ಇಲ್ಲಿರುವುದೊಂದು ಮುಖ್ಯ ಬೀದಿ; ಆದರೆ ಬಾಲಿವುಡ್ ಹೀರೊ ಅಭಿಷೇಕ್ ಬಚ್ಚನ್ ಓದಿದ ಶಾಲೆ ಇಲ್ಲಿದೆ; ಇಲ್ಲಿನ ರಾಷ್ಟ್ರೀಯ ದಿನಾಚರಣೆಯಲ್ಲಿ ಹಸುಗಳೇ ಮುಖ್ಯ; ಇಲ್ಲಿ ಪ್ರಯಾಣ ಉಚಿತ
ವಿಲಾರ್ಸ್ ಸ್ವಿಟ್ಜರ್‍ಲ್ಯಾಂಡ್‍ನ ಒಂದು ಪ್ರಾಕೃತಿಕ ಸಂಪದ್ಭರಿತ ಪುಟ್ಟ ಹಿಲ್ ಸ್ಟೇಶನ್. ಸಮುದ್ರಮಟ್ಟದಿಂದ ಸುಮಾರು 8000 ಅಡಿಗಳಷ್ಟು ಎತ್ತರದಲ್ಲಿರುವ ವಿಲಾರ್ಸ್, ಆಲ್ಫ್ಸ್ ಪರ್ವತ ಶ್ರೇಣಿಯಲ್ಲಿದ್ದು, ಸ್ವಿಟ್ಜರ್‍ಲ್ಯಾಂಡ್, ಆಸ್ಟ್ರಿಯ ಮತ್ತು ಜರ್ಮನಿಯ ಗಡಿಯಲ್ಲಿದೆ; ಜಗತ್ತಿನ ಸುಪ್ರಸಿದ್ಧ ಪ್ರವಾಸೀ ತಾಣ ಲೇಕ್ ಜಿನೀವ ಪ್ರದೇಶದಲ್ಲಿದೆ. ಹಿಂದಿನ ದಿನ ನಾವಿದ್ದ ಇಂಟರ್ಲಾಕೆನ್ ಪಟ್ಟಣದಿಂದ, ಲೂಸರ್ನ್ ಮೂಲಕ ದಿನವಿಡೀ ಪ್ರಯಾಣದ ನಂತರ ವಿಲಾರ್ಸ್ ಸೇರಿದಾಗ, ಸಂಜೆಗೆಂಪು ಮೂಡಿತ್ತು.
ವಿಲಾರ್ಸ್ ಸ್ವಿಟ್ಜರ್‍ಲ್ಯಾಂಡ್‍ನ ಸುಂದರ ತಾಣವೊಂದೇ ಅಲ್ಲ; ಜಗತ್ತಿನ ಪ್ರತಿಷ್ಠಿತ ಶ್ರೀಮಂತರ ಮಕ್ಕಳು ಓದುವ ತಾಣವೂ ಹೌದು. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಓದಿದ ಐಗ್ಲೊ ಶಾಲೆ ಇರುವುದಿಲ್ಲೇ. ಹಾಗಾಗಿ, ವಿಲಾರ್ಸ್‍ನ ವಿಶೇಷತೆಯ ಬಗ್ಗೆ, ನಮ್ಮ ಪ್ರವಾಸದ ಗೈಡ್ ಮೊದಲೇ ಸೂಚನೆ ನೀಡಿದ್ದರಿಂದ, ವಿಲಾರ್ಸ್ ಬಗ್ಗೆ ಕುತೂಹಲದಿಂದಲೂ, ಕಾತುರದಿಂದಲೂ ಎದುರು ನೋಡುತ್ತಿದ್ದಂತೂ ನಿಜ.
ಈ ಊರಿನಲ್ಲಿರುವುದೊಂದು ಮುಖ್ಯ ಬೀದಿ. ಇಲ್ಲೇ ಪುಟ್ಟ ರೈಲು ನಿಲ್ದಾಣ, ಒಂದಷ್ಟು ಅಂಗಡಿಗಳು ಮತ್ತು ಹೋಟೆಲ್‍ಗಳು. ಮಾರನೇ ದಿನ, ಬಿಸಿ ಕಾಫಿ ಕುಡಿದು ತಣ್ಣಗೆ ಕೊರೆಯುವ ಚಳಿಯಲ್ಲಿ, ಹೊರ ಹೋದರೆ ರಾತ್ರಿ ಬಿದ್ದಿದ್ದ ಮಂಜನ್ನು ತೆಗೆದು ರಸ್ತೆ ತೆರವು ಮಾಡಲಾಗಿತ್ತು. ಇಬ್ಬನಿಯ ಭಾರದಿಂದ ಬಾಗಿದ ಹಸಿರುಗೆಂಪು ಎಲೆಗಳು; ರಸ್ತೆಯ ಬದಿಯಲ್ಲಿ ಕುಂಡಗಳಲ್ಲಿ ಕಂಗೊಳಿಸುತ್ತಿದ್ದ ಗುಲಾಬಿ, ಟ್ಯೂಲಿಪ್ ಹೂಗಳ ಸಂಭ್ರಮ; ಎಲ್ಲೆಲ್ಲೂ ಶುಭ್ರವಾದ, ಸ್ವಚ್ಛ, ನಿರ್ಮಲ ವಾತಾವರಣ. ಇಲ್ಲಿನ ಪ್ರಾಕೃತಿಕ ಸೌಂದರ್ಯ ದೈವದತ್ತ ಕೊಡುಗೆ; ಆದರೆ ಅದನ್ನು ಅಭಿವೃದ್ಧಿಯ ಮಧ್ಯೆಯೂ ಕಾಪಾಡಿಕೊಂಡು ಬಂದಿರುವುದು ಯೂರೋಪಿನ ವ್ಯವಸ್ಥೆಯ ಸಾರ್ಥಕತೆ ಮತ್ತು ಪರಿಸರ ಸಂರಕ್ಷಣೆಯ ಕಾಳಜಿಯಿಂದಲೇ. ಯೂರೋಪಿನಲ್ಲಿ ಸಾಮಾನ್ಯವಾಗಿ ನಮ್ಮ ಗಮನ ಸೆಳೆಯುವ ಅಂಶವೇ ಇದು.
ವಿಲಾರ್ಸ್ ಬೇರೆಲ್ಲ ಯೂರೋಪಿನ ಪ್ರೇಕ್ಷಣೀಯ ಸ್ಥಳಗಳಂತಲ್ಲ. ಬೆಳಗಾದೊಡನೆ ಶಾಲೆ, ಕಾಲೇಜಿನ ವೇಳಾಪಟ್ಟಿಯಂತೆ, ಕಿರಿಕಿರಿ ಉಂಟಾಗುವಂತೆ, ಸಮಯದ ನಿರ್ವಹಣೆಯ ಒತ್ತಡವನ್ನು ಗೈಡ್ ಹೇರುವ ಅವಶ್ಯಕತೆಯಿಲ್ಲ. ಏಕೆಂದರೆ, ಇಲ್ಲಿರುವುದು, ಅನುಭವಿಸಬೇಕಾಗಿರುವುದು ಇಲ್ಲಿನ ಪರಿಸರದ ಸೌಂದರ್ಯ; ಇಲ್ಲಿ ಮಾಡಬಹುದಾದ ಅನೇಕ ಆರೋಗ್ಯಕರ ಚಟುವಟಿಕೆಗಳು. ಇದೊಂದು ಗಡಿಬಿಡಿಯ ಪ್ರವಾಸದ ನಡುವೆ, ಮನಸ್ಸಿಗೂ, ದೇಹಕ್ಕೂ ಆರಾಮವನ್ನು ನೀಡಿ, ನಮ್ಮನ್ನು ಪುನರ್ಯೌವನಗೊಳಿಸುವಂತಹ ತಾಣ. ಜೊತೆಗೆ, ಮದುವೆಯೆಂಬ ಹೊಸಜೀವನದ ಅಂಚಿನಲ್ಲಿರುವವರಿಗೆ, ಮಧುಚಂದ್ರಕ್ಕೆ ಯಾವ ತಾಣಕ್ಕೆ ಹೋಗಬೇಕೆನ್ನುವ ಗೊಂದಲದಲ್ಲಿರುವವರಿಗೆ, ಇದು ನಿಜಕ್ಕೂ ಸೂಕ್ತ.
ಚೈತನ್ಯಭರಿತ ಚಟುವಟಿಕೆಗಳು
ಯೂರೋಪಿನ ಬೇಸಿಗೆ ಮತ್ತು ಚಳಿಗಾಲದಲ್ಲಿನ ಚಟುವಟಿಕೆಗಳು ವಿಭಿನ್ನ; ಋತುಮಾನ, ನಮ್ಮ ಸಾಮಥ್ರ್ಯ, ಆಸಕ್ತಿಗೆ ಅನುಗುಣವಾಗಿ ನಾವೇ ನಿರ್ಧರಿಸಬೇಕು.
ವಾಕಿಂಗ್: ಇಲ್ಲಿನ ಹಸಿರು ವನರಾಜಿಯ ನಡುವೆ, ನೂರಾರು ಕಿ.ಮೀ.ಗಳಷ್ಟು ಸಿದ್ಧಗೊಳಿಸಿದ ಕಾಲುದಾರಿಗಳಿದೆಯೆಂದರೆ ಆಶ್ಚರ್ಯವಾದೀತು; ಅಷ್ಟೇ ಅಲ್ಲ; ಹಾದಿಗಳ ಉದ್ದಕ್ಕೂ ಮಾಹಿತಿ ಫಲಕಗಳಿವೆ. ಆದ್ದರಿಂದ, ನಮ್ಮ ಚೈತನ್ಯಕ್ಕೂ, ಸಮಯಕ್ಕೂ ಅನುಗುಣವಾಗಿ ಮಾರ್ಗಗಳ ಆಯ್ಕೆ ಸುಗಮ.
ಟ್ರೆಕ್ಕಿಂಗ್
ವಿಲಾರ್ಸ್‍ನ ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳ, ಸರೋವರ-ನದಿಪಾತ್ರಗಳ, ಕಾಡು ಪ್ರದೇಶಗಳಲ್ಲಿ, ಸುಮಾರು 300 ಕಿ.ಮೀ.ನಷ್ಟು ‘ಸುರಕ್ಷಿತವಾದ’ ಟ್ರೆಕ್ಕಿಂಗ್‍ಗೆ ಹೇಳಿಮಾಡಿಸಿದಂತ ಮಾರ್ಗಗಳಿವೆ. ಮನಸೂರೆಗೊಳ್ಳುವಂತಹ ವಿಹಂಗಮ ನೋಟದ ಈ ಪ್ರದೇಶದಲ್ಲಿ ಟ್ರೆಕ್ಕಿಂಗ್ ಅನುಭವಿಗಳಿಗೂ, ಇತರರಿಗೂ ಅನುಕೂಲವಾಗುವಂತಹ ಹಾದಿಗಳಿವೆ. ಹಾಂ! ಯಾವ ಹಾದಿಯಲ್ಲಿ ಹೋಗಬೇಕೆನ್ನುವ ನಿರ್ಧಾರವೂ ಅಷ್ಟೇ ಸುಲಭ. ಏಕೆಂದರೆ, ಸಮಯ, ನಡೆದಾಡುವ ಕಷ್ಟಗಳನ್ನಾಧರಿಸಿ ಮಾರ್ಗಗಳ ವರ್ಗೀಕರಣ, ವಯಸ್ಸಿನ ಇತಿ-ಮಿತಿ, ಥೀಮ್‍ಗಳ ಆಯ್ಕೆಗಳಿಂದ ನಿರ್ಧರಿಸಬಹುದಾದ ಸರ್ಚ್ ಎಂಜಿನ್ ಇದೆ ಎಂದರೆ ಟೆಕ್ಕಿಗಳೀಗಷ್ಟೇ ಅಲ್ಲ, ಎಲ್ಲರಿಗೂ ಅನುಕೂಲವಲ್ಲವೇ? ಹಾಗೆಯೇ, ಈ ಪರ್ವತಗಳಿಂದ ಕೆಳಗಿಳಿದರೆ ಲೇಕ್ ಜಿನೀವ ಪ್ರದೇಶವನ್ನು ಸೇರಬಹುದು. ಆದರೆ, ಬೇಸಿಗೆ ಕಾಲದಲ್ಲಿ ಮಾತ್ರ ಇಲ್ಲಿ ಟ್ರೆಕ್ಕಿಂಗ್ ಸಾಧ್ಯ.
ಸೈಕ್ಲಿಂಗ್
ಪ್ರವಾಸದ ಮೋಜಿಗಾದರೂ ಸರಿ; ವ್ಯಾಯಾಮಕ್ಕಾದರೂ ಸರಿ, ಸೈಕ್ಲಿಂಗ್‍ಇಡೀ ಯೂರೋಪಿನಲ್ಲಿ ಜನಪ್ರಿಯ. ವಾರಾಂತ್ಯದಲ್ಲಿ ಕಾರುಗಳ ಹಿಂದೆ ಮತ್ತು ರೈಲುಗಳಲ್ಲಿ, ಸೈಕಲ್‍ಗಳನ್ನು ಸಾಗಿಸಿಕೊಂಡು ಹೋಗುವುದನ್ನು ನೋಡಿದರೆ, ಈ ಮಾತು ಮನದಟ್ಟಾಗುತ್ತದೆ. ವಿಲಾರ್ಸ್‍ನಲ್ಲಿ ಆಲ್ಫ್ಸ್ ಪರ್ವತದ ಹಳ್ಳಿಗಾಡು ಮತ್ತು ಕಣಿವೆಗಳ ಮೂಲಕ ಹೋಗುವ 130ಕಿ.ಮೀ.ನಷ್ಟು ಸೈಕ್ಲಿಂಗ್ ಹಾದಿಗಳಿವೆ.
ಸ್ಕೀಯಿಂಗ್
ಸ್ಕೀಯಿಂಗ್‍ನಲ್ಲಿ ನಮಗೆ ಆಸಕ್ತಿಯಿರಬಹುದು; ಆದರೆ ಕೌಶಲವಿಲ್ಲದಿರಬಹುದು. ಆದ್ದರಿಂದ, ಇಲ್ಲಿ ಸ್ಕೀಯಿಂಗ್ ಕೌಶಲವನ್ನು ಕಲಿಸುವ ಅನೇಕ ಶಾಲೆಗಳಿವೆ. ಪ್ರವಾಸದ ಮೋಜಿನ ಜೊತೆಯಲ್ಲಿ, ವಿಶಿಷ್ಟವಾದ ಕೌಶಲವನ್ನು ಕಲಿತು ಬಂದರೆ ಜೀವನ ಪರ್ಯಂತ ಉಪಯುಕ್ತವಲ್ಲವೇ?
ವಿಲಾರ್ಸ್ ಸುತ್ತಮುತ್ತ ಟೆನ್ನಿಸ್, ಗಾಲ್ಫ್, ಸ್ಕೇಟಿಂಗ್, ಜಲಕ್ರೀಡೆಗಳು, ಪ್ಯಾರಗ್ಲೈಡಿಂಗ್, ಸ್ಕೂಬ ಡೈವಿಂಗ್, ಬೌಲಿಂಗ್ ಇತ್ಯಾದಿ ಕ್ರೀಡೆಗಳನ್ನು ಶಾಸ್ತ್ರೋಕ್ತವಾಗಿ ಕಲಿಯುವ, ಆಡುವ ಅವಕಾಶವಿದೆ. ವಿಲಾರ್ಸ್‍ನಿಂದ ಲೇಕ್ ಜಿನೀವ ಹತ್ತಿರದಲ್ಲಿರುವ ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು. ಹಾಗಾಗಿ, ಇಲ್ಲಿ ಚಟುವಟಿಕೆಗಳಿಗೆ ಯಾವುದೇ ಮಿತಿಯಿಲ್ಲ; ಆ ಮಿತಿ ನಮ್ಮ ಅಭಿರುಚಿ, ಆಸಕ್ತಿಯಲ್ಲಿ ಮಾತ್ರ.
ಪ್ರೇಕ್ಷಣೀಯ ಸ್ಥಳಗಳು
ವಿಲಾರ್ಸ್‍ನಿಂದ ಅನೇಕ ಸ್ಥಳಗಳು ಹತ್ತಿರದಲ್ಲಿದ್ದು ಒಂದು ದಿನದ ಪ್ರವಾಸಕ್ಕೆ ಸೂಕ್ತವಾಗಿವೆ.
ಪರ್ವತ ಶ್ರೇಣಿಗಳು
ಜಗತ್ತಿನ ಅತ್ಯಂತ ಸುಂದರ ಪರ್ವತವೆಂದು ಪರಿಗಣಿಸಲಾಗುವ ಮಾಂಟ್ ಬ್ಲಾಂಕ್, ಸಮುದ್ರ ಮಟ್ಟದಿಂದ 15771 ಅಡಿ ಎತ್ತರದಲ್ಲಿದ್ದು, ಉತ್ತರ ಆಲ್ಫ್ಸ್ ಪರ್ವತ ಶ್ರೇಣಿಯಲ್ಲಿದೆ. ಫ್ರಾಂನ್ಸ್ ದೇಶದಲ್ಲಿರುವ ಮಾಂಟ್ ಬ್ಲಾಂಕ್‍ಗೆ ವಿಲಾರ್ಸ್‍ನಿಂದ ಸುಮಾರು ಒಂದು ಗಂಟೆಯ ಪ್ರಯಾಣವಷ್ಟೇ. ಅದೇ ರೀತಿ, ಸ್ವಿಟ್ಜರ್‍ಲ್ಯಾಂಡ್‍ನ ಜನಪ್ರಿಯ ತಾಣಗಳಾದ ಉಂಫ್ರಾಘ್ ಮತ್ತು ಜûರ್ಮಾಟ್‍ಗೆ 2 1/2 ಗಂಟೆಗಳ ಪ್ರಯಾಣ.
ನಗರಗಳು
ವಿಲಾರ್ಸ್‍ಗೆ ಹತ್ತಿರದ ನಗರಗಳೆಂದರೆ ಅಂತರಾಷ್ಟ್ರೀಯ ಸಂಸ್ಥೆಗಳ ತವರೂರಾದ ಜಿನೀವ [1 1/2 ಗಂಟೆ] ಮತ್ತು ರಾಜಧಾನಿ ಬರ್ನ್ [1 1/2 ಗಂಟೆ]. ಎರಡೂ ನಗರಗಳಲ್ಲಿ ಅನೇಕ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಿವೆ. ಚಲನಚಿತ್ರಗಳ ಶೂಟಿಂಗ್‍ಗೆ ಪ್ರಶಸ್ತ ನಗರಗಳಾದ ಇಂಟರ್‍ಲಾಕೆನ್ [2 ಗಂಟೆ] ಮತ್ತು ಲೂಸರ್ನ್‍ಗೆ [2 1/2 ಗಂಟೆ] ಹೋಗಿ ಬರಬಹುದು.
ಪರಿಸರ ಕಾಳಜಿ ಮತ್ತು ಪ್ರವಾಸೋದ್ಯಮ
ವಿಲಾರ್ಸ್ ಟೂರಿಸಮ್‍ನವರು ಅನುಷ್ಠಾನಗೊಳಿಸಿರುವ ಅನೇಕ ಯೋಜನೆಗಳು, ಕಾರ್ಯಗಳು ಪರಿಸರ ಸಂರಕ್ಷಣೆಗೆ ಪೂರಕವಾಗಿವೆ.
ಮೂರು ಪರ್ವತ ಶ್ರೇಣಿಗಳ ಮಾರ್ಗಗಳಿಂದ ರಚಿಸಿರುವ ಟ್ರೆಶರ್ ಹಂಟ್ ಪ್ರವಾಸಿಗಳಿಗೊಂದು ಆಕರ್ಷಕ ಮತ್ತು ಕುತೂಹಲಭರಿತ ಚಟುವಟಿಕೆ. ಇಲ್ಲಿನ ಟೂರಿಸ್ಟ್ ಕಛೇರಿಯಲ್ಲಿ ರಿಜಿಸ್ಟರ್ ಮಾಡಿಸಿ, ಟ್ರೆಶರ್ ಹಂಟ್ ಮಾರ್ಗಗಳಲ್ಲಿರುವ ಅನೇಕ ಸೂಚನೆಗಳನ್ನು ಪಾಲಿಸಿ, ಪ್ರಶ್ನೆಗಳನ್ನು ಉತ್ತರಿಸಿದರೆ ಸಾಕು; ಪ್ರತಿ ವಾರ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.
ವಿಶೇಷವೆಂದರೆ, ಇಲ್ಲಿ ಸ್ಥಳೀಯ ಪ್ರಯಾಣ ಉಚಿತ! ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸಲು ಪ್ರವಾಸಿಗಳಿಗೆ ಉಚಿತ ಪಾಸ್ ನೀಡುತ್ತಾರೆ [ಜೂನ್-ಅಕ್ಟೋಬರ್]. ಜೊತೆಗೆ ಮಕ್ಕಳಿಗಾಗಿ ಡ್ರಾಯಿಂಗ್ ಸ್ಪರ್ದೆಗಳು, ಛಾಯಾಚಿತ್ರ ಪ್ರದರ್ಶನಗಳು, ಇತ್ಯಾದಿಗಳನ್ನು ಏರ್ಪಡಿಸಿ, ಪರಿಸರ ಸಂರಕ್ಷಣೆಗೆ ಸಕಾರಾತ್ಮಕವಾದ ಮನೋಭಾವವನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ, ವಿಲಾರ್ಸ್ ಪ್ರವಾಸೋದ್ಯಮದ ಧೋರಣೆ, ಆದೇಶ ಮತ್ತು ಕಾರ್ಯನೀತಿಯನ್ನು ಪರಿಪಾಲಿಸಲು ಪರಿಸರ ಸಂರಕ್ಷಣೆ ದಾಖಲೆಯನ್ನು ರಚಿಸಲಾಗಿದೆ.
ವಿಲಾರ್ಸ್ ಚಾಕೋಲೇಟ್
ವಿಲಾರ್ಸ್ ಎಂಬ ಹೆಸರಿನಲ್ಲಿಯೇ ಪ್ರಖ್ಯಾತ 112 ವರ್ಷಗಳ ಇತಿಹಾಸವುಳ್ಳ ಚಾಕೋಲೇಟ್ ಕಂಪನಿ ಇಲ್ಲಿದೆ. ಆಲ್ಫ್ಸ್ ಪರ್ವತಶ್ರೇಣಿಯೇ ಹೆಚ್ಚಾಗಿರುವ ಈ ದೇಶದಲ್ಲಿ ಸಾಗುವಳಿ ಮಾಡಬಹುದಾದ ಭೂಮಿ ಕೇವಲ 10% ಮಾತ್ರವಾದ್ದರಿಂದ ಇಲ್ಲಿ ಹೈನುಗಾರಿಕೆಯನ್ನು ಅತ್ಯುನ್ನತ ಪ್ರಮಾಣದಲ್ಲಿ ಬೆಳೆಸಲಾಗಿದೆ. ಉದಾಹರಣೆಗೆ, ಕರ್ನಾಟಕದ ಕಾಲು ಭಾಗದಷ್ಟಿರುವ ಸ್ವಿಟ್ಜರ್‍ಲ್ಯಾಂಡ್‍ನ 32 ಸಾವಿರ ಹೈನುಗಾರಿಕೆ ಕೇಂದ್ರಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಹಸುಗಳಿದ್ದು ವರ್ಷಕ್ಕೆ ಸುಮಾರು 4 ದಶಲಕ್ಷ ಟನ್ ಹಾಲಿನ ಉತ್ಪಾದನೆಯಾಗುತ್ತದೆ. ಆದ್ದರಿಂದಲೇ, ಜಗತ್ತಿನಾದ್ಯಂತ ಉತ್ಕೃಷ್ಟತೆಗೆ ಹೆಸರಾದ ಸ್ವಿಸ್ ಚಾಕೊಲೇಟ್‍ನ ಬೆನ್ನೆಲುಬೇ ಇಲ್ಲಿನ ಡೈರಿ ಉದ್ಯಮ.
ಸಾಮಾನ್ಯವಾಗಿ ಕೌಟುಂಬಿಕ ವೃತ್ತಿಯಾದ ಹೈನುಗಾರಿಕೆಯ ಯಶಸ್ಸಿಗೆ ತೀರ್ವವಾದ ಗಮನ ಮತ್ತು ಶ್ರಮ ಅಗತ್ಯ. ಇಲ್ಲಿನ ಫಾರ್ಮ್‍ಗಳಲ್ಲಿನ ಹಸುಗಳ ಹಿಂಡಿನ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದ್ದು, ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಪ್ರತಿ ಹಂತದಲ್ಲೂ ಬಳಸುತ್ತಾರೆ. ಉದಾಹರಣೆಗೆ, 50ಕ್ಕೂ ಹೆಚ್ಚು ಹಸುಗಳಿರುವ ಫಾರ್ಮ್‍ಗಳಲ್ಲಿ ಹಾಲು ಕೆರೆಯಲು ಸ್ವಯಂಚಾಲಿತ ರೊಬೋಟಿಕ್ ಯಂತ್ರಗಳನ್ನು ಬಳಸಲಾರಂಬಿಸಿದ ಮೇಲೆ, ಹಾಲಿನ ಉತ್ಪತ್ತಿ ಹೆಚ್ಚಾಗಿ, ಜನಜೀವನ ಉತ್ತಮಗೊಂಡಿದೆಯೆಂದು ಹೇಳಲಾಗುತ್ತದೆ.
ಇಲ್ಲಿ ಹಸುಗಳೇ ಹೀರೊ!
ಇಲ್ಲಿ ಜನಪ್ರಿಯವಾದ ಹಸುಗಳ ತಳಿಯೆಂದರೆ ಕಂದು ಬಣ್ಣದ ಸ್ವಿಸ್. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮೇಲ್ಮಟ್ಟದ ಪರ್ವತಗಳಲ್ಲಿ ಮೇಯುವ ಹಸುಗಳನ್ನು ಚಳಿಗಾಲದ ಮುಂಚೆ ಬೆಚ್ಚಗಿನ ಕೆಳಮಟ್ಟದ ಪ್ರದೇಶಕ್ಕೆ ತರಲಾಗುತ್ತದೆ. ಪ್ರತಿ ವರ್ಷದ ಆಗಸ್ಟ್ 1ರಂದು, ದೇಶದ ಇನ್ನಿತರ ಕಡೆಗಳಂತೆ, ವಿಲಾರ್ಸ್‍ನ ಜನರೆಲ್ಲರೂ ಸೇರಿ ರಾಷ್ಟ್ರೀಯ ದಿನವನ್ನಾಚರಿಸುತ್ತಾರೆ. ಸ್ವಿಟ್ಜರ್‍ಲ್ಯಾಂಡ್‍ನ ಅಪೂರ್ವವಾದ ಆಲ್ಫರ್ನ್ ವಾದ್ಯವನ್ನು ನುಡಿಸುತ್ತಾ ಪಟ್ಟಣದ ಉದ್ದಕ್ಕೂ ಸಾಗುವ ಈ ಸಂಭ್ರಮದ ಮೆರವಣಿಗೆಯಲ್ಲಿ, ಅಲಂಕೃತ ಹಸುಗಳು ಕಥಾನಾಯಕರಂತೆ ಭಾಗಿಯಾಗುವುದು ಇಲ್ಲಿನ ವಿಶೇಷ. ಇವೆಲ್ಲ ಕಾರಣಗಳಿಂದ ಹಸು ಸ್ವಿಟ್ಜರ್‍ಲ್ಯಾಂಡ್‍ನ ಅನಧಿಕೃತ ರಾಷ್ಟ್ರೀಯ ಪ್ರಾಣಿ ಮತ್ತು ದೇಶದ ಹಿತಕರವಾದ ವಾತಾವರಣದ ಪ್ರತೀಕ.
ವಿಲಾರ್ಸ್ ಸೇರಿದಂತೆ ಸ್ವಿಟ್ಜರ್‍ಲ್ಯಾಂಡ್‍ಗೆ ವರ್ಷದ ಯಾವುದೇ ಸಮಯದಲ್ಲಿ ಹೋಗಬಹುದು. ಆದರೆ ಪರ್ವತ ಶ್ರೇಣಿಗಳಲ್ಲಿ ವರ್ಷವಿಡೀ ಅತಿಯಾದ ಚಳಿ ಇರುವುದರಿಂದ, ಸೂಕ್ತ ತಯಾರಿಯಿರಲೇಬೇಕು. ಹಾಂ! ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ಶಾಪಿಂಗ್ ನಿಜಕ್ಕೂ ದುಬಾರಿ; ಆದರೆ, ಇಲ್ಲಿನ ಸುಪ್ರಸಿದ್ಧ ಕೈಗಡಿಯಾರಗಳು ಇಲ್ಲಿಗಿಂತ ದುಬೈನಲ್ಲಿ ಅಗ್ಗ! ಹಾಗಾಗಿ, ಇಲ್ಲಿನ ಪ್ರವಾಸದಿಂದ ಬರುವಾಗ ಚಾಕೊಲೇಟ್, ಮಾದರಿ ಹಸು ಘಂಟೆಗಳನ್ನು ತರುವುದು ವಾಡಿಕೆ.
ವಿದೇಶೀ ಪ್ರಯಾಣ ಕಲಿಕೆಯ ಮಾರ್ಗ
ವಿದೇಶೀ ಪ್ರವಾಸಗಳು ಬದುಕಿನ ಜಂಜಾಟದಿಂದ ತಾತ್ಕಾಲಿಕವಾಗಿ ದೂರ ಸರಿಯುವಂತಾಗಬಾರದು; ಹೊಸದನ್ನು ನೋಡುವ, ಅನುಭವಿಸುವ ಆಕರ್ಷಣೆಯ ಸೀಮಿತವನ್ನು ದಾಟಿ, ಕಲಿಕೆಯ ದಾರಿಯಾಗಬೇಕು. ಯೂರೋಪಿನ ಸರ್ಕಾರಗಳು ಪರಿಸರದ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಾಕೃತಿಕ ಸೌಂದರ್ಯವನ್ನು ಕಾಪಾಡುವುದರ ಜೊತೆಗೆ, ಜನತೆಗೆ ತಮ್ಮ ಜೀವನಶೈಲಿಯನ್ನು ಆರೋಗ್ಯದಾಯಕವಾಗಿ ಮಾಡಿಕೊಳ್ಳುವ ಸದವಕಾಶವನ್ನು ಕಲ್ಪಿಸುವುದರಲ್ಲಿ ಯಶಸ್ವಿಯಾಗಿವೆ.
ನಮ್ಮಲ್ಲಿರುವ ಪ್ರಾಕೃತಿಕ ಸೌಂದರ್ಯದ ವೈವಿಧ್ಯತೆ ಮತ್ತು ವಿಶಿಷ್ಟತೆ ಅದ್ವಿತೀಯ. ಆದರೆ, ಪ್ರವಾಸೋದ್ಯಮದ ಹೆಸರಿನಲ್ಲಿ ಇಲ್ಲಿ ಪರಿಸರ ನಾಶವಾಗುತ್ತಿರುವುದು ವಿಷಾದಕರ. ಉತ್ತರಭಾರತದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ, ಆದರೆ ಪರಿಸರದ ಕಾಳಜಿಯಿಲ್ಲದೆ ಆಗಿರುವ ಅನೇಕ ಯೋಜನೆಗಳ ದುಷ್ಪರಿಣಾಮಗಳಿಂದ ಇತ್ತೀಚೆಗಷ್ಟೇ ನಡೆದ ಹಿಮಾಲಯ ಪರ್ವತಶ್ರೇಣಿಯ ಅನಾಹುತಗಳ ಬಗ್ಗೆ, ದುಃಖದ ಜೊತೆಗೆ ವ್ಯವಸ್ಥೆಯ ವೈಫಲ್ಯದಿಂದ ಸಿಟ್ಟಾಗುವುದೂ, ಊಟಿ, ಸಿಮ್ಲಾಗಳಂತಹ ಹಿಲ್ ಸ್ಟೇಷನ್‍ಗಳಲ್ಲಿನ ಪರಿಸರ ಮಾಲಿನ್ಯದ ನೆನಪಾಗಿ ಬೇಸರವಾಗುವುದೂ ಸಹಜ. ನಮ್ಮ ದೇಶದ ಆಡಳಿತಗಾರರು ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಯೂರೋಪಿನಿಂದ ಕಲಿಯುವುದು ಬೇಕಾದಷ್ಟಿದೆ; ಅದೇ ರೀತಿ, ಪ್ರವಾಸಿಗಳೂ ಕೂಡ, ಪರಿಸರವನ್ನು ಕಾಪಾಡುವಲ್ಲಿ ವೈಯಕ್ತಿಕ ಜವಾಬ್ದಾರಿಗಳನ್ನು ಅರಿಯುವ ಅವಶ್ಯಕತೆಯಿದೆ.