ಈಗಷ್ಟೇ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಬಂದಿದೆ. ಹಾಗಾಗಿ, ಪಿಯುಸಿ ಕೋರ್ಸ್ನಲ್ಲಿ ಯಾವ ವಿಭಾಗವನ್ನು ಆರಿಸಿಕೊಳ್ಳಬೇಕೆನ್ನುವ ಪ್ರಶ್ನೆ, ವಿದ್ಯಾರ್ಥಿಗಳಲ್ಲೂ, ಪೋಷಕರಲ್ಲೂ ಇರುವುದು ಸಾಮಾನ್ಯ. ಹಲವಾರು ವರ್ಷಗಳಿಂದ ಸಾಮಾನ್ಯವಾಗಿ ರೂಢಿಯಲ್ಲಿರುವ ಹೆಚ್ಚಿನ ಅಂಕಗಳು ಬಂದರೆ ವಿಜ್ಞಾನವೆಂದೂ, ಅತಿ ಕಡಿಮೆ ಬಂದರೆ ಕಲಾ ವಿಭಾಗವೆಂದು ನಿರ್ಣಯಿಸುವುದು ಅವೈಜ್ಞಾನಿಕವಷ್ಟೇ ಅಲ್ಲ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವಂತಹ ಕ್ರಮ.
ಕೆಲವೇ ವರ್ಷಗಳ ಹಿಂದೆ ನಡೆದ ಘಟನೆ ನೆನಪಾಗುತ್ತಿದೆ. ಪ್ರತಿಷ್ಟಿತ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಸಮಯ. ಪ್ರತಿಭಾವಂತ ವಿದ್ಯಾರ್ಥಿ ಅರುಣ್ನನ್ನು ಎಂಜಿನಿಯರಿಂಗ್ಗೆ ಸೇರಿಸಲು ಪೋಷಕರ ಹಠ; ಅರುಣ್ಗೆ ಪಾಕಶಾಸ್ತçಜ್ಞ (ಶೆಫ್) ಆಗುವ ಕನಸು. ತಮ್ಮ ಮಗನ ಕನಸನ್ನು ಪೋಷಿಸಲು ನೀಡಿದ ನಮ್ಮ ಸಲಹೆಯ ವಿರುದ್ದವಾಗಿ ಅರುಣ್ನನ್ನು ಎಂಜಿನಿಯರಿಂಗ್ಗೆ ಸೇರಿಸಲಾಯಿತು. ತನ್ನ ಕನಸೆಲ್ಲಾ ನುಚ್ಚುನೂರಾಗಿ ತೀರ್ವವಾದ ಖಿನ್ನತೆಗೆ ಒಳಗಾಗಿ, ಎಂಜಿನಿಯರಿಂಗ್ ಕೋರ್ಸಿನ ಮೊದಲೆರಡು ಸೆಮೆಸ್ಟರ್ಗಳಲ್ಲಿ ಅರುಣ್ ಅನುತ್ತೀರ್ಣನಾದ ನಂತರ ಎಚ್ಚೆತ್ತ ಪೋಷಕರು, ಅರುಣ್ನನ್ನು ಪಾಕಶಾಸ್ತçದ ಕೋರ್ಸಿಗೆ ಸೇರಿಸಿದರು. ಈಗ ಅರುಣ್, ಒಂದು ಪ್ರತಿಷ್ಟಿತ ಹೋಟೆಲ್ನ ಸಂತೃಪ್ತ ಉದ್ಯೋಗಿ.
ಈಗ ಸಾಮಾನ್ಯವಾಗಿ ಅನುಸರಿಸುತ್ತಿರುವ, “ಮೊದಲು ಕೋರ್ಸ್, ನಂತರ ವೃತ್ತಿಯ ಆಯ್ಕೆ” ಪದ್ದತಿಯಿಂದ ವಿದ್ಯಾಭ್ಯಾಸದ ನಂತರ, ವೃತ್ತಿಯ ಆಯ್ಕೆ ಕುರಿತು ವಿದ್ಯಾರ್ಥಿಗಳಿಗೆ ಗೊಂದಲವಿರುವುದು ಸಾಮಾನ್ಯ; ಅದರಲ್ಲೂ, ಸ್ನಾತಕೋತ್ತರ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಲ್ಲೂ ಇಂತಹ ಗೊಂದಲವಿರುವುದನ್ನು ನಾವು ಗಮನಿಸುತ್ತಿದ್ದೇವೆ. ಆದ್ದರಿಂದ, “ಮೊದಲು ವೃತ್ತಿಯ ಆಯ್ಕೆ, ನಂತರ ಕೋರ್ಸ್ ಆಯ್ಕೆ” ಎನ್ನುವ ಪದ್ದತಿಯನ್ನು ಅನುಸರಿಸುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೂಕ್ತವಾದ ಪದ್ದತಿ.
ಬದುಕಿನ ಪಾಠಶಾಲೆಯಲ್ಲಿ ಯಶಸ್ಸನ್ನು ಗಳಿಸಲು ಇಂತದ್ದೇ ಕೋರ್ಸ್ ಅಥವಾ ವೃತ್ತಿಯನ್ನು ಅನುಸರಿಸಬೇಕೆಂಬ ನಿಯಮವೇನಿಲ್ಲ. ಆದರೆ, ತಮಗೆ ಆಸಕ್ತಿಯಿರುವ, ಒಲವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಅನುಸರಿಸಿದರೆ ಯಶಸ್ಸು ಸುಲಭವೆನ್ನುವುದು ನಿರ್ವಿವಾದ. ಹಾಗಾಗಿ, ಪಿಯುಸಿ ಕೋರ್ಸ್ ಆಯ್ಕೆಯ ಪ್ರಕ್ರಿಯೆಯಲ್ಲಿ, ಪಾಲಿಸಬೇಕಾದ ಸರಿಯಾದ ಕ್ರಮದ ಬಗ್ಗೆ ವಿಶದಪಡಿಸುವುದೇ ಈ ಲೇಖನದ ಉದ್ದೇಶ.
ವೃತ್ತಿ ಯೋಜನೆ: ಏನು? ಹೇಗೆ?
ವಿದ್ಯಾಭ್ಯಾಸದ ನಂತರ ಯಾವ ವೃತ್ತಿಯನ್ನು ಅನುಸರಿಸಬೇಕು ಎನ್ನುವುದನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಯಾವ ಕೋರ್ಸ್ಗಳನ್ನು ಮಾಡಬೇನ್ನುವ ಪರಿಕಲ್ಪನೆಯೇ ವೃತ್ತಿ ಯೋಜನೆ. ಎಸ್ಎಸ್ಎಲ್ಸಿ ಮುಗಿಸಿ ಮುಂದಿನ ಹಂತಕ್ಕೆ ಹೋಗಬಯಸುವ ಎಲ್ಲಾ ವಿದ್ಯಾರ್ಥಿಗಳಿಗೆ, ಈ ಕೆಳಗೆ ವಿವರಿಸಿರುವ ಕ್ರಮದಲ್ಲಿ ವೃತ್ತಿ ಯೋಜನೆಯನ್ನು ಮಾಡಬಹುದು.
- ವಿದ್ಯಾರ್ಥಿಯ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು.
- ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ.
- ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತ ಪಡಿಸಿಕೊಳ್ಳಿ.
- ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ವಿವಿಧ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ.
- ಅವಶ್ಯಕತೆಗಳಿಗೆ ತಕ್ಕಂತೆ ಮಾಡಬೇಕಾದ ಕೋರ್ಸ್ಗಳು, ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರುತಿಸಿ.
- ಅಲ್ಪಾವಧಿ ಮತ್ತು ದೀರ್ಘಾವಧಿ ಮೈಲಿಗಲ್ಲುಗಳೊಂದಿಗೆ, ವೃತ್ತಿ ಯೋಜನೆಯನ್ನು ರೂಪಿಸಿ.
ಈ ರೀತಿ, ಸುದೀರ್ಘವಾದ ವೃತ್ತಿಯೋಜನೆಯ ರೂಪುರೇಷೆಗಳನ್ನು, ವೃತ್ತಿಯ ಡೈರಿಯಲ್ಲಿ ಅಥವಾ ಕಂಪ್ಯೂಟರ್ನಲ್ಲಿ ದಾಖಲಿಸಿ, ಆಗಿಂದಾಗ್ಗೆ ಪರಿಶೀಲಿಸಿ, ಪರಿಷ್ಕರಿಸುತ್ತಿರಬೇಕು.
ವೃತ್ತಿಯ ಪ್ರಾಮುಖ್ಯತೆಯನ್ನೂ, ಶಿಕ್ಷಣದ ಅಗತ್ಯಗಳನ್ನೂ, ವಿಧ್ಯಾರ್ಥಿಗಳು ಮತ್ತು ಪೋಷಕರು ಅರಿತು, ಮುಕ್ತ ಮನಸ್ಸಿನಿಂದ ಚರ್ಚಿಸಿ, ಸೂಕ್ತವಾದ ಮತ್ತು ಸಾಧಿಸಬಹುದಾದ ವೃತ್ತಿ ಯೋಜನೆಯನ್ನು ಮಾಡಿ, ಅದರಂತೆ ಅನುಷ್ಠಾನವನ್ನು ಮಾಡಬೇಕು. ಅಗತ್ಯವಿದ್ದರೆ, ವೃತ್ತಿ ಸಮಾಲೋಚಕರ ಮಾರ್ಗದರ್ಶನವನ್ನು ಪಡೆಯಿರಿ.
sir kas officer agalu bayasiddene munde yaav course best after sslc
Please do any degree course of your choice.