ಭೂಗರ್ಭದಲ್ಲೊಂದು ನಗರ

ಈ ಸೋಜಿಗ ನಗರದ ಹೆಸರು ಪಾತ್; ಇದರ ಸುತ್ತಳತೆ 4 ದಶಲಕ್ಷ ಚದರಡಿ; ಇಲ್ಲಿದೆ ಜಗತ್ತಿನ ಅತ್ಯಂತ ದೊಡ್ಡ ಶಾಪಿಂಗ್ ವ್ಯವಸ್ಥೆ ಆದರೆ, ಈ ನಗರ ಭೂಮಿಯ ಮೇಲಿಲ್ಲ!

ಒಂದು ಕ್ಷಣ ಊಹಿಸಿ! ಬೆಂಗಳೂರು ನಗರದ ಕಂಟೋನ್‍ಮೆಂಟ್ ರೈಲು ನಿಲ್ದಾಣದಿಂದ ಕನ್ನಿಂಗ್ ಹಾಮ್ ರಸ್ತೆ, ಅಲ್ಲಿಂದ ಶಿವಾಜಿ ನಗರ, ರಸೆಲ್ ಮಾರ್ಕೆಟ್, ಕಮರ್ಶಿಯಲ್ ಸ್ಟ್ರೀಟ್, ಮುಖಾಂತರ ಬ್ರಿಗೇಡ್ ರಸ್ತೆ, ಎಂ.ಜಿ.ರೋಡ್ ಮತ್ತು ಸೇಂಟ್ ಮಾಕ್ರ್ಸ್ ರಸ್ತೆಗೆ ನಡೆದು ಬರಲು ಸುಮಾರು ಮೂವತ್ತು ನಿಮಿಷಗಳಲ್ಲಿ ಸಾಧ್ಯವೇ? ಅದೂ ಮಾಲಿನ್ಯವಿಲ್ಲದ ವಾತಾವರಣದಲ್ಲಿ; ಆರಾಮದಾಯಕವಾದ ನಡಿಗೆಯಲ್ಲಿ!

ಇದು ಕಲ್ಪನೆಯ ಅತಿರೇಕವೆನ್ನಬೇಡಿ! ಇದು ಪ್ರಾಯಶಃ ನಮ್ಮ, ನಿಮ್ಮ ಕಾಲದಲ್ಲಿ ನಮ್ಮ ದೇಶದಲ್ಲಿ ಆಗಲಿಕ್ಕಿಲ್ಲ. ಆದರೆ, ಇಂತಹ ಸೋಜಿಗವೊಂದು ದೂರದ ಟೊರೊಂಟೊ ನಗರದಲ್ಲಿದೆ. ಈ ಸೋಜಿಗವನ್ನು ನೋಡಿ, ಖುಶಿಯಾಗಿ ನಡೆದಾಡಿ, ಜೊತೆಗೆ ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದ ಅಪೂರ್ವ ಅನುಭವ ನಮ್ಮದಾಗಿತ್ತು.

ಉತ್ತರ ಅಮೇರಿಕಾದಲ್ಲಿ ನಿರಂತರವಾಗಿ ಬೀಳುವ ಹಿಮರಾಶಿಯಲ್ಲಿ ಕೆನಡ ದೇಶದ ಮುಖ್ಯ ವಾಣಿಜ್ಯ ಕೇಂದ್ರವಾದ ಟೊರೊಂಟೊ ನಗರ ಸಂಪೂರ್ಣವಾಗಿ ಆವೃತವಾಗುವುದು ಸಹಜ. ಹಾಗಾಗಿ, ನಾವು ಟೊರೊಂಟೊಗೆ ಭೇಟಿ ನೀಡಿದ ಸಮಯದಲ್ಲಿ, ರಕ್ತ ಹೆಪ್ಪುಗಟ್ಟಿಸುವಂತಹ ಛಳಿ. ನಮ್ಮೊಟ್ಟಿಗಿದ್ದ ಪ್ರವಾಸ ತಂಡದೊಡನೆ ಆ ದಿನದಮಟ್ಟಿಗಷ್ಟು ನಾನು ಮತ್ತು ನನ್ನ ಶ್ರೀಮತಿ ಬೇರ್ಪಟ್ಟು ನಗರದ ಪ್ರಮುಖ ರೈಲು ನಿಲ್ದಾಣದ ಮುಂಬಾಗದಲ್ಲಿ ಕಾಲೇಜಿನ ನನ್ನ ಸಹಪಾಠಿಯನ್ನು ಭೇಟಿ ಮಾಡುವ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು.

ಮುಂಜಾನೆಯ ಛಳಿಯಲ್ಲಿ ಗಡಗಡ ನಡುಗುತ್ತಲೇ ನಡೆದು, ರೈಲು ನಿಲ್ದಾಣದ ಮುಂಭಾಗದಲ್ಲೇ ಕಾಯುತ್ತಿದ್ದ ಸ್ನೇಹಿತ ಲೆಸ್ಲಿಯನ್ನು ಬಿಗಿದಪ್ಪಿದ ಉತ್ಸಾಹದಲ್ಲಿ ಕ್ಷಣಮಾತ್ರಕ್ಕೆ ಛಳಿ ಮಾಯವಾಗಿತ್ತು. ಉಭಯ ಕುಶಲೋಪರಿಯ ನಂತರ, ನಗರದ ವಿಶೇಷ ಪ್ರೇಕ್ಷಣೀಯ ಸ್ಥಳಗಳನ್ನು ನಿಮಗೆ ಪರಿಚಯಿಸುತ್ತೇನೆ; ಅದೂ ಬೆಚ್ಚಗಿನ ವಾತಾವರಣದಲ್ಲಿ ಎಂದಾಗ ಆಶ್ಚರ್ಯ! ಜೊತೆಗೆ, ಅನುಕೂಲಕ್ಕಿಂತಲೂ ಅನಾನುಕೂಲವೆಂದೆನಿಸುತ್ತಿದ್ದ ಮಂಕಿ ಕ್ಯಾಪ್, ಗ್ಲೋವ್ಸ್, ಸ್ವೆಟರ್, ಜಾಕೆಟ್‍ಗಳನ್ನು ಆ ದಿನವಾದರೂ ಕಿತ್ತೊಸೆಯುವ ಖುಶಿಯೂ ಮನದಲ್ಲಿತ್ತು.

ಭೂಗರ್ಭದಲ್ಲಿನ ನಗರ-ಪಾತ್

ರೈಲ್ವೆ ನಿಲ್ದಾಣದ ಪಕ್ಕದಲ್ಲೇ ಇದ್ದ ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಬೇರಾವುದೋ ಲೋಕದಲ್ಲಿ ಹೋದಂತ ಅನುಭವ. ಇದೇ ಪಾತ್, ಟೊರೊಂಟೊ ಭೂಗರ್ಭದಲ್ಲಿನ ಇನ್ನೊಂದು ನಗರ.

ನೀವು ಕೆಲಸದ ನಿಮಿತ್ತ ಗ್ರಾಹಕರನ್ನು ಭೇಟಿಯಾಗಬೇಕೆ? ಬಸ್, ಮೆಟ್ರೊ, ರೈಲಿನಲ್ಲಿ ಹೋಗಬೇಕೆ? ಪ್ರವಾಸಿಗಳಾಗಿ ನಗರ ಪರ್ಯಟನ ಮಾಡಬೇಕೆ? ನಮಗಾದಂತೆ ಸುರಿಯುವ ಹಿಮರಾಶಿಯಿಂದ ಬಚಾವ್ ಆಗಬೇಕೆ? ನಗರದ ಕೇಂದ್ರಭಾಗದಲ್ಲಿ ಯಾವುದೇ ಕೆಲಸವಿದ್ದರೂ, ಸರಿ ಟೊರೊಂಟೊದ ಭೂಗರ್ಭದಲ್ಲಿರುವ 30 ಕಿ.ಮೀ.ನಷ್ಟಿರುವ ವಾಕ್‍ವೆ ಪಾತ್ [PATH] ಹಿಡಿದರೆ, ಸಾಕು, ನಿಮ್ಮ ಎಲ್ಲ ಕೆಲಸ ಸುಗಮ.

ಅಷ್ಟೇ ಅಲ್ಲ! ಗಿನ್ನೀಸ್ ವಲ್ರ್ಡ್ ರೆಕಾಡ್ರ್ಸ್ ಪ್ರಕಾರ, 4 ದಶಲಕ್ಷ ಚದರ ಅಡಿಯಷ್ಟು ಶಾಪಿಂಗ್ ವಿಸ್ತೀರ್ಣವಿರುವ ಪಾತ್, ಪ್ರಪಂಚದ ಅತ್ಯಂತ ದೊಡ್ಡ ಅಂಡರ್‍ಗ್ರೌಂಡ್ ಶಾಪಿಂಗ್ ಕಾಂಪ್ಲೆಕ್ಸ್. ಸಾರ್ವಜನಿಕ ಬಸ್, ರೈಲು, ಮೆಟ್ರೊ ಉಪಯೋಗಿಸುವ 2 ಲಕ್ಷ ನಿವಾಸಿಗಳೂ, ಅಸಂಖ್ಯಾತ ಪ್ರವಾಸಿಗಳೂ ಪ್ರತಿನಿತ್ಯ ಈ ವ್ಯವಸ್ಥೆಯ ಫಲಾನುಭವಿಗಳು.

ಪಾತ್ ಚರಿತ್ರೆ

ಪಾತ್‍ನ ಹಿನ್ನೆಲೆಯನ್ನು ತಿಳಿದರೆ ಬೆರಗಾಗುತ್ತೀರಿ. ಏಕೆಂದರೆ, ಟೊರೊಂಟೊ ನಗರದ ಕೇಂದ್ರ ಭಾಗದಲ್ಲಿದ್ದ ಈಟನ್ ಡಿಪಾರ್ಟ್‍ಮೆಂಟ್ ಸ್ಟೋರ್‍ನ ಎರಡು ಶಾಖೆಗಳನ್ನು ಪಾದಚಾರಿಗಳು ಸುಲಭವಾಗಿ ತಲುಪಲು ಜೇಮ್ಸ್ ರಸ್ತೆಯ ಬಳಿ ಸುರಂಗ ಮಾರ್ಗವನ್ನು ಮಾಡಲಾಯಿತು. ಈ ಸುರಂಗ ಮಾರ್ಗವನ್ನು ನಿರ್ಮಿಸಿದ್ದು 1900ನೇ ಇಸವಿಯಲ್ಲಿಯೆಂದರೆ, ಅಚ್ಚರಿಯಾಗುವುದಲ್ಲವೇ?

ಈ ಪ್ರದೇಶದಲ್ಲಿ ಅನೇಕ ಸುರಂಗ ಮಾರ್ಗಗಳನ್ನು 1927ರ ಸುಮಾರಿಗೆ ಯೂನಿಯನ್ ರೈಲ್ವೆ ನಿಲ್ದಾಣ ಮತ್ತು ಇತರ ಕಟ್ಟಡಗಳ ಸಂಪರ್ಕಕ್ಕಾಗಿ ನಿರ್ಮಿಸಲಾಯಿತು. ನಗರಗಳ ಜನಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದಂತೆ ದೂರದೃಷ್ಟಿಯುಳ್ಳ ಚಿಂತಕರೂ, ಯೋಜಕರೂ ಅವಶ್ಯ. 1960ರ ದಶಕದಲ್ಲಿ ಟೊರೊಂಟೊ ನಗರದ ಅಂಡರ್‍ಗ್ರೌಂಡ್ ವ್ಯವಸ್ಥೆಗೆ ನಾಂದಿ ಹಾಡಿದ ಅಧಿಕಾರಿಯೇ ಮಾಥ್ಯು ಲಾಸನ್. ಆ ಕಾಲಕ್ಕೆ ನಗರದ ಸಂಚಾರಿ ದಟ್ಟಣೆ ಹೆಚ್ಚಾಗಿ, ಪಾದಚಾರಿ ಮಾರ್ಗಗಳು ಕಿರಿದಾಗಿತ್ತು; ರಸ್ತೆಬದಿಯ ವ್ಯಾಪಾರಿಗಳನ್ನು ಹೊರದೂಡಲು ಬೇಡಿಕೆ ಮತ್ತು ವಿರುದ್ಧವಾಗಿ ಪ್ರತಿಭಟನೆಯೂ ನಡೆದಿತ್ತು. ಲಾಸನ್, ಆಗ ನಿರ್ಮಾಣವಾಗುತ್ತಿದ್ದ ಎಲ್ಲ ಬಹುಮಹಡಿ ಕಟ್ಟಡಗಳ ವಿನ್ಯಾಸಕಾರರಿಗೆ ಅಂಡರ್‍ಗ್ರೌಂಡ್ ಪಾರ್ಕಿಂಗ್ ಮತ್ತು ಶಾಪಿಂಗ್ ಸೌಲಭ್ಯವನ್ನು ನಿರ್ಮಿಸಲು ಹುರುದುಂಬಿಸಿ ಮತ್ತು ಈ ಎಲ್ಲ ಅಂಡರ್‍ಗ್ರೌಂಡ್ ವ್ಯವಸ್ಥೆಗೊಂದು ಸಮಗ್ರವಾದ ಸಂಪರ್ಕವನ್ನು ಕಲ್ಪಿಸುವ ಆಶ್ವಾಸನೆ ನೀಡಿ, ಇಂದಿನ ಪಾತ್‍ಗೆ ಕಾರಣಕರ್ತರಾದರು. ಆಗಿಂದಾಗ್ಗೆ ಜನದಟ್ಟಣೆ ಹೆಚ್ಚಾಗುತ್ತಿದ್ದಂತೆ, ಪಾತ್‍ನ ನವೀಕರಣ ಮತ್ತು ವಿಸ್ತೀರ್ಣದ ಕಾರ್ಯ ನಿರಂತರವಾಗಿ ಆಗುತ್ತಿತ್ತು.

ಇಂದು ಬಳಕೆಯಲ್ಲಿರುವ ಪಾತ್‍ನ ಅಮೂಲಾಗ್ರ ಸುಧಾರಣೆಯ ಯೋಜನೆಯನ್ನು 1988ರಲ್ಲಿ ನಿರ್ಧರಿಸಿ, 1992ರಲ್ಲಿ ಅದನ್ನು ಸಾರ್ವಜನಿಕರ ಬಳಕೆಗೆ ಉದ್ಘಾಟಿಸಲಾಯಿತು.

ಪಾತ್ ಅಂದರೆ, ಸಾಮಾನ್ಯವಾಗಿ ಅರ್ಥೈಸಲಾಗುವ ‘ಮಾರ್ಗ’ ಎಂದಷ್ಟೇ ಅಲ್ಲ; ಇಂಗ್ಲೀಷಿನ ಪಿ-ಪೂರ್ವ, ಎ-ಪಶ್ಚಿಮ, ಟಿ-ಉತ್ತರ ಮತ್ತು ಎಚ್-ದಕ್ಷಿಣ ದಿಕ್ಕನ್ನು ಸೂಚಿಸುತ್ತದೆ; ಈ ನಾಲ್ಕು ದಿಕ್ಕುಗಳನ್ನು ಸೂಚಿಸಲು ವಿವಿಧ ಬಣ್ಣಗಳನ್ನು ಬಳಸಲಾಗಿದೆ.

ಟೊರೊಂಟೊ ಪ್ರೇಕ್ಷಣೀಯ ಸ್ಥಳಗಳು

ಸ್ನೇಹಿತ ಲೆಸ್ಲಿಯ ಜೊತೆ ನಗರದ ಕೆಲವು ಮುಖ್ಯ ಸ್ಥಳಗಳನ್ನು ಪಾತ್ ಮುಖಾಂತರ ಆಹ್ಲಾದಕರ ವಾತಾವರಣದಲ್ಲಿ ನೋಡಿದ ಅನುಭವ, ನಿಜಕ್ಕೂ ಅದ್ಭುತ.

ಸಿ.ಎನ್.ಟವರ್: 

ಆಧುನಿಕ ಜಗತ್ತಿನ ಅದ್ಭುತಗಳಲ್ಲೊಂದೆಂದು ಪರಿಗಣಿಸಲಾಗುವ ಸಿ.ಎನ್. ಟವರ್ ಸುಮಾರು 34 ವರ್ಷಗಳವರೆಗೆ, ಅಂದರೆ 2010ರವರೆಗೆ, ಜಗತ್ತಿನ ಅತ್ಯಂತ ಎತ್ತರದ ಕಟ್ಟಡವೆಂದು ಖ್ಯಾತಿ ಪಡೆದಿತ್ತು. ಇಂದಿಗೂ, ಸುಮಾರು 2 ದಶಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ಸಿ.ಎನ್. ಟವರ್, ಸಂಪರ್ಕ ವ್ಯವಸ್ಥೆಗಾಗಿ ನಿರ್ಮಿಸಿದ ವೀಕ್ಷಣಾಲಯ.

ಗ್ಲಾಸ್ ಫ್ಲೋೀರ್

50ನೇ ಮಹಡಿಯಲ್ಲಿರುವ ಗ್ಲಾಸ್ ಫ್ಲೋರ್ ಇಲ್ಲಿನ ಅತ್ಯಂತ ಜನಪ್ರಿಯ ಆಕರ್ಷಣೆ; ನಿಮ್ಮ ಸ್ಥೈರ್ಯ, ಎದೆಗಾರಿಕೆಯನ್ನು ಪರೀಕ್ಷಿಸುವ ತಾಣ! ಏಕೆಂದರೆ, ಇಲ್ಲಿನ ಗ್ಲಾಸಿನ ನೆಲದ ಮೇಲೆ ನಿಂತು, ನಡೆದಾಡುವ ಅಸಾಧ್ಯವನ್ನು ಸಾಧಿಸಲು ಎದೆಗಾರಿಕೆಯಿರಲೇಬೇಕು. ಪಾರದರ್ಶಕ ಗ್ಲಾಸಿನ ಮೇಲೆ ನಡೆದಾಡುವಾಗ 1122 ಅಡಿಯ ಕೆಳಗೆ ಕಾಣುವ ಉದ್ಯಾನವನ, ರಸ್ತೆಯಲ್ಲಿನ ವಾಹನಗಳ ದೃಶ್ಯ, ಭಯ, ಆತಂಕ, ಆಶ್ಚರ್ಯವೆಲ್ಲವನ್ನೂ ಒಮ್ಮೆಲೇ ತರುತ್ತದೆ.

ಆದರೆ ಭಯ ಪಡುವ ಅಗತ್ಯವಿಲ್ಲ; ಏಕೆಂದರೆ, ಉತ್ಕೃಷ್ಟವಾದ ಎರಡು ಪ್ರತ್ಯೇಕ ಗ್ಲಾಸಿನ ಪದರಗಳಿಂದ ತಯಾರಿಸಿರುವ ಈ ನೆಲ 1500 ಕೆ.ಜಿ ತೂಕವಿರುವ 12 ಹಿಪ್ಪೊಪೊಟಮಸ್‍ಗಳ ಭಾರವನ್ನು ತಡೆಯಬಲ್ಲದಂತೆ!

ಎಡ್ಜ್ ವಾಕ್

ಗ್ಲಾಸ್ ಫ್ಲೋರಿನ ಮೇಲೆ ಆರಾಮವಾಗಿ ನಡೆದಾಡುವರಿಗೆ ಇತ್ತೀಚೆಗಷ್ಟೇ ಶುರುವಾಗಿರುವ ಇನ್ನೊಂದು ಸಾಹಸಮಯ ಆಕರ್ಷಣೆ. 1168 ಆಡಿಯ ಮೇಲಿರುವ 116ನೇ ಮಹಡಿಯ ಗೋಡೆಯಿಂದ ಹೊರಚಾಚಿದ್ದು, ಯಾವುದೇ ತಡೆಗಟ್ಟಿಲ್ಲದ ನೆಲದ ಮೇಲೆ ನಡೆಯುವುದೇ ಎಡ್ಜ್ ವಾಕ್. 6 ಪ್ರವಾಸಿಗರ ಗುಂಪಿನಲ್ಲಿ ನಡೆಸುವ ಈ ಕ್ರೀಡೆಯಲ್ಲಿ, ಶರೀರಕ್ಕೆ ಸುರಕ್ಷತಾ ಸರಪಳಿಯನ್ನು ಬಿಗಿದು, ಮೇಲಿರುವ ಟ್ರಾಲಿಗೆ ಅಳವಡಿಸಿ, ಯಾವುದೇ ರೀತಿಯ ಅಪಾಯವಿಲ್ಲದೆ, ಆಕಾಶದಲ್ಲಿ ತೇಲಾಡುತ್ತಾ, ಟೊರೊಂಟೊ ದರ್ಶನವನ್ನು ವಿಶಿಷ್ಟ ರೀತಿಯಲ್ಲಿ ಅನುಭವಿಸುವ ಅವಕಾಶ! ಈ ಸಾಹಸಮಯ ಕ್ರೀಡೆಯನ್ನು ಎಲ್ಲ ರೀತಿಯ ಸುರಕ್ಷತೆ, ಭದ್ರತೆಯ ಕ್ರಮಗಳನ್ನು ಅಳವಡಿಸಿ, ನಿರಪಾಯ ಸ್ಥಿತಿಯಲ್ಲಿ ಏರ್ಪಡಿಸಿರುವುದು ಇಲ್ಲಿನ ವಿಶೇಷ.

ಈ ರೋಮಾಂಚನಕಾರಿ ಅನುಭವಕ್ಕೆ 175 ಕೆನಡಿಯನ್ ಡಾಲರ್ ಅಂದರೆ ಸುಮಾರು ಹತ್ತು ಸಾವಿರ ರೂಪಾಯಿ. ನಿಮ್ಮ ಭಗೀರಥ ಪ್ರಯತ್ನದ ಸಾಹಸವನ್ನು ದೇಶಕ್ಕೆ ಮರಳಿದ ಮೇಲೆ ಸ್ನೇಹಿತರಿಗೆ ತೋರಿಸಲು ವಿಡಿಯೋ, ಫೋಟೊ, ಮತ್ತು ಯೋಗ್ಯತಾ ಪತ್ರ ಕೊಡುತ್ತಾರೆ.

ರೋಜರ್ಸ್ ಸೆಂಟರ್

ವಿವಿಧೋದ್ದೇಶಗಳಿಗಾಗಿಯೇ ನಿರ್ಮಿಸಿರುವ ಈ ಬೃಹತ್ ಸ್ಟೇಡಿಯಮ್ಮಿನಲ್ಲಿ 54,000 ಪ್ರೇಕ್ಷಕರು ಆಸೀನರಾಗಲು ವ್ಯವಸ್ಥೆಯಿದೆ. ಪ್ರತಿಷ್ಟಿತ ಫುಟ್‍ಬಾಲ್, ಬೇಸ್‍ಬಾಲ್ ಪಂದ್ಯಗಳು, ಸಮ್ಮೇಳನ, ವಾಣಿಜ್ಯ ಪ್ರದರ್ಶನಗಳೆಲ್ಲವಕ್ಕೂ ಇದೇ ಆದ್ಯತೆಯ ಸ್ಥಳ. ವಿಶೇಷವೆಂದರೆ, ಮೋಟಾರ್ ಚಾಲಿತ ಮಡಚಿಕೊಳ್ಳುವ ಛಾವಣಿಯನ್ನು ಮೊಟ್ಟಮೊದಲ ಬಾರಿಗೆ ನಿರ್ಮಿಸಲಾಗಿತ್ತು. 348 ಕೋಣೆಗಳ ಬೃಹತ್ ಹೋಟೆಲ್ ಸಹ ಈ ಸಂಕೀರ್ಣದಲ್ಲಿದೆ.

ಹಾಕಿ ಹಾಲ್ ಅಫ್ ಫೇಮ್

ಹಿಮರಾಶಿಯ ಈ ದೇಶದಲ್ಲಿ ಪ್ರಖ್ಯಾತವಾದ ಕ್ರೀಡೆಗಳಲ್ಲಿ ಪ್ರಮುಖವಾಗಿರುವ ಐಸ್ ಹಾಕಿಯ ನೆನಪಿನಲ್ಲಿ ನಿರ್ಮಿಸಿರುವ ಸ್ಮಾರಕವೇ ಹಾಕಿ ಹಾಲ್ ಅಫ್ ಫೇಮ್. ಈ ಕ್ರೀಡೆಗೆ ಸಂಬಂಧಪಟ್ಟಂತೆ ಪ್ರಖ್ಯಾತ ತಂಡ ಮತ್ತು ಆಟಗಾರರ ಕುರಿತು ಸಂಗ್ರಹಾಲಯವಿದೆ. ಪ್ರವಾಸಿಗರು ಕಂಪ್ಯೂಟರ್ ಮೂಲಕ ಐಸ್ ಹಾಕಿಯಾಡುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ.

ರಾಯ್ ಥಾಮ್ಸನ್ ಹಾಲ್

ಅತ್ಯಂತ ವಿಶಿಷ್ಟವಾದ ಶೈಲಿಯಲ್ಲಿ ಕಟ್ಟಿರುವ ಈ ಕಲಾಮಂದಿರ ಸಂಗೀತ, ವಾದ್ಯಗೋಷ್ಠಿ ಕಾರ್ಯಕ್ರಮಗಳಿಗೆ ಹೆಸರುವಾಸಿ. ವಿಶ್ವವಿಖ್ಯಾತ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುವುದಿಲ್ಲೇ.

ಪಾತ್ ಉಪಯೋಗಿಸಿ ನೋಡುವ ಇನ್ನೂ ಅನೇಕ ಆಕರ್ಷಣೆಗಳಿವೆ. ಮನೆಯಿಂದ ಹೊರಬಂದರೆ, ಹೆಚ್ಚುಕಮ್ಮಿ ವರ್ಷವಿಡೀ ಕಾಡುವ ಭಯಂಕರ ಛಳಿಯಿಂದ ಪಾರಾಗಲು, ಆಫೀಸಿಗೆ ಹೋಗಲು ಅಥವಾ ದೈನಂದಿನ ಕಾರ್ಯಕ್ರಮಗಳಿಗಾಗಿ ಟೊರೊಂಟೊ ನಾಗರಿಕರು ಪರದಾಡಬೇಕಿಲ್ಲ. ಇಡೀ ದಿನ ಅಥವಾ ರಾತ್ರಿಯನ್ನು ಪಾತ್ ಉಪಯೋಗಿಸುತ್ತ ಸುತ್ತಾಡಬಹುದು; ಅವಶ್ಯಕತೆಗಳೇನೇ ಇರಲಿ, ಪಾತ್ ನಿಜಕ್ಕೂ ದಾರಿ ತೋರಿಸುವ, ಸಹಾಯಹಸ್ತದಂತೆ.

ಕೆನಡಗೆ ವಲಸೆ ಹೋಗಿರುವವರಲ್ಲಿ ಲೆಸ್ಲಿಯ ಕುಟುಂಬವೂ ಒಂದು. ಏಕೆಂದರೆ, ಈ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆ ಅತ್ಯಂತ ಧೃಡವಾಗಿಯೂ, ಪ್ರಗತಿಪರವಾಗಿಯೂ ಇದೆ. ಜಗತ್ತಿನ ವಿವಿಧ ದೇಶಗಳಿಂದ ವಲಸೆ ಹೋಗಿರುವ ನಾಗರಿಕರು, ಈ ಸಮಾಜವನ್ನು ಬಹುಸಾಂಸ್ಕೃತಿಕವಾಗಿ ಮಾರ್ಪಡಿಸಿದ್ದಾರೆ.

ಪ್ರವಾಸ ಮುಗಿಸಿ ಐದು ವರ್ಷದಷ್ಟೇ ಹಿಂದೆ ಕಾರ್ಯಾಚರಣೆ ಆರಂಭಿಸಿದ ಬೆಂಗಳೂರಿನ ವಿಮಾನನಿಲ್ದಾಣದಲ್ಲಿ ಬಂದಿಳಿದಾಗ ಅಮೇರಿಕ, ಕೆನಡ ದೇಶದ ನೆನಪುಗಳು ಹಸಿರಾಗಿತ್ತು. ದೂರ ಪ್ರಯಾಣದ ಆಯಾಸ, ಇಮಿಗ್ರೇಷನ್ ಕೌಂಟರಿನಲ್ಲಿನ ವಿಳಂಬದಿಂದ ಮತ್ತಷ್ಟು ಆಯಾಸ, ಬೇಸರಕ್ಕೆ ಕಾರಣವಾಯಿತು. ಹೊರಬರುತ್ತಿದ್ದಂತೆ, ಮಂದಗತಿಯಲ್ಲಿ ನಡೆಯುತ್ತಿದ್ದ ವಿಮಾನ ನಿಲ್ದಾಣದ ವವೀಕರಣ ಮತ್ತು ವಿಸ್ತರಣ ಕಾರ್ಯ ಕಾಣಿಸುತ್ತಿದ್ದಂತೆ, ನಾವೇಕೆ ಹೀಗೆಂಬ ಚಿಂತನೆ ಕಾಡಲಾರಂಬಿಸಿತು. ಎಲ್ಲ ಪ್ರಗತಿಪರ ದೇಶಗಳಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಅಥವಾ ವಿಸ್ತರಣೆಯೆಂದರೆ ಮುಂದಿನ 10-20 ವರ್ಷಗಳ ಅವಶ್ಯಕತೆಗಳನ್ನು ಗಮನಿಸಿಯೇ ಮಾಡುತ್ತಾರೆ. ಆದರೆ ನಮ್ಮಲ್ಲಿ ಹಾಗಲ್ಲ; ಮೊದಲ ಐದಾರು ವರ್ಷ ಎಲ್ಲಿ ಕಟ್ಟಬೇಕೆಂದು ರಾಜ್ಯ-ಕೇಂದ್ರ ಸರ್ಕಾರಗಳ ಚರ್ಚೆ; ವಿವಾದ; ರಿಯಲ್ ಎಸ್ಟೇಟ್ ಲಾಬಿಗಳ, ರಾಜಕಾರಣಿಗಳ, ಉದ್ದಿಮೆದಾರರ ಸಂಚು, ಪಿತೂರಿ. ಅದಾದ ನಂತರ ವಿಮಾನ ನಿಲ್ದಾಣದ ನಿರ್ಮಾಣ ಶುರು; ಐದಾರು ವರ್ಷಗಳ ಯಾತನೆಯ ನಂತರ ವಿಮಾನ ನಿಲ್ದಾಣದ ಕಾರ್ಯಾಚರಣೆ ಶುರುವಾಗುತ್ತಿದ್ದಂತೆ, ನಗರದ ಕೇಂದ್ರ ಭಾಗದಲ್ಲಿಂದ ಸಿಗ್ನಲ್ ರಸ್ತೆ ಬೇಕಲ್ಲವೇ ಎಂಬ ಚಿಂತನೆ; ಇನ್ನೊಂದು ಐದು ವರ್ಷಗಳ ಕಾಯುವಿಕೆ. ನಮ್ಮಲ್ಲಿ ಮೆಟ್ರೊ, ಫ್ಲೈಓವರ್, ರಸ್ತೆ, ಅಂಡರ್ ಪಾಸ್ ಯೋಜನೆಗಳೆಂದರೆ ಅದೊಂದು ಮುಗಿಯದ ಕತೆ; ನಗರಾಭಿವೃದ್ಧಿಯೆಂದರೆ ಕಾಯುವುದರಲ್ಲಿಯೇ ನಮ್ಮೆಲ್ಲರ ಜೀವನವೆನಿಸುವುದು ಸಹಜ ಮತ್ತು ಸತ್ಯ.

ಮಂತ್ರಿಗಳು ಗುಡುಗಿದರೂ, ಗಡುವು ಮುಗಿದರೂ, ದುರಸ್ತಿಯಾಗದ ಬೆಂಗಳೂರಿನ ಗುಂಡಿಮಯ ರಸ್ತೆಗಳನ್ನು ನೋಡಿದಾಗ, ನಮ್ಮ ಆಡಳಿತಗಾರರಲ್ಲಿರದ ದೂರದೃಷ್ಟಿ, ವೃತ್ತಿಪರತೆಯ ಕೊರತೆಗಳನ್ನು ಗಮನಿಸಿದಾಗ ಅನಿಸಿದ್ದಿಷ್ಟೇ; ಇಂದಿನ ತಲೆಮಾರಿನವರು ಪ್ರಾಯಶಃ ನೋಡಲಾರದಷ್ಟು ಕಾಲಾವಧಿಯಾಗುವ ಪಾತ್‍ನಂತಹ ದುಸ್ಸಾಹಸಕ್ಕೆ ನಮ್ಮವರು ಕೈಹಾಕದಿರಲಿ; ಬೆಂಗಳೂರಿನ ಭೂಗರ್ಭದಲ್ಲೊಂದು ನಗರದ ಕನಸು ಕನಸಾಗಿಯೇ ಉಳಿದಿರಲಿ. ಏಕೆಂದರೆ, ಗುಂಡಾಗಿರುವ ಭೂಮಿಯ ಯಾವುದೇ ಪ್ರದೇಶ, ಗುಂಡಿಮಯ ಬೆಂಗಳೂರಿನಿಂದ ಹೆಚ್ಚೆಂದರೆ ಹದಿನೈದು ತಾಸುಗಳ ದೂರದಲ್ಲಿದೆ. ಆಂತರಿಕ ಪ್ರಯಾಣಕ್ಕಿಂತ ಅಂತರರಾಷ್ಟ್ರೀಯ ಪ್ರಯಾಣ ಕೈಗೆಟುಕುವ ಮಟ್ಟದಲ್ಲಿದೆ; ನಗರಾಭಿವೃದ್ಧಿಯ ಪ್ರಮಾಣ ಮತ್ತು ಮಾನದಂಡದ ಕಲ್ಪನೆಗೆ ಟೊರೊಂಟೊಗಳಂತಹ ನಗರಕ್ಕೆ ಹೋಗಿಬರಬೇಕು. ಆದರೆ ಹಿಂತಿರುಗಿದ ಮೇಲೆ, ನಮ್ಮ ಯೋಚನೆ ಮತ್ತು ಯೋಜನೆಗಳಲ್ಲಿ, ನಾವೊಂದು ತಲೆಮಾರಿನಷ್ಟು ಹಿಂದಿದ್ದೇವೆಂಬ ಅರಿವೂ ಆದೀತು.

ಟೊರೊಂಟೊ ಪಾತ್  [PATH]

www.torontopath.com
P East
A West
T North
H South
ವಾಕ್ ವೆ ವಿಸ್ತೀರ್ಣ: 30 ಕಿ.ಮೀ
ಪ್ರವೇಶ ದ್ವಾರಗಳು: 120
ಶಾಪಿಂಗ್ ಪ್ರದೇಶ: 4,000,000 ಚದರ ಅಡಿ
ಅಂಗಡಿಗಳು: 1200
ಉದ್ಯೋಗ ಸೃಷ್ಟಿ: 5000
ಬಹು-ಮಹಡಿ ಆಫೀಸ್ ಕಟ್ಟಡಗಳ ಸಂಪರ್ಕ: 50
ಇನ್ನಿತರ ಸಂಪರ್ಕಗಳು: 20 ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ,
6 ಮೆಟ್ರೊ ಸ್ಟೇಶನ್‍ಗಳು, 2 ಸೂಪರ್ ಮಾರ್ಕೆಟ್ಸ್,
8 ಪ್ರಮುಖ ಹೋಟೆಲ್‍ಗಳು, 1 ಪ್ರಮುಖ ರೈಲ್ವೆ ನಿಲ್ದಾಣ

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *