಯಾಂಟ್ ಪಾರ್ಕ್

ಮ್ಯಾನ್‍ಹಾಟನ್‍ಲ್ಲಿನ ಸಾವಿರಾರು ಆಫೀಸ್‍ಗಳಲ್ಲಿರುವುದು 1.6 ದಶಲಕ್ಷ ಉದ್ಯೋಗಿಗಳೆಂದೂ, ನಿವಾಸಿಗಳು 1.46 ದಶಲಕ್ಷವೆಂದೂ ಅಂದಾಜಿದೆ. ಜೊತೆಗೆ, ದಿನನಿತ್ಯ ಬಂದುಹೋಗುವ ಪ್ರವಾಸಿಗಳು, ವಿಧ್ಯಾರ್ಥಿಗಳನ್ನೆಲ್ಲಾ ಪರಿಗಣಿಸಿದರೆ, ಮ್ಯಾನ್‍ಹಾಟನ್ನಿನ ದಿನದ ಜನಸಂಖ್ಯೆ ಸುಮಾರು 4 ದಶಲಕ್ಷ. ಟೈಮ್ಸ್ ಸ್ಕೇರಿನ ಹತ್ತಿರದಲ್ಲಿರುವ ಬ್ರಾಂಟ್ ಪಾರ್ಕ್ ಅತ್ಯಂತ ಹೆಚ್ಚಿನ ಜನಸಾಂದ್ರತೆಯಿರುವ ಜನಪ್ರಿಯ ಪಾರ್ಕ್. ಮದ್ಯಾಹ್ನವಂತೂ ಸಾರ್ವಜನಿಕ ಫುಡ್ ಕೋರ್ಟ್‍ನಂತೆಯೇ! ಇಲ್ಲಿ ಅನೇಕ ಮನರಂಜನೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳೂ ನಡೆಯುತ್ತವೆ. ಬ್ರ್ಯಾಂಟ್ ಪಾರ್ಕ್ ಸಾರ್ವಜನಿಕ ಸ್ವತ್ತಾದರೂ, ಆಡಳಿತವನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದ್ದು, ಇದೊಂದು ಮಾದರಿ ವ್ಯವಸ್ಥೆಯೆನ್ನಲಾಗುತ್ತದೆ.
ಪಾರ್ಕಿನ ಪಕ್ಕದಲ್ಲೇ ಇರುವ ಸಾರ್ವಜನಿಕ ಗ್ರಂಥಾಲಯದಲ್ಲಿನ ಸಂಗ್ರಹಣೆ 53 ದಶಲಕ್ಷ! ಹಾಗಾಗಿ, ಜಗತ್ತಿನ ಮೂರನೇ ಅತ್ಯಂತ ಹಿರಿದಾದ ಗ್ರಂಥಾಲಯವೆನ್ನುವ ಹೆಗ್ಗಳಿಕೆ.

ಸೆಂಟ್ರಲ್ ಪಾರ್ಕ್

ಬೆಂಗಳೂರಿನ ಲಾಲ್ ಬಾಗ್ 240 ಎಕರೆಯಷ್ಟಾದರೆ, ಕಬ್ಬನ್ ಪಾರ್ಕ್ 300 ಎಕರೆಯಷ್ಟು; ಆದರೆ, 1857ರಲ್ಲಿ ನಿರ್ಮಿತವಾದ ಸೆಂಟ್ರಲ್ ಪಾಕ್ 843 ಎಕರೆಯಷ್ಟು ವಿಸ್ತಾರವಿದ್ದು, ಅಮೇರಿಕದ ಪ್ರಪ್ರಥಮ ಸಾರ್ವಜನಿಕ ಪಾರ್ಕ್. ಜಗತ್ತಿನ ಎರಡನೇ ಅತ್ಯಂತ ಜನಪ್ರಿಯ ಸ್ಥಳವೆನ್ನುವ ಹೆಗ್ಗಳಿಕೆಯ ಸೆಂಟ್ರಲ್ ಪಾರ್ಕ್‍ನಲ್ಲಿ 300ಕ್ಕೂ ಹೆಚ್ಚಿನ ಚಲನಚಿತ್ರಗಳು ಚಿತ್ರೀಕರಣವಾಗಿದೆ.

ವಿಭಿನ್ನವಾದ ಆಕರ್ಷಣೆಗಳಿರುವ ಪಾರ್ಕಿನ ಅಧಿಕೃತ ವೆಬ್‍ಸೈಟಿನಲ್ಲಿ ಪ್ರವಾಸಿಗರಿಗೆ ಚಟುವಟಿಕೆಗಳ ವಿವರ, ಮಾರ್ಗಗಳ ದೂರ ಮತ್ತು ನಕ್ಷೆಯ ಮಾಹಿತಿಯಿರುವುದರಿಂದ, ನಮ್ಮ ಚೈತನ್ಯ ಮತ್ತು ಸಮಯಕ್ಕೆ ಅನುಗುಣವಾಗಿ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 25,000 ವೃಕ್ಷಗಳಿರುವ ಸೆಂಟ್ರಲ್ ಪಾರ್ಕ್ ಅಸಂಖ್ಯಾತ ಜೀವ ವೈವಿಧ್ಯಗಳಿಗೂ ಪಕ್ಷಿ ಪ್ರಭೇದಗಳಿಗೂ ಆಶ್ರಯ. ಇಲ್ಲಿನ ಪ್ರಮುಖ ಆಕರ್ಷಣೆಗಳು ಹೀಗಿವೆ: ಸೇತುವೆಗಳು; ಕಾರಂಜಿಗಳು, ಶಿಲ್ಪಕಲಾಕೃತಿಗಳು, ಸ್ಮಾರಕಗಳು, ಮನರಂಜನೆಯ ಆಕರ್ಷಣೆಗಳು, ಮೃಗಾಲಯ, ಚಿತ್ರೋತ್ಸವಗಳು, ಉಪಾಹಾರಗೃಹಗಳು ಇತ್ಯಾದಿ. ಸೆಂಟ್ರಲ್ ಪಾರ್ಕಿನ ಸಂಪೂರ್ಣ ವೀಕ್ಷಣೆ ಒಂದು ದಿನದಲ್ಲಿ ಅಸಾಧ್ಯ; ಒಂದು ಸಣ್ಣ ರೌಂಡ್ ಹಾಕಿದರೆ ಕೂಡ ಸುಸ್ತಾಗುವುದು ಸಹಜವಾದ್ದರಿಂದ ಕೂರಲು 9000 ಮರದ ಬೆಂಚ್‍ಗಳಿವೆ!

ಆಪಲ್ ಸ್ಟೋರ್

ಇದೇನಿದು, ಆಪಲ್ ಸ್ಟೋರ್ ಒಂದು ಪ್ರೇಕ್ಷಣೀಯ ಸ್ಥಳವೇ ಎಂದು ಬೆರಗಾಗಬೇಡಿ. ಪ್ರಾಯಶಃ, ಈ ಖ್ಯಾತಿಗೆ ಲಾಯಕ್ಕಾದÀ ಸೆಂಟ್ರಲ್ ಪಾರ್ಕ್ ಬಳಿಯಿರುವ ಆಪಲ್ ಸ್ಟೋರ್ ವರ್ಷವಿಡೀ, ದಿನದ 24 ಗಂಟೆಯೂ ತೆರೆದಿರುತ್ತದೆ.

ಗ್ರೌಂಡ್ ಜಿûೀರೊ

2001ರ ಸೆಪ್ಟೆಂಬರ್ ತಿಂಗಳ 9ರಂದು, ನ್ಯೂಯಾರ್ಕ್‍ನಲ್ಲಿ ನಡೆದ ದುರಂತದ ಸ್ಥಳದಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಾಣವಾಗಿದೆ. ಮ್ಯಾನ್‍ಹ್ಯಾಟನ್‍ನ ದಕ್ಷಿಣದ ತುದಿಯಲ್ಲಿರುವ ಗ್ರೌಂಡ್ ಜಿûೀರೊ ಹತ್ತಿರದಿಂದ ಲಿಬರ್ಟಿ ರಾಷ್ಟ್ರೀಯ ಸ್ಮಾರಕಕ್ಕೆ ಮತ್ತು ಎಲಿಸ್ ದ್ವೀಪಕ್ಕೆ ಭೇಟಿ ನೀಡಬಹುದು.

ಎಂಪೈರ್ ಸ್ಟೇಟ್ ಬಿಲ್ಡಿಂಗ್

ಸುಮಾರು 40 ವರ್ಷಗಳ ಕಾಲ, 1970ರವರೆಗೆ ಅತ್ಯಂತ ಎತ್ತರದ ಗಗನಚುಂಬಿಯೆಂಬ ಹಿರಿಮೆಯ 103 ಮಹಡಿಗಳ ಎಂಪೈರ್ ಸ್ಟೇಟ್ ಬಿಲ್ಡಿಂಗ್, ವಾಸ್ತುಶಿಲ್ಪದ ಅದ್ಭುತ ಮಾದರಿ. ಟೈಮ್ಸ್ ಸ್ಕೇರಿನಿಂದ ಕೇವಲ ಐದು ನಿಮಿಷಗಳ ನಡಿಗೆಯಲ್ಲಿ ರುವ ಎಂಪೈರ್ ಸ್ಟೇಟ್‍ನ ಮಹಡಿಯಿಂದ ಇಡೀ ಮ್ಯಾನ್‍ಹ್ಯಾಟನ್‍ನ ಅಮೋಘವಾದ, ದೃಶ್ಯಾವಳಿ ಅವರ್ಣನೀಯ.

ಟೈಮ್ಸ್ ಸ್ಕೇರ್ ನ್ಯೂಯಾರ್ಕ್‍ನ ಶಾಪಿಂಗ್ ಮತ್ತು ಮನರಂಜನೆಯ ಕೇಂದ್ರಬಿಂದು. ಸುತ್ತಮುತ್ತಲಿನ ಶಾಪಿಂಗ್ ಅವಕಾಶಗಳು, ಬೀದಿ ನಾಟಕಗಳು, ಬಣ್ಣಬಣ್ಣದ ಪೋಷಾಕುಗಳನ್ನು ಧರಿಸಿ ನಡೆಸುವ ಪ್ರದರ್ಶನಗಳಿಂದ ಮನರಂಜನೆ ಅಪರಿಮಿತ.

ಅಮೇರಿಕ ಈಗ ಕಲ್ಪನೆಯ ಮಾಯಾಲೋಕವಲ್ಲ; ಜಗತ್ತಿನ ನಾಗರಿಕತೆಯ ಅಳಿವು-ಉಳಿವಿನ ಅನೇಕ ಪ್ರಶ್ನೆಗಳನ್ನು ಮೂಡಿಸುತ್ತದೆ. ಆದರೂ, ಸುಮಾರು ಮೂರು ದಶಲಕ್ಷ ಭಾರತೀಯರಿರುವ ಶ್ರೀಮಂತ ದೇಶವಿದು. ನಮ್ಮವರು, ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿಯೂ, ವಾಣಿಜ್ಯೋದ್ಯಮದಲ್ಲೂ ಪ್ರಭಾವೀ ಸಮುದಾಯ.

ನ್ಯೂಯಾರ್ಕ್‍ಗೆ ಹೋದಲ್ಲಿ, ಟೈಮ್ಸ್ ಸ್ಕೇರ್‍ಗಾಗಿ ಕನಿಷ್ಠ ಒಂದು ದಿನ ಮೀಸಲಾಗಿಸಿ.

ಜಗತ್ತಿನ ಅತ್ಯಂತ ಜನಪ್ರಿಯ ಪ್ರೇಕ್ಷಣೀಯ ಸ್ಥಳಗಳು*
ಪ್ರವಾಸಿ ಸ್ಥಳದಶಲಕ್ಷ ಪ್ರವಾಸಿಗಳು [ವರ್ಷದಲ್ಲಿ]
ಟೈಮ್ಸ್ ಸ್ಕೇರ್, ನ್ಯೂಯಾರ್ಕ್39.20
ಸೆಂಟ್ರಲ್ ಪಾರ್ಕ್, ನ್ಯೂಯಾರ್ಕ್38.00
ಲಾಸ್ ವೇಗಾಸ್ ಪಟ್ಟಿ29.47
ನಯಾಗರ ಫಾಲ್ಸ್, ಅಮೇರಿಕ/ಕೆನಡ22.50
ಗ್ರಾಂಡ್ ಸೆಂಟ್ರಲ್ ಸ್ಟೇಶನ್, ನ್ಯೂಯಾರ್ಕ್21.60
ಡಿಸ್ನಿ ಲ್ಯಾಂಡ್, ಒರ್ಲಾಂಡೊ16.97
ಗ್ರಾಂಡ್ ಬeóÁರ್, ಇಸ್ತಾಂಬುಲ್15.00
ಗ್ರೇಟ್ ವಾಲ್ ಅಫ್ ಚೈನ9.00
ದಿ ಲೊರೆ ಮ್ಯೂಸಿಯಮ್, ಪ್ಯಾರಿಸ್8.50
ನಾಸ ಮ್ಯೂಸಿಯಮ್, ವಾಷಿಂಗ್ಟನ್8.30
ಸಿಡ್ನಿ ಅಪೇರ, ಸಿಡ್ನಿ7.40
ಐಫೆಲ್ ಟವರ್, ಪ್ಯಾರಿಸ್6.70
ದಿ ಕೊಲೋಸಿಯಮ್, ರೋಮ್5.11
ಪಿರಮಿಡ್ಸ್, ಕೈರೊ4.00
ತಾಜ್ ಮಹಲ್, ಆಗ್ರ3.00
Information: Travel and Leisure magazine, October, 2011

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *